ಇಂದಿನ ಇತಿಹಾಸ
ಆಗಸ್ಟ್ 20
ಹಿರಿಯ ಸಾಹಿತಿ ಮತ್ತು ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಕಂಬಾರ ಅವರಿಗೆ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಹೆಸರಿನಲ್ಲಿ ರಾಜ್ಯ ಸರ್ಕಾರ ನೀಡುವ ರಾಜ್ಯಮಟ್ಟದ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಈದಿನ ಪ್ರದಾನ ಮಾಡಲಾಯಿತು.
2007: ಬೆಳಗಾವಿ ಹೊರತುಪಡಿಸಿ ರಾಜ್ಯದ 11 ಪ್ರಮುಖ ನಗರಗಳ ಹೆಸರುಗಳ ಬದಲಾವಣೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಶೀಘ್ರದಲ್ಲಿಯೇ ಇದು ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಗುಲ್ಬರ್ಗ ಜಿಲ್ಲೆಯ ಹುಣಸಗಿಯಲ್ಲಿ ಪ್ರಕಟಿಸಿದರು. ಬೆಂಗಳೂರು, ಮೈಸೂರು, ವಿಜಾಪುರ, ಗುಲ್ಬರ್ಗ ಸೇರಿದಂತೆ 11 ನಗರಗಳ ಹೆಸರುಗಳನ್ನು ಸಂಪೂರ್ಣವಾಗಿ ಕನ್ನಡೀಕರಿಸಿ ಮಾಡಿರುವ ಬದಲಾವಣೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.
2007: ಹಿರಿಯ ಸಾಹಿತಿ ಮತ್ತು ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಕಂಬಾರ ಅವರಿಗೆ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಹೆಸರಿನಲ್ಲಿ ರಾಜ್ಯ ಸರ್ಕಾರ ನೀಡುವ ರಾಜ್ಯಮಟ್ಟದ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಈದಿನ ಪ್ರದಾನ ಮಾಡಲಾಯಿತು. ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಂಬಾರರಿಗೆ ನಗದು ಬಹುಮಾನ ಒಂದು ಲಕ್ಷ ರೂ. ಮೌಲ್ಯದ ಡಿ.ಡಿ., ಪ್ರಶಂಸಾ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಇದೇ ಮೊದಲ ಬಾರಿಗೆ ನಾಲ್ಕು ವಿಭಾಗೀಯ ಮಟ್ಟದ ಪ್ರಶಸ್ತಿಗಳನ್ನು ಹಿಂದುಳಿದ ವರ್ಗದವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಶರಣಪ್ಪ ತಳವಾರ (ಗುಲ್ಬರ್ಗ), ಬಿ.ವಿ.ರಾಮಚಂದ್ರ (ಬೆಂಗಳೂರು), ಡಿ.ಕರಿಯಪ್ಪಗೌಡ (ಮೈಸೂರು), ಶರಣಗೌಡ ಶಿ.ಪಾಟೀಲ (ಬೆಳಗಾವಿ) ಅವರಿಗೆ ತಲಾ ಐವತ್ತು ಸಾವಿರ ಮೌಲ್ಯದ ಡಿ.ಡಿ., ಪ್ರಶಂಸಾ ಪತ್ರ ಹಾಗೂ ನೆನಪಿನ ಕಾಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು.
2007: ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಡಾ ನ್ಯಾಯಾಲಯದಿಂದ ಆರು ವರ್ಷ ಕಠಿಣ ಕಾರಾಗೃಹ ಶಿಕ್ಷೆಕ್ಕೆ ಒಳಗಾಗಿರುವ ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿತು. ಮುಂಬೈ ಸ್ಫೋಟ ಪ್ರಕರಣದಲ್ಲಿ ಭಾಗಿಯಾದವರಿಂದ ಅಕ್ರಮವಾಗಿ ಬಂದೂಕು ಪಡೆದದ್ದಕ್ಕಾಗಿ ಸಂಜಯ್ ದತ್ ಅವರಿಗೆ ಟಾಡಾ ನ್ಯಾಯಾಲಯ ಆರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಆಗಸ್ಟ್ 2ರಿಂದ ಸಂಜಯ್ ದತ್ ಅವರನ್ನು ಯರವಾಡ ಜೈಲಿನಲ್ಲಿ ಇಡಲಾಗಿತ್ತು.
2007: ಆಹಾರ ಕಲಬೆರಕೆ ನಿಯಂತ್ರಣ ಕಾಯ್ದೆ ಅಡಿ ತಂಬಾಕು ಹಾಗೂ ನಿಕೋಟಿನ್ ಇತ್ಯಾದಿಗಳನ್ನು ಸೇರಿಸಿ ಈ ಕಾಯ್ದೆಗೆ ಮಾಡಲಾದ ತಿದ್ದುಪಡಿಯನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಲಾಯಿತು. ಇವೆರಡು ಪದಾರ್ಥಗಳನ್ನು 1955ರ ಈ ಕಾಯ್ದೆಯ 44 (ಜೆ) ಕಲಮಿನ ಅಡಿ ಸೇರಿಸಿ, ಆಗಸ್ಟ್ 20ರಿಂದ ಜಾರಿಗೆ ಬರುವಂತೆ ಕಳೆದ ಜುಲೈ 31ರಂದು ಹೊರಡಿಸಲಾದ ಅಧಿಸೂಚನೆಯನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ತೋಟಗಾರ ಸಹಕಾರ ಮಾರಾಟ ಸಂಘ, ಕ್ಯಾಂಪ್ಕೊ, ಪುತ್ತೂರಿನ ಭಾರತೀಯ ಕಿಸಾನ್ ಸಂಘ ಸೇರಿದಂತೆ ಅನೇಕ ಸಂಘಗಳು ಪ್ರಶ್ನಿಸಿದವು. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೆ ಮಾಡಲು ನ್ಯಾಯಮೂರ್ತಿ ಅಜಿತ್ ಗುಂಜಾಳ್ ಆದೇಶ ನೀಡಿದರು. ತಂಬಾಕು ಹಾಗೂ ನಿಕೋಟಿನ್ ಗಳು ತಂಬಾಕು ಕಾಯ್ದೆ ವ್ಯಾಪ್ತಿಗೆ ಒಳಪಡುತ್ತದೆಯೇ ವಿನಾ ಆಹಾರ ಕಲಬೆರಕೆ ನಿಯಂತ್ರಣ ಕಾಯ್ದೆ ಅಡಿ ಅ್ಲಲ ಎಂಬುದು ಅರ್ಜಿದಾರರ ವಾದ. ಈ ತಿದ್ದುಪಡಿಯಿಂದ ಲಕ್ಷಾಂತರ ರೈತಾಪಿ ವರ್ಗದವರಿಗೆ, ತಂಬಾಕು ಬೆಳೆಗಾರರಿಗೆ ಸಮಸ್ಯೆ ಉಂಟಾಗಿದೆ. ಅವರ ಜೀವನ ಬೀದಿ ಪಾಲಾಗುವ ಸಾಧ್ಯತೆಗಳಿವೆ. ಈ ಸಂವಿಧಾನಬಾಹಿರ ತಿದ್ದುಪಡಿ ರದ್ದಿಗೆ ಆದೇಶ ನೀಡಬೇಕು ಎಂದು ಅರ್ಜಿದಾರರ ಪರವಾಗಿ ವಕೀಲ ಕೆ.ಎಂ.ನಟರಾಜ್ ಮನವಿ ಮಾಡಿದರು.
2007: ದಕ್ಷಿಣ ಜಪಾನಿನ ಒಕಿನವಾ ದ್ವೀಪದ ನಹಾ ವಿಮಾನ ನಿಲ್ದಾಣದಲ್ಲಿ ಚೀನಾ ಏರ್ ಲೈನ್ಸ್ ಪ್ರಯಾಣಿಕರ ವಿಮಾನ ಆಕಸ್ಮಿಕ ಬೆಂಕಿಗೆ ಆಹುತಿಯಾದರೂ ಅದರಲ್ಲಿದ್ದ ಎಲ್ಲ 157 ಪ್ರಯಾಣಿಕರು ಸುರಕ್ಷಿತವಾಗಿ ಪಾರಾದರು. ತೈವಾನಿನ ತೈಪೆಯಿಂದ ಹೊರಟಿದ್ದ ಚೀನಾ ಏರ್ ಲೈನ್ಸಿನ ಬೋಯಿಂಗ್ ವಿಮಾನ, ನಹಾ ವಿಮಾನನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿದ ಕೆಲವೇ ನಿಮಿಷಗಳಲ್ಲಿ ಬೆಂಕಿಯಲ್ಲಿ ಭಸ್ಮವಾಯಿತು. ಪ್ರಯಾಣಿಕರು ವಿಮಾನದಿಂದ ಇಳಿಯುತ್ತಿರುವಾಗಲೇ ಸ್ಫೋಟದ ಸದ್ದು ಕೇಳಿಸಿ, ಎತ್ತರದ ಜ್ವಾಲೆಗಳು ವಿಮಾನವನ್ನು ಆವರಿಸಿದವು. ಘಟನೆಯಲ್ಲಿ ಇಬ್ಬರು ಸಿಬ್ಬಂದಿ ಗಾಯಗೊಂಡರು.
2007: ಮೈಂಜಿನಲ್ಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತದ ವಿಶ್ವನಾಥನ್ ಆನಂದ್ ಅರ್ಮೇನಿಯಾದ ಲೆವೊಕ್ ಅರೊನಿಯನ್ ವಿರುದ್ಧ ಸೇಡು ತೀರಿಸಿಕೊಂಡು, 10ನೇ ಸಲ ಗ್ರೆಂಕ್ ಲೀಸಿಂಗ್ ರ್ಯಾಪಿಡ್ ಚೆಸ್ ಚಾಂಪಿಯನ್ ಆದರು. ಅರೊನಿಯನ್ ವಿರುದ್ಧ ನಡೆದ ಅಂತಿಮ ಹಣಾಹಣಿಯಲ್ಲಿ 2.5-1.5 ಪಾಯಿಂಟಿನಿಂದ ಆನಂದ್ ವಿಜಯಿಯಾದರು. ಈ ಟೂರ್ನಿಯಲ್ಲಿ ಆನಂದ್ ಆಡಲು ಪ್ರಾರಂಭಿಸಿದಾಗಿನಿಂದ ಸತತವಾಗಿ ಚಾಂಪಿಯನ್ ಆಗುತ್ತಲೇ ಬಂದದ್ದು ವಿಶೇಷ.
2007: ಸಾನಿಯಾ ಮಿರ್ಜಾ ಅವರು ಈದಿನ ಡಬ್ಲ್ಯುಟಿಎ ಬಿಡುಗಡೆ ಮಾಡಿದ ರ್ಯಾಂಕಿಂಗ್ ಪಟ್ಟಿಯಲ್ಲಿ 28ನೇ ಸ್ಥಾನಕ್ಕೇದರು.
2007: ನೂತನವಾಗಿ ರಚಿಸಿರುವ ರಾಮನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಮೂಲ ಸೌಕರ್ಯಗಳ ಕಾಮಗಾರಿಯ ಶಂಕುಸ್ಥಾಪನೆಯನ್ನು ಆಗಸ್ಟ್ 23ರಂದು ನೆರವೇರಿಸಲು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿತು.
2007: ಕರ್ನಾಟಕದಲ್ಲಿ ಕೈಗೆತ್ತಿಕೊಳ್ಳುವ ಅಸಂಪ್ರದಾಯಿಕ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಕೇಂದ್ರ ಸರ್ಕಾರಿ ಸ್ವಾಮ್ಯದ ವಿದ್ಯುತ್ ಹಣಕಾಸು ನಿಗಮವು ಇನ್ನು ಮುಂದೆ ಆರ್ಥಿಕ ನೆರವು ನೀಡುವ ಒಪ್ಪಂದವೊಂದಕ್ಕೆ ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ (ಕ್ರೆಡೆಲ್) ಮತ್ತು ವಿದ್ಯುತ್ ಹಣಕಾಸು ನಿಗಮ ಸಹಿ ಹಾಕಿದವು. ಒಪ್ಪಂದದ ಪ್ರಕಾರ, ಕ್ರೆಡೆಲ್ ಶಿಫಾರಸು ಮಾಡುವ ಎಲ್ಲ ಯೋಜನೆಗಳಿಗೂ ವಿದ್ಯುತ್ ಹಣಕಾಸು ನಿಗಮ, ಆರ್ಥಿಕ ನೆರವು ನೀಡಲಿದೆ. ಒಂದು ಅಂದಾಜಿನ ಪ್ರಕಾರ ನವೀಕರಿಸಬಹುದಾದ ಇಂಧನ ಮೂಲಗಳಿಂದಲೇ ರಾಜ್ಯದಲ್ಲಿ ಸುಮಾರು 11,150 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಅವಕಾಶ ಇದೆ. ಅಸಂಪ್ರದಾಯಿಕ ನವೀಕರಿಸಬಹುದಾದ ಇಂಧನ ಮೂಲಗಳಿಂದ ಪ್ರಸ್ತುತ 1,630 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇದೇ ಅಲ್ಲದೆ, 11ನೇ ಪಂಚವಾರ್ಷಿಕ ಯೋಜನೆ ಅಂತ್ಯಗೊಳ್ಳುವ ವೇಳೆಗೆ ಕ್ರೆಡೆಲ್ ಸುಮಾರು 1500 ಮೆಗಾವಾಟ್ ವಿದ್ಯುತ್ ಉತ್ಪಾದಿಸಲು ಯೋಜನೆ ಕೂಡ ಸಿದ್ಧಪಡಿಸಿದೆ.
2007: ಬೆಂಗಳೂರು ರಾಜಭವನ ಸಮೀಪದ ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನವನದಲ್ಲಿ ನಿರ್ಮಿಸಲಾದ ಇಂಧನ ವನಕ್ಕೆ ಸಚಿವ ರಾಮಚಂದ್ರಗೌಡ ಚಾಲನೆ ನೀಡಿದರು. ಅಸಂಪ್ರದಾಯಿಕ ಇಂಧನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂಧನ ವನ ನಿರ್ಮಾಣ ಮಾಡಲಾಗಿದೆ ಎಂದು ಕ್ರೆಡೆಲ್ ವ್ಯವಸ್ಥಾಪಕ ನಿರ್ದೇಶಕ ಶಿವಲಿಂಗಯ್ಯ ವಿವರಣೆ ನೀಡಿದರು. ಇಂಧನ ವನ ಸುಮಾರು ಎಂಟು ಎಕರೆ ಜಾಗದಲ್ಲಿದೆ. ಸೌರಶಕ್ತಿಯ ಗುಡಿಸಲು; ಸೌರಶಕ್ತಿಯ ಈಜುಕೊಳ; ಸೌರಶಕ್ತಿಯ ನೀರೆತ್ತುವ ಯಂತ್ರ; ಬ್ಯಾಟರಿ ಮೂಲಕ ಚಾಲನೆಗೊಳ್ಳುವ ಕಾರು ಮತ್ತು ಸೈಕಲ್ ಸೇರಿದಂತೆ ಇತರ ನವೀಕರಿಸಬಹುದಾದ ಇಂಧನ ಉಪಕರಣಗಳನ್ನು ಉದ್ಯಾನವನದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
2006: ಬೆಂಗಳೂರಿನ ವಿಧಾನ ಸೌಧದ ಆವರಣದಲ್ಲಿ ಸ್ಥಾಪಿಸಲಾದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರು ನೂತನ ಪ್ರತಿಮೆಯನ್ನು ಅವರ 91ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅನಾವರಣಗೊಳಿಸಿದರು. 14 ಅಡಿ ಎತ್ತರ, 1740 ಕಿ.ಗ್ರಾಂ. ತೂಕದ ಕಂಚಿನ ಪ್ರತಿಮೆಯನ್ನು ಮುಂಬೈಯ ವಿನಯ್ ವಾಘ್ ನಿರ್ಮಿಸಿದ್ದಾರೆ. 1993ರಲ್ಲಿ ದೇವರಾಜ ಅರಸು ಅವರ 8.5 ಅಡಿ ಎತ್ತರದ ಕಂಚಿನ ಪ್ರತಿಮೆ ಇರಿಸಲಾಗಿದ್ದ ಜಾಗದಲ್ಲೇ ಈ ನೂತನ ಪ್ರತಿಮೆಯನ್ನು ಸ್ಥಾಪಿಸಲಾಯಿತು. ಹಿಂದಿನ ಪ್ರತಿಮೆ ದಿವಂಗತ ನಾಯಕನಿಗೆ ಪೂರ್ಣ ಪ್ರಮಾಣದ ನ್ಯಾಯ ಒದಗಿಸಿಲ್ಲ ಎಂಬುದಾಗಿ ಸಾರ್ವಜನಿಕರು ಮತ್ತು ಕುಟುಂಬ ಸದಸ್ಯರು ಆಕ್ಷೇಪಿಸುತ್ತಿದ್ದ ಹಿನ್ನೆಲೆಯಲ್ಲಿ ನೂತನ ಪ್ರತಿಮೆ ಸ್ಥಾಪಿಸಲು 1999ರಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿತು. ಈ ಕೆಲಸಕ್ಕೆ 2003ರಲ್ಲಿ ಸರ್ಕಾರ ಆದೇಶ ಹೊರಡಿಸಿತು. 2005ರ ಜುಲೈ ವೇಳೆಗೆ ಪ್ರತಿಮೆ ಸಿದ್ಧವಾಗಬೇಕಿತ್ತು. ಆದರೆ ಮುಂಬೈಯಲ್ಲಿ ಸುರಿದ ಮಹಾಮಳೆಯಿಂದ ಈ ಕಾರ್ಯ ವಿಳಂಬಗೊಂಡಿತು.
2006: ಪುತ್ತೂರು ನರಸಿಂಹನಾಯಕ್, ಎ.ಆರ್. ಪುಟ್ಟಾಚಾರ್, ಶ್ರೀಲತಾ, ಬಿ.ಡಿ. ಲಕ್ಷ್ಮಣ್, ಮುದ್ದು ಮೋಹನ್, ಸುಬ್ರಹ್ಮಣ್ಯ ಭಟ್ ಸೇರಿದಂತೆ 16 ಮಂದಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಪ್ರಸಕ್ತ ಸಾಲಿನ ಸಂಗೀತ ನೃತ್ಯ ಪ್ರಶಸ್ತಿಗಳನ್ನು ಪ್ರಕಟಿಸಿತು.
2006: ಕರ್ನಾಟಕದ ಮಾಜಿ ರಾಜ್ಯಪಾಲ ಮತ್ತು ಕೇಂದ್ರದ ಮಾಜಿ ಸಚಿವ ಭಾನು ಪ್ರತಾಪ್ ಸಿಂಗ್ (89) ಲಖನೌದ ತ್ರಿವೇಣಿ ನಗರದ ತಮ್ಮ ನಿವಾಸದಲ್ಲಿ ನಿಧನರಾದರು. ಅವರು 1990ರ ಮೇ 8ರಿಂದ 1991ರ ಜನವರಿ 6ರವರೆಗೆ ಕರ್ನಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. 1917ರ ಆಗಸ್ಟ್ 10ರಂದು ಉತ್ತರ ಪ್ರದೇಶದ ಬುಲಂದಶಹರಿನಲ್ಲಿ ಜನಿಸ್ದಿದ ಸಿಂಗ್ ತುರ್ತು ಪರಿಸ್ಥಿತಿ ಅವಧಿಯಲ್ಲಿ ಜೈಲುವಾಸ ಅನುಭವಿಸಿದ್ದರು. ಕೆಲಕಾಲ ಭಾರತೀಯ ಕ್ರಾಂತಿದಳದ ಪ್ರಧಾನ ಕಾರ್ಯದರ್ಶಿಯಾಗಿದ್ದರು.
1991: ರಾಜೀವ್ ಗಾಂಧಿ ಕೊಲೆ ಪ್ರಕರಣದ ಮುಖ್ಯ ಆರೋಪಿ ಶಿವರಸನ್ ಮತ್ತು ಆತನ ಸಹಚರರು ಬೆಂಗಳೂರಿನ ಕೋಣನಕುಂಟೆಯಲ್ಲಿ ಕಮಾಂಡೋಗಳ ಮುತ್ತಿಗೆಯಿಂದ ತಪ್ಪಿಸಿಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಂಡರು. (ಇದು ರಾಜೀವಗಾಂಧಿ ಜನ್ಮದಿನವೂ ಆಗಿರುವುದು ಕಾಕತಾಳೀಯ.)
1985: ಅಕಾಲಿ ನಾಯಕ ಹರಚರಣ್ ಸಿಂಗ್ ಲೋಂಗೊವಾಲ್ ಅವರು ಪಂಜಾಬಿನ ಶೇರ್ ಪುರದಲ್ಲಿ ಧಾರ್ಮಿಕ ಸಮಾರಂಭವೊಂದರಲ್ಲಿ ಮಾತನಾಡುತ್ತ್ದಿದಾಗ ಹಂತಕಿಗಳ ಗುಂಡಿಗೆ ಬಲಿಯಾಗಿ ಅಸುನೀಗಿದರು.
1977: ಗುರುಗ್ರಹ ಮತ್ತು ಮಂಗಳ ಗ್ರಹಗಳತ್ತ ವಾಯೇಜರ್ 1 ಬಾಹ್ಯಾಕಾಶ ನೌಕೆಯನ್ನು ಹಾರಿ ಬಿಡಲಾಯಿತು. ಸೌರವ್ಯೂಹದಿಂದ ಹೊರಹೋದ ಮೊತ್ತ ಮೊದಲ ಮಾನವ ನಿರ್ಮಿತ ವಸ್ತು ಇದು.
1975: ಮಂಗಳ ಗ್ರಹದ ಬಗ್ಗೆ ಹೆಚ್ಚಿನ ಸಂಶೋಧನೆಗಳನ್ನು ನಡೆಸುವ ಸಲುವಾಗಿ ವೈಕಿಂಗ್ 1 ಬಾಹ್ಯಾಕಾಶ ನೌಕೆಯನ್ನು ಆ ಗ್ರಹದತ್ತ ಹಾರಿ ಬಿಡಲಾಯಿತು.
1964: ಸಾಹಿತಿ ಜಿ. ನಾರಾಯಣ ಸ್ವಾಮಿ ಜನನ.
1960: ರಷ್ಯದಿಂದ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದ್ದ ಎರಡು ನಾಯಿಗಳು ಸುರಕ್ಷಿತವಾಗಿ ವಾಪಸಾದವು.
1949: ಸಾಹಿತಿ ಚಂದ್ರಕಾಂತ ಪೊಕಳೆ ಜನನ.
1946: ಇನ್ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್ ನ ಅಧ್ಯಕ್ಷ ನಾಗವಾರ ರಾಮರಾವ್ ನಾರಾಯಣಮೂರ್ತಿ ಜನ್ಮದಿನ. ಅಮೆರಿಕದ ಸ್ಟಾಕ್ ಎಕ್ಸ್ಚೇಂಜಿನಲ್ಲಿ ದಾಖಲಾದ ಮೊತ್ತ ಮೊದಲ ಭಾರತೀಯ ಕಂಪೆನಿ ಈ ಇನ್ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್.
1944: ಭಾರತದ ಮಾಜಿ ಪ್ರಧಾನಿ ರಾಜೀವಗಾಂಧಿ (1944-1991) ಜನ್ಮದಿನ.
1942: ಖ್ಯಾತ ಕಾದಂಬರಿಗಾರ್ತಿ `ಸಾಯಿಸುತೆ' ಕಾವ್ಯನಾಮದ ರತ್ನ ಅವರು ವೆಂಕಟಪ್ಪ- ಲಕ್ಷ್ಮಮ್ಮ ದಂಪತಿಯ ಮಗಳಾಗಿ ಕೋಲಾರದಲ್ಲಿ ಜನಿಸಿದರು. ಇವರ ಮೊದಲ ಕಾದಂಬರಿ `ಮಿಂಚು'. ನಂತರ 26 ಕಾದಂಬರಿಗಳು ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾದವು. ಅವರ 134 ಕಾದಂಬರಿಗಳ ಪೈಕಿ 12 ಕಾದಂಬರಿಗಳು ಚಲನಚಿತ್ರಗಳಾದವು. ಬಾಡದ ಹೂ, ಮಿಡಿದ ಶ್ರುತಿ ಚಲನಚಿತ್ರಗಳಾಗಿ ಶ್ರೇಷ್ಠ ಚಲನಚಿತ್ರ ರಾಜ್ಯ ಪ್ರಶಸ್ತಿ ಗಳಿಸಿದರೆ, ಶ್ವೇತ ಗುಲಾಬಿ, ಪರಭಾಷೆಯಲ್ಲೂ ಚಲನಚಿತ್ರವಾಗಿ ಪ್ರಸಿದ್ಧಿ ಗಳಿಸಿತು.
1940: ಸಾಹಿತಿ ಕೊರಗಲ್ ವಿರೂಪಾಕ್ಷಪ್ಪ ಜನನ.
1932: ಲೇಖಕಿ ವಿದ್ಯಾ ಡಿ. ಮೂರ್ತಿ ಜನನ.
1915: ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಜನ್ಮದಿನ.
1897: ಇದು `ಸೊಳ್ಳೆ ದಿನ' ! ಸರ್ ರೊನಾಲ್ಡ್ ರೋಸ್ ಅವರು ಭಾರತದ ಸಿಕಂದರಾಬಾದ್ನ ಹಳೆ ಬೇಗಮ್ ಪೇಟೆ ಆಸ್ಪತ್ರೆಯಲ್ಲಿ ಮಲೇರಿಯಾ ಹರಡಲು ಕಾರಣವಾದದ್ದು `ಅನಾಫಿಲಿಸ್' ಸೊಳ್ಳೆ ಎಂದು ಕಂಡು ಹಿಡಿದರು. ನಂತರ ಈ ದಿನವನ್ನು ಅವರು `ಸೊಳ್ಳೆ ದಿನ' ಎಂದೇ ಉಲ್ಲೇಖಿಸಿದರು.
1885: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಸಭೆ.
1828: ರಾಜಾರಾಮ್ ಮೋಹನರಾಯ್ ಅವರು ಕಲ್ಕತದಲ್ಲಿ (ಈಗಿನ ಕೋಲ್ಕತ್ತಾ) ಬ್ರಹ್ಮಸಮಾಜದ ಮೊದಲ ಅಧಿವೇಶನವನ್ನು ಏರ್ಪಡಿಸಿದರು.
1666: ಆಗ್ರಾದಲ್ಲಿ ಔರಂಗಜೇಬನಿಂದ ಬಂಧನಕ್ಕೆ ಒಳಗಾಗಿದ್ದ ಶಿವಾಜಿ ಮತ್ತು ಪುತ್ರ ಸಂಭಾಜಿ ಅವರು ಮಿಠಾಯಿಗಳ ಬುಟ್ಟಿಯೊಳಗೆ ಕುಳಿತುಕೊಂಡು ಅಲ್ಲಿಂದ ಪಾರಾಗಿ ತಪ್ಪಿಸಿಕೊಂಡರು.
No comments:
Post a Comment