My Blog List

Wednesday, November 12, 2008

ಇಂದಿನ ಇತಿಹಾಸ History Today ನವೆಂಬರ್ 12

ಇಂದಿನ ಇತಿಹಾಸ

ನವೆಂಬರ್ 12

ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ಅವರು ಕರ್ನಾಟಕದ 26ನೇ ಮುಖ್ಯಮಂತ್ರಿಯಾಗಿ ವಿಧಾನಸೌಧದ ಎದುರು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿ ಸುವುದರೊಂದಿಗೆ ದಕ್ಷಿಣ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿತು.

2007: ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ಅವರು ಕರ್ನಾಟಕದ 26ನೇ ಮುಖ್ಯಮಂತ್ರಿಯಾಗಿ ವಿಧಾನಸೌಧದ ಎದುರು ರೈತರ ಹೆಸರಿನಲ್ಲಿ ಪ್ರಮಾಣ 
ವಚನ ಸ್ವೀಕರಿಸುವುದರೊಂದಿಗೆ ದಕ್ಷಿಣ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಯಡಿಯೂರಪ್ಪ ಅವರ ಜೊತೆಗೆ ಗೋವಿಂದಪ್ಪ ಕಾರಜೋಳ, ಜಗದೀಶ ಶೆಟ್ಟರ, ಡಾ.ವಿ.ಎಸ್. ಆಚಾರ್ಯ ಮತ್ತು ಆರ್. ಅಶೋಕ್ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿಯ ರಾಷ್ಟ್ರೀಯ ನಾಯಕರು ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾದರು. ಲೋಕಸಭೆ ವಿರೋಧ ಪಕ್ಷದ ನಾಯಕ ಎಲ್.ಕೆ.ಅಡ್ವಾಣಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಮಾಜಿ ಅಧ್ಯಕ್ಷ ಮುರಳಿ ಮನೋಹರ್ ಜೋಷಿ, ರಾಷ್ಟ್ರೀಯ ಉಪಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು, ರಾಜ್ಯದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಯಶವಂತಸಿನ್ಹಾ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಾದ ನರೇಂದ್ರ ಮೋದಿ (ಗುಜರಾತ್), ಶಿವರಾಜ್ ಸಿಂಗ್ ಚವಾಣ್ (ಮಧ್ಯಪ್ರದೇಶ), ರಮಣ್ ಸಿಂಗ್ (ಛತ್ತೀಸ್ ಗಡ) ಹಾಗೂ ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ- ಹೀಗೆ ರಾಷ್ಟ್ರದ ವಿವಿಧೆಡೆಯಿಂದ ಬಿಜೆಪಿ ಮುಖಂಡರ ದಂಡೇ ಆಗಮಿಸಿತ್ತು. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಪಕ್ಷ ಸದಸ್ಯರು ಸಮಾರಂಭಕ್ಕೆ ಹಾಜರಾದರೂ ತತ್ ಕ್ಷಣ ಸರ್ಕಾರ ಸೇರದಿರಲು ಮಿತ್ರ ಪಕ್ಷ ಜನತಾದಳ (ಎಸ್) ನಿರ್ಧರಿಸಿತು.

2007: ಭಾರತೀಯ ವಾಯು ಪಡೆಗೆ ಎರಡು ಅತ್ಯಾಧುನಿಕ `ಹಾಕ್ ಎಂಕೆ132' ಯುದ್ಧ ವಿಮಾನಗಳು ಸೇರ್ಪಡೆಯೊಂದಿಗೆ ರಾಷ್ಟ್ರದ ಬಹುದಿನಗಳ ಕನಸು ಈಡೇರಿತು. ಏರ್ ಮಾರ್ಷಲ್ ಜಿ.ಎಸ್. ಚೌಧುರಿ ಅವರು ಬೀದರ ನಗರದ ಹೊರಭಾಗದಲ್ಲಿನ ವಾಯುಪಡೆಯ ತರಬೇತಿ ಕೇಂದ್ರದಲ್ಲಿ ಸಾಯಂಕಾಲ 4 ಗಂಟೆಗೆ ನಡೆದ ಸರಳ ಮತ್ತು ಹೃದಯಸ್ಪರ್ಶಿ ಸಮಾರಂಭದಲ್ಲಿ ಬೂದು ಬಣ್ಣದ ಉಕ್ಕಿನ ಹಕ್ಕಿಗಳನ್ನು ಬರಮಾಡಿಕೊಂಡರು. ಪ್ಲಾಟಿನಂ ಮಹೋತ್ಸವ ಆಚರಿಸಿದ ವಾಯುಪಡೆಗೆ ಹಾಕ್ ವಿಮಾನಗಳ ಸೇರ್ಪಡೆ ಹೊಸ ಆಯಾಮವನ್ನೇ ಕಲ್ಪಿಸಿತು. ಇಂಗ್ಲೆಂಡಿನಲ್ಲಿ ಸಿದ್ಧವಾದ ಅತ್ಯಾಧುನಿಕ ಜೆಟ್ ಟ್ರೇನರ್ (ಎಜೆಟಿ)ಗಳಾದ `ಹಾಕ್ ಎಂಕೆ 132' ವಿಮಾನಗಳು ಸತತ ಐದು ದಿನಗಳ ಪ್ರಯಾಣದ ನಂತರ ಬೀದರಿನ ರನ್ ವೇಗೆ ಶರವೇಗದಲ್ಲಿ ಬಂದಿಳಿದವು. ವಿಂಗ್ ಕಮಾಂಡರ್ ಪಂಕಜ್ ಜೈನ್ ಮತ್ತು ಸ್ಕ್ವಾಡ್ರನ್ ಲೀಡರ್ ತರುಣ್ ಹಿಂದ್ವಾನಿ ಇಂಗ್ಲೆಂಡಿನಿಂದ ಹಾಕ್ ಯುದ್ಧ ವಿಮಾನಗಳನ್ನು `ಹಾರಿಸಿ'ಕೊಂಡು ಬಂದರು. ಅವರೊಂದಿಗೆ ಬ್ರಿಟಿಷ್ ಪೈಲಟ್ ಗಳಾದ ಜಾನ್ ಲಾಸನ್ ಮತ್ತು ಪೀಟರ್ ಕೊಸೊಗೊರಿನ್ ಇದ್ದರು. ಬ್ರಿಟಿಷ್ ಏರೋಸ್ಪೇಸ್ (ಬಿಇಎ) ಸಂಸ್ಥೆಯು ನಿಗದಿತ ಸಮಯದಲ್ಲಿಯೇ ಹಾಕ್ ವಿಮಾನಗಳನ್ನು ಪೂರೈಸಿತು. ಅತ್ಯುತ್ತಮ ಗುಣಮಟ್ಟದ ಹಾಕ್ ಗಳ ನಿರ್ಮಾಣದಲ್ಲಿ ಬೆಂಗಳೂರಿನ ಎಚ್ ಎ ಎಲ್ ಸಂಸ್ಥೆ ಕೂಡ ಪ್ರಮುಖ ಪಾತ್ರ ವಹಿಸಿತ್ತು. ಮೂರು ಸಾವಿರ ಕಿ.ಮೀ. ಕ್ರಮಿಸಿರುವ ಹಾಕ್ ಗಳು ಬೀದರ ತಲುಪುವಲ್ಲಿ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಹಂಟರ್ ವಿಮಾನಗಳ ನಿವೃತ್ತಿಯ ನಂತರ ಮಿಗ್ 21 ವಿಮಾನಗಳನ್ನು ಬಳಸಲಾಗುತ್ತಿತ್ತು. ಮುಂಚೂಣಿಯಲ್ಲಿದ್ದು ಹಾರಾಟ ನಡೆಸುವುದಕ್ಕೆ ಮಿಗ್ ವಿಮಾನಗಳು ಸೂಕ್ತವಾದವುಗಳಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಹಾಕ್ ವಿಮಾನಗಳ ಸೇರ್ಪಡೆ ಅಗತ್ಯವಾಗಿತ್ತು. ಗಂಟೆಗೆ 1050 ಕಿ.ಮೀ. ವೇಗದಲ್ಲಿ ಸಂಚರಿಸುವ ಹಾಕ್ ಯುದ್ಧ ವಿಮಾನಗಳಲ್ಲಿ 9,100 ಕೆ.ಜಿ. ಭಾರದ ಶಸ್ತ್ರಾಸ್ತ್ರಗಳನ್ನು ಸಾಗಿಸಬಹುದು. 13 ಅಡಿ ಎತ್ತರ ಮತ್ತು 40 ಅಡಿ ಅಗಲ ಇರುವ ಈ ಹಾಕ್ ಗಳಲ್ಲಿ ರಾಕೆಟ್, ಮಿಸೈಲ್, ಪ್ರಾಕ್ಟೀಸ್ ಬಾಂಬುಗಳನ್ನು ಕೊಂಡೊಯ್ಯಬಹುದು. 

