Wednesday, February 18, 2009

ಇಂದಿನ ಇತಿಹಾಸ History Today ಫೆಬ್ರುವರಿ 15

ಇಂದಿನ ಇತಿಹಾಸ

ಫೆಬ್ರುವರಿ 15

ಭಾರತದ ಕೃಷಿ ರಂಗದ ಪುನಶ್ಚೇತನಕ್ಕೆ ಬಂಡವಾಳ ಹೂಡಿಕೆ ಹೆಚ್ಚಳ, ದೊಡ್ಡ ಪ್ರಮಾಣದಲ್ಲಿ ಬೆಳೆ ವಿಮೆ  ಸೌಲಭ್ಯ ಒದಗಿಸುವುದು, ನೀರಾವರಿ ಮತ್ತು ವಿದ್ಯುತ್ತಿಗೆ ವಾಸ್ತವತೆಯ ತಳಹದಿ ಮೇಲೆ ಶುಲ್ಕ ನಿಗದಿ ಮತ್ತು ಕೃಷಿ ಕಾರ್ಮಿಕರಿಗೆ ಕೃಷಿಯೇತರ ಚಟುವಟಿಕೆಗಳಲ್ಲಿ ಉದ್ಯೋಗ ಅವಕಾಶ ಒದಗಿಸುವುದು ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಶ್ವಬ್ಯಾಂಕಿನ `ವಿಶ್ವ ಅಭಿವೃದ್ಧಿ ವರದಿ' ಅಭಿಪ್ರಾಯಪಟ್ಟಿತು

2008: ಭಾರತದ ಕೃಷಿ ರಂಗದ ಪುನಶ್ಚೇತನಕ್ಕೆ ಬಂಡವಾಳ ಹೂಡಿಕೆ ಹೆಚ್ಚಳ, ದೊಡ್ಡ ಪ್ರಮಾಣದಲ್ಲಿ ಬೆಳೆ ವಿಮೆ  ಸೌಲಭ್ಯ ಒದಗಿಸುವುದು, ನೀರಾವರಿ ಮತ್ತು ವಿದ್ಯುತ್ತಿಗೆ ವಾಸ್ತವತೆಯ ತಳಹದಿ ಮೇಲೆ ಶುಲ್ಕ ನಿಗದಿ ಮತ್ತು ಕೃಷಿ ಕಾರ್ಮಿಕರಿಗೆ ಕೃಷಿಯೇತರ ಚಟುವಟಿಕೆಗಳಲ್ಲಿ ಉದ್ಯೋಗ ಅವಕಾಶ ಒದಗಿಸುವುದು ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಶ್ವಬ್ಯಾಂಕಿನ `ವಿಶ್ವ ಅಭಿವೃದ್ಧಿ ವರದಿ' ಅಭಿಪ್ರಾಯಪಟ್ಟಿತು. ಭಾರತ ಸೇರಿದಂತೆ ಏಷ್ಯಾದ 60 ಕೋಟಿಯಷ್ಟು ಬಡ ಜನರ ಕಲ್ಯಾಣಕ್ಕೆ ಕೃಷಿ ರಂಗದಲ್ಲಿ ಹೂಡುವ ಬಂಡವಾಳವನ್ನು ಗಮನಾರ್ಹವಾಗಿ  ಹೆಚ್ಚಿಸಬೇಕು. ಭಾರತದಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಂಪನ್ಮೂಲದ ಅಪವ್ಯಯ ಆಗುತ್ತಿದೆ ಎಂದೂ ವರದಿ ಹೇಳಿತು.

2008: ಮೊಗಲ್ ಚಕ್ರವರ್ತಿ ಅಕ್ಬರನ ಪ್ರೇಮ ಕಥೆಯನ್ನು ಆಧರಿಸಿ ಅಶುತೋಶ್ ಗೌರಿಕರ್ ಅವರು ನಿರ್ಮಿಸಿರುವ ಜೋಧಾ ಅಕ್ಬರ್ ಚಿತ್ರವು ಜಗತ್ತಿನ 26 ರಾಷ್ಟ್ರಗಳಲ್ಲಿ ಸುಮಾರು 1500 ಚಿತ್ರಮಂದಿರಗಳಲ್ಲಿ ತೆರೆ ಕಂಡಿತು. ಇದುವರೆಗೆ ಭಾರತದ ಚಿತ್ರರಂಗದ ಇತಿಹಾಸದಲ್ಲಿ ಏಕಕಾಲಕ್ಕೆ 26 ರಾಷ್ಟ್ರಗಳಲ್ಲಿ 1500 ಚಿತ್ರಮಂದಿರಗಳಲ್ಲಿ ಪ್ರದರ್ಶನ ಆರಂಭವಾದ ದಾಖಲೆಗಳು ಇರಲಿಲ್ಲ. ಭಾರತದಲ್ಲಿ 1200 ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುವುದು ಸಹ ಸಾರ್ವಕಾಲಿಕ ದಾಖಲೆಯೇ. ಈ ಚಿತ್ರವನ್ನು  ತೆಲಗು ಮತ್ತು ತಮಿಳಿನಲ್ಲಿ ಡಬ್ ಮಾಡಲಾಗಿದ್ದು ಇದನ್ನು ನಂತರ ಬಿಡುಗಡೆ ಮಾಡಲಾಗುತ್ತದೆ. ಇಂಗ್ಲಿಷ್, ಅರೆಬಿಕ್ ಮತ್ತು ಡಚ್ ಭಾಷೆಯ ಉಪಶೀರ್ಷಿಕೆಯನ್ನು ನೀಡಲಾಗಿದೆ.

2008: ರಜಪೂತ ಗುಂಪುಗಳ ಪ್ರತಿಭಟನೆಯ ಪರಿಣಾಮವಾಗಿ  ಅಶುತೋಷ್ ಗೌರೀಕರ್ ನಿರ್ದೇಶನದ `ಜೋಧಾ ಅಕ್ಬರ್' ಚಿತ್ರವು ರಾಜಸ್ಥಾನದ ಚಿತ್ರಮಂದಿರಗಳ್ಲಲಿ ಬಿಡುಗಡೆಯಾಗಲಿಲ್ಲ. `ಮೊಘಲ್ ಚಕ್ರವರ್ತಿ ಅಕ್ಬರ್ ಆಧಾರಿತ ಚಿತ್ರದಲ್ಲಿ ಚಾರಿತ್ರಿಕ ವಾಸ್ತವಾಂಶಗಳನ್ನು  ತಿರುಚಲಾಗಿದೆ' ಎಂದು ರಜಪೂತ ಸಂಘಟನೆಗಳು ಚಿತ್ರ ಮಂದಿರಗಳ ಮುಂದೆ ಪ್ರತಿಭಟಿಸಿದವು. ಹೀಗಾಗಿ ಜೈಪುರ ನಗರದ 9 ಚಿತ್ರಮಂದಿರಗಳು ಸೇರಿದಂತೆ ರಾಜಸ್ಥಾನದಾದ್ಯಂತ 30 ಚಿತ್ರಮಂದಿರಗಳಲ್ಲಿ ಚಲನಚಿತ್ರ ಬಿಡುಗಡೆ ಆಗಲಿಲ್ಲ.

2008: ಕೆನಡಾದಲ್ಲಿ ಜನರು ಮಾತನಾಡುವ ನಾಲ್ಕನೇ ದೊಡ್ಡ ಭಾಷೆ ಪಂಜಾಬಿ ಎಂಬುದು ಗೊತ್ತೇ? ಅಧಿಕೃತ ಅಂಕಿಅಂಶವೊಂದು ಇದನ್ನು ದೃಢಪಡಿಸಿತು. ಈ ಅಂಕಿ ಅಂಶದ ಪ್ರಕಾರ ಇಂಗ್ಲಿಷ್ ಮತ್ತು ಫ್ರೆಂಚ್  ಕೆನಡಾ ದೇಶದ ಅಧಿಕೃತ ಭಾಷೆಗಳಾಗಿದ್ದು, ಮೂರನೇ ದೊಡ್ಡ ಭಾಷೆಯಾದ ಚೀನೀ ಭಾಷೆಯನ್ನು ಶೇ 2.6 ಮಂದಿ ಹಾಗೂ ಪಂಜಾಬಿಯನ್ನು ಶೇ 0.8 ಮಂದಿ ಮಾತನಾಡುತ್ತಾರೆ. 

2008: ನ್ಯೂಯಾರ್ಕಿನ ಉತ್ತರ ಇಲಿನಾಯ್ಸ್ ವಿಶ್ವವಿದ್ಯಾಲಯದ ಆವರಣದಲ್ಲಿ ಮಾಜಿ ವಿದ್ಯಾರ್ಥಿಯೊಬ್ಬ ಆರು ವಿದ್ಯಾರ್ಥಿಗಳನ್ನು ಗುಂಡಿಟ್ಟು ಕೊಂದು, ಬಳಿಕ ಸ್ವತಃ ತನಗೇ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ  ನಡೆಯಿತು.

2008: ರಾಜ್ಯದ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಪ್ರಾಣಿಬಲಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತತ್ ಕ್ಷಣ ಸುತ್ತೋಲೆ ಕಳುಹಿಸಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತು. ಅಖಿಲ ಕರ್ನಾಟಕ ಪ್ರಾಣಿ ದಯಾ ಸಂಘದ ಕಾರ್ಯದರ್ಶಿ ಪಿ.ಉತ್ತಮಚಂದ್ ದುಗ್ಗಡ್ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಮತ್ತು ನ್ಯಾಯಮೂರ್ತಿ ಬಿ. ಎಸ್. ಪಾಟೀಲ್ ಅವರನ್ನು ಒಳಗೊಂಡ ಪೀಠ ಈ ಆದೇಶ ನೀಡಿತು.

2008: ಬೆಲ್ಜಿಯಂ ಸರ್ಕಾರದಿಂದ ಪುರಸ್ಕಾರ ಸ್ವೀಕರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷೆ ಹಾಗೂ ಸಂಸದೆ ಸೋನಿಯಾ ಗಾಂಧಿ ಅವರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿತು.

2007: ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಇಟ್ಟ ರೈಲ್ವೆ ಇಲಾಖೆ ರೈಲ್ವೆ ಟಿಕೆಟುಗಳ ಮಾರಾಟಕ್ಕಾಗಿ ಐಸಿಐಸಿಐ ಬ್ಯಾಂಕಿನೊಂದಿಗೆ ಒಪ್ಪಂದ ಮಾಡಿಕೊಂಡಿತು. ಇದರಿಂದಾಗಿ ದೇಶದ 125 ನಗರಗಳ ಪ್ರಮುಖ ವಾಣಿಜ್ಯ ಕೇಂದ್ರಗಳು ಮತ್ತು ಶಾಪಿಂಗ್ ಮಾಲುಗಳಲ್ಲಿ ಇನ್ನು ಮುಂದೆ ರೈಲ್ವೆ ಟಿಕೆಟುಗಳು ದೊರೆಯಲು ಅವಕಾಶ ಲಭಿಸುವುದು. ಭಾರತೀಯ ರೈಲ್ವೆ ಪ್ರವಾಸೋದ್ಯಮ ನಿಗಮದ ಹಿರಿಯ ಅಧಿಕಾರಿ ರಜನಿ ಹಸಿಜಾ ಮತ್ತು ಐಸಿಐಸಿಐ ಬ್ಯಾಂಕಿನ ಸಚಿನ್ ಖಂಡೇಲ್ ವಾಲ ತಿಳುವಳಿಕೆ ಒಪ್ಪಂದಕ್ಕೆ ಸಹಿ ಮಾಡಿದರು. ರೈಲ್ವೆ ಸಚಿವ ಲಾಲು ಪ್ರಸಾದ್ ಮತ್ತು ಖಾತೆಯ ರಾಜ್ಯ ಸಚಿವರಾದ ಎನ್. ಜೆ. ರಾತಾವ್, ಆರ್. ವೇಲು ಮತ್ತು ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

2007: ಕಾವೇರಿ ನ್ಯಾಯಮಂಡಳಿಯ ತೀರ್ಪನ್ನು ವಿರೋಧಿಸಿ ಕೇಂದ್ರ ಸರ್ಕಾರದ ಮೇಲೆ ಸಾಮೂಹಿಕವಾಗಿ ಒತ್ತಡ ತರುವುದರ ಜೊತೆಗೆ ಕಾನೂನು ಹೋರಾಟವನ್ನೂ ಮುಂದುವರೆಸಲು ಬೆಂಗಳೂರಿನಲ್ಲಿ ಸೇರಿದ ಕರ್ನಾಟಕದ ಸಂಸದರು ಹಾಗೂ ಕಾವೇರಿ ಕೊಳ್ಳದ ಶಾಸಕರ ಸಭೆ ಒಕ್ಕೊರಲಿನ ತೀರ್ಮಾನ ಕೈಗೊಂಡಿತು.

2007: ಭಾರತೀಯ ವಿದ್ಯಾಭವನವು ಗುರು ಗಂಗೇಶ್ವರಾನಂದ ವೇದರತ್ನ ಪುರಸ್ಕಾರಕ್ಕಾಗಿ ಋಗ್ವೇದ ವಿದ್ವಾಂಸ ಡಾ. ಎನ್. ಎಸ್. ಅನಂತ ರಂಗಾಚಾರ್ಯ (ಕರ್ನಾಟಕ), ಕೃಷ್ಣ ಯಜುರ್ವೇದ ವಿದ್ವಾಂಸ ಪಿ.ಎಸ್. ಅನಂತನಾರಾಯಣ ಸೋಮಯಾಜಿ (ತಮಿಳುನಾಡು), ಸಾಮವೇದ ವಿದ್ವಾಂಸ ಶಿವರಾಮ ತ್ರಿಪಾಠಿ, ಅಥರ್ವಣ ವೇದ ವಿದ್ವಾಂಸ ಕೆ.ವಿ. ಬಾಲಸುಬ್ರಹ್ಮಣ್ಯನ್ (ಆಂಧ್ರ ಪ್ರದೇಶ), ವೇದ ಮತ್ತು ಸಂಸ್ಕೃತಿ ವಿದ್ವಾಂಸರಾದ ಡಾ. ಕಪಿಲದೇವ ತ್ರಿವೇದಿ (ಉತ್ತರ ಪ್ರದೇಶ) ಹಾಗೂ ಡಾ. ದಾಮೋದರ ಝಾ (ಪಂಜಾಬ್) ಅವರನ್ನು ಆಯ್ಕೆ ಮಾಡಿತು.

2007: ಕೊಯಮತ್ತೂರು ಪಶುವೈದ್ಯಕೀಯ ವಿಶ್ವವಿದ್ಯಾಲಯದ ಮೂವರು ವಿದ್ಯಾರ್ಥಿಗಳು ಬಸ್ ಬೆಂಕಿ ದುರಂತದಲ್ಲಿ ಮೃತರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ ಏಳು ವರ್ಷಗಳ ನಂತರ ಸೇಲಂನ ಸೆಷನ್ಸ್ ನ್ಯಾಯಾಲಯವು ತಪ್ಪಿತಸ್ಥರಾದ ಮೂವರು ಏಐಎಡಿಎಂಕೆ ಸದಸ್ಯರಿಗೆ ಶಿಕ್ಷೆ ವಿಧಿಸಿ, 25 ಮಂದಿಗೆ ದಂಡ ವಿಧಿಸಿತು. ಮೂವರನ್ನು ಖುಲಾಸೆ ಮಾಡಿತು. 2000ದ ಫೆ.2ರಂದು ಪ್ರೆಸೆಂಟ್ ಸ್ಟೇ ಹೋಟೆಲ್ ಹಗರಣಕ್ಕೆ ಸಂಬಂಧಿಸಿದಂತೆ ಚೆನ್ನೈನ ವಿಶೇಷ ನ್ಯಾಯಾಲಯವು ತಮಿಳುನಾಡಿನ ಆಗಿನ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಒಂದು ವರ್ಷದ ಕಠಿಣ ಶಿಕ್ಷೆ ವಿಧಿಸಿದ್ದರ ವಿರುದ್ಧ ಪ್ರತಿಭಟನೆ ನಡೆದಾಗ ಈ ಘಟನೆ ಸಂಭವಿಸಿತ್ತು. ಧರ್ಮಪುರಿ ಬಳಿ ಕೊಯಮತ್ತೂರು ವಿವಿಯ 40 ವಿದ್ಯಾರ್ಥಿನಿಯರು ಪ್ರಯಾಣ ಮಾಡುತ್ತಿದ್ದ ಬಸ್ಸಿಗೆ ಏಐಎಡಿಎಂಕೆ ಕಾರ್ಯಕರ್ತರು ಬೆಂಕಿ ಹಚ್ಚಿದರು. ದುರಂತದಲ್ಲಿ ಕೋಕಿಲವಾಣಿ, ಗಾಯತ್ರಿ ಮತ್ತು ಹೇಮಲತ ಎಂಬ ವಿದ್ಯಾರ್ಥಿನಿಯರು ಅಸು ನೀಗಿದ್ದರು.

2006: ಹೂಸನ್ನಿನಲ್ಲಿ ಅನಿವಾಸಿ ಭಾರತೀಯ ಅರುಳ್ ಮಣಿ ಪೆರಿಸ್ವಾಮಿ ಅವರಿಗೆ ಅಮೆರಿಕದ ಭಾರತೀಯ ರಾಯಭಾರ ಕಚೇರಿಯ ಕೌನ್ಸುಲೇಟ್ ಜನರಲ್ ಎಸ್. ಎಂ. ಗವಾಯಿ ಅವರು ಅಮೆರಿಕದಲ್ಲೇ ಪ್ರಥಮ ಸಾಗರೋತ್ತರ ಭಾರತೀಯ ಪೌರ ಕಾರ್ಡ್ನೀಡಿದರು. ಇವರ ಜೊತೆಯಲ್ಲೇ 37 ಅಮೆರಿಕದ ಭಾರತೀಯರಿಗೂ ಈ ಕಾರ್ಡ್ನೀಡಲಾಯಿತು.

2006: ತೈವಾನಿನ ಮಾಜಿ ಪ್ರಧಾನಿ, 1980ರ ದ್ವೀಪದ ಆರ್ಥಿಕ ವಿಸ್ತರಣಾ ಕಾರ್ಯಕ್ರಮ ರೂವಾರಿ ಸನ್ ಯುನ್- ಸುವಾನ್ (92) ಅವರು ಹೃದಯಾಘಾತದಿಂದ  ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. 1978ರಿಂದ 1984ರ ನಡುವಣ ಅವಧಿಯಲ್ಲಿ ಅವರು ತೈವಾನಿನ ಪ್ರಧಾನಿಯಾಗಿದ್ದರು. ಅದಕ್ಕೆ ಮೊದಲು 9 ವರ್ಷಗಳ ಕಾಲ ಆರ್ಥಿಕ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು. 20 ವರ್ಷಗಳ ಹಿಂದೆ ಅವರು ಪಾರ್ಶ್ವವಾಯುವಿಗೆ ತುತಾಗಿದ್ದರು. ಇದರೊಂದಿಗೆ ಅವರ ರಾಜಕೀಯ ಜೀವನಕ್ಕೆ ತೆರೆ ಬಿದ್ದಿತ್ತು.

2006: ಒಡಲಲ್ಲಿ ಹತ್ತಾರು ವಿಷಯುಕ್ತ ರಾಸಾಯನಿಕಗಳನ್ನು ತುಂಬಿಕೊಂಡು ಒಡೆಯುವ ಸಲುವಾಗಿ ಭಾರತಕ್ಕೆ ಹೊರಟಿದ್ದ `ಕ್ಲೆಮೆನ್ಸು' ವಿಮಾನ ವಾಹಕ ಫ್ರೆಂಚ್ ಸಮರ ನೌಕೆಗೆ ಮತ್ತೆ ಫ್ರಾನ್ಸಿಗೆ ಮರಳುವಂತೆ ಫ್ರೆಂಚ್ ಅಧ್ಯಕ್ಷ ಜಾಕಿಸ್ ಚಿರಾಕ್ ಆಜ್ಞಾಪಿಸಿದರು. ಫ್ರಾನ್ಸಿನ ಉನ್ನತ ಆಡಳಿತಾತ್ಮಕ ನ್ಯಾಯಾಲಯವು ಕ್ಲೆಮೆನ್ಸು ನೌಕೆಯನ್ನು ಭಾರತದ ಗುಜರಾತಿಗೆ ಕಳುಹಿಸುವುದನ್ನು ತಡೆಯಲು ಆದೇಶ ನೀಡಿದ ಹಿನ್ನೆಲೆಯಲ್ಲಿ ಅಧ್ಯಕ್ಷರು ಈ ಕ್ರಮ ಕೈಗೊಂಡರು. ಫಾನ್ಸಿನಿಂದ ಡಿಸೆಂಬರ್ 31ರಂದು ಕ್ಲೆಮೆನ್ಸು ಸಮರ ನೌಕೆಯು ಭಾರತದತ್ತ ಹೊರಟಿತ್ತು. ಈ ಹಡಗನ್ನು ಒಡೆಯುವುದರಿಂದ ಭಾರತದಲ್ಲಿ ಪರಿಸರ ಹಾಗೂ ಆರೋಗ್ಯಕ್ಕೆ ಅಪಾರ ಹಾನಿಯಾಗುವುದು ಎಂದು ಗ್ರೀನ್ ಪೀಸ್ ಮತ್ತು ಮೂರು ಕಲ್ನಾರು ವಿರೋಧಿ ಗುಂಪುಗಳು ದೂರಿದ್ದವು.

1978: ಲಾಸ್ ವೇಗಾಸಿನಲ್ಲಿ ನಡೆದ ಪಂದ್ಯದಲ್ಲಿ ಮಹಮ್ಮದ್ ಅಲಿ ಎದುರಾಳಿ ಲಿಯೋನ್ ಸ್ಫಿಂಕ್ಸ್ ಎದುರು ಸೋತು ತನ್ನ ಜಾಗತಿಕ ಬಾಕ್ಸಿಂಗ್ ಪ್ರಶಸ್ತಿಯನ್ನು ಕಳೆದುಕೊಂಡರು.

1955: ರಾಷ್ಟ್ರದ ಕೆಲವು ಅತ್ಯಂತ ಸುರಕ್ಷಿತ ಕಂಪ್ಯೂಟರುಗಳಲ್ಲಿನ ಭದ್ರತಾ ವ್ಯವಸ್ಥೆಯನ್ನು ಹಾಳುಗೆಡವಿದ ಆರೋಪದಲ್ಲಿ  ಕೆವಿನ್ ಮಿಟ್ನಿಕ್ ನನ್ನು ಎಫ್ ಬಿ ಐ ಬಂಧಿಸಿತು. ಐದು ವರ್ಷಗಳ ಸೆರೆವಾಸದ ಬಳಿಕ 2001ರ ಜನವರಿಯಲ್ಲಿ ಆತನನ್ನು ಬಿಡುಗಡೆ ಮಾಡಲಾಯಿತು.

1942: ಎರಡನೇ ಜಾಗತಿಕ ಸಮರಕಾಲದಲ್ಲಿ ಜಪಾನೀ ಪಡೆಗಳಿಗೆ ಸಿಂಗಪುರವು ಶರಣಾಯಿತು.

1922: ಹೇಗ್ ನಲ್ಲಿ ಖಾಯಂ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊದಲ ಸಮಾವೇಶ ನಡೆಯಿತು. 

1903: ನ್ಯೂಯಾರ್ಕಿನ ಬ್ರೂಕ್ಲಿನ್ನಿನ ಆಟಿಕೆಗಳ ಅಂಗಡಿಯೊಂದರ ಮಾಲೀಕರೂ, ರಷ್ಯದ ವಲಸೆಗಾರರೂ ಆಗಿದ್ದ ಮೋರ್ರಿಸ್ ಮತ್ತು ರೋಸ್ ಮಿಚ್ ಟೊಮ್  ನ್ಯೂಯಾರ್ಕಿನಲ್ಲಿ ಮೊತ್ತ ಮೊದಲ ಬಾರಿಗೆ `ಟೆಡ್ಡಿ ಬೇರ್'ನ್ನು ಮಾರುಕಟ್ಟೆಗೆ ತಂದರು. ಅಧ್ಯಕ್ಷ ಥಿಯೋಡೋರ್ ರೂಸ್ ವೆಲ್ಟ್ ಹೆಸರಿನ ಜೊತೆಗೆ ಅವರು ಇದನ್ನು ತಳಕು ಹಾಕಿದರು. (ರೂಸ್ ವೆಲ್ಟ್ ಅವರಿಗೆ `ಟೆಡ್ಡಿ' ಎಂಬ ಅಡ್ಡ ಹೆಸರು ಇತ್ತು. 1902ರಲ್ಲಿ ಬೇಟೆಯಾಡುತ್ತಿದ್ದಾಗ ಅನಾಥವಾದ ಕರಡಿಮರಿಯೊಂದರ ಪ್ರಾಣ ರಕ್ಷಿಸಲು ನಿರ್ಧರಿಸಿದ್ದರಿಂದ ಈ ಅಡ್ಡ ಹೆಸರು ಅವರಿಗೆ ಬಂತು. ಇದು ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ಕಾರ್ಟೋನಿಗೆ ವಸ್ತುವಾಯಿತು. ಇದರಿಂದ ಸ್ಫೂರ್ತಿ ಪಡೆದ ಮಿಚ್ ಟೊಮ್ ಅಂಗಡಿಯ ಕಿಟಕಿಯಲ್ಲಿಪ್ರದರ್ಶನಕ್ಕೆ ಇಟ್ಟ ತಮ್ಮ ಆಟಿಕೆಗೆ `ಟೆಡ್ಡಿ ಬೇರ್' ಎಂದು ಹೆಸರು ಇಟ್ಟರು. ಈ `ಕರಡಿಮರಿ'ಯ ಜನಪ್ರಿಯತೆ ಈಗ ನಿಮಗೆಲ್ಲ ಗೊತ್ತು!

1869: ಪರ್ಷಿಯಾ ಹಾಗೂ ಉರ್ದು ಭಾಷೆಗಳಲ್ಲಿ ಸಮಾನವಾಗಿ ಪ್ರಭುತ್ವ ಹೊಂದಿದ್ದ ಭಾರತದ ಖ್ಯಾತ ಕವಿ, ಸಾಹಿತಿ ಮಿರ್ಜಾ ಅಸದುಲ್ಲಾ ಖಾನ್ ಘಾಲಿಬ್ (1797-1869) ದೆಹಲಿಯಲ್ಲಿ ತಮ್ಮ 71ನೇ ವಯಸ್ಸಿನಲ್ಲಿ ನಿಧನರಾದರು.

1858: ವಿಲಿಯಂ ಹೆನ್ರಿ ಪಿಕರಿಂಗ್ (1858-1938) ಹುಟ್ಟಿದ ದಿನ. ಅಮೆರಿಕನ್ ಖಗೋಳ ತಜ್ಞನಾದ ಈತ 1919ರಲ್ಲಿ ಶನಿಗ್ರಹದ ಒಂಭತ್ತನೇ ಉಪಗ