Tuesday, June 3, 2008

ಇಂದಿನ ಇತಿಹಾಸ History Today ಜೂನ್ 3

ಇಂದಿನ ಇತಿಹಾಸ

ಜೂನ್ 3


ವಿಶ್ವ ವೃತ್ತಿಪರ ಬಿಲಿಯರ್ಡ್ ಚಾಂಪಿಯನ್ ಶಿಪ್ ನಲ್ಲಿ ಅಮೋಘ ಜಯ ದಾಖಲಿಸುವ ಮೂಲಕ ಭಾರತದ ಗೀತ್ ಸೇಠಿ ಐದನೇ ಬಾರಿಗೆ ಈ ಕಿರೀಟವನ್ನು ಧರಿಸಿದರು. ಮುಂಬೈಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡಿನ ಲ್ಯಾಗನ್ ವಿರುದ್ಧ 1000 ಅಂಕಗಳ ಅಂತರದಿಂದ ಜಯಗಳಿಸುವ ಮೂಲಕ ಸೇಠಿ ಅವರು ಈ ಪ್ರಶಸ್ತಿಗೆ ಭಾಜನರಾದರು.

2007: ಕೆಲ ಕಾಲದ ಅಜ್ಞಾತವಾಸದ ಬಳಿಕ ಶೃಂಗೇರಿಗೆ ಸಮೀಪದ ಗಂಡಘಟ್ಟಕ್ಕೆ ಲಗ್ಗೆ ಇಟ್ಟ ನಕ್ಸಲೀಯರು ಕೆಸಮುಡಿ ವೆಂಕಟೇಶ್ (45) ಎಂಬ ವರ್ತಕರ ಮನೆ ಮೇಲೆ ದಾಳಿ ಮಾಡಿ ಅವರನ್ನು ಹಿಗ್ಗಾಮುಗ್ಗ ಥಳಿಸಿ ಗುಂಡಿಟ್ಟು ಕೊಂದು ಹಾಕಿದರು.

2007: ಅಂತಾರಾಷ್ಟ್ರೀಯ ಸಂಸ್ಥೆ ಗೋಲ್ಡ್ ಕ್ವೆಸ್ಟ್ ಇಂಟರ್ ನ್ಯಾಷನಲ್ (ಕ್ವೆಸ್ಟ್ ನೆಟ್) ತಯಾರಿಸಿದ ವರನಟ ಡಾ. ರಾಜಕುಮಾರ್ ಅವರ ಭಾವಚಿತ್ರ ಇರುವ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಪಾರ್ವತಮ್ಮ ರಾಜಕುಮಾರ್ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ನಸುನಗುತ್ತಿರುವ ಡಾ. ರಾಜಕುಮಾರ್ ಭಾವಚಿತ್ರ ಇರುವ ಈ ನಾಣ್ಯಗಳಲ್ಲಿ `ನೇತ್ರದಾನ ಮಾಡಿ' ಎಂಬ ಸಂದೇಶವಿದೆ. ಚಿನ್ನದ ಪದಕ 6 ಗ್ರಾಂ ತೂಕವಿದ್ದು, 26 ಮಿ.ಮೀ. ಸುತ್ತಳತೆ ಹೊಂದಿದೆ. ಪ್ರತಿಪದಕಕ್ಕೂ ಸಂಖ್ಯೆ ಇದೆ. ಬೆಳ್ಳಿ ಪದಕದ ತೂಕ ಒಂದು ಔನ್ಸ್ ಸುತ್ತಳತೆ 38.6 ಮಿ.ಮೀ. . ಎರಡೂ ಪದಕಗಳನ್ನು ಜರ್ಮನಿಯ ಬಿ.ಎಚ್. ಮಾಯರ್ ಹೆಸರಿನ ಟಂಕಸಾಲೆಗಳಲ್ಲಿ ತಯಾರಿಸಲಾಯಿತು.

2007: ನ್ಯೂಯಾರ್ಕಿನ ಜಾನ್ ಎಫ್. ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಫೋಟಿಸುವ ವಿಧ್ವಂಸಕ ಕೃತ್ಯದ ಸಂಚನ್ನು ವಿಫಲಗೊಳಿಸಲಾಯಿತು.

2007: ದೇಶದಾದ್ಯಂತ ಲಕ್ಷಾಂತರ ರೈತರಿಗೆ ತಲೆನೋವಾದ `ಕಾಂಗ್ರೆಸ್ ಹುಲ್ಲು' ಈಗ ಗೊಬ್ಬರ ಎಂಬುದು ಸಾಬೀತಾಗಿದೆ ಎಂದು ಈ ಬಗ್ಗೆ ಸಂಶೋಧನೆ ನಡೆಸಿದ ಮಹಾರಾಷ್ಟ್ರದ ಜೀವಶಾಸ್ತ್ರ ಅಧ್ಯಾಪಕಿ ಡಾ. ಗೌರಿ ಶ್ರೀಕೃಷ್ಣ ಕ್ಷೀರಸಾಗರ್ ವಾರ್ಧಾ ಜಿಲ್ಲೆಯ ಪಲ್ ಗಾಂವ್ ಪ್ರಥಮ ದರ್ಜೆ ಕಾಲೇಜಿನ ಕಾರ್ಮಿಕ ಶಿಬಿರದಲ್ಲಿಪ್ರಕಟಿಸಿದರು.

2006: ವಿಶ್ವ ವೃತ್ತಿಪರ ಬಿಲಿಯರ್ಡ್ ಚಾಂಪಿಯನ್ ಶಿಪ್ ನಲ್ಲಿ ಅಮೋಘ ಜಯ ದಾಖಲಿಸುವ ಮೂಲಕ ಭಾರತದ ಗೀತ್ ಸೇಠಿ ಐದನೇ ಬಾರಿಗೆ ಈ ಕಿರೀಟವನ್ನು ಧರಿಸಿದರು. ಮುಂಬೈಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡಿನ ಲ್ಯಾಗನ್ ವಿರುದ್ಧ 1000 ಅಂಕಗಳ ಅಂತರದಿಂದ ಜಯಗಳಿಸುವ ಮೂಲಕ ಸೇಠಿ ಅವರು ಈ ಪ್ರಶಸ್ತಿಗೆ ಭಾಜನರಾದರು. 1998ರಲ್ಲಿ ಗೀತ್ ಸೇಠಿ ಅವರು ಕೊನೆಯ ಬಾರಿ ಈ ಪ್ರಶಸ್ತಿ ಗೆದ್ದಿದ್ದರು.

2006: ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಮತ್ತು ಅವರ ಪತಿ ಆಸಿಫ್ ಅಲಿ ಜರ್ದಾರಿ ಅವರು ತಮ್ಮ ಆಸ್ತಿಯ ವಿವರದ ಬಗ್ಗೆ ಸುಳ್ಳು ಹೇಳಿಕೆ ನೀಡಿದ್ದರ ಸಂಬಂಧ ತನ್ನ ಸಮನ್ಸಿಗೆ ಉತ್ತರಿಸದ ಆರೋಪಕ್ಕಾಗಿ ಇಸ್ಲಾಮಾಬಾದಿನ ನ್ಯಾಯಾಲಯವೊಂದು ಬಂಧನದ ವಾರಂಟ್ ಹೊರಡಿಸಿತು. ಇಸ್ಲಾಮಾಬಾದಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಫೀ-ಉಲ್ ಜಮನ್ ಅವರು ನ್ಯಾಯಾಲಯದ ಸಮನ್ಸಿಗೆ ಪ್ರತಿಕ್ರಿಯೆ ವ್ಯಕ್ತಪಡಿಸದ ಬೆನಜೀರ್ ಮತ್ತು ಜರ್ದಾರಿ ಬಂಧನಕ್ಕೆ ಇಂಟರ್ ಪೋಲ್ ಪೊಲೀಸರನ್ನು ಸಂಪರ್ಕಿಸುವಂತೆ ಮತ್ತು ಈ ದಂಪತಿಯನ್ನು ಬಂಧಿಸಿ ಜುಲೈ 3ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಿದರು. ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷೆ ಬೆನಜೀರ್ ಅವರು ಮಾಜಿ ಪ್ರಧಾನಿ ಮತ್ತು ಪಾಕಿಸ್ಥಾನ ಮುಸ್ಲಿಂ ಲೀಗ್ ಅಧ್ಯಕ್ಷ ನವಾಜ್ ಷರೀಫ್ ಅವರನ್ನು ದುಬೈಯಲ್ಲಿ ಭೇಟಿಯಾದ ಮಾರನೇ ದಿನವೇ ಬಂಧನ ಆದೇಶ ಹೊರಬಿದ್ದಿತು.

1989: ಇರಾನಿನ ರಾಜಕೀಯ ಹಾಗೂ ಧಾರ್ಮಿಕ ನಾಯಕರಾಗಿದ್ದ ಅಯತೊಲ್ಲಾ ಖೊಮೇನಿ 89ನೇ ವಯಸ್ಸಿನಲ್ಲಿ ಮೃತರಾದರು. 1979ರಲ್ಲಿ ಇವರು ಮೊಹಮ್ಮದ್ ರೇಝಾ ಶಾ ಪಹ್ಲವಿಯವರನ್ನು ಪದಚ್ಯುತಗೊಳಿಸಿ ಇರಾನಿನ ಪರಮೋಚ್ಛ ನಾಯಕರಾದರು.

1966: ಪಾಕ್ ಕ್ರಿಕೆಟಿಗ ವಾಸಿಂ ಅಕ್ರಮ್ ಜನನ.

1965: ಬಾಹ್ಯಾಕಾಶದಲ್ಲಿ ನಡೆದಾಡಿದ ಮೊತ್ತ ಮೊದಲ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಎಡ್ವರ್ಡ್ ಎಚ್. ವೈಟ್ ಪಾತ್ರರಾದರು. ಅವರು `ಜೆಮಿನಿ-4' ಬಾಹ್ಯಾಕಾಶ ನೌಕೆಯಿಂದ ಹೊರಕ್ಕೆ ಬಂದು 21 ನಿಮಿಷಗಳ ಕಾಲ ಗಗನದಲ್ಲಿ ನಡೆದಾಡಿದರು.

1931: ಪತ್ರಿಕೋದ್ಯಮಿ, ಸಾಹಿತಿ ಪರಮೇಶ್ವರ ಭಟ್ಟ (ಪ.ಸು. ಭಟ್ಟ) (3-6-1931ರಿಂದ 24-6-1981) ಅವರು ಸುಬ್ಬರಾಯ ಭಟ್ಟರು - ಸರಸ್ವತಿ ದಂಪತಿಯ ಪುತ್ರನಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹೊಲನಗದ್ದೆಯಲ್ಲಿ ಹುಟ್ಟಿದರು.

1930: ಜಾರ್ಜ್ ಫರ್ನಾಂಡಿಸ್ ಅವರು ಮಂಗಳೂರಿನಲ್ಲಿ ಈದಿನ ಜನಿಸಿದರು.

1924: ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಜನನ.

1916: ಧೋಂಡೋ ಕೇಶವ ಕರ್ವೆ ಅವರು ಪುಣೆಯಲ್ಲಿ ಭಾರತೀಯ ಮಹಿಳಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು. ಈ ವಿಶ್ವ ವಿದ್ಯಾಲಯಕ್ಕೆ ವಿಪುಲ ನೆರವು ನೀಡಿದ ಕೈಗಾರಿಕೋದ್ಯಮಿ ಸರ್ ವಿಠ್ಠಲದಾಸ್ ಥ್ಯಾಕರ್ಸೆ ಅವರ ತಾಯಿಯ ನೆನಪಿಗಾಗಿ ಈ ವಿಶ್ವ ವಿದ್ಯಾಲಯಕ್ಕೆ ಶ್ರೀಮತಿ ನಾಥಿಬಾಯಿ ದಾಮೋದರ ಥ್ಯಾಕರ್ಸೆ ವಿಶ್ವ ವಿದ್ಯಾಲಯ ಎಂಬುದಾಗಿ ನಂತರ ನಾಮಕರಣ ಮಾಡಲಾಯಿತು.

1899: ಗಾಯಕ ಡಾ. ಬಿ. ದೇವೇಂದ್ರಪ್ಪ (3-6-1899ರಿಂದ 6-6-1986) ಅವರು ಚಿತ್ರದುರ್ಗದ ಮದಕರಿ ನಾಯಕನ ವಂಶಕ್ಕೆ ಸೇರಿದ ಸಂಗೀತ ಮತ್ತು ಭರತನಾಟ್ಯ ಪ್ರವೀಣ ಬಿ.ಎಸ್. ರಾಮಯ್ಯ- ತುಳಸಮ್ಮ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆಯ ಅಯನೂರು ಗ್ರಾಮದಲ್ಲಿ ಜನಿಸಿದರು.

1895: ಭಾರತೀಯ ರಾಜತಾಂತ್ರಿಕ ಕಾವಲಂ ಮಾಧವ ಪಣಿಕ್ಕರ್ (ಕೆ.ಎಂ. ಪಣಿಕ್ಕರ್)(1895-1963) ಜನ್ಮದಿನ.

1890: ಗಡಿನಾಡ ಗಾಂಧಿ ಎಂದೇ ಖ್ಯಾತರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಖಾನ್ ಅಬ್ದುಲ್ ಗಫಾರ್ ಖಾನ್ ಈದಿನ ಪೇಷಾವರದಲ್ಲಿ ಜನಿಸಿದರು. 1915ರಿಂದ 1918ರವರೆಗೆ ಗಡಿ ಭಾಗದ ಸಾವಿರಾರು ಹಳ್ಳಗಳನ್ನು ಸುತ್ತಿದ ಅವರು 1920ರಲ್ಲಿ `ಸರ್ವೆಂಟ್ಸ್ ಆಫ್ ಗಾಡ್' ಎಂಬ ಸಂಘಟನೆ ಸ್ಥಾಪಿಸಿದರು. ಇದು `ರೆಡ್ ಶರ್ಟ್ಸ್' ಎಂದೇ ಪ್ರಸಿದ್ಧಿ ಪಡೆದಿದೆ.

1865: ಯುನೈಟೆಡ್ ಕಿಂಗ್ ಡಮ್ಮಿನ ದೊರೆ ಐದನೇ ಜಾರ್ಜ್ (1865-1936) ಜನ್ಮದಿನ. ರಾಣಿ ಎರಡನೇ ಎಲಿಜಬೆತ್ ಳ ತಂದೆಯಾದ ಈತ ಯುನೈಟೆಡ್ ಕಿಂಗ್ ಡಮ್ಮನ್ನು 1910ರಿಂದ 1936ರ ಅವಧಿಯಲ್ಲಿ ಆಳಿದ್ದ.

1761: ಹೆನ್ರಿ ಶ್ರಾಪ್ ನೆಲ್ (1761-1842) ಜನ್ಮದಿನ. ಇಂಗ್ಲಿಷ್ ಸೇನಾ ಅಧಿಕಾರಿಯಾದ ಈತ ಶ್ರಾಪ್ ನೆಲ್ ಶೆಲ್ ಹಾಗೂ ಶೆಲ್ ಭಾಗಗಳನ್ನು ಕಂಡು ಹಿಡಿದವ. ವೆಲಿಂಗ್ಟನ್ನಿನ ಡ್ಯೂಕ್ ಈ ಶೆಲ್ ಗಳನ್ನು ವಾಟರ್ಲೂ ಕದನದಲ್ಲಿ ನೆಪೋಲಿಯನ್ ವಿರುದ್ಧ ಬಳಸಿದ್ದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement