Tuesday, August 19, 2008

ಇಂದಿನ ಇತಿಹಾಸ History Today ಆಗಸ್ಟ್ 19

ಇಂದಿನ ಇತಿಹಾಸ

ಆಗಸ್ಟ್ 19

ರಷ್ಯದ ಬ್ಯಾಲೆಗೆ ಮರುಜೀವ ನೀಡಿದ ಕಲಾವಿದ ಸೆರ್ಗೆ ಡಯಾಘಿಲೆವ್ ಅವರು ವೆನಿಸ್ಸಿನಲ್ಲಿ ತಮ್ಮ 57ನೇ ವಯಸ್ಸಿನಲ್ಲಿ ಮೃತರಾದರು. `ಬ್ಯಾಲೆ ರೂಸಸ್' ಸ್ಥಾಪಿಸಿದ ಅವರು ಐಗೊರ್ ಸ್ಟ್ರಾವಿನ್ ಸ್ಕಿ ಅವರ `ದಿ ಫೈರ್ ಬ್ರ್ಯಾಂಡ್', `ಪೆಟ್ರುಶ್ಕಾ' ಮತ್ತು `ರೈಟ್ ಆಫ್ ಸ್ಪ್ರಿಂಗ್' ಕೃತಿಗಳನ್ನು ಬ್ಯಾಲೆಗಳನ್ನಾಗಿ ನಿರ್ಮಿಸಿ ಅಪಾರ ಖ್ಯಾತಿ ಪಡೆದರು.

2007: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ರಾಜಗೋಪಾಲ ಎನ್. ಗಿರಿಮಾಜಿ(88) ಅವರು ಶಿವಮೊಗ್ಗ ನಗರದ ತಮ್ಮ ಮನೆಯಲ್ಲಿ ನಿಧನರಾದರು. ಕೋಲಾರ ಜಿಲ್ಲೆಯ ಬಾಗೇಪಲ್ಲಿಯಲ್ಲಿ 1919 ಅಕ್ಟೋಬರ್ 17ರಂದು ಲಕ್ಷ್ಮೀಬಾಯಿ ಮತ್ತು ನರಸಿಂಹಮೂರ್ತಿ ಗಿರಿಮಾಜಿ ದಂಪತಿ ಮಗನಾಗಿ ಜನಿಸಿದ ರಾಜಗೋಪಾಲ 1938ರಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. 1939ರಲ್ಲಿ ಒಂದು ವರ್ಷ, 1942ರ `ಕ್ವಿಟ್ ಇಂಡಿಯಾ ಚಳವಳಿ' ಕಾಲದಲ್ಲಿ 14ತಿಂಗಳು ಮತ್ತು 1947ರಲ್ಲಿ ಒಂದು ತಿಂಗಳು ಜೈಲು ವಾಸ ಅನುಭವಿಸಿದ್ದರು. ಇವರು ಸೆರೆಮನೆಯಲ್ಲಿ ಇದ್ದಾಗಲೇ ಕೆ.ಟಿ. ಭಾಷ್ಯಂ, ವೀರಕೇಸರಿ ಸೀತಾರಾಮಶಾಸ್ತ್ರಿಗಳು, ಎ.ಜಿ. ರಾಮಚಂದ್ರಾರಾಯರು, ಎನ್. ಡಿ. ಶಂಕರ್, ಭೂಪಾಳಂ ಚಂದ್ರಶೇಖರಯ್ಯ, ಎಚ್. ಕೆ. ವೀರಣ್ಣಗೌಡರಂಥ ದೇಶ ಭಕ್ತರ ನಿಕಟ ಸಂಪರ್ಕ ಬೆಳೆಯಿತು.

2007: ಭಾರತ- ಅಮೆರಿಕ ನಾಗರಿಕ ಪರಮಾಣು ಒಪ್ಪಂದ ಅನುಷ್ಠಾನಕ್ಕೆ ಅಗತ್ಯವಿರುವ ಕ್ರಮಗಳನ್ನು ಸ್ಥಗಿತಗೊಳಿಸುವುದು ಸಾಧ್ಯವಿಲ್ಲ ಎಂದು ಸರ್ಕಾರ ಎಡಪಕ್ಷಗಳಿಗೆ ಸ್ಪಷ್ಟವಾಗಿ ತಿಳಿಸಿತು.

2006: ಕನ್ನಡದ ಖ್ಯಾತ ಕವಿ ನಿಸಾರ್ ಅಹಮದ್ ಅವರನ್ನು ರಾಜ್ಯ ಸಕರ್ಾರವು `ದೇವರಾಜ ಅರಸು ಪ್ರಶಸ್ತಿ'ಗೆ ಆಯ್ಕೆ ಮಾಡಿತು.

2006: ಮುಂಬೈ ಸಮುದ್ರ ತೀರದ ಮಾಹಿಮ್ ಕೊಲ್ಲಿ ಪ್ರದೇಶದಲ್ಲಿ ಉಪ್ಪು ನೀರು ಸಿಹಿ ನೀರಾಗಿ ಪರಿವರ್ತನೆಗೊಂಡ ಘಟನೆ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ ಜನ ನೀರು ಕುಡಿಯುವುದರ ಜೊತೆಗೆ ಬಾಟಲಿಗಳಲ್ಲಿ ಸಂಗ್ರಹಿಸಿಕೊಂಡೂ ಹೋದರು. ಮುಂಬೈಯಲ್ಲಿ ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ಎಲ್ಲ ನದಿಗಳೂ ಉಕ್ಕಿ ಹರಿದು ಸಮುದ್ರ ಸೇರಿದ್ದರಿಂದ ಹೀಗಾಗಿರಬಹುದು ಎಂದು ತಜ್ಞರು ಶಂಕಿಸಿದರು. ಗುಜರಾತ್ ಕರಾವಳಿಯಲ್ಲೂ ವಿವಿಧೆಡೆ ಅರಬ್ಬಿ ಸಮುದ್ರದ ನೀರು ಇದೇ ರೀತಿ ಸಿಹಿ ನೀರಾಗಿ ಪರಿವರ್ತನೆಯಾದ ಘಟನೆ ನಡೆಯಿತು.

2006: ಇಸ್ರೇಲ್ ಸೇನೆ ನಸುಕಿನಲ್ಲಿ ಪಶ್ಚಿಮ ದಂಡೆಯ ರಮಲ್ಲಾದಲ್ಲಿ ದಾಳಿ ನಡೆಸಿ ಪ್ಯಾಲೆಸ್ಟೀನ್ ಉಪ ಪ್ರಧಾನಿ ನಾಸಿರ್ ಷಾಯಿರ್ ಅವರನ್ನು ತನ್ನ ವಶಕ್ಕೆ ತೆಗೆದುಕೊಂಡಿತು.

1992: ಭಾರತದ 9ನೇ ಉಪರಾಷ್ಟ್ರಪತಿಯಾಗಿ ನಾರಾಯಣನ್ ಅವರನ್ನು ಆಯ್ಕೆ ಮಾಡಲಾಯಿತು.

1988: ಇರಾನ್ ಮತ್ತು ಇರಾಕ್ ನಡುವಿನ 8 ವರ್ಷದ ಯುದ್ಧಕ್ಕೆ `ಕದನ ವಿರಾಮ' ಆರಂಭ.

1977: ಹಾಸ್ಯನಟ ಜ್ಯೂಲಿಯಸ್ ಹೆನ್ರಿ `ಗ್ರೌಚೊ' ಮಾರ್ಕ್ಸ್ ಅವರು ತಮ್ಮ 86ನೇ ವಯಸ್ಸಿನಲ್ಲಿ ಲಾಸ್ ಏಂಜೆಲಿಸ್ನಗರದಲ್ಲಿ ಮೃತರಾದರು.

1950: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಲೇಖಕಿ ಸುಧಾಮೂರ್ತಿ ಜನನ.

1949: ಭುವನೇಶ್ವರವು ಒರಿಸ್ಸಾ ರಾಜ್ಯದ ರಾಜಧಾನಿಯಾಯಿತು. ಅದಕ್ಕೂ ಮುಂಚೆ ರಾಜಧಾನಿ ಕಟಕ್ ಆಗಿತ್ತು.

1947: ಖ್ಯಾತ ಮರಾಠಿ ನಟ ನಿರ್ದೇಶಕ, ನಿರ್ಮಾಪಕ ದಾಮೋದರ ಕರ್ನಾಟಕಿ (ಮಾಸ್ಟರ್ ವಿನಾಯಕ್) ನಿಧನ.

1936: ಸ್ಪಾನಿಷ್ ಕವಿ ಫೆಡರಿಕೊ ಗಾರ್ಸಿಯಾ ಲೊರ್ಕಾ ಅವರನ್ನು ಜನರಲ್ ಫ್ರಾಂಕೋನ ಅನುಯಾಯಿಗಳು ಗುಂಡಿಟ್ಟು ಕೊಂದರು. ಕೊಲ್ಲುವ ಮೊದಲು ಅವರ ಮೇಲೆ ಒತ್ತಡ ಹೇರಿ ಅವರಿಂದಲೇ ಸ್ವ ಸಮಾಧಿಗೆ ಕುಳಿ ತೋಡಿಸಿದರು.

1929: ರಷ್ಯದ ಬ್ಯಾಲೆಗೆ ಮರುಜೀವ ನೀಡಿದ ಕಲಾವಿದ ಸೆರ್ಗೆ ಡಯಾಘಿಲೆವ್ ಅವರು ವೆನಿಸ್ಸಿನಲ್ಲಿ ತಮ್ಮ 57ನೇ ವಯಸ್ಸಿನಲ್ಲಿ ಮೃತರಾದರು. `ಬ್ಯಾಲೆ ರೂಸಸ್' ಸ್ಥಾಪಿಸಿದ ಅವರು ಐಗೊರ್ ಸ್ಟ್ರಾವಿನ್ ಸ್ಕಿ ಅವರ `ದಿ ಫೈರ್ ಬ್ರ್ಯಾಂಡ್', `ಪೆಟ್ರುಶ್ಕಾ' ಮತ್ತು `ರೈಟ್ ಆಫ್ ಸ್ಪ್ರಿಂಗ್' ಕೃತಿಗಳನ್ನು ಬ್ಯಾಲೆಗಳನ್ನಾಗಿ ನಿರ್ಮಿಸಿ ಅಪಾರ ಖ್ಯಾತಿ ಪಡೆದರು.

1916: ಭಾರತದ ಮಾಜಿ ರಾಷ್ಟ್ರಪತಿ ಶಂಕರ ದಯಾಳ ಶರ್ಮಾ ಜನನ.

1892: ಖ್ಯಾತ ಪ್ರಾಕ್ತನ ತಜ್ಞ ಮೈಸೂರು ಕೃಷ್ಣಯ್ಯಂಗಾರರು (19-8-1892ರಿಂದ 23-12-1947) ರಂಗ ಅಯ್ಯಂಗಾರ್- ಲಕ್ಷ್ಮಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು. ಉತ್ಖನನ ಬಗ್ಗೆ ವಿಶೇಷ ಅನುಭವ ಹೊಂದಿದ್ದ ಅವರು ಪ್ರಾಕ್ತನ ವಿಚಾರಗಳಿಗೆ ಸಂಬಂಧಿಸಿದಂತೆ 25ಕ್ಕೂ ಕೃತಿಗಳು, ಸಂಶೋಧನಾ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ.

1888: ಬೆಲ್ಜಿಯಂನಲ್ಲಿ ಮೊದಲ ಸೌಂದರ್ಯ ಸ್ಪರ್ಧೆ ನಡೆಯಿತು.

1883: ಫ್ರಾನ್ಸಿನ ಖ್ಯಾತ ಉಡುಪು ವಿನ್ಯಾಸಕಿ ಗೇಬ್ರಿಯಲ್ `ಕೊಕೊ' ಚಾನೆಲ್ (1883-1971) ಜನ್ಮದಿನ. ಬೆಲ್ ಬಾಟಮ್ ಟ್ರೌಜರ್ ಗಳು, ಬಾಬ್ ತಲೆಗೂದಲು, ಟರ್ಟಲ್ ನೆಕ್ ಸ್ವೆಟರುಗಳು ಇತ್ಯಾದಿಗಳೆಲ್ಲ ಉಡುಪಿನ ಲೋಕಕ್ಕೆ ಈಕೆ ನೀಡಿದ ಕೊಡುಗೆಗಳು.

1757: ಈಸ್ಟ್ ಇಂಡಿಯಾ ಕಂಪೆನಿಯ ಮೊತ್ತ ಮೊದಲ ರೂಪಾಯಿ ನಾಣ್ಯವನ್ನು ಕಲ್ಕತ್ತದಲ್ಲಿ ಠಂಕಿಸಲಾಯಿತು.

1662: ಮೊತ್ತ ಮೊದಲ ಕ್ಯಾಲ್ ಕ್ಯುಲೇಟರನ್ನು ಸಂಶೋಧಿಸಿ ಸಾಧ್ಯತೆಗಳ ಆಧುನಿಕ ಸಿದ್ಧಾಂತಕ್ಕೆ ಅಡಿಪಾಯ ಹಾಕಿದ ಫ್ರೆಂಚ್ ತತ್ವಜ್ಞಾನಿ ಮತ್ತು ಗಣಿತ ತಜ್ಞ ಬ್ಲೈಸ್ ಪಾಸ್ಕಲ್ ತನ್ನ 39ನೇ ವಯಸ್ಸಿನಲ್ಲಿ ಪ್ಯಾರಿಸ್ಸಿನಲ್ಲಿ ಮೃತನಾದ. ಈತನ ಗೌರವಾರ್ಥ ಒಂದು ಕಂಪ್ಯೂಟರ್ ಭಾಷೆಗೆ `ಪಾಸ್ಕಲ್' ಎಂದು ಹೆಸರಿಡಲಾಗಿದೆ.

No comments:

Advertisement