My Blog List

Monday, December 15, 2008

ಇಂದಿನ ಇತಿಹಾಸ History Today ಡಿಸೆಂಬರ್ 15

ಇಂದಿನ ಇತಿಹಾಸ

ಡಿಸೆಂಬರ್ 15

ಭಾರತದ `ಉಕ್ಕಿನ ಮನುಷ್ಯ' ಸರ್ದಾರ್ ವಲ್ಲಭ ಭಾಯಿ ಪಟೇಲ್ ಬಾಂಬೆಯಲ್ಲಿ (ಈಗಿನ ಮುಂಬೈ) ತಮ್ಮ 75ನೇ ವಯಸ್ಸಿನಲ್ಲಿ ನಿಧನರಾದರು.

2007: ತಮಗೆ ಅನುಕೂಲವಾಗುವಂತೆ ಸಂವಿಧಾನ ತಿದ್ದುಪಡಿ ಮಾಡಿದ ನಂತರ ಪಾಕಿಸ್ಥಾನದ ಅಧ್ಯಕ್ಷ ಪರ್ವೇಜ್ ಮುಷರಫ್ ಆರು ವಾರಗಳ ತುರ್ತುಪರಿಸ್ಥಿತಿಯನ್ನು ತೆಗೆದುಹಾಕಿದರು. ತುರ್ತುಪರಿಸ್ಥಿತಿ, ತಾತ್ಕಾಲಿಕ ಸಾಂವಿಧಾನಿಕ ವ್ಯವಸ್ಥೆ ಹಾಗೂ ಮೂಲಭೂತ ಹಕ್ಕುಗಳ ಮೇಲಿನ ನಿರ್ಬಂಧ ತೆಗೆದು ಹಾಕುವ ಮೂರಂಶಗಳ ರಾಷ್ಟ್ರಪತಿ ಆದೇಶಗಳಿಗೆ ಅವರು ಸಹಿ ಹಾಕಿದರು. ತನ್ಮೂಲಕ 1973ರ ಸಂವಿಧಾನ ವ್ಯವಸ್ಥೆ ಮತ್ತೆ ಜಾರಿಗೆ ಬಂತು. ಆದರೆ, ನವೆಂಬರ್ 29ರಂದು ಸೇನಾ ಮುಖ್ಯಸ್ಥನ ಪದವಿ ತ್ಯಜಿಸಿದರೂ, ಆರು ವಾರಗಳ ತುರ್ತುಪರಿಸ್ಥಿತಿ ಅವಧಿಯಲ್ಲಿ ಕೈಗೊಂಡ ಸಂವಿಧಾನ ತಿದ್ದುಪಡಿಗಳು ಹಾಗೂ ಈ ಕ್ರಮಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸದಂತೆ  ಮಾಡಿದ್ದು ಪ್ರತಿಪಕ್ಷಗಳಲ್ಲಿ ಅಸಮಾಧಾನ ಮೂಡಿಸಿತು.

 2007: ಇಂಟರ್ನೆಟ್ ಮೂಲಕ ಅಕ್ರಮವಾಗಿ ಔಷಧ ವ್ಯಾಪಾರ ಮಾಡುತ್ತಿದ್ದ ಭಾರತೀಯ ವೈದ್ಯನೊಬ್ಬನಿಗೆ ಫಿಲಡಲ್ಫಿಯಾ ನ್ಯಾಯಾಲಯ 30 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಫಿಲಡೆಲ್ಫಿಯಾದ ಟೆಂಪಲ್ ವಿಶ್ವವಿದ್ಯಾಲಯದಲ್ಲಿ ಬಿಸಿನೆಸ್ ಪದವಿ ವ್ಯಾಸಂಗ ಮಾಡುತ್ತಿದ್ದ ವೈದ್ಯ ಅಖಿಲ್ ಬನ್ಸಾಲ್ (29) ತಮ್ಮ ಕುಟುಂಬದೊಂದಿಗೆ ಇಂಟರ್ನೆಟ್ ಮೂಲಕ ಅಕ್ರಮವಾಗಿ ಔಷಧ ವ್ಯಾಪಾರ ಮಾಡುತ್ತಿದ್ದು, ಭಾರತದಿಂದ ಅಕ್ರಮವಾಗಿ ತರಿಸಿಕೊಂಡ 11 ದಶಲಕ್ಷ ಔಷಧ ಮಾತ್ರೆಗಳನ್ನು ಅಮೆರಿಕದಲ್ಲಿರುವ 60,000 ಮಂದಿಗೆ ವಿತರಿಸಿದ್ದಾರೆ ಎಂಬುದು ಸರ್ಕಾರಿ ವಕೀಲರ ಆರೋಪ. `ನೀವು ಇಡೀ ದೇಶದ ತುಂಬ ವಿಷ ಹಂಚಿದ್ದೀರಿ' ಎಂದು ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶ ಪೌಲ್ ಡೈಮಂಡ್ ಅವರು ಆರೋಪಿ ಅಖಿಲ್ ಬನ್ಸಾಲ್ ಗೆ ಛೀಮಾರಿ  ಹಾಕಿದರು.

2007: ಮಾಹಿತಿ ತಂತ್ರಜ್ಞಾನ ಸಂಸ್ಥೆ `ಇನ್ಫೋಸಿಸ್' ಅಧ್ಯಕ್ಷ ಎನ್. ಆರ್. ನಾರಾಯಣ ಮೂರ್ತಿ ಅವರು ಸಾಫ್ಟವೇರ್ ಉದ್ದಿಮೆ, ವ್ಯಾಪಾರ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಯನ್ನು ಗುರುತಿಸಿ ಬ್ರಿಟನ್ನಿನ ಲ್ಯಾನ್ಸೆಸ್ಟರ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿತು. ಲ್ಯಾನ್ಸೆಸ್ಟರ್ ವಿಶ್ವವಿದ್ಯಾಲಯದಲ್ಲಿ ನಡೆದ ವಿಶೇಷ ಪದವಿ ಪ್ರದಾನ ಸಮಾರಂಭದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಸರ್ ಕ್ರಿಸ್ ಬೊನಿಂಗ್ಟನ್ ಅವರು ನಾರಾಯಣ ಮೂರ್ತಿ ಅವರಿಗೆ `ಗೌರವ ಡಾಕ್ಟರೇಟ್' ಪದವಿ ಪ್ರದಾನ ಮಾಡಿದರು. ನಾರಾಯಣ ಮೂರ್ತಿ ಅವರು 1981 ರಲ್ಲಿ ಆರು ಜನ ಸಾಫ್ಟವೇರ್ ತಂತ್ರಜ್ಞರೊಂದಿಗೆ ಸೇರಿಕೊಂಡು ಇನ್ಫೋಸಿಸ್ ಸಂಸ್ಥೆ ಸ್ಥಾಪಿಸಿ, 21 ವರ್ಷಗಳ ಕಾಲ ಅದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

2007: ಪೂರ್ವ ಇಂಡೋನೇಷ್ಯಾದ ಮಲುಕಾ ದ್ವೀಪದಲ್ಲಿ ಭಾರಿ ಭೂಕಂಪ ಸಂಭವಿಸಿತು. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 7.1 ರಷ್ಟು ಇತ್ತು. ಸೌಮ್ ಲಕಿ ಪಟ್ಟಣದ ವಾಯವ್ಯ ಭಾಗದಿಂದ 128 ಕಿ.ಮೀ ದೂರದಲ್ಲಿ ಕಂಪನವು ಕೇಂದ್ರೀಕೃತವಾಗಿತ್ತು. 

2007: ಕುದುರೆಗಳ ಹೆಜ್ಜೆಗಳ ಸದ್ದು ಮತ್ತು ಹೃದಯಕ್ಕೆ ತಂಪು ನೀಡುವ ಇಂಪಾದ ಮೆಲು ಸಂಗೀತದ ಮಧ್ಯೆ ಸಮವಸ್ತ್ರ ಧರಿಸಿದ ಮರದಗಲ ಎದೆಯ ರಾಷ್ಟ್ರಪತಿಗಳ ಅಂಗರಕ್ಷಕರು ಪ್ರತಿ ಶನಿವಾರ ಭಾರತದ ರಾಷ್ಟ್ರಪತಿ ಭವನದಲ್ಲಿ ನಡೆಸುವ ಕರ್ತವ್ಯದ ಹಸ್ತಾಂತರ (ಚೇಂಜ್ ಆಫ್ ಗಾರ್ಡ್) ಈ ಬಾರಿ ಐತಿಹಾಸಿಕ ದಿನವಾಗಿ ಮಾರ್ಪಟ್ಟಿತು.  ಭಾರತದ ರಾಷ್ಟ್ರಪತಿ ಭವನದ ಇತಿಹಾಸದಲ್ಲಿ 2007ರ ಡಿಸೆಂಬರ್ 15 ಸ್ಮರಣೀಯ ದಿನವಾಯಿತು. ಇದೇ ಮೊದಲ ಬಾರಿಗೆ ಈ ಸಾಂಪ್ರದಾಯಿಕ ವಿಧಿಯನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಯಿತು. ರಾಷ್ಟ್ರಪತಿ ಭವನವನ್ನು ಜನರಿಗೆ ಹತ್ತಿರವಾಗಿಸುವ ಪ್ರಯತ್ನವಾಗಿ ಈಗ ಈ `ಚೇಂಜ್ ಆಫ್ ಗಾರ್ಡ್' ನ್ನು ಸಾರ್ವಜನಿಕರಿಗೆ ಮುಕ್ತವಾಗಿಸಿ, ಅದರಲ್ಲಿ ಹಲವು ಮಾರ್ಪಾಟು ಸಹ ಮಾಡಲಾಯಿತು. 

2007: ಖ್ಯಾತ ಬ್ಯಾಟ್ಸ್ ಮನ್ನರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಹಾಗೂ ಅನುಭವಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ನೀಡುವ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದರು.

2007: ಬೆಂಗಳೂರು ನಗರದ ಸ್ಪರ್ಶ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ  ಬಿಹಾರ ಗಡಿ ಭಾಗದ ರಾಂಪುರ್ ಗ್ರಾಮದ ಶಂಭು- ಪೂನಮ್ ದಂಪತಿಯ ಎರಡು ವರ್ಷದ ಬಾಲಕಿ ಲಕ್ಷ್ಮಿ ಈದಿನ ಸ್ಪರ್ಶ ಆಸ್ಪತ್ರೆಯಿಂದ ಮನೆಗೆ ಮರಳಿದಳು. ಈ ಬಾಲಕಿ ನಾಲ್ಕು ಹೆಚ್ಚುವರಿ ಕೈಕಾಲುಗಳನ್ನು ಹೊಂದಿದ್ದ ಪರಿಣಾಮ ಹುಟ್ಟಿನಿಂದಲೂ ತೊಂದರೆ ಅನುಭವಿಸುತ್ತಿದ್ದಳು. ಸ್ಪರ್ಶ ಆಸ್ಪತ್ರೆ ಮುಖ್ಯಸ್ಥ ಡಾ. ಶರಣ ಪಾಟೀಲ್ ನೇತೃತ್ವದ 30 ತಜ್ಞ ವೈದ್ಯರ ತಂಡ 2007ರ ನವಂಬರ್ 6 ಹಾಗೂ 7ರಂದು ಸತತ 27 ಗಂಟೆಗಳ ಕಾಲ ಲಕ್ಷ್ಮಿಗೆ ಶಸ್ತ್ರಚಿಕಿತ್ಸೆ ನಡೆಸಿತ್ತು. ಶಸ್ತ್ರಚಿಕಿತ್ಸೆ ವೇಳೆ ವೈದ್ಯರ ತಂಡ ರುಂಡವಿಲ್ಲದ ಲಕ್ಷ್ಮಿಯ ಅವಳಿ ದೇಹದ ಭಾಗವನ್ನು (2ಕೈ, 2ಕಾಲು) ಕತ್ತರಿಸಿ ತೆಗೆದಿತ್ತು. ನಂತರ ಅತ್ಯಂತ ಸೂಕ್ಷ್ಮವಾದ ಬೆನ್ನುಹುರಿ ಬೇರ್ಪಡಿಸುವ ಕಾರ್ಯ, ಸೊಂಟದ ಭಾಗವನ್ನು ಸಮರ್ಪಕಗೊಳಿಸುವ ಕಾರ್ಯ, ಮೂತ್ರಪಿಂಡ ಮರುಜೋಡಣೆ ಸೇರಿದಂತೆ ಹಲವು ಶಸ್ತ್ರಚಿಕಿತ್ಸೆಗಳನ್ನು ಲಕ್ಷ್ಮಿಗೆ ಯಶಸ್ವಿಯಾಗಿ ಮಾಡಲಾಗಿತ್ತು.

2007: ಏಷ್ಯಾದಲ್ಲಿಯೇ ಅತಿ ಎತ್ತರದ ಆನೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ `ಶಿವಶಂಕರನ್' ಉತ್ತರ ಕೇರಳದ ಒಟ್ಟಪಾಲಮ್ಮಿನಲ್ಲಿ ಸಾವನ್ನಪ್ಪಿತು. ನೂರಾರು ದೇಗುಲಗಳ ಉತ್ಸವಗಳಲ್ಲಿ ಪಾಲ್ಗೊಂಡಿದ್ದ 56 ವರ್ಷ ವಯಸ್ಸಿನ `ಶಿವಶಂಕರನ್' 10 ಅಡಿ 9 ಅಂಗುಲ ಎತ್ತರವಿತ್ತು. ಈ ಎತ್ತರದಿಂದಲೇ ಜನರ ಗಮನ ಸೆಳೆದಿತ್ತು. ಒಟ್ಟಪಾಲಮ್ಮಿನ ದೇಗುಲ ಒಂದರ ಸಮಾರಂಭದಲ್ಲಿ  ಪಾಲ್ಗೊಳ್ಳಲು ತೆರಳಿದ್ದ ಈ ಆನೆ ಟ್ರಕ್ಕಿನಿಂದ ಕೆಳಗಿಳಿಸುವಾಗ ಆಯತಪ್ಪಿ ಕೆಳಗೆ ಬಿದ್ದಿತು. ಪಶುವೈದ್ಯರ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆಯಿತು.

2007: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಿ. ಶ್ರೀನಿವಾಸರೆಡ್ಡಿ ಅವರನ್ನು ತತ್ ಕ್ಷಣ ಹುದ್ದೆಯಿಂದ ವಜಾಗೊಳಿಸಿ ರಾಜ್ಯ ಸರ್ಕಾರ  ಆದೇಶ ಹೊರಡಿಸಿತು. ರೆಡ್ಡಿ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರ ನೇಮಕಾತಿಯ ಗುತ್ತಿಗೆ ರದ್ದು ಮಾಡುವಂತೆ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ, ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.

2007: ಎಚ್ ಎಂ ಟಿ ಕಂಪೆನಿಯಿಂದ ಎರಡು ಲಕ್ಷ ರೂಪಾಯಿ ಪಡೆದು ನಕಲಿ ಛಾಪಾ ಕಾಗದ ನೀಡಿ (ಎಂಬೋಸ್ ಮೆಂಟ್) ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂಲಾಲಾ ತೆಲಗಿ, ವಜೀರ್ ಅಹ್ಮದ್ ಸಾಲಿಕ್, ಬದ್ರುದಿನ್ ಜಮಾದಾರ್ ಅವರಿಗೆ ಐದು ವರ್ಷ ಶಿಕ್ಷೆ ವಿಧಿಸಿ ಪರಪ್ಪನ ಅಗ್ರಹಾರ ವಿಶೇಷ ನ್ಯಾಯಾಲಯ ತೀರ್ಪು ನೀಡಿತು. ಮೂವರಿಗೂ ತಲಾ 4.50 ಲಕ್ಷ ರೂ ದಂಡ ಮತ್ತು ಇದೇ ಪ್ರಕರಣದ ಇನ್ನೊಬ್ಬ ಆರೋಪಿ ಪ್ರದೀಪ್ ಕುಮಾರ್ ಗೆ ಒಂದು ವರ್ಷ ಕಠಿಣ ಸಜೆ ವಿಧಿಸಿ ವಿಶೇಷ ನ್ಯಾಯಾಧೀಶರಾದ ಸಿ.ಜಿ. ಹುನಗುಂದ್ ಅವರು ತೀರ್ಪು ನೀಡಿದರು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೂ ಮೂವರು ಆರೋಪಿಗಳಾದ ಅನೀಸ್ ಖಾನ್, ಇರ್ಫಾನ್ ಅಹಮ್ಮದ್ ಮತ್ತು ಸಮೀವುಲ್ಲಾ ಅವರನ್ನು ಖುಲಾಸೆಗೊಳಿಸಿದರು.

2007: ಭಾರತದ ಪ್ರತಿಷ್ಠಿತ ಬಾಹ್ಯಾಕಾಶ ಕಾರ್ಯಕ್ರಮ ಚಂದ್ರಯಾನ -1ಕ್ಕೆ ದ್ವಿಮುಖ ಸಂಪರ್ಕ ಸಾಧಿಸುವ ಆಂಟೆನಾವನ್ನು ಬೆಂಗಳೂರಿನ ಹೊರವಲಯದಲ್ಲಿ ಇಸ್ರೋ ಸ್ಥಾಪಿಸಿದ್ದು, ಅದನ್ನು ಈದಿನ ಪತ್ರಕರ್ತರಿಗೆ ತೋರಿಸಲಾಯಿತು. ದೊಡ್ಡ ಆಲದಮರದ ಬಳಿಯ ಬ್ಯಾಲಾಳುವಿನಲ್ಲಿ ಸ್ಥಾಪಿಸಿರುವ 32 ಮೀಟರ್ ವ್ಯಾಸದ ಆಂಟೆನಾ ಮತ್ತು ಇದಕ್ಕೆ ಪೂರಕ ಸಂಪರ್ಕ ಸಾಧನಗಳಿಂದ ಚಂದ್ರಯಾನ-1 ಉಪಗ್ರಹ ಹಾಗೂ ಭೂಮಿಯ ನಡುವೆ ದ್ವಿಮುಖ ಸಂಪರ್ಕ ಸಾಧ್ಯವಾಗುತ್ತದೆ.

2006: ಹತ್ತೊಂಬತ್ತು ವರ್ಷಗಳ ಹಿಂದೆ ನ್ಯಾಯಾಂಗ ಬಂಧನದಲ್ಲಿದ್ದ ಇಬ್ಬರನ್ನು ಹಿಂಸೆ ನೀಡಿ ಕೊಂದ ಪ್ರಕರಣದಲ್ಲಿ ದೆಹಲಿಯ ಮಾಜಿ ಎಸಿಪಿ ಋಷಿಪ್ರಕಾಶ್ ತ್ಯಾಗಿ (65) ಅವರಿಗೆ ನವದೆಹಲಿಯ ತ್ವರಿತ ಗತಿ ನ್ಯಾಯಾಲಯವು ಮರಣದಂಡನೆ ವಿಧಿಸಿತು. ನ್ಯಾಯಾಂಗದ ಇತಿಹಾಸದಲ್ಲೇ ಅಪರೂಪದ ತೀರ್ಪು ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಯಿತು.

2006: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇರುವ ಗಗನಯಾತ್ರಿಗಳಾದ ಬಾಬ್ ಕರ್ಬಿಮ್ ಮತ್ತು ಕ್ರಿಸ್ಟರ್ ಫಗ್ ಸ್ಯಾಂಗ್ ಮತ್ತೊಮ್ಮೆ ಬಾಹ್ಯಾಕಾಶ ನಡಿಗೆ ನಡೆಸಿ ನಿಲ್ದಾಣದ ಅರ್ಧ ಭಾಗಕ್ಕೆ ವಿದ್ಯುತ್ ಪೂರೈಸುವ ತಂತಿಗಳ ಮರುಜೋಡಣೆ ಕಾರ್ಯ ಕೈಗೊಂಡರು.

2006: ದೋಹಾದಲ್ಲಿ ನಡೆಯುತ್ತಿದ್ದ ಏಷ್ಯನ್ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ.

2006: ಹಾಡುಹಗಲೇ ತರಗತಿಯಲ್ಲಿ ಮಕ್ಕಳೆದುರು ನಡೆದ ಶಿಕ್ಷಕನ ಘೋರ ಕಗ್ಗೊಲೆಯ ಮುಖ್ಯ ಆರೋಪಿ, ಕೇರಳದ ಸಿಪಿಎಂ ಕಾರ್ಯಕರ್ತ ಎ. ಪ್ರದೀಪನ್ ಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ನ್ಯಾಯಮೂರ್ತಿ ಎಸ್. ಬಿ. ಸಿನ್ಹ ಮತ್ತು ಮಾರ್ಕಾಂಡೇಯ ಕಟ್ಜು ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠವು ಜೀವಾವಧಿ ಸಜೆಗೆ ಇಳಿಸಿ ತೀರ್ಪು ನೀಡಿತು. ಭಾರತೀಯ ಯುವ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗ್ದಿದ ಶಾಲಾ ಶಿಕ್ಷಕ ಕೆ.ಪಿ. ಜೈಕೃಷ್ಣನ್ ಅವರನ್ನು ತರಗತಿಯಲ್ಲೇ ಶಾಲಾ ಮಕ್ಕಳ ಎದುರು ಮಾರಕ ಅಸ್ತ್ರಗಳಿಂದ ಹಲ್ಲೆ ನಡೆಸಿ ಅಟ್ಟಿಸಿಕೊಂಡು ಹೋಗಿ ಕೊಲೆಗೈದುದಕ್ಕಾಗಿ ಆರೋಪಿ ಎ. ಪ್ರದೀಪನ್ ಮತ್ತು ಇತರ ಐವರು ಆಪಾದಿತರಿಗೆ ವಿಚಾರಣಾ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ನಂತರ ಹೈಕೋರ್ಟ್ ಅದನ್ನು ದೃಢಪಡಿಸಿತ್ತು. ಕೇರಳದ ಕಣ್ಣೂರು ಜಿಲ್ಲೆಯ ಪರಮೇಲ್ನ ಮೊಕೇರಿ ಈಸ್ಟ್ ಯು.ಪಿ. ಸ್ಕೂಲಿನಲ್ಲಿ 1999ರ ಡಿಸೆಂಬರ್ 1ರಂದು ಈ ಭೀಕರ ಘಟನೆ ನಡೆದಿತ್ತು. ಘಟನೆ ನಡೆದ 7 ದಿನಗಳ ಬಳಿಕ ಅಂದರೆ ಡಿಸೆಂಬರ್ 8ರಂದು ಪ್ರಕರಣದ ತನಿಖೆ ಆರಂಭವಾಗಿತ್ತು.

2005: ಸೂರ್ಯನನ್ನು ಹೋಲುವ ನಕ್ಷತ್ರವೊಂದನ್ನು ಪತ್ತೆ ಹಚ್ಚಿರುವುದಾಗಿ ಖಗೋಳ ವಿಜ್ಞಾನಿಗಳು ನ್ಯೂಯಾರ್ಕಿನಲ್ಲಿ ಪ್ರಕಟಿಸಿದರು. ಈ ನಕ್ಷತ್ರದ ಸುತ್ತ ಚಲನಶೀಲ ಅವಶೇಷಗಳು ಕಾಣಿಸಿಕೊಂಡಿದ್ದು ಭೂಮಿಯನ್ನು ಹೋಲುವ ಗ್ರಹದ ರಚನೆ ನಡೆಯುತ್ತಿರಬಹುದು ಎನ್ನಲಾಗಿದೆ. 137 ಜ್ಯೋತಿರ್ ವರ್ಷಗಳಷ್ಟು ದೂರದಲ್ಲಿರುವ ನಕ್ಷತ್ರ ತನ್ನ ಸುತ್ತ ಗ್ರಹಗಳನ್ನು ಒಳಗೊಂಡಿರುವ ಸಾಧ್ಯತೆ ಇದೆ. ನಕ್ಷತ್ರ ಸುಮಾರು 3ಕೋಟಿ ವರ್ಷಗಳಷ್ಟು ಹಳೆಯದು. ಅಲ್ಲಿನ ತಾಪಮಾನ ಮೈನಸ್ 262 ಡಿಗ್ರಿ ಫ್ಯಾರನ್ ಹೀಟ್ ಎಂಬುದು ವಿಜ್ಞಾನಿಗಳ ಅಭಿಮತ.

2005: ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ದಾಖಲೆ ನಿರ್ಮಿಸಿದ್ದ ಉತ್ತರ ಕರೋಲಿನಾದ ಅಥ್ಲೀಟ್ ಟಿಮ್ ಮಾಂಟ್ಗೊಮರಿ ಸಾಲ್ವೊ ಪಟ್ಟಣದಲ್ಲಿ ತಮ್ಮ ನಿವೃತ್ತಿ ಘೋಷಿಸಿದರು. ಉದ್ದೀಪನ ಮದ್ದು ಸೇವನೆ ಪ್ರಕರಣದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಕ್ರೀಡಾ ನ್ಯಾಯ ಪಂಚಾಯ್ತಿಯು ಇವರನ್ನು ತಪ್ಪಿತಸ್ಥ ಎಂದು ತೀರ್ಮಾನಿಸಿ ಎರಡು ವರ್ಷದ ಅವಧಿಗೆ ನಿಷೇಧ ಹೇರಿದ ಮರುದಿನವೇ ಮಾಂಟ್ಗೊಮರಿ ನಿವೃತ್ತಿ ಪ್ರಕಟಿಸಿದರು.

2005: ಯಹೂದ್ಯರ ನರಮೇಧದ ಅವಧಿಯ ಗ್ರಾಹಕರಿಗೆ ನಾಜಿಗಳ ಪರ ಸ್ವಿಸ್ ಬ್ಯಾಂಕ್ ನಡೆಸಿದ ವಂಚನೆ ಪ್ರಕರಣ ಸಂಬಂಧದಲ್ಲಿ ಖ್ಯಾತ ಮನಃಶಾಸ್ತ್ರಜ್ಞ ಸಿಗ್ಮಂಡ್ ಫ್ರಾಯ್ಡ್ ಮೊಮ್ಮಗ ಅನ್ಟೋನ್ ವಾಲ್ಟರ್ ಫ್ರಾಯ್ಡ್ ಅವರಿಗೆ 1,68,000 ಡಾಲರ್ ಪರಿಹಾರ ನೀಡುವಂತೆ ಕ್ಯಾಲಿಫೋರ್ನಿಯಾದ ಪ್ಯಾಸಡೇನಾದ ನ್ಯಾಯಾಲಯವೊಂದು ಆದೇಶ ನೀಡಿತು.

2005: ಜನಾಂಗೀಯ ಕಲಹ, ಹಿಂಸಾಚಾರ, ಯುದ್ಧ ಮತ್ತು ಸರ್ವಾಧಿಕಾರದ ಮುಷ್ಠಿಯಲ್ಲಿ ಬಸವಳಿದ ಇರಾಕಿನಲ್ಲಿ ಇದೇ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆ ಆರಂಭಗೊಂಡಿತು.

2005: ಹಂಪಿಯ ಕನ್ನಡ ವಿಶ್ವ ವಿದ್ಯಾಲಯವು ನೀಡುವ ನಾಡೋಜ ಪ್ರಶಸ್ತಿಯ ಗೌರವಕ್ಕೆ ಪ್ರಜಾವಾಣಿಯ ಇಗೋ ಕನ್ನಡ ಅಂಕಣದ ಖ್ಯಾತಿಯ ನಿಘಂಟು ತಜ್ಞ ಬೆಂಗಳೂರಿನ ಪ್ರೊ. ಜಿ. ವೆಂಕಟಸುಬ್ಬಯ್ಯ, ಮೈಸೂರು ವಿ.ವಿ. ಪ್ರಾಧ್ಯಾಪಕಿ ಪ್ರೊ.ಸಿ. ಪಾರ್ವತಮ್ಮ, ಬರಹಗಾರ್ತಿ ಮಂಗಳೂರಿನ ಸಾರಾ ಅಬೂಬಕ್ಕರ್, ರಂಗಭೂಮಿಯ ಹಿರಿಯ ಚೇತನ ಬೆಳಗಾವಿಯ ಏಣಗಿ ಬಾಳಪ್ಪ, ಕಾಷ್ಠ ಶಿಲ್ಪ ಕಲಾವಿದ ಗುಲ್ಬರ್ಗದ ನಾಗಣ್ಣ ಮೋನಪ್ಪ ಬಡಿಗೇರ, ಖ್ಯಾತ ಹರಿದಾಸ ಉಡುಪಿ ಭದ್ರಗಿರಿ ಅಚ್ಯುತದಾಸರು ಆಯ್ಕೆಯಾದರು.  

2001: ಪೀಸಾ ವಾಲುಗೋಪುರವನ್ನು 12 ವರ್ಷಗಳ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ಭೇಟಿಗಾಗಿ ತೆರೆದಿಡಲಾಯಿತು. 1990ರಲ್ಲಿ ತಜ್ಞರ ಸಲಹೆಯಂತೆ ಗೋಪುರವನ್ನು ಮುಚ್ಚಲಾಗಿತ್ತು.