2007: ಕಾವೇರಿ ನದಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ನವೆಂಬರ್ 14ಂದು  `ಸುವರ್ಣ ಯುಗ' ಎಂಬ ಹೊಸ ಪಕ್ಷ ಆರಂಭಿಸಲು ನಿರ್ಧರಿಸಿದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಪುತ್ರ ಮಹಿಮಾ ಪಟೇಲ್ ಈದಿನ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

2007: ಗುಜರಾತಿನ ಗೋಧ್ರಾದಲ್ಲಿ ಸಬರಮತಿ ರೈಲಿನ ಕೆಲ ಬೋಗಿಗಳಿಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿ ಇದ್ರಿಸ್ ಸಾದಿಕನನ್ನು ಗೋಧ್ರಾ ಪೊಲೀಸರು ಬಂಧಿಸಿದರು.  2002ರಲ್ಲಿ ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದಾಗ ಅದರಲ್ಲಿ ಪ್ರಯಾಣಿಸುತ್ತಿದ್ದ 59 ಕರಸೇವಕರು ಸಜೀವ ದಹನಗೊಂಡಿದ್ದರು. ಇದರ ಪರಿಣಾಮವಾಗಿ ಗುಜರಾತಿನಲ್ಲಿ ಸಂಭವಿಸಿದ ಕೋಮು ಗಲಭೆಯಲ್ಲಿ ಅಪಾರ ಪ್ರಮಾಣದದಲ್ಲಿ ಸಾವು ನೋವು ಸಂಭವಿಸಿತ್ತು. ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿ ಇದ್ರಿಸ್ ಸಾದಿಕ್ ತನ್ನ ಮನೆಗೆ ಬಂದ ಮಾಹಿತಿ ಅನುಸರಿಸಿ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡರು.

2007: ದಕ್ಷಿಣ ಧ್ರುವ ಅಂಟಾರ್ಟಿಕಾದಲ್ಲಿ ಸಂಶೋಧನಾ ಕಾರ್ಯವನ್ನು ಇನ್ನಷ್ಟು ವಿಸ್ತ್ರತಗೊಳಿಸಲು ನಿರ್ಧರಿಸಿದ ಚೀನಾದ 90ಕ್ಕೂ ಹೆಚ್ಚು ವಿಜ್ಞಾನಿಗಳು ಮತ್ತು ಸಹಾಯಕ ಸಿಬ್ಬಂದಿ ಸೋಮವಾರ ಅಂಟಾರ್ಟಿಕಾದತ್ತ ಪಯಣ ಬೆಳೆಸಿದರು. `ಸ್ನೊ ಡ್ರಾಗನ್' ಎಂಬ ಹಡಗಿನಲ್ಲಿ ಈ ತಂಡ ಅಂಟಾರ್ಟಿಕಾದತ್ತ ಹೊರಟಾಗ, ಸೇನೆಯ ಸಂಗೀತದ ಬ್ಯಾಂಡ್, ಚೀನಾದ ಸಾಂಪ್ರದಾಯಿಕ ನೃತ್ಯ, ಸಿಡಿಮದ್ದಿನ ಸಂಭ್ರಮದ ನಡುವೆ ಈ ಸಿಬ್ಬಂದಿಯನ್ನು ಬೀಳ್ಕೊಡಲಾಯಿತು.

2006: ಉತ್ತರಾಂಚಲದ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಡಾ. ಅನಿಲ್ ಕುಮಾರ ತಿವಾರಿ ಅವರನ್ನು ಅಪರಿಚಿತ ಬಂದೂಕುಧಾರಿಯೊಬ್ಬ ಗುಂಡಿಟ್ಟು ಹತ್ಯೆ ಮಾಡಿದ.

2006: ಬ್ರಿಟಿಷ್ ವಿಜ್ಞಾನಿಗಳು ಜಗತ್ತಿನ ಮೊತ್ತ ಮೊದಲ `ಕೃತಕ ಹೊಟ್ಟೆ'ಯನ್ನು ನಿರ್ಮಿಸಿದರು. ಈ ಕೃತಕ ಹೊಟ್ಟೆಯು ಹೊಟ್ಟೆಯ ಒಳಗೆ ಏನು ಕ್ರಿಯೆ ಸಂಭವಿಸುತ್ತದೆ, ಮತ್ತು ಅಜೀರ್ಣ ಸಮಸ್ಯೆ ನಿವಾರಿಸಲು ಎಂತಹ ಆರೋಗ್ಯ ಪೂರ್ಣ ಆಹಾರ ತೆಗೆದುಕೊಳ್ಳಬೇಕು ಎಂಬುದನ್ನು ಅರಿತುಕೊಳ್ಳಲು ನೆರವಾಗುತ್ತದೆ. ನಾರ್ವಿಜ್ ಆಹಾರ ಮತ್ತು ಸಂಶೋಧನಾ ಸಂಸ್ಥೆಯ ವಿಜ್ಞಾನಿ ಮಾರ್ಟಿನ್ ವಿಕ್ಹಾಮ್ ಮತ್ತು ಸಹೋದ್ಯೋಗಿಗಳು ಈ `ಕೃತಕ ಹೊಟ್ಟೆ'ಯನ್ನು ನಿರ್ಮಿಸಿದವರು.

2006: ಹಲವು ರೋಗಗಳನ್ನು ಆರಂಭದ ಹಂತದಲ್ಲಿಯೇ ಗುರುತಿಸುವ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿರುವುದಾಗಿ ಭಾರತೀಯ ವಿಜ್ಞಾನ ಸಂಸ್ಥೆಯ ಭೌತ ಶಾಸ್ತ್ರ ವಿಭಾಗದ ಬೆಂಗಳೂರು ಮೂಲದ ವಿಜ್ಞಾನಿಗಳಾದ ಡಾ. ಅಜಯ್ ಸೂದ್ ಮತ್ತು ಅಜಯ್ ನೇಗಿ ಪ್ರಕಟಿಸಿದರು. ಬಹುತೇಕ ಎಲ್ಲ ರೋಗಗಳ ಪತ್ತೆಗೆ ಬಳಸುವ ಆಂಟಿಜನ್ ಡಯಾಗ್ನೋಸ್ಟಿಕ್ ಉಪಕರಣದ ದಕ್ಷತೆಯನ್ನು ನೂರು ಪಟ್ಟು ಹೆಚ್ಚಿಸುವ ನಿಟಿನಲ್ಲಿ ಸೂಕ್ಷ್ಮ ವಿದ್ಯುತ್ ಪಲ್ಸ್ ಗಳನ್ನು ಅವರು ಬಳಸಿದರು. ಈ ತಂತ್ರಜ್ಞಾನದಿಂದ ರೋಗವನ್ನು ಆರಂಭಗೊಂಡ ಮೊದಲ ಅಥವಾ ಎರಡನೇ ದಿನವೇ ಪತ್ತೆಹಚ್ಚಲು ಸಾಧ್ಯವಿದೆ.

 2005: ಭಾರತದ ಪರಿಶುದ್ಧ ರಾಜಕಾರಣಿಗಳಲ್ಲಿ ಒಬ್ಬರಾದ, ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ನಾಯಕ, ಕೇಂದ್ರದ ಮಾಜಿ ಸಚಿವ ಪ್ರೊ. ಮಧು ದಂಡವತೆ (1924-2005) ಮುಂಬೈಯಲ್ಲಿ ನಿಧನರಾದರು. ಅವರು ಹುಟ್ಟಿದ್ದು 1924ರ ಜನವರಿ 21ರಂದು. ಭಾರತದ ಹೆಮ್ಮೆಯ ಕೊಂಕಣ ರೈಲ್ವೆ ದಂಡವತೆ ಅವರ ಕಲ್ಪನೆಯ ಕೂಸು.

2000: ಜಾರ್ಖಂಡ್ ಭಾರತದ 28ನೇ ರಾಜ್ಯವಾಯಿತು. ರಾಂಚಿ ಅದರ ರಾಜಧಾನಿಯಾಯಿತು.

1990: ಜಪಾನಿನ ಚಕ್ರವರ್ತಿ ಅಕಿಹಿಟೊ ಅವರು ಔಪಚಾರಿಕವಾಗಿ ಕ್ರೈಸಾಂಥೇಮಮ್ (ಸೇವಂತಿಗೆ) ಸಿಂಹಾಸನವನ್ನು ಏರಿದರು.

1981: ಅಮೆರಿಕಾದ ಷಟಲ್ ನೌಕೆ ಕೊಲಂಬಿಯಾ ಬಾಹ್ಯಾಕಾಶಕ್ಕೆ ಎರಡನೇ ಯಾನ ಮಾಡಿದ ಮೊದಲ ಬಾಹ್ಯಾಕಾಶ ನೌಕೆ ಎನಿಸಿತು.

1960: ಸಾಹಿತಿ ನಂದಾ ಪ್ರಸಾದ್ ಜನನ.

1953: ಸಾಹಿತಿ ಸದಾನಂದ ಜನನ.

1946: ಪಂಡಿತ ಮದನ ಮೋಹನ ಮಾಳವೀಯ ನಿಧನರಾದರು.

1946: ಖ್ಯಾತ ಕಾದಂಬರಿಕಾರ ಎಚ್. ಕೆ. ಅನಂತರಾವ್ ಅವರು ಎಚ್.ಬಿ. ಕೃಷ್ಣರಾವ್- ರಾಧಾಬಾಯಿ ದಂಪತಿಯ ಮಗನಾಗಿ ಹೈದರಾಬಾದಿನಲ್ಲಿ ಜನಿಸಿದರು.

1933: ಸಾಹಿತಿ ಜೀಶಂಪ ಜನನ.

1923: ಸಾಹಿತಿ ಗಂಗಾಧರ ಚಿತ್ತಾಲ ಜನನ.

1896: `ಭಾರತದ ಪಕ್ಷಿ ಮಾನವ' (ಬಡರ್್ ಮ್ಯಾನ್ ಆಫ್ ಇಂಡಿಯಾ) ಎಂದೇ ಖ್ಯಾತರಾಗಿರುವ ಪಕ್ಷಿತಜ್ಞ ಸಲೀಂ ಅಲಿ (1896-1987) ಹುಟ್ಟಿದ ದಿನ.

1893: ಅಫ್ಘಾನಿಸ್ಥಾನ ಮತ್ತು ಅದರ ಪೂರ್ವ ಹಾಗೂ ದಕ್ಷಿಣ ಭಾಗದಲ್ಲಿ ಆಗಿನ ಬ್ರಿಟಿಷ್ ಭಾರತದ ಗಡಿಗಳನ್ನು ಗುರುತಿಸುವ ಒಪ್ಪಂದಕ್ಕೆ ಭಾರತ ಸರ್ಕಾರದ ವಿದೇಶಾಂಗ ಕಾರ್ಯದರ್ಶಿ ಮಾರ್ಟಿಮರ್ ಡ್ಯುರಾಂಡ್ ಮತ್ತು ಅಫ್ಘಾನಿಸ್ಥಾನದ ಅಮೀರ್ ಅಬ್ದುಲ್ ರಹಮಾನ್ ಖಾನ್ ಸಹಿ ಹಾಕಿದರು. ಈ ಗಡಿ ರೇಖೆಯನ್ನು `ಡ್ಯುರಾಂಡ್ ಲೈನ್' ಎಂದೇ ಹೆಸರಿಸಲಾಯಿತು.

1889: ಡೆ ವಿಟ್ ವ್ಯಾಲೇಸ್ (1889-1981) ಹುಟ್ಟಿದ ದಿನ. ಇವರು ಜಗತಿನಲ್ಲಿ ಅತ್ಯಂತ ಹೆಚ್ಚು ಪ್ರಸಾರವುಳ್ಳ ನಿಯತಕಾಲಿಕಗಳಲ್ಲಿ ಒಂದಾದ `ರೀಡರ್ಸ್ ಡೈಜೆಸ್ಟ್' ಪತ್ರಿಕೆಯನ್ನು ರೂಪಿಸಿದವರು ಹಾಗೂ ಪ್ರಕಾಶಕರು.

1866: ಚೀನೀ ನ್ಯಾಷನಲಿಸ್ಟ್ ಪಾರ್ಟಿಯ ನಾಯಕ ಹಾಗೂ ಚೀನಾ ಗಣರಾಜ್ಯದ ಮೊದಲ ತಾತ್ಕಾಲಿಕ ಅಧ್ಯಕ್ಷ ಸನ್-ಯಾತ್-ಸೆನ್ (1866-1925) ಹುಟ್ಟಿದ ದಿನ. ಇವರು ಆಧುನಿಕ ಚೀನಾದ ಜನಕ ಎಂದೇ ಖ್ಯಾತರಾಗಿದ್ದಾರೆ.

1880: ಭಾರತದ ಸ್ವಾತಂತ್ರ್ಯ ಹೋರಾಟಗಾರ ಸೇನಾಪತಿ ಬಾಪಟ್ (1880-1967) ಹುಟ್ಟಿದ ದಿನ.

1855: ಭಾರತೀಯ ಸ್ವಾತಂತ್ರ್ಯ ಯೋಧ ಹಾಗೂ ಕೈಗಾರಿಕೋದ್ಯಮಿ ಕುಂದನ್ ಮಲ್ ಸೋಭಚಂದ್ ಫಿರೋಡಿಯಾ (1855-1968) ಹುಟ್ಟಿದ ದಿನ. 

1817: ಬಹಾಯಿ ಪಂಥದ ಸ್ಥಾಪಕ ಬಹಾವುಲ್ಲಾ (1817-1892) ಹುಟ್ಟಿದ ದಿನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement