My Blog List

Thursday, August 21, 2008

ಇಂದಿನ ಇತಿಹಾಸ History Today ಆಗಸ್ಟ್ 21

ಇಂದಿನ ಇತಿಹಾಸ

ಆಗಸ್ಟ್ 21

ಕರ್ನಾಟಕದ 15ನೇ ರಾಜ್ಯಪಾಲರಾಗಿ ರಾಮೇಶ್ವರ ಠಾಕೂರ್ ಬೆಂಗಳೂರಿನಲ್ಲಿ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಅವರು ಠಾಕೂರ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

2007: ಅಂತಾರಾಷ್ಟ್ರೀಯ ಪ್ರಸಾರವುಳ್ಳ ಪ್ರಮುಖ ವಾಣಿಜ್ಯ ನಿಯತಕಾಲಿಕೆ `ಬ್ಯುಸಿನೆಸ್ 2.0' ತಯಾರಿಸಿದ ವಿಶ್ವದ ಪ್ರಭಾವಿ 50 ವ್ಯಕ್ತಿಗಳ ಪಟ್ಟಿಯಲ್ಲಿ ರಿಲಯನ್ಸ್ ಸಮೂಹದ ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ಸೇರ್ಪಡೆಯಾದರು. ದಾಯಾದಿ ಮತ್ಸರದಿಂದ ಬೇರೆ ಬೇರೆಯಾಗಿದ್ದ ಅಂಬಾನಿ ಸಹೋದರರು, ಎದುರಾಳಿ ಕಂಪೆನಿಗಳು ಮೂಗಿನ ಮೇಲೆ ಬೆರಳಿಟ್ಟುಕೊಂಡು ನಿಬ್ಬೆರಗಾಗುವಷ್ಟರ ಮಟ್ಟಿಗೆ, ರಿಲಯನ್ಸ್ ಉದ್ಯಮವನ್ನು ಪ್ರಗತಿಪಥದಲ್ಲಿ ಕೊಂಡೊಯ್ದು ಈಗ `ವಿಶ್ವದ ಪ್ರಭಾವಿ ವ್ಯಕ್ತಿ'ಗಳು ಎನ್ನುವ ಪಟ್ಟಕ್ಕೆ ಅರ್ಹರಾಗುವ ಮೂಲಕ ವಿಶ್ವದ ಉದ್ಯಮ ರಂಗಕ್ಕೆ ಸವಾಲು ಹಾಕಿದಂತಾಗಿದೆ ಎಂದು ಪತ್ರಿಕೆ ಬಣ್ಣಿಸಿತು. `ಭಾರತದವರಾದ ಅಂಬಾನಿ ಸಹೋದರರು ಕೌಟುಂಬಿಕ ವೈಷಮ್ಯದಿಂದ ದೂರಾದರೂ, ತಮ್ಮ ತಂದೆಯ ಪರಂಪರೆಯನ್ನು ಮುನ್ನಡೆಸಿದ್ದಾರೆ. ಚಾಣಾಕ್ಷಮತಿಗಳಾದ ಇಬ್ಬರು ತಮ್ಮ ಉದ್ಯಮವನ್ನು ಸಾಕಷ್ಟು ಅಭಿವೃದ್ಧಿಗೊಳಿಸುತ್ತಿದ್ದಾರೆ. ಹಿರಿಯ ಸಹೋದರ ಮುಖೇಶ್ ಅಂಬಾನಿ, ಭಾರತೀಯ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಲು ಹೊಸ ಯೋಜನೆ ಜಾರಿ ಮಾಡಿದ್ದಲ್ಲದೆ, ವಿಶ್ವದಲ್ಲೇ ಅತ್ಯಂತ ದೊಡ್ಡದಾದ ತೈಲ ಶುದ್ಧೀಕರಣ ಘಟಕವನ್ನು ಕಟ್ಟುತ್ತಿದ್ದಾರೆ. ಕಿರಿಯ ಸಹೋದರ ಅನಿಲ್ ಅಂಬಾನಿ ವಿಶ್ವದಲ್ಲೇ ಅತ್ಯಂತ ದೊಡ್ಡದಾದ ನೈಸರ್ಗಿಕ ವಿದ್ಯುತ್ ಘಟಕವನ್ನು ಸ್ಥಾಪಿಸುತ್ತಿದ್ದಾರೆ. ಜಗತ್ತಿನಲ್ಲೇ ಹೆಚ್ಚು ಸಿಡಿಎಂಎ ಜಾಲ ವಿಸ್ತರಣೆ ಹೊಂದಿರುವ ರಿಲಯನ್ಸ್ ಕಮ್ಯೂನಿಕೇಷನ್ಸ್ ಮಾಲೀಕರಾಗಿದ್ದಾರೆ' ಎಂದು ಬ್ಯುಸಿನೆಸ್ ಪತ್ರಿಕೆ ಹೇಳಿತು. ವಿಶ್ವದ ಪ್ರಭಾವಿಗಳ 50ರ ಸರಣಿಯಲ್ಲಿ ಅಂಬಾನಿ ಸಹೋದರರದ್ದು 31ನೇ ಸ್ಥಾನ. ಗೂಗಲ್ ಕಂಪೆನಿ ಕಾರ್ಯನಿರ್ವಾಹಕ ಅಧಿಕಾರಿ ಎರಿಕ್ ಸ್ಕಿಮ್ತ್ ಮತ್ತು ಗೂಗಲ್ ಸಂಸ್ಥಾಪಕ ಲಾರಿ ಪೇಜ್ ಅವರದ್ದು ಪ್ರಥಮ ಸ್ಥಾನ. ಆಪಲ್ ಕಂಪ್ಯೂಟರ್ ಕಾರ್ಯನಿರ್ವಾಹಕ ಅಧಿಕಾರಿ ಸ್ಟೀವ್ ಜಾಬ್ಸ್ ಅವರದ್ದು ದ್ವೀತಿಯ ಸ್ಥಾನ. ಕ್ಯಾಲಿಫೋರ್ನಿಯಾ ಗವರ್ನರ್ ಅರ್ನಾಲ್ಡ್ ಸ್ಕ್ವಾರ್ಜ್ ನೆಗರ್ ಅವರದ್ದು ಎಂಟನೇ ಸ್ಥಾನ.

