'ಇಂಡಸ್' ಬಡಾವಣೆ
ಹುಟ್ಟಲೇ ಇಲ್ಲ..!
ಹುಟ್ಟಲೇ ಇಲ್ಲ..!
ಬಡಾವಣೆ ಅಭಿವೃದ್ಧಿ ಪಡಿಸದೇ ಇರುವುದು ಹಾಗೂ ನಿವೇಶನವನ್ನು ವಶಕ್ಕೆ ನೀಡದೇ ಇರುವುದು ಪ್ರತಿವಾದಿಗಳ ಪಾಲಿನ ಸೇವಾಲೋಪವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ನೆತ್ರಕೆರೆ ಉದಯಶಂಕರ
ಬೆಂಗಳೂರು ಮಹಾನಗರದಲ್ಲಿ ಅಭಿವೃದ್ಧಿ ಪ್ರಾಧಿಕಾರದ ಮೂಲಕ ನಿವೇಶನ ಪಡೆದುಕೊಳ್ಳಲಾಗದ ಮಂದಿ ತಮ್ಮ ಕನಸಿನ ಮನೆಯ ಸಲುವಾಗಿ ಆಕರ್ಷಕ ಜಾಹೀರಾತು ನೀಡುವ ಸಂಸ್ಥೆಗಳಿಗೆ ಮರುಳಾಗುವುದು ಹೊಸದೇನಲ್ಲ.
ಆದರೆ ಇಂತಹ ಮಂದಿಯನ್ನು ತಮ್ಮ ಬಲೆಯೊಳಕ್ಕೆ ಕೆಡವಿ ನಂತರ ಅವರನ್ನು ಗೋಳಾಡಿಸುವ ಸಂಸ್ಥೆಗಳು ಬಹಳ. ಇಂತಹ ಸಂಸ್ಥೆಗಳ ಕೈಯಲ್ಲಿ ಸಿಲುಕಿ ನಲುಗಿದ ಮಂದಿಯ ನೆರವಿಗೆ ಗ್ರಾಹಕ ಸಂರಕ್ಷಣಾ ಕಾಯ್ದೆ ಬರುವುದೇ?
ಹೌದು. ಬೆಂಗಳೂರು 4ನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ನ್ಯಾಯಾಲಯವು ಇಂತಹ ಪ್ರಕರಣ ಒಂದರಲ್ಲಿ ಗ್ರಾಹಕರಿಗೆ ನ್ಯಾಯ ಒದಗಿಸಿದೆ.
ಈ ಪ್ರಕರಣದ ಅರ್ಜಿದಾರರು: ಬೆಂಗಳೂರಿನ ನಿವಾಸಿ ಗೋವಿಂದರಾಜು. ಪ್ರತಿವಾದಿಗಳು: (1) ಮನೋಹರ ರೆಡ್ಡಿ, ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ, ಸಿಟಿ ಸ್ಕ್ವೇರ್, ಲಾಲ್ ಬಾಗ್ ರಸ್ತೆ ಬೆಂಗಳೂರು ಮತ್ತು (2) ಎಂ. ಮಹೇಶರೆಡ್ಡಿ, ಶಾಖಾ ವ್ಯವಸ್ಥಾಪಕ, ಸಿಟಿ ಸ್ಕ್ವೇರ್, ಶಿವಾನಂದ ಸರ್ಕಲ್, ಬೆಂಗಳೂರು.
ಅರ್ಜಿದಾರ ಗೋವಿಂದರಾಜು ಅವರು 'ಸಿಟಿ ಸ್ಕ್ವೇರ್' ಎಂಬುದಾಗಿ ಹೆಸರು ಬದಲಾಯಿಸಿಕೊಂಡ 'ಹ್ಯಾಪಿ ಹೋಮ್' ಖಾಸಗಿ ಸಂಸ್ಥೆಯು ಆನೆಕಲ್ ತಾಲ್ಲೂಕಿನ ನೆರಳೂರು ಗ್ರಾಮದಲ್ಲಿ ನಿರ್ಮಿಸುವುದಾಗಿ ಹೇಳಿಕೊಂಡ 'ಇಂಡಸ್' ಬಡಾವಣೆಯಲ್ಲಿ ನಿವೇಶನವೊಂದನ್ನು 2004ರ ಏಪ್ರಿಲ್ 7ರಂದು ಖರೀದಿಸಿದರು. ಈ ಸಂಬಂಧ ಪ್ರತಿವಾದಿಗಳಿಗೆ 3,90,000 ರೂಪಾಯಿಗಳನ್ನು ಪಾವತಿ ಮಾಡಿದರು.
ನಿವೇಶನ ನೋಂದಣಿ ಸಂದರ್ಭದಲ್ಲಿ ನೋಂದಣಿ, ಖಾತಾ, ತೆರಿಗೆ ಇತ್ಯಾದಿ ವೆಚ್ಚಗಳಿಗಾಗಿ 25,000 ರೂಪಾಯಿಗಳ ಹೆಚ್ಚುವರಿ ಹಣವನ್ನೂ ಪ್ರತಿವಾದಿಗಳು ಪಡೆದರು. ಆದರೆ ಅದಕ್ಕೆ ರಶೀದಿ ನೀಡಲಿಲ್ಲ.
ನೋಂದಣಿಯ ಬಳಿಕ ನೆರಳೂರು ಗ್ರಾಮದಲ್ಲಿ ಜಾಗವನ್ನು ತೋರಿಸಿದ ಪ್ರತಿವಾದಿಗಳು ಆರು ತಿಂಗಳಲ್ಲಿ ಬಡಾವಣೆ ನಿರ್ಮಿಸಿ, ನಿವೇಶನವನ್ನು ಗುರುತಿಸಿ, ನೀರು, ರಸ್ತೆ, ವಿದ್ಯುತ್, ಒಳಚರಂಡಿ ಇತ್ಯಾದಿ ಎಲ್ಲ ಸವಲತ್ತುಗಳನ್ನೂ ಒದಗಿಸಿಕೊಡುವುದಾಗಿ ಭರವಸೆ ನೀಡಿದರು. ಹಣ ಪಡೆದುಕೊಳ್ಳುವಾಗ ಅರ್ಜಿದಾರರಿಗೆ 9ನೇ ನಂಬರಿನ ನಿವೇಶನ ನೀಡುತ್ತಿರುವುದಾಗಿ ಹೇಳಿದ ಪ್ರತಿವಾದಿಗಳು ನೋಂದಣಿ ಕಾಲದಲ್ಲಿ ನಿವೇಶನ ಸಂಖ್ಯೆಯನ್ನು 10 ಎಂಬುದಾಗಿ ದಾಖಲಿಸಿದರು.
ನೋಂದಣಿ ಮಾಡುವಾಗ ನಿವೇಶನವನ್ನು ನೇರವಾಗಿ ಭೂಮಾಲೀಕನಿಂದಲೇ ನೋಂದಣಿ ಮಾಡಿಸಲಾಯಿತು. ಆದರೆ ಭೂಮಾಲೀಕ ಮತ್ತು ಪ್ರತಿವಾದಿಗಳ ನಡುವಣ ಒಪ್ಪಂದದ ವಿವರವನ್ನು ಅರ್ಜಿದಾರರಿಗೆ ತಿಳಿಸಲಿಲ್ಲ.
ನೋಂದಣಿಯ ಬಳಿಕ ಪ್ರತಿವಾದಿಗಳು ಅರ್ಜಿದಾರರನ್ನು ನಿರ್ಲಕ್ಷಿಸಲು ಆರಂಭಿಸಿದರು. ಅರ್ಜಿದಾರರು ಮತ್ತು ಇತರರು ಪದೇ ಪದೇ ಮನವಿ ಮಾಡಿದರೂ ಮಾರಾಟದ ವೇಳೆ ಭರವಸೆ ನೀಡಿದಂತೆ ನಿವೇಶನಗಳನ್ನು ಗುರುತಿಸಿಕೊಡಲು ಅಥವಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ವಿಫಲರಾದರು. ಅರ್ಜಿದಾರರಿಗೆ ನಕ್ಷೆ ಒದಗಿಸಿದರಾದರೂ ಅದರಲ್ಲಿ ಗಡಿಗಳನ್ನೇ (ಚಕಬಂದಿ) ಗುರುತಿಸಿರಲಿಲ್ಲ.
ಒಂದು ವರ್ಷ ಕಳೆದರೂ ಈ ಸ್ಥಳದಲ್ಲಿ ಬಡಾವಣೆ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಕೆಲಸವೂ ನಡೆಯಲಿಲ್ಲ. ಈ ಮಧ್ಯೆ ಸಂಸ್ಥೆಯ ಹೆಸರುಗಳನ್ನು ಬದಲಾಯಿಸುತ್ತಾ ಹೋದ ಪ್ರತಿವಾದಿಗಳು ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಲೇ ಇದ್ದರು ಎಂಬುದು ಅರ್ಜಿದಾರರ ದೂರು.
ಅರ್ಜಿದಾರರು ಸಂಸ್ಥೆಯ ಅಧ್ಯಕ್ಷರನ್ನು ಭೇಟಿ ಮಾಡಲು ಯತ್ನಿಸಿದರು. ಆದರೆ ಸಿಬ್ಬಂದಿ ಅದಕ್ಕೆ ಅವಕಾಶ ನೀಡಲಿಲ್ಲ. ಕಡೆಗೆ ನ್ಯಾಯಕ್ಕಾಗಿ ಅರ್ಜಿದಾರರು ಗ್ರಾಹಕ ನ್ಯಾಯಾಲಯದ ಕದ ತಟ್ಟಿದರು. ಬೆಂಗಳೂರು 4ನೇ ಹೆಚ್ಚುವರಿ ಗ್ರಾಹಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ತಮಗೆ 18 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಮನವಿ ಮಾಡಿದರು.
ಅಧ್ಯಕ್ಷ ಜಿ. ಸಿದ್ದನಗೌಡ, ಸದಸ್ಯರಾದ ಪಿ.ಕೆ. ಪದ್ಮಾವತಿ ಮತ್ತು ಸಿ. ರಾಮಚಂದ್ರಪ್ಪ ಅವರನ್ನು ಒಳಗೊಂಡ ಪೀಠವು ಅರ್ಜಿದಾರರು ಹಾಗೂ ಪ್ರತಿವಾದಿಗಳ ಪರ ವಕೀಲರ ಅಹವಾಲು ಆಲಿಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು.
ನಿವೇಶನ ಮಾರಾಟಕ್ಕೆ ಸಂಬಂಧಿಸಿದಂತೆ ಕ್ರಯಪತ್ರವನ್ನು ನೀಡಿ, ಖಾತೆ ಬದಲಾವಣೆ ಮಾಡಿಕೊಟ್ಟಿರುವುದರಿಂದ ಆಸ್ತಿಯನ್ನು ಅರ್ಜಿದಾರರಿಗೆ ಹಸ್ತಾಂತರಿಸಲಾಗಿದೆ ಎಂದೇ ಪರಿಗಣಿಸಬೇಕು ಎಂಬುದಾಗಿ ವಾದಿಸಿದ ಪ್ರತಿವಾದಿಗಳು ಬಡಾವಣೆ ಅಭಿವೃದ್ಧಿ ಪಡಿಸಲಾಗಿಲ್ಲ ಎಂಬುದಾಗಿ ಸಾಬೀತುಪಡಿಸುವಲ್ಲಿ ಅರ್ಜಿದಾರರು ವಿಫಲರಾಗಿದ್ದಾರೆ ಎಂದು ಪ್ರತಿಪಾದಿಸಿದರು.
ಆದರೆ ಉಭಯ ಕಕ್ಷಿದಾರರ ಮನವಿ ಹಾಗೂ ದಾಖಲೆಗಳಲ್ಲಿ ಎಲ್ಲಿಯೂ ಆಸ್ತಿಯನ್ನು ವಶಕ್ಕೆ ನೀಡಿರುವ ಬಗ್ಗೆ ನಮೂದಾಗಿಲ್ಲ ಎಂಬುದನ್ನು ಗಮನಕ್ಕೆ ತೆಗೆದುಕೊಂಡ ನ್ಯಾಯಾಲಯ ಕ್ರಯಪತ್ರ ನೋಂದಣಿ ಮತ್ತು ಖಾತೆ ಬದಲಾವಣೆ ಮಾಡಿದ ಮಾತ್ರಕ್ಕೆ ಆಸ್ತಿಯನ್ನು ಅರ್ಜಿದಾರರ ವಶಕ್ಕೆ ನೀಡಲಾಗಿದೆ ಎಂಬುದಾಗಿ ಭಾವಿಸಲಾಗದು ಎಂದು ಅಭಿಪ್ರಾಯಪಟ್ಟಿತು.
ನಿವೇಶನವನ್ನು ಅರ್ಜಿದಾರರ ವಶಕ್ಕೆ ಒಪ್ಪಿಸಲಾಗಿದೆ ಮತ್ತು ಜಾಹೀರಾತುಗಳಲ್ಲಿ ಪ್ರಕಟಿಸಿದ ಪ್ರಕಾರ ಬಡಾವಣೆಯನ್ನು ಅಭಿವೃದ್ಧಿ ಪಡಿಸಲಾಗಿದೆ ಎಂಬುದಾಗಿ ಸಾಬೀತುಪಡಿಸುವ ಹೊಣೆಗಾರಿಕೆ ಪ್ರತಿವಾದಿಗಳದ್ದೇ ಹೊರತು ಅರ್ಜಿದಾರರದ್ದಲ್ಲ ಎಂದೂ ನ್ಯಾಯಾಲಯ ಹೇಳಿತು.
ಒಪ್ಪಂದದಲ್ಲಿ ತಿಳಿಸಿರುವ ಪ್ರಕಾರ ಬಡಾವಣೆ ಅಭಿವೃದ್ಧಿ ಪಡಿಸಿದ್ದನ್ನು ಸಾಬೀತು ಪಡಿಸುವಂತಹ ಯಾವುದೇ ದಾಖಲೆಗಳನ್ನು ಪ್ರತಿವಾದಿಗಳು ಹಾಜರು ಪಡಿಸಿಲ್ಲ. ನಿವೇಶನಗಳನ್ನೇ ವಿಂಗಡಿಸದೇ ಇರುವಾಗ ಆಸ್ತಿಯನ್ನು ಅರ್ಜಿದಾರರ ವಶಕ್ಕೆ ಒಪ್ಪಿಸುವ ವಿಚಾರ ಉದ್ಭವಿಸುವುದೇ ಇಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಬಡಾವಣೆ ಅಭಿವೃದ್ಧಿ ಪಡಿಸದೇ ಇರುವುದು ಹಾಗೂ ನಿವೇಶನವನ್ನು ವಶಕ್ಕೆ ನೀಡದೇ ಇರುವುದು ಪ್ರತಿವಾದಿಗಳ ಪಾಲಿನ ಸೇವಾಲೋಪವಾಗುತ್ತದೆ. ಅರ್ಜಿದಾರರು ಈ ಲೋಪವನ್ನು ಋಜುವಾತು ಪಡಿಸಿದ್ದಾರೆ ಎಂದು ಹೇಳಿತು.
ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಾಲಯ ಈ ಆದೇಶದ 60 ದಿನಗಳ ಒಳಗೆ ಕ್ರಯಪತ್ರದಲ್ಲಿ ನಮೂದಿಸಿದಂತೆ ನಿವೇಶನವನ್ನು ಅರ್ಜಿದಾರರ ವಶಕ್ಕೆ ಒಪ್ಪಿಸಬೇಕು ಮತ್ತು 25,000 ರೂಪಾಯಿಗಳ ಪರಿಹಾರವನ್ನು 5000 ರೂಪಾಯಿಗಳ ಖಟ್ಲೆ ವೆಚ್ಚ ಸಹಿತವಾಗಿ ಅರ್ಜಿದಾರರಿಗೆ ಪಾವತಿ ಮಾಡಬೇಕು ಎಂದು ಉಭಯ ಪ್ರತಿವಾದಿಗಳಿಗೂ ಆದೇಶ ನೀಡಿತು.
No comments:
Post a Comment