ಇಂದಿನ ಇತಿಹಾಸ
ನವೆಂಬರ್ 28
ಚೆಲುವು, ಅನುಭವ, ಚಿಂತನೆ ಇವೆಲ್ಲದರ ಖಣಿಯಾದ ಸೂಸಾನ್ ಪೋಲ್ಗಾರ್ ಅವರು ಈದಿನ ಬೆಂಗಳೂರಿನಲ್ಲಿ ನಡೆದ `ನ್ಯಾಷನಲ್ ಜಿಯೊಗ್ರಾಫಿಕ್ ಚಾನೆಲ್'ನ `ಮೈ ಬ್ರಿಲಿಯಂಟ್ ಬ್ರೈನ್' ಕಾರ್ಯಕ್ರಮದಲ್ಲಿ ಏಕಕಾಲಕ್ಕೆ ಇಪ್ಪತ್ತೊಂದು ಮಂದಿ ಆಟಗಾರರೊಂದಿಗೆ ಸ್ನೇಹ ಪರ ಚೆಸ್ ಆಡಿ, ಅತ್ಯುತ್ತಮ ಚಿಂತನಾ ಶಕ್ತಿಯ ಜೊತೆಯಲ್ಲಿ ಎದುರಾಳಿಯ ಮನಸ್ಸನ್ನು ಅರಿತು `ಕಾಯಿ'ಗಳನ್ನು ನಡೆಸುವ ಸಾಮರ್ಥ್ಯ ಇದ್ದರೆ ಎಷ್ಟೇ ಸಂಖ್ಯೆಯ ಸ್ಪರ್ಧಿಗಳಿದ್ದರೂ ಅವರನ್ನು ಸೋಲಿಸಬಹುದು ಎಂದು ತೋರಿಸಿದರು.
2007: ಚೆಲುವು, ಅನುಭವ, ಚಿಂತನೆ ಇವೆಲ್ಲದರ ಖಣಿಯಾದ ಸೂಸಾನ್ ಪೋಲ್ಗಾರ್ ಅವರು ಈದಿನ ಬೆಂಗಳೂರಿನಲ್ಲಿ ನಡೆದ `ನ್ಯಾಷನಲ್ ಜಿಯೊಗ್ರಾಫಿಕ್ ಚಾನೆಲ್'ನ `ಮೈ ಬ್ರಿಲಿಯಂಟ್ ಬ್ರೈನ್' ಕಾರ್ಯಕ್ರಮದಲ್ಲಿ ಏಕಕಾಲಕ್ಕೆ ಇಪ್ಪತ್ತೊಂದು ಮಂದಿ ಆಟಗಾರರೊಂದಿಗೆ ಸ್ನೇಹ ಪರ ಚೆಸ್ ಆಡಿ, ಅತ್ಯುತ್ತಮ ಚಿಂತನಾ ಶಕ್ತಿಯ ಜೊತೆಯಲ್ಲಿ ಎದುರಾಳಿಯ ಮನಸ್ಸನ್ನು ಅರಿತು `ಕಾಯಿ'ಗಳನ್ನು ನಡೆಸುವ ಸಾಮರ್ಥ್ಯ ಇದ್ದರೆ ಎಷ್ಟೇ ಸಂಖ್ಯೆಯ ಸ್ಪರ್ಧಿಗಳಿದ್ದರೂ ಅವರನ್ನು ಸೋಲಿಸಬಹುದು ಎಂದು ತೋರಿಸಿದರು.
2007: ದಿನ ಪತ್ರಿಕೆಗಳಲ್ಲಿ ತಮ್ಮ ಬಗ್ಗೆ ಬಂದ ಲೇಖನಗಳು ಹಾಗೂ ಛಾಯಾಚಿತ್ರಗಳನ್ನು ಸಂಗ್ರಹಿಸುವ ಮೂಲಕ ಕೇರಳದ ಕೊಚ್ಚಿಯ ವಯೋವೃದ್ಧ, ಮಾಜಿ ಕಾಂಗ್ರೆಸ್ ಧುರೀಣ 78 ರ ಹರೆಯದ ಅಬ್ರಹಾಂ ಪುತುಸ್ಸೆರಿ ಲಿಮ್ಕಾ ದಾಖಲೆ ಸ್ಥಾಪಿಸಿದರು. 60 ವರ್ಷಗಳ ಸಾರ್ವಜನಿಕ ಬದುಕಿನಲ್ಲಿ ತಮ್ಮ ಕುರಿತು ವಿವಿಧ ದಿನಪತ್ರಿಕೆಗಳಲ್ಲಿ ಬಂದ 2000 ಕ್ಕೂ ಹೆಚ್ಚು ವರದಿಗಳು ಹಾಗೂ ಛಾಯಾಚಿತ್ರಗಳನ್ನು ಇವರು ಸಂಗ್ರಹಿಸಿದ್ದಾರೆ. 1948ರಿಂದ ಸಂಗ್ರಹಿಸಿದ ವರದಿಗಳು ಹಾಗೂ ಛಾಯಾಚಿತ್ರಗಳ 480 ಪುಟುಗಳ ಆಲ್ಬಂ ತಯಾರಿಸಿದ್ದಾರೆ. ಇದರ ತೂಕ 4.5 ಕೆಜಿ.
2007: ಗುಜರಾತಿನಲ್ಲಿ ವಿಧಾನಸಭೆ ಚುನಾವಣಾ ಸಿದ್ಧತೆಗಳು ಆರಂಭವಾದವು. ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಮಣಿನಗರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. 2002ರಲ್ಲಿ ಗುಜರಾತಿನಲ್ಲಿ ಕೋಮುಗಲಭೆ ನಡೆದ ನಂತರ ಚುನಾವಣೆ ನಡೆದಿತ್ತು. ಆಗ ಕೆಲವು ಪ್ರದೇಶಗಳಲ್ಲಿ ಹಿಂದುತ್ವದ ಅಲೆ ಜೋರಾಗಿತ್ತು. ಹಿಂದೂಗಳೇ ಬಹುಸಂಖ್ಯಾತರಾದ ಮಣಿನಗರ ಕ್ಷೇತ್ರದಿಂದ ಮೋದಿ ಜಯಭೇರಿ ಬಾರಿಸಿದ್ದರು.
2007: 1993ರ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಸುಪ್ರೀಂಕೋರ್ಟಿನಿಂದ ಜಾಮೀನು ಪಡೆದ ನಟ ಸಂಜಯ್ ದತ್ ಹಾಗೂ ಇತರ 16 ಅಪರಾಧಿಗಳ ಬಿಡುಗಡೆಗೆ ವಿಶೇಷ ಟಾಡಾ ನ್ಯಾಯಾಲಯ ಆದೇಶ ನೀಡಿತು. ಸರಣಿ ಸ್ಫೋಟ ಪ್ರಕರಣದಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದ ಮೇಲೆ ಸಂಜಯ್ ದತ್ ಅವರಿಗೆ ಟಾಡಾ ಕೋರ್ಟ್ 6 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಅಕ್ಟೋಬರ್ 22ರಿಂದ ಅವರು ಯೆರವಾಡ ಜೈಲಿನಲ್ಲಿ ಇರಿಸಲಾಗಿತ್ತು. ಪ್ರಕರಣದ ಇತರ ಆರೋಪಿಗಳನ್ನು ಮಹಾರಾಷ್ಟ್ರದ ವಿವಿಧ ಜೈಲುಗಳಲ್ಲಿ ಇರಿಸಲಾಗಿತ್ತು.ಸಂಜಯ್ ಹಾಗೂ ಇತರ 16 ಮಂದಿಗೆ ನವೆಂಬರ್ 27ರಂದು ಸುಪ್ರೀಂಕೋರ್ಟ್ ಜಾಮೀನು ನೀಡಿತು. 1995 ರಲ್ಲಿ ಮೊದಲ ಬಾರಿ ಸುಪ್ರೀಂಕೋರ್ಟ್ ಜಾಮೀನು ನೀಡಿದಾಗ ಸಂಜಯ್ ದತ್ 5 ಲಕ್ಷ ರೂ ಭದ್ರತಾ ಮುಚ್ಚಳಿಕೆ ನೀಡಿದ್ದರು. ಈಗಲೂ ಅಷ್ಟೇ ಮೊತ್ತದ ಹಣ ನೀಡಬೇಕು ಎಂದು ನ್ಯಾಯಾಧೀಶ ಕೋಡೆ ಸೂಚಿಸಿದರು.