2007: ಭಯೋತ್ಪಾದನೆ ಅಪಾದನೆಯಿಂದ ಮುಕ್ತಿ ಹೊಂದಿದ ನಂತರವೂ ಡಾ. ಮೊಹಮದ್ ಹನೀಫ್ ಅವರ ಉದ್ಯೋಗ ವೀಸಾವನ್ನು ರದ್ದುಪಡಿಸಿರುವ ಆಸ್ಟ್ರೇಲಿಯಾ ಸರ್ಕಾರದ ನಿರ್ಧಾರವನ್ನು ಮೆಲ್ಬೋರ್ನ್ ಫೆಡರಲ್ ನ್ಯಾಯಾಲಯವು ರದ್ದು ಪಡಿಸಿತು. ಹನೀಫ್ ಅವರ ವೀಸಾ ರದ್ದು ಪಡಿಸುವಾಗ ವಲಸೆ ಸಚಿವ ಕೆವಿನ್ ಆಂಡ್ರ್ಯೂ ಅವರು ಅನುಸರಿಸಿದ ಮಾನದಂಡ ತಪ್ಪು ಎಂದು ನ್ಯಾಯಾಧೀಶ ಜೆಫ್ರಿ ಸ್ಪೆಂಡರ್ ಅವರು ತಮ್ಮ ತೀರ್ಪಿನಲ್ಲಿ ಹೇಳಿದರು. ಬೆಂಗಳೂರು ಮೂಲದ ವೈದ್ಯ ಹನೀಫ್ ಗೋಲ್ಡ್ ಕೋಸ್ಟ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಲಂಡನ್ ವಿಮಾನ ನಿಲ್ದಾಣದ ಬಾಂಬ್ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 2ರಂದು ಬ್ರಿಸ್ಬೇನ್ ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಭಯೋತ್ಪಾದನೆ ಆಪಾದನೆಯಿಂದ ಮುಕ್ತಿ ಹೊಂದುವವರೆಗೆ ಹನೀಫ್ 25 ದಿನಗಳ ಕಾಲ ಬಂಧನದಲ್ಲಿದ್ದರು. ಬ್ರಿಟನ್ನಿನ ಭಯೋತ್ಪಾದನೆ ನಿಗ್ರಹ ದಳಕ್ಕೆ ಬೇಕಾದ ವ್ಯಕ್ತಿ ಹಾಗೂ ಭಯೋತ್ಪಾದಕ ಸಂಘಟನೆಗಳಿಗೆ ನೆರವು ನೀಡುತ್ತಿದ್ದರೆಂಬ ಎಂಬ ಮಾಹಿತಿಯ ಆಧಾರದ ಮೇಲೆ ವಲಸೆ ಸಚಿವರು ವೀಸಾ ರದ್ದು ಪಡಿಸಿದ್ದರು.

2007: ಖ್ಯಾತ ಉರ್ದು ಲೇಖಕಿ ಮತ್ತು ಜ್ಞಾನಪೀಠ ಪ್ರಶಸ್ತಿ ವಿಜೇತೆ ಖರ್ರತುಲ್ಐನ್ ಹೈದರ್ (80) ಅವರು ದೀರ್ಘ ಕಾಲದ ಅಸ್ವಸ್ಥತೆಯಿಂದ ನೊಯಿಡಾದಲ್ಲಿ ನಿಧನರಾದರು. 12 ಕಾದಂಬರಿಗಳು ಹಾಗೂ ನಾಲ್ಕು ಕಥಾ ಸಂಕಲನಗಳನ್ನು ರಚಿಸಿರುವ ಹೈದರ್ ಅವರನ್ನು 1989ರಲ್ಲಿ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಉರ್ದು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಗಣನೀಯ ಸೇವೆಗಾಗಿ ಕೇಂದ್ರ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

2007: ಕರ್ನಾಟಕದ 15ನೇ ರಾಜ್ಯಪಾಲರಾಗಿ ರಾಮೇಶ್ವರ ಠಾಕೂರ್ ಬೆಂಗಳೂರಿನಲ್ಲಿ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಅವರು ಠಾಕೂರ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

2007: ಬೆಂಗಳೂರಿನ ಕಮ್ಮನಹಳ್ಳಿ ಮುಖ್ಯರಸ್ತೆಯ ಚೆಮ್ಮನೂರ್ ಜುವೆಲರ್ಸ್ ಮಳಿಗೆಗೆ ಆಗಸ್ಟ್ 11ರಂದು ಕಾರಿನಲ್ಲಿ ಬಂದ ನಾಲ್ವರ ತಂಡ ಹಾಡುಹಗಲೇ 36 ಕೆ.ಜಿ ಬಂಗಾರ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಎಸ್.ವಿ.ಟಿ ರಸ್ತೆಯ ಮನೆಯೊಂದರಲ್ಲಿ ವಾಸವಾಗಿದ್ದ ಮೂವರನ್ನು ಪೊಲೀಸರು ಬಂಧಿಸಿದರು. ಫ್ರೇಜರ್ ಟೌನ್ ಪೊಲೀಸ್ ವೃತ್ತ ನಿರೀಕ್ಷಕ ನಾಗರಾಜ್ ನೇತೃತ್ವದಲ್ಲಿ ಎಸ್.ವಿ.ಟಿ ರಸ್ತೆಯ ಮನೆಯೊಂದರ ಮೇಲೆ ದಾಳಿ ನಡೆಸಿ ಹೇಮಾ(30), ನಂದೀಶ್(24), ಬಾಲಕೃಷ್ಣ (40) ಅವರನ್ನು ಸೆರೆ ಹಿಡಿಯಲಾಯಿತು. ಗೋಪಾಲಶೆಟ್ಟಿ ಎಂಬಾತ ಹಿಂಬಾಗಿಲಿನಿಂದ ಓಡಿಹೋಗಿ ಮಹಡಿಯಿಂದ ಜಿಗಿದು ಪರಾರಿಯಾದ.

