My Blog List

Monday, June 2, 2008

ಇಂದಿನ ಇತಿಹಾಸ History Today ಜೂನ್ 2

ಇಂದಿನ ಇತಿಹಾಸ

ಜೂನ್ 2

ಭಾರತೀಯ ಚಿತ್ರರಂಗದಲ್ಲಿ ಮಾಡಿದ ಸಾಧನೆಗಾಗಿ ಖ್ಯಾತ ಚಿತ್ರನಟಿ ಆಶಾ ಪರೇಖ್ ಅವರು ದುಬೈಯಲ್ಲಿ ನಡೆಯುವ ಏಳನೇ ಐಐಎಫ್ಎ ಪ್ರಶಸ್ತಿ ಪ್ರದಾನ ಸಮಾರಂಭದ `ಐಐಎಫ್ಎ ಪ್ರಶಸ್ತಿ-2006' ಗೆ ಆಯ್ಕೆಯಾದರು.

2007: 1971ರಲ್ಲಿ ನಡೆದ ಯುದ್ಧದ ಸಂದರ್ಭದಲ್ಲಿ ನಾಪತ್ತೆಯಾದ ತಮ್ಮ ಕುಟುಂಬದ ಸದಸ್ಯರನ್ನು ಹುಡುಕುವ ಸಲುವಾಗಿ ಭಾರತದಿಂದ ಬಂದ ಹಲವಾರು ಯೋಧರ ಕುಟುಂಬಗಳು ಪಾಕಿಸ್ಥಾನದ ಜೈಲಿಗೆ ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲಿಸಿದವು.

2007; ಪಾಕ್ ಸರ್ಕಾರ ಹೇರಿದ ನಿಷೇಧವನ್ನು ಉಲ್ಲಂಘಿಸಿ ಪಾಕಿಸ್ಥಾನಿ ಟಿವಿ ಚಾನೆಲ್ಲುಗಳು ಅಮಾನುತುಗೊಂಡ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಎಂ. ಚೌಧರಿ ಅವರ ಚಲನವಲನದ ನೇರ ಪ್ರಸಾರ ಮಾಡಿದವು.

2006: ಆನ್ ಲೈನ್ ಲಾಟರಿ ನಿಷೇಧಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಹೈಕೋರ್ಟ್ ತಳ್ಳಿಹಾಕಿತು. 2004ರ ಜುಲೈ 29ರಂದು ಧರ್ಮಸಿಂಗ್ ಸರ್ಕಾರವು ಆನ್ ಲೈನ್ ಲಾಟರಿಯನ್ನು ರದ್ದು ಪಡಿಸಿತ್ತು.

2006: ಭೂಗತ ದೊರೆ ದಾವೂದ್ ಇಬ್ರಾಹಿಂನನ್ನು `ವಿದೇಶಿ ಮಾದಕ ವಸ್ತುಗಳ ಜಾಲದ ಪ್ರಮುಖ ಅಪರಾಧಿ' ಎಂದು ಅಮೆರಿಕ ಘೋಷಿಸಿತು.

2006: ಬಿಜೆಪಿ ಮುಖಂಡ ಪ್ರಮೋದ ಮಹಾಜನ್ ಅವರು ಅಕಾಲ ಮೃತ್ಯುವಿಗೆ ಈಡಾಗಿ ಸರಿಯಾಗಿ ಒಂದು ತಿಂಗಳ ನಂತರ ಅವರ ಪುತ್ರ ರಾಹುಲ್ ವಿಷಾಹಾರ ಸೇವನೆಯ ಪರಿಣಾಮವಾಗಿ ಅಸ್ವಸ್ಥಗೊಂಡರು. ಮೂವರು ಆಗಂತುಕರ ಜೊತೆಗೆ ಭೋಜನಕೂಟದಲ್ಲಿ ಪಾಲ್ಗೊಂಡ ಬಳಿಕ ಅವರು ಅಸ್ವಸ್ಥರಾಗಿದ್ದು ಅವರ ಜೊತೆಗೇ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದ ಪ್ರಮೋದ ಮಹಾಜನ್ ಅವರ ಕಾರ್ಯದರ್ಶಿ ವಿವೇಕ ಮೊಯಿತ್ರಾ ಜೂನ್ 1ರ ರಾತ್ರಿ 3 ಗಂಟೆ ವೇಳೆಗೆ ಆಸ್ಪತ್ರೆಯಲ್ಲಿ ಮೃತರಾದರು.

