Monday, August 18, 2008

ಇಂದಿನ ಇತಿಹಾಸ History Today ಆಗಸ್ಟ್ 18

ಇಂದಿನ ಇತಿಹಾಸ

ಆಗಸ್ಟ್ 18

ನಿಧನರಾದ 20 ದಿನಗಳ ನಂತರ ವಿಶ್ವದ ಖ್ಯಾತ ಚಲನಚಿತ್ರ ನಿರ್ದೇಶಕ ಇಂಗ್ಮರ್ ಬರ್ಗ್ ಮನ್ ಅವರ ಅಂತ್ಯಕ್ರಿಯೆ ಈದಿನ ಬಾಲ್ಟಿಕ್ ಸಮುದ್ರದ ಫರೊ ದ್ವೀಪದಲ್ಲಿ ನಡೆಯಿತು.


2007: ನಿಧನರಾದ 20 ದಿನಗಳ ನಂತರ ವಿಶ್ವದ ಖ್ಯಾತ ಚಲನಚಿತ್ರ ನಿರ್ದೇಶಕ ಇಂಗ್ಮರ್ ಬರ್ಗ್ ಮನ್ ಅವರ ಅಂತ್ಯಕ್ರಿಯೆ ಈದಿನ ಬಾಲ್ಟಿಕ್ ಸಮುದ್ರದ ಫರೊ ದ್ವೀಪದಲ್ಲಿ ನಡೆಯಿತು. ಸ್ಪೀಡಿಷ್ ದೇಶದ ಬರ್ಗ್ ಮನ್ ತಮ್ಮ 89ನೇ ಇಳಿ ವಯಸ್ಸಿನಲ್ಲಿ ಫೆರೊ ದ್ವೀಪದಲ್ಲಿರುವ ತಮ್ಮ ಮನೆಯಲ್ಲಿ ಜೂನ್ 30ರಂದು ನಿದ್ದೆಯಲ್ಲಿದ್ದಾಗಲೇ ಸುಖದ ಸಾವನ್ನಪ್ಪಿದ್ದರು.

2007: ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಈದಿನ ಬೆಳಿಗ್ಗೆ 9.35ರಿಂದ ರಾತ್ರಿ 12.30ರವರೆಗೆ ಐದು ಸಾವಿರ ಅರ್ಜಿಗಳನ್ನು ಸ್ವೀಕರಿಸುವ ಮೂಲಕ 15 ತಾಸುಗಳ ಸುದೀರ್ಘ ಜನತಾದರ್ಶನದ ದಾಖಲೆ ನಿರ್ಮಿಸಿದರು.

2007: ಉಡುಪಿ ಅಷ್ಟಮಠಗಳಲ್ಲಿ ಒಂದಾದ ಸೋದೆ ಮಠಾಧೀಶ ವಿಶ್ವೋತ್ತಮ ತೀರ್ಥ ಶ್ರೀಪಾದಂಗಳು (77) ಈದಿನ ಮಧ್ಯಾಹ್ನ 2 ಗಂಟೆಗೆ ಶಿರಸಿಗೆ ಸಮೀಪದ ಸೊಂದಾದಲ್ಲಿನ ವಾದಿರಾಜ ಮಠದಲ್ಲಿ ಹೃದಯಾಘಾತದಿಂದ ನಿಧನರಾದರು. ಉಡುಪಿ ಕೃಷ್ಣ ಮಠದ ನಾಲ್ಕು ಪರ್ಯಾಯಗಳನ್ನು ಪೂರೈಸಿರುವ ಶ್ರೀಗಳು ಮಧ್ಯಾಹ್ನ ಸೋಂದಾ ಮಠದಲ್ಲಿ ಭಕ್ತರೆಲ್ಲರಿಗೂ ಮಂತ್ರಾಕ್ಷತೆ ನೀಡಿದ ನಂತರ ಕುಳಿತಲ್ಲಿಯೇ ಕುಸಿದರು.

2007: ಟರ್ಕಿಯ ಉತ್ತರ ಸೈಪ್ರಸ್ಸಿನಿಂದ ಇಸ್ತಾಂಬುಲ್ ಗೆ ಹೊರಟಿದ್ದ ಟರ್ಕಿ ವಿಮಾನವನ್ನು ಅಪಹರಿಸಿದ್ದ ಪ್ಯಾಲೆಸ್ಟೈನ್ ಹಾಗೂ ಮತ್ತೊಬ್ಬ ಟರ್ಕಿ ದೇಶದ ಇಬ್ಬರು ಅಪಹರಣಕಾರರು ಐದು ಗಂಟೆಗಳ ನಂತರ ಶರಣಾಗುವುದರೊಂದಿಗೆ ಇಡೀ ಪ್ರಕರಣ ಸುಖಾಂತ್ಯ ಕಂಡಿತು. 136 ಮಂದಿ ಪ್ರಯಾಣಿಕರು ಮತ್ತು 6 ಮಂದಿ ಸಿಬ್ಬಂದಿ ಯಾವುದೇ ಗಾಯ ಕೂಡಾ ಇಲ್ಲದೆ ಅಪಾಯದಿಂದ ಪಾರಾದರು.

2007: ಪೂರ್ವ ಚೀನಾದ ಎರಡು ಕಲ್ಲಿದ್ದಲು ಗಣಿಗಳಲ್ಲಿ ಭಾರಿ ಪ್ರವಾಹದಿಂದ ಕನಿಷ್ಠ 181 ಗಣಿ ಕಾರ್ಮಿಕರು ಸಾವು ಬದುಕಿನ ನಡುವೆ ಹೊಯ್ದಾಡಿದ ದುರ್ಘಟನೆ ಸಂಭವಿಸಿತು. ದಕ್ಷಿಣ ಜಿನಾನ್ ಪ್ರಾಂತ್ಯದ ಹ್ಯೂಯನ್ ಗಣಿಯಲ್ಲಿ ಮತ್ತು ಶಾನ್ ಡಾಂಗ್ ಕಲ್ಲಿದ್ದಲು ಗಣಿ ಪ್ರದೇಶದಲ್ಲಿ ಈ ದುರಂತಗಳು ಸಂಭವಿಸಿದವು. ಪೂರ್ವ ಚೀನಾದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ವೆನ್ ನದಿ ಅಪಾಯದ ಮಟ್ಟ ತಲುಪಿ, ಪ್ರವಾಹದ ನೀರು ಕಲ್ಲಿದ್ದಲು ಗಣಿಗೆ ಸಾಗುವ ಕಡಿದಾದ ಸುರಂಗ ಮಾರ್ಗದ ಮೂಲಕ ಹಾದು ಗಣಿಗಳಲ್ಲಿ ಪ್ರವಾಹ ಉಂಟಾಯಿತು. ಅಲ್ಲಿದ್ದ ಕಾರ್ಮಿಕರು ಅಪಾಯಕ್ಕೆ ಸಿಲುಕಿದರು. ಕಾರ್ಮಿಕರ ಪೈಕಿ 584 ಮಂದಿ ದುರ್ಘಟನೆಯಿಂದ ಪಾರಾಗುವಲ್ಲಿ ಯಶಸ್ವಿಯಾದರು.

2006: ಸಂಸತ್ತು ಎರಡನೇ ಬಾರಿಗೆ ಅಂಗೀಕರಿಸಿದ ವಿವಾದಾತ್ಮಕ ಲಾಭದಾಯಕ ಹುದ್ದೆಗೆ ಸಂಬಂಧಿಸಿದ ಸಂಸತ್ (ಅನರ್ಹತೆ ತಡೆ) ತಿದ್ದುಪಡಿ ಮಸೂದೆಗೆ (2006) ತಮ್ಮ ಅಂಕಿತ ಹಾಕುವ ಮೂಲಕ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಸುಮಾರು 15 ದಿನಗಳಿಂದ ಇದ್ದ ಅನುಮಾನಗಳಿಗೆ ತೆರೆ ಎಳೆದರು. ಸಂಸತ್ತು ತಮಗೆ ಎರಡನೇ ಬಾರಿ ಕಳುಹಿಸಿದ ಮಸೂದೆಗೆ `ಯಾವುದು ಲಾಭದಾಯಕ ಹುದ್ದೆ' ಎಂಬುದನ್ನು ವಿವರಿಸಿ ಶಿಫಾರಸು ಮಾಡಲು ಜಂಟಿ ಸಂಸದೀಯ ಸಮಿತಿ ರಚಿಸಲು ಸರ್ಕಾರ ಸಂಸತ್ತಿನಲ್ಲಿ ಕ್ರಮ ಕೈಗೊಂಡ 24 ಗಂಟೆಗಳ ಒಳಗಾಗಿ ರಾಷ್ಟ್ರಪತಿ ಅಂಕಿತ ಹಾಕಿದರು. ರಾಷ್ಟ್ರಪತಿಯವರು ಹಿಂದಕ್ಕೆ ಕಳುಹಿಸಿದ್ದ ಮಸೂದೆಯನ್ನು ಮುಂಗಾರು ಅಧಿವೇಶನದ ಮೊದಲ ವಾರದಲ್ಲೇ ಸಂಸತ್ತು ಯಾವುದೇ ಬದಲಾವಣೆಗಳನ್ನೂ ಮಾಡದೆಯೇ ಎರಡನೇ ಬಾರಿಗೆ ಅಂಗೀಕರಿಸಿ ರಾಷ್ಟ್ರಪತಿಯವರಿಗೆ ಆಗಸ್ಟ್ 1ರಂದು ಕಳುಹಿಸಿತ್ತು. ಶಾಂತಿನಿಕೇತನ ಶ್ರೀನಿಕೇತನ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿರುವ ಲೋಕಸಭಾ ಅಧ್ಯಕ್ಷ ಸೋಮನಾಥ ಚಟರ್ಜಿ, ಉತ್ತರ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿರುವ ಸಮಾಜವಾದಿ ಪಕ್ಷದ ಸಂಸದ ಅಮರ್ ಸಿಂಗ್ ಸೇರಿದಂತೆ ಸುಮಾರು 40 ಮಂದಿ ಸಂಸದರ ವಿರುದ್ಧ ಲಾಭದಾಯಕ ಹುದ್ದೆಗಳನ್ನು ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಸಂಸತ್ತಿನಿಂದ ಅನರ್ಹಗೊಳಿಸಲು ಕೋರಲಾಗಿರುವ ಅರ್ಜಿಗಳು ಇತ್ಯರ್ಥಗೊಳ್ಳಲು ಬಾಕಿ ಉಳಿದಿದ್ದು, ರಾಷ್ಟ್ರಪತಿ ಒಪ್ಪಿಗೆಯೊಂದಿಗೆ ಮಸೂದೆ ಪೂರ್ವಾನ್ವಯವಾಗಿ ಜಾರಿಗೆ ಬರುವುದರಿಂದ ಇವರೆಲ್ಲರ ಮೇಲಿನ ತೂಗು ಕತ್ತಿ ತಪ್ಪಿದಂತಾಯಿತು. ಸಮಾಜವಾದಿ ಪಕ್ಷದ ಸಂಸತ್ ಸದಸ್ಯೆ ಜಯಾ ಬಚ್ಚನ್ ಅವರ ಅನರ್ಹತೆಯಿಂದ ಉದ್ಭವಿಸಿದ ತೀವ್ರ ವಿವಾದದ ಹಿನ್ನೆಲೆಯಲ್ಲಿ ಕಳೆದ ಮೇ ತಿಂಗಳಲ್ಲಿ ಸಂಸತ್ತು ಲಾಭದಾಯಕ ಹುದ್ದೆಗೆೆ ಸಂಬಂಧಿಸಿದ ಮೂಲ ಮಸೂದೆಯನ್ನು ಅಂಗೀಕರಿಸಿ ರಾಷ್ಟ್ರಪತಿಗೆ ಕಳುಹಿಸಿತ್ತು. ಲಾಭದ ಹುದ್ದೆ ಕುರಿತ ವಿವರಣೆಗೆ ಸಮಗ್ರ ಹಾಗೂ ಸಾಮಾನ್ಯ ಮಾನದಂಡದ ಅಗತ್ಯವಿದೆ ಎಂಬ ಸಲಹೆ ನೀಡಿ ರಾಷ್ಟಪತಿಗಳು ಅದನ್ನು ಹಿಂತಿರುಗಿಸಿದ್ದರು.

2006: ಎಂಟನೇ ತರಗತಿಗೆ ಪ್ರವೇಶ ಪಡೆಯುವ ಗ್ರಾಮೀಣ ಪ್ರದೇಶದ ಕಡು ಬಡ ಕುಟುಂಬದ ಬಾಲಕಿಯರಿಗೆ ಉಚಿತ ಸೈಕಲ್ ವಿತರಿಸುವ ಮಹತ್ವದ ಯೋಜನೆಗೆ ಕರ್ನಾಟಕ ಸರ್ಕಾರ ಚಾಲನೆ ನೀಡಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಾಂಕೇತಿಕವಾಗಿ ಮಕ್ಕಳಿಗೆ ಸೈಕಲ್ ವಿತರಿಸಿದರು.

2006: ಸಂಸತ್ ಸದಸ್ಯರ ವೇತನ ಮತ್ತು ಭತ್ಯೆಗಳನ್ನು ಗಮನಾರ್ಹವಾಗಿ ಹೆಚ್ಚಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತು. ಇದರ ಪ್ರಕಾರ ಸಂಸದರ ಮಾಸಿಕ ವೇತನ 12,000 ರೂಪಾಯಿಗಳಿಂದ 16,000 ರೂಪಾಯಿಗಳಿಗೆ ಏರುವುದು. ಸಂಸದರ ವೇತನ, ಭತ್ಯೆಗಳಿಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿಯು ಮೇ 22ರ ವರದಿಯಲ್ಲಿ ವೇತನ, ಭತ್ಯೆ ಹೆಚ್ಚಳಕ್ಕೆ ಶಿಫಾರಸು ಮಾಡಿತ್ತು. ವೇತನ ಭತ್ಯೆ ಹೆಚ್ಚಳದಿಂದ ಸರ್ಕಾರಿ ಬೊಕ್ಕಸಕ್ಕೆ ವಾರ್ಷಿಕ 60 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳುವುದು.

2006: ದೇಶದಲ್ಲಿ ಇದೇ ಮೊದಲ ಬಾರಿಗೆ ಆಹಾರ ಕಲಬೆರಕೆ ಕಾಯ್ದೆ ಅಡಿಯಲ್ಲಿ ಕೋಕಾ ಕೋಲಾ ಕಂಪೆನಿ ವಿರುದ್ಧ ಕರ್ನಾಟಕದಲ್ಲಿ ಪ್ರಕರಣ ದಾಖಲಾಯಿತು. ಕಂಪೆನಿಯ ತಂಪು ಪಾನೀಯಗಳಲ್ಲಿ ಕ್ರಿಮಿನಾಶಕ ಅಂಶ ಮಿತಿ ಮೀರಿರುವುದೇ ಪ್ರಕರಣ ದಾಖಲಿಸಲು ಕಾರಣ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಆರ್. ಅಶೋಕ್ ಪ್ರಕಟಿಸಿದರು.

2006: ಕೇರಳದಲ್ಲಿ ಪೆಪ್ಸಿ ಮತ್ತು ಕೋಕಾ ಕೋಲಾ ಮಾರಾಟ ನಿಷೇಧಿಸಿದ್ದನ್ನು ಪ್ರಶ್ನಿಸಿ ಎರಡೂ ಕಂಪೆನಿಗಳು ಕೇರಳ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದವು.

2006: ಇರಾಕಿನ ಆಹಾರಕ್ಕಾಗಿ ತೈಲ ಹಗರಣದಲ್ಲಿ ಭಾಗಿಯಾದ ಆರೋಪಕ್ಕೆ ಗುರಿಯಾದ ಮಾಜಿ ವಿದೇಶಾಂಗ ಸಚಿವ ನಟವರ್ ಸಿಂಗ್ ಮತ್ತು ಅವರ ಪುತ್ರ ಶಾಸಕ ಜಗತ್ ಸಿಂಗ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸಲಾಯಿತು.

1960: ಸರ್ಲ್ ಡ್ರಗ್ ಕಂಪೆನಿಯು ಇಲ್ಲಿನೋಯಿಸ್ಸಿನ ಸ್ಕೋಬೀಯಲ್ಲಿ `ಎನೋವಿಡ್ 10' ಹೆಸರಿನ ಗರ್ಭನಿರೋಧಕ ಗುಳಿಗೆಗಳನ್ನು ಮೊತ್ತ ಮೊದಲ ಬಾರಿಗೆ ವಾಣಿಜ್ಯ ಪ್ರಮಾಣದಲ್ಲಿ ತಯಾರಿಸಿ ಬಿಡುಗಡೆ ಮಾಡಿತು.

1956: ಸಾಹಿತಿ ಚುಟುಕು ಕವಿ ಡುಂಡಿರಾಜ್ ಜನನ.

1951: ಖರಗಪುರದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಸ್ಥಾಪನೆಗೊಂಡಿತು. ಇದು ಎಲ್ಲ ಐಐಟಿಗಳ ಪೈಕಿ ಮೊಟ್ಟ ಮೊದಲನೆಯದು ಹಾಗೂ ದೊಡ್ಡದು.

1945: ತೈವಾನ್ ಸಮೀಪದ ಮತ್ಸುಯಾಮಾ ವಿಮಾನನಿಲ್ದಾಣದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ನೇತಾಜಿ ಸುಭಾಶ್ ಚಂದ್ರ ಬೋಸ್ ನಿಧನರಾದರು ಎಂಬ ಸುದ್ದಿ ಪ್ರಸಾರಗೊಂಡಿತು. ಆದರೆ ಅವರ ಸಾವಿನ ಸಂದರ್ಭ ಹಾಗೂ ಸಮಯಕ್ಕೆ ಸಂಬಂಧಿಸಿದಂತೆ ಈಗಲೂ ಗೊಂದಲ, ಗುಮಾನಿಗಳು ಉಳಿದುಕೊಂಡಿವೆ. ಒಂದು ಮೂಲ ಈ ಅಪಘಾತ ರಾತ್ರಿ 11.40ಕ್ಕೆ ನಡೆದಿದೆ ಎಂದು ಹೇಳಿದರೆ ಇನ್ನೊಂದು ಮೂಲ ಅಪಘಾತ ಸಂಭವಿಸ್ದಿದು ರಾತ್ರಿ 8 ಗಂಟೆ ಕಳೆದ ತಕ್ಷಣ ಎಂದು ಹೇಳಿದೆ. ಅವರ ಸಾವಿನ ಸುದ್ದಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಭಾರತದಾದ್ಯಂತ ಹಲವರು ಅವರು ಇತ್ತೀಚಿನವರೆಗೂ ಬದುಕಿದ್ದರೆಂದೇ ನಂಬಿದ್ದಾರೆ. ಅವರ ಸಾವಿಗೆ ಸಂಬಂಧಿಸಿದಂತೆ ಸತ್ಯ ತಿಳಿಯಲು ಭಾರತ ಸರ್ಕಾರ ತನಿಖಾ ಆಯೋಗವನ್ನೂ ರಚಿಸಿದೆ.

1933: ಸಾಹಿತಿ ಬಿ.ಎ. ಸನದಿ ಜನನ.

1927: ಖ್ಯಾತ ಕತೆಗಾರ , ಪ್ರಸ್ತುತ ಸಮಸ್ಯೆಗಳ ಬರಹಗಾರ ಶೇಷನಾರಾಯಣ ಅವರು ಬಿ.ವಿ. ಸುಬ್ರಹ್ಮಣ್ಯ- ಕಾವೇರಮ್ಮ ದಂಪತಿಯ ಪುತ್ರನಾಗಿ ಕೊಯಮತ್ತೂರು ಜಿಲ್ಲೆಯ ತಾಳವಾಡಿ ಪಿರ್ಕಾಕ್ಕೆ ಸೇರಿದ ಪಾಳ್ಯದಲ್ಲಿ ಜನಿಸಿದರು. ಓದಿದ್ದು ಕೇವಲ ನಾಲ್ಕನೇ ತರಗತಿಯಾದರೂ ಯಾವ ಪದವೀಧರ ಪ್ರಾಧ್ಯಾಪಕರಿಗೂ ಕಡಿಮೆ ಇಲ್ಲದಷ್ಟು ಕೊಡುಗೆಯನ್ನು ಸಾಹಿತ್ಯಕ್ಕೆ ನೀಡಿರುವ ಶೇಷನಾರಾಯಣ ಅವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ದಕ್ಷಿಣ ಭಾಷಾ ಪುಸ್ತಕ ಸಂಸ್ಥೆ ಬಹುಮಾನ, ತಮಿಳುನಾಡು ಸರ್ಕಾರದಿಂದ ಕುರಳ್ ಪೀಠ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.

1902: ಸಾಹಿತಿ ಆನಂದ ಜನನ.

1900: ವಿಜಯಲಕ್ಷ್ಮಿ ಪಂಡಿತ್ (1900-1990) ಜನ್ಮದಿನ. ಜವಾಹರಲಾಲ್ ನೆಹರೂ ಅವರ ಸಹೋದರಿಯಾದ ವಿಜಯಲಕ್ಷ್ಮಿ 1953ರಲ್ಲಿ ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯ ಚುನಾಯಿತ ಅಧ್ಯಕ್ಷರಾದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದವರು.

1899: ಸಾಹಿತಿ ಬುರ್ಲಿ ಬಿಂದು ಮಾಧವ ಜನನ.

1872: ಭಾರತದ ಖ್ಯಾತ ಶಾಸ್ತ್ರೀಯ ಸಂಗೀತಗಾರ ವಿಷ್ಣು ದಿಗಂಬರ ಪಲುಸ್ಕರ್ (1872-1931) ಜನ್ಮದಿನ.

1227: ಮೊಂಗೋಲನ್ನು ಗೆದ ಚೆಂಗಿಸ್ ಖಾನ್ (1167-1227) ಮೃತನಾದ. ಆತನ ಶವವನ್ನು ಮಂಗೋಲಿಯಾದ ಗುಪ್ತ ಸ್ಥಳವೊಂದರಲ್ಲಿ ಹೂಳಲಾಯಿತು. ಏಕೀಕೃತ ಮೊಂಗೋಲ್ ರಾಷ್ಟ್ರದ ನಿರ್ಮಾತೃ ಎಂದು ಈಗಲೂ ಈತನನ್ನು ಸ್ಮರಿಸಲಾಗುತ್ತದೆ.

No comments:

Advertisement