2007: ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಮುಖ್ಯಸ್ಥ ಸ್ಥಾನದಿಂದ ವಜಾ ಮಾಡಿತು. ಭಾರತೀಯ ಕ್ರಿಕೆಟ್ ಲೀಗನ್ನು (ಐಸಿಎಲ್) ಸೇರಿಕೊಂಡಿದ್ದಾರೆ ಎಂಬ ಕಾರಣಕ್ಕಾಗಿಯೇ ಕಪಿಲ್ ವಿರುದ್ಧ ಬಿಸಿಸಿಐ ಈ ರೀತಿಯ ಕ್ರಮವನ್ನು ಕೈಗೊಂಡಿತು. 1983ರಲ್ಲಿ ದೇಶಕ್ಕೆ ವಿಶ್ವಕಪ್ ಗೆದ್ದುಕೊಟ್ಟ ತಂಡದ ನಾಯಕರಾಗಿದ್ದ ಕಪಿಲ್ ಐಸಿಎಲ್ ಕಾರ್ಯಕಾರಿ ಮಂಡಳಿಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು.

2007: ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಜಿ.ಟಿ.ಚಂದ್ರಶೇಖರಪ್ಪ ಅವರನ್ನು ರಾಜ್ಯ ಸರ್ಕಾರ ರಾತ್ರೋರಾತ್ರಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಸದಸ್ಯರನ್ನಾಗಿ ನೇಮಿಸಿತು. ಇದು ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷವಾದ ಬಿಜೆಪಿಯಲ್ಲಿ ತಳಮಳ ಉಂಟು ಮಾಡಿತು.

2007: ದೇಶದ ಪ್ರಖ್ಯಾತ ಸಂಗೀತಗಾರರಿಗೆ ನೀಡುವ ಗುರುರಾವ್ ದೇಶಪಾಂಡೆ ರಾಷ್ಟ್ರೀಯ ಸಂಗೀತ ಪುರಸ್ಕಾರಕ್ಕೆ ಈ ಬಾರಿ ಖ್ಯಾತ ಹಿಂದೂಸ್ತಾನಿ ಸಂಗೀತ ಕಲಾವಿದೆ ಗಂಗೂಬಾಯಿ ಹಾನಗಲ್ ಅವರನ್ನು ಆಯ್ಕೆ ಮಾಡಲಾಯಿತು. ಜೊತೆಗೆ `ಗುರುಗಂಧರ್ವ' ಬಿರುದು ಸಹ ನೀಡಲು ಗುರುರಾವ್ ದೇಶಪಾಂಡೆ ಸಂಗೀತ ಸಭಾ ತೀರ್ಮಾನಿಸಿತು.

2006: ಸರ್ಕಾರಿ ಅನುದಾನಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳು (ಒಬಿಸಿ) ಹಾಗೂ ಪರಿಶಿಷ್ಟ ಜಾತಿ- ಪಂಗಡದವರಿಗೆ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸಚಿವ ಸಂಪುಟ ಸಮ್ಮತಿ ನೀಡಿತು.

2006: ಭಾರತದ ಚತುರ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಅವರು ಜರ್ಮನಿಯ ಮೈಂಜ್ ನಲ್ಲಿ ನಡೆದ `ಮೈಂಜ್ ಕ್ಲಾಸಿಕ್ ಚೆಸ್ ಚಾಂಪಿಯನ್ ಶಿಪ್'ನ ರ್ಯಾಪಿಡ್ ವಿಭಾಗದಲ್ಲಿ ಒಂಬತ್ತನೇ ಬಾರಿ ಪ್ರಶಸ್ತಿ ಗೆದ್ದುಕೊಂಡು ದಾಖಲೆ ಸ್ಥಾಪಿಸಿದರು. ತೈಮೂರ್ ರಜಬೋವ್ ಅವರನ್ನು ಆನಂದ್ ಅವರು ಎರಡೂ ಪಂದ್ಯಗಳಲ್ಲಿ ಸೋಲಿಸುವ ಮೂಲಕ 5-3ರ ಮುನ್ನಡೆಯೊಂದಿಗೆ ಪ್ರಶಸ್ತಿ ಗೆದ್ದರು.

2006: ಭಾರತದ ಹಿರಿಯ ಬ್ಯಾಸ್ಕೆಟ್ಬಾಲ್ ಆಟಗಾರ ಬಿ.ಟಿ. ಸತ್ಯನಾರಾಯಣರಾಜೇ ಅರಸ್ (55) ಅವರು ಮೈಸೂರಿನ ತಮ್ಮ ನಿವಾಸದಲ್ಲಿ ನಿಧನರಾದರು.

2006: ಶಹನಾಯಿ ಮಾಂತ್ರಿಕ, ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್ (1921-2006) ಅವರು ವಾರಣಾಸಿಯಲ್ಲಿ ಈದಿನ ನಸುಕಿನ ವೇಳಯಲ್ಲಿ ಹೃದಯಾಘಾತದಿಂದ ನಿಧನರಾದರು. 1921ರ ಮಾರ್ಚ್ 21ರಂದು ಆಸ್ಥಾನ ಸಂಗೀತಗಾರರ ಕುಟುಂಬದಲ್ಲಿ ಜನಿಸಿದ ಬಿಸ್ಮಿಲ್ಲಾ ಖಾನ್ ಚಿಕ್ಕಪ್ಪ ಅಲಿ ಬಕ್ಷ್ ವಿಲಾಯತ್ ಅವರಿಂದ ಸಂಗೀತ ಕಲಿತು ಮುಂದೆ ಶಹನಾಯಿಯ ಆಳ ಅಗಲಗಳನ್ನು ವಿಸ್ತರಿಸಿದರು. ವಾರಣಾಸಿಯನ್ನೇ ತಮ್ಮ ಸಿದ್ಧಿ ಸಾಧನೆಗಳ ತಪೋ ಭೂಮಿಯನ್ನಾಗಿ ಮಾಡಿಕೊಂಡಿದ್ದರು. 1947ರ ಆಗಸ್ಟ್ 15ರ ಮೊದಲ ಸ್ವಾತಂತ್ರ್ಯ ಉತ್ಸವ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಅವರು ಶಹನಾಯಿ ತರಂಗವನ್ನು ಇಡೀ ದೇಶಕ್ಕೆ ಹರಡಿದ್ದರು. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ತಾನ್ ಸೇನ್ ಪ್ರಶಸ್ತಿ, ಪದ್ಮವಿಭೂಷಣ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಗಳಿಸಿದ್ದ ಅವರು 2001ರಲ್ಲಿ ಭಾರತ ರತ್ನ ಪ್ರಶಸ್ತಿಗೂ ಭಾಜನರಾಗಿದ್ದರು. ಬಿಹಾರಿನ ದರ್ಭಾಂಗ ಮತ್ತು ಮುಂಬೈಯ ಇಂಡಿಯಾಗೇಟ್ ನಲ್ಲಿ ಒಂದೊಂದು ಶಹನಾಯಿ ಕಛೇರಿ ನಡೆಸಬೇಕು ಎಂಬ ಅವರ ಅಂತಿಮ ಆಸೆ ಮಾತ್ರ ಈಡೇರಲಿಲ್ಲ.

2006: ಹೈದರಾಬಾದಿನ ಹನ್ನೊಂದು ವರ್ಷದ ಬಾಲಕ ನಿಶ್ಚಲ್ ನಾರಾಯಣಮ್ ಕೇವಲ 12.07 ನಿಮಿಷಗಳಲ್ಲಿ 225 ಯದ್ವಾತದ್ವ ಇಡಲಾಗಿದ್ದ ವಸ್ತುಗಳನ್ನು (ಯಾದೃಚ್ಛಿಕ ದೃಷ್ಟಾಂತ) ಜ್ಞಾಪಿಸಿಕೊಳ್ಳುವ ಮೂಲಕ ತಮ್ಮ ಶಿಕ್ಷಕರು ಸ್ಥಾಪಿಸ್ದಿದ ಗಿನ್ನೆಸ್ ದಾಖಲೆಯನ್ನು ಮುರಿದ. ಆರನೇ ತರಗತಿ ವಿದ್ಯಾರ್ಥಿಯಾಗಿರುವ ನಿಶ್ಚಲನ ಶಿಕ್ಷಕ ಜಯಸಿಂಹ ರವಿರಾಲ ಅವರು 2005ರಲ್ಲಿ 200 ಯಾದೃಚ್ಛಿಕ ದೃಷ್ಟಾಂತಗಳನ್ನು ಜ್ಞಾಪಿಸಿಕೊಂಡು ಗಿನ್ನೆಸ್ ದಾಖಲೆ ಸೇರಿದ್ದರು.

2006: ಎರಡು ರೈಲುಗಾಡಿಗಳು ಪರಸ್ಪರ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ 80 ಮಂದಿ ಮೃತರಾಗಿ 163 ಮಂದಿ ಗಾಯಗೊಂಡ ಕೈರೋದಲ್ಲಿ ಘಟಿಸಿತು. ಈಜಿಪ್ಟ್ ರಾಜಧಾನಿಯಿಂದ 20 ಕಿಲೋಮೀಟರ್ ದೂರದಲ್ಲಿರುವ ಕಾಲ್ಯೂಬ್ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದ್ದು, ದೇಶದ 150 ವರ್ಷಗಳ ರೈಲ್ವೆ ಇತಿಹಾಸದಲ್ಲಿಸಂಭವಿಸಿದ ಭೀಕರ ರೈಲು ಅಪಘಾತಗಳಲ್ಲಿ ಇದೂ ಒಂದು ಎಂದು ಬಣ್ಣಿಸಲಾಯಿತು.
2002ರಲ್ಲಿ ರೈಲು ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ 360 ಮಂದಿ ಮೃತಪಟ್ಟಿದ್ದರು. ಅದರ ಬಳಿಕ ಈಜಿಪ್ಟಿನಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ರೈಲು ಅಪಘಾತ ಸಂಭವಿಸಿರುವುದು ಇದೇ ಮೊದಲು.

2006: ಉತ್ತರ ಶ್ರೀಲಂಕಾದಲ್ಲಿ ಅಪರಿಚಿತ ಬಂದೂಕುಧಾರಿಗಳು ಮಾಜಿ ತಮಿಳು ರಾಜಕಾರಣಿ ಮತ್ತು ಜಾಫ್ನಾದ ತಮಿಳು ದೈನಿಕ `ನಮ್ಮದು ಈಳನಾಡು'ವಿನ ವ್ಯವಸ್ಥಾಪಕ ನಿರ್ದೇಶಕ ಸಿನ್ನತಂಬಿ ಸಿವಮಹಾರಾಜಾ (68) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದರು. ಉನ್ನತ ಭದ್ರತೆ ಹೊಂದಿರುವ ತೆಲ್ಲಿಪಳ್ಳೈನಲ್ಲಿರುವ ಅವರ ನಿವಾಸದಲ್ಲಿ ಕಳೆದ ರಾತ್ರಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಸಿನ್ನತಂಬಿ ಅವರು ಎಲ್ ಟಿಟಿಇ ಪ್ರಾತಿನಿಧಿಕ ರಾಜಕೀಯ ಪಕ್ಷವೆಂದು ನಂಬಲಾಗಿರುವ ತಮಿಳು ರಾಷ್ಟ್ರೀಯ ಮೈತ್ರಿಕೂಟದ ಸದಸ್ಯರಾಗಿದ್ದರು.

2000: ಅಮೆರಿಕದ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಒಂದೇ ಋತುವಿನಲ್ಲಿ ಮೇಜರ್ ಗಳನ್ನು ಗೆದ್ದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1953ರಲ್ಲಿ ಬೆನ್ ಹೊಗನ್ ಈ ಸಾಧನೆ ಮಾಡಿದ್ದರು.

2000: ಲೋಕಸಭಾ ಸದಸ್ಯತ್ವಕ್ಕೆ ಉಮಾ ಭಾರತಿ ರಾಜೀನಾಮೆ.

2000: ಮಹಾತ್ಮ ಗಾಂಧಿ ಅವರ ಸೊಸೆ ನಿರ್ಮಲ ಗಾಂಧಿ ಅವರು ವಾಧರ್ಾದಲ್ಲಿ ನಿಧನರಾದರು.

1997: ಭಾರತದ ಉಪರಾಷ್ಟ್ರಪತಿಯಾಗಿ ಕೃಷ್ಣಕಾಂತ್ ಆಯ್ಕೆಯಾದರು.

1994: ಭಾರತದ ಹನ್ನೆರಡು ವರ್ಷದ ಬಾಲಕಿ ರೂಪಾಲಿ ರಾಮದಾಸ್ ರಿಪೇಲ್ ಅವರು ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿ ದಾಟಿದ ಅತ್ಯಂತ ಕಿರಿಯ ಭಾರತೀಯ ಹಾಗೂ ಕಡಲ್ಗಾಲುವೆ ದಾಟಿದ ಎರಡನೇ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2000ದ ಮಾರ್ಚಿಯಲ್ಲಿ ಈಕೆ ದಕ್ಷಿಣ ಆಫ್ರಿಕಾದ ರೋಬ್ಬೆನ್ ಐಲ್ಯಾಂಡ್ ಕಾಲುವೆಯನ್ನು ಅತ್ತಿಂದ ಇತ್ತ ಇತ್ತಿಂದ ಅತ್ತ ಈಜಿದ ಮೊದಲ ಮಹಿಳೆ ಮತ್ತು ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಜಗತ್ತಿನ ಆರು ಕಾಲುವೆಗಳನ್ನು ಈಜಿದ ಕಿರಿಯ ವ್ಯಕ್ತಿ ಎಂಬ ಕೀರ್ತಿ ಕೂಡಾ ಈಕೆಗಿದೆ.

1987: ಭಾರತದ ಉಪ ರಾಷ್ಟ್ರಪತಿಯಾಗಿ ಡಾ. ಶಂಕರ ದಯಾಳ್ ಶರ್ಮಾ ಆಯ್ಕೆಯಾದರು.

1983: ಅಮೆರಿಕದಲ್ಲಿನ ತಮ್ಮ ಸ್ವಘೋಷಿತ ವಿದೇಶವಾಸವನ್ನು ಕೊನೆಗೊಳಿಸಿದ ಫಿಲಿಪ್ಪೀನ್ನ ವಿರೋಧಿ ನಾಯಕ ಬೆನಿಗ್ನೊ ಎಸ್. ಅಕ್ವಿನೊ ಜ್ಯೂನಿಯರ್ ಅವರು ಮನಿಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಕೆಳಕ್ಕೆ ಇಳಿಯುತ್ತಿದ್ದಂತೆಯೇ ಗುಂಡೇಟಿಗೆ ಬಲಿಯಾಗಿ ಅಸುನೀಗಿದರು.

1981: ಬೆಂಗಳೂರು ಮತ್ತು ಮೈಸೂರಿನಲ್ಲಿ ಸಂಭವಿಸಿದ ಕಳ್ಳಭಟ್ಟಿ ಸಾರಾಯಿ ದುರಂತಗಳ ವಿಚಾರಣೆಗಾಗಿ ರಚಿಸಲಾದ ವಿಚಾರಣಾ ಆಯೋಗದ ಅಧ್ಯಕ್ಷರನ್ನಾಗಿ ಸರ್ಕಾರವು ನ್ಯಾಯಮೂರ್ತಿ ಆರ್.ಜಿ. ದೇಸಾಯಿ ಅವರನ್ನು ನೇಮಕ ಮಾಡಿತು.

1959: ಅಮೆರಿಕದ 50ನೇ ರಾಜ್ಯವಾಗಿ ಹವಾಯ್ ಸೇರ್ಪಡೆಯಾಯಿತು.

1955: ಜಾನಪದ, ಸಾಂಸ್ಕೃತಿಕ ಅಧ್ಯಯನ, ಯಕ್ಷಗಾನ ಕ್ಷೇತ್ರಗಳಲ್ಲಿ ಖ್ಯಾತಿ ಪಡೆದಿರುವ ಪುರುಷೋತ್ತಮ ಬಿಳಿಮಲೆ ಅವರು ಬಿ. ಶೇಷಪ್ಪ ಗೌಡ- ಗೌರಮ್ಮ ದಂಪತಿಯ ಮಗನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪಂಜದಲ್ಲಿ ಜನಿಸಿದರು. ಗುಂಡ್ಮಿ ಚಂದ್ರಶೇಖರ ಐತಾಳ ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿ, ಮಲ್ಲಿಕಾರ್ಜುನ ಮನ್ಸೂರ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಸಾರಂಗಮಠ ಪ್ರಶಸ್ತಿ, ಕು.ಶಿ. ಹರಿದಾಸಭಟ್ಟ ಪ್ರಶಸ್ತಿಗಳು ಅವರ ವಿವಿಧ ಕೃತಿಗಳಿಗೆ ಲಭಿಸಿವೆ.

1955: ಕವಯಿತ್ರಿ, ಲೇಖಕಿ ಇಸ್ಮತ್ ಚುಂಗಾಯ್ತ್ ಜನನ.

1911: ಪ್ಯಾರಿಸ್ಸಿನ ಲೌರೆಯಿಂದ ಲಿಯೋನಾರ್ಡೊ ಡ ವಿಂಚಿ ಅವರ ಕಲಾಕೃತಿ `ಮೋನಾಲಿಸಾ' ಕಳುವಾಯಿತು. 1913ರಲ್ಲಿ ಅದು ಇಟಲಿಯಲ್ಲಿ ಪತ್ತೆಯಾಯಿತು. ವಿನ್ಸೆಂಝೊ ಪೆರುಗಿಯಾ ಮೇಲೆ ಕಳ್ಳತನದ ಆಪಾದನೆ ಹೊರಿಸಲಾಯಿತು. (ಅಚ್ಚರಿಯ ವಿಷಯ ಏನು ಗೊತ್ತೆ? `ಸರ್ರಿಯಲಿಸಂ' ಶಬ್ಧವನ್ನು ಹುಟ್ಟುಹಾಕಿದ ಕವಿ ಗುಯಿಲ್ಯೂಮ್ ಅಪೋಲಿನೈರೀ ಅವರನ್ನು ಕಳ್ಳತನಕ್ಕೆ ಸಂಬಂಧಿಸಿದ ಯಾವುದೇ ಆಧಾರ ಇಲ್ಲದಿದ್ದರೂ ಸೆರೆಮನೆಗೆ ತಳ್ಳಲಾಗಿತ್ತು. ಇದೇ ಅಪರಾಧಕ್ಕೆ ಸಂಬಂಧಿಸಿದಂತೆ ವರ್ಣಚಿತ್ರಗಾರ ಪಾಬ್ಲೊ ಪಿಕಾಸೋ ಅವರ ಮೇಲೂ ಪೊಲೀಸರಿಗೆ ಗುಮಾನಿ ಇತ್ತು)

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement