My Blog List

Sunday, November 23, 2008

ಸಮುದ್ರ ಮಥನ 11: ರಾಮನಿಗೆ ಗುಣ ಸಹಜ ಅಲಂಕಾರ, ನಮಗೆ?

ಸಮುದ್ರ ಮಥನ 11: ರಾಮನಿಗೆ

ಗುಣ ಸಹಜ ಅಲಂಕಾರ, ನಮಗೆ?


ನಗು ಮನುಷ್ಯನಿಗೆ ಸಹಜ, ಸುಂದರ ಅಲಂಕಾರ. ಅಂಥ ನಗುವೂ ಕೃತಕವಾಗಿದೆ. ಯಾರಾದರೂ ನಕ್ಕರೆ, ಏನರ್ಥ? ಎಂದು ಹುಡುಕುವಂತಹ ಕಾಲದಲ್ಲಿದ್ದೇವೆ.  ಕೆಲವರು ಅವನಿಗೆ ಏನೋ 
ಆಗಬೇಕಿದೆ ಎಂದು ಎಣಿಸಿದರೆ, ಮತ್ತೆ ಕೆಲವರು ಹಿಂದಿರುವ ದ್ವಂದ್ವಾರ್ಥ, ಕಪಟ ಏನಿರಬಹುದು? ಎಂಬ ಆಲೋಚನೆಗೆ ತೊಡಗುತ್ತಾರೆ. 

ರಾಮನ ಗುಣವರ್ಣನೆಯಲ್ಲಿ ಸಂಕ್ಷೇಪ ರಾಮಾಯಣ ಇದೆ. 'ಗುಣ' ಅನ್ನುವ ಶಬ್ದಕ್ಕೆ 'ಪಾಶ' ಎನ್ನುವ ಅರ್ಥವೂ ಇದೆ. ರಾಮನ ಗುಣಗಳು ಲೋಕದ ಸಮಸ್ತರನ್ನೂ ಪಾಶದ ಹಾಗೆ ಬಂಧಿಸಿ, ರಾಮತತ್ತ್ವವನ್ನು ಬಿಟ್ಟು ಅಲ್ಲಾಡದಂತೆ ಮಾಡುತ್ತಿವೆ. ಈ ಬಂಧನ ಎಲ್ಲರ ಮೋಕ್ಷಕ್ಕೆ, ಬಿಡುಗಡೆಗೆ ಕಾರಣ ಆಗುತ್ತಿದೆ. 

ಯಾವುದಾದರೂ ಒಂದು ಕಾರ್ಯಸಾಧನೆ ಮಾಡಬೇಕಾದರೆ ಅದಕ್ಕೆ ಬೇಕಾದ ಸಿದ್ಧತೆಯೊಡನೆಯೇ ಹೋಗಬೇಕಾಗುತ್ತದೆ. ಹೇಗೆ ಊಟ ಮಾಡುವವನು ಹೊಟ್ಟೆಬಿಟ್ಟು ಹೋಗುವಹಾಗಿಲ್ಲವೋ, ಸ್ನಾನ ಮಾಡುವವನು ನೀರು ಮರೆಯುವ ಹಾಗಿಲ್ಲವೋ ಹಾಗೆ ಭೂಮಿಗೆ ಒಂದು ವಿಶೇಷ ಕಾರ್ಯ-ಕಾರಣ ನಿಮಿತ್ತ ಬಂದ, ಬರುವ ಮಹಾಪುರುಷ ತನ್ನೊಟ್ಟಿಗೆ ತನಗೆ ಬೇಕಾದ ಎಲ್ಲ ಸಿದ್ಧತೆಗಳನ್ನೂ, ಸಾಮಗ್ರಿಗಳನ್ನೂ ತಂದಿರುತ್ತಾನೆ. ಹಾಗೆಯೇ ರಾಮ ಕೂಡ. ರಾಮ ಧರಿಸಿದ್ದ ಗುಣಸಂಪತ್ತು ರಾವಣನ ಸಂಹಾರಕ್ಕೆ, ಆದರ್ಶ ರಾಜ್ಯ ಸ್ಥಾಪನೆಗೆ ಅಂತ ವಿನಿಯೋಗವಾಗುತ್ತಲೇ ಹೋದವು.

ಗಮನಿಸಬೇಕು. ಕಸ್ತೂರಿ, ಅದರ ಸುಗಂಧ ಒಟ್ಟೊಟ್ಟಿಗೇ ಹುಟ್ಟಿ, ಅವಿನಾಭಾವಿಗಳಾಗಿರುತ್ತವೆ. ಹಾಗಿದ್ದಾಗಲೇ ಅದರ ಕಾರ್ಯಸಾಧನೆಯಾಗುವುದು. ಅದನ್ನು ಮೇಲಿಂದ ಸಿಂಪಡಿಸಿದರೆ ಅದೆಷ್ಟು ಕಾಲ ಬಾಳೀತು! ಅದನ್ನು ಅರಿತೇ ಇದ್ದ ರಾಮತತ್ತ್ವ ಸಂಕಲ್ಪ ಸಿದ್ಧಿಯ ಎಲ್ಲ ತಯಾರಿಗಳೊಂದಿಗೇ ಭುವಿಯಲ್ಲಿ ಅವತರಿಸಿತು. ಧರಿಸಿದ್ದ ಗುಣಸಂಪತ್ತು ಅಂಶ, ಅಂಗ ಹೀಗೆ ಶೇಕಡಾವಾರು ಪ್ರಮಾಣದಲ್ಲಿ ಇಷ್ಟಿಷ್ಟು, ಅಷ್ಟಷ್ಟು ಎಂದು ಹೇಳುವಷ್ಟು ಮಿತಿಯನ್ನು ಹೊಂದಿರಲಿಲ್ಲ. ಬದಲಾಗಿ ಅವನ ಅಂತರಂಗ ಸೌಂದರ್ಯಕ್ಕೆ ಅಲಂಕಾರವಾಗಿ ಹೊರಗೆ ಪ್ರಕಟಗೊಂಡಿದ್ದವು. ಸಮಗ್ರವಾಗಿ ಗ್ರಹಿಸುವುದಾದರೆ ಅವು ಸ್ವಾಭಾವಿಕವಾಗಿ ಒಡಮೂಡಿದ್ದವು. 

ಅರ್ಥಮಾಡಿಕೊಳ್ಳಲು ಹೆಚ್ಚೇನೂ ದೂರ ಹೋಗಬೇಕಿಲ್ಲ. ನಮಗೆ ಅತ್ಯಂತ ಪ್ರಿಯವಾದ 'ನಗು'ವಿನ ಪರಿಸ್ಥಿತಿಯನ್ನೇ ಒಮ್ಮೆ ನೋಡೋಣ. ನಗು ಮನುಷ್ಯನಿಗೆ ಸಹಜ, ಸುಂದರ ಅಲಂಕಾರ. ಅಂಥ ನಗುವೂ ಕೃತಕವಾಗಿದೆ. ಯಾರಾದರೂ ನಕ್ಕರೆ, ಏನರ್ಥ? ಎಂದು ಹುಡುಕುವಂತಹ ಕಾಲದಲ್ಲಿದ್ದೇವೆ. ಕೆಲವರು ಅವನಿಗೆ ಏನೋ ಆಗಬೇಕಿದೆ ಎಂದು ಎಣಿಸಿದರೆ, ಮತ್ತೆ ಕೆಲವರು ಹಿಂದಿರುವ ದ್ವಂದ್ವಾರ್ಥ, ಕಪಟ ಏನಿರಬಹುದು? ಎಂಬ ಆಲೋಚನೆಗೆ ತೊಡಗುತ್ತಾರೆ. ಕೇಳಿರಬಹುದು. ರಾಜ ನಕ್ಕರೆ ಅಕ್ಕಪಕ್ಕದಲ್ಲಿರುವವರೆಲ್ಲ ಜಾಗೃತರಾಗಿರಬೇಕು ಅಂತ. 'ಸ್ಮಯನ್ನಿವ ನೃಪೋ ಹಂತಿ' - ರಾಜ ನಗ್ತಾ ನಗ್ತಾ ಕೊಂದು ಬಿಡುತ್ತಾನೆ. ಯಾರನ್ನು ಕೊಲ್ಲಬೇಕು ಎಂದು ಅಂದುಕೊಂಡಿರುತ್ತಾನೋ ಅವರ ಜೊತೆ ಹೆಚ್ಹೆಚ್ಚು ನಗುತ್ತಾನೆ.

ಇವತ್ತಿನ ಅವಾಂತರಗಳು ಮತ್ತೊಂದು ಹಜ್ಜೆ ಮುಂದಕ್ಕೆ ಹೋಗುತ್ತವೆ. ಇದು ನಗುವಿನ ಖರೀದಿಯ ಕಾಲ. ನಗುವಿಗಾಗಿ ಸಂಘಗಳನ್ನು ಕಟ್ಟಿಕೊಳ್ಳಬೇಕಾದ ಪರಿಸ್ಥಿತಿ. ನಾವು ಮುಕ್ಕಾಲು ಗಂಟೆ, ಒಂದು ಗಂಟೆ ನಗಲು ಅಭ್ಯಾಸ ಮಾಡಬೇಕಾದ ದೌರ್ಭಾಗ್ಯವಂತರು. ನೀವೇ ಒಮ್ಮೆ ಯೋಚಿಸಿ. ಒಳಗೆ ಆನಂದಸಾಗರ ಇದ್ದರೆ ಹೊರಗೆ ನಗುವಿನ ಅಲೆ ಬಂದೇಬರುತ್ತದೆ. ಅದು ಹಾಗಿಲ್ಲದಾಗ ನಗು ಅಂದ್ರೆ ಏನು? ತುಟಿಯನ್ನು ಹೀಗೆ ಅಗಲಿಸಿದರೆ ಅದು ನಗೆಯಾಗುತ್ತದೆ ಎಂದು ಯಾರಾದರೂ ಶುರುವಿಟ್ಟುಕೊಂಡರೆ ನಗು 'ಶಿಕ್ಷೆ'ಗೆ ಒಳಪಡುತ್ತಿದೆ ಎಂದು ತಿಳಿಯಬಹುದು. ಹಾಗೇ ಮುಂದಮುಂದಕ್ಕೆ ಸಾಗಿ ಅಯ್ಯೋ! ನಗ್ಬೇಕಾ! ಆ ಜವಾಬ್ದಾರಿ ಬಿಟ್ಟು ಬೇರೇನಾದರೂ ಇದ್ದರೆ ಹೇಳಿ ಎಂದರೂ ಆಶ್ಚರ್ಯವಿಲ್ಲ.

ನಗುವೂ ಸೇರಿದಂತೆ ಎಲ್ಲ ಗುಣಗಳೂ ರಾಮನ ವಿಷಯದಲ್ಲಿ ಹೀಗಿರಲಿಲ್ಲ ಎಂದೆವು. ಅವುಗಳ ಸ್ವಾಭಾವಿಕತೆಯನ್ನು ಒಮ್ಮೆ ಊಹಿಸಬಹುದೇ?

-ಶ್ರೀಮಜ್ಜಗದ್ಗುರು ಶಂಕರಾಚಾರ್ಯ

ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ

ಶ್ರೀರಾಮಚಂದ್ರಾಪುರಮಠ
 

No comments:

Advertisement