2006: ಭಾರತೀಯ ಚಿತ್ರರಂಗದಲ್ಲಿ ಮಾಡಿದ ಸಾಧನೆಗಾಗಿ ಖ್ಯಾತ ಚಿತ್ರನಟಿ ಆಶಾ ಪರೇಖ್ ಅವರು ದುಬೈಯಲ್ಲಿ ನಡೆಯುವ ಏಳನೇ ಐಐಎಫ್ಎ ಪ್ರಶಸ್ತಿ ಪ್ರದಾನ ಸಮಾರಂಭದ `ಐಐಎಫ್ಎ ಪ್ರಶಸ್ತಿ-2006' ಗೆ ಆಯ್ಕೆಯಾದರು. `ಚಿತ್ ಚೋರ್', `ಅಮೃತ್' ಮತ್ತು `ಅಖೇಲಾ'ದಂತಹ ಭಾರತೀಯ ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಸಲ್ಲಿಸಿದ ಕಾಣಿಕೆಗಾಗಿ ಸ್ಕ್ರಿಪ್ಟ್ ಮತ್ತು ಸಂಭಾಷಣೆ ರಚನೆಕಾರ ಒ.ಪಿ. ದತ್ತ ಮತ್ತು ಸಿನಿಮಾಟೋಗ್ರಾಫರ್ ಕೆ.ಕೆ. ಮೆನನ್ ಅವರನ್ನೂ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. `ಅರುವತ್ತರ ದಶಕದ ನಾಟ್ಯರಾಣಿ' ಎಂದೇ ಖ್ಯಾತಿ ಪಡೆದ ಆಶಾ ಪರೇಖ್ ಅವರನ್ನು ಚಿತ್ರನಟಿ, ನಿರ್ಮಾಪಕಿ ಹಾಗೂ ಭಾರತೀಯ ಚಲನಚಿತ್ರ ಸೆನ್ಸಾರ್ ಮಂಡಳಿಯ ಮೊತ್ತ ಮೊದಲ ಮಹಿಳಾ ಅಧ್ಯಕ್ಷರಾಗಿ ಚಿತ್ರರಂಗಕ್ಕೆ ನೀಡಿದ ಕಾಣಿಕೆಗಾಗಿ ಸರ್ವಾನುಮತದಿಂದ `ಪ್ರಶಸ್ತಿ'ಗೆ ಆರಿಸಲಾಯಿತು.

1999: ಭೂತಾನ್ ದೇಶಕ್ಕೆ ಟಿವಿ ಬಂತು.

1967: ಪ್ರಗತಿಶೀಲ ಮನೋಭಾವದ ಕಲಾವಿದ ಡಾ. ಶಿವಾನಂದ ಬಂಟನೂರು ಅವರು ಹನುಮಂತರಾಯ- ಶಾಂತಾಬಾಯಿ ದಂಪತಿಯ ಮಗನಾಗಿ ಗುಲ್ಬರ್ಗ ಜಿಲ್ಲೆಯ ಜೇವರ್ಗಿಯಲ್ಲಿ ಜನಿಸಿದರು.

1966: ಅಮೆರಿಕದ ಬಾಹ್ಯಾಕಾಶ ನೌಕೆ `ಸರ್ವೇಯರ್' ಚಂದ್ರನ ಮೇಲೆ ಇಳಿಯಿತು.

1957: ಕಲಾವಿದ ಬಾಲಚಂದ್ರ ನಾಕೋಡ್ ಜನನ.

1953: ಕಲಾವಿದ ಮಹಾದೇವಪ್ಪ ಎಂ.ಸಿ. ಜನನ.

1953: ವೆಸ್ಟ್ ಮಿನ್ ಸ್ಟರ್ ಅಬ್ಬೆಯಲ್ಲಿ ಬ್ರಿಟನ್ನಿನ ರಾಣಿ ಎರಡನೇ ಎಲಿಜಬೆತ್ ಕಿರೀಟ ಧಾರಣೆ ನಡೆಯಿತು. ಆಕೆಯ ತಂದೆ ದೊರೆ ಆರನೇ ಜಾರ್ಜ್ ಮೃತನಾದ 16 ತಿಂಗಳುಗಳ ಬಳಿಕ ಈ ಕಿರೀಟಧಾರಣೆ ಕಾರ್ಯಕ್ರಮ ನಡೆಯಿತು. ಪ್ರಖರ ಬಿಸಿಲಿನ (ದೀರ್ಘ ಹಗಲಿನ) ದಿನವಾದ್ದರಿಂದ ಕಿರೀಟಧಾರಣೆಗೆ ಉತ್ತಮ ಎಂದು ಈ ದಿನವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ ಅದೇ ದಿನ ಮಳೆ ಸುರಿಯಿತು.

1951: ಕಲಾವಿದ ಸೀತಾರಾಮ ಶೆಟ್ಟಿ ಜಿ. ಜನನ.

1943: ಅಮೆರಿಕದ ಖ್ಯಾತ ಸಿವಿಲ್ ಎಂಜಿನಿಯರ್ ಜಾನ್ ಫ್ರಾಂಕ್ ಸ್ಟೀವನ್ಸ್ ತಮ್ಮ 90ನೇ ವಯಸ್ಸಿನಲ್ಲಿ ಮೃತರಾದರು. ಪನಾಮಾ ಕಾಲುವೆ ಯೋಜನೆಯ ಮುಖ್ಯ ಎಂಜಿನಿಯರ್ ಆಗಿದ್ದ ಇವರು ಈ ಕಾಲುವೆ ಯೋಜನೆ ಯಶಸ್ಸಿಗೆ ಅಡಿಗಲ್ಲು ಹಾಕಿದವರು.

1929: ಹಾಸ್ಯ ಸಾಹಿತಿ, ಕಾದಂಬರಿಗಾರ್ತಿ ನುಗ್ಗೆಹಳ್ಳಿ ಪಂಕಜ ಅವರು ಎಸ್.ವಿ. ರಾಘವಾಚಾರ್- ಶಾಂತಮ್ಮ ದಂಪತಿಯ ಪುತ್ರಿಯಾಗಿ ಬೆಂಗಳೂರಿನಲ್ಲಿ ಈದಿನ ಜನಿಸಿದರು. ರಾತ್ರಿ ಹೊತ್ತಿನಲ್ಲಿ ಬರೆಯುವುದನ್ನು ರೂಢಿಸಿಕೊಂಡಿದ್ದ ಪಂಕಜ ಅವರು ರಚಿಸಿದ ಕೃತಿಗಳ ಸಂಖ್ಯೆ 40ಕ್ಕೂ ಹೆಚ್ಚು. ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಶ್ರೀರಸ ಪ್ರಶಸ್ತಿ, ಸ್ವಾತಂತ್ರ್ಯ ಸುವರ್ಣ ಮಹೋತ್ಸವ ಪ್ರಶಸ್ತಿ, ಲಿಪಿ ಪ್ರಾಜ್ಞೆ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಅನುಪಮಾ ಪ್ರಶಸ್ತಿ ಇತ್ಯಾದಿ ಪ್ರಶಸ್ತಿಗಳು ಅವರಿಗೆ ಲಭಿಸಿವೆ.

1911: ಕಲಾವಿದ ಸಿ.ಟಿ. ಶೇಷಾಚಲಂ ಜನನ.

1904: ಜಾನಿ ವೀಸ್ ಮುಲ್ಲರ್ (1904-84) ಜನ್ಮದಿನ. ಅಮೆರಿಕ ಫ್ರೀಸ್ಟೈಲ್ ಈಜುಗಾರರಾದ ಇವರು ಐದು ಒಲಿಂಪಿಕ್ಸ್ ಚಿನ್ನದ ಪದಕಗಳನ್ನು ಗೆದ್ದಿದ್ದರು. ನಂತರ ಚಲನಚಿತ್ರ ನಟನಾಗಿ `ಟಾರ್ಜಾನ್' ಪಾತ್ರದ ಮೂಲಕ ಮಿಂಚಿದರು.

1897: ನ್ಯೂಯಾರ್ಕ್ ಜರ್ನಲ್ ನಲ್ಲಿ ತಾನು ಮರಣ ಹೊಂದಿದ್ದೇನೆಂಬ ಸುದ್ದಿ ಓದಿ ಮಾರ್ಕ್ ಟ್ವೇನ್ `ಇದು ತೀರಾ ಅತಿಶಯೋಕ್ತಿಯ ವರದಿ' ಎಂದು ಪ್ರತಿಕ್ರಿಯೆ ನೀಡಿದ.

1882: ಇಟಲಿ ಏಕೀಕರಣದ ರೂವಾರಿ ಜೋಸೆಫ್ ಗ್ಯಾರಿಬಾಲ್ಡಿ ಈದಿನ ನಿಧನರಾದರು. ಇವರ ಹಲವಾರು ಸೇನಾ ದಂಡಯಾತ್ರೆಗಳು ಇಟಲಿ ಏಕೀಕರಣಕ್ಕೆ ನೆರವಾದವು. ಇವರು ಜನಿಸಿದ್ದು 1807ರ ಜುಲೈ 4ರಂದು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement