My Blog List

Friday, November 28, 2008

ಸಮುದ್ರ ಮಥನ 12: ರಾಮನ ಗುಣಗಳ ಗಣಿ

ಸಮುದ್ರ ಮಥನ 12: ರಾಮನ ಗುಣಗಳ ಗಣಿ

ಅಂತರಂಗದ ದರ್ಶನವನ್ನು ಅಂತೆಯೇ ಸ್ಪರ್ಶಿಸುವ ಸಾಹಿತ್ಯವನ್ನು ಮಾತ್ರ ಕಾವ್ಯ, ಮಹಾಕಾವ್ಯ ಎಂದು ಹೇಳಬಹುದು. ಹಾಗೆ  ರಚಿತವಾದ ಸಾಹಿತ್ಯ ಪ್ರಬುದ್ಧ ಓದುಗನನ್ನು ತುದಿ ತಲುಪಿಸುವಲ್ಲಿ ಸಮರ್ಥವಾಗಿರುತ್ತದೆ. ಹಾಗೆ ನೋಡಿದಾಗ ರಾಮಾಯಣ, ಮಹಾಭಾರತ ಮಾತ್ರ ಆ ಸಾಲಿನಲ್ಲಿ ನಿಲ್ಲುತ್ತವೆ.

ವಿಷಯವನ್ನು ಮತ್ತೆ ಮತ್ತೆ ಕೇಳಿದಷ್ಟೂ ಗುಣಸಂಪನ್ನತೆ ಬರಬಹುದೇನೋ ಎಂಬ ಆಸೆ ನಮಗೆ. ಅದರಲ್ಲಿಯೂ ಆತ್ಮಗುಣಗಳ ಬಗ್ಗೆ ಕೇಳುವುದೆಂದರೆ ಮುಗಿಯಿತು. ಅಲ್ಲಿ ದ್ವಂದ್ವವಿಲ್ಲದ್ದೇ ಹಾಗಾಗಲು ಕಾರಣ ಎನಿಸುತ್ತದೆ. ಹಾಗಾಗಿ ಅಲ್ಲಿ ಜಳ್ಳಿಗೆ ಆಸ್ಪದವಿಲ್ಲ. 
ಇಷ್ಟರವರೆಗೆ ರಾಮನ ಗುಣಗಳ ಆಳ, ಅಗಲ, ಅದರ ಹರವು ಹೀಗೊಂದಿಷ್ಟು ಚಿಂತನೆ ಮಾಡಲಾಯಿತು. ಇನ್ನು ಅವನ ಗುಣಗಳ ಗಣಿಯನ್ನೊಮ್ಮೆ ನೋಡೋಣ. ಸಾಧ್ಯವಾದಷ್ಟನ್ನು ಹೆಕ್ಕಿಕೊಳ್ಳೋಣ. ಹೆಕ್ಕಿದ್ದನ್ನು ಧರಿಸಲು, ಕೊನೆಯಲ್ಲಿ ಆ ಗುಣಮೂರ್ತಿಯೇ ಆಗಲು ಪ್ರಯತ್ನಿಸೋಣ. 

ಅವನು ಅರವತ್ತೆರಡು ಆತ್ಮಗುಣಗಳನ್ನು ಹೊಂದಿ, ಶ್ರೀಮಂತನಾಗಿದ್ದಾನೆ. ಇಕ್ಷ್ವಾಕುವಂಶ ಪ್ರಭವಃ - ಹುಟ್ಟಿದ್ದು ಇಕ್ಷ್ವಾಕು ವಂಶದಲ್ಲಿ, ನಿಯತಾತ್ಮಾ - ಆತ್ಮ ಸಂಯಮ ಉಳ್ಳವನು, ಮಹಾವೀರ್ಯಃ, ವಶೀ - ಎಲ್ಲವನ್ನೂ ನಿಯಂತ್ರಿಸಿಕೊಂಡವನು, ಬುದ್ಧಿಮಾನ್ - ಪ್ರಶಸ್ತ ಬುದ್ಧಿಯುಳ್ಳವನು, ನೀತಿಮಾನ್ - ಭುವಿಯಿಂದ ದಿವಿಗೆ ತಲುಪುವ ನೀತಿಯನ್ನು ಅರಿತವನು, ಶತ್ರುನಿಬರ್ಹಣಃ - ಅಂತಃಶತ್ರುಗಳನ್ನು ಗೆದ್ದವನು (ಕಾಮ, ಕ್ರೋಧ, ಲೋಭ, ಮೋಹ ಇಂತಹವುಗಳನ್ನು ಗೆದ್ದವನು), ಪ್ರತಾಪವಾನ್ - ಪ್ರತಾಪಶಾಲಿ, ಲಕ್ಷ್ಮೀವಾನ್ - ಲಕ್ಷ್ಮಿಯನ್ನು ಹೊಂದಿರುವವನು, ಧರ್ಮಜ್ಞಃ, ಸತ್ಯಂಸಂಧಃ - ಸತ್ಯದೊಟ್ಟಿಗೆ ಸಂಧಿ ಹೊಂದಿರುವವನು (ನಿರಂತರವಾಗಿ ವಿಗ್ರಹ ಇಲ್ಲ), ಧನುರ್ವೇದಃ ಚ ನಿಷ್ಠಿತಃ - ಧನುರ್ವೇದ ಮೂರ್ತಿವೆತ್ತಂತೆ, ಪ್ರಜಾನಾಂ ಚ ಹಿತೇ ರತಃ - ಪ್ರಜೆಗಳ ಹಿತದಲ್ಲಿ ರತ, ಸಮಾಧಿವಾನ್ - ಏಕಾಗ್ರತೆಯ ಚರಮಸೀಮೆಯನ್ನು ಹೊಂದಿದವನು, ರಕ್ಷಿತಾ ಜೀವಲೋಕಸ್ಯ - ಜೀವಲೋಕದ ರಕ್ಷಕ, ಸರ್ವಸಮಃ - ಎಲ್ಲರನ್ನೂ ಸಮನಾಗಿ ಕಾಣುವವನು, ಸದೈವ ಪ್ರಿಯದರ್ಶನಃ - ಯಾವಾಗಲೂ ಪ್ರಿಯದರ್ಶನ, ಸಮುದ್ರ ಇವ ಗಾಂಭೀರ್ಯೇ - ಸಮುದ್ರದಂತೆ ಗಂಭೀರ, ಹಿಮಾಲಯಪರ್ವತದಂತೆ ಧೈರ್ಯವಂತ, ಪ್ರಳಯಕಾಲದ ಸಿಟ್ಟುಳ್ಳವನು, ಭೂಮಿಯ ಕ್ಷಮೆ, ಕುಬೇರನಂಥ ತ್ಯಾಗಮಯಿ, ಸತ್ಯದಲ್ಲಿ ಹೇಗೆ ಎನ್ನಲು ಉಪಮೆಯೇ ಸಿಗಲಿಲ್ಲ. ಹಿಮಾಲಯ, ಸಾಗರ ಎಲ್ಲ ಮುಗಿದಿತ್ತು. ಅವನು ಸತ್ಯವೇ ಮೈವೆತ್ತಿ ಬಂದ ಸತ್ಯಮೂರ್ತಿ ಎಂದಷ್ಟೇ ಹೇಳಲು ಸಾಧ್ಯವಾಯಿತು. 

ಇದನ್ನು ಓದುವಾಗ ಒಂದಂಶವನ್ನು ನೆನಪಿಟ್ಟುಕೊಳ್ಳಲೇಬೇಕು. ಕವಿ ಎಂದರೆ ಮನಸ್ಸಿಗೆ ತೋಚಿದ್ದನ್ನು ಚಿತ್ರವಿಚಿತ್ರವಾಗಿ ಗೀಚುವವನಲ್ಲ. ಕಾವ್ಯ ರಚನೆಯೊಂದು ಸುವ್ಯವಸ್ಥಿತ ಪ್ರಕ್ರಿಯೆ. ಅಂತರಂಗದ ದರ್ಶನವನ್ನು ಅಂತೆಯೇ ಸ್ಪರ್ಶಿಸುವ ಸಾಹಿತ್ಯವನ್ನು ಮಾತ್ರ ಕಾವ್ಯ, ಮಹಾಕಾವ್ಯ ಎಂದು ಹೇಳಬಹುದು. ಹಾಗೆ ರಚಿತವಾದ ಸಾಹಿತ್ಯ ಪ್ರಬುದ್ಧ ಓದುಗನನ್ನು ತುದಿ ತಲುಪಿಸುವಲ್ಲಿ ಸಮರ್ಥವಾಗಿರುತ್ತದೆ. ಹಾಗೆ ನೋಡಿದಾಗ ರಾಮಾಯಣ, ಮಹಾಭಾರತ ಮಾತ್ರ ಆ ಸಾಲಿನಲ್ಲಿ ನಿಲ್ಲುತ್ತವೆ.  

ಆ ನೆಲೆಯಲ್ಲಿ ರಾಮನ ಗುಣಗಳ ಗಾಂಭೀರ್ಯದ ಬಗೆಗೆ ಗಂಭೀರ ಚಿಂತನೆ ನಡೆಯಬೇಕು. 
 

No comments:

Advertisement