1966: ಚಿತ್ರ ನಿರ್ಮಾಪಕ ಹಾಗೂ ಅನಿಮೇಟರ್ ವಾಲ್ಟ್ ಡಿಸ್ನಿ ಅವರು ಲಾಸ್ ಏಂಜೆಲಿಸಿನಲ್ಲಿ ತಮ್ಮ 65ನೇ ವಯಸ್ಸಿನ್ಲಲಿ ಮೃತರಾದರು.

1950: ಭಾರತದ `ಉಕ್ಕಿನ ಮನುಷ್ಯ' ಸರ್ದಾರ್ ವಲ್ಲಭ ಭಾಯಿ ಪಟೇಲ್ ಬಾಂಬೆಯಲ್ಲಿ (ಈಗಿನ ಮುಂಬೈ) ತಮ್ಮ 75ನೇ ವಯಸ್ಸಿನಲ್ಲಿ ನಿಧನರಾದರು.

1944: ಅಮೆರಿಕದ ಸೇನಾ ಮೇಜರ್ ಬ್ಯಾಂಡ್ ಲೀಡರ್ ಗ್ಲೆನ್ನ್ ಮಿಲ್ಲರ್ ಅವರನ್ನು ಪ್ಯಾರಿಸ್ಸಿನತ್ತ್ತ ಒಯ್ಯುತ್ತಿದ್ದ ಏಕ ಎಂಜಿನ್ ವಿಮಾನ ಬ್ರಿಟಿಷ್ ಕಡಲ್ಗಾಲುವೆಯ ಮೇಲೆ ನಾಪತ್ತೆಯಾಯಿತು.

1938: ಸಾಹಿತಿ ಕೆ.ಎಚ್. ಶ್ರೀನಿವಾಸ್ ಜನನ.

1935: ನಟ, ನಾಟಕಕಾರ, ತಾಂತ್ರಿಕ ಶಿಕ್ಷಣ ಇಲಾಖೆಯ ಪ್ರಾಧ್ಯಾಪಕ ಬಿ.ಎಸ್. ಕೇಶವರಾವ್ ಅವರು ಬಿ.ಕೆ. ಸುಬ್ಬರಾವ್- ನಾಗಲಕ್ಷ್ಮಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು.

1911: ದೊರೆ ಐದನೇ ಜಾರ್ಜ್ ನವದೆಹಲಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ. ದಿಲ್ಲಿ ದರ್ಬಾರಿನಲ್ಲಿ ರಾಜಧಾನಿಯು ಕಲ್ಕತ್ತಾದಿಂದ (ಈಗಿನ ಕೋಲ್ಕತ್ತಾ) ದೆಹಲಿಗೆ ಸ್ಥಳಾಂತರಗೊಳ್ಳಲಿದೆ ಎಂದು ಪ್ರಕಟಿಸಲಾಯಿತು.

1902: ಸಾಹಿತಿ ಚಂಪಾಬಾಯಿ ದೇಶಪಾಂಡೆ ಜನನ.

1832: ಫ್ರೆಂಚ್ ಸಿವಿಲ್ ಎಂಜಿನಿಯರ್ ಅಲೆಗ್ಸಾಂಡರ್ ಗುಸ್ಟಾವ್ ಐಫೆಲ್ (1832-1923) ಜನ್ಮದಿನ. ನೈಸ್ನಲ್ಲಿ ಖಗೋಳ ವೀಕ್ಷಣಾಲಯಕ್ಕೆ ಚಲಿಸುವಂತಹ ಗುಮ್ಮಟ ಹಾಗೂ ನ್ಯೂಯಾರ್ಕಿನ ಸ್ಟ್ಯಾಚ್ಯು ಆಫ್ ಲಿಬರ್ಟಿಯ ಚೌಕಟ್ಟಿನ ವಿನ್ಯಾಸ ರೂಪಿಸಿದ ಐಫೆಲ್ ಅವರ ಹೆಸರನ್ನು ಫ್ರಾನ್ಸಿನಲ್ಲಿ ನಿರ್ಮಿಸಿದ ಗೋಪುರಕ್ಕೆ ಇರಿಸಲಾಗಿದೆ. 

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement