My Blog List

Thursday, October 2, 2008

ಸಮುದ್ರ ಮಥನ 4: ಮೇಧ್ಯ ಆಹಾರ ಯಾವುದು ?

ಸಮುದ್ರಮಥನ 4: ಮೇಧ್ಯ ಆಹಾರ ಯಾವುದು 
 
ಆಹಾರ ಸೇವನೆಗಿಂತ ಮುಂಚೆ ನಮ್ಮ ಶರೀರ, ಮನಸ್ಸು ಎಲ್ಲ ಶುಚಿಯಾಗಬೇಕು. ಆ ಮೇಲೆ ಆಹಾರ ಸೇವನೆ ಮಾಡಬೇಕು. ಹೀಗಿರಬೇಕು ಅಂತ. ಇದು ಸಹ ತಪಸ್ಸಿನ ಒಂದು ಅಂಗ. ನೆನಪಿಡಿ ಇಂಥ ಆಹಾರ ತಪಸ್ಸಿನಿಂದ ಬರೇ ಮೋಕ್ಷ ಪ್ರಾಪ್ತಿಗೆ ಮಾತ್ರ ಅಲ್ಲ. ಉತ್ತಮ ಬದುಕೂ ಸಾಧ್ಯ. 

ಆಹಾರದ ಬಗೆಗಿನ ವಿವರಣೆ ಈ ಸಂಚಿಕೆಯಲ್ಲೂ ಮುಂದುವರಿಯುತ್ತದೆ. 

ಹಿಂದಿನ ಸಂಚಿಕೆಗಳಲ್ಲಿ ಹಿತ, ಮಿತವೆಂದರೆ ಏನೆಂಬುದನ್ನು ತಿಳಿದುಕೊಂಡಿದ್ದೇವೆ. ಇನ್ನು ಮೇಧ್ಯವೆಂದರೇನು ? ಅಂದರೆ ಪವಿತ್ರವಾಗಿರಬೇಕು ಎಂದರ್ಥ. 

ಆಹಾರ ಪವಿತ್ರವಾಗೋದು ಹೇಗೆ ? ಪವಿತ್ರವಾಗಬೇಕು ಅಂದರೆ.....

ಆಹಾರ ಸಿದ್ಧಮಾಡಲು ಬೇಳೆಕಾಳು ಬೇಕಷ್ಟೇ ? ಅದನ್ನು ಕೊಂಡು ತರಲೇ ಬೇಕು. ಅದಕ್ಕಾಗಿ ಹಣ ಸಂಪಾದನೆ ಮಾಡಬೇಕು. ಹಾಗೆ ಸಂಪಾದಿಸುವ ಮಾರ್ಗ ಯಾವುದು ? ಆ ಮಾರ್ಗವೂ ಪವಿತ್ರವಾಗಿರಬೇಕು.

 ಸನ್ಮಾರ್ಗದಲ್ಲಿ ಹಣ ಸಂಪಾದನೆ ಮಾಡಿ ಅದರ ಮೂಲಕವೇ ಆಹಾರ ಸಂಪಾದನೆ ಮಾಡಿದಾಗ ಮಾತ್ರ ಅದು ಪವಿತ್ರವಾಗಿರಲು ಸಾಧ್ಯ. ಕೇವಲ ಎಲ್ಲವನ್ನೂ ತೊಳೆದು, ಶುದ್ಧ ಮಾಡಿ, ಒಳ್ಳೆಯ ಪಾತ್ರ್ರೆಯಲ್ಲಿ ಆಹಾರ ತಯಾರಿಸಿದ ಮಾತ್ರಕ್ಕೆ ಅದು ಪವಿತ್ರ ಆಹಾರವಾಗುವುದಿಲ್ಲ. 

ಇಷ್ಟೇ ಅಲ್ಲ ಪವಿತ್ರವಾದ ಮನಸ್ಸಿಂದ ಆಹಾರ ಸಿದ್ಧಪಡಿಸಬೇಕು. ಮನೆಯೊಡತಿ ಮೂರುಹೊತ್ತು ಕಣ್ಣೀರಿಡುತ್ತಾ ಅಡುಗೆ ಮಾಡ್ತಾ ಇದ್ರೆ ಅದು ಪವಿತ್ರವಾಗಲು ಹೇಗೆ ಸಾಧ್ಯ ?

 ಸಂತೋಷದಿಂದ, ಸುಮನಸ್ಸಿನಿಂದ ಅಡುಗೆ ಮಾಡಿ ಬಡಿಸಿದರೆ ಮಾತ್ರ ಅದು ಚೆನ್ನಾದೀತು.

ಹಾಗೆಯೇ ಆಹಾರ ತಯಾರಿಕೆಯಲ್ಲೂ ತನ್ಮಯತೆ ಬೇಕು. ಉದಾಹರಣೆಗೆ ಟಿವಿ ನೋಡ್ತಾ ನೋಡ್ತಾ ಅಡುಗೆ ಮಾಡಿದರೆ, ಅಲ್ಲಿ ಬರುವ ಸಾವು, ನೋವು, ಕಳ್ಳತನ, ಕಪಟ ಎಲ್ಲ ಭಾವನೆಗಳು ಕಲ್ಮಶಗಳು ಆಹಾರದಲ್ಲಿ ಬೆರೆಯುತ್ತದೆ.  ಅದೇ ಜೀವನದಲ್ಲೂ ಆರಂಭವಾಗುತ್ತದೆ. 

ನಮ್ಮ ಇವತ್ತಿನ ಸಂಪ್ರದಾಯ ಹಾಗೇ ತಾನೇ? ಇವತ್ತು ಟಿವಿಯಲ್ಲಿ ಏನು ಬಂತೋ ನಾಳೇ ಅದನ್ನೇ ಮನೆಯಲ್ಲಿ ಮಾಡುವುದಲ್ಲವೇ ? ಹೊರತಾಗಿ ಅಡುಗೆಯಲ್ಲಿ ಸ್ವಂತ ಕ್ರಿಯಾಶೀಲತೆ ಎಂಬುದೇ ಮರೆಯಾಗಿದೆ. 

ಅದಿರಲಿ, ಮಾಡಿದ ಅಡುಗೆಯನ್ನು ಸೇವಿಸುವಾಗಲೂ ಒಳ್ಳೇ ಮನಸ್ಸಿರಬೇಕು. ಪವಿತ್ರವಾದ ಮನಸ್ಸಿನಿಂದ ಊಟ ಮಾಡಬೇಕು. ಓಡಾಡುತ್ತ ತಿನ್ನೋದು ಅಥವಾ ಇನ್ನೇನೋ ಮಾತನಾಡುತ್ತ, ಏನನ್ನೋ ನೋಡ್ತಾ, ಏನೋ ಕೇಳ್ತಾ, ಹೀಗೆಲ್ಲ ತಿಂದರೆ ಅವೆಲ್ಲ ನಿಮ್ಮ ಆಹಾರದ ಜೊತೆಗೆ ನಿಮ್ಮೊಳಗೆ ಸೇರಿಬಿಡುತ್ತದೆ.

ಒಟ್ಟಾರೆ ಆಹಾರ ಸೇವನೆಗಿಂತ ಮುಂಚೆ ನಮ್ಮ ಶರೀರ, ಮನಸ್ಸು ಎಲ್ಲ ಶುಚಿಯಾಗಬೇಕು. ಆ ಮೇಲೆ ಆಹಾರ ಸೇವನೆ ಮಾಡಬೇಕು. ಹೀಗಿರಬೇಕು ಅಂತ. ಇದು ಸಹ ತಪಸ್ಸಿನ ಒಂದು ಅಂಗ. ನೆನಪಿಡಿ ಇಂಥ ಆಹಾರ ತಪಸ್ಸಿನಿಂದ ಬರೇ ಮೋಕ್ಷ ಪ್ರಾಪ್ತಿಗೆ ಮಾತ್ರ ಅಲ್ಲ. ಉತ್ತಮ ಬದುಕೂ ಸಾಧ್ಯ. 

-ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ,

ಶ್ರೀ ರಾಮಚಂದ್ರಾಪುರ ಮಠ 

No comments:

Advertisement