My Blog List

Sunday, October 26, 2008

ಇಂದಿನ ಇತಿಹಾಸ History Today ಅಕ್ಟೋಬರ್ 26

ಇಂದಿನ ಇತಿಹಾಸ

ಅಕ್ಟೋಬರ್ 26

 ಖ್ಯಾತ ಬಾಲಿವುಡ್ ನಟಿ, ರಾಜ್ಯಸಭಾ ಸದಸ್ಯೆ ಶಬಾನಾ ಆಜ್ಮಿ ಅವರಿಗೆ ಲಂಡನ್ನಿನ ಹೌಸ್ ಆಫ್ ಕಾಮನ್ಸಿನಲ್ಲಿ ಪ್ರಸ್ತುತ ವರ್ಷದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಗಾಂಧಿ ಪ್ರತಿಷ್ಠಾನ ಶಾಂತಿ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಮುಂಬೈಯ ಕೊಳಚೆ ಪ್ರದೇಶದ ಜನರ ಮೂಲಭೂತ ಹಕ್ಕುಗಳಿಗಾಗಿ `ನಿವಾರ ಹಕ್' ಸಂಘಟನೆ ಸ್ಥಾಪಿಸಿ ಕಳೆದ ಎರಡು ದಶಕಗಳಿಂದ ನಡೆಸುತ್ತಾ ಬಂದ ಹೋರಾಟವನ್ನು ಗುರುತಿಸಿ ಈ ಗೌರವ ನೀಡಲಾಯಿತು. 

2007: ಹುಬ್ಬಳ್ಳಿಯ ಪ್ರತಿಷ್ಠಿತ ಡಾ.ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿಗೆ ಕಾಂತಾವರದ ಡಾ.ನಾ. ಮೊಗಸಾಲೆ ಅವರು ಆಯ್ಕೆಯಾದರು. ಅವರು ಕವಿ, ಕಾದಂಬರಿಕಾರ ಹಾಗೂ ಸಾಹಿತ್ಯ ಸಂಘಟಕರಾಗಿ ಪ್ರಸಿದ್ಧರು. 2006ನೇ ಸಾಲಿನ ಅತ್ಯುತ್ತಮ ಕವನ ಸಂಕಲನವೆಂದು ಡಾ.ನಾ. ಮೊಗಸಾಲೆ ಅವರು ಬರೆದ `ಇಹಪರದ ಕೊಳ' ಆಯ್ಕೆಯಾಯಿತು. ಡಾ.ಡಿ.ಎಸ್. ಕರ್ಕಿ ಜನ್ಮ ಶತಮಾನೋತ್ಸವದ ಈ ವರ್ಷದಲ್ಲಿ ವಿಶೇಷವಾಗಿ ನೀಡಲಾದ ಕಾವ್ಯ ಪ್ರಶಸ್ತಿಯನ್ನು ವಿಭಾ ಅವರು ಬರೆದ `ಜೀವ ಮಿಡಿತದ ಸದ್ದು' ಕವನ ಸಂಕಲನಕ್ಕೆ ಘೋಷಿಸಲಾಯಿತು.

2007: ಕೌಟುಂಬಿಕ ದೌರ್ಜನ್ಯ ಕಾಯ್ದೆ ಜಾರಿಯಾದ ಒಂದು ವರ್ಷದ ಅವಧಿಯೊಳಗೆ ದೇಶಾದ್ಯಂತ ಸುಮಾರು 10 ಸಾವಿರ ಪ್ರಕರಣಗಳು ದಾಖಲಾಗಿದ್ದು, ಹಲವು ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿ ಕಾಯ್ದೆ ಜಾರಿ ತರುವಲ್ಲಿ ಹಿಂದುಳಿದಿವೆ ಎಂದು ವರದಿಯೊಂದು ತಿಳಿಸಿತು. 2007ರ ಜುಲೈ 31ರಂದು ಕೊನೆಗೊಂಡ ಅವಧಿಯಲ್ಲಿ ಈ ಕಾಯ್ದೆಯಡಿ ಒಟ್ಟು 7,913 ದೂರುಗಳು ದಾಖಲಾಗಿದ್ದು, ಇಲ್ಲಿಯವರೆಗೆ ದೂರುಗಳ ಸಂಖ್ಯೆ ಹತ್ತು ಸಾವಿರಕ್ಕೆ ತಲುಪಿದೆ. ಇವುಗಳಲ್ಲಿ ಬಹಳಷ್ಟು ಪ್ರಕರಣಗಳ ವಿಚಾರಣೆ ಇನ್ನೂ ಬಾಕಿ ಇದೆ. ರಾಜಸ್ಥಾನದಲ್ಲಿ ಅತಿ ಹೆಚ್ಚು ಅಂದರೆ 3,440 ಪ್ರಕರಣಗಳು ಈ ಕಾಯ್ದೆಯಡಿ ದಾಖಲಾಗಿವೆ. ನಂತರ ಕೇರಳ (1,028), ಆಂಧ್ರ ಪ್ರದೇಶ (731), ದೆಹಲಿ (607), ಬಿಹಾರ (64), ಪಶ್ಚಿಮ ಬಂಗಾಳ (54) ಹಾಗೂ ಒರಿಸ್ಸಾ (12)ದಲ್ಲಿ ಪ್ರಕರಣಗಳು ವರದಿಯಾಗಿವೆ. ದೆಹಲಿ ಹಾಗೂ ಆಂಧ್ರ ಪ್ರದೇಶದಲ್ಲಿ ಸುರಕ್ಷಾ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಇನ್ನುಳಿದ ರಾಜ್ಯಗಳಲ್ಲಿ ಪೂರ್ಣಾವಧಿಗೆ ಯಾರನ್ನೂ ನೇಮಿಸಿಲ್ಲ ಎಂದು ವರದಿ ಹೇಳಿತು.

2007: ಎಲ್.ಕೆ. ಅಡ್ವಾಣಿ ಭೇಟಿ ಸಂದರ್ಭದಲ್ಲಿ ಸಂಭವಿಸಿದ 1998ರ ಕೊಯಮತ್ತೂರು ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಫಿ ಸಾಕ್ಷಿಯಾಗಿದ್ದ ಮೈಸೂರಿನ ರಿಯಾಜ್-ಉಲ್-ರೆಹಮಾನ್ ಅವರನ್ನು ಕೊಯಮತ್ತೂರಿನ ವಿಶೇಷ ನ್ಯಾಯಾಲಯ ಬಿಡುಗಡೆಗೊಳಿಸಿತು. ರಿಯಾಜ್ ಅವರನ್ನು ಸಾಕ್ಷಿಯನ್ನಾಗಿ ಪರಿಗಣಿಸಲಾಗಲಿ ಅಥವಾ ಅವರ ವಿರುದ್ಧ ವಿಚಾರಣೆ ನಡೆಸಲಾಗಲಿ ಸರ್ಕಾರಿ ವಕೀಲರು ಬಯಸಲಿಲ್ಲ. ಆದ್ದರಿಂದ ಅವರನ್ನು ಬಿಡುಗಡೆ ಮಾಡುತ್ತಿರುವುದಾಗಿ ನ್ಯಾಯಮೂತರ್ಿ ಕೆ. ಉದಿರಪತಿ ಹೇಳಿದರು. ಮೈಸೂರಿನವರಾದ ರಿಯಾಜ್ ಸ್ಫೋಟಕ ವಸ್ತುಗಳ ವ್ಯಾಪಾರಿ. ಕೊಯಮತ್ತೂರಿನಲ್ಲಿ ಸ್ಫೋಟಗೊಂಡ ಬಾಂಬುಗಳನ್ನು ತಯಾರಿಸಲು ಸ್ಪೋಟಕ ವಸ್ತುಗಳನ್ನು ಇವರು ಪೂರೈಸಿದ್ದರು ಎಂದು ಆರೋಪಿಸಲಾಗಿತ್ತು. ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರಿಗೆ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿತು. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 43 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದಂತಾಯಿತು. 1998ರ ಫೆಬ್ರುವರಿ 14ರಂದು ನಡೆದ ಸ್ಫೋಟದಲ್ಲಿ 58 ಜನರು ಹತ್ಯೆಗೀಡಾಗಿದ್ದರು. 43 ಮಂದಿ ಶಿಕ್ಷಿತರ ಪೈಕಿ 26 ಜನರಿಗೆ ಎರಡು ಅವಧಿಗೆ ಜೀವಾವಧಿ ಶಿಕ್ಷೆ, 15 ಜನರಿಗೆ ಒಂದು ಅವಧಿಗೆ ಜೀವಾವಧಿ ಶಿಕ್ಷೆ, ಒಬ್ಬನಿಗೆ ಮೂರು ಅವಧಿಗೆ ಜೀವಾವಧಿ ಶಿಕ್ಷೆ ಹಾಗೂ ಇನ್ನೊಬ್ಬನಿಗೆ ನಾಲ್ಕು ಅವಧಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

2007: ವಿದೇಶಿ ಬಂಡವಾಳ ಹರಿವಿಗೆ ಕಡಿವಾಣ ವಿಧಿಸುವ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಕ್ರಮಗಳಿಂದ ಧೃತಿಗೆಡದ ಹೂಡಿಕೆದಾರರು, ಷೇರು ಖರೀದಿಗೆ ಆದ್ಯತೆ ನೀಡಿದ್ದರಿಂದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಇನ್ನೊಂದು ದಾಖಲೆ ಬರೆಯಿತು. ಕಳೆದ ವಾರ ದಾಖಲೆ ಮಟ್ಟದಿಂದ (19 ಸಾವಿರ ಅಂಶಗಳಿಂದ) ತೀವ್ರ ಕುಸಿತ ದಾಖಲಿಸಿದ್ದ ಸೂಚ್ಯಂಕವು ಈದಿನದ ವಹಿವಾಟಿನಲ್ಲಿ 472 ಅಂಶಗಳ ಏರಿಕೆ ದಾಖಲಿಸಿ, 19,243 ಅಂಶಗಳೊಂದಿಗೆ ವಹಿವಾಟು ಕೊನೆಗೊಳಿಸಿ, ಇನ್ನೊಂದು ಮೈಲಿಗಲ್ಲು ದಾಟಿತು.  ರಾಷ್ಟ್ರೀಯ ಷೇರುಪೇಟೆ (ಎನ್ಎಸ್ಇ) ನಿಫ್ಟಿ ಕೂಡ 5702 ಅಂಶಗಳಿಗೆ ಏರಿಕೆ ಕಂಡು ಹೊಸ ದಾಖಲೆ ಬರೆಯಿತು.  

2007: ಅಧಿಕಾರ ದುರುಪಯೋಗ ಹಾಗೂ ಭ್ರಷ್ಟಾಚಾರ ಆರೋಪದ ಮೇಲೆ ಜೈಲು ಸೇರಿದ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಎರಡು ಪ್ರಕರಣಗಳಲ್ಲಿ ಆರೋಪ ಮುಕ್ತರಾದರು. ಭ್ರಷ್ಟಾಚಾರದ ಎರಡು ಪ್ರಕರಣಗಳಲ್ಲಿ ಖಲೀದಾ ವಿರುದ್ಧ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ಭ್ರಷ್ಟಾಚಾರ ನಿರ್ಮೂಲನೆ ಆಯೋಗ ತಿಳಿಸಿತು. 

2006: ಗಂಡ ಅಥವಾ ಸಂಗಾತಿ ಮತ್ತು ಅವರ ಸಂಬಂಧಿಕರು ನೀಡುವ ಹಿಂಸೆಯಿಂದ ರಕ್ಷಿಸಲು ರೂಪಿಸಲಾಗಿರುವ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ- 2005 ಭಾರತದಲ್ಲಿ ಜಾರಿಗೆ ಬಂತು. ಈ ಕಾಯ್ದೆಯ ಅನುಷ್ಠಾನದೊಂದಿಗೆ ಪತ್ನಿಯರನ್ನು ಹೊಡೆಯುವ ಅಥವಾ ಅವಮಾನಿಸುವ ಗಂಡಂದಿರು ಸೆರೆಮನೆ ಶಿಕ್ಷೆ ಅಥವಾ 20,000 ರೂಪಾಯಿಗಳವರೆಗೆ ದಂಡ ತೆರಬೇಕಾಗಿ ಬರುತ್ತದೆ. ಸಂಸತಿನಲ್ಲಿ ಈ ಕಾಯ್ದೆಯನ್ನು ಕಳೆದ ವರ್ಷದ ಆಗಸ್ಟಿನಲ್ಲಿ ಮಂಡಿಸಿ, ಸೆಪ್ಟೆಂಬರ್ 13ರಂದು ರಾಷ್ಟ್ರಪತಿಗಳಿಂದ ಅನುಮೋದನೆ ಪಡೆಯಲಾಗಿತ್ತು. ಕಾಯ್ದೆಯನ್ನು 2006ರ ಅಕ್ಟೋಬರ್ 26ರಂದು ಜಾರಿಗೆ ತರಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಅಧಿಸೂಚನೆ ಹೊರಡಿಸಿತ್ತು. ನೇರ ಅಥವಾ ದೈಹಿಕ, ಲೈಂಗಿಕ, ಮೌಖಿಕ ಬೈಗುಳ, ಮಾನಸಿಕ ಅಥವಾ ಆರ್ಥಿಕ ಕಿರುಕುಳಗಳು, ಬೆದರಿಕೆ ಹಾಕುವುದು,  ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಬರುತ್ತವೆ. ಹೆಚ್ಚು ವರದಕ್ಷಿಣೆ ತರುವಂತೆ ಮಹಿಳೆ ಅಥವಾ ಅವಳ ಸಂಬಂಧಿಕರನ್ನು ಪೀಡಿಸುವುದೂ ಈ ಕಾಯ್ದೆಯಡಿ ಸೇರುತ್ತದೆ. ಹಿಂಸೆ ನೀಡಿದ ವ್ಯಕ್ತಿಯ ಜೊತೆಗೆ ಒಂದೇ ಮನೆಯಲ್ಲಿ ಒಟ್ಟಾಗಿ ಬಾಳಿದ್ದರೆ, ರಕ್ತ ಸಂಬಂಧ ಹೊಂದಿದ್ದರೆ ಅಥವಾ ಮದುವೆ ಇಲ್ಲವೇ ಮದುವೆ ಮಾದರಿಯ ಬೇರಾವುದೇ ರೀತಿಯ ಬಾಂಧವ್ಯ ಅಥವಾ ದತ್ತು ಸ್ವೀಕಾರದಂತಹ ಬಾಂಧವ್ಯ ಹೊಂದಿದ್ದರೆ ಅಂತಹ ಮಹಿಳೆಗೆ ಕಾನೂನು ರಕ್ಷಣೆ ಒದಗಿಸುತ್ತದೆ. ಇದಲ್ಲದೆ ದೈಹಿಕವಾಗಿ ಹೊಡೆಯುವುದು, ಕಪಾಳಮೋಕ್ಷ ಮಾಡುವುದು, ವ್ಯಂಗ್ಯವಾಡುವುದು, ಒದೆಯುವುದು, ತಳ್ಳುವುದು, ಬಲಾತ್ಕಾರದ ಲೈಂಗಿಕತೆ, ಪತ್ನಿ ಅಥವಾ ಜೊತೆಗಾತಿಯನ್ನು ನಗ್ನ ಇಲ್ಲವೇ ಅಸಭ್ಯ ಚಿತ್ರಗಳನ್ನು ನೋಡುವಂತೆ ಬಲಾತ್ಕರಿಸುವುದು, ಮಕ್ಕಳನ್ನು ಲೈಂಗಿಕವಾಗಿ ಹಿಂಸಿಸುವುದು, ಹೆಸರು ಹಿಡಿದು ಕೂಗಿ ಅವಮಾನಿಸುವುದು, ಪತ್ನಿಯನ್ನು ಕೆಲಸಕ್ಕೆ ಸೇರದಂತೆ ತಡೆಯುವುದು, ಅಥವಾ ಕೆಲಸ ಬಿಡುವಂತೆ ಒತ್ತಾಯಿಸುವುದು ಕೂಡಾ ಈ ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ. ಕಾಯ್ದೆಯ ಅತ್ಯಂತ ಪ್ರಮುಖ ವೈಶಿಷ್ಟ್ಯವೇನೆಂದರೆ ಮಹಿಳೆಗೆ ವಸತಿ ಸೌಕರ್ಯದ ಹಕ್ಕು. ಮಹಿಳೆಗೆ ತವರು ಮನೆಯಲ್ಲಿ ವಾಸಿಸುವ ಮತ್ತು ಪಾಲಾದ ಮನೆಯಲ್ಲಿ ಆಕೆಗೆ ಯಾವುದೇ ಅಧಿಕಾರ ಇರಲಿ ಅಥವಾ ಇಲ್ಲದಿರಲಿ ವಾಸಿಸುವ ಹಕ್ಕನ್ನು  ಈ ಕಾನೂನು ನೀಡುತ್ತದೆ.  ಸಂರಕ್ಷಣಾ ಆದೇಶ ಅಥವಾ ತಾತ್ಕಾಲಿಕ ಸಂರಕ್ಷಣಾ ಆದೇಶವನ್ನು ಪ್ರತಿವಾದಿ ಉಲ್ಲಂಘಿಸುವುದನ್ನು ಕಾನೂನು ಶಿಕ್ಷಾರ್ಹ, ಜಾಮೀನು ರಹಿತ ಅಪರಾಧವನ್ನಾಗಿ ಮಾಡಿದೆ. ಈ ಅಪರಾಧಕ್ಕೆ ಒಂದು ವರ್ಷದವರೆಗೆ ಸೆರೆವಾಸ ಹಾಗೂ/ ಅಥವಾ 20,000 ರೂಪಾಯಿಗಳವರೆಗಿನ ದಂಡವನ್ನು ವಿಧಿಸಬಹುದು. ನಿಂದಕ ಪ್ರತಿವಾದಿಯು ಯಾವುದೇ ಕೌಟುಂಬಿಕ ಹಿಂಸಾಚಾರ ಎಸಗದಂತೆ, ಅಂತಹ ಕೃತ್ಯಕ್ಕೆ ನೆರವಾಗದಂತೆ ಅಥವಾ ಇಂತಹ ಬೇರೆ ಯಾವುದೇ ನಿರ್ದಿಷ್ಟ ಕೃತ್ಯ ಎಸಗುವುದು, ಕೆಲಸದ ಜಾಗ ಅಥವಾ ಇತರ ಸ್ಥಳಕ್ಕೆ ಪ್ರವೇಶಿಸುವುದು, ಸಂಪರ್ಕ ಸಾಧಿಸಲು ಯತ್ನಿಸುವುದು, ಉಭಯ ಕಕ್ಷಿದಾರರ ಯಾವುದೇ ಆಸ್ತಿಪಾಸ್ತಿಯನ್ನು ಪ್ರತ್ಯೇಕಿಸುವುದು ಇತ್ಯಾದಿ ಕೃತ್ಯಗಳನ್ನು ಎಸಗದಂತೆ ನಿಂದಕ ಪ್ರತಿವಾದಿಯನ್ನು ಪ್ರತಿಬಂಧಿಸಿ ಸಂರಕ್ಷಣಾ ಆದೇಶ ಹೊರಡಿಸುವ ಅಧಿಕಾರವನ್ನೂ ಕಾಯ್ದೆ ನ್ಯಾಯಾಲಯಕ್ಕೆ ನೀಡಿತು.

2006: ಮೈಸೂರು ಹೊರವಲಯದ ವಿಜಯನಗರ ವರ್ತುಲ ರಸ್ತೆ ಬಳಿ ಹಿಂದಿನ ರಾತ್ರಿ ಗುಂಡಿನ ಚಕಮಕಿ ಬಳಿಕ ಪೊಲೀಸರು ಇಬ್ಬರು ಪಾಕಿಸ್ತಾನಿ ಉಗ್ರಗಾಮಿಗಳನ್ನು ಬಂಧಿಸಿದರು.

2006: ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವದ ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶನಕ್ಕೆ ಗಿರೀಶ ಕಾಸರವಳ್ಳಿ ನಿರ್ದೇಶನದ `ನಾಯಿ ನೆರಳು' ಚಿತ್ರ ಆಯ್ಕೆಯಾಯಿತು. `ಸಯನೈಡ್' ಮತ್ತು ಬರಗೂರು ರಾಮಚಂದ್ರಪ್ಪ ನಿರ್ದೇಶನದ `ತಾಯಿ' ಸೇರಿದಂತೆ ಕನ್ನಡದ 4 ಚಿತ್ರಗಳು ಸ್ಪರ್ಧೆಯಲ್ಲಿ ಇದ್ದವು.

2006: ಸೂರ್ಯನ ಕಿರಣದ ಮೂಲಕ ಹೊರಸೂಸುವ ವಿಕರಣಗಳಿಂದ ಬಾಹ್ಯಾಕಾಶ ನೌಕೆ, ಸಂಪರ್ಕ ವ್ಯವಸ್ಥೆ ಮತ್ತು ಗಗನಯಾನಿಗಳ ಮೇಲೆ ಆಗುವ ಪರಿಣಾಮಗಳನ್ನು ಅಧ್ಯಯನ ಮಾಡಲು ಕೇಪ್ ಕೆನವರಾಲ್ ವಾಯು ನೆಲೆಯಿಂದ ಎರಡು ಬಾಹ್ಯಾಕಾಶ ನೌಕೆಗಳನ್ನು ಬಾನಿಗೆ ಹಾರಿ ಬಿಡಲಾಯಿತು.

2006: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗುರುಜ್ಯೋತಿ ಕಲಾ ಸಂಘವು 2005ರಲ್ಲಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಮರದ ಮೇಲೆ ಪ್ರದರ್ಶಿಸಿದ್ದ `ನೆಲೆ' ನಾಟಕ ಲಿಮ್ಕಾ ದಾಖಲೆಗೆ ಸೇರ್ಪಡೆಯಾಯಿತು. ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 2005ರ ಜೂನ್ 5ರಂದು ರಂಗಭೂಮಿ ಕಲಾವಿದ ಮತ್ತು ನಿರ್ದೇಶಕ ನಾಗರಾಜ ಕೋಟೆ ತಾವೇ ನಾಟಕ ರಚಿಸಿ ನಿರ್ದೇಶಿಸಿದ್ದ ಈ ನಾಟಕ ಮರದ ಮೇಲೆ ಪ್ರದರ್ಶಿತವಾದ ಪ್ರಥಮ ನಾಟಕ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. 40 ನಿಮಿಷಗಳ ಅವದಿಯಲ್ಲಿ 11 ಕಲಾವಿದರು ಅಭಿನಯಿಸಿದ ಈ ನಾಟಕಕ್ಕೆ ಮರದ ಮೇಲೆ ಯಾವುದೇ ರಂಗಸಜ್ಜಿಕೆ, ಕೃತಕ ವಿದ್ಯುತ್ ದೀಪ ಇತ್ಯಾದಿ ಪರಿಕರ ಬಳಸಿರಲಿಲ್ಲ. ಕೇವಲ ಬೆಳದಿಂಗಳಲ್ಲೇ ಅದನ್ನು ನಡಸಿದ್ದು ಜನ ಮೆಚ್ಚುಗೆ ಗಳಿಸಿತ್ತು.

2006: ಬಾಲಿವುಡ್ ತಾರೆಯರಾದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರು ಫೆಬ್ರವರಿಯಲ್ಲಿ ಹಸೆಮಣೆ ಏರುವುದು ಖಚಿತವಾಗಿದೆ ಎಂದು ಬೆಂಗಳೂರಿನ ಖ್ಯಾತ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ದೃಢಪಡಿಸಿದರು.

2006: ಖ್ಯಾತ ಬಾಲಿವುಡ್ ನಟಿ, ರಾಜ್ಯಸಭಾ ಸದಸ್ಯೆ ಶಬಾನಾ ಆಜ್ಮಿ ಅವರಿಗೆ ಲಂಡನ್ನಿನ ಹೌಸ್ ಆಫ್ ಕಾಮನ್ಸಿನಲ್ಲಿ ಪ್ರಸ್ತುತ ವರ್ಷದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಗಾಂಧಿ ಪ್ರತಿಷ್ಠಾನ ಶಾಂತಿ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಮುಂಬೈಯ ಕೊಳಚೆ ಪ್ರದೇಶದ ಜನರ ಮೂಲಭೂತ ಹಕ್ಕುಗಳಿಗಾಗಿ `ನಿವಾರ ಹಕ್' ಸಂಘಟನೆ ಸ್ಥಾಪಿಸಿ ಕಳೆದ ಎರಡು ದಶಕಗಳಿಂದ ನಡೆಸುತ್ತಾ ಬಂದ ಹೋರಾಟವನ್ನು ಗುರುತಿಸಿ ಈ ಗೌರವ ನೀಡಲಾಯಿತು. 

1990: ಚಿತ್ರ ನಿರ್ಮಾಪಕ, ನಿರ್ದೇಶಕ ದಾದಾ ಸಾಹೇಬ್ ಫಾಲ್ಕೆ ಪ್ರ್ರಶಸ್ತಿ ಪುರಸ್ಕೃತ ವಿ. ಶಾಂತಾರಾಮ್ (90) ನಿಧನ.

1981: ಕಾವ್ಯವನ್ನೇ ತಮ್ಮ ಜೀವನ ಧರ್ಮವಾಗಿ ಸ್ವೀಕರಿಸಿ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ವಿಜೃಂಭಿಸಿದ ಜ್ಞಾನಪೀಠ ಹಾಗೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವರಕವಿ ಡಾ. ದತ್ತಾತ್ರೇಯ ರಾಮಚಂದ್ರ ಬೇಂದ್ರೆ  (ದ.ರಾ. ಬೇಂದ್ರೆ) ಈದಿನ ನಿಧನರಾದರು.

1972: ರಷ್ಯ ಸಂಜಾತ ಅಮೆರಿಕನ್ ವೈಮಾನಿಕ ಎಂಜಿನಿಯರ್ ಇಗೊರ್ ಸಿಕ್ರೊಸ್ಕಿ ತಮ್ಮ 83ನೇ ವಯಸ್ಸಿನಲ್ಲಿ ಕನೆಕ್ಟಿಕಟ್ ನ ಈಸ್ಟನ್ನಿನಲ್ಲಿ ಮೃತರಾದರು. 1939ರಲ್ಲಿ ಅವರು ಮೊತ್ತ ಮೊದಲ ಹೆಲಿಕಾಪ್ಟರನ್ನು ಯಶಸ್ವಿಯಾಗಿ ನಿರ್ಮಿಸಿದ್ದರು.

1962: ರಾಷ್ಟ್ರದ ಮೇಲೆ ಚೀನಾವು ನಡೆಸಿದ ದಾಳಿಯನ್ನು ಅನುಸರಿಸಿ ಭಾರತದ ರಾಷ್ಟ್ರಪತಿಗಳು `ತುರ್ತುಪರಿಸ್ಥಿತಿ' ಘೋಷಣೆ ಮಾಡಿದರು. ಭಾರತದ ಇತಿಹಾಸದಲ್ಲಿ ಈ ರೀತಿ `ತುರ್ತು ಪರಿಸ್ಥಿತಿ' ಘೋಷಣೆ ಆದದ್ದು ಇದೇ ಪ್ರಥಮ.

1959: ಸಾಹಿತಿ ಶಶಿಕಲಾ ಶಿವಶಂಕರ ಜನನ.

1940: ಸಾಹಿತಿ ಶಚಿದೇವಿ ಟಿ. ಜನನ.

1933: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಜನನ.

1931: ಸಾಹಿತಿ ತ.ಪು. ವೆಂಕಟರಾವ್ ಜನನ.

1919: ಮಹಮ್ಮದ್ ರೇಝಾ ಶಹ ಪಹ್ಲವಿ (1919-1980) ಜನ್ಮದಿನ. 1941ರಿಂದ 1979ರವರೆಗೆ ಇರಾನಿನ ಶಹಾ ಆಗಿದ್ದ ಇವರು ಅಯತೊಲ್ಲ ಖೊಮೇನಿಯಿಂದ ಪದಚ್ಯುತರಾದರು.

1917: ಸಾಹಿತಿ ಬೈಕಾಡಿ ವೆಂಕಟಕೃಷ್ಣರಾಯರ ಜನನ.

1906:  ಇಟೆಲಿಯ ಹೆವಿವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಪ್ರಿಮೊ ಕಾರ್ನೆರಾ (1906-1967) ಜನ್ಮದಿನ. ಇವರು 1933 ರ ಜನವರಿಯಿಂದ 1934ರ ಜೂನ್ ವರೆಗೆ ವಿಶ್ವ ಹೆವಿ ವೇಯ್ಟ್ ಚಾಂಪಿಯನ್ ಆಗಿದ್ದರು. 1933ರಲ್ಲಿ ನ್ಯೂಯಾರ್ಕ್ ನಗರದಲ್ಲಿ ನಡೆದ ಪಂದ್ಯದಲ್ಲಿ ಜ್ಯಾಕ್ ಶಾರ್ಕಿಯನ್ನು ಪರಾಜಿತಗೊಳಿಸಿ ಇವರು ವಿಶ್ವ ಚಾಂಪಿಯನ್ ಶಿಪ್ ಗಳಿಸಿದರು.

1902: ಅಮೆರಿಕದ ಹೆವಿ ವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಜ್ಯಾಕ್ ಶಾರ್ಕಿ (1902-1994) ಜನ್ಮದಿನ. 1932ರಲ್ಲಿ ನ್ಯೂಯಾರ್ಕಿನ ಲಾಂಗ್ ಐಲ್ಯಾಂಡ್ ಸಿಟಿಯಲ್ಲಿ ನಡೆದ ಪಂದ್ಯದಲ್ಲಿ ಮ್ಯಾಕ್ಸ್ ಶಿಮೆಲಿಂಗ್ ಅವರನ್ನು ಪರಾಭವಗೊಳಿಸಿ ವಿಶ್ವ ಹೆವಿ ವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಆದ ಜ್ಯಾಕ್ ಶಾರ್ಕಿ 1933ರ ಜೂನಿನಲ್ಲಿ ಪ್ರಿಮೊ ಕಾರ್ನೆರಾ ಅವರಿಂದ ಪರಾಜಿತರಾದರು.

1868: ಸಂಸ್ಕೃತ ಹಾಗೂ ಕನ್ನಡ ಪಂಡಿತರಾಗಿದ್ದ ಸಾಹಿತಿ ಸೀತಾರಾಮ ಶಾಸ್ತ್ರಿಗಳು (26-10-1868ರಿಂದ 20-12-1933) ಗುಂಡಾವಧಾನಿಗಳು- ಪಾರ್ವತಮ್ಮ ದಂಪತಿಯ ಮಗನಾಗಿ ಮೈಸೂರಿನ ಹಳ್ಳದಕೇರಿಯಲ್ಲಿ ಜನಿಸಿದರು.

1846: ಬ್ರಿಟಿಷ್ ಪತ್ರಕರ್ತ ಚಾರ್ಲ್ಸ್ ಪ್ರಸ್ಟ್ ವಿಕ್ ಸ್ಕಾಟ್ (1846-1932) ಜನ್ಮದಿನ. ಇವರು 1959ರಿಂದ 57 ವರ್ಷಗಳ ಕಾಲ `ಮ್ಯಾಂಚೆಸ್ಟರ್ ಗಾರ್ಡಿಯನ್' (ದಿ ಗಾರ್ಡಿಯನ್) ಪತ್ರಿಕೆಯನ್ನು ಸಂಪಾದಿಸಿದರು.
ಕ್ರಿ.ಪೂ. 4004: ಕ್ರಿಸ್ತಪೂರ್ವ 4004ರಲ್ಲಿ ಈದಿನ ಬೆಳಗ್ಗೆ 9 ಗಂಟೆಗೆ ಭೂಮಿಯ ಸೃಷ್ಟಿಯಾಯಿತು ಎಂಬ ಲೆಕ್ಕಾಚಾರ ಇದೆ. ಐರ್ಲೆಂಡಿನ ಇಗರ್ಜಿಯೊಂದರ ಬಿಷಪ್ ಜೇಮ್ಸ್ ಉಷರ್ ಅವರು ಕಿ.ಶ. 1650ರಲ್ಲಿ ಈ ತೀರ್ಮಾನಕ್ಕೆ ಬಂದರು. ಅವರ ತರ್ಕಕ್ಕೆ ಬೈಬಲ್ ಆಧಾರವಾಗಿತ್ತು. ಅಧುನಿಕ ವಿಶ್ವವಿದ್ಯಾಲಯದ ಭೂಗೋಳ ವಿಭಾಗದಲ್ಲಿ ಈ ದಿನವನ್ನು ಭೂಮಿಯ ಜನ್ಮದಿನ ಎಂಬುದಾಗಿ ಆಚರಿಸಲಾಗುತ್ತದೆ. ಭೂಮಿಯ ಸದ್ಯದ ನಿಖರವಾದ ವಯಸ್ಸು 4.5 ಶತಕೋಟಿ ವರ್ಷಗಳು. ಆದರೆ ಜನ್ಮದಿನದ ಬಗ್ಗೆ ಸ್ಪಷ್ಟ ಆಧಾರವೇನೂ ಇಲ್ಲ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement