My Blog List

Saturday, January 3, 2009

ಇಂದಿನ ಇತಿಹಾಸ History Today ಜನವರಿ 03


ಇಂದಿನ ಇತಿಹಾಸ

ಜನವರಿ  03

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ಮುಖ್ಯಸ್ಥ ಹಾಗೂ ಖ್ಯಾತ ವಿಜ್ಞಾನಿ ಪ್ರೊ. ಚಿಂತಾಮಣಿ ನಾಗೇಶ ರಾಮಚಂದ್ರರಾವ್ (ಸಿ. ಎನ್. ಆರ್ ರಾವ್) ಅವರು ಮೊತ್ತ  ಮೊದಲ  ಭಾರತ  ವಿಜ್ಞಾನ  ಪ್ರಶಸ್ತಿಗೆ  ಆಯ್ಕೆ ಯಾದರು.  ಹೈದರಾಬಾದಿನಲ್ಲಿ  ನಡೆದ  ಭಾರತೀಯ ವಿಜ್ಞಾನ  ಸಮಾವೇಶದಲ್ಲಿ  ಪ್ರಧಾನಿ ಮನಮೋಹನ್ ಸಿಂಗ್ ಅವರು ರಾವ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
 
ಪ್ರತಿವರ್ಷ ಭಾರತೀಯ ವಿಜ್ಞಾನ ಕಾಂಗ್ರೆಸ್ (ಸಮ್ಮೇಳನ) ಈ ದಿನ ಆರಂಭವಾಗುತ್ತದೆ.
 
2008: `ಶಾಸ್ತ್ರ ನಿಷಿದ್ಧವಾದ ವಿದೇಶಯಾನ ಮಾಡಿರುವ ಪುತ್ತಿಗೆ ಮಠಾಧೀಶರು ಪರ್ಯಾಯ ಸಂದರ್ಭದಲ್ಲಿ ಕೃಷ್ಣಪೂಜೆ ನೆರವೇರಿಸಲು ಸಮ್ಮತಿ ಇಲ್ಲ. ಅದನ್ನು ಮತ್ತೆ ಪುನರುಚ್ಚರಿಸುತ್ತಿದ್ದೇವೆ. ಈ ನಿರ್ಣಯಕ್ಕೆ ಅಷ್ಟಮಠಾಧೀಶರ ಬಹುಮತದ ಬೆಂಬಲ ಇದೆ. ಅಷ್ಟಮಠಾಧೀಶರ ಬಹುಮತದ ನಿರ್ಣಯವನ್ನು ಪುತ್ತಿಗೆ ಮಠಾಧೀಶರು ಗೌರವಿಸಬೇಕು. ಕೃಷ್ಣನ ಗರ್ಭಗುಡಿಗೆ ಸಂಬಂಧಿಸಿದ ಧಾರ್ಮಿಕ ನಿಯಮಗಳನ್ನು ಪಾಲಿಸುವುದರಿಂದ ಸಮಾಜಕ್ಕೆ ಹಾಗೂ ಲೋಕ ಕಲ್ಯಾಣ ದೃಷ್ಟಿಯಿಂದ ಒಳಿತೇ ಹೊರತು ಯಾವ ವಿಧವಾದ ಹಾನಿಯೂ ಇಲ್ಲ. ಈ ಕಟ್ಟುಪಾಡನ್ನು ಸಡಿಲಿಸುವುದು ಧರ್ಮದ ಉಲ್ಲಂಘನೆ ಆಗುತ್ತದೆಯೇ ಧಾರ್ಮಿಕ ಸುಧಾರಣೆ ಎನಿಸವುದಿಲ್ಲ' ಎಂದು ಉಡುಪಿಯ ಅಷ್ಟ ಮಠಗಳ ಪೈಕಿ ಆರು ಮಠಾಧೀಶರು ಅಭಿಪ್ರಾಯ ವ್ಯಕ್ತ ಪಡಿಸಿದರು. `ಶ್ರೀಕೃಷ್ಣಪೂಜೆ ನೀತಿ ಸಂಹಿತೆಯನ್ನು ಉಲ್ಲಂಘಿಸುವುದರಿಂದ ಮುಂದೆ ಆಗಬಹುದಾದ ಅನರ್ಥಗಳಿಗೆ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥರೇ ಹೊಣೆಗಾರರಾಗಬೇಕಾಗುತ್ತದೆ' ಎಂದು ಪರ್ಯಾಯ ಕೃಷ್ಣಾಪುರ ಮಠಾಧೀಶ ವಿದ್ಯಾಸಾಗರ ತೀರ್ಥರು ಎಚ್ಚರಿಸಿದರು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಪರ್ಯಾಯ ವಿವಾದ ಮತ್ತಷ್ಟು ಬಿಗಡಾಯಿಸಿತು. ಅಷ್ಟಮಠಾಧೀಶರ ಪೈಕಿ ಪರ್ಯಾಯ ಕೃಷ್ಣಾಪುರ ಮಠಾಧೀಶ ವಿದ್ಯಾಸಾಗರ ತೀರ್ಥರು, ಪಲಿಮಾರು ಮಠಾಧೀಶ ವಿದ್ಯಾಧೀಶ ಶ್ರೀಪಾದರು, ಕಾಣಿಯೂರು ಮಠಾಧೀಶ ವಿದ್ಯಾವಲ್ಲಭ ತೀರ್ಥರು, ಪೇಜಾವರ ಕಿರಿಯ ಮಠಾಧೀಶ ವಿಶ್ವಪ್ರಸನ್ನ ತೀರ್ಥರು, ಸೋದೆ ಮಠದ ವಿಶ್ವವಲ್ಲಭ ತೀರ್ಥರು, ಹಾಗೂ ಅದಮಾರು ಮಠದ ಪ್ರತಿನಿಧಿಯಾಗಿ ಭಾಗವಹಿಸಿದ್ದ ದಿವಾನರಾದ ವೆಂಕಟ್ರಮಣ ಮುಚ್ಚಿಂತಾಯ ಅವರೊಂದಿಗಿನ ಸಮಾಲೋಚನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಠಾಧೀಶರ ಅಭಿಪ್ರಾಯ ವಿವರಿಸಿದರು.

