Tuesday, August 12, 2008

ಇಂದಿನ ಇತಿಹಾಸ History Today ಆಗಸ್ಟ್ 12

ಇಂದಿನ ಇತಿಹಾಸ

ಆಗಸ್ಟ್ 12

ಅಡಾಲ್ಫ್ ಹಿಟ್ಲರನ ನಾಝಿ ಪಡೆಗಳಿಗೆ ಸೇರಿದ ವಾಫೆನ್ ಎಸ್ಸೆಸ್ಸಿನಲ್ಲಿ ತಾವು ಸೇವೆ ಸಲ್ಲಿಸಿದ್ದುದಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಜರ್ಮನ್ ಸಾಹಿತಿ ಗುಂಟರ್ ಗ್ರಾಸ್ (78) ಪ್ರಪ್ರಥಮ ಬಾರಿಗೆ ಒಪ್ಪಿಕೊಂಡರು.

2007: ಟಿವಿ ಅಡುಗೆ ಕಾರ್ಯಕ್ರಮದ ಹೆಸರಾಂತ ನಿರೂಪಕಿ ಭಾರತೀಯ ಮೂಲದ ಬ್ರಿಟನ್ ಪ್ರಜೆ ಅಂಜುಮ್ ಆನಂದ್ ಅವರು ಭಾರತೀಯ ಅಡುಗೆ ಕುರಿತು ಬರೆದಿರುವ `ಇಂಡಿಯನ್ ಫುಡ್ ಮೇಡ್ ಈಸಿ' ಪುಸ್ತಕ ಹ್ಯಾರಿ ಪಾಟರ್ಗಿಂತಲೂ ಹೆಚ್ಚು ಮಾರಾಟವಾಗಿ ದಾಖಲೆ ನಿರ್ಮಿಸಿದೆ ಎಂದು 'ಡೈಲಿ ಮೇಲ್' ಪತ್ರಿಕೆ ವರದಿ ಮಾಡಿತು. 35 ವರ್ಷದ ಅಂಜುಮ್ ಅವರು, ಭಾರತೀಯ ಅಡುಗೆಯನ್ನು ಸರಳವಾಗಿ, ರುಚಿಕರವಾಗಿ ಮತ್ತು ಆರೋಗ್ಯಕರವಾಗಿ ಹೇಗೆ ತಯಾರಿಸಬಹುದು ಎಂಬ ಬಗ್ಗೆ ಬರೆದಿರುವ ಈ ಪುಸ್ತಕದಲ್ಲಿ 70 ಹೊಸ ಖಾದ್ಯಗಳನ್ನುಪರಿಚಯಿಸಲಾಗಿದೆ.

2007: ಅಲಹಾಬಾದಿನ ಗಂಗಾ, ಯಮುನಾ ಮತ್ತು ಗುಪ್ತಗಾಮಿನಿ ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಅಸ್ಥಿ ವಿಸರ್ಜಿಸಲಾಯಿತು. ಚಂದ್ರಶೇಖರ್ ಅವರ ಪುತ್ರರಾದ ಪಂಕಜ್ ಕುಮಾರ್ ಮತ್ತು ನೀರಜ್ ಶೇಖರ್ ತಮ್ಮ ತಂದೆಯ ಅಸ್ಥಿಯನ್ನು ಸಂಪ್ರದಾಯ ಪ್ರಕಾರ ವಿಸರ್ಜಿಸಿದರು.

2007: ನೇಪಾಳದ ದೊರೆಯ ಎಲ್ಲ ಅಧಿಕಾರಗಳನ್ನು ಪ್ರಧಾನಿಗೆ ವರ್ಗಾಯಿಸುವ ಸಂಸತ್ತಿನ ರಾಜ್ಯ ವ್ಯವಹಾರಗಳ ಸಮಿತಿ ಮಂಡಿಸಿದ, ಮಸೂದೆ 2064ಕ್ಕೆ ಸಂಸತ್ತು ಒಪ್ಪಿಗೆ ನೀಡಿತು. ಸುಮಾರು 26 ವಿಧದ ಬಿರುದುಗಳು, ಪ್ರಶಸ್ತಿ ಮತ್ತು ಪದಕಗಳನ್ನು ಪ್ರಧಾನಿ ಅವರು ನೀಡುವುದಕ್ಕೆ ಈ ಮಸೂದೆ ಅವಕಾಶ ಕಲ್ಪಿಸುತ್ತದೆ. ಈ ಮುಂಚೆ ದೇಶದ ಮುಖ್ಯಸ್ಥ ಎಂಬ ಕಾರಣಕ್ಕೆ ದೊರೆಗೆ ಈ ಅಧಿಕಾರವಿತ್ತು.

2007: ಪ್ರತಿಷ್ಠಿತ ನೈಸ್ ಸಂಸ್ಥೆಯ ಅಧ್ಯಕ್ಷ ಅಶೋಕ ಖೇಣಿ ಅವರ ಹುಟ್ಟೂರು ಖೇಣಿ ರಂಜೋಳದಲ್ಲಿ ರಾಷ್ಟ್ರದಲ್ಲೇ ಮೊತ್ತ ಮೊದಲ `ಹೈಬ್ರಿಡ್ ಸಿಸ್ಟಮ್' (ಪವನ- ಸೌರಶಕ್ತಿ ಯಂತ್ರ) ಅಳವಡಿಸಿಕೊಂಡ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ನೈಸ್ ಸಂಸ್ಥೆಯ ತಾಂತ್ರಿಕ ಅಧಿಕಾರಿ ಡಾ. ಹೆಚ್. ನಾಗನಗೌಡ ಪ್ರಕಟಿಸಿದರು. ಇದರಿಂದ ಉತ್ಪಾದನೆಯಾಗುವ ಸೌರ ವಿದ್ಯುತ್ತನ್ನು ಗ್ರಾಮದ ಎಲ್ಲ ಮನೆ ಹಾಗೂ ರಸ್ತೆಗಳಲ್ಲಿ ವಿದ್ಯುದ್ದೀಪಗಳಿಗೆ ಒದಗಿಸಲಾಗಿದ್ದು ಇಡೀ ಗ್ರಾಮ ರಾತ್ರಿ ವೇಳೆಯಲ್ಲಿ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿದೆ. ಈ ಹೈಬ್ರಿಡ್ ಸಿಸ್ಟಮಿನಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯಾಗುವುದು. ಕೇಬಲ್ ಸ್ಥಾಪನೆಯ ವೆಚ್ಚ ಇಲ್ಲ. ವಿದ್ಯುತ್ ಬಿಲ್ ಪಾವತಿ ಸಮಸ್ಯೆ ಇಲ್ಲ. ಸಾರ್ವಜನಿಕರಿಗೆ ಸುರಕ್ಷತೆ ಒದಗುತ್ತದೆ. ಸಂಪೂರ್ಣವಾಗಿ ಸ್ವಯಂ ಚಾಲಿತ ಹಾಗೂ ಪರಿಸರ ಸ್ನೇಹಿ ಹಾಗೂ ಶುದ್ಧ ಇಂಧನ ಸಂಪನ್ಮೂಲ ಲಭ್ಯತೆ ಇದರ ಅನುಕೂಲಗಳು ಎಂಬುದು ನಾಗನಗೌಡ ವಿವರಣೆ.

2007: ಜುಲೈ ತಿಂಗಳಲ್ಲಿ ಗೋಹತ್ಯೆಯನ್ನು ನಿಷೇಧಿಸಿದ ಉತ್ತರಖಂಡದ ಬಿಜೆಪಿ ಸರ್ಕಾರ ಗೋಮೂತ್ರಕ್ಕೆ ಅಪಾರ ಪ್ರಾಮುಖ್ಯತೆ ನೀಡಿತು. ಕ್ಯಾನ್ಸರ್ ದೂರಮಾಡುವ ವಿಶೇಷ ಗುಣಗಳು `ಗೋಮೂತ್ರ'ದಲ್ಲಿ ಇರುವ ಹಿನ್ನೆಲೆಯಲ್ಲಿ ಬ್ಲಾಕ್ ಮಟ್ಟದಲ್ಲಿ ಸಹಕಾರ ಸಂಘಗಳನ್ನು ಸ್ಥಾಪಿಸಿ ಅವುಗಳ ಮೂಲಕ ಗೋಮೂತ್ರ ಸಂಗ್ರಹಿಸಲು ಸರ್ಕಾರ ಚಿಂತಿಸಿದೆ ಎಂದು ಪಶುಸಂಗೋಪನೆ ಹಾಗೂ ಕೃಷಿ ಸಚಿವ ತ್ರಿವೇಂದ್ರ ರಾವ್ ಪ್ರಕಟಿಸಿದರು. ಹೀಗೆ ಸಂಗ್ರಹಗೊಂಡ ಗೋಮೂತ್ರವನ್ನು ಯೋಗ ಗುರು ಬಾಬಾ ರಾಮದೇವ್ ಅವರ `ದಿವ್ಯ ಯೋಗ ಫಾರ್ಮೆಸಿ' ಕಂಪೆನಿಯು ಲೀಟರಿಗೆ 6 ರೂಪಾಯಿಯಂತೆ ಖರೀದಿಸಲು ಮುಂದೆ ಬಂದಿದೆ. ಗೋಮೂತ್ರದಲ್ಲಿನ ಔಷಧೀಯ ಗುಣಗಳನ್ನು ಬಳಸಿಕೊಂಡು ದಿವ್ಯ ಯೋಗ ಫಾರ್ಮೆಸಿ ಕಂಪೆನಿಯು ಆಯುರ್ವೇದ ಉತ್ಪನ್ನಗಳನ್ನು ತಯಾರಿಸುತ್ತಿದೆ. ಕಂಪೆನಿಯ ಪ್ರಸ್ತಾವವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ 10 ಲಕ್ಷ ಗೋವುಗಳಿವೆ. ಪ್ರತಿ ಗೋವು ದಿನಕ್ಕೆ 5 ರಿಂದ 6 ಲೀಟರ್ ಗೋಮೂತ್ರ ಕೊಡುವ ಸಾಮರ್ಥ್ಯ ಹೊಂದಿದೆ.

2007: ಸೇತುಸಮುದ್ರಂ ಯೋಜನೆಗಾಗಿ `ರಾಮ ಸೇತು'ವನ್ನು ನಾಶಪಡಿಸುವ ಕ್ರಮದ ವಿರುದ್ಧ ತಮಿಳುನಾಡಿನ ಚೆನ್ನೈಯಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಉಪವಾಸ ಸತ್ಯಾಗ್ರಹ ನಡೆಸಿದರು. ರಾಮ ಸೇತುವನ್ನು ರಾಷ್ಟ್ರೀಯ ಪರಂಪರೆಯ ಸ್ಮಾರಕವನ್ನಾಗಿ ಉಳಿಸಿಕೊಳ್ಳಬೇಕು ಎಂದು ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ವಿರುದ್ಧವಾಗಿ ಶೇ 20ರಷ್ಟು ಸೇತುವೆಯನ್ನು ನಾಶಪಡಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಕಾರ್ಯನಿರ್ವಾಹಕ ಅಧ್ಯಕ್ಷ ಎಸ್.ವೇದಾಂತಂ ಆಪಾದಿಸಿದರು.

2006: ಉತ್ತರ ಮತ್ತು ಪಶ್ಚಿಮ ಶ್ರೀಲಂಕಾದಲ್ಲಿ ಎಲ್ಟಿಟಿಇ ತಮಿಳು ಬಂಡುಕೋರರು ಮತ್ತು ಸೈನಿಕರ ಮಧ್ಯೆ ನಡೆದ ತೀವ್ರ ಹೋರಾಟದಲ್ಲಿ ಕನಿಷ್ಠ 200 ಜನ ಬಂಡುಕೋರರು, 27 ಜನ ಸೈನಿಕರು ಮೃತರಾಗಿ ಒಟ್ಟು 280 ಜನ ಗಾಯಗೊಂಡರು.

2006: ಅಡಾಲ್ಫ್ ಹಿಟ್ಲರನ ನಾಝಿ ಪಡೆಗಳಿಗೆ ಸೇರಿದ ವಾಫೆನ್ ಎಸ್ಸೆಸ್ಸಿನಲ್ಲಿ ತಾವು ಸೇವೆ ಸಲ್ಲಿಸಿದ್ದುದಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಜರ್ಮನ್ ಸಾಹಿತಿ ಗುಂಟರ್ ಗ್ರಾಸ್ (78) ಪ್ರಪ್ರಥಮ ಬಾರಿಗೆ ಒಪ್ಪಿಕೊಂಡರು. ಫ್ರಾಂಕ್ ಫರ್ಟರ್ ಅಲ್ಜೆಮೀನ್ ಝೀಟಂಗ್ ಜೊತೆಗಿನ ಸಂದರ್ಶನದಲ್ಲಿ ಇದನ್ನು ಬಹಿರಂಗಗೊಳಿಸಿದ ಗ್ರಾಸ್ ದ್ವಿತೀಯ ಮಹಾಸಮರದ ಕೊನೆಯ ದಿನಗಳಲ್ಲಿ ತಾವಾಗಿಯೇ ಜಲಾಂತರ್ಗಾಮಿಯಲ್ಲಿ ಸೇವೆ ಸಲ್ಲಿಸಿದ್ದುದಾಗಿ ನುಡಿದರು.

2006: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಖ್ಯಾತ ಕೊಳಲು ವಾದಕ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರ ಕೊಳಲಗಾನಕ್ಕೆ ಖ್ಯಾತ ಗಾಯಕಿ ಡಾ. ಗಂಗೂಬಾಯಿ ಹಾನಗಲ್ ಸ್ವರ ಸೇರಿಸಿದರು.

2000: ಇವಾಂಡರ್ ಹೋಲಿಫೀಲ್ಡ್ ಅವರು ಜಾನ್ ರೂಯಿಝ್ ಅವರನ್ನು ಸೋಲಿಸಿ ಡಬ್ಲ್ಯೂಬಿಎ ಬಾಕ್ಸಿಂಗ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಈ ಪ್ರಶಸ್ತಿಯನ್ನು ನಾಲ್ಕು ಸಲ ಗೆದ್ದ ಪ್ರಥಮ ವ್ಯಕ್ತಿ ಎಂಬ ಹೆಗ್ಗಳಿಕೆ ಇವರದಾಯಿತು.

2000: ರಷ್ಯದ ಪರಮಾಣು ಚಾಲಿತ ಜಲಾಂತರ್ಗಾಮಿ `ಕರ್ಸ್ಕ್' ಸ್ಫೋಟದ ಪರಿಣಾಮವಾಗಿ ಬೇರೆಂಟ್ಸ್ ಸಮುದ್ರದಲ್ಲಿ ಅದರಲ್ಲಿದ್ದ ಎಲ್ಲ 118 ಮಂದಿಯೊಂದಿಗೆ ಮುಳುಗಿತು.

1985: ಜಪಾನ್ ಏರ್ ಲೈನ್ಸ್ ಬೋಯಿಂಗ್ 747 ದೇಶೀ ಹಾರಾಟ ನಡೆಸುತ್ತಿದ್ದಾಗ ಪರ್ವತಕ್ಕೆ ಅಪ್ಪಳಿಸಿ 520 ಜನ ಮೃತರಾದರು. ಇದು ಜಗತ್ತಿನ ಅತ್ಯಂತ ಭೀಕರ ವಿಮಾನ ಅಪಘಾತ ಎಂದು ಪರಿಗಣಿತವಾಗಿದೆ.

1981: ಈದಿನ ಪಿ.ಸಿ.ಯ ಜನ್ಮದಿನ. ವ್ಯವಹಾರ, ಶಾಲೆ ಮತ್ತು ಮನೆಗಳಲ್ಲಿ ಬಳಸಬಹುದಾದಂತಹ ಅತಿ ಸಣ್ಣ, ಅತಿ ಕಡಿಮೆ ಬೆಲೆಯ ಐಬಿಎಂ ಪರ್ಸನಲ್ ಕಂಪ್ಯೂಟರನ್ನು ತಾನು ಬಿಡುಗಡೆ ಮಾಡುತ್ತಿರುವುದಾಗಿ ಐಬಿಎಂ ಕಾರ್ಪೊರೇಷನ್ ಪ್ರಕಟಿಸಿತು. ಅದರ ಬೆಲೆ 1565 ಪೌಂಡುಗಳು. ಸುಮಾರು ಎರಡು ದಶಕಗಳ ಬಳಿಕ ಈ ಪರ್ಸನಲ್ ಕಂಪ್ಯೂಟರುಗಳು ಜಗತ್ತಿನ ಜೀವನ ವಿಧಾನವನ್ನೇ ಬದಲಾಯಿಸಿ ಬಿಟ್ಟವು.

1953: ಸಾಹಿತಿ, ಪ್ರವಾಸಪ್ರಿಯೆ ಡಾ. ಲತಾ ಗುತ್ತಿ ಅವರು ನಾಗನಗೌಡ- ಶಾಂತಾದೇವಿ ಪಾಟೀಲ ದಂಪತಿಯ ಪುತ್ರಿಯಾಗಿ ಬೆಳಗಾವಿಯಲ್ಲಿ ಜನಿಸಿದರು. ಇವರ ಸುಮಾರು 12 ಕೃತಿಗಳು ಪ್ರಕಟಗೊಂಡಿದ್ದು ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಬಿ.ಎಂ.ಶ್ರೀ. ಪ್ರತಿಷ್ಠಾನ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ರತ್ನಾಕರ ವರ್ಣಿ, ಮುದ್ದಣ ಕಾವ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.

1942: ಕ್ಯಾತನಹಳ್ಳಿ ರಾಮಣ್ಣ ಜನನ.

1940: ಸಾಹಿತಿ ಎನ್. ವಸಂತಕುಮಾರ ಜನನ.

1924: ಪಾಕಿಸ್ಥಾನದ ಮಹಮ್ಮದ್ ಜಿಯಾ ಉಲ್ ಹಕ್ (1924-1988) ಜನ್ಮದಿನ. ಸೇನಾದಂಡನಾಯಕ, ಮಾರ್ಷಲ್ ಲಾ ಮುಖ್ಯ ಆಡಳಿತಗಾರರಾಗಿದ್ದು ನಂತರ ರಾಷ್ಟ್ರದ ಅಧ್ಯಕ್ಷರಾದ (1978-88) ಇವರ ಆಡಳಿತಾವದಿಯಲ್ಲೇ ಪಾಕಿಸ್ಥಾನದ ಮಾಜಿ ಪ್ರಧಾನಿ ಝುಲ್ಫಿಕರ್ ಅಲಿ ಭುಟ್ಟೋ ಅವರನ್ನು ಕೊಲೆ ಆಪಾದನೆಯಲ್ಲಿ ಗಲ್ಲು ಶಿಕ್ಷೆಗೆ ಗುರಿಪಡಿಸಲಾಯಿತು.

1919: ವಿಕ್ರಮ್ ಅಂಬಾಲಾಲ್ ಸಾರಾಭಾಯಿ (1919-1971) ಜನ್ಮದಿನ. ಇವರು `ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ಜನಕ' ಎಂದೇ ಖ್ಯಾತಿ ಪಡೆದಿದ್ದಾರೆ. ಅಹಮದಾಬಾದಿನಲ್ಲಿ ಫಿಸಿಕಲ್ ರೀಸರ್ಚ್ ಲ್ಯಾಬೋರೇಟರಿ ಮತ್ತು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸ್ಥಾಪಿಸಲು ನೆರವಾದವರು ಇವರು. ಗುಜರಾತಿನ ಅಹಮದಾಬಾದಿನಲ್ಲಿ ಅಂಬಾಲಾಲ್- ಸರಳಾದೇವಿ ದಂಪತಿಯ ಮಗನಾಗಿ ಜನಿಸಿದ ವಿಕ್ರಮ್ ಸಾರಾಭಾಯಿ ಅವರ ಜೀವನದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸ್ಥಾಪನೆ ಮಹತ್ವದ ಮೈಲಿಗಲ್ಲು. ಪದ್ಮಭೂಷಣ ಪ್ರಶಸ್ತಿ (1966), ಭಟ್ನಾಗರ್ ಪ್ರಶಸ್ತಿ (1962), ನಂತರ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ (1972) ಇವರಿಗೆ ಲಭಿಸಿದವು. 1971ರ ಡಿಸೆಂಬರ್ 31ರಂದು ತಮ್ಮ 52ನೇ ವಯಸ್ಸಿನಲ್ಲಿ ಇವರು ನಿಧನರಾದರು.

1908: ಮೊತ್ತ ಮೊದಲ ಟಿ-ಮಾಡೆಲ್ ಫೋರ್ಡ್ ಕಾರು ಡೆಟ್ರಾಯಿಟ್ ನಲ್ಲಿ ಬಿಡುಗಡೆಯಾಯಿತು. ಜನರ ಕಾರು ಎಂದೇ ಖ್ಯಾತಿ ಪಡೆದ ಇದಕ್ಕೆ 825 ಡಾಲರ್ ಬೆಲೆ ನಿಗದಿ ಪಡಿಸಲಾಗಿತ್ತು.

1851: ಐಸಾಕ್ ಸಿಂಗರ್ ಅವರಿಗೆ ಅವರ ಹೊಲಿಗೆ ಯಂತ್ರಕ್ಕೆ ಪೇಟೆಂಟ್ ನೀಡಲಾಯಿತು.

No comments:

Advertisement