2007: ಸ್ವತಂತ್ರ ಪ್ಯಾಲೆಸ್ಟೈನ್ ರಾಜ್ಯ ಸ್ಥಾಪನೆ ಕುರಿತಂತೆ ಸ್ಥಗಿತವಾಗಿದ್ದ ದೀರ್ಘಕಾಲೀನ ಮಾತುಕತೆಯನ್ನು ಪುನರಾರಂಭಿಸಲು ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಾಯಕರು ಒಪ್ಪಿಕೊಂಡರು. ಮುಂದಿನ ವರ್ಷದ ಅಂತ್ಯದೊಳಗಾಗಿ ಸ್ವತಂತ್ರ ಪ್ಯಾಲೆಸ್ಟೈನಿ ರಾಜ್ಯ ಸ್ಥಾಪಿಸಲು ಇಸ್ರೇಲ್ ಪ್ರಧಾನಿ ಎಹುದ್ ಓಲ್ಮರ್ಟ್ ಮತ್ತು ಪ್ಯಾಲೆಸ್ಟೈನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರು ಪರಸ್ಪರ ಒಪ್ಪಿಗೆ ನೀಡಿದ್ದಾರೆ' ಎಂದು ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಮೇರಿ ಲ್ಯಾಂಡಿನ ಅನ್ನಾಪೊಲಿಸ್ನಲ್ಲಿ ಹೇಳಿದರು.
2007: ಪಾಕಿಸ್ಥಾನದ ಸೇನಾ ಮುಖ್ಯಸ್ಥನ ಹುದ್ದೆಯನ್ನು ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಕೊನೆಗೂ ತ್ಯಜಿಸಿದರು. ಪುನಃ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಒಂದು ದಿನ ಮುಂಚಿತವಾಗಿ ಮುಷರಫ್ ಅವರು ಸೇನಾ ಮುಖ್ಯಸ್ಥನ ಸ್ಥಾನವನ್ನು ಇಸ್ಲಾಮಾಬಾದಿನಲ್ಲಿ ಜನರಲ್ ಅಷ್ಫಾಕ್ ಪರ್ವೇಜ್ ಕಿಯಾನಿ ಅವರಿಗೆ ವಹಿಸಿಕೊಟ್ಟರು.
2007: ಕಿರ್ಗಿಜ್ ಸ್ಥಾನದ ಪ್ರಧಾನಿ ಅಲ್ಮಜ್ ಬೆಕ್ ಅತಾಂಬೆಯೆವ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಈ ರಾಜೀನಾಮೆಯನ್ನು ಅಧ್ಯಕ್ಷ ಕುರ್ಮನ್ ಬೆಕ್ ಬಕಿಯೆವ್ ಅಂಗೀಕರಿಸಿದರು.
2007: 2001ರಲ್ಲಿ ಬಹು ಚರ್ಚೆಗೆ ಗ್ರಾಸವಾಗಿದ್ದ `ಬಿಲ್ಡರ್' ಶ್ರೀನಿವಾಸ ಅವರ ಕೊಲೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪಕ್ಕೆ ಒಳಗಾಗಿದ್ದ ಮುತ್ತಪ್ಪ ರೈ ಅವರನ್ನು ಆರೋಪ ಮುಕ್ತಗೊಳಿಸಿ ಸೆಷನ್ಸ್ ನ್ಯಾಯಾಲಯ ಹೊರಡಿಸಿದ ಆದೇಶವನ್ನು ಹೈಕೋರ್ಟ್ ಊರ್ಜಿತಗೊಳಿಸಿತು.
2007: ತರಗತಿ ಬೋಧನೆಯಲ್ಲಿ ತಂತ್ರಜ್ಞಾನವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಲು ನೆರವಾಗುವ, ಬೋಧನೆ ಮತ್ತು ಕಲಿಕೆಯನ್ನು ಹೆಚ್ಚು ಸುಲಲಿತಗೊಳಿಸುವ ಸಾಫ್ಟ್ಟವೇರನ್ನು ಬೆಂಗಳೂರಿನಲ್ಲಿ ಪ್ರೊಮೆಥಿಯಾನ್ ದೇಶಿ ಮಾರುಕಟ್ಟೆಗೆ ಬಿಡುಗಡೆ ಮಾಡಿತು. ವಿಭಿನ್ನ ಬಗೆಯ ತಂತ್ರಜ್ಞಾನ ಆಧಾರಿತ ಬೋಧನಾ ವಿಧಾನದ ಮೂಲಕ ಮಕ್ಕಳ ಗಮನ ಕೇಂದ್ರಿಕರಿಸುತ್ತಲೇ ಪರಿಣಾಮಕಾರಿ ಕಲಿಕೆಗೆ ಈ ಶ್ವೇತ ಹಲಗೆ (ವ್ಹೈಟ್ ಬೋರ್ಡ್) ಶ್ರೇಣಿಯ ಉತ್ಪನ್ನಗಳು ಶಿಕ್ಷಣ ರಂಗದಲ್ಲಿ ಹೊಸ ಅಲೆ ಮೂಡಿಸಲಿವೆ ಎಂಬುದು ಕಂಪೆನಿಯ ಅಂತಾರಾಷ್ಟ್ರೀಯ ಮಾರಾಟ ವ್ಯವಸ್ಥಾಪಕ ಪೀಟರ್ ಆರ್ಮೆರೋಡ್ ವಿಶ್ವಾಸ. ಈ ಶ್ವೇತ ಹಲಗೆಯನ್ನು ದೀರ್ಘಕಾಲ ಬಾಳಿಕೆ ಬರುವಂತೆ ನಿರ್ಮಿಸಲಾಗಿದೆ. ಕಂಪ್ಯೂಟರ್, ಪ್ರೊಜೆಕ್ಟರ್ ಮತ್ತು ಬಿಳಿ ಹಲಗೆ ಜೊತೆಗೆ ನೀಡಲಾಗುವ ಈ ಸಾಫ್ಟ್ಟವೇರ್ ವರ್ಣರಂಜಿತ ಕಲಿಕೆಯ ಅನುಭವ ನೀಡುತ್ತದೆ. ಬೋಧನೆಗೆ ಅಗತ್ಯವಾದ ಪಠ್ಯಕ್ರಮ, ಚಿತ್ರ, ನಕ್ಷೆ ಮತ್ತಿತರ ಪೂರಕ ಮಾಹಿತಿಯೂ ಈ ಸಾಫ್ಟವೇರಿನಲ್ಲಿ ಅಡಕವಾಗಿರುತ್ತದೆ. ಸದ್ಯಕ್ಕೆ ಈ ತಂತ್ರಜ್ಞಾನವು 25 ಭಾಷೆಗಳಲ್ಲಿ ಲಭ್ಯ. ಮುಂದೆ ಶೀಘ್ರದಲ್ಲೇ 40 ಭಾಷೆಗಳಲ್ಲಿ ಅಭಿವೃದ್ಧಿಪಡಿಸಲಾಗುವುದು. ಬೆಂಗಳೂರಿನ ಬೆಥನಿ ಹೈಸ್ಕೂಲ್ ಈ ತಂತ್ರಜ್ಞಾನ ಅಳವಡಿಸಿಕೊಂಡಿದೆ.
2006: ತಮ್ಮ ಆಪ್ತ ಸಹಾಯಕ ಶಶಿನಾಥ ಝಾ ಕೊಲೆ ಪ್ರಕರಣದಲ್ಲಿ ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಶಿಬು ಸೊರೇನ್ ತಪ್ಪಿತಸ್ಥ ಎಂಬುದಾಗಿ ದೆಹಲಿಯ ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ಬಿ.ಆರ್. ಕೆದಿಯಾ ಅವರ ನ್ಯಾಯಾಲಯ ತೀರ್ಪು ನೀಡಿತು. ಈ ಹಿನ್ನೆಲೆಯಲ್ಲಿ ಶಿಬು ಸೊರೇನ್ ಕೇಂದ್ರ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದರು. ಕಾಕತಾಳೀಯವಾಗಿ 12 ವರ್ಷಗಳ ಬಳಿಕ ಕೊಲೆ ನಡೆದ ದಿನಾಂಕದಂದೇ ತಪ್ಪಿತಸ್ಥರೆಂದು ಘೋಷಿತರಾಗಿರುವ ಸೊರೇನ್ ಸ್ವಾತಂತ್ರ್ಯಾನಂತರ ಕೊಲೆ ಅಪರಾಧಕ್ಕಾಗಿ ಶಿಕ್ಷೆಗೆ ಗುರಿಯಾದ ಮೊದಲ ಕೇಂದ್ರ ಸಂಪುಟ ಸಚಿವ ಎಂಬ ಕುಖ್ಯಾತಿಗೂ ಪಾತ್ರರಾದರು. 1994ರ ನವೆಂಬರ್ 28ರಂದು ಝಾ ಅವರನ್ನು ಕೊಂದ ಪ್ರಕರಣದಲ್ಲಿ ಇತರ ನಾಲ್ಕು ಮಂದಿಯನ್ನು ಕೂಡಾ ತಪ್ಪಿತಸ್ಥರು ಎಂದು ನ್ಯಾಯಾಧೀಶರು ತೀರ್ಪು ನೀಡಿದರು. ತೀರ್ಪು ಹೊರಬೀಳುತ್ತಿದ್ದಂತೆಯೇ ನ್ಯಾಯಾಲಯದಲ್ಲಿ ಹಾಜರಿದ್ದ 62 ವರ್ಷದ ಸೊರೇನ್ ಅವರನ್ನು ಬಂಧಿಸಲಾಯಿತು. ಸೊರೇನ್ ಅವರು ಕ್ರಿಮಿನಲ್ ಸಂಚು, ಕೊಲೆ ಮತ್ತು ಅಪಹರಣದ ಅಪರಾಧಗಳಲ್ಲಿ ತಪ್ಪಿತಸ್ಥರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿತು. ಸೊರೇನ್ ಅವರು ಸಂಪುಟ ತ್ಯಜಿಸಬೇಕಾಗಿ ಬಂದದ್ದು ಇದು ಎರಡನೇ ಸಲ. ಈ ಮೊದಲು 1980ರ ಆದಿಯ ಪ್ರತಿಭಟನಾ ಪ್ರದರ್ಶನ ಕಾಲದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ನ್ಯಾಯಾಲಯವೊಂದು ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಿದಾಗ ಸೊರೇನ್ ಅವರು ರಾಜೀನಾಮೆ ನೀಡಬೇಕಾಗಿ ಬಂದಿತ್ತು. ನಂತರ ಜಾಮೀನು ಪಡೆದಿದ್ದ ಸೊರೇನ್ ಅವರನ್ನು ಈ ವರ್ಷ ಜನವರಿಯಲ್ಲಿ ಸಂಪುಟಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಪ್ರಸ್ತುತ ಝಾ ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ, ಝಾ ಅವರನ್ನು 1994ರ ಮೇ 22ರಂದು ದೆಹಲಿಯಿಂದ ಅಪಹರಿಸಿ ರಾಂಚಿ ಸಮೀಪದ ಪಿಸ್ಕಾ ನಗರಿ ಗ್ರಾಮಕ್ಕೆ ಒಯ್ದು ಅಲ್ಲಿ ಕೊಲ್ಲಲಾಯಿತು ಎಂದು 1998ರ ನವೆಂಬರ್ 10ರಂದು ಸಲ್ಲಿಸಿದ ಪ್ರಕರಣದ ದೋಷಾರೋಪ ಪಟ್ಟಿಯಲ್ಲಿ ತಿಳಿಸಿತ್ತು. ಝಾ ಅವರಿಗೆ 1993ರ ಜುಲೈ ತಿಂಗಳಲ್ಲಿ ಪಿ.ವಿ. ನರಸಿಂಹರಾವ್ ಸರ್ಕಾರ ಅವಿಶ್ವಾಸ ನಿರ್ಣಯ ಎದುರಿಸಿದ ಸಂದರ್ಭದಲ್ಲಿ ರಾವ್ ಸರ್ಕಾರ ಉಳಿಕೆಗಾಗಿ ನಡೆದ ಜೆಎಂಎಂ - ಕಾಂಗ್ರೆಸ್ ಒಪ್ಪಂದದ ವಿವರ ಗೊತ್ತಿತ್ತು. ಅವರು ಈ ಹಣದಲ್ಲಿ ತಮ್ಮ ಪಾಲು ನೀಡುವಂತೆ ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಕೊಲ್ಲಲಾಯಿತು. ಝಾ ಅವರು ಹೆಚ್ಚು ಹಣ ನೀಡುವಂತೆ ಸೊರೇನ್ ಅವರನ್ನು ಒತ್ತಾಯಿಸುತ್ತಿದ್ದರು. ಹೀಗೆ ಒತ್ತಾಯಿಸಲು ಸೊರೇನ್ ಅವರ ಅಕ್ರಮ ಹಣಕಾಸು ವ್ಯವಹಾರಗಳ ಬಗ್ಗೆ ಹಾಗೂ ಅವರ ಹಲವಾರು ರಹಸ್ಯಗಳು ಗೊತ್ತಿದ್ದುದು ಕಾರಣವಾಗಿತ್ತು ಎಂದು ದೋಷಾರೋಪ ಪಟ್ಟಿಯಲ್ಲಿ ಸಿಬಿಐ ತಿಳಿಸಿತ್ತು. 1998ರ ಆಗಸ್ಟ್ 13ರಂದು ಸಿಬಿಐ ಝಾ ಅವರ ಅಸ್ಥಿಪಂಜರವನ್ನು ರಾಂಚಿ ಸಮೀಪದ ಪಿಸ್ಕಾನಗರಿ ಗ್ರಾಮದ ಸಮೀಪ ಪತ್ತೆ ಹಚ್ಚಲಾಯಿತು ಎಂದು ಹೇಳಿತ್ತು. ಹೈದರಾಬಾದಿನ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಈ ಅಸ್ಥಿಪಂಜರದ ಪರಿಶೀಲನೆಯ ಬಳಿಕ ತಲೆ ಬುರುಡೆ ಝಾ ಅವರದ್ದು ಎಂದು ತಮ್ಮ ವರದಿಯಲ್ಲಿ ದೃಢಪಡಿಸಿದ್ದರು. ಸೊರೇನ್ ಅವರು ಮೊದಲಿಗೆ ಝಾ ಅವರಿಗೆ ದಕ್ಷಿಣ ದೆಹಲಿಯಲ್ಲಿ ಜವಳಿ ಗಿರಣಿ ಒಂದರ ಸ್ಥಾಪನೆಗಾಗಿ 15 ಲಕ್ಷ ರೂಪಾಯಿ ನೀಡಿದ್ದರು. ಈ ವಹಿವಾಟಿನಲ್ಲಿ ನಷ್ಟವಾದಾಗ ಝಾ ಮತ್ತೆ ಹಣ ನೀಡುವಂತೆ ಸೊರೇನ್ ಅವರನ್ನು ಕಾಡತೊಡಗಿದರು. ಇದು ಅಂತಿಮವಾಗಿ ಅವರ ಕೊಲೆಯಲ್ಲಿ ಪರ್ಯವಸಾನಗೊಂಡಿತು ಎಂದೂ ಸಿಬಿಐ ತಿಳಿಸಿತ್ತು.
2006: ಮುಂಬೈಯಲ್ಲಿ 1993ರಲ್ಲಿ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ಡಿನ ಜನಪ್ರಿಯ ನಟ ಸಂಜಯದತ್ (47) ಅವರು ಶಸ್ತ್ರಾಸ್ತ್ರ ಹೊಂದಿದ್ದ ಆರೋಪ ಸಾಬೀತಾಗಿದ್ದು ಆತ ಡಿಸೆಂಬರ್ 19ರಂದು ನ್ಯಾಯಾಲಯಕ್ಕೆ ಶರಣಾಗಬೇಕು ಎಂದು ವಿಶೇಷ ಟಾಡಾ ನ್ಯಾಯಾಲಯ ಆದೇಶ ನೀಡಿತು. ಆದರೆ ಸಾಕ್ಷ್ಯಾಧಾರಗಳ ಪ್ರಕಾರ ಸಂಜಯದತ್ ಭಯೋತ್ಪಾದಕ ಅಲ್ಲ, ಅವರ ಮೇಲಿನ ಸರಣಿ ಬಾಂಬ್ ಸ್ಫೋಟದ ಸಂಚಿನಲ್ಲಿ ಭಾಗಿಯಾದ ಆರೋಪ ಕೈಬಿಡಲಾಗಿದೆ ಎಂದು ನ್ಯಾಯಮೂರ್ತಿ ಪಿ.ಡಿ. ಖೋಡೆ ತೀರ್ಪು ನೀಡಿದರು.
2005: ಮಧ್ಯಪ್ರದೇಶ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಶಿವರಾಜ್ ಸಿಂಗ್ ಚೌಹಾಣ್ ಆಯ್ಕೆಯಾದರು. ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಮತ್ತು ಅವರ ಬೆಂಬಲಿಗರು ಈ ಸಂದರ್ಭದಲ್ಲಿ ತೀವ್ರ ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿದರು.
1990: ಬ್ರಿಟನ್ನಿನ ಮೊತ್ತ ಮೊದಲ ಮಹಿಳಾ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಅವರು ರಾಣಿ ಎರಡನೇ ಎಲಿಜಬೆತ್ ಅವರಿಗೆ ತಮ್ಮ ರಾಜೀನಾಮೆಯನ್ನು ಕಳುಹಿಸಿದರು. `ಉಕ್ಕಿನ ಮಹಿಳೆ' ಎಂದೇ ಖ್ಯಾತಿ ಪಡೆದಿದ್ದ ಇವರು ಮೂರು ಚುನಾವಣೆಗಳನ್ನು ಸತತವಾಗಿ ಜಯಿಸಿ ಬ್ರಿಟನನ್ನು 11 ವರ್ಷಗಳಷ್ಟು ದೀರ್ಘಕಾಲ ಆಳಿದ (1979-1990) ಪ್ರಧಾನಿ.
1964: ಮೆರೈನರ್ -4 ಬಾಹ್ಯಾಕಾಶ ಸಂಶೋಧನಾ ನೌಕೆಯನ್ನು ಅಮೆರಿಕವು ಮಂಗಳ ಗ್ರಹದತ್ತ ಹಾರಿಸಿತು.
1957: ಸಾಹಿತಿ ಹಾ.ವಿ. ಮಂಜುಳಾ ಶಿವಾನಂದ ಜನನ.
1954: ಸಾಹಿತಿ ನಂದಿನಿ ಕಾಪಡಿ ಜನನ.
1946: ಸಾಹಿತಿ ಎಸ್. ದಿವಾಕರ್ ಜನನ.
1944: ಸಾಹಿತಿ ಕ.ರಾ. ಮೋಹನ್ ಜನನ.
1943: ದ್ವಿತೀಯ ವಿಶ್ವ ಸಮರ ಕಾಲದಲ್ಲಿ ಅಮೆರಿಕದ ಅಧ್ಯಕ್ಷ ರೂಸ್ ವೆಲ್ಟ್, ಬ್ರಿಟಿಷ್ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಹಾಗೂ ಸೋವಿಯತ್ ನಾಯಕ ಜೋಸೆಫ್ ಸ್ಟಾಲಿನ್ ಮೂವರೂ ಟೆಹರಾನಿನಲ್ಲಿ ಸಭೆ ಸೇರಿದರು. `ಎರಡನೇ ರಂಗ' ಸ್ಥಾಪನೆ ಈ ಮಾತುಕತೆಯ ಗುರಿಯಾಗಿತ್ತು. ಜರ್ಮನ್ ಆಕ್ರಮಿತ ಫ್ರಾನ್ಸಿನಲ್ಲಿ ದಾಳಿ ನಡೆಯುವ ಕಾಲಕ್ಕೇ ಪೂರ್ವದಿಂದ ದಾಳಿ ನಡೆಸಲು ಸ್ಟಾಲಿನ್ ಒಪ್ಪಿಗೆ ನೀಡಿದರು.
1942: ಸಾಹಿತಿಗಳಾದ ಎಂ.ಎಂ. ಕಲಬುರ್ಗಿ, ಚಿ. ಶ್ರೀನಿವಾಸ ರಾಜು ಜನನ.
1940: ಸಾಹಿತಿ ಎಸ್. ರಾಜಗೋಪಾಲಾಚಾರಿ ಜನನ.
1934: ಸಾಹಿತಿ ಗೌರು ಭಟ್ ಜನನ.
1925: ನವ್ಯ ಸಾಹಿತ್ಯದ ಪ್ರವರ್ತಕರಲ್ಲಿ ಒಬ್ಬರಾದ ಡಾ. ಬಿ.ಸಿ. ರಾಮಚಂದ್ರ ಶರ್ಮ (28-11-1925ರಿಂದ 18-4-2005) ಅವರು ಚಂದ್ರಶೇಖರ ಶರ್ಮ- ಲಕ್ಷ್ಮೀ ದೇವಮ್ಮ ದಂಪತಿಯ ಮಗನಾಗಿ ಮುಂಬೈಯಲ್ಲಿ ಜನಿಸಿದರು. ಇವರ ಪೂರ್ವೀಕರು ನಾಗಮಂಗಲ ತಾಲ್ಲೂಕಿನವರು.
1864: ಬಾಂಬೆ-ಬರೋಡಾ ಅಂಡ್ ಸೆಂಟ್ರಲ್ ಇಂಡಿಯಾ ರೈಲ್ವೇಸ್ (ಬಿಬಿ ಅಂಡ್ ಸಿಐ) ಮಾರ್ಗವನ್ನು ಸೂರತ್ ಸಮೀಪದ ಉಟ್ರಾನಿನಲ್ಲಿ ಉದ್ಘಾಟಿಸಲಾಯಿತು. ಈ ರೈಲು ಮಾರ್ಗವು ಸೂರತ್ತಿನ ಉಟ್ರಾನಿನಿಂದ ಬಾಂಬೆಯ (ಈಗಿನ ಮುಂಬೈ) ಗ್ರಾಂಟ್ ರೋಡ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಿತು. 1866ರಲ್ಲಿ ಗ್ರಾಂಟ್ ರೋಡ್ ಲೈನನ್ನು ಬ್ಯಾಕ್ ಬೇವರೆಗೆ ವಿಸ್ತರಿಸಲಾಯಿತು. 1973ರಲ್ಲಿ ಕೊಲಾಬಾದಲ್ಲಿ ನೂತನ ಟರ್ಮಿನಲ್ ಸ್ಥಾಪನೆ ಸಲುವಾಗಿ ಇನ್ನಷ್ಟು ವಿಸ್ತರಿಸಲಾಯಿತು.
1520: ಪೋರ್ಚುಗೀಸ್ ನಾವಿಕ ಫರ್ಡಿನಾಂಡ್ ಮೆಗೆಲ್ಲನ್ ದಕ್ಷಿಣ ಅಮೆರಿಕನ್ ಜಲಸಂಧಿಯ ಮೂಲಕವಾಗಿ ಫೆಸಿಫಿಕ್ ಸಾಗರವನ್ನು ತಲುಪಿದ. ಈ ಜಲಸಂಧಿಗೆ ಈಗ ಆತನ ಹೆಸರನ್ನೇ ಇಡಲಾಗಿದೆ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment