My Blog List

Sunday, December 14, 2008

ಡಾ. ಯಡಿಯೂರಪ್ಪ ... ಅಭಿನಂದನೆಗಳು.. ಆದರೆ, ರೈತರ ಕಷ್ಟ ಮರೆಯದಿರಿ...!

ಡಾ. ಯಡಿಯೂರಪ್ಪ ... ಅಭಿನಂದನೆಗಳು..

ಆದರೆ, ರೈತರ ಕಷ್ಟ ಮರೆಯದಿರಿ...!


ಮುಖ್ಯಮಂತ್ರಿಗಳೇ ಗೌರವ ಪದವಿಗಳನ್ನು ಪಡೆಯುವುದಷ್ಟೇ ಮುಖ್ಯವಲ್ಲ. ಅದಕ್ಕೂ ಮುನ್ನ ನಿಮ್ಮನ್ನು ಈ ಗಾದಿಗೆ ಏರಿಸಿದ ರೈತರ ಬವಣೆ ನೀಗಲು, ರೈತರ ಒಡನಾಡಿಗಳಾದ ಗೋವುಗಳನ್ನು ರಕ್ಷಿಸಲು, ಭೂ ಸಾರ ಸಂರಕ್ಷಣೆಗೆ ಏಕೈಕ ಮಾರ್ಗವಾಗಿರುವ 'ಸಾವಯವ ಕೃಷಿ'ಯ ಅನುಷ್ಠಾನಕ್ಕಾಗಿ ಹಳ್ಳಿ ಹಳ್ಳಿಗಳಲ್ಲೂ ಸಾಮೂಹಿಕ ಗೋಶಾಲೆಗಳನ್ನು ಸ್ಥಾಪಿಸಬೇಕಾದ ಅವುಗಳಿಂದ ಜನರಿಗೆ ಇಂಧನ, ವಿದ್ಯುತ್. ಗೊಬ್ಬರ ಒದಗಿಸಬೇಕಾದ ತುರ್ತು ಇರುವುದನ್ನು ಮರೆಯಬೇಡಿ.

ನೆತ್ರಕೆರೆ ಉದಯಶಂಕರ

ಅಮೆರಿಕದ ಮಿಚಿಗನ್ನಿನ ಸಗಿನಾವೊ ವಿಶ್ವವಿದ್ಯಾಲಯದ ಆವರಣದಲ್ಲಿ ಈದಿನ 2008 ಡಿಸೆಂಬರ್ 14ರ ಶನಿವಾರ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು `ಗೌರವ ಡಾಕ್ಟರೇಟ್' ಪದವಿ ಸ್ವೀಕರಿಸಿದರು. ಇದರೊಂದಿಗೆ ಈ ಗೌರವ ಪಡೆದ ಕರ್ನಾಟಕದ ಪ್ರಪ್ರಥಮ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಅವರದಾಯಿತು.

ಈ ಅಪರೂಪದ ಗೌರವ ಪಡೆದುದಕ್ಕಾಗಿ ಅಭಿನಂದನೆಗಳು.

ಅತಿಗಣ್ಯ ಕುಟುಂಬಗಳ ಆಯ್ದ 500 ಸದಸ್ಯರು, ಹಾಗೂ 5000 ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಸಮಾರಂಭದಲ್ಲಿ ಈ ಗೌರವ ಡಾಕ್ಟರೇಟ್ ಪದವಿ ಪ್ರದಾನ ನಡೆಯಿತು.

ಇಂತಹ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿ ಪಡೆದವರಿಗೆ ಮಾತನಾಡಲು ಅವಕಾಶ ಇರುವುದಿಲ್ಲವಂತೆ. ಆದರೆ ಇದೇ ಮೊತ್ತ ಮೊದಲ ಬಾರಿಗೆ ುಡಿಯೂರಪ್ಪನವರಿಗೆ ಮಾತನಾಡಲೂ ಇಲ್ಲಿ ಅವಕಾಶ ಕಲ್ಪಿಸಲಾಯಿತು ಎಂಬುದು ಮಾಧ್ಯಮಗಳ ವರದಿ.

ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ ಇಂತಹ ಅತ್ಯುನ್ನತ ಗೌರವ ಸಂದಿರುವುದು ತಮ್ಮ ಕಲ್ಪನೆಗೂ ಮೀರಿದ ವಿಚಾರ. ಈ ಗೌರವವನ್ನು ಕರ್ನಾಟಕ ರಾಜ್ಯದ ರೈತರು ಮತ್ತು ಸಾಮಾನ್ಯ ಜನರಿಗೆ ಅರ್ಪಿಸುವ ಎಂಬುದಾಗಿ ನುಡಿದರು.

ಕರ್ನಾಟಕ ರಾಜ್ಯದ ಅಭಿವೃದ್ಧಿ ಹಾಗೂ ತಮ್ಮ ಹೋರಾಟದ ಹಾದಿಯನ್ನು ನೆನಪಿಸಿಕೊಳ್ಳಲು, ಅತ್ಯಂತ ಕಿರಿಯ ವಯಸ್ಸಿನಲ್ಲೇ ರಾಜಕೀಯ ಜೀವನ ಆರಂಭಿಸಿದ ಪರಿ, ಹೋರಾಟದ ಮಾರ್ಗ, ರೈತ ಕಾರ್ಮಿಕರಿಗಾಗಿ ನಡೆಸಿದ ಹೋರಾಟಗಳನ್ನು ನೆನಪಿಸಿಕೊಳ್ಳಲೂ ಈ ಸಮಾರಂಭ ಅವರಿಗೆ ವೇದಿಕೆ ಕಲ್ಪಿಸಿತು ಎಂಬುದು ವರದಿಗಳ ಸಾರ.

ಮಾನ್ಯ ಯಡಿಯೂರಪ್ಪನವರೇ,

ಖಂಡಿತವಾಗಿ  ಈ ಅಪರೂಪದ ಗೌರವ ಸಂದದ್ದಕ್ಕಾಗಿ ನಿಮಗೆ ಅಭಿನಂದನೆಗಳು. ಆದರೆ 'ಗೌರವ ಡಾಕ್ಟರೇಟ್' ಪಡೆಯುವುದು, ಅಭಿನಂದನಾ ಸಮಾರಂಭಗಳಲ್ಲಿ ಸನ್ಮಾನ ಮಾಡಿಸಿಕೊಳ್ಳುವುದು, ನಿತ್ಯವೂ ಆಶ್ವಾಸನೆಗಳನ್ನು ಕೊಡುವುದು ಇವಷ್ಟೇ ಜನ ಅಭಿಮಾನ ಪೂರ್ವಕವಾಗಿ ತಮಗೆ ಅಧಿಕಾರ ಕೊಟ್ಟದ್ದಕ್ಕೆ ಮಾಡಬೇಕಾದ ಕರ್ತವ್ಯಗಳಲ್ಲ.

ರೈತರಿಗೆ ಇಂದೂ ವಿದ್ಯುತ್ತು ಸಿಗುತ್ತಿಲ್ಲ, ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಲಭಿಸುತ್ತಿಲ್ಲ. ಜನಸಾಮಾನ್ಯರ ಬವಣೆಗಳು ಇನ್ನೂ ಮುಂದುವರೆಯುತ್ತಲೇ ಇವೆ.

ರೈತರ ಜೀವನಾಡಿಗಳಾದ ಗೋವುಗಳ ಹತ್ಯೆ ಇನ್ನೂ ನಿರಂತರ ಮುಂದುವರೆದಿದೆ. ಅವುಗಳ ರಕ್ಷಣೆಗೆ ಸೂಕ್ತ ಕಾರ್ಯಕ್ರಮ ಜಾರಿಯಾದರಷ್ಟೇ ರೈತರ ಜೀವನವೂ ಸುಧಾರಿಸುತ್ತದೆ.

ಅದಕ್ಕಾಗಿ ರೈತರ ಬದುಕು ಹಸನಾಗುವುದಕ್ಕೇ ಸಾವಯವ ಕೃಷಿಯೊಂದೇ ಮಾರ್ಗ ಎಂಬುದನ್ನು ರೈತರ ಬದುಕನ್ನು ಹತ್ತಿರದಿಂದ ಕಂಡ ತಜ್ಞರು ಮತ್ತೆ ಮತ್ತೆ ಒತ್ತಿ ಹೇಳಿದ್ದಾರೆ.

ಮಾನ್ಯ ಅಟಲ್ ಬಿಹಾರಿ ವಾಜಪೇಯಿ ಅವರು ಹಳ್ಳಿ ಹಳ್ಳಿಗಳಲ್ಲಿ ಸಮುದಾಯ ಗೋಶಾಲೆಗಳನ್ನು ನಿರ್ಮಿಸಿ ಅಲ್ಲಿ ಹಳ್ಳಿಗರಿಗೆ ಬೇಕಾದ ಇಂಧನ, ವಿದ್ಯುತ್, ಸಾವಯವ ಗೊಬ್ಬರ ಒದಗಿಸುವ ಕನಸು ಕಂಡಿದ್ದರು. ಇಂತಹ ಗೋಶಾಲೆಗಳ ಮೂಲಕ ಗೋವುಗಳ ಹಾಲು ಮಾತ್ರವೇ ಅಲ್ಲ, ಸೆಗಣಿ, ಮೂತ್ರಗಳಿಗೂ ಬೆಲೆ ಬರುತ್ತದೆ ಎಂಬುದನ್ನು ಸಾಮಾನ್ಯರಿಗೂ ಅರಿವು ಮೂಡಿಸುವ ಕೆಲಸ ತುರ್ತಾಗಿ ಆಗಲೇ ಬೇಕಾಗಿದೆ.

ಆಗ ಮಾತ್ರ ಕೃಷಿ ವೆಚ್ಚ ತಗ್ಗುವುದರ ಜೊತೆಗೆ ಹಸಿರು ಕ್ರಾಂತಿಯ ರಾಸಾಯನಿಕ ಗೊಬ್ಬರ ಬಳಕೆಯಿಂದ ಬರಡಾಗಿರುವ ನಮ್ಮ ಭೂಮಿ ಮತ್ತೆ ಫಲವತ್ತಾಗುತ್ತದೆ. ಈ ನಿಟ್ಟಿನಲ್ಲಿ ಇನ್ನಷ್ಟು ತುರ್ತಾಗಿ ಕಾರ್ಯ ತತ್ಪರರಾಗಲು ನಿಮಗೆ ಸಿಕ್ಕಿರುವ 'ಡಾಕ್ಟರೇಟ್' ಸ್ಫೂರ್ತಿ ನೀಡುವುದು ಎಂದು ಹಾರೈಸಬಹುದೇ?
 

No comments:

Advertisement