My Blog List

Monday, August 11, 2008

ಇಂದಿನ ಇತಿಹಾಸ History Today ಆಗಸ್ಟ್ 11

ಇಂದಿನ ಇತಿಹಾಸ

ಆಗಸ್ಟ್ 11

ಭಾರತದ ಸ್ವಾತಂತ್ರ್ಯ ಸೇನಾನಿಗಳಲ್ಲಿ ಒಬ್ಬರಾಗಿದ್ದ 19 ವರ್ಷದ ತರುಣ ಖುದೀರಾಮ್ ಬೋಸ್ ಅವರನ್ನು ಬ್ರಿಟಿಷರು ಈದಿನ ಮರಣದಂಡನೆಗೆ ಗುರಿಪಡಿಸಿದರು. ಈ ದಿನವನ್ನು ಭಾರತದಲ್ಲಿ ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತದೆ.

2007: ಮೊಹಮ್ಮದ್ ಹಮೀದ್ ಅನ್ಸಾರಿ ಅವರು ಭಾರತದ 13ನೇ ಉಪರಾಷ್ಟ್ರಪತಿಯಾಗಿ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪ್ರಮಾಣವಚನ ಬೋಧಿಸಿದರು. ಮಾಜಿ ರಾಯಭಾರಿ 70 ವರ್ಷದ ಅನ್ಸಾರಿ ಅವರು ರಾಜ್ಯಸಭೆಯ ಸಭಾಪತಿಯಾಗಿಯೂ ಕಾರ್ಯ ನಿರ್ವಹಿಸುವರು.

2007: ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಎಂಐಎಂ ಸಂಘಟನೆಯಿಂದ ಹಲ್ಲೆಗೆ ಒಳಗಾದ ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲಿಮಾ ನಸ್ರೀನ್ ವಿರುದ್ಧ `ಕೋಮುಗಳ ಮಧ್ಯೆ ಕೆಟ್ಟ ಭಾವನೆ' ಮೂಡಿಸಿದ ಆಪಾದನೆ ಹೊರಿಸಿ ಪೊಲೀಸರು ಪ್ರಕರಣ ದಾಖಲು ಮಾಡಿದರು. ಧರ್ಮ, ಜನಾಂಗ ಮತ್ತು ಭಾಷೆಯ ಆಧಾರದ ಮೇಲೆ ವೈರತ್ವ ಅಥವಾ ಕೆಟ್ಟ ಭಾವನೆ ಮೂಡಿಸಿದ ಕಾರಣಕ್ಕೆ ಭಾರತೀಯ ದಂಡ ಸಂಹಿತೆ ಕಲಂ 153(ಎ) ಅನ್ವಯ ಪ್ರಕರಣ ದಾಖಲು ಮಾಡಲಾಯಿತು. ಎಂಐಎಂನ ಶಾಸಕ ಅಕ್ಬರ್ದುದೀನ್ ಒಯಸಿ ಅವರು ನೀಡಿದ ದೂರಿನ ಆಧಾರದ ಮೇಲೆ ನಸ್ರೀನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು.

2007: ಈದಿನ ಬೆಳಗಿನ ಜಾವ ಜಮ್ಮು ನಗರದ ಮಧ್ಯ ಭಾಗದಲ್ಲಿ ಭದ್ರತಾ ಸಿಬ್ಬಂದಿ ನಡೆಸಿದ ದಾಳಿಯಲ್ಲಿ 2005ರ ಅಯೋಧ್ಯೆ ದಾಳಿಯ ಸೂತ್ರಧಾರ ಹಾಗೂ ಜೈಷ್ ಎ ಮೊಹಮ್ಮದ್ ಸಂಘಟನೆಗೆ ಸೇರಿದ ಉಗ್ರಗಾಮಿ ಹತನಾದ. ಆತನ ಐವರು ಸಹಚರರನ್ನು ಸೆರೆ ಹಿಡಿಯಲಾಯಿತು. ನಗರದ ಜಾನಿಪುರ ಪ್ರದೇಶದ ಮೇಲೆ ದೆಹಲಿ ಮತ್ತು ಜಮ್ಮು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಜೈಷ್ ಎ ಮೊಹಮ್ಮದ್ ನ ವಿಭಾಗೀಯ ಕಮಾಂಡರ್ ಸೈಫುಲ್ಲಾ ಕರಿ ಹತನಾದ ಎಂದು ಜಮ್ಮು ವಿಭಾಗದ ಐಜಿಪಿ ಎಸ್.ಪಿ. ವೈದ್ ಪ್ರಕಟಿಸಿದರು.

2007: ಕಾಶ್ಮೀರದ ಅನಂತನಾಗ್ ಜಿಲ್ಲೆ ಖಂದ್ರೂದಲ್ಲಿರುವ ಸೇನೆಯ ಶಸ್ತ್ರಾಸ್ತ್ರ ಡಿಪೋದಲ್ಲಿ ಸಂಭವಿಸಿದ ಬೆಂಕಿ ದುರಂತದದಲ್ಲಿ ಮೂವರು ಮೃತರಾಗಿ, ಸೇನೆ ಹಾಗೂ ಅಗ್ನಿ ಶಾಮಕ ದಳದ ಯೋಧರು ಸೇರಿದಂತೆ 50 ಜನರು ಗಾಯಗೊಂಡರು. 21ನೇ ಸಂಖ್ಯೆಯ ಶಸ್ತ್ರಾಸ್ತ್ರ ಡಿಪೋದಲ್ಲಿ ಬೆಳಗ್ಗೆ 9. 15ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ಅದರ ಬೆನ್ನಲ್ಲಿಯೇ ಸರಣಿ ಸ್ಫೋಟಗಳು ಸಂಭವಿಸಿದವು.

2007: ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನದ ಹಿಪ್ಪೊಪೊಟಮಸ್ (ನೀರು ಕುದುರೆ ) ವಿದ್ಯಾ ಮುದ್ದಾದ ಮರಿಯೊಂದಕ್ಕೆ ಜನ್ಮ ನೀಡಿತು. ಹದಿನೈದು ವರ್ಷ ವಯಸ್ಸಿನ ಕಾರ್ತಿಕ್ ಎಂಬ ಹಿಪ್ಪೊ ಹಾಗೂ ಆರು ವರ್ಷದ ಹಿಪ್ಪೊ ವಿದ್ಯಾಳ ದಾಂಪತ್ಯದಿಂದ ಜನಿಸಿದ ಈ ಮರಿ ಆಕರ್ಷಕವಾಗಿದ್ದು ಆರೋಗ್ಯವಾಗಿದೆ. ಇದು ವಿದ್ಯಾಳಿಗೆ ಜನಿಸಿದ ಮೊದಲನೆ ಮರಿ. ನೂತನ ಅತಿಥಿಯ ಆಗಮನದಿಂದ ಬನ್ನೇರುಘಟ್ಟ ಜೈವಿಕ ಉದ್ಯಾನದ ಹಿಪ್ಪೊಪೊಟಮಸ್ ಕುಟುಂಬದ ಸದಸ್ಯರ ಸಂಖ್ಯೆ ಏಳಕ್ಕೇರಿತು.

2006: ಡಾ. ರಾಜಕುಮಾರ್ ಅವರು ಜೀವನಧಾರೆ ಚಿತ್ರಕ್ಕಾಗಿ ಕಟ್ಟ ಕಡೆಯದಾಗಿ ಹಾಡಿದ್ದ ಧ್ವನಿ ಸುರುಳಿಯನ್ನು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ರಾಜ್ ಪುತ್ರ ರಾಘವೇಂದ್ರ ರಾಜಕುಮಾರ್ ಬಿಡುಗಡೆ ಮಾಡಿದರು. ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಧರ್ಮಸಿಂಗ್ ಮುಖ್ಯ ಅತಿಥಿಯಾಗಿದ್ದರು.

2006: ಶಿವಮೊಗ್ಗದಲ್ಲಿ ನಡೆಯುವ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಆಯ್ಕೆಯಾದರು. ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯ ನಿಸಾರ್ ಅವರನ್ನು ಸಮ್ಮೇಳನಾಧ್ಯಕ್ಷತೆಗೆ ಆಯ್ಕೆ ಮಾಡಿತು.

2006: ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಲೋಕಸಭೆಯಲ್ಲಿ ಮಂಡಿಸಲಾದ ಹಕ್ಕುಚ್ಯುತಿ ನೋಟಿಸನ್ನು ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ತಿರಸ್ಕರಿಸಿದರು.

2006: ಚೀನಾದ ಜೇಜಿಯಾಂಗ್ ಪಶ್ಚಿಮ ಪ್ರಾಂತ್ಯದ ಕಾಂಗ್ಲಾನ್ ಕೌಂಟಿಯಲ್ಲಿ ಕಳೆದ 50 ವರ್ಷಗಳ ಅವಧಿಯಲ್ಲಿ ಬೀಸಿದ ಪ್ರಚಂಡ ಬಿರುಗಾಳಿಗೆ ಸಿಲುಕಿ ಕನಿಷ್ಠ 98 ಜನ ಮೃತರಾಗಿ, 149 ಜನ ನಾಪತ್ತೆಯಾದರು.

2004: ಖ್ಯಾತ ಬರಹಗಾರ ಶಂಕರ ಮೊಕಾಶಿ ಪುಣೇಕರ ನಿಧನರಾದರು.

2000: ಭಾರತದ ಕೊನೇರು ಹಂಪಿ ಅವರು ಸ್ಮಿತ್ ಮತ್ತು ವಿಲಿಯಮ್ ಸನ್ ಬ್ರಿಟಿಷ್ ಚೆಸ್ ಚಾಂಪಿಯನ್ ಶಿಪ್ ನ ಹನ್ನೊಂದನೆಯ ಹಾಗೂ ಅಂತಿಮ ಸುತ್ತಿನಲ್ಲಿ ಅತ್ಯಂತ ಕಿರಿಯ ಬ್ರಿಟಿಷ್ ಲೇಡೀಸ್ ಚೆಸ್ ಚಾಂಪಿಯನ್ ಆಗಿ ಆಯ್ಕೆಯಾದರು. 10, 12 ಮತ್ತು 14 ವಯೋಮಿತಿಯೊಳಗಿನ ಜಾಗತಿಕ ಪ್ರಶಸ್ತಿಗಳನ್ನು ಗೆದ್ದು ಹ್ಯಾಟ್ರಿಕ್ ಸಾಧಿಸಿದ ಹಾಗೂ ಚೆಸ್ ನಲ್ಲಿ ಜಾಗತಿಕ ಚೆಸ್ ಪ್ರಶಸ್ತಿ ಗೆದ್ದ ಭಾರತದ ಪ್ರಥಮ ಹುಡುಗಿ ಎಂಬ ಹೆಗ್ಗಳಿಕೆಗೂ ಆಕೆ ಪಾತ್ರರಾದರು.

1956: ಅಮೂರ್ತ ಕಲಾವಿದ ಜಾಕ್ಸನ್ ಪೊಲ್ಲೋಕ್ ಅವರು ನ್ಯೂಯಾರ್ಕಿನ ಈಸ್ಟ್ ಹ್ಯಾಂಪ್ಟನ್ನಲ್ಲಿ ಅಪಘಾತ ಒಂದರಲ್ಲಿ ಅಸು ನೀಗಿದರು. ಆಗ ಅವರಿಗೆ 44 ವರ್ಷ ವಯಸ್ಸು.

1954: ಭಾರತದ ಮಾಜಿ ಕ್ರಿಕೆಟ್ ಆಟಗಾರ ಯಶಪಾಲ್ ಶರ್ಮಾ (1954) ಜನ್ಮದಿನ.

1944: ಸಾಹಿತಿ ಗಣಪತಿ ಶಿವರಾಮ ಅವಧಾನಿ (ಜಿ.ಎಸ್. ಅವಧಾನಿ) (11-8-1944ರಿಂದ 20-8-2000) ಅವರು ಶಿವರಾಮ ಅವಧಾನಿ- ಸಾವಿತ್ರಿ ದಂಪತಿಯ ಮಗನಾಗಿ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಮೂಡಗೇರಿಯಲ್ಲಿ ಈದಿನ ಜನಿಸಿದರು.

1932: ಲಾಸ್ ಏಂಜೆಲಿಸ್ ಒಲಿಂಪಿಕ್ಸ್ ನಲ್ಲಿ ನಡೆದ ಹಾಕಿ ಪಂದ್ಯದಲ್ಲಿ ಭಾರತವು ಅಮೆರಿಕವನ್ನು 24-1 ಅಂತರದಿಂದ ಸೋಲಿಸಿತು. ಅಂತಾರಾಷ್ಟ್ರೀಯ ಪಂದ್ಯದಲ್ಲಿ ಗರಿಷ್ಠ ಅಂತರದಲ್ಲಿ ವಿಜಯ ಸಾಧಿಸಿದ ದಾಖಲೆ ಇದು.

1922: ಖ್ಯಾತ ತಾರೆ ಮನಮೋಹನ ಕೃಷ್ಣ ಜನನ.

1919: ಸ್ಕಾಟಿಷ್ ಸಂಜಾತ ಅಮೆರಿಕನ್ ಕೈಗಾರಿಕೋದ್ಯಮಿ ಹಾಗೂ ದಾನಿ ಆಂಡ್ರ್ಯೂ ಕಾರ್ನೆಗೀ ಅವರು ಮೆಸಾಚ್ಯುಸೆಟ್ಸಿನ ಲೆನೋಕ್ಸಿನಲ್ಲಿ 83ನೇ ವಯಸ್ಸಿನಲ್ಲಿ ಮೃತರಾದರು. ಇವರು 35 ಕೋಟಿ ಡಾಲರುಗಳಿಗೂ ಹೆಚ್ಚಿನ ದಾನ ರೂಪದ ನೆರವನ್ನು ಗ್ರೇಟ್ ಬ್ರಿಟನ್ ಮತ್ತು ಅಮೆರಿಕಕ್ಕೆ ನೀಡಿದ್ದರು.

1914: ಸಾಹಿತಿ ವಿ.ಜಿ. ಕೃಷ್ಣಮೂರ್ತಿ ಜನನ.

1911: ಖ್ಯಾತ ಪತ್ರಕರ್ತ ಪ್ರೇಮ್ ಭಾಟಿಯಾ ಜನನ.

1908: ಭಾರತದ ಸ್ವಾತಂತ್ರ್ಯ ಸೇನಾನಿಗಳಲ್ಲಿ ಒಬ್ಬರಾಗಿದ್ದ 19 ವರ್ಷದ ತರುಣ ಖುದೀರಾಮ್ ಬೋಸ್ ಅವರನ್ನು ಬ್ರಿಟಿಷರು ಈದಿನ ಮರಣದಂಡನೆಗೆ ಗುರಿಪಡಿಸಿದರು. ಈ ದಿನವನ್ನು ಭಾರತದಲ್ಲಿ ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತದೆ. ಇನ್ನೊಬ್ಬ ದೇಶಭಕ್ತ ಪ್ರಫುಲ್ಲ ಚಾಕಿ ಅವರೊಡನೆ ಸೇರಿಕೊಂಡು ಖುದೀರಾಮ್ ಬೋಸ್ ಅವರು 1908ರ ಏಪ್ರಿಲ್ 30ರಂದು ನ್ಯಾಯಾಧೀಶ ಕಿಂಗ್ಸ್ ಫೋರ್ಡ್ ಪ್ರಯಾಣಿಸುತ್ತಿದ್ದ ಗಾಡಿಯ ಮೇಲೆ ಬಾಂಬ್ ಹಾಕಿದ್ದರು. ಆದರೆ ಕಿಂಗ್ಸ್ ಫೋರ್ಡ್ ಬದುಕಿ ಉಳಿದು ಇತರ ಇಬ್ಬರು ಐರೋಪ್ಯ ಮಹಿಳೆಯರು ಅಸು ನೀಗಿದ್ದರು. ಗಲ್ಲಿಗೇರುವ ಮುನ್ನ ಉಚ್ಚರಿಸಿದ `ವಂದೇ ಮಾತರಂ' ಘೋಷಣೆಯೇ ಖುದೀರಾಮ್ ಬೋಸ್ ಅವರ ಕೊನೆಯ ವಾಕ್ಯವಾಯಿತು.

1897: ಬ್ರಿಟಿಷ್ ಕಥೆಗಾರ ಎನಿಡ್ ಬ್ಲೈಟನ್ (1897-1968) ಜನ್ಮದಿನ. ಮಕ್ಕಳ ಪುಸ್ತಕಗಳನ್ನು ಬರೆಯುವುದದಲ್ಲಿ ಸಿದ್ದಹಸ್ತರು ಎಂದು ಇವರು ಖ್ಯಾತಿ ಪಡೆದಿದ್ದರು.

No comments:

Advertisement