ಗ್ರಾಹಕರ ಸುಖ-ದುಃಖ

My Blog List

Wednesday, October 22, 2008

ಮಂಜೂರಾದ ಸಾಲ ಬಿಡುಗಡೆ ಮಾಡದ ಬ್ಯಾಂಕು..!

ಮಂಜೂರಾದ ಸಾಲ ಬಿಡುಗಡೆ

ಮಾಡದ ಬ್ಯಾಂಕು..!ಬ್ಯಾಂಕುಗಳು ಕೇಳದೇ ಇದ್ದರೂ ಸಾಲ ಬಿಡುಗಡೆ ಮಾಡಿ ಗ್ರಾಹಕರನ್ನು ಗೋಳಾಡಿಸುವುದು ಒಂದು ಬಗೆಯಾದರೆ, ಸಾಲ ಕೇಳಿದ ಗ್ರಾಹಕನಿಗೆ ಸಾಲ ಮಂಜೂರಾದರೂ ಅದನ್ನು ಬಡುಗಡೆ ಮಾಡದೇ ಗೋಳಾಡಿಸುವುದು ಇನ್ನೊಂದು ಬಗೆ. ಇಂತಹ ಸಂದರ್ಭವೊಂದರಲ್ಲಿ ಗ್ರಾಹಕನ ನೆರವಿಗೆ ಗ್ರಾಹಕ ನ್ಯಾಯಾಲಯ ಬಂದ ಪ್ರಕರಣ ಇದು.

ನೆತ್ರಕೆರೆ ಉದಯಶಂಕರ

ಬೇಡದೇ ಇದ್ದರೂ ಗ್ರಾಹಕನಿಗೆ ಸಾಲ ಮಂಜೂರು ಮಾಡಿ, ನಂತರ ಆತನನ್ನು ಗೋಳು ಹೊಯ್ದುಕೊಂಡ ಪ್ರಕರಣ ಓದಿದ್ದೀರಿ. ಇದು ಇದಕ್ಕೆ ವ್ಯತಿರಿಕ್ತ ಪ್ರಕರಣ. ಇಲ್ಲಿ ಸಾಲ ಮಂಜೂರು ಮಾಡಿದ ಬ್ಯಾಂಕು ಗ್ರಾಹಕನಿಗೆ ಅದನ್ನು ನೀಡದೇ ಗೋಳಾಡಿಸಿತು. ಕೊನೆಗೆ ಗ್ರಾಹಕನ ನೆರವಿಗೆ ಬಂದದ್ದು ಗ್ರಾಹಕ ಸಂರಕ್ಷಣಾ ಕಾಯ್ದೆ.

ಸಾಲ ಮಂಜೂರಾದರೂ ಅದು ಕೈಗೆ ಸಿಗದೆ ಕಷ್ಟ ನಷ್ಟ ಅನುಭವಿಸಿದ ಗ್ರಾಹಕನಿಗೆ ಈ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ಗ್ರಾಹಕ ನ್ಯಾಯಾಲಯವು ನ್ಯಾಯ ಒದಗಿಸಿತು.

ಈ ಪ್ರಕರಣದ ಅರ್ಜಿದಾರರು: ಕರ್ನಾಟಕದ ಕೋಲಾರ ಜಿಲ್ಲೆ ಕೆ.ಜಿ.ಎಫ್.ನ ಶ್ರೀನಿವಾಸಸಂದ್ರ ಅಂಚೆ ಬಾಣಾವರ ಗ್ರಾಮದ ನಿವಾಸಿ ಕೆ.ಎಂ. ವೆಂಗಮ ನಾಯ್ಡು ಅವರ ಪುತ್ರ ಕೆ.ವಿ. ರಂಗಸ್ವಾಮಿ ನಾಯ್ಡು.

ಪ್ರತಿವಾದಿಗಳು: (1) ಐಸಿಐಸಿಐ ಬ್ಯಾಂಕ್ ಲಿಮಿಟೆಡ್, ಆರ್ಎಂಎಜಿ ಕ್ರೆಡಿಟ್ ವಿಭಾಗ, ಫಾರ್ಮ್ ಈಕ್ವಿಪ್ಮೆಂಟ್ ವಿಭಾಗ, ಐಸಿಐಸಿಐ ಬ್ಯಾಂಕ್ ಟವರ್ಸ್, ಕಮೀಷನರೇಟ್ ರಸ್ತೆ, ಬೆಂಗಳೂರು. ಮತ್ತು (2) ಮೆ. ಶ್ರೀಜಾ ಅಸೋಸಿಯೇಟ್ಸ್, ಐಸಿಐಸಿಐ ಬ್ಯಾಂಕಿನ ಫ್ರಾಂಚೈಸೀ, ಕೋಲಾರ ಪಟ್ಟಣ, ಕರ್ನಾಟಕ.

ಅರ್ಜಿದಾರ ರಂಗಸ್ವಾಮಿ ನಾಯ್ಡು ಅವರು ಮೊದಲ ಪ್ರತಿವಾದಿ ಐಸಿಐಸಿಐ ಬ್ಯಾಂಕಿಗೆ ಎರಡನೇ ಪ್ರತಿವಾದಿ ಬ್ಯಾಂಕಿನ ಫ್ರಾಂಚೈಸೀ ಶ್ರೀಜಾ ಅಸೋಸಿಯೇಟ್ಸ್ ಮೂಲಕ 1.91 ಕೋಟಿ ರೂಪಾಯಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಸಾಲ ಅರ್ಜಿಗೆ ಪ್ರತಿಕ್ರಿಯೆಯಾಗಿ ಬ್ಯಾಂಕು, ತಾಂತ್ರಿಕ ಮೌಲ್ಯ ಮಾಪಕರೊಬ್ಬರನ್ನು ನೇಮಿಸಿ, ಸಾಲಕ್ಕೆ ಖಾತರಿ ನೀಡಲು ಪ್ರಸ್ತಾಪಿಸಲಾಗಿದ್ದ ಆಸ್ತಿಯ ಮೌಲ್ಯ ಅಂದಾಜು ಮಾಡುವಂತೆ ಸೂಚನೆ ನೀಡಿತು. ತಾಂತ್ರಿಕ ಮೌಲ್ಯ ಮಾಪಕರು 1.36 ಕೋಟಿ ರೂಪಾಯಿ ಸಾಲ ನೀಡಬಹುದು ಎಂದು ಶಿಫಾರಸು ಮಾಡಿ ತನ್ನ ವರದಿಯನ್ನು ಬ್ಯಾಂಕಿಗೆ ಸಲ್ಲಿಸಿದರು.

ತಾಂತ್ರಿಕ ಮೌಲ್ಯ ಮಾಪಕರ ವರದಿಯ ಆಧಾರದಲ್ಲಿ ಪ್ರತಿವಾದಿ ಬ್ಯಾಂಕು ಅರ್ಜಿದಾರನಿಗೆ 1.36 ಕೋಟಿ ರೂಪಾಯಿ ಸಾಲ ಮಂಜೂರು ಮಾಡಿತು.

ಬ್ಯಾಂಕಿನಿಂದ ಸಾಲ ಮಂಜೂರಾದ ಹಿನ್ನೆಲೆಯಲ್ಲಿ ರಂಗಸ್ವಾಮಿ ನಾಯ್ಡು ಅವರು ಬಾಣಾವರ ಗ್ರಾಮದ ಸರ್ವೆ ನಂಬರ್ 72, 73 ಮತ್ತು 74ರ ಭೂಮಿಯನ್ನು ಅಡಮಾನ ಒಪ್ಪಂದದ ಪ್ರಕಾರ ಬ್ಯಾಂಕಿಗೆ ಅಡವಿಟ್ಟರು. ಈ ಅಡಮಾನ ಒಪ್ಪಂದಕ್ಕೆ ಅರ್ಜಿದಾರರು ಮತ್ತು ಒಂದನೇ ಪ್ರತಿವಾದಿ ಬ್ಯಾಂಕಿನ ಸಿಬ್ಬಂದಿಯೊಬ್ಬರು ಸಹಿ ಹಾಕಿದರು.

ಆದರೆ, ದಿನಗಳು ಕಳೆದರೂ ಮಂಜೂರಾದ ಸಾಲವನ್ನು ಪ್ರತಿವಾದಿ ಬ್ಯಾಂಕು ಬಿಡುಗಡೆ ಮಾಡಲಿಲ್ಲ.  ಅಂತಹ ಸಾಲ ಮಂಜೂರಾಗಿಯೇ ಇಲ್ಲ ಎಂದು ಬ್ಯಾಂಕು ಹಣ ಬಿಡುಗಡೆ ನಿರಾಕರಣೆಗೆ ಕಾರಣ ನೀಡಿತು. ಈ ಮಧ್ಯೆ ಸಾಲ ಮಂಜೂರಾದ ಧೈರ್ಯದಲ್ಲಿ ಅರ್ಜಿದಾರರು ಕೋಳಿ ಪೌಲ್ಟ್ರಿ ಫಾರಂ ನಿರ್ಮಿಸುವ ಸಲುವಾಗಿ ಭೂಮಿಯನ್ನು ಸಮತಟ್ಟು ಗೊಳಿಸಿದ್ದಲ್ಲದೆ, ಮರಗಳನ್ನೂ ಕಡಿಸಿದರು. ಅರ್ಜಿದಾರರ ಪ್ರಕಾರ ಈ ಎಲ್ಲ ಕೆಲಸಗಳಿಗಾಗಿ ಅವರಿಗೆ 77.35 ಲಕ್ಷ ರೂಪಾಯಿ ವೆಚ್ಚ ತಗುಲಿತು.

ಇಷ್ಟೆಲ್ಲ ಆದ ಬಳಿಕ ಪ್ರತಿವಾದಿ ಒಂದನೇ ಬ್ಯಾಂಕು ಮಂಜೂರಾದ ಸಾಲ ಬಿಡುಗಡೆ ಮಾಡಲು ನಿರಾಕರಿಸಿದ ಪರಿಣಾಮವಾಗಿ ಈ ವೆಚ್ಚದ ಹಣ ನಿಪ್ಪ್ರಯೋಜಕಗೊಂಡು ತಮಗೆ ಅಪಾರ ನಷ್ಟವಾಯಿತು ಎಂದು ದೂರಿದ ರಂಗಸ್ವಾಮಿ, ಬ್ಯಾಂಕಿನ ಈ ವರ್ತನೆ ಸೇವಾಲೋಪ ಎಂದು ಆಪಾದಿಸಿ ತಮಗೆ 40 ಲಕ್ಷ ರೂಪಾಯಿ ಪರಿಹಾರ ಕೊಡಿಸುವಂತೆ ಕೋರಿ ರಾಜ್ಯ ಗ್ರಾಹಕ ನ್ಯಾಯಾಲಯದ ಮೆಟ್ಟಲೇರಿದರು.

ಅಧ್ಯಕ್ಷ ನ್ಯಾಯಮೂರ್ತಿ ಚಂದ್ರಶೇಖರಯ್ಯ ಮತ್ತು ಸದಸ್ಯರಾದ ರಮಾ ಅನಂತ್ ಹಾಗೂ ಟಿ. ಹರಿಯಪ್ಪ ಗೌಡ ಅವರನ್ನು ಒಳಗೊಂಡ ಪೀಠವು, ಅರ್ಜಿದಾರರ ಪರ ವಕೀಲ ಎಸ್. ಪ್ರಭಾಕರ ರಾವ್ ಮತ್ತು ಮೊದಲ ಪ್ರತಿವಾದಿ ಬ್ಯಾಂಕಿನ ಪರ ವಕೀಲರಾದ ಕೆ. ಪ್ರಕಾಶ್ ಅವರ ಅಹವಾಲು ಆಲಿಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು.

ಒಂದನೇ ಪ್ರತಿವಾದಿ ಐಸಿಐಸಿಐ ಬ್ಯಾಂಕಿನ ಪರ ವಕೀಲರು ಅರ್ಜಿದಾರರ ಎಲ್ಲ ಪ್ರತಿಪಾದನೆಗಳನ್ನು ನಿರಾಕರಿಸಿದರು. ಅರ್ಜಿದಾರರು ಸಾಲ ಮಂಜೂರಾತಿ ದಾಖಲೆಗೆ ಸಹಿ ಹಾಕಿದ ಬ್ಯಾಂಕಿನ ಸಿಬ್ಬಂದಿ ಶಾಮೀಲಾಗಿ ಆಸ್ತಿ ಅಡಮಾನ ಪತ್ರ ತಯಾರಿಸಿದರೇ ಹೊರತು ಬ್ಯಾಂಕು ಸಾಲ ಮಂಜೂರು ಮಾಡಿಲ್ಲ. ಆದ್ದರಿಂದ ಬ್ಯಾಂಕು  ಪರಿಹಾರ ನೀಡಬೇಕಾದ ಅಗತ್ಯವಿಲ್ಲ ಎಂದು  ಒಂದನೇ ಪ್ರತಿವಾದಿ ಪರ ವಕೀಲರು ಪ್ರತಿಪಾದಿಸಿದರು.

ನೋಂದಣಿ ಉದ್ದೇಶಕ್ಕಾಗಿ ಬ್ಯಾಂಕಿನ ಸಿಬ್ಬಂದಿ ನೀಡಿದ್ದ ಪತ್ರದ ಪ್ರತಿಯನ್ನು ಅರ್ಜಿದಾರರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈ ಪತ್ರದಲ್ಲಿ ನೋಂದಣಿ ಕಾಲದಲ್ಲಿ ತಮ್ಮ ಹಾಜರಾತಿಗೆ ವಿನಾಯ್ತಿ ನೀಡುವಂತೆ ಬ್ಯಾಂಕ್ ಸಿಬ್ಬಂದಿ ಕೋರಿದ್ದರು. ಅಡಮಾನ ಪತ್ರದಲ್ಲಿ ಸಾಲಗಾರರ ಮನವಿ ಮೇರೆಗೆ ಬ್ಯಾಂಕ್ 1.36 ಕೋಟಿ ಸಾಲ ಮಂಜೂರು ಮಾಡಿದ್ದು ಸಾಲಗಾರರಿಗೆ ಸೂಕ್ತ ಕಾಲಕ್ಕೆ ಈ ಹಣ ಒದಗಿಸಲು ಒಪ್ಪಿದೆ ಎಂದು ಸ್ಪಷ್ಟವಾಗಿ ಬರೆದುದನ್ನು ನ್ಯಾಯಾಲಯ ಗಮನಿಸಿತು.

ಬ್ಯಾಂಕ್ ಸಿಬ್ಬಂದಿ ಬರೆದ ಪತ್ರ ಮತ್ತು ಅಡಮಾನ ಪತ್ರದ ವಿವರಗಳು ಬ್ಯಾಂಕು ಅರ್ಜಿದಾರನಿಗೆ ಸಾಲ ನೀಡಲು ಒಪ್ಪಿತ್ತು ಎಂಬುದನ್ನು ಸಾಬೀತುಪಡಿಸುತ್ತವೆ. ಈ ಪತ್ರ ಹಾಗೂ ಅಡಮಾನ ಪತ್ರಕ್ಕೆ ಸಹಿ ಹಾಕಿರುವ ವ್ಯಕ್ತಿ ಬ್ಯಾಂಕಿನ ಸಿಬ್ಬಂದಿ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಅಡಮಾನ ಸಾಲ ಪತ್ರಕ್ಕೆ ಸಹಿ ಹಾಕುವ ಅಧಿಕಾರ ಅವರಿಗೆ ಇರಲಿಲ್ಲವಾದ್ದರಿಂದ ಬ್ಯಾಂಕು ಅಡಮಾನ ಸಾಲಪತ್ರಕ್ಕೆ ಹೊಣೆಯಲ್ಲ ಎಂಬ ಒಂದನೇ ಪ್ರತಿವಾದಿ ಬ್ಯಾಂಕ್ ವಾದಿಸಿತಾದರೂ ನ್ಯಾಯಾಲಯ ಅದನ್ನು ಒಪ್ಪಲಿಲ್ಲ.

ಬ್ಯಾಂಕಿನ ನೌಕರ ಅಡಮಾನ ಪತ್ರಕ್ಕೆ ತನ್ನ ನೌಕರಿಯ ಅವಧಿಯಲ್ಲೇ ಸಹಿ ಹಾಕಿದ್ದರಿಂದ ಮಾಲೀಕನೂ ಅದಕ್ಕೆ ಬದ್ಧನಾಗುತ್ತಾನೆ. ಸಾಲ ಸಂಬಂಧಿ ಪತ್ರಗಳಿಗೆ ಬ್ಯಾಂಕಿನ ಸಿಬ್ಬಂದಿಯೊಬ್ಬರು ಸಹಿ ಹಾಕಿದಾಗ ಸಾಮಾನ್ಯ ವ್ಯಕ್ತಿ ಆತನೇ ದಾಖಲೆಗಳಿಗೆ ಸಹಿ ಹಾಕುವ ಅಧಿಕಾರ ಹೊಂದಿರುತ್ತಾನೆ ಎಂದು ನಂಬುವುದು ಸಹಜ.  ಇಂತಹ ನಂಬಿಕೆಯಿಂದಲೇ ಈ ಪ್ರಕರಣದಲ್ಲಿ ಅರ್ಜಿದಾರರು ಕೋಳಿ ಫಾರಂ ನಿರ್ಮಾಣ ಸಲುವಾಗಿ ಶೆಡ್ ಕಟ್ಟಲು, ನೆಲ ಸಮತಳ ಮಾಡಲು ಹಣ ವೆಚ್ಚ ಮಾಡಿದ್ದಾರೆ. ಆದ್ದರಿಂದ ಈ ನಷ್ಟ ಭರಿಸಲು ಪ್ರತಿವಾದಿ ಬ್ಯಾಂಕ್ ಬಾಧ್ಯವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಅರ್ಜಿದಾರರು ತಮಗೆ 77.35 ಲಕ್ಷ ರೂಪಾಯಿ ನಷ್ಟವಾಗಿದ್ದರೂ 40 ಲಕ್ಷ ರೂಪಾಯಿ ನಷ್ಟ ಪರಿಹಾರ ಮಾತ್ರ ಕೇಳಿರುವುದಾಗಿ ಹೇಳಿದ್ದಾರೆ. ಆದರೆ ಅಷ್ಟೊಂದು ವೆಚ್ಚದ ಬಗ್ಗೆ ಸಮರ್ಪಕ ಸಾಕ್ಷ್ಯಾಧಾರ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಭೂಮಿ ಸಮತಟ್ಟು ಕಾಲದಲ್ಲಿ ಉರುಳಿಸಲಾಯಿತೆನ್ನಲಾದ ಹಲವಾರು ಮರಮಟ್ಟುಗಳ ಮಾರಾಟದಿಂದ ಬಂದಿರಬಹುದಾದ ಆದಾಯ ಲೆಕ್ಕಾಚಾರ ಒದಗಿಸಿಲ್ಲ. ತನ್ಮೂಲಕ ತಮಗಾದ ನಷ್ಟವನ್ನು ಅವರು ತಗ್ಗಿಸಿಕೊಂಡಿರುವ ಸಾಧ್ಯತೆ ಇದ್ದರೂ ಈಬಗ್ಗೆ ವಿವರ ನೀಡಿಲ್ಲ. ಈ ಕಾರಣ ಒಂದು ಲಕ್ಷ ರೂಪಾಯಿಗಳನ್ನು ನಷ್ಟ ಪರಿಹಾರವಾಗಿ ನೀಡುವುದು ನ್ಯಾಯೋಚಿತವಾಗುತ್ತದೆ ಎಂದು ನ್ಯಾಯಾಲಯ ಭಾವಿಸಿತು.

ಈ ಹಿನ್ನೆಲೆಯಲ್ಲಿ ಒಂದು ಲಕ್ಷ ರೂಪಾಯಿಗಳನ್ನು ಶೇಕಡಾ 6 ಬಡ್ಡಿ ಸಹಿತವಾಗಿ ಸೇವಾಲೋಪಕ್ಕಾಗಿ ಅರ್ಜಿದಾರನಿಗೆ ಪಾವತಿ ಮಾಡಬೇಕು ಎಂದು ನ್ಯಾಯಾಲಯ ಮೊದಲ ಪ್ರತಿವಾದಿ ಬ್ಯಾಂಕಿಗೆ ಆಜ್ಞಾಪಿಸಿತು.

No comments:

Advertisement