to return your deposit

ಹೂಡಿಕೆ ಹಣ ಹಿಂದಿರುಗಿಸದ
ಕಂಪೆನಿ..!
ಬಂಡವಾಳ ಆಕರ್ಷಿಸಲು ವಿವಿಧ ಕಂಪೆನಿಗಳು ಇನ್ನಿಲ್ಲದ ಪ್ರಚಾರ ಮಾಡುತ್ತವೆ. ಆದರೆ ಹಾಗೆ ಕ್ರೋಡೀಕರಿಸಿದ ಹಣ ಹಿಂದಿರುಗಿಸಬೇಕಾದ ಸಮಯ ಬಂದಾಗ ಮನಸ್ಸು ಇಲ್ಲದವರಂತೆ ವ್ಯವಹರಿಸುತ್ತವೆ. ಇದರಿಂದ ಗ್ರಾಹಕರು ಪಡುವ ಕಷ್ಟ ಅಷ್ಟಿಷ್ಟಲ್ಲ. ಇದು ಅಂತಹ ಒಂದು ಪ್ರಕರಣ.
ನೆತ್ರಕೆರೆ ಉದಯಶಂಕರ
ಕಂಪೆನಿಗಳಲ್ಲಿ ನಿರ್ದಿಷ್ಟ ಅವಧಿಗೆ ಹಣ ಠೇವಣಿ ಇಟ್ಟು ಅವಧಿ ಪೂರೈಸಿದ ಬಳಿಕ ಬಡ್ಡಿ ಸಹಿತವಾಗಿ ಹಿಂದಕ್ಕೆ ಪಡೆಯುವುದು ಕ್ರಮ. ಆದರೆ ಅಗತ್ಯ ಬಿದ್ದಾಗ ನಿಯಮಗಳಿಗೆ ಅನುಸಾರವಾಗಿ ಅದನ್ನು ಅವಧಿಗೆ ಮುನ್ನವೇ ಹಿಂದಕ್ಕೆ ಪಡೆಯಲೂ ಅವಕಾಶ ಇರುತ್ತದೆ. ಈ ರೀತಿ ಇಟ್ಟ ಠೇವಣಿ ಹಣವನ್ನು ಅವಧಿಗೆ ಮುನ್ನ ಕೇಳಿದಾಗ ಹಿಂದಿರುಗಿಸದೇ ಇದ್ದರೆ?
ಠೇವಣಿದಾರ ಗ್ರಾಹಕ ಸಂರಕ್ಷಣಾ ಕಾಯ್ದೆಯ ನೆರವು ಪಡೆಯಬಹುದು. ತನ್ನ ಮುಂದೆ ಬಂದ ಇಂತಹ ಪ್ರಕರಣ ಒಂದರ ವಿಚಾರಣೆ ನಡೆಸಿದ ಬೆಂಗಳೂರು ನಗರ ಜಿಲ್ಲಾ ಗ್ರಾಹಕ ನ್ಯಾಯಾಲಯವು ಠೇವಣಿದಾರರಿಗೆ ನ್ಯಾಯ ಒದಗಿಸಿದ ಪ್ರಕರಣ ಇದು.
ಈ ಪ್ರಕರಣದ ಅರ್ಜಿದಾರರು: ಬೆಂಗಳೂರು ಜೆಪಿ ನಗರದ ಕಾಳೆ ಗೌಡರ ಮಗ ಕೃಷ್ಣೇಗೌಡ. ಪ್ರತಿವಾದಿ: ಗುರುಟೀಕ್ ಇನ್ ವೆಸ್ಟ್ ಮೆಂಟ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್, ಬೆಂಗಳೂರು.
ಅರ್ಜಿದಾರ ಕೃಷ್ಣೇಗೌಡ ಅವರು 24-12-2002ರಂದು ಪ್ರತಿವಾದಿ ಗುರುಟೀಕ್ ಇನ್ ವೆಸ್ಟ್ ಮೆಂಟ್ಸ್ ಸಂಸ್ಥೆಯ ಜಾಹೀರಾತಿನಿಂದ ಆಕರ್ಷಿತರಾಗಿ ಅಲ್ಲಿ 20,000 ರೂಪಾಯಿಗಳನ್ನು ಠೇವಣಿ ಇಟ್ಟರು. ನಿಯಮಾನುಸಾರವಾಗಿ ಈ ಹಣ 24-12-2011ರ ವೇಳೆಗೆ ಬಡ್ಡಿ ಸೇರಿಸಿ 50,000 ರೂಪಾಯಿ ಮೊತ್ತಕ್ಕೆ ಬೆಳೆಯುತ್ತಿತ್ತು.
ಸಂಸ್ಥೆಯ ನಿಯಮಾವಳಿ, ಷರತ್ತುಗಳ ಪ್ರಕಾರ ಅಗತ್ಯ ಬಿದ್ದರೆ ಹೂಡಿಕೆದಾರ ನಾಲ್ಕು ವರ್ಷಗಳು ಪೂರೈಸಿದ ಬಳಿಕ ಈ ಠೇವಣಿಯನ್ನು ಹಿಂದಕ್ಕೆ ಪಡೆಯಬಹುದಾಗಿತ್ತು.
ಅರ್ಜಿದಾರರು ನೀಡಿದ ಈ 20,000 ರೂಪಾಯಿ ಠೇವಣಿ ಹಣಕ್ಕೆ ಪ್ರತಿವಾದಿ ಸಂಸ್ಥೆಯು ಬಾಂಡ್ ವಿತರಿಸಿತ್ತು.
ನಾಲ್ಕು ವರ್ಷಗಳ ಬಳಿಕ ಹಣದ ಅಗತ್ಯ ಇದ್ದುದರಿಂದ ಅರ್ಜಿದಾರ ಕೃಷ್ಣೇಗೌಡ ಅವರು ಠೇವಣಿ ಹಣ ಹಿಂದಿರುಗಿಸುವಂತೆ ಕೋರಿ ಪ್ರತಿವಾದಿ ಸಂಸ್ಥೆಗೆ 1-3-2007ರಂದು ಅರ್ಜಿ ಸಲ್ಲಿಸಿದರು.
ನಾಲ್ಕು ವರ್ಷ ಪೂರೈಸಿದ ಪ್ರಕಾರ 26,400 ರೂಪಾಯಿಗಳನ್ನು ಪಡೆಯಲು ಅರ್ಜಿದಾರರು ಅರ್ಹರಾಗಿದ್ದರು.
ಆದರೆ ಪ್ರತಿವಾದಿ ಸಂಸ್ಥೆಯು ಹಣ ವಾಪಸಾತಿಯ ತನ್ನ ಆಶ್ವಾಸನೆ ಈಡೇರಿಸುವಲ್ಲಿ ವಿಫಲವಾಯಿತು.
ಇದರಿಂದ ಚಿಂತಿತರಾದ ಅರ್ಜಿದಾರ ಕೃಷ್ಣೇಗೌಡ ಗ್ರಾಹಕ ನ್ಯಾಯಾಲಯದ ಕದ ತಟ್ಟಿದರು. ಪ್ರತಿವಾದಿಯು ಹಣವನ್ನು ಹಿಂದಿರುಗಿಸುವಲ್ಲಿ ವಿಫಲರಾಗುವ ಮೂಲಕ ಸೇವಾ ಲೋಪ ಎಸಗಿದ್ದಾರೆ ಎಂದು ಆಪಾದಿಸಿದ ಅರ್ಜಿದಾರರು ತಮ್ಮ ಹಣ ಹಿಂದಿರುಗಿಸಲು ಸೂಚಿಸುವುದರ ಜೊತೆಗೆ ಪರಿಹಾರ ಒದಗಿಸುವಂತೆಯೂ ಮನವಿ ಮಾಡಿದರು.
ಅಧ್ಯಕ್ಷ ಎ.ಎಂ. ಬೆನ್ನೂರು, ಸದಸ್ಯರಾದ ಸೈಯದ್ ಉಸ್ಮಾನ್ ರಜ್ವಿ ಮತ್ತು ಎಂ. ಯಶೋದಮ್ಮ ಅವರನ್ನು ಒಳಗೊಂಡ ಪೀಠವು ಅರ್ಜಿದಾರರ ಪರ ವಕೀಲ ಕೆ. ನಾಗರಾಜ ಅವರ ಅಹವಾಲುಗಳನ್ನು ಆಲಿಸಿ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿತು.
ನ್ಯಾಯಾಲಯವು ನೋಟಿಸ್ ಕಳುಹಿಸಿದರೂ ಪ್ರತಿವಾದಿ ಸಂಸ್ಥೆ ಅದಕ್ಕೆ ಸ್ಪಂದಿಸಲಿಲ್ಲ. ತಮ್ಮ ಗೈರುಹಾಜರಿ ಸಮರ್ಥಿಸುವಂತಹ ಯಾವುದೇ ಕಾರಣಗಳನ್ನು ನ್ಯಾಯಾಲಯಕ್ಕೆ ಒದಗಿಸಲಿಲ್ಲ. ಹೀಗಾಗಿ ಪ್ರತಿವಾದಿಯ ಗೈರುಹಾಜರಿಯಲ್ಲೇ ನ್ಯಾಯಾಲಯ ಪ್ರಕರಣದ ವಿಚಾರಣೆ ಮುಂದುವರೆಸಿತು.
ವಿಚಾರಣೆ ಕಾಲದಲ್ಲಿ ಅರ್ಜಿದಾರರು ತಮ್ಮ ದೂರಿಗೆ ಪೂರಕವಾಗಿ ದಾಖಲೆಗಳನ್ನು ಹಾಗೂ ಪ್ರಮಾಣಪತ್ರ ಸಲ್ಲಿಸಿದರು.
ಅರ್ಜಿದಾರರು 1-3-2007ರಂದೇ ಠೇವಣಿ ಸಂಬಂಧ ನೀಡಲಾಗಿದ್ದ ಬಾಂಡನ್ನು ಸಲ್ಲಿಸಿ ಜೊತೆಗೇ ಹಣ ಹಿಂದಿರುಗಿಸುವಂತೆ ಕೋರಿಕೆ ಪತ್ರ ಬರೆದಿದ್ದರು. ಆದರೆ ಪ್ರತಿವಾದಿ ಸಂಸ್ಥೆಯು ಒಂದಲ್ಲ ಒಂದು ನೆಪ ನೀಡಿ ಹಣ ಹಿಂದಿರುಗಿಸುವುದನ್ನು ಮುಂದೂಡುತ್ತಾ ಬಂದುದರ ಜೊತೆಗೆ ಅದರ ಸಲುವಾಗಿ ಅರ್ಜಿದಾರರು ಸಂಸ್ಥೆಯ ಕಂಬ, ಕಂಬಗಳನ್ನು ಸುತ್ತುವಂತೆ ಮಾಡಿದುದನ್ನು ನ್ಯಾಯಾಲಯ ಗಮನಿಸಿತು.
ಅರ್ಜಿದಾರರು ನೀಡಿದ ಸಾಕ್ಷ್ಯಾಧಾರಗಳು, ವಾರ್ಷಿಕ ಡಿವಿಡೆಂಡ್ ವಾರಂಟಿ, 20,000 ರೂಪಾಯಿ ಸ್ವೀಕರಿಸಿದ್ದಕ್ಕೆ ಸಂಬಂಧಿಸಿದ ರಶೀದಿ, ಬಾಂಡ್ ಸರ್ಟಿಫಿಕೇಟ್ ಇತ್ಯಾದಿಗಳು ಅರ್ಜಿದಾರರ ಋಜುತ್ವವನ್ನು ಸಾಬೀತುಪಡಿಸುತ್ತವೆ ಎಂಬ ಅಭಿಪ್ರಾಯಕ್ಕೆ ನ್ಯಾಯಾಲಯ ಬಂತು.
ತಮ್ಮ ವಿರುದ್ಧ ಅರ್ಜಿದಾರರು ಮಾಡಿದ ಸೇವಾಲೋಪ ಆರೋಪ ಸಂಬಂಧ ನ್ಯಾಯಾಲಯ ಕಳುಹಿಸಿದ ನೋಟಿಸಿಗೆ ಉತ್ತರ ನೀಡುವಲ್ಲಿ ಮತ್ತು ನ್ಯಾಯಾಲಯಕ್ಕೆ ಹಾಜರಾಗುವಲ್ಲಿನ ವೈಫಲ್ಯವು, ಪ್ರತಿವಾದಿಯು ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ಕೂಡಾ ಸಂಪೂರ್ಣವಾಗಿ ಒಪ್ಪಿಕೊಂಡಿರುವುದನ್ನೇ ತೋರಿಸುತ್ತದೆ. ಈ ಪ್ರಕರಣದಲ್ಲಿ ನಿಚ್ಚಳವಾಗಿ ಸೇವಾಲೋಪ ಆಗಿರುವುದು ನಮ್ಮ ಗಮನಕ್ಕೆ ಬರುತ್ತಿದೆ ಎಂದು ನ್ಯಾಯಾಲಯ ಹೇಳಿತು.
ತಾವು ಕಷ್ಟ ಪಟ್ಟು ಸಂಪಾದಿಸಿದ ಹಣವನ್ನು ಪ್ರತಿವಾದಿ ಸಂಸ್ಥೆಯಲ್ಲಿ ತೊಡಗಿಸಿದ ಅರ್ಜಿದಾರರಿಗೆ ಈ ಹೂಡಿಕೆಯ ಲಾಭ ಸಿಗಲಿಲ್ಲ. ಸಹಜವಾಗಿಯೇ ಅವರಿಗೆ ಆರ್ಥಿಕ ನಷ್ಟದ ಜೊತೆಗೆ ಮಾನಸಿಕ ಕಿರಿಕಿರಿ ಆಗಿದೆ. ಈ ಹಿನ್ನೆಲೆಯಲ್ಲಿ ಅವರು ಪರಿಹಾರ ಪಡೆಯಲು ಅರ್ಹರು ಎಂದು ಹೇಳಿದ ನ್ಯಾಯಾಲಯ 26,400 ರೂಪಾಯಿಗಳನ್ನು 600 ರೂಪಾಯಿ ಖಟ್ಲೆ ವೆಚ್ಚ ಸೇರಿಸಿ ನಾಲ್ಕು ವಾರಗಳ ಒಳಗಾಗಿ ಅರ್ಜಿದಾರರಿಗೆ ಪಾವತಿ ಮಾಡುವಂತೆ ಪ್ರತಿವಾದಿ ಸಂಸ್ಥೆಗೆ ಆಜ್ಞಾಪಿಸಿತು.
ತಪ್ಪಿದಲ್ಲಿ 26,400 ರೂಪಾಯಿಗಳನ್ನು 5-6-2007ರಿಂದ ಪಾವತಿ ಆಗುವವರೆಗೂ ಶೇಕಡಾ 12ರ ಬಡ್ಡಿ ಮತ್ತು ಖಟ್ಲೆ ವೆಚ್ಚ ಸಹಿತವಾಗಿ ಪಾವತಿ ಮಾಡಬೇಕು ಎಂದೂ ನ್ಯಾಯಾಲಯ ಆದೇಶ ನೀಡಿತು.
No comments:
Post a Comment