Monday, August 4, 2008

ಇಂದಿನ ಇತಿಹಾಸ History Today ಆಗಸ್ಟ್ 4

ಇಂದಿನ ಇತಿಹಾಸ

ಆಗಸ್ಟ್ 4

ಕುಡಿಯುವ ನೀರು ಸಂಗ್ರಹಕ್ಕೆ ಮಣ್ಣಿನ ಪಾತ್ರೆಗಳೇ (ಮಡಕೆ) ಶ್ರೇಷ್ಠ ಎಂದು ರಾಷ್ಟ್ರೀಯ ಪೋಷಕಾಂಶ ಸಂಸ್ಥೆ ಪ್ರಕಟಿಸಿತು. ಅಲ್ಯುಮಿನಿಯಂ, ಸ್ಟೀಲ್ ಮತ್ತು ಮಣ್ಣಿನ ಪಾತ್ರೆಗಳಲ್ಲಿ 24 ಗಂಟೆ ಕಾಲ ನೀರು ಸಂಗ್ರಹಿಸಿ ಇಟ್ಟು ಪರೀಕ್ಷಿಸಿದ ಬಳಿಕ ಸಂಸ್ಥೆ ಈ ವಿಚಾರವನ್ನು ಬಹಿರಂಗಪಡಿಸಿತು.


2007: ದೇಶದ ಮೊದಲ ಸಂಚಾರಿ ನ್ಯಾಯಾಲಯವನ್ನು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರು ಹರಿಯಾಣದ ಮೇವಟ್ ಜಿಲ್ಲೆಯಲ್ಲಿ ಉದ್ಘಾಟಿಸಿದರು.

2007: ಖ್ಯಾತ ಹಿಂದುಸ್ತಾನಿ ಗಾಯಕ ಶರತ್ ಚಂದ್ರ ಮರಾಠೆ ಅವರು ಕೇರಳದ ಪ್ರತಿಷ್ಠಿತ 13ನೇ ಬಷೀರ್ ಪುರಸ್ಕಾರಕ್ಕೆ ಆಯ್ಕೆಯಾದರು. ದೋಹಾ ಮೂಲದ `ಪ್ರವಾಸಿ ಟ್ರಸ್ಟ್' ಈ ಪ್ರಶಸ್ತಿಯನ್ನು ನೀಡುತ್ತದೆ. 35,000 ನಗದು ಹಣ ಮತ್ತು ವಿಗ್ರಹವನ್ನು ಖ್ಯಾತ ಗಾಯಕ ಮರಾಠೆ ಅವರಿಗೆ ಆಗಸ್ಟ್ 7ರಂದು ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟಿನ ಟೋನಿ ಪ್ರಕಟಿಸಿದರು. ಈ ಹಿಂದೆ ಕೇರಳದ ಮಾಜಿ ಮುಖ್ಯಮಂತ್ರಿ ನಂಬೂದಿರಿ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದರು.

2007: ಖಯ್ಯಾಂ ಎಂದೇ ಖ್ಯಾತರಾದ ಸಂಗೀತ ನಿರ್ದೇಶಕ ಮೊಹಮ್ಮದ್ ಜಹೀರ್ ಖಯ್ಯಾಂ ಹಶ್ಮಿ ಅವರು 2007ನೇ ಸಾಲಿನ ಪ್ರತಿಷ್ಠಿತ ಲತಾ ಮಂಗೇಶ್ಕರ್ ಪ್ರಶಸ್ತಿಗೆ ಆಯ್ಕೆಯಾದರು. ಸಿನೆಮಾ ಸಂಗೀತಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಮಹಾರಾಷ್ಟ್ರ ಸರ್ಕಾರ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿತು. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಮತ್ತು ಫಲಕವನ್ನು ಒಳಗೊಂಡಿದೆ.

2007: ಕರ್ನಾಟಕದಲ್ಲಿ ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ರಚನೆಗೆ ಸಂಬಂಧಿಸಿದ ಅಂತಿಮ ಆದೇಶವನ್ನು ಜುಲೈ 3ರಂದೇ ಹೊರಡಿಸಲಾಗಿದ್ದು, ಸೆಪ್ಟೆಂಬರ್ 11ರಂದು ಈ ಎರಡೂ ಜಿಲ್ಲೆಗಳು ಅಸ್ತಿತ್ವಕ್ಕೆ ಬರಲಿವೆ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕನಕಪುರದ ಜೆಟ್ಟಿದೊಡ್ಡಿಯಲ್ಲಿ ಪ್ರಕಟಿಸಿದರು. ಇಲ್ಲಿನ ಲಕ್ಕಯ್ಯ ಮತ್ತು ಚಿಕ್ಕತಾಯಮ್ಮ ದಂಪತಿಗಳ ಮನೆಯಲ್ಲಿ `ವಾಸ್ತವ್ಯ' ಹೂಡಿದ್ದ ವೇಳೆಯಲ್ಲಿ ಅವರು ಪತ್ರಕರ್ತರಿಗೆ ಈ ವಿಚಾರ ತಿಳಿಸಿದರು.

2007: ಹಿರಿಯ ಪೊಲೀಸ್ ಅಧಿಕಾರಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕ (ಡಿಐಜಿ) ಭಾ.ಶಿ. ಅಬ್ಬಾಯಿ (52) ಅವರು ಬೆಂಗಳೂರಿನಲ್ಲಿ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲದವರಾದ ಅಬ್ಬಾಯಿ ಪರಪ್ಪನ ಅಗ್ರಹಾರದ ಪೊಲೀಸ್ ವಸತಿ ನಿಲಯದಲ್ಲಿ ಪತ್ನಿ ಗಿರಿಜಾ ಹಾಗೂ ಆರನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಪುತ್ರ ಶಿವಪ್ರಸಾದ್ ಜೊತೆ ವಾಸವಿದ್ದರು. ನಾಲ್ಕು ವರ್ಷದಿಂದ ಈ ಕಾರಾಗೃಹದ ಅಧೀಕ್ಷಕರಾಗಿದ್ದರು. ಇಲಾಖೆಯಲ್ಲಿ ಸುಮಾರು 25 ವರ್ಷ ಸೇವೆ ಸಲ್ಲಿಸಿ, ರಾಷ್ಟ್ರಪತಿ ಪದಕ ಮತ್ತು ಮುಖ್ಯಮಂತ್ರಿ ಪದಕ ಪಡೆದಿದ್ದರು.
2007: ವಿವಿಧ ಧರ್ಮಗಳಲ್ಲಿ ಗೋವಿಗೆ ಅತ್ಯುನ್ನತ ಸ್ಥಾನ ನೀಡಲಾಗಿದೆ. ಗೋ ಹಿಂಸೆಯನ್ನು ಎಲ್ಲ ಧರ್ಮಗಳು ವಿರೋಧಿಸುತ್ತವೆ ಎಂದು ರಾಮಚಂದ್ರಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು. ಬೆಂಗಳೂರು ಗಿರಿನಗರದ ಶ್ರೀರಾಮಾಶ್ರಮದಲ್ಲಿ `ಗೋ ವಿಚಾರ ಮಂಥನ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು 'ಧಾರ್ಮಿಕ ವಿಧಿ- ವಿಧಾನಗಳಲ್ಲಿ ಗೋವಿಗೆ ಶ್ರೇಷ್ಠ ಸ್ಥಾನ ನೀಡಲಾಗಿದೆ. ಅಪಾರ ಗೌರವ ತೋರಲಾಗುತ್ತದೆ' ಎಂದರು.

2007: ಅಪ್ನಾ ಸಪ್ನಾ ಹಾಗೂ ಫ್ಲೈಯಿಂಗ್ ಕ್ಯಾಟ್ಸ್ ಉದ್ಯಾನನಗರಿಯಲ್ಲಿ ಸ್ಥಾಪಿಸಿರುವ `ಬೆಂಗಳೂರು ಸೆಂಟರ್ ಆಫ್ ಕ್ಯಾಟ್ಸ್' ವಾಯುಯಾನ ಶಾಲೆಯನ್ನು ಬಾಲಿವುಡ್ ನಟಿ ದಿವಾ ನೇಹಾ ಧೂಪಿಯಾ ಉದ್ಘಾಟಿಸಿದರು.

2007: ದೇಶದಲ್ಲೇ ಪ್ರಪ್ರಥಮ ಬಾರಿಗೆ 45 ದಿನಗಳ ಹಸುಳೆಯ ಭಾವಚಿತ್ರವಿರುವ ಪ್ಯಾನ್ ಕಾರ್ಡನ್ನು ಆದಾಯ ತೆರಿಗೆ ಇಲಾಖೆಯು ಚೆನ್ನೈಯಲ್ಲಿ ಈದಿನ ನೀಡಿತು. ಇದರೊಂದಿಗೆ ಭಾರತದಲ್ಲಿ ಇಂತಹ ಕಾರ್ಡ್ ಪಡೆದ ಅತ್ಯಂತ ಕಿರಿಯ ಮಗು ಎಂಬ ಖ್ಯಾತಿಗೆ ಹಸುಳೆ ಅಕ್ಷಿತಾ ಪಾತ್ರವಾಯಿತು. ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ (ಐಸಿಎಫ್) ತಂತ್ರಜ್ಞರಾಗಿ ಕೆಲಸ ನಿರ್ವಹಿಸುತ್ತಿರುವ ಎಸ್. ಬಾಲಮುರುಗನ್ ಅವರು ತಮ್ಮ ಮಗಳಿಗೆ ಪ್ಯಾನ್ ಕಾರ್ಡಿಗೆ ಅರ್ಜಿ ಸಲ್ಲಿಸಿ ಅದನ್ನು ಪಡೆಯುವ ಮೂಲಕ ಮುಂಬೈಯ 56 ದಿನಗಳ ಕೃಷ್ಣಿ ಸಮೀರ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಬಾಲಮುರುಗನ್ (35) ಅವರು ತಮಿಳು ದಿನಪತ್ರಿಕೆಯಲ್ಲಿ ಕೃಷ್ಣಿ ಬಗ್ಗೆ ಬಂದ ಲೇಖನವನ್ನು ಓದಿ ತನ್ನ ಮಗಳು ಆರ್. ಪಿ. ಅಕ್ಷಿತಾಳ ಹೆಸರಿನಲ್ಲಿ ಪ್ಯಾನ್ ಕಾರ್ಡಿಗೆ ಅರ್ಜಿ ಸಲ್ಲಿಸಿದ್ದರು. ಬಾಲಮುರುಗನ್ ಅವರು ಕೃಷ್ಣಿ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿಯುವುದಕೋಸ್ಕರವೇ ಜೂನ್ 20ರಂದು ಹುಟ್ಟಿದ ತಮ್ಮ ಮಗಳ ಹೆಸರಿನಲ್ಲಿ ಪ್ಯಾನ್ ಕಾರ್ಡಿಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಮುನ್ನ ಒರಿಸ್ಸಾದ ಮೂರು ವರ್ಷದ ಮಗು ಪ್ಯಾನ್ ಕಾರ್ಡ್ ಹೊಂದಿದ ಅತ್ಯಂತ ಕಿರಿಯ ಮಗು ಎಂದು ದಾಖಲೆ ಹೊಂದಿತ್ತು. ಇದನ್ನು ಕೃಷ್ಣಿ ಮುರಿದಿದ್ದಳು. ಕೃಷ್ಣಿ ದಾಖಲೆಯನ್ನು ಮರಿದ ಅಕ್ಷತಾ ಈಗ ಆ ದಾಖಲೆಯನ್ನು ತನ್ನದಾಗಿಸಿಕೊಂಡಳು. ತಮ್ಮ ಮಕ್ಕಳ ಹೆಸರಿನಲ್ಲಿ ಹಣ ತೊಡಗಿಸುವ ಯಾರೇ ಪಾಲಕರು/ ಪೋಷಕರು ತಮ್ಮ ಮಕ್ಕಳ ಹೆಸರಿನಲ್ಲಿ ಪಾನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬಹುದು ಎಂಬುದು ಆದಾಯ ತೆರಿಗೆ ಇಲಾಖೆಯ ಸ್ಪಷ್ಟನೆ.

2006: ಅಣು ಬಾಂಬ್ ದಾಳಿಯಿಂದ ಬದುಕಿ ಉಳಿದರೂ ವಿಕಿರಣದಿಂದ ಆನಾರೋಗ್ಯ ಪೀಡಿತರಾಗಿರುವ ತಮಗೆ ಪರಿಹಾರ ವಿತರಣೆಯಲ್ಲಿ ಸರ್ಕಾರ ಆದ್ಯತೆ ನೀಡಬೇಕು ಎಂದು ಹಿರೋಷಿಮಾದಲ್ಲಿ ಬಾಂಬ್ ದಾಳಿಯಿಂದ ಬದುಕುಳಿದ ಕೆಲವು ಮಂದಿ ಸಲ್ಲಿಸಿದ್ದ ಅರ್ಜಿಯನ್ನು ಹಿರೋಷಿಮಾ ಜಿಲ್ಲಾ ನ್ಯಾಯಾಲಯ ಎತ್ತಿ ಹಿಡಿಯಿತು. 41 ಮಂದಿ ಸಲ್ಲಿಸಿದ್ದ ಅರ್ಜಿಯನ್ನು ಅದು ಪುರಸ್ಕರಿಸಿ, 26 ಸಾವಿರ ಡಾಲರ್ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಿತು.

2006: ಒರಿಸ್ಸಾದ ಮೊದಲ ಮತ್ತು ಏಕೈಕ ಮಹಿಳಾ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಪಾತ್ರರಾಗಿದ್ದ ನಂದಿನಿ ಸತ್ಪತಿ (76) ಭುವನೇಶ್ವರದಲ್ಲಿ ನಿಧನರಾದರು. 1972 ಮತ್ತು 1974ರಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ನಂದಿನಿ, ಏಳು ಬಾರಿ ಶಾಸಕಿಯಾಗಿ ಹಾಗೂ ಒಮ್ಮೆ ಕೇಂದ್ರ ಸಚಿವೆಯಾಗಿ ಸೇವೆ ಸಲ್ಲಿಸಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೂ ಪಾತ್ರರಾಗಿದ್ದರು.

2006: ಸಿಖ್ ಸಮುದಾಯ ವಾಸಿಸುವ ನೆರೆಹೊರೆಯಲ್ಲೇ ಗುರುದ್ವಾರ ನಿರ್ಮಿಸುವ ಹಕ್ಕು ಸಿಕ್ಖರಿಗೆ ಇದೆ ಎಂದು ಸ್ಯಾನ್ ಫ್ರಾನ್ಸಿಸ್ಕೊ ನ್ಯಾಯಾಲಯ ತೀರ್ಪು ನೀಡಿತು. `ಬೆಕೆಟ್ ಫಂಡ್ ಫಾರ್ ರೆಲಿಜಿಯಸ್ ಲಿಬರ್ಟಿ' ಎಂಬ ಕಾನೂನು ಸಂಸ್ಥೆ ನ್ಯಾಯಾಲಯದಲ್ಲಿ ಸಿಖ್ ಸಮುದಾಯದ ಪರವಾಗಿ ಈ ಅರ್ಜಿ ಸಲ್ಲಿಸಿತ್ತು.

2006: ತಂಪು ಪೇಯಗಳಲ್ಲಿ ಬಳಸಲಾಗುವ ವಸ್ತು ಹಾಗೂ ರಾಸಾಯನಿಕ ಅಂಶಗಳನ್ನು ಬಹಿರಂಗಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ಕೇಂದ್ರ ಸರ್ಕಾರ, ಪೆಪ್ಸಿ ಮತ್ತು ಕೋಕಾಕೋಲಾ ಕಂಪೆನಿಗಳಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿಮಾಡಿತು.

2006: ಧಾರವಾಡ ಮತ್ತು ಗುಲ್ಬರ್ಗದಲ್ಲಿ ಸಂಚಾರಿ ಹೈಕೋರ್ಟ್ ಪೀಠದ ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆ ಪೂಜೆ ನೆರವೇರಿಸಲಾಯಿತು.

2001: ಕೆನಡಾದ ಎಡ್ಮೊಂಟನ್ನಿನ ಜಾಗತಿಕ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇಥಿಯೋಪಿಯಾದ ಓಟಗಾರ ಜೆಹಾನೇ ಅಬೇರಾ ಅವರು ಒಲಿಂಪಿಕ್ ಮತ್ತು ಜಾಗತಿಕ ಮ್ಯಾರಥಾನ್ ಎರಡೂ ಪ್ರಶಸ್ತಿಗಳನ್ನು ಬಗಲಿಗೆ ಏರಿಸಿಕೊಂಡ ಮೊದಲ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾದರು.

1981: ಕುಡಿಯುವ ನೀರು ಸಂಗ್ರಹಕ್ಕೆ ಮಣ್ಣಿನ ಪಾತ್ರೆಗಳೇ (ಮಡಕೆ) ಶ್ರೇಷ್ಠ ಎಂದು ರಾಷ್ಟ್ರೀಯ ಪೋಷಕಾಂಶ ಸಂಸ್ಥೆ ಪ್ರಕಟಿಸಿತು. ಅಲ್ಯುಮಿನಿಯಂ, ಸ್ಟೀಲ್ ಮತ್ತು ಮಣ್ಣಿನ ಪಾತ್ರೆಗಳಲ್ಲಿ 24 ಗಂಟೆ ಕಾಲ ನೀರು ಸಂಗ್ರಹಿಸಿ ಇಟ್ಟು ಪರೀಕ್ಷಿಸಿದ ಬಳಿಕ ಸಂಸ್ಥೆ ಈ ವಿಚಾರವನ್ನು ಬಹಿರಂಗಪಡಿಸಿತು.

1981: ಹಲವಾರು ಆಪಾದನೆಗಳ ಹಿನ್ನೆಲೆಯಲ್ಲಿ ವಿವಾದಗ್ರಸ್ತ ಯೋಜನಾ ಸಚಿವ ಸಿ.ಎಂ. ಇಬ್ರಾಹಿಂ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

1956: ಭಾರತದ ಮೊತ್ತ ಮೊದಲ ಪರಮಾಣು ಸಂಶೋಧನಾ ರಿಯಾಕ್ಟರ್ `ಅಪ್ಸರಾ' ಟ್ರಾಂಬೆಯಲ್ಲಿ ಕಾರ್ಯಾರಂಭ ಮಾಡಿತು.

1941: ಸಾಹಿತಿ ಜಿ.ಜಿ. ಮಂಜುನಾಥ ಜನನ.

1937: ಸಾಹಿತಿ ಎಂ. ಮಹದೇವಪ್ಪ ಜನನ.

1931: ಭಾರತದ ಮಾಜಿ ಕ್ರಿಕೆಟ್ ಆಟಗಾರ ನರೇನ್ ಶಂಕರ್ ತಮ್ ಹಾನೆ (1931-2002) ಜನ್ಮದಿನ.

1929: ಖ್ಯಾತ ಹಿನ್ನೆಲೆ ಗಾಯಕ, ಹಿಂದಿ ಚಲನಚಿತ್ರ ನಟ ಕಿಶೋರ ಕುಮಾರ್ (1929-1987) ಜನ್ಮದಿನ.

1914: ಜರ್ಮನಿಯು ಬೆಲ್ಜಿಯಂ ಮೇಲೆ ದಾಳಿ ಮಾಡಿತು ಮತ್ತು ಬ್ರಿಟನ್ ಜರ್ಮನಿಯ ವಿರುದ್ಧ ಸಮರ ಸಾರಿತು.

1906: ವಿದ್ವಾನ್ ಚಕ್ರವರ್ತಿ ಗೋಪಾಲಾಚಾರ್ಯ (4-8-1906ರಿಂದ 13-12-2005) ಅವರು ಚಾಮರಾಜ ನಗರ ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹೆಡತಲೆ ಗ್ರಾಮದಲ್ಲಿ ಜನಿಸಿದರು. ತ್ರಿಭಾಷಾ ಪಂಡಿತರಾಗಿದ್ದ ಇವರು ಪ್ರಥಮ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರಾಗಿದ್ದರು.

1885: ಪತ್ರಿಕೋದ್ಯಮಿ, ಸಾಹಿತಿ ಹುರುಳಿ ಭೀಮರಾವ್ (4-8-1885ರಿಂದ 4-8-1990) ಅವರು ಶಾಮರಾಯ- ಭಿಷ್ಟಮ್ಮ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆಯ ಹುರುಳಿ ಗ್ರಾಮದಲ್ಲಿ ಜನಿಸಿದರು.

1875: ಕಟ್ಟು ಕಥೆಗಳ `ಮಾಸ್ಟರ್' ಹ್ಯಾನ್ಸ್ ಕ್ರಿಸ್ಟಿಯನ್ ಆಂಡರ್ಸನ್ (1805-1875) ಕೊಪೆನ್ ಹೇಗನ್ ನಲ್ಲಿ ತಮ್ಮ 70ನೇ ವಯಸ್ಸಿನಲ್ಲಿ ಮೃತರಾದರು. ಇವರು ರಚಿಸಿದ ಕಟ್ಟುಕಥೆಗಳು ಜಗತ್ತಿನಾದ್ಯಂತ ಜನಪ್ರಿಯವಾಗಿವೆ.

1845: ಭಾರತದ ರಾಜಕೀಯ ಧುರೀಣ ಸರ್ ಫಿರೋಜ್ ಶಾ ಮೆಹ್ತಾ (1845-1915) ಜನ್ಮದಿನ. ಇವರು ಇಂಗ್ಲಿಷ್ ಭಾಷಾ ಪತ್ರಿಕೆ `ಬಾಂಬೆ ಕ್ರಾನಿಕಲ್' ನ ಸ್ಥಾಪಕರು ಹಾಗೂ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆಗೆ ನೆರವಾದವರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement