My Blog List

Friday, August 22, 2008

ಇಂದಿನ ಇತಿಹಾಸ History Today ಆಗಸ್ಟ್ 22

ಇಂದಿನ ಇತಿಹಾಸ

ಆಗಸ್ಟ್ 22

ಮೇಡಂ ಭಿಕಾಜಿ ಕಾಮಾ ಅವರು ತಾವೇ ವಿನ್ಯಾಸಗೊಳಿಸಿದ ಭಾರತೀಯ ರಾಷ್ಟ್ರೀಯ ಧ್ವಜವನ್ನು ಜರ್ಮನಿಯ ಸ್ಟುಟ್ ಗರ್ಟಿನಲ್ಲಿ ನಡೆದ ಸೋಷಿಯಲಿಸ್ಟ್ ಕಾಂಗ್ರೆಸ್ಸಿನಲ್ಲಿ ಪ್ರದರ್ಶಿಸಿದರು.

2007: ಆಗಸ್ಟ್ 8ರಂದು ಬಾಹ್ಯಾಕಾಶಕ್ಕೆ ತೆರಳಿದ್ದ ನಾಸಾದ `ಎಂಡೆವರ್' ಗಗನನೌಕೆ ವೇಳಾಪಟ್ಟಿಗಿಂತ ಒಂದು ದಿನ ಮುಂಚೆಯೇ ಈದಿನ ರಾತ್ರಿ 10 ಗಂಟೆಗೆ (ಮಧ್ಯಾಹ್ನ 12.32- ಅಮೆರಿಕ ಕಾಲಮಾನ) ಸುರಕ್ಷಿತವಾಗಿ ಧರೆಗಿಳಿಯಿತು. ಏಳು ಗಗನಯಾತ್ರಿಗಳನ್ನು ಹೊತ್ತ `ಎಂಡೆವರ್' ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಬಂದಿಳಿದಾಗ ನಾಸಾ ವಿಜ್ಞಾನಗಳ ಮುಖದಲ್ಲಿ ಸಂತಸ ಮಿನುಗಿತು.

2007: ಐಎಸ್ ಐ ದೇಶದ ಕಾನೂನು ಜಾರಿ ಮಾಡುವ ಸಂಸ್ಥೆಯಾಗಲಿ ಅಥವಾ ಸುಂಕ ಪ್ರಾಧಿಕಾರವಾಗಲಿ ಅಲ್ಲ. ದೇಶದ ಕಾನೂನಿನ ಅಡಿಯಲ್ಲಿ ಯಾರನ್ನೂ ಬಂಧಿಸುವ ಅಧಿಕಾರ ಆ ಸಂಸ್ಥೆಗಿಲ್ಲ ಎಂದು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತು. ಅಮೂಲ್ಯ ಹರಳುಗಳ ಕಳ್ಳ ಸಾಗಣೆ ಪ್ರಕರಣದಲ್ಲಿ ಐಎಸ್ ಐನಿಂದ ಬಂಧಿತರಾದ ಪಾಕಿಸ್ತಾನ ಮೂಲದ ಜರ್ಮನ್ ಪ್ರಜೆ ಅಲೀಂ ನಾಸಿರ್ ಅವರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ನೇತೃತ್ವದ ಸುಪ್ರೀಂ ಕೋರ್ಟ್ ಪೂರ್ಣಪೀಠವು ಈ ತೀರ್ಪು ನೀಡಿತು. ಅಲೀಂ ನಾಸಿರ್ ಅವರನ್ನು ಯಾವ ಕಾನೂನಿನಡಿ ಐಎಸ್ ಐ ಬಂಧಿಸಿದೆ ಎಂದು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್, ತಕ್ಷಣ ಅವರನ್ನು ಬಿಡುಗಡೆ ಮಾಡಬೇಕು. ಪಾಸ್ ಪೋರ್ಟ್ ಮತ್ತಿತರ ದಾಖಲೆಗಳನ್ನು ಅವರಿಗೆ ವಾಪಸ್ ಕೊಡಬೇಕು. ಅವರು ಜರ್ಮನಿಗೆ ಮರಳಲು ಅವಕಾಶ ಕೊಡಬೇಕು ಎಂದು ಆದೇಶಿಸಿತು. ಮತ್ತೊಂದು ಪ್ರಕರಣದಲ್ಲಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಮೇಲೆ ದಾಳಿಗೆ ಸಿದ್ಧತೆ ನಡೆಸುತ್ತಿದ್ದ ಆರೋಪದ ಮೇಲೆ ಭದ್ರತಾ ಪಡೆಗಳಿಂದ 2004ರಲ್ಲಿ ಬಂಧಿತನಾಗಿದ್ದ ಹಫೀಜ್ ಅಬ್ದುಲ್ ಬಸಿತ್ ಎಂಬಾತನ ಬಿಡುಗಡೆಗೂ ಕೋರ್ಟ್ ಆದೇಶಿಸಿತು. ಈ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ತನಿಖಾ ಸಂಸ್ಥೆಯ ಮಹಾ ನಿರ್ದೇಶಕರಿಗೆ ಛೀಮಾರಿ ಹಾಕಿತ್ತು.

2007: ಕೇಂದ್ರದ ಮಾಜಿ ಸಚಿವ ಶಿಬು ಸೊರೇನ್ ಅವರನ್ನು ತಮ್ಮ ಆಪ್ತ ಕಾರ್ಯದರ್ಶಿ ಶಶಿನಾಥ್ ಝಾ ಅವರನ್ನು ಕೊಲೆ ಮಾಡಿದ ಆರೋಪದಿಂದ ದೆಹಲಿ ಹೈಕೋರ್ಟ್ ಖುಲಾಸೆಗೊಳಿಸಿತು. ಸೊರೇನ್ ವಿರುದ್ಧ 1994ರಲ್ಲಿ ನಡೆದ ಝಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅಗತ್ಯ ಸಾಕ್ಷ್ಯಾಧಾರಗಳನ್ನು ಸಲ್ಲಿಸುವಲ್ಲಿ ಸಿಬಿಐ ವಿಫಲಗೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್ ಆರೋಪಮುಕ್ತಗೊಳಿಸಿ ಆದೇಶ ಹೊರಡಿಸಿತು. ಸೊರೇನ್ ಮತ್ತು ಇತರ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಕೆಳಹಂತದ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿದ ನ್ಯಾಯಮೂರ್ತಿಗಳಾದ ಆರ್.ಎಸ್. ಸೋಧಿ ಮತ್ತು ಎಚ್.ಆರ್. ಮಲ್ಹೋತ್ರ ಅವರನ್ನೊಳಗೊಂಡ ನ್ಯಾಯಪೀಠವು, ಪ್ರಕರಣದಲ್ಲಿ ಸೊರೇನ್ ವಿರುದ್ಧ ಆರೋಪ ಸಾಬೀತುಪಡಿಸಲು ಸಿಬಿಐ ವಿಫಲವಾಗಿರುವುದಾಗಿ ತಿಳಿಸಿತು. ಪತ್ತೆಯಾದ ಶವ ಝಾ ಅವರದ್ದೆಂದು ಗುರುತಿಸಲು ಸಿಬಿಐ ವಿಫಲವಾಗಿರುವುದರಿಂದ ಈ ಮೊದಲು ನ್ಯಾಯಾಲಯ ನೀಡಿದ ತೀರ್ಪನ್ನು ರದ್ದುಗೊಳಿಸುವುದಾಗಿ ಹೇಳಿದ ನ್ಯಾಯಪೀಠ, ಇತರ ಆರೋಪಿಗಳಾದ ನಂದ ಕಿಶೋರ್ ಮೆಹ್ತಾ, ಶೈಲೇಂದ್ರ ಭಟ್ಟಾಚಾರ್ಯ, ಪಶುಪತಿನಾಥ ಹಾಗೂ ಅಜಯ್ ಕುಮಾರ್ ಮೆಹ್ತಾ ಅವರನ್ನು ಕೂಡಾ ಖುಲಾಸೆ ಮಾಡಿತು. ಕೆಳ ಹಂತದ ನ್ಯಾಯಾಲಯವು ಸಾಂದರ್ಭಿಕ ಸಾಕ್ಷ್ಯ ಮತ್ತು ಸಂಚಿನ ಆರೋಪದ ಮೇಲೆ ಸೊರೇನ್ ಮತ್ತು ಇತರ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದರಿಂದಾಗಿ ಕೇಂದ್ರ ಸಚಿವ ಸ್ಥಾನಕ್ಕೆ ಸೊರೇನ್ ರಾಜೀನಾಮೆ ಸಲ್ಲಿಸಬೇಕಾಗಿ ಬಂತು.

2007: ಕೆಲವು ದಿನಗಳಿಂದ ಮರಳು ಹಾಗೂ ಕಟ್ಟಡ ನಿರ್ಮಾಣ ಸಾಮಗ್ರಿ ಸಾಗಣೆದಾರರು ನಡೆಸುತ್ತಿದ್ದ ಮುಷ್ಕರ ಈದಿನ ರಾತ್ರಿ ಅಂತ್ಯಗೊಂಡಿತು. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ರಾಜ್ಯ ಲಾರಿ ಮಾಲೀಕರು ಹಾಗೂ ಏಜೆಂಟರುಗಳ ಸಂಘದ ಸದಸ್ಯರು ಸಾರಿಗೆ ಸಚಿವ ಎನ್.ಚೆಲುವರಾಯಸ್ವಾಮಿ ಅವರ ನಿವಾಸದಲ್ಲಿ ಸಮಾಲೋಚನೆ ನಡೆಸಿದ ಬಳಿಕ ಮುಷ್ಕರವನ್ನು ಕೈಬಿಡಲಾಯಿತು.

2006: ಪೂರ್ವ ಉಕ್ರೇನಿನಲ್ಲಿ 170 ಮಂದಿ ಪ್ರಯಾಣಿಕರಿದ್ದ ರಷ್ಯದ ವಿಮಾನವೊಂದು ನೆಲಕ್ಕೆ ಅಪ್ಪಳಿಸಿದೆ ಎಂದು ಇಂಟರ್ ಫಾಕ್ಸ್ ಸುದ್ದಿ ಸಂಸ್ಥೆ ವರದಿ ಮಾಡಿತು.

2006: ಪ್ರತ್ಯೇಕ ತೆಲಂಗಾಣ ರಾಜ್ಯದ ಬೇಡಿಕೆ ಈಡೇರಿಕೆ ವಿಚಾರದಲ್ಲಿ ಕಾಂಗ್ರೆಸ್ `ವಂಚಿಸಿದೆ' ಎಂದು ಆಪಾದಿಸಿ ಮುನಿಸಿಕೊಂಡ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್ ಪಿಎಸ್) ಸದಸ್ಯರಾದ ಕೇಂದ್ರ ಕಾರ್ಮಿಕ ಸಚಿವ ಕೆ. ಚಂದ್ರಶೇಖರ ರಾವ್ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ಸಹಾಯಕ ಸಚಿವ ನರೇಂದ್ರ ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದರು.

2006: ತನ್ನ ಇಚ್ಛೆಗೆ ವಿರುದ್ಧವಾಗಿ ಬೇರೆ ಕಡೆ ಕೆಲಸಕ್ಕೆ ಸೇರಿದ್ದಕ್ಕಾಗಿ ಹಸೀನಾ ಎಂಬ ಯುವತಿಯ ಮೇಲೆ 1999ರಲ್ಲಿ ಆಸಿಡ್ ಎರಚಿದ್ದ ಆಕೆಯ `ಪ್ರೇಮಿ' ಜೋಸೆಫ್ ರಾಡ್ರಿಗಸ್ ಗೆ ಕರ್ನಾಟಕ ಹೈಕೋರ್ಟ್ ಜೀವಾವಧಿ ಶಿಕ್ಷೆ ನೀಡಿದ್ದಲ್ಲದೆ ಯುವತಿಯ ಚಿಕಿತ್ಸಾ ವೆಚ್ಚ 5 ಲಕ್ಷ ರೂಪಾಯಿಗಳನ್ನೂ ಆತನೇ ಭರಿಸಬೇಕು ಎಂದು ಆದೇಶ ನೀಡಿತು. ದಾಳಿಗೆ ಒಳಗಾದ ವ್ಯಕ್ತಿ ಬದುಕಿರುವಾಗ ಇಂತಹ ಶಿಕ್ಷೆ ನೀಡಿದ್ದು ದೇಶದ ನ್ಯಾಯಾಂಗ ಇತಿಹಾಸದಲ್ಲೇ ಪ್ರಥಮ. 1999ರಲ್ಲಿ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಹಳದಿಪುರದಲ್ಲಿ ನಾಗಮ್ಮ ಎಂಬ ಯುವತಿಯ ಮೇಲೆ ನಡೆದ ಆಸಿಡ್ ದಾಳಿಯಲ್ಲಿ ಆಕೆ ಮೃತಳಾದ ಹಿನ್ನೆಲೆಯಲ್ಲಿ ಆರೋಪಿ ಶಿವಕುಮಾರ್ ಗೆ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.

2006: ಬೆಂಗಳೂರಿನಲ್ಲಿ ನಡೆದ 10ನೇ ದಕ್ಷಿಣ ಏಷ್ಯಾ ಫೆಡರೇಷನ್ (ಎಸ್ಎಎಫ್) ಕ್ರೀಡಾಕೂಟದಲ್ಲಿ ಪಣಕ್ಕೆ ಇಡಲಾದ ಎಲ್ಲ ಏಳು ಸ್ವರ್ಣ ಪದಕಗಳನ್ನೂ ಭಾರತದ ಬ್ಯಾಡ್ಮಿಂಟನ್ ತಾರೆಯರು ಗೆದ್ದುಕೊಂಡರು.
2006: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಶೇಕಡಾ 27 ಮೀಸಲಾತಿ ನೀಡುವ ಸರ್ಕಾರದ ನಿಲುವನ್ನು ವಿರೋಧಿಸಿ ವೈದ್ಯಕೀಯ ವಿದ್ಯಾರ್ಥಿಗಳು ನವದೆಹಲಿಯ ರಸ್ತೆಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗೆ ಇಳಿದರು. ಇದರಿಂದಾಗಿ ವಿವಾದಾತ್ಮಕ ಮೀಸಲಾತಿ ಮಸೂದೆ ವಿರೋಧಿ ಚಳವಳಿಗೆ ಮತ್ತೆ ಚಾಲನೆ ದೊರೆಯಿತು.

2006: ವಿಜ್ಞಾನ ಮತ್ತು ಪರಿಸರ ಕೇಂದ್ರವು (ಸಿಎಸ್ ಇ) ನೀಡಿರುವ ವರದಿ `ಪೆಪ್ಸಿ' ಮತ್ತು `ಕೋಕಾಕೋಲಾ' ಕಂಪೆನಿಗಳ ತಂಪು ಪಾನೀಯಗಳಲ್ಲಿ ಕೀಟನಾಶಕ ಅಂಶ ಇರುವುದನ್ನು ಖಚಿತವಾಗಿ ಸಾಬೀತು ಪಡಿಸಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿತು.

1993: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಗುಂಡೂರಾವ್ (56) ನಿಧನರಾದರು.

1987: ವಿಮಾನ ಸಾಗಣೆ ಹಡಗು `ವಿರಾಟ್' ನೌಕಾದಳಕ್ಕೆ ಸೇರ್ಪಡೆಯಾಯಿತು.

1979: ರಾಷ್ಟ್ರಪತಿ ನೀಲಂ ಸಂಜೀವರೆಡ್ಡಿ ಅವರು 6ನೇ ಲೋಕಸಭೆಯನ್ನು ವಿಸರ್ಜಿಸಿದರು.

1967: ಅಮೆರಿಕದ ಗ್ರಂಥಿ ತಜ್ಞ ಗ್ರೆಗೊರಿ (ಗುಡ್ವಿನ್) ಪಿನ್ ಕಸ್ ತಮ್ಮ 64ನೇ ವಯಸ್ಸಿನಲ್ಲಿ ಮೃತರಾದರು. ಇವರ ಸಂಶೋಧನೆಗಳು ಮುಂದೆ ಮೊತ್ತ ಮೊದಲ ಪರಿಣಾಮಕಾರಿಯಾದ ಜನನ ನಿಯಂತ್ರಣ ಗುಳಿಗೆ (ಗರ್ಭ ನಿರೋಧಕ ಗುಳಿಗೆ) ಅಭಿವೃದ್ಧಿಗೆ ಮೂಲವಾದವು.

1945: ಸಾಮಾಜಿಕ, ವೈದ್ಯಕೀಯ, ನಿಘಂಟು ಹೀಗೆ ವಿವಿಧ ಪ್ರಾಕಾರಗಳಲ್ಲಿ ಸುಮಾರು 425ಕ್ಕೂ ಹೆಚ್ಚು ಸಣ್ಣ ಸಣ್ಣ ಕೃತಿಗಳನ್ನು ರಚಿಸಿರುವ ಬೆ.ಗೊ. ರಮೇಶ್ ಅವರು ಗೋವಿಂದರಾಜು- ರಾಧಮ್ಮ ದಂಪತಿಯ ಮಗನಾಗಿ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ದೊಡ್ಡ ಹನಸೋಗೆಯಲ್ಲಿ ಜನಿಸಿದರು.

1922: ಐರಿಷ್ ರಾಜಕಾರಣಿ ಮತ್ತು ಕ್ರಾಂತಿಕಾರಿ ಮೈಕೆಲ್ ಕೊಲಿನ್ಸ್ ಅವರು ಐರ್ಲೆಂಡಿನ ಕಾರ್ಕಿನಲ್ಲಿ ನಡೆದ ಘರ್ಷಣೆಯಲ್ಲಿ ರಿಪಬ್ಲಿಕನ್ ಉಗ್ರಗಾಮಿಗಳಿಂದ ಹತರಾದರು.

1907: ಮೇಡಂ ಭಿಕಾಜಿ ಕಾಮಾ ಅವರು ತಾವೇ ವಿನ್ಯಾಸಗೊಳಿಸಿದ ಭಾರತೀಯ ರಾಷ್ಟ್ರೀಯ ಧ್ವಜವನ್ನು ಜರ್ಮನಿಯ ಸ್ಟುಟ್ ಗರ್ಟಿನಲ್ಲಿ ನಡೆದ ಸೋಷಿಯಲಿಸ್ಟ್ ಕಾಂಗ್ರೆಸ್ಸಿನಲ್ಲಿ ಪ್ರದರ್ಶಿಸಿದರು. ವಿದೇಶದಲ್ಲಿ ಭಾರತೀಯ ಧ್ವಜವನ್ನು ಹೀಗೆ ಪ್ರದರ್ಶಿಸಿದ್ದು ಇದೇ ಮೊದಲು. ನಂತರ ಸಮಾಜವಾದಿ ನಾಯಕ ಇಂದುಲಾಲ್ ಯಾಜ್ಞಿಕ್ ಅವರು ಅದನ್ನು ರಹಸ್ಯವಾಗಿ ಭಾರತಕ್ಕೆ ತಂದರು. ಈಗ ಅದು ಪುಣೆಯ ಮರಾಠಾ ಮತ್ತು ಕೇಸರಿ ಲೈಬ್ರರಿಯಲ್ಲಿ ಪ್ರದರ್ಶಿತವಾಗಿದೆ.

1877: ಶ್ರೀಲಂಕಾ ಇತಿಹಾಸಕಾರ ಆನಂದ ಕೆಂಟಿಶ್ ಕೂಮಾರಸ್ವಾಮಿ (1877-1947) ಜನ್ಮದಿನ. ಭಾರತೀಯ ಕಲಾ ಇತಿಹಾಸಕಾರರಾದ ಇವರು ಭಾರತೀಯ ಸಂಸ್ಕೃತಿಯನ್ನು ಪಾಶ್ಚಾತ್ಯ ಜಗತ್ತಿಗೆ ಪರಿಚಯಿಸಿದ ಮುಂಚೂಣಿಯ ಇತಿಹಾಸಕಾರರು.

1846: ಅಮೆರಿಕದ ಜೊತೆ ನ್ಯೂಮೆಕ್ಸಿಕೊ ವಿಲೀನಗೊಂಡಿತು.

1647: ಡೆನಿಸ್ ಪಪಿನ್ (1647-1712) ಜನ್ಮದಿನ. ಫ್ರೆಂಚ್ ಸಂಜಾತ ಬ್ರಿಟಿಷ್ ಭೌತತಜ್ಞನಾದ ಈತ ಪ್ರೆಷರ್ ಕುಕ್ಕರನ್ನು ಸಂಶೋಧಿಸಿದ.

No comments:

Advertisement