2008: ಖ್ಯಾತ ಇಂಗ್ಲಿಷ್ ಲೇಖಕಿ ಕನ್ನಡತಿ ಮಾಲತಿ ರಾವ್ ಅವರನ್ನು 2007ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಅವರ `ಡಿಸ್ಆರ್ಡರ್ಲಿ ವುಮೆನ್' ಕಾದಂಬರಿಗೆ ಈ ಪ್ರಶಸ್ತಿ ದೊರಕಿತು.

2008: ಭೋಪಾಲಿನಿಂದ 400 ಕಿ.ಮೀ. ದೂರದ ಜಿಲ್ಲಾ ಕೇಂದ್ರ ಸಾತ್ನಾದಿಂದ 35 ಕಿ.ಮೀ. ದೂರದಲ್ಲಿರುವ ಚೋರ್ಮಾರ್ ಗ್ರಾಮದ ಸರ್ಕಾರಿ ಹೈಸ್ಕೂಲಿನಲ್ಲಿ  ಹತ್ತನೇ ತರಗತಿಯ ವಿದ್ಯಾರ್ಥಿ ರಾಹುಲ್ ಸಿಂಗ್ ತನ್ನ ಬಳಿ ಇದ್ದ ನಾಡ ಪಿಸ್ತೂಲಿನಿಂದ ಎಂಟನೇ ತರಗತಿಯ ಧರ್ಮು ಕೋಲಿ ಎಂಬ ವಿದ್ಯಾರ್ತಿಯನ್ನು ಗುಂಡು ಹಾರಿಸಿ ಕೊಂದು ಹಾಕಿದ ಘಟನೆ ನಡೆಯಿತು. ದೆಹಲಿ ಸಮೀಪ ಗುಡಗಾಂವಿನಲ್ಲಿ ಶಾಲಾ ಬಾಲಕರಿಬ್ಬರು ಶಾಲೆಯಲ್ಲಿಯೇ ಪಿಸ್ತೂಲಿನಿಂದ ತಮ್ಮ ಇಬ್ಬರು ಸಹಪಾಠಿಗಳನ್ನು ಗುಂಡಿಟ್ಟು ಕೊಂದ ಘಟನೆ ನಡೆದು ಇನ್ನೂ ಒಂದು ತಿಂಗಳಾಗುವುದರ ಮೊದಲೇ ಅಂತಹದೇ ಇನ್ನೊಂದು ಘಟನೆ ನಡೆಯಿತು.

2008: ವಿಜಯವಾಡಕ್ಕೆ ಸಮೀಪದ ಶ್ರೀದುರ್ಗಾ ಮಲ್ಲೇಶ್ವರಸ್ವಾಮಿ ದೇವಸ್ಥಾನದ ಸ್ನಾನಘಟ್ಟದ ಬಳಿ ಜನಸಂದಣಿ ಮೇರೆ ಮೀರಿ ಕಾಲ್ತುಳಿತಕ್ಕೆ ಐವರು ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ ಆರು ಮಂದಿ ಸಾವನ್ನಪ್ಪಿದರು. `ಭವಾನಿ ದೀಕ್ಷೆ'ಯ ಕೊನೆಯ ದಿನ ಬೆಳಿಗ್ಗೆ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ದೇಗುಲದ ಬಳಿ ಬಂದಿದ್ದರು. ಬಹುತೇಕ ಮಂದಿ ಇಂದ್ರ ಕೀಲಾದ್ರಿ ಬೆಟ್ಟದತ್ತ ದರ್ಶನ ಪಡೆಯಲು ನುಗ್ಗತೊಡಗಿದರು. ಆಗ ಈ ಕಾಲ್ತುಳಿತದ ಘಟನೆ ಸಂಭವಿಸಿತು.

2008: ನಾಗಾಲ್ಯಾಂಡಿನಲ್ಲಿ ಈದಿನ ರಾತ್ರಿ ರಾಷ್ಟ್ರಪತಿ ಆಡಳಿತ ವಿಧಿಸಿ, ವಿಧಾನಸಭೆಯನ್ನು ಅನಿರ್ದಿಷ್ಟಾವಧಿಗೆ ಅಮಾನತಿನಲ್ಲಿ ಇಡಲಾಯಿತು. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ರಾಜ್ಯದ ಬಿಜೆಪಿ ಬೆಂಬಲಿತ ಮುಖ್ಯಮಂತ್ರಿ ನೇಫಿಯು ರಿಯೋ ನೇತೃತ್ವದ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಡಳಿತ ವಿಧಿಸುವ ಕೇಂದ್ರ ಸಚಿವ ಸಂಪುಟದ ಶಿಫಾರಸಿಗೆ ಸಹಿ ಹಾಕಿದರು.  

2008: ಸುಚಿತ್ರ ಫಿಲಂ ಸೊಸೈಟಿಯು ಚೌಡಯ್ಯ ಸ್ಮಾರಕ ಭವನದಲ್ಲಿ ಏರ್ಪಡಿಸಿದ್ದ `ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ' ಕಾರ್ಯಕ್ರಮವನ್ನು ರಾಜ್ಯಪಾಲ ರಾಮೇಶ್ವರ ಠಾಕೂರ್ ಉದ್ಘಾಟಿಸಿದರು. ಖ್ಯಾತ ಚಿತ್ರ ನಿರ್ದೇಶಕ ಅಡೂರ್ ಗೋಪಾಲಕೃಷ್ಣನ್ ಮುಖ್ಯ ಅತಿಥಿಯಾಗಿದ್ದರು. 

2008: ವಿಧಾನಪರಿಷತ್ ಮಾಜಿ ಸದಸ್ಯ ಎಸ್. ಚನ್ನಬಸವಯ್ಯ ಅವರ ನೆನಪಿನಲ್ಲಿ ನೀಡಲಾಗುವ `ಶ್ರೇಷ್ಠ ಉಪನ್ಯಾಸಕ' ಪ್ರಶಸ್ತಿಗೆ ಸಾಹಿತಿ, ನಗರದ ಅತ್ತಿಗುಪ್ಪೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎಲ್.ಎನ್. ಮುಕುಂದರಾಜ್ ಅವರನ್ನು ಆಯ್ಕೆ ಮಾಡಲಾಯಿತು. ಚನ್ನಬಸವಯ್ಯ ಅವರೇ ಸ್ಥಾಪಿಸಿದ್ದ ಈ ಪ್ರಶಸ್ತಿಯನ್ನು ಎಸ್. ಚನ್ನಬಸವಯ್ಯ ಅಭಿಮಾನಿ ಬಳಗ, ಕರ್ನಾಟಕ ರಾಜ್ಯ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ ಮತ್ತು ರಂಗೋತ್ರಿ ನಾಟಕ ಶಾಲೆಯ ವತಿಯಿಂದ ನೀಡಲಾಗುತ್ತದೆ.

2007: ದೇಶದಾದ್ಯಂತ ಕುತೂಹಲ ಕೆರಳಿಸಿರುವ ನೊಯಿಡಾ ಮಕ್ಕಳ ಸರಣಿ ಕೊಲೆ ಪ್ರಕರಣದ ತನಿಖೆ ನಡೆಸಲು ಕೇಂದ್ರ ಸರ್ಕಾರ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿತು. ಪ್ರಕರಣದಲ್ಲಿ ಹಸ್ತಕ್ಷೇಪ ನಡೆಸಲು ಸುಪ್ರೀಂ ಕೋರ್ಟರ್್ ನಿರಾಕರಿಸಿ, ಸಿಬಿಐ ತನಿಖೆಗೆ ಆದೇಶಿಸುವಂತೆ ನ್ಯಾಯವಾದಿಯೊಬ್ಬರು ಮಾಡಿದ ಮನವಿಯನ್ನು ತಳ್ಳಿ ಹಾಕಿದ ಬಳಿಕ ಕೇಂದ್ರ ಈ ಕ್ರಮ ಕೈಗೊಂಡಿತು. ಉತ್ತರ ಪ್ರದೇಶದ ನೊಯಿಡಾ ವಲಯದ ನಿಥಾರಿ ಗ್ರಾಮದಲ್ಲಿ 38 ಮಕ್ಕಳ ಕಣ್ಮರೆ, 17 ಅಸ್ಥಿಪಂಜರಗಳ ಪತ್ತೆ ಎಲ್ಲರನ್ನೂ ದಿಗ್ಭ್ರಮೆಗೊಳಿಸಿತ್ತು. ಈ ಕುರಿತು ತನಿಖೆ ನಡೆಸಲು ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಪ್ರಕರಣದ ಕುರಿತು ಸ್ಥಳೀಯ ಆಡಳಿತ ನಡೆಸುತ್ತಿರುವ ತನಿಖೆಯ ಪರಿಶೀಲನೆಯ ಜೊತೆಗೆ ಕಣ್ಮರೆಯಾದ ಮಕ್ಕಳನ್ನು ಪತ್ತೆಹಚ್ಚುವ ಜವಾಬ್ದಾರಿಯನ್ನು ಈ ಸಮಿತಿಗೆ ಹೊರಿಸಲಾಗಿದೆ. ಇಲಾಖೆಯ ಜಂಟಿ ಕಾರ್ಯದರ್ಶಿ ಮಂಜುಳಾಕೃಷ್ಣನ್ ಸಮಿತಿಯ ನೇತೃತ್ವ ವಹಿಸಲಾಯಿತು.

2007: ಕುಂಭಮೇಳದ ಬಳಿಕ ವಿಶ್ವದ ಬೃಹತ್ ಧಾರ್ಮಿಕ ಸಮ್ಮೇಳನ ಎಂದು ಭಾವಿಸಲಾದ 45 ದಿನಗಳ ಅರ್ಧ ಕುಂಭ ಮೇಳವು, ಬೆಳಗಿನ ಜಾವ ಭಕ್ತಾದಿಗಳು ಪುಣ್ಯ ಸ್ನಾನ ಮಾಡುವುದರೊಂದಿಗೆ ಆರಂಭವಾಯಿತು. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಯಾತ್ರಾರ್ಥಿಗಳು, ವಿದ್ಯಾರ್ಥಿಗಳು ಹಾಗೂ ಪ್ರಾಯಶ್ಚಿತ್ತವಾಗಿ ಒಂದು ತಿಂಗಳು ದೇಹದಂಡನೆಗೆ ಒಳಗಾಗುವ `ಕಲ್ಪವಾಸಿ'ಗಳು ಬೆಳಗಿನ ಜಾವ 4.48 ಗಂಟೆಗೆ ಗಂಗಾ-ಯಮುನಾ ಮತ್ತು ಪೌರಾಣಿಕ ಪ್ರಾಮುಖ್ಯತೆಯುಳ್ಳ ಸರಸ್ವತಿ  ಸಂಗಮದ ಸ್ಥಳದಲ್ಲಿ ಸ್ನಾನ ಮಾಡಿದರು.

2007: ಇರಾಕ್ ಸರ್ವಾಧಿಕಾರಿ ಸದ್ದಾಮ್ ಹುಸೇನ್ ಅವರನ್ನು ಗಲ್ಲಿಗೆ ಏರಿಸುತ್ತಿರುವುದನ್ನು ರಹಸ್ಯವಾಗಿ ಮೊಬೈಲ್ ದೂರವಾಣಿಯಲ್ಲಿ ಚಿತ್ರಿಸಿಕೊಂಡು ಇಂಟರ್ನೆಟ್ಟಿನಲ್ಲಿ ಪ್ರಸಾರ ಮಾಡಿದ ಸಂದರ್ಭದಲ್ಲಿ ಹಾಜರಿದ್ದ ಇರಾಕಿ ಕಾವಲುಗಾರನೊಬ್ಬನನ್ನು ಬಂಧಿಸಲಾಯಿತು. ಡಿಸೆಂಬರ್ 30ರ ಬೆಳಗಿನ ಜಾವ ಸದ್ದಾಮ್ ಹುಸೇನ್ ಅವರನ್ನು ಗಲ್ಲಿಗೇರಿಸಲಾಗಿತ್ತು. ನೇಣು ಕುಣಿಕೆಯನ್ನು ಬಿಗಿ ಮಾಡುವ ಮುನ್ನ ಶಿಯಾ ಧಾರ್ಮಿಕ ನಾಯಕ ಮೊಕ್ತಾದಾ ಅಲ್- ಸದ್ರ್ , ಸದ್ದಾಮ್ ಅವರನ್ನು ಮಾತುಗಳಿಂದ ಚುಚ್ಚಿದ್ದನ್ನು ಈ ಚಿತ್ರದ ಮೂಲಕ ಪ್ರಸಾರ ಮಾಡಲಾಗಿತ್ತು.

2006: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಜೆ.ಎನ್. ಟಾಟಾ ಸಭಾಂಗಣ ಆವರಣದಲ್ಲಿ ನಡೆದ ಉಗ್ರಗಾಮಿ ದಾಳಿ ಪ್ರಕರಣ ಸಂಬಂಧದಲ್ಲಿ ಲಷ್ಕರ್-ಇ-ತೊಯ್ಬಾ ಸಂಘಟನೆಯ ದಕ್ಷಿಣ ಭಾರತದ ಕಮಾಂಡರ್ ಅಬ್ದುರ್ ರೆಹಮಾನ್ ಎಂಬ ಉಗ್ರಗಾಮಿಯನ್ನು ಪೊಲೀಸರು ಬಂಧಿಸಿದರು.

2006: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ಮುಖ್ಯಸ್ಥ ಹಾಗೂ ಖ್ಯಾತ ವಿಜ್ಞಾನಿ ಪ್ರೊ. ಚಿಂತಾಮಣಿ ನಾಗೇಶ ರಾಮಚಂದ್ರರಾವ್ (ಸಿ. ಎನ್. ಆರ್ ರಾವ್) ಅವರು ಮೊತ್ತ ಮೊದಲ ಭಾರತ ವಿಜ್ಞಾನ ಪ್ರಶಸ್ತಿಗೆ ಆಯ್ಕೆಯಾದರು. ಹೈದರಾಬಾದಿನಲ್ಲಿ ನಡೆದ ಭಾರತೀಯ ವಿಜ್ಞಾನ ಸಮಾವೇಶದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾವ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

1980: ಅರಣ್ಯ ಸಂರಕ್ಷಣಾ ತಜ್ಞ ಜಾಯ್ ಅಡಾಮ್ಸನ್ ಅವರನ್ನು ಕೀನ್ಯಾದಲ್ಲಿ ಶಾಬಾ ರಾಷ್ಟ್ರೀಯ ಮೀಸಲು ಅರಣ್ಯದಲ್ಲಿ ಅತೃಪ್ತ ನೌಕರನೊಬ್ಬ ಕೊಲೆ ಮಾಡಿದ.

1979: ಅಮೆರಿಕಾದ  ವ್ಯಾಪಾರಿ ಹಾಗೂ ಹಿಲ್ಟನ್ ಹೋಟೆಲುಗಳ ಸಮೂಹದ ಸ್ಥಾಪಕ ಕೊನಾರ್ಡ್ ಹಿಲ್ಟನ್ ತಮ್ಮ  90ನೇ ವಯಸ್ಸಿನಲ್ಲಿ ನಿಧನರಾದರು..

1962: ಕಲಾವಿದ ರಾಜಕುಮಾರ್ ಕೆ. ಜನನ.

1952: ಕಲಾವಿದೆ ವನಮಾಲಾ ಕುಲಕರ್ಣಿ ಅವರು ಖ್ಯಾತ ಸಂಗೀತ ಕಲಾವಿದೆ ಇಂದಿರಾಬಾಯಿ ಅವರ ಮಗಳಾಗಿ ಬಳ್ಳಾರಿಯ ಸಂಗೀತ ಕಲಾವಿದರ ಮನೆತನದಲ್ಲಿ ಜನಿಸಿದರು.

1931: ಮೊದಲ ಜಾಗತಿಕ ಯುದ್ಧದಲ್ಲಿ ಪಶ್ಚಿಮ ಭಾಗದಲ್ಲಿ ಫ್ರೆಂಚ್ ಸೇನೆಯ ಮಹಾದಂಡ ನಾಯಕನಾಗಿದ್ದ ಫ್ರೆಂಚ್ ಮಾರ್ಷಲ್ ಜೋಸೆಫ್ ಜಾಕಿಸ್ ಸೀಸೈರ್ ಜಾಫ್ರಿ ನಿಧನರಾದರು.

1925: ಈ ದಿನ ಬೆನಿಟೊ ಮುಸೋಲಿನಿ ಇಟಲಿಯ ಸಂಸತ್ತನ್ನು ವಿಸರ್ಜಿಸಿ ಇಟಲಿಯ ಸಾರ್ವಭೌಮ ದೊರೆಯಾದ. ಜರ್ಮನಿಯ ಹಿಟ್ಲರನಂತೆ ಈತ ಇಟಲಿಯ ಅನಭಿಷಿಕ್ತ ದೊರೆಯಾದ.

1915: ಪೋಲಂಡಿನಲ್ಲಿ ರಷ್ಯನ್ನರ ವಿರುದ್ಧ ಜರ್ಮನ್ನರು ಯುದ್ಧದಲ್ಲಿ ವೊತ್ತ ಮೊದಲ ಬಾರಿಗೆ `ಅಶ್ರುವಾಯು' ಬಳಸಿದರು.

1884: ಕನ್ನಡದ ಕಣ್ವ ಎಂದೇ ಖ್ಯಾತರಾಗಿದ್ದ ಸಾಹಿತಿ ಬಿ.ಎಂ. ಶ್ರೀಕಂಠಯ್ಯ (3-1-1884-5-1-1946) ಹುಟ್ಟಿದ ದಿನ ಇದು. ತುಮಕೂರಿನ ಸಂಪಿಗೆ ಗ್ರಾಮದವರಾದ ಶ್ರೀಕಂಠಯ್ಯ ಅವರ ತಂದೆ ಮೈಲಾರಯ್ಯ, ತಾಯಿ ಭಾಗೀರಥಮ್ಮ. ಮಾಧ್ಯಮಿಕ ಶಾಲೆಯವರೆಗೆ ಶ್ರೀರಂಗಪಟ್ಟಣದಲ್ಲಿ ಓದು. ನಂತರ ಹೆಚ್ಚಿನ ವ್ಯಾಸಂಗಕ್ಕಾಗಿ ಮೈಸೂರು, ಬೆಂಗಳೂರು, ಮದ್ರಾಸು (ಈಗಿನ ಚೆನ್ನೈ) ವಿಶ್ವ ವಿದ್ಯಾಲಯಗಳಲ್ಲಿ ಬಿ.ಎಲ್. ಮತ್ತು ಎಂ.ಎ. ಅಧ್ಯಯನ. ಮೊದಲು ಕಲಿತದ್ದು ಭೌತಶಾಸ್ತ್ರ, ನಂತರ ಇಂಗ್ಲಿಷ್. ಆಂಗ್ಲ ವಿದ್ವಾಂಸರನ್ನೂ ಮೀರಿದ ಇಂಗ್ಲಿಷ್ ವಿದ್ವತ್ತು. ನಾಡಿನ ಜನರನ್ನು ಬಡಿದೆಬ್ಬಿಸಿದ ಕನ್ನಡತನ, ಸಾಹಿತ್ಯಪ್ರಿಯ, ನಾಟಕಕಾರ, ಭಾಷಣಕಾರ, ಸಂಘಟನಾ ಚತುರ. ಧಾರವಾಡದಲ್ಲಿ 1890ರ ಜುಲೈ 20ರಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಸ್ಥಾಪನೆಯಾದಾಗ ಮೈಸೂರು ಪ್ರತಿನಿಧಿಯಾಗಿ ಬಿ.ಎಂ.ಶ್ರೀ ಆಗಮನ. ಪ್ರಚಂಡ ಭಾಷಣ. ಧನುಷ್ಕೋಟಿ, ಇಂಗ್ಲಿಷ್ ಗೀತಗಳು, ಗದಾಯುದ್ಧ ನಾಟಕಂ, ಅಶ್ವತ್ಥಾಮನ್, ಪಾರಸಿಕರು, ಕನ್ನಡ ಛಂದಸ್ಸಿನ ಚರಿತ್ರೆ, ಕನ್ನಡದ ಬಾವುಟ (ಸಂಪಾದಿತ), ಹೊಂಗನಸು (ಬಿಡಿ ಕವನಗಳು) ಪ್ರಕಟಿತ ಗ್ರಂಥಗಳು. ಬರೆದದ್ದು ಕಡಿಮೆ. ಆದರೆ ಎಲ್ಲವೂ ಅಪೂರ್ವ ರತ್ನಗಳು. 1928ರಲ್ಲಿ ಕಲಬುರ್ಗಿ (ಗುಲ್ಬರ್ಗ) ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ಮೈಸೂರು ಮಹಾರಾಜರಿಂದ ರಾಜ ಸೇವಾಸಕ್ತ ಬಿರುದು. ಗ್ರಂಥ ಸಮರ್ಪಣೆ ಪರಂಪರೆಯ ಮೊದಲ ಗ್ರಂಥ ಸಂಭಾವನೆ ಸಮರ್ಪಣೆ.

1883: ಬ್ರಿಟಿಷ್ ಪ್ರಧಾನಿ ಕ್ಲೆಮೆಂಟ್ ಅಟ್ಲೀ (1883-1967) ಹುಟ್ಟಿದ ದಿನ. 1945ರಿಂದ 1951ರ ಅವಧಿಯಲ್ಲಿ ಬ್ರಿಟಿಷ್ ಪ್ರಧಾನಿಯಾಗಿದ್ದ ಇವರು ಭಾರತದ ಸ್ವಾತಂತ್ರ್ಯವನ್ನು ಅನುಮೋದಿಸಿದರು.

1880: `ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ'ದ ಮೊದಲ ಸಂಚಿಕೆ ಬಾಂಬೆಯಲ್ಲಿ (ಈಗಿನ ಮುಂಬೈ) ಪ್ರಕಟಗೊಂಡಿತು. ಟೈಮ್ಸ್ ಆಫ್ ಇಂಡಿಯಾ ಗುಂಪಿನಿಂದ ಸಾಪ್ತಾಹಿಕ ಪುರವಣಿಯಾಗಿ ಅದು `ಟೈಮ್ಸ್ ಆಫ್ ಇಂಡಿಯಾ ಓವರ್ ಲ್ಯಾಂಡ್ ವೀಕ್ಲಿ ಎಡಿಷನ್' ಹೆಸರಿನಲ್ಲಿ ಪ್ರಕಟಗೊಳ್ಳುತ್ತಿತ್ತು. 1929ರಲ್ಲಿ ಅದು `ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ' ಆಯಿತು.

1861: ಇಂಗ್ಲಿಷ್ ಅವಳಿ ಜವಳಿ ಸಹೋದರರಾದ ವಿಲಿಯಂ ರೇನ್ ಶಾ (1861-1904) ಮತ್ತು ಅರ್ನೆಸ್ಟ್ ರೇನ್ ಶಾ (1861-1899) ಹುಟ್ಟಿದ ದಿನ. ಈ ಅವಳಿ ಜವಳಿ ಸಹೋದರರು 1880ರಲ್ಲಿ ಮೊದಲ ಬಾರಿಗೆ ವಿಂಬಲ್ಡನ್ನಿನಲ್ಲಿ ಒಟ್ಟಾಗಿ ಟೆನಿಸ್ ಆಟಕ್ಕೆ ಪ್ರವೇಶ ಪಡೆದರು. ವಿಲಿಯಂ ಅವರು ವಿಂಬಲ್ಡನ್ ಸಿಂಗಲ್ಸ್ ಚಾಂಪಿಯನ್ ಶಿಪ್ ನ್ನು 7 ಬಾರಿ  (1881-86 ಹಾಗೂ 1889ರಲ್ಲಿ) ಪಡೆದುಕೊಂಡರು. ತನ್ನ ಸಹೋದರನನ್ನೇ ಮೂರು ಬಾರಿ ಫೈನಲ್ಸ್ ನಲ್ಲಿ ಪರಾಭವಗೊಳಿಸಿದರು. ಅರ್ನೆಸ್ಟ್ 1888ರಲ್ಲಿ ಚಾಂಪಿಯನ್ ಶಿಪ್ ಗೆದ್ದರು. ಇವರಿಬ್ಬರೂ ಒಟ್ಟಾಗಿ ಬ್ರಿಟಿಷ್ ಡಬಲ್ಸ್ ಚಾಂಪಿಯನ್ ಶಿಪ್ ನ್ನು ಏಳು ಬಾರಿ ಗೆದ್ದುಕೊಂಡರು.

1888ರಲ್ಲಿ ವಿಲಿಯಂ ಬ್ರಿಟಿಷ್ ಲಾನ್ ಟೆನಿಸ್ ಅಸೋಸಿಯೇಶನ್ನಿನ ಮೊತ್ತ ಮೊದಲ ಬ್ರಿಟಿಷ್ ಅಧ್ಯಕ್ಷರಾಗಿ ಆಯ್ಕೆಯಾದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement