My Blog List

Saturday, August 30, 2008

ಇಂದಿನ ಇತಿಹಾಸ History Today ಆಗಸ್ಟ್ 30

ಇಂದಿನ ಇತಿಹಾಸ

ಆಗಸ್ಟ್ 30

ಮಲೇಷ್ಯಾದಲ್ಲಿ ನೆಲೆಸಿರುವ ಭಾರತೀಯ ಮೂಲದ ರತಕೃಷ್ಣನ್ ವೇಲು ಎಂಬಾತ ಕ್ವಾಲಾಲಂಪುರದಲ್ಲಿ ತನ್ನ ಬಲಿಷ್ಠ ಹಲ್ಲುಗಳ ಶಕ್ತಿಯಿಂದ ಏಳು ಬೋಗಿಗಳನ್ನು ಹೊಂದಿದ್ದ ರೈಲುಗಾಡಿಯನ್ನು ಎಳೆದು ಪರಾಕ್ರಮ ಮೆರೆದ. ಈತ 297.1 ಮೆಟ್ರಿಕ್ ಟನ್ ಭಾರದ ರೈಲನ್ನು 2.8 ಮೀಟರ್ ದೂರ ಎಳೆಯುವಲ್ಲಿ ಯಶಸ್ವಿಯಾದ.

2007: ಮಲೇಷ್ಯಾದಲ್ಲಿ ನೆಲೆಸಿರುವ ಭಾರತೀಯ ಮೂಲದ ರತಕೃಷ್ಣನ್ ವೇಲು ಎಂಬಾತ ಕ್ವಾಲಾಲಂಪುರದಲ್ಲಿ ತನ್ನ ಬಲಿಷ್ಠ ಹಲ್ಲುಗಳ ಶಕ್ತಿಯಿಂದ ಏಳು ಬೋಗಿಗಳನ್ನು ಹೊಂದಿದ್ದ ರೈಲುಗಾಡಿಯನ್ನು ಎಳೆದು ಪರಾಕ್ರಮ ಮೆರೆದ. ಈತ 297.1 ಮೆಟ್ರಿಕ್ ಟನ್ ಭಾರದ ರೈಲನ್ನು 2.8 ಮೀಟರ್ ದೂರ ಎಳೆಯುವಲ್ಲಿ ಯಶಸ್ವಿಯಾದ. ಕಬ್ಬಿಣದ ಸರಪಳಿಯನ್ನು ರೈಲಿಗೆ ಕಟ್ಟಲಾಗಿತ್ತು. ಅದರ ಮತ್ತೊಂದು ತುದಿಯನ್ನು ಹಲ್ಲಿನಿಂದ ಕಚ್ಚಿ ಹಿಡಿದ ವೇಲು ಸರ್ವಶಕ್ತಿಯನ್ನೂ ಉಪಯೋಗಿಸಿ ರೈಲನ್ನು ಎಳೆದ. ಇದೊಂದು ವಿಶ್ವದಾಖಲೆ ಎಂದು ಸಂಘಟಕರು ತಿಳಿಸಿದರು. ದಾಖಲೆಗಳ ಪರಿಶೀಲನೆ ಬಳಿಕ ಈ ಸಾಧನೆಗೆ ಗಿನ್ನೆಸ್ ವಿಶ್ವದಾಖಲೆಯ ಮಾನ್ಯತೆ ಲಭಿಸಬಹುದು ಎಂದು ವೇಲುವಿನ ಮ್ಯಾನೇಜರ್ ಅಣ್ಣ ಚಿದಂಬರ್ ಹೇಳಿದರು. `ಕಿಂಗ್ ಟೂಥ್' ಎಂದೇ ಜನಪ್ರಿಯನಾಗಿರುವ ವೇಲು ಅಪ್ಪಟ ಸಸ್ಯಾಹಾರಿ. ಈತ 2003ರ ಅಕ್ಟೋಬರ್ 18 ರಂದು 260.8 ಮೆಟ್ರಿಕ್ ಟನ್ ಭಾರದ ರೈಲನ್ನು 4.2 ಮೀ. ದೂರ ಎಳೆದು ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ಹೆಸರು ಪಡೆದಿದ್ದ. ವೇಲು ಈ ಸಾಹಸ ಮಾಡಿದ್ದು ಯೋಗ, ಧ್ಯಾನದ ಬಲದಿಂದ. ಪ್ರಯತ್ನ ಅರಂಭಿಸುವ ಮೊದಲು ಈತ ಎರಡೂ ಕಣ್ಣುಗಳನ್ನು ಮುಚ್ಚಿ ನಿಡಿದಾದ ಉಸಿರು ಎಳೆದು ಧ್ಯಾನ ನಿರತನಾಗಿದ್ದ.

2007: ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳಿಗೆ ಹಣಕಾಸು ನೆರವು ನೀಡುವಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಬ್ಯಾಂಕಿಗೆ ಕೇಂದ್ರ ಸರ್ಕಾರ ನೀಡುವ ಪ್ರಥಮ ರಾಷ್ಟ್ರೀಯ ಪ್ರಶಸ್ತಿಯನ್ನು ಕೆನರಾ ಬ್ಯಾಂಕ್ ಪಡೆದುಕೊಂಡಿತು. ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎಂ.ಬಿ.ಎನ್. ರಾವ್ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

2007: ನಂದಿ ಇನ್ ಫ್ರಾಸ್ಟ್ರಕ್ಷರ್ ಕಾರಿಡಾರ್ ಎಂಟರ್ ಪ್ರೈಸಸ್ (ನೈಸ್) ವಶದಲ್ಲಿರುವ ಹೆಚ್ಚುವರಿ ಜಮೀನು ಪರಾಭಾರೆಗೆ ಅವಕಾಶ ಕಲ್ಪಿಸಿದ್ದ ಒಪ್ಪಂದವನ್ನು ರದ್ದುಪಡಿಸಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿತು. 2002ರ ಆಗಸ್ಟ್ 6ರಂದು ನೈಸ್ ಮತ್ತು ಸರ್ಕಾರದ ನಡುವೆ ಆದ ಒಪ್ಪಂದದ ಉಪ ವಿಧಿ 1.1.3ರ ಪ್ರಕಾರ ಸರ್ಕಾರದಿಂದ ಪಡೆದ ಜಮೀನು ಮಾರಾಟ ಮಾಡಲು ನೈಸ್ ಗೆ ಅವಕಾಶವಿತ್ತು. ಈ ಉಪ ವಿಧಿಯನ್ನು ರದ್ದು ಮಾಡಲು ಕೈಗಾರಿಕಾ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಸಂಪುಟ ಸಭೆಯ ನಂತರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಪ್ರಕಟಿಸಿದರು.

2007: ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಡಾ.ರಾಜ್ ಕುಮಾರ್ ಪ್ರಶಸ್ತಿಯನ್ನು ಹಿರಿಯ ಕಲಾವಿದೆ ಎಂ.ಎನ್.ಲಕ್ಷ್ಮೀದೇವಿ, ಜೀವಮಾನ ಸಾಧನೆಗಾಗಿ ನೀಡಲಾಗುವ ಪ್ರಶಸ್ತಿಯನ್ನು ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಸ್ವೀಕರಿಸಿದರು. ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಚಿತ್ರ ನಿರ್ದೇಶಕ ಸಿಂಗೀತಂ ಶ್ರೀನಿವಾಸರಾವ್ ಪರವಾಗಿ ನಟ ರಮೇಶ್ ಸ್ವೀಕರಿಸಿದರು. `ಸೈನೇಡ್' ಚಿತ್ರದಲ್ಲಿನ ಅಭಿನಯಕ್ಕಾಗಿ ತಾರಾ ಹಾಗೂ `ದುನಿಯಾ'ದ ನಟನೆಗಾಗಿ ವಿಜಯ್ ಕ್ರಮವಾಗಿ ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿಯನ್ನು ಪಡೆದರು.

2007: ನಾಗರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಕಡೆಗೂ ಎಡಪಕ್ಷಗಳ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ, ಈ ಪಕ್ಷಗಳು ಎತ್ತಿರುವ ಆಕ್ಷೇಪಗಳನ್ನು ನಿವಾರಿಸಲು ರಚಿಸಲಾಗುವ ರಾಜಕೀಯ ಸಮಿತಿ ತನ್ನ ವರದಿ ನೀಡುವವರೆಗೆ ಒಪ್ಪಂದವನ್ನು ಕಾರ್ಯಗತಗೊಳಿಸುವುದಿಲ್ಲ ಎಂದು ಹೇಳಿತು. ಹೀಗಾಗಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಎಡಪಕ್ಷಗಳ ಮಧ್ಯೆ ಉದ್ಭವಿಸಿದ್ದ ಮೂರು ವಾರಗಳ ಬಿಕ್ಕಟ್ಟು ಶಮನಗೊಂಡಿತು.

2007: ವರನಟ ಡಾ. ರಾಜ್ ಕುಮಾರ ಅವರಿಗೆ ಮರಣೋತ್ತರವಾಗಿ ರಾಘವೇಂದ್ರ ಅನುಗ್ರಹ (ಸಾಮಾಜಿಕ), ಧಾರವಾಡದ ಕರ್ನಾಟಕ ಇತಿಹಾಸ ಸಂಶೋಧನಾ ಸಂಸ್ಥೆಗೆ ರಾಘವೇಂದ್ರ ಅನುಗ್ರಹ (ಧಾಮರ್ಿಕ) ಹಾಗೂ ಪ್ರಸಿದ್ಧ ಕರ್ನಾಟಕ ಸಂಗೀತ ಕಲಾವಿದ ಚೆನ್ನೈನ ಟಿ.ವಿ. ಗೋಪಾಲಕೃಷ್ಣನ್ ಅವರಿಗೆ ಅಸ್ಥಾನ ವಿದ್ವಾನ್ ಗೌರವ ಪ್ರಶಸ್ತಿ ಪ್ರದಾನ ಸಮಾರಂಭವು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ನಡೆಯಿತು. ರಾಯರ 336ನೇ ಆರಾಧನಾ ಮಹೋತ್ಸವ ಅಂಗವಾಗಿ ಮಧ್ಯಾರಾಧನೆ ದಿನದಂದು ಮಠದ ಪೀಠಾಧಿಪತಿ ಶ್ರೀ ಸುಶಮೀಂದ್ರ ತೀರ್ಥ ಶ್ರೀಪಾದಂಗಳು, ಉತ್ತರಾಧಿಕಾರಿ ಶ್ರೀ ಸುಯತೀಂದ್ರ ತೀರ್ಥ ಶ್ರೀಪಾದಂಗಳು ಪ್ರಶಸ್ತಿ ಪ್ರದಾನ ಮಾಡಿದರು. ಡಾ.ರಾಜಕುಮಾರ ಅವರಿಗೆ ಕೊಡಮಾಡಿದ ರಾಘವೇಂದ್ರ ಅನುಗ್ರಹ ಪ್ರಶಸ್ತಿಯನ್ನು ಪಾರ್ವತಮ್ಮ ರಾಜ್ ಕುಮಾರ, ಕರ್ನಾಟಕ ಇತಿಹಾಸ ಸಂಶೋಧನಾ ಸಂಸ್ಥೆಗೆ ನೀಡಿದ ರಾಘವೇಂದ್ರ ಅನುಗ್ರಹ ಪ್ರಶಸ್ತಿಯನ್ನು ಡಾ.ಎ.ಆರ್. ಪಂಚಮುಖಿ, ಹಾಗೂ ಆಸ್ಥಾನ ವಿದ್ವಾನ್ ಪ್ರಶಸ್ತಿಯನ್ನು ಚೆನ್ನೈನ ಟಿ.ವಿ. ಗೋಪಾಲಕೃಷ್ಣನ್ ಸ್ವೀಕರಿಸಿದರು.

2007: ಜೈಲಿನಲ್ಲಿರುವ ಆರ್ ಜೆಡಿ ಸಂಸದ ಶಹಾಬ್ದುದೀನ್ ಅವರ ವಿರುದ್ಧ ಸಿವಾನ್ ಪೊಲೀಸ್ ವರಿಷ್ಠಾಧಿಕಾರಿ ಎಸ್.ಕೆ.ಸಿಂಘಾಲ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಅಪರಾಧ ಸಾಬೀತಾಗಿದೆ ಎಂದು ಸಿವಾನಿನ ವಿಶೇಷ ನ್ಯಾಯಾಲಯ ತೀರ್ಪು ನೀಡಿತು. 1996ರ ಮೇ 3ರಂದು ಸಿವಾನ್ ಜಿಲ್ಲೆಯಲ್ಲಿ ಸಿಂಘಾಲ್ ಮೇಲೆ ನಡೆದ ಹಲ್ಲೆಯಲ್ಲಿ ಶಹಾಬ್ದುದೀನ್ ಭಾಗಿಯಾಗಿದ್ದರು ಎಂಬುದು ಸಾಬೀತಾಗಿದೆ ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜ್ಞಾನೇಶ್ವರ್ ಪ್ರಸಾದ್ ಶ್ರೀವಾಸ್ತವ್ ಹೇಳಿದರು. ಸಂಸದ ಶಹಾಬ್ದುದೀನ್ ಅವರಿಗೆ ರಕ್ಷಣೆ ಒದಗಿಸಿದ್ದ ಪೊಲೀಸರಾದ ಜಹಂಗೀರ್ ಮತ್ತು ಖಲಿ ಅವರ ಅಪರಾಧವೂ ಸಾಬೀತಾಗಿದೆ ಎಂದು ನ್ಯಾಯಾಲಯಯ ಹೇಳಿತು.

2007: ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಮತ್ತು ಪ್ರದೇಶ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಮರಾವ್ ಅದಿಕ್ ಈದಿನ ಮುಂಬೈಯ ಲೀಲಾವತಿ ಆಸ್ಪತೆಯಲ್ಲಿ ಕೊನೆಯುಸಿರೆಳೆದರು. 1978 ರಿಂದ 1996 ತನಕ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದ ಅದಿಕ್, ವಸಂತದಾದಾ ಪಾಟೀಲ್, ಎ.ಆರ್. ಅಂತುಳೆ, ಬಾಬಾಸಾಹೇಬ್ ಭೋಸ್ಲೆ, ಶರದ್ ಪವಾರ್ ಹಾಗೂ ಸುಧಾಕರ ರಾವ್ ನಾಯಕ್ ಸಂಪುಟದಲ್ಲಿ ದಶಕಕ್ಕೂ ಹೆಚ್ಚು ಕಾಲ ಸಚಿವರಾಗಿದ್ದರು.

2006: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಡಾ. ಶ್ರೀನಿವಾಸ ಸಂಪತ್ ಅವರು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿಯು ನೀಡುವ 2006ನೇ ಸಾಲಿನ ಪ್ರತಿಷ್ಠಿತ ಎಸ್.ಎಸ್. ಭಟ್ನಾಗರ್ ಪ್ರಶಸ್ತಿಗೆ ಆಯ್ಕೆಯಾದರು. ರಾಸಾಯನಿಕ ವಿಜ್ಞಾನದಲ್ಲಿ ಮಾಡಿರುವ ಸಾಧನೆಗಾಗಿ ಈ ಪ್ರಶಸ್ತಿಯನ್ನು ಸಂಪತ್ ಮತ್ತು ತಿರುವನಂತಪುರದ ವಿಜ್ಞಾನಿ ಥಾಮಸ್ ಅವರಿಗೆ ಘೋಷಿಸಲಾಯಿತು.

2006: ಮುಂಬೈಯ ಸ್ಥಳೀಯ ಟ್ಯಾಬ್ಲಾಯಿಡ್ ಪತ್ರಿಕೆಯೊಂದು ಗಣೇಶನ ವಿವಾದಾತ್ಮಕ ವ್ಯಂಗ್ಯಚಿತ್ರ (ಕಾರ್ಟೂನ್) ಪ್ರಕಟಿಸ್ದಿದಕ್ಕಾಗಿ ಮುಖಪುಟದಲ್ಲಿ ಕ್ಷಮೆಯಾಚಿಸಿತು. ಪತ್ರಿಕೆ ಪ್ರಕಟಿಸಿದ ವ್ಯಂಗ್ಯಚಿತ್ರ ವಿರುದ್ಧ ಅರುಣ್ಗೌಳಿ ನೇತೃತ್ವದ ಅಖಿಲ ಭಾರತೀಯ ಸೇನಾ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆ ವ್ಯಕ್ತಪಡಿಸಿದ್ದು, ಸಂಘಟನೆಗಳ 20-25ಮಂದಿ 29ರ ರಾತ್ರಿ ದಕ್ಷಿಣ ಕೇಂದ್ರ ಮುಂಬೈಯಲ್ಲಿರುವ ಪತ್ರಿಕೆಯ ಕಾರ್ಯಾಲಯಕ್ಕೆ ಮೆರವಣಿಗೆ ನಡೆಸಿ ಸಂಪಾದಕರು ಕ್ಷಮೆ ಕೇಳುವಂತೆ ಒತ್ತಾಯಿಸಿದ್ದರು.. ಪತ್ರಿಕೆ ಹಿಟ್ಲರ್, ಬಿನ್ ಲಾಡೆನ್ ಹಾಗೂ ಜಾರ್ಜ್ ಬುಷ್ ರಂತೆ ಕಾಣುವ ಗಣಪತಿಯ ಕಾರ್ಟೂನುಗಳನ್ನು ಪ್ರಕಟಿಸಿದ್ದೇ ಅಲ್ಲದೆ `ನಾವು ಈ ತರದ ವೈವಿಧ್ಯಮಯ ಗಣೇಶನನ್ನು ಇನ್ನೆಲ್ಲೂ ಕಾಣೆವು'ಎಂಬುದಾಗಿ ಅಡಿಬರಹ ನೀಡಿತ್ತು.

1991: ಉರಗ ಮಿತ್ರ ಡಾ. ಪಿ.ಜೆ. ದೇವ್ರಾಸ್ ನಿಧನ.

1990: ಪ್ರಸಾರ ಭಾರತಿ ಕಾಯ್ದೆಗೆ ಸಂಸತ್ತಿನಲ್ಲಿ ಅವಿರೋಧ ಸಮ್ಮತಿ.

1987: ಕೆನಡಾದ ಬೆನ್ ಜಾನ್ಸನ್ 9.83 ಸೆಕೆಂಡುಗಳಲ್ಲಿ 100 ಮೀಟರ್ ಓಡಿ ವಿಶ್ವ ದಾಖಲೆ ನಿರ್ಮಿಸಿದ.

1983: ಭಾರತದ ಇನ್ ಸಾಟ್-1ಬಿ ವಿವಿಧೋದ್ಧೇಶ ಉಪಗ್ರಹವನ್ನು ಅಮೆರಿಕದ ಕೇಪ್ ಕ್ಯಾನವರಾಲಿನಿಂದ ಚಾಲೆಂಜರ್ ಮೂಲಕ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಹಾರಿಸಲಾಯಿತು. ಅದು ಅಕ್ಟೋಬರ್ 15ರ ವೇಳೆಗೆ ಪೂರ್ಣ ಕಾರ್ಯಾಚರಣೆ ಆರಂಭಿಸಿತು.

1983: ಗುಯೋನ್ ಎಸ್ ಬ್ಲುಫೋರ್ಡ್ ಜ್ಯೂನಿಯರ್ ಅವರು ಚಾಲೆಂಜರ್ ಮೂಲಕ ಬಾಹ್ಯಾಕಾಶಕ್ಕೆ ಹಾರಿದ ಮೊತ್ತ ಮೊದಲ ಕರಿಯ ಅಮೆರಿಕನ್ ಗಗನಯಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1967: ಅಮೆರಿಕದ ಸುಪ್ರೀಂಕೋರ್ಟಿಗೆ ಮೊತ್ತ ಮೊದಲ ಕರಿಯ ನ್ಯಾಯಾಧೀಶ ತುರ್ ಗುಡ್ ಮಾರ್ಶಲ್ ಅವರ ನೇಮಕಾತಿಯನ್ನು ಅಮೆರಿಕದ ಸೆನೆಟ್ ದೃಢಪಡಿಸಿತು.

1945: ಜಪಾನಿನಿಂದ ಹಾಂಕಾಂಗ್ ಸ್ವತಂತ್ರ.

1941: ದ್ವಿತೀಯ ಮಹಾಸಮರದ ಕಾಲದಲ್ಲಿ ನಾಝಿ ಪಡೆಗಳಿಂದ ಲೆನಿನ್ ಗ್ರಾಡ್ ಕೈವಶ ಆರಂಭ.

1934: ಕ್ರಿಕೆಟಿಗ ಬಾಲಕೃಷ್ಣ ಪಂಡರಿನಾಥ ಗುಪ್ತ (ಬಾಲೂ) ಜನನ.

1913: ಸರ್ ರಿಚರ್ಡ್ ಸ್ಟೋನ್ (1913-1991) ಜನ್ಮದಿನ. ಖ್ಯಾತ ಬ್ರಿಟಿಷ್ ಆರ್ಥಿಕ ತಜ್ಞರಾದ ಇವರು ರಾಷ್ಟ್ರೀಯ ಆದಾಯ ಲೆಕ್ಕಾಚಾರ ಕುರಿತು ಮಾಡಿದ ಕೆಲಸಕ್ಕಾಗಿ 1984ರ ನೊಬೆಲ್ ಪ್ರಶಸ್ತಿ ಗಳಿಸಿದರು.

1849: ಭಾರತದ ಖ್ಯಾತ ಕೈಗಾರಿಕೋದ್ಯಮಿ ಹಾಗೂ ದಾನಿ ನವರೋಜಿ ವಾಡಿಯಾ (1849-1999) ಜನ್ಮದಿನ. ಇವರು 1879ರಲ್ಲಿ ಉಡುಪುಗಳ ಉತ್ಪಾದನೆಗಾಗಿ ಬಾಂಬೆ ಡೈಯಿಂಗ್ ಅಂಡ್ ಟೆಕ್ಸ್ ಟೈಲ್ಸ್ ಮ್ಯಾನ್ಯುಫ್ಯಾಕ್ಚರಿಂಗ್ ಕಂಪೆನಿಯನ್ನು ಸ್ಥಾಪಿಸಿದರು.

1569: ಭಾರತದ ಮೊಘಲ್ ಸಾಮ್ರಾಟ ಜಹಾಂಗೀರ್ (1569-1627) ಜನ್ಮದಿನ. ಈತ ಅಕ್ಬರ್ನ ಪುತ್ರ.

No comments:

Advertisement