Sunday, November 30, 2008

ಇಂದಿನ ಇತಿಹಾಸ History Today ನವೆಂಬರ್ 30

ಇಂದಿನ ಇತಿಹಾಸ

ನವೆಂಬರ್ 30

2007: `ಮಿಸೈಲ್ ಮ್ಯಾನ್' ಎಂದೇ ಗುರುತಿಸಿಕೊಂಡ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು `ಇ-ಪತ್ರಿಕೆ' ಆರಂಭಿಸುವ ಮೂಲಕ ಇದೀಗ `ಮೀಡಿಯಾ ಮ್ಯಾನ್' ಆದರು. ದೇಶದ ಯಶೋಗಾಥೆಯನ್ನು ಬಿಂಬಿಸುವ ಹಾಗೂ ಜ್ಞಾನ ಪ್ರಸಾರದ ಉದ್ದೇಶವುಳ್ಳ `ಬಿಲಿಯನ್ ಬೀಟ್ಸ್' ಪಾಕ್ಷಿಕ ಇ-ಪತ್ರಿಕೆಗೆ ಕಲಾಂ ಚಾಲನೆ ನೀಡಿದರು. ಕಲಾಂ ಅವರ www.abdulkalam.com  ನಲ್ಲಿ ಇ-ಪತ್ರಿಕೆಯ ಆವೃತ್ತಿ ಓದಲು ಸಿಗುತ್ತದೆ.

2007: ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ  ನಿರ್ದೇಶಕರ ನಿವೃತ್ತಿ ವಯೋಮಿತಿಯನ್ನು 65 ವರ್ಷಕ್ಕೆ ನಿಗದಿಗೊಳಿಸುವ ವಿವಾದಾತ್ಮಕ ಮಸೂದೆಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ತಮ್ಮ ಅಂಕಿತ ಹಾಕಿದರು. ಬಿಜೆಪಿ ಹಾಗೂ ಎಐಎಡಿಎಂಕೆ ವಿರೋಧದ ನಡುವೆಯೂ ಎರಡು 
ದಿನಗಳ ಹಿಂದೆ ಏಮ್ಸ್ ತಿದ್ದುಪಡಿ ಮಸೂದೆಗೆ ಸಂಸತ್ ಅಂಗೀಕಾರ ನೀಡಿತ್ತು.

2007: ಸಿನಿಮಾ ಮುಹೂರ್ತದ ಸಂದರ್ಭದಲ್ಲಿ ದೇವರ ಮುಂದೆ ಪಾದರಕ್ಷೆ ಧರಿಸಿ ಕುಳಿತಿದ್ದುದಕ್ಕಾಗಿ ಬಾಲಿವುಡ್ ನಟಿ ಖುಷ್ಬೂ ವಿರುದ್ಧ ರಾಮೇಶ್ವರಂನಲ್ಲಿ ಮತ್ತೊಂದು ಮೊಕದ್ದಮೆ ದಾಖಲಾಯಿತು. ಹಿಂದೂ ಮುನ್ನಣಿ ಸಂಘಟನೆಯ ಸ್ಥಳೀಯ ಕಾರ್ಯದರ್ಶಿ ರಾಮಮೂರ್ತಿ ಅವರು ರಾಮೇಶ್ವರದ ಸ್ಥಳೀಯ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದರು. ಹಿಂದೂ ಮಕ್ಕಳ್ ಕಚ್ಚಿ ಸಂಘಟನೆಯ ಕಾರ್ಯಕರ್ತ ಬಿ.ಆರ್. ಕುಮಾರ್ ಕೂಡ ಈ ಸಂಬಂಧ ದೂರು ಸಲ್ಲಿಸಿದ್ದರು.

2007: ನವದೆಹಲಿಯ ಐತಿಹಾಸಿಕ ಕೆಂಪುಕೋಟೆಗೆ ವಿಶ್ವ ಪರಂಪರೆ ಸ್ಥಾನಮಾನ ನೀಡಿದ ಪ್ರಮಾಣಪತ್ರವನ್ನು ನವದೆಹಲಿಯಲ್ಲಿ ಯುನೆಸ್ಕೋ ಮಹಾನಿರ್ದೇಶಕ ಕೊಯಿಚಿರೋ ಮತ್ಸೂರ ಅವರು ಅಧಿಕೃತವಾಗಿ ಅಭಿಜಿತ್ ಸೇನ್ ಗುಪ್ತಾ ಅವರಿಗೆ ಹಸ್ತಾಂತರಿಸಿದರು. ವಿಶ್ವಪರಂಪರೆಯ ಸ್ಥಾನ ಪಡೆದ ಪಟ್ಟಿಗೆ ಸೇರಿದ 27ನೇ ಸ್ಥಳ ಎಂಬ ಖ್ಯಾತಿ ಕೆಂಪುಕೋಟೆಗೆ ಲಭಿಸಿದೆ.

2007: ಯಶವಂತಪುರ- ಮಂಗಳೂರು-ಯಶವಂತಪುರ ಎಕ್ಸ್ಪ್ರೆಸ್ ರೈಲು ಸಂಚಾರವು 2007 ಡಿಸೆಂಬರ್ 8 ರಿಂದ ಆರಂಭವಾಗುವುದು ಎಂದು ನೈಋತ್ಯ ರೈಲ್ವೇ ವಲಯ ಪ್ರಕಟಿಸಿತು. ಮಂಗಳೂರಿನಿಂದ ರೈಲು ಪ್ರಯಾಣ ಡಿಸೆಂಬರ್ 9ರಿಂದ ಆರಂಭವಾಗುವುದು. ರೈಲ್ವೇ ಪ್ರಯಾಣ ದರವನ್ನೂ ಅದು ನಿಗದಿ ಪಡಿಸಿತು.

2007: ವಿವಾದಗಳಿಗೆ ಕಾರಣವಾಗಿರುವ ತಮ್ಮ ಆತ್ಮಕತೆ 'ದ್ವಿಖಂಡಿತ'ದಲ್ಲಿನ ವಿವಾದಾತ್ಮಕ ಭಾಗ ವನ್ನು ಹಿಂದಕ್ಕೆ ತೆಗೆದುಕೊಳ್ಳುವುದಾಗಿ ಬಾಂಗ್ಲಾದೇಶದ  ಲೇಖಕಿ ತಸ್ಲೀಮಾ ನಸ್ರೀನ್ ಕೋಲ್ಕತ್ತಾದಲ್ಲಿ ಪ್ರಕಟಿಸಿದರು. ಈ ಮೂಲಕ ತಮ್ಮ ಮೇಲೆ ಹೆಚ್ಚಿದ ಒತ್ತಡಗಳಿಗೆ ತಸ್ಲೀಮಾ ಮಣಿದರು.

2007: ಅಮೆರಿಕದ ವಾಣಿಜ್ಯ ಸಮುಚ್ಚಯವಾಗಿದ್ದ ಅವಳಿ ಗೋಪುರದ ಮೇಲೆ ನಡೆದ ದಾಳಿಯ ಹಿಂದೆ ತಾನೊಬ್ಬನೇ ಇರುವುದಾಗಿ ಖಾಸಗಿ ಟಿವಿ ಚಾನೆಲ್ ಅಲ್-ಜಜೀರಾಗೆ ಕಳುಹಿಸಿರುವ ಟೇಪಿನಲ್ಲಿ ಕುಖ್ಯಾತ ಭಯೋತ್ಪಾದಕ ಅಲ್ ಖೈದಾ ಧುರೀಣ ಬಿನ್ ಲಾಡೆನ್ ಹೇಳಿಕೊಂಡ. ಅಮೆರಿಕ ಜೊತೆಗಿನ ಸಂಬಂಧ ಕಡಿದುಕೊಳ್ಳುವಂತೆ ಹಾಗೂ ಆಪ್ಘಾನಿಸ್ಥಾನ ತೊರೆಯುವಂತೆ ಯುರೋಪಿಯನ್ನರಿಗೆ ಕರೆ ನೀಡಿದ ಲಾಡೆನ್ ನ್ಯೂಯಾರ್ಕ್ ಹಾಗೂ ವಾಷಿಂಗ್ಟನ್ ಮೇಲೆ ನಡೆದ ಈ ದಾಳಿಗೆ ತಾನೊಬ್ಬನೇ ಹೊಣೆಗಾರ' ಎಂದು ಘೋಷಿಸಿದ.

2007: ಅತ್ಯಂತ ಕಿರಿಯ ಸೌರ ಮಂಡಲವನ್ನು ಖಗೋಳ ಶಾಸ್ತ್ರಜ್ಞರು ಪತ್ತೆಹಚ್ಚಿದರು. ಅಮೆರಿಕದ ಮಿಚಿಗನ್ ವಿಶ್ವವಿದ್ಯಾನಿಲಯದ ಸಂಶೋಧಕರು ಸುಮಾರು ಹತ್ತು ಲಕ್ಷ ವರ್ಷಗಳಷ್ಟು ಹಳೆಯದು ಎನ್ನಲಾದ ಕಿರಿಯ ನಕ್ಷತ್ರಗಳಾದ `ಯುಎಕ್ಸ್ ತೌ ಎ' ಮತ್ತು `ಎಲ್ ಕೆಕಾ 15'ಗಳ ಸುತ್ತಮುತ್ತ ಈ ಹೊಸ ಸೌರ ಮಂಡಲವನ್ನು ಕಾಣಬಹುದೆಂದು ಪ್ರಕಟಿಸಿದರು. ಈ ಸೌರ ಮಂಡಲವು ತಾರಸ್ ನಕ್ಷತ್ರದ ರಚನಾ ಪ್ರದೇಶದಲ್ಲಿದ್ದು ಕೇವಲ 450 ಜ್ಯೋತಿರ್ ವರ್ಷಗಳಷ್ಟು ದೂರದಲ್ಲಿ ಇದೆ ಎಂದು ಸಂಶೋಧಕರನ್ನು ಉಲ್ಲೇಖಿಸಿ ವಾಷಿಂಗ್ಟನ್ನಿನ ವಿಜ್ಞಾನ ಪತ್ರಿಕೆಯೊಂದು ವರದಿ ಮಾಡಿತು.

2007: ಮಧ್ಯ ಟರ್ಕಿಯ ಕೆಸಿಬೊರ್ಲು ನಗರದ ಬಳಿ ಅಟ್ಲಾಸ್ ಜೆಟ್ ವಿಮಾನವೊಂದು ಅಪಘಾತಕ್ಕೀಡಾಗಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ ಒಟ್ಟು 56 ಮಂದಿ ಮೃತರಾದರು. 7 ಸಿಬ್ಬಂದಿ ಹಾಗೂ 49 ಪ್ರಯಾಣಿಕರನ್ನು ಹೊತ್ತು ಇಸ್ತಾಂಬುಲ್ ನಿಂದ ಇಸ್ಪಾರ್ತ ನಗರಕ್ಕೆ ಹೊರಟಿದ್ದಾಗ ಈ ಎಂಡಿ 83 ಜೆಟ್ ಲೈನರ್ ಅಪಘಾತಕ್ಕೀಡಾಯಿತು.

2006: ಉತ್ತರ ಪ್ರದೇಶದ ಕಾನ್ಪುರದಲ್ಲಿ ಅಂಬೇಡ್ಕರ್ ವಿಗ್ರಹ ವಿರೂಪ ಘಟನೆಗೆ ಪ್ರತಿಕ್ರಿಯೆಯಾಗಿ ಮಹಾರಾಷ್ಟ್ರದಲ್ಲಿ ಭುಗಿಲೆದ್ದ ಹಿಂಸಾಚಾರ, ಗೋಲಿಬಾರಿಗೆ ನಾಲ್ವರು ಬಲಿಯಾದರು.

2006: ಮುಸ್ಲಿಂ ಸಮುದಾಯವು ಸೌಲಭ್ಯ ವಂಚಿತವಾಗಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ ರಾಜಿಂದರ್ ಸಾಚಾರ್ ಸಮಿತಿಯು  ಮುಸ್ಲಿಂ ಸಮುದಾಯದ ಹಿಂದುಳಿದ ವರ್ಗಕ್ಕೆ ಮೀಸಲು ನೀಡಲು ಮತ್ತು ಸಮಾನಾವಕಾಶ ನೀಡಲು ಆಯೋಗ ರಚನೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತು. ಮುಸ್ಲಿಮರು ಸರ್ಕಾರಿ ಉದ್ಯೋಗದಲ್ಲಿ ಶೇಕಡಾ 4.9, ರಕ್ಷಣಾ ಪಡೆಗಳಲ್ಲಿ ಶೇಕಡಾ 3.2ರಷ್ಟಿದ್ದರೆ, 543 ಸಂಸದರಲ್ಲಿ ಮುಸ್ಲಿಂ ಸಂಸದರ ಸಂಖ್ಯೆ 33 ಮಾತ್ರ ಎಂದು ಸಮಿತಿ ಹೇಳಿತು.

2005: ಪಕ್ಷದ ವರಿಷ್ಠ ಮಂಡಳಿ ವಿರುದ್ಧ ಬಂಡೆದ್ದ ಉಮಾಭಾರತಿ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಯಿತು.

2005: ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿ ಪಡಿಸಿದ ಸೂಪರ್ ಸಾನಿಕ್ ಬ್ರಹ್ಮೋಸ್ ಕ್ಷಿಪಣಿಯ ಪರೀಕ್ಷಾ ಉಡಾವಣೆಯನ್ನು ಒರಿಸ್ಸಾದ ಬಾಲಸೋರಿನಿಂದ 15 ಕಿ.ಮೀ ದೂರದಲ್ಲಿ ಸಮುದ್ರ ಮಧ್ಯೆ ನಿರ್ಮಿಸಲಾದ ಪರೀಕ್ಷಾ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಸೇನೆಯ ಮೂರೂ ವಿಭಾಗಗಳಲ್ಲಿ ಬಳಸಬಹುದಾದ 8 ಮೀಟರ್ ಎತ್ತರದ ಈ ಕ್ಷಿಪಣಿಯು 2-3 ಟನ್ ಸಾಂಪ್ರದಾಯಿಕ ಸಿಡಿತಲೆಯನ್ನು ಹೊತ್ತು 290 ಕಿ.ಮೀ. ದೂರ ಚಲಿಸಬಲ್ಲುದು. ಇದು ಶಬ್ಧದ ವೇಗಕ್ಕಿಂತ 2.8ರಿಂದ 3 ಪಟ್ಟು ವೇಗವಾಗಿ ಹಾರಾಟ ನಡೆಸಬಲ್ಲುದು. 

2000: ಬಾಹ್ಯಾಕಾಶ ಷಟಲ್ ನೌಕೆ ಎಂಡೇವರ್ `ಸೌರ ರೆಕ್ಕೆ'ಗಳೊಂದಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿತು. ಈ ಸೌರರೆಕ್ಕೆಗಳು ಇಡೀ ನಿಲ್ದಾಣಕ್ಕೆ ಬೇಕಾದ ವಿದ್ಯುತ್ ಒದಗಿಸಬಲ್ಲವು.

1999: ಭಾರತದ ಸಮಾಜ ವಿಜ್ಞಾನಿ ಎಂ.ಎನ್. ಶ್ರೀನಿವಾಸ್ ಅವರು ಬೆಂಗಳೂರಿನಲ್ಲಿ ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು.

1956: ಫ್ಲಾಯ್ಡ್ ಪ್ಯಾಟ್ಟರ್ಸನ್ ಅವರು ವಿಶ್ವ ಹೆವಿವೇಯ್ಟ್ ಚಾಂಪಿಯನ್ ಶಿಪ್ ಗೆದ್ದ ಅತ್ಯಂತ ಕಿರಿಯ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಷಿಕಾಗೋದಲ್ಲಿ ಆರ್ಚೀ ಮೂರ್ ಅವರನ್ನು ಪರಾಭವಗೊಳಿಸುವ ಮೂಲಕ ಅವರು ಈ ಪ್ರಶಸ್ತಿಗೆ ಪಾತ್ರರಾದರು.

1940: ಸಾಹಿತಿ ಎಚ್. ಆರ್. ಇಂದಿರಾ ಜನನ.

1940: ಸಾಹಿತಿ ಸರೋಜ ತುಮಕೂರು ಜನನ.

1939: ಸಾಹಿತಿ ಎಸ್. ಸಿದ್ಧಲಿಂಗಪ್ಪ ಜನನ.

1925: ಪ್ರಗತಿಶೀಲ ಬರಹಗಾರ ಅನಂತನಾರಾಯಣ (30-11-1925ರಿಂದ 25-8-1992) ಅವರು ಆರ್. ಸದಾಶಿವಯ್ಯ- ರಂಗಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು.

1900: ಐರಿಷ್ ಸಾಹಿತಿ, ನಾಟಕಕಾರ ಆಸ್ಕರ್ ವೈಲ್ಡ್ ತಮ್ಮ 46ನೇ ವಯಸ್ಸಿನಲ್ಲಿ ಪ್ಯಾರಿಸ್ಸಿನಲ್ಲಿ ಮೃತರಾದರು. ಈ ವೇಳೆಯಲ್ಲಿ ಅವರು ಕಡು ಬಡತನದಿಂದ ನಲುಗಿದ್ದರು.

1874: ಇಂಗ್ಲೆಂಡಿನ ಮಾಜಿ ಪ್ರಧಾನಿ ಸರ್ ವಿನ್ ಸ್ಟನ್ ಚರ್ಚಿಲ್ (1874-1965) ಹುಟ್ಟಿದ ದಿನ.

1858: ಭಾರತೀಯ ಸಸ್ಯತಜ್ಞ ಹಾಗೂ ಭೌತವಿಜ್ಞಾನಿ ಸರ್ ಜಗದೀಶ ಚಂದ್ರ ಬೋಸ್ (1858-1937) ಜನ್ಮದಿನ. ಸಸ್ಯ ಹಾಗೂ ಪ್ರಾಣಿಗಳ ಜೀವಕೋಶಗಳು ಏಕಪ್ರಕಾರವಾಗಿ ಸ್ಪಂದಿಸುತ್ತವೆ ಎಂಬುದನ್ನು ಪತ್ತೆ ಹಚ್ಚಲು ಅತ್ಯಂತ ಸೂಕ್ಷ್ಮಗ್ರಾಹಿ ಉಪಕರಣವನ್ನು ಸಂಶೋಧಿಸಿದವರು ಇವರು. ಮೈಕ್ರೋ ಅಲೆಗಳು ಹಾಗೂ ರೇಡಿಯೋ ಅಲೆಗಳನ್ನು ಉತ್ಪಾದಿಸುವ ಮೈಕ್ರೋವೇವ್ ಉಪಕರಣವನ್ನು ಮೊತ್ತ ಮೊದಲ ಬಾರಿಗೆ ನಿರ್ಮಿಸಿ ಸಾರ್ವಜನಿಕವಾಗಿಪ್ರದರ್ಶಿಸಿದವರೂ ಇವರೇ. ವೈರ್ ಲೆಸ್ ಟೆಲಿಗ್ರಾಫಿಯ ಜನಕ ಮಾರ್ಕೋನಿ ಅಲ್ಲ, ಈ  ಗೌರವ ಮೈಕ್ರೋವೇವ್ ಉಪಕರಣ ಸಂಶೋಧಿಸಿದ ಬೋಸ್ ಅವರಿಗೆ ಸಲ್ಲಬೇಕು ಎಂಬ ವಾಸ್ತವಕ್ಕೆ ಈಗ ಬೆಲೆ ಸಿಗತೊಡಗಿದೆ. ಆದರೆ ವೈರ್ ಲೆಸ್ ಟೆಲಿಗ್ರಾಫಿಗೆ ಪೇಟೆಂಟ್ ಪಡೆದದ್ದು ಮಾರ್ಕೋನಿ.

1835: ಮಾರ್ಕ್ ಟ್ವೇನ್ ಎಂದೇ ಜನಪ್ರಿಯರಾಗಿದ್ದ ಖ್ಯಾತ ಕಾದಂಬರಿಕಾರ ಸ್ಯಾಮ್ಯುಯೆಲ್ ಲಾಂಗ್ಹೋರ್ನ್ ಕ್ಲೆಮೆನ್ಸ್ (1835-1910) ಹುಟ್ಟಿದ ದಿನ.

1667: `ಗಲಿವರ್ಸ್ ಟ್ರಾವಲ್ಸ್' ಪ್ರವಾಸ ಕಥನದಿಂದ ವಿಶ್ವವ್ಯಾಪಿ ಖ್ಯಾತಿ ಗಳಿಸಿದ ಆಂಗ್ಲೊ ಐರಿಷ್ ಸಾಹಿತಿ ಜೊನಾಥನ್ ಸ್ವಿಫ್ಟ್ (1667-1745) ಹುಟ್ಟಿದ ದಿನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement