My Blog List

Friday, September 12, 2008

ಇಂದಿನ ಇತಿಹಾಸ History Today ಸೆಪ್ಟೆಂಬರ್ 12

ಇಂದಿನ ಇತಿಹಾಸ

ಸೆಪ್ಟೆಂಬರ್ 12

ಸಾಹಿತಿ ಹಾ.ಮಾ. ನಾಯಕ (12-9-1931ರಿಂದ 10-11-2000) ಅವರು ಶ್ರೀನಿವಾಸ ನಾಯಕ- ರುಕ್ಮಿಣಿಯಮ್ಮ ದಂಪತಿಯ ಮಗನಾಗಿ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗದ್ದೆಯಲ್ಲಿ ಜನಿಸಿದರು.

2007: ಶ್ರೀರಾಮಚಂದ್ರ ಅಥವಾ ರಾಮಾಯಣದ ಇತರ ವ್ಯಕ್ತಿತ್ವಗಳ ಅಸ್ತಿತ್ವವನ್ನು ಸಾಬೀತುಪಡಿಸುವಂತಹ ಯಾವುದೇ ಚಾರಿತ್ರಿಕ ಸಾಕ್ಷ್ಯಾಧಾರಗಳೂ ಇಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ತಿಳಿಸಿತು. ಸೇತು ಸಮುದ್ರಂ ಯೋಜನೆಯ ಮೇಲೆ ಭುಗಿಲೆದ್ದ ರಾಜಕೀಯ ವಿವಾದದ ಮಧ್ಯೆ ಸುಪ್ರೀಂಕೋರ್ಟಿಗೆ ಸೆಪ್ಟೆಂಬರ್ 11ರಂದು ಸಲ್ಲಿಸಲಾಗಿರುವ ಪ್ರಮಾಣಪತ್ರದಲ್ಲಿ ಕೇಂದ್ರ ಸರ್ಕಾರ ಇದನ್ನು ಹೇಳಿತು. ಸೇತು ಸಮುದ್ರಂ ಯೋಜನೆಯ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ `ರಾಮಸೇತು' ಅಸ್ತಿತ್ವದಲ್ಲಿದೆ ಎಂಬ ಪ್ರತಿಪಾದನೆಗಳನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಿದ ಪ್ರಮಾಪತ್ರದಲ್ಲಿ ಭಾರತೀಯ ಪ್ರಾಕ್ತನ ಸಮೀಕ್ಷೆಯು (ಎಎಸ್ಐ) ನಿರಾಕರಿಸಿತು. ಬಹುಕೋಟಿ ರೂಪಾಯಿಗಳ ವೆಚ್ಚದ ಸೇತು ಸಮುದ್ರಂ ಯೋಜನೆಯು ರಾಮೇಶ್ವರ ಹಾಗೂ ಶ್ರೀಲಂಕಾ ಮಧ್ಯೆ ಸಮೀಪದ ಸಮುದ್ರ ಮಾರ್ಗ ರೂಪಿಸುವ ಉದ್ದೇಶವನ್ನು ಹೊಂದಿದೆ. ರಾಮಾಯಣದ ಬಗ್ಗೆ ಪ್ರಸ್ತಾಪಿಸಿದ ಪ್ರಮಾಣಪತ್ರವು `ಇದಕ್ಕೆ ಸಂಬಂಧಿಸಿದ ವ್ಯಕ್ತಿತ್ವಗಳ ಅಸ್ತಿತ್ವವನ್ನು ಅಥವಾ ಅಲ್ಲಿ ವರ್ಣಿಸಲಾಗಿರುವ ಘಟನೆಗಳು ಸಂಭವಿಸಿದ್ದನ್ನು ನಿಸ್ಸಂದಿಗ್ಧವಾಗಿ ಋಜುವಾತು ಪಡಿಸುವಂತಹ `ಚಾರಿತ್ರಿಕ ದಾಖಲೆ' ಇಲ್ಲ' ಎಂದು ಹೇಳಿತು. ಯುಪಿಎ ಸರ್ಕಾರದ ಈ ಹೇಳಿಕೆಯನ್ನು `ದೈವನಿಂದನೆ' ಎಂದು ಬಿಜೆಪಿ ಟೀಕಿಸಿತು. ಸೇತುಸಮುದ್ರಂ ಯೋಜನೆ ಮುಂದುವರಿಸುವ ಕೇಂದ್ರದ ನಿರ್ಧಾರವನ್ನ್ನು ಪ್ರತಿಭಟಿಸಿ ವಿಶ್ವಹಿಂದೂ ಪರಿಷತ್ ದೇಶವ್ಯಾಪಿ ಪ್ರತಿಭಟನೆ ಸಂಘಟಿಸಿತು.

2007: ಕೋಮು ಸೌಹಾರ್ದವನ್ನು ಇನ್ನೊಂದು ಮಜಲಿಗೆ ಕೊಂಡೊಯ್ಯುವ ಪ್ರಯತ್ನವಾಗಿ ಹಳೆದೆಹಲಿಯ ಓಕ್ಲಾದಲ್ಲಿರುವ ಮದ್ರಸಾವು ಮೂರು ತಿಂಗಳ ಸಂಸ್ಕೃತ ಕೋರ್ಸ್ ಆರಂಭಿಸಿದ್ದು, 18 ವಿದ್ಯಾರ್ಥಿಗಳು ಪ್ರಮಾಣಪತ್ರ ಪಡೆದರು.

2007: ರಾಣಿ ಚೆನ್ನಮ್ಮನ ನಾಯಕತ್ವದಲ್ಲಿ 1824ರಲ್ಲಿ ನಡೆದ `ಕಿತ್ತೂರು ಸಂಗ್ರಾಮ ದೇಶದ ಪ್ರಥಮ ಸ್ವಾತಂತ್ರ್ಯಹೋರಾಟ ಎಂಬುದಾಗಿ ಮಾನ್ಯತೆ ನೀಡಬೇಕು ಎಂದು ಕರ್ನಾಟಕದ ದಾವಣಗೆರೆ ಬಸವಕೇಂದ್ರ ವಿರಕ್ತಮಠದ ಜಯಮೃತ್ಯುಂಜಯ ಸ್ವಾಮಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. 1857ರಲ್ಲಿ ನಡೆದ ಸಿಪಾಯಿದಂಗೆಯನ್ನು ಪ್ರಥಮ ಸ್ವಾತಂತ್ರ್ಯಹೋರಾಟ ಎಂದು ಕೇಂದ್ರ ಸರ್ಕಾರ ಪರಿಗಣಿಸಿದೆ. ಆದರೆ ಅದಕ್ಕಿಂತ 33 ವರ್ಷ ಮೊದಲು ಕರ್ನಾಟಕದ ಮಹಿಳೆಯೊಬ್ಬಳು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದರು. ವೀರ ಸಂಗೊಳ್ಳಿ ರಾಯಣ್ಣನ ನೆರವಿನಿಂದ ಬ್ರಿಟಿಷ್ ಸೇನಾಪತಿ ಥಾಕರೆಯನ್ನು ಕೊಂದಾಗ ಬ್ರಿಟಿಷ್ ಸಾಮ್ರಾಜ್ಯ ದಂಗು ಬಡಿದಿತ್ತು. ಆದರೆ ಪೂರ್ವಾಗ್ರಹಪೀಡಿತ ಇತಿಹಾಸಕಾರರು ಈ ಹೋರಾಟಕ್ಕೆ ಮಾನ್ಯತೆ ನೀಡಿಲ್ಲ ಎಂದು ಅವರು ದೂರಿದರು. ರಾಜ್ಯ ಸರ್ಕಾರ ಸ್ಥಾಪಿಸಿರುವ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಕೇಂದ್ರ ಸರ್ಕಾರ ನೆರವಾಗಬೇಕು, ಕೇಂದ್ರ ಶಿಕ್ಷಣ ಇಲಾಖೆ ಪಠ್ಯಪುಸ್ತಕಗಳಲ್ಲಿ ರಾಣಿ ಚೆನ್ನಮ್ಮ ಮತ್ತು ಕಿತ್ತೂರು ಸಂಗ್ರಾಮದ ಪರಿಚಯವನ್ನು ಸೇರಿಸಬೇಕು ಮತ್ತು ಅಕ್ಟೋಬರ್ 23 ರ ದಿನಾಂಕವನ್ನು ಚೆನ್ನಮ್ಮ ವಿಜಯೋತ್ಸವ ದಿನವಾಗಿ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಆಚರಿಸಬೇಕು ಎಂದು ಅವರು ಆಗ್ರಹಿಸಿದರು.

2007: ಕೇರಳ ಸರ್ಕಾರವು ಖ್ಯಾತ ಚಿತ್ರಕಲಾವಿದ ಎಮ್.ಎಫ್. ಹುಸೇನ್ ಅವರಿಗೆ ನೀಡಲು ನಿರ್ಧರಿಸಿದ `ರಾಜಾ ರವಿವರ್ಮ' ಪ್ರಶಸ್ತಿಯನ್ನು ನೀಡದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿತು. ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ಮತ್ತು ಕೆ.ಟಿ ಶಂಕರನ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಮಧ್ಯಂತರ ಆದೇಶವನ್ನು ನೀಡಿತು. ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಎರ್ನಕುಲಂನ ರವಿವರ್ಮ ಎಂಬವರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

2007: ಭ್ರಷ್ಟಾಚಾರ, ಅಕ್ರಮ ಆಸ್ತಿ ಗಳಿಕೆ ಆರೋಪಕ್ಕಾಗಿ ಫಿಲಿಪ್ಪೀನ್ಸಿನ ಮಾಜಿ ಅಧ್ಯಕ್ಷ ಜೊಸೆಫ್ ಎಸ್ಟ್ರೆಡಾ ಅವರಿಗೆ ಮನಿಲಾದ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತು. ಅಲ್ಲದೆ ಇನ್ನು ಮುಂದೆ ಯಾವುದೇ ಸಾರ್ವಜನಿಕ ಹುದ್ದೆ ಅಲಂಕರಿಸದಂತೆಯೂ ನಿಷೇಧಿಸಿತು. ಭ್ರಷ್ಟಾಚಾರ ಆರೋಪ ಹೊತ್ತಿದ್ದ ಅವರ ಪುತ್ರ ಸೆನೆಟ್ ಸದಸ್ಯ ಜಿಂಗಾಯ್ ಅವರನ್ನು ಆರೋಪ ಮುಕ್ತಗೊಳಿಸಲಾಯಿತು. 2001ರ ಸೇನಾ ಕ್ರಾಂತಿಯಲ್ಲಿ ಎಸ್ಟ್ರೆಡಾ ಅವರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಲಾಗಿತ್ತು. ರಾಜಕೀಯ ಪ್ರವೇಶಿಸುವ ಮುನ್ನ ಎಸ್ಟ್ರೆಡಾ ಜನಪ್ರಿಯ ಚಿತ್ರ ತಾರೆಯಾಗಿದ್ದರು.

2007: ಜಪಾನ್ ಮತ್ತು ರಷ್ಯದಲ್ಲಿ ಈದಿನ ನಡೆದ ದಿಢೀರ್ ರಾಜಕೀಯ ಬೆಳವಣಿಗೆಗಳಲ್ಲಿ ಉಭಯ ರಾಷ್ಟ್ರಗಳ ಪ್ರಧಾನಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ವರ್ಷದ ಹಿಂದೆಯಷ್ಟೇ ಜಪಾನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ಶಿಂಝೋ ಅಬೆ ಅವರು, ತಮ್ಮ ಸುಧಾರಣಾ ಕ್ರಮಗಳಿಗೆ ದೇಶದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನಿರ್ಧಾರ ಪ್ರಕಟಿಸಿದರು. ಎರಡನೇ ಯುದ್ಧದ ನಂತರ ಜಪಾನಿನ ಅತ್ಯಂತ ಕಿರಿಯ ಪ್ರಧಾನಿ ಎಂಬ ಅಗ್ಗಳಿಕೆಗೆ ಅಬೆ ಪಾತ್ರರಾಗಿದ್ದರು. ರಷ್ಯದಲ್ಲಿ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ಅವರಿಗೆ ಉತ್ತರಾಧಿಕಾರಿ ಆಯ್ಕೆ ಸುಗಮಗೊಳಿಸಿಕೊಳ್ಳುವ ಸಲುವಾಗಿ ಪ್ರಧಾನಿ ಮಿಖಾಯಿಲ್ ಪ್ರಾಕೋವ್ ತಮ್ಮ ಸಚಿವ ಸಂಪುಟದ ರಾಜೀನಾಮೆಯನ್ನು ಪುಟಿನ್ ಅವರಿಗೆ ಸಲ್ಲಿಸಿದರು.

2007: ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ವ್ಯಾಪ್ತಿಯ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ ನೀಡುವ 2004-05ನೇ ಸಾಲಿನ ಭಾಷಾ ಭಾರತಿ ಸನ್ಮಾನಕ್ಕೆ ಖ್ಯಾತ ರಂಗಕರ್ಮಿ, ಲೇಖಕ ಡಾ.ನಾ.ದಾಮೋದರ ಶೆಟ್ಟಿ ಆಯ್ಕೆಯಾದರು.
2006: ಮುಂಬೈಯಲ್ಲಿ 1993ರ ಡಿಸೆಂಬರ್ 12ರಂದು ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳ ಸಂಚಿನಲ್ಲಿ ಟೈಗರ್ ಮೆಮನ್ ಕುಟುಂಬದ ನಾಲ್ವರು (ಯಾಕೂಬ್ ಮೆಮನ್, ಎಸ್ಸಾ ಮೆಮನ್, ಯೂಸುಫ್ ಮೆಮನ್, ರುಬೀನಾ ಮೆಮನ್) ನೇರವಾಗಿ ಭಾಗಿಯಾಗಿದ್ದು ಅವರು ತಪ್ಪಿತಸ್ಥರು ಎಂದು ನಿಯೋಜಿತ ಟಾಡಾ ನ್ಯಾಯಾಲಯ ತೀರ್ಪು ನೀಡಿತು. ಇದೇ ಕುಟುಂಬದ ಇತರ ಮೂವರಿಗೆ ಸಂಶಯದ ಲಾಭ ಸಿಕ್ಕಿದ್ದು ಅವರನ್ನು ಖುಲಾಸೆ ಗೊಳಿಸಲಾಯಿತು. ಮೆಮನ್ ತಾಯಿ ಹನೀಫಾ ಮೆಮನ್, ಒಬ್ಬ ಸಹೋದರ ಸುಲೇಮಾನ್ ಮೆಮನ್ ಮತ್ತು ಕಿರಿಯ ಸೊಸೆ ರಾಹಿ ಮೆಮನ್ ಗೆ ಸಂಶಯದ ಲಾಭ ನೀಡಲಾಗಿದ್ದು ಈ ಮೂವರು ನಿರ್ದೋಷಿಗಳು ಎಂದು ನಿಯೋಜಿತ ಟಾಡಾ ನ್ಯಾಯಾಧೀಶ ಪಿ.ಡಿ. ಕೋಡೆ ತೀರ್ಪು ನೀಡಿದರು. 1993ರ ಡಿಸೆಂಬರ್ 12ರಂದು ಸಂಭವಿಸಿದ 13 ಸ್ಫೋಟಗಳಲ್ಲಿ 257 ಜನ ಮೃತರಾಗಿದ್ದರು. ಪ್ರಕರಣದಲ್ಲಿ 683 ಸಾಕ್ಷಿಗಳು ಒಟ್ಟು 13,000 ಪುಟಗಳ ಸಾಕ್ಷ್ಯ ನೀಡ್ದಿದರು. ಒಟ್ಟು 199 ಆರೋಪಿಗಳು ಇದ್ದ ಈ ಪ್ರಕರಣದ ತೀರ್ಪು 13 ವರ್ಷಗಳ ಬಳಿಕ ಹೊರಬಿತ್ತು.

2006: ಸವರ್ಾಧಿಕಾರಿ ಅಡಾಲ್ಫ್ ಹಿಟ್ಲರನ ಜೀವನ ಚರಿತ್ರೆ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದ ಜರ್ಮನಿಯ ಇತಿಹಾಸಕಾರ, ಪ್ರಕಾಶಕ ಜೋಚಿಮ್ ಫೆಸ್ಟ್ (79) ಬಲರ್ಿನ್ನಿನಲ್ಲಿ ನಿಧನರಾದರು. ನಾಜಿ ಸಿದ್ಧಾಂತದ ಬಗ್ಗೆ ಅಪಾರ ಜ್ಞಾನ ಹೊಂದಿದ್ದಫೆಸ್ಟ್, ಹಿಟ್ಲರ್ ಜೀವನ ಚರಿತ್ರೆಯಿಂದಾಗಿ ವಿಶ್ವಾದ್ಯಂತ ಹೆಸರು ಮಾಡಿದ್ದರು. ಹಿಟ್ಲರನ ವರ್ಚಸ್ಸು ಮತ್ತು ರಾಜಕೀಯ ಚತುರತೆಯ ಬಗ್ಗೆ ಫೆಸ್ಟ್ ವಿಶದವಾಗಿ ಬರೆದಿದ್ದರು. ಆದರೆ ಇತಿಹಾಸಕಾರರಂತೆ ಯುದ್ಧದ ಬಗ್ಗೆ ಹೆಚ್ಚು ಒತ್ತು ನೀಡಿರಲ್ಲಿಲ. ಹಿಟ್ಲರ್ ಕೊನೆಯ ದಿನಗಳ ಬಗ್ಗೆ ಅವರು ಬರೆದ ಪುಸ್ತಕವನ್ನು ಆಧರಿಸಿ ನಿರ್ಮಿಸಿದ ಜರ್ಮನ್ ಚಿತ್ರ `ದಿ ಡೌನ್ಫಾಲ್' ಆಸ್ಕರ್ ಪ್ರಶಸ್ತಿಗೆ ನಾಮಕರಣಗೊಂಡಿತ್ತು. ಹಿಟ್ಲರನ ಆಪ್ತಮಿತ್ರ ಅಲ್ಬರ್ಟ್ ಸ್ಟೀರ್ನ ಕೊಲೆಗೆ ನಡೆದ ಯತ್ನ ಇತ್ಯಾದಿ ವಿಷಯಗಳ ಬಗೆಗೂ ಫೆಸ್ಟ್ ಚಿತ್ರಣ ನೀಡಿದ್ದರು.

2006: ಕೊಲಂಬಿಯಾ ಬಾಹ್ಯಾಕಾಶ ನೌಕೆ ದುರಂತದ ಬಳಿಕ 2003ರಿಂದ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ದುರಸ್ತಿ ಕಾರ್ಯ ಪುನರಾರಂಭಗೊಂಡಿತು. ಮೂರು ಹಂತಗಳ ಗಗನ ನಡಿಗೆಯ ಮೊದಲ ಹಂತವಾಗಿ ಅಟ್ಲಾಂಟದ ಗಗನಯಾತ್ರಿಗಳಾದ ಜೋ ಟ್ಯಾನರ್ ಮತ್ತು ಹೀಡ್ ಮೇರಿ ಸ್ಟಿಫನ್ ಶಿನ್ ಪೈಪರ್ ಬಾಹ್ಯಾಕಾಶ ನಡಿಗೆ ಆರಂಭಿಸಿ ಬಾಹ್ಯಾಕಾಶ ನಿಲ್ದಾಣಕ್ಕೆ ಪವರ್ ಕೇಬಲ್ ಅಳವಡಿಸುವ ಕಾರ್ಯದಲ್ಲಿ ಮಗ್ನರಾದರು. ದುರಸ್ತಿ ಕಾರ್ಯವು ಚಂದ್ರ ಹಾಗೂ ಮಂಗಳ ಗ್ರಹಕ್ಕೆ ಮಾನವರನ್ನು ಕಳುಹಿಸುವ ಅಮೆರಿಕದ ಮಹತ್ವಾಕಾಂಕ್ಷಿ ಯೋಜನೆಯ ಸಾಕಾರದತ್ತ ಇಟ್ಟ ದೊಡ್ಡ ಹೆಜ್ಜೆ.

2006: ಇಟಲಿಯ ಫುಟ್ ಬಾಲ್ ತಂಡದ ರಕ್ಷಣಾ ಆಟಗಾರ ಮಾರ್ಕೊ ಮಾಟೆರಾಜಿ ಅವರು ಫ್ರಾನ್ಸಿನ ಆಟಗಾರ ಜಿನೇಡಿನ್ ಜಿಡಾನ್ ರ ಸಹೋದರಿ ಜಿಡಾಜಿನ್ ಅವರ ಕ್ಷಮೆ ಯಾಚಿಸಿದರು. ಜಿಡಾಜಿನ್ ಅವರ ಜೊತೆ ಗೆಳೆತನಕ್ಕೂ ಸಿದ್ಧ ಎಂದು `ಸನ್' ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು. ಜರ್ಮನಿಯಲ್ಲಿ ನಡೆದ ವಿಶ್ವಕಪ್ ಫುಟ್ ಬಾಲ್ ಚಾಂಪಿಯನ್ ಶಿಪ್ ಫೈನಲಿನಲ್ಲಿ ಫ್ರಾನ್ಸ್ ವಿರುದ್ಧದ ಪಂದ್ಯದಲ್ಲಿಮಾಟೆರಾಜಿ ಅವರು ಜಿಡಾನ್ ಸಹೋದರಿಯನ್ನು ನಿಂದಿಸಿದ್ದರು.

2006: ಪ್ರತ್ಯೇಕ ತೆಲಂಗಾಣ ರಾಷ್ಟ್ರ ಸಮಿತಿ (ಟಿ.ಆರ್.ಎಸ್) ಮುಖಂಡ ಕೆ. ಚಂದ್ರಶೇಖರ ರಾವ್ ಅವರು ತಮ್ಮ ಕರೀಂನಗರ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಒತ್ತಾಯಿಸಿ ಮೂರು ವಾರಗಳ ಹಿಂದೆ ಕೇಂದ್ರದ ಯುಪಿಎ ಕಾರ್ಮಿಕ ಸಚಿವ ಸ್ಥಾನದಿಂದ ಅವರು ಹೊರಬಂದಿದ್ದರು.

1977: ದಕ್ಷಿಣ ಆಫ್ರಿಕದ ಸವರ್ಣೀಯ ವಿದ್ಯಾರ್ಥಿ ನಾಯಕ ಸ್ಟೀವನ್ ಬಿಕೊ ಪೊಲೀಸ್ ವಶದಲ್ಲಿದ್ದಾಗ ಮೃತರಾದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಟನೆಗಳಿಗೆ ಕಾರಣವಾಯಿತು.

1971: ಸಾಹಿತಿ ಮಠಪತಿ ಆರ್. ಜಿ. ಜನನ.

1966: ವೃತ್ತಿಯಿಂದ ವಕೀಲರಾದ ಮಿಹಿರ್ ಸೇನ್ ಅವರು ಡಾರ್ಡ್ ನೆಲ್ಸ್ ಜಲಸಂಧಿಯಿಂದ ಗ್ಯಾಲಿಪೊಲಿಯವರೆಗೆ 40 ಕಿ.ಮೀ. ಈಜಿದ ಮೊದಲ ಏಷ್ಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಸಾಧನೆಗೆ ಅವರು 13 ಗಂಟೆ, 55 ನಿಮಿಷಗಳನ್ನು ತೆಗೆದುಕೊಂಡರು. 1916ರ ನವೆಂಬರ್ 16ರಂದು ಜನಿಸಿದ ಮಿಹಿರ್ ಸೇನ್ 1997ರಲ್ಲಿ ನಿಧನರಾದರು. ಈಜುವುದರಲ್ಲಿ ಹಲವಾರು ದಾಖಲೆಗಳನ್ನು ಮಿಹಿರ್ ಸೇನ್ ನಿರ್ಮಿಸಿದ್ದಾರೆ. 1958ರ ಸೆಪ್ಟೆಂಬರ್ 27ರಂದು ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿದ ಪ್ರಥಮ ಭಾರತೀಯ ಎನಿಸಿದರು. 1966ರಲ್ಲಿ ಶ್ರೀಲಂಕಾ ಮತ್ತು ಭಾರತದ ನಡುವಣ ಪಾಕ್ ಜಲಸಂಧಿಯನ್ನು ಈಜಿದ ಮೊದಲಿಗ ಎನಿಸಿದರು. ಇದೇ ವರ್ಷ ಪಾಕ್ ಜಲಸಂಧಿ, ಗಿಬ್ರಾಲ್ಟರ್ ಜಲಸಂಧಿ, ಡಾರ್ಡನೆಲ್ಸ, ಬೊಸ್ಫೋರಸ್ ಮತ್ತು ಪನಾಮಾ ಕಾಲುವೆಗಳನ್ನು ಈಜಿ ಐದು ದಾಖಲೆಗಳನ್ನು ನಿರ್ಮಿಸಿದ ಹೆಗ್ಗಳಿಕೆ ಕೂಡಾ ಇವರದಾಯಿತು. ಈ ಎಲ್ಲ ಸಾಧನೆಗಾಗಿ 1959ರಲ್ಲಿ ಪದ್ಮಶ್ರೀ, 1967ರಲ್ಲಿ ಪದ್ಮಭೂಷಣ ಪ್ರಶಸ್ತಿಗಳ ಗೌರವ ಇವರಿಗೆ ಲಭಿಸಿತು. ಗಿನ್ನೆಸ್ ವಿಶ್ವದಾಖಲೆಗಳ ಪುಸ್ತಕದ್ಲಲೂ ಇವರ ಹೆಸರು ನಮೂದಾಯಿತು.

1946: ಸಾಹಿತಿ ಕೆ. ಸರೋಜ ಜನನ.

1943: ಇಟಲಿ ಸರ್ಕಾರವು ಹೊಟೇಲ್ ಒಂದರಲ್ಲಿ ಇರಿಸಿದ್ದ ಬೆನಿಟೊ ಮುಸ್ಸೋಲಿನಿ ಅವರನ್ನು ಜರ್ಮನ್ ಪಾರಾಟ್ರೂಪರುಗಳು ತಮ್ಮ ವಶಕ್ಕೆ ತೆಗೆದುಕೊಂಡರು.

1942: ಸಾಹಿತಿ ಪದ್ಮಾ ಗುರುರಾಜ್ ಜನನ.

1941: ಎರಡನೇ ಮಹಾಯುದ್ಧದಲ್ಲಿ ಅಮೆರಿಕ ನೌಕಾಪಡೆಯಿಂದ ಮೊದಲ ಜರ್ಮನ್ ಹಡಗು ವಶ.

1940: ಐವರು ಬಾಲಕರು ಫ್ರಾನ್ಸಿನ ಮೊಂಟಿಗ್ನಾಕ್ ನ ಲಾಸ್ ಕಾಕ್ಸ್ ನಲ್ಲಿದ್ದ ಗುಹೆಗಳನ್ನು ಪತ್ತೆ ಮಾಡಿದರು. ಈ ಗುಹೆಗಳು ಇತಿಹಾಸ ಪೂರ್ವ ಕಲೆಗಳಿಗೆ ಅತ್ಯುತ್ತಮ ಉದಾಹರಣೆಗಳು ಎಂದು ನಂಬಲಾಗಿದೆ.

1940: ಖ್ಯಾತ ಸಾಹಿತಿ ಕೆ.ವಿ. ತಿರುಮಲೇಶ್ ಜನನ.

1931: ಖ್ಯಾತ ಸಾಹಿತಿ ಹಾ.ಮಾ. ನಾಯಕ (12-9-1931ರಿಂದ 10-11-2000) ಅವರು ಶ್ರೀನಿವಾಸ ನಾಯಕ- ರುಕ್ಮಿಣಿಯಮ್ಮ ದಂಪತಿಯ ಮಗನಾಗಿ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗದ್ದೆಯಲ್ಲಿ ಜನಿಸಿದರು. ಚಿಕ್ಕಂದಿನಿಂದಲೇ ಸಾಹಿತ್ಯದ ಗೀಳು ಹಿಡಿಸಿಕೊಂಡು ಅಸಂಖ್ಯಾತ ಕೃತಿಗಳನ್ನು ರಚಿಸಿರುವ ನಾಯಕ ಅವರಿಗೆ ಸ.ಸ. ಮಾಳವಾಡ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಮೈಸೂರು ವಿವಿಯ ಸುವರ್ಣ ಮಹೋತ್ಸವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇತ್ಯಾದಿ ಹಲವಾರು ಪ್ರಶಸ್ತಿಗಳು ಲಭಿಸಿವೆ.

1913: ಅಮೆರಿಕದ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೆಟಿಕ್ ಜೇಮ್ಸ್ ಕ್ಲೀವ್ ಲ್ಯಾಂಡ್ `ಜೆಸ್ಸೀ' ಓವೆನ್ಸ್ (1913-80) ಜನ್ಮದಿನ. 1936ರ ಬರ್ಲಿನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಈತ 4 ಚಿನ್ನದ ಪದಕಗಳನ್ನು ಗೆದ್ದುಕೊಂಡ. ಆಟವನ್ನು `ಆರ್ಯರ ಶ್ರೇಷ್ಠತೆ' ಪ್ರದರ್ಶನವನ್ನಾಗಿ ಮಾಡಲು ಉದ್ದೇಶಿಸಿದ್ದ ಅಡಾಲ್ಫ್ ಹಿಟ್ಲರನ ಉದ್ದೇಶಕ್ಕೆ ಇದರಿಂದ ಭಾರೀ ಧಕ್ಕೆ ಉಂಟಾಯಿತು.

1910: ಲಾಸ್ ಏಂಜೆಲಿಸ್ ನ ಸಾಮಾಜಿಕ ಕಾರ್ಯಕರ್ತೆ ಅಲೀಸ್ ವೆಲ್ಸ್ ಅವರನ್ನು ಅಮೆರಿಕದ ಪ್ರಥಮ ಮಹಿಳಾ ಪೊಲೀಸ್ ಆಗಿ ನೇಮಕ ಮಾಡಲಾಯಿತು. ಅವರಿಗೆ ಬಂಧಿಸುವ ಅಧಿಕಾರವನ್ನೂ ನೀಡಲಾಗಿತ್ತು. ಅವರು 30 ವರ್ಷಗಳ ಸೇವೆಯ ನಂತರ 1940ರಲ್ಲಿ ನಿವೃತ್ತರಾದರು.

1899: ಕರ್ನಟಕ ಶಾಸ್ತ್ರೀಯ ಸಂಗೀತ ವಿದ್ವಾಂಸ ಟಿ.ಎನ್. ಸ್ವಾಮಿನಾಥನ್ ಜನನ.

1898: ಹಿಂದಿ ಸಾಹಿತಿ ಬಲದೇವ್ ಮಿಶ್ರ ಜನನ.

1818: ಅಮೆರಿಕನ್ ಸಂಶೋಧಕ ರಿಚರ್ಡ್ ಜೋರ್ಡಾನ್ ಗ್ಯಾಟ್ಲಿಂಗ್ (1818-1903) ಜನ್ಮದಿನ. ಇವರು ಗ್ಯಾಟ್ಲಿಂಗ್ ಗನ್ (ಮಲ್ಟಿ ಬ್ಯಾರೆಲ್ ಮೆಷಿನ್ ಗನ್) ಸಂಶೋಧಿಸಿ 1862ರಲ್ಲಿ ಅದಕ್ಕೆ ಪೇಟೆಂಟ್ ಪಡೆದರು. ಚೋದ್ಯದ ಸಂಗತಿ ಏನು ಗೊತ್ತೆ: ಇವರ ಹೆಸರಿನಲ್ಲಿ ಬರುವ `ಗ್ಯಾಟ್' ನ ಅರ್ಥ `ಗನ್' ಎಂದು!

1812: ಅಮೆರಿಕನ್ ಸಂಶೋಧಕ ರಿಚರ್ಡ್ ಮಾರ್ಚ್ ಹೊ (1812-86) ಜನ್ಮದಿನ. ಇವರು ಮೊತ್ತ ಮೊದಲ ರೋಟರಿ ಪ್ರಿಂಟಿಂಗ್ ಪ್ರಸ್ಸನ್ನು ಯಶಸ್ವಿಯಾಗಿ ನಿರ್ಮಿಸಿದರು.

1779: ಸಂತ ಕಬೀರರ ಅನುಯಾಯಿ ಗರಿಬ್ದಾಸ್ ನಿಧನ.

No comments:

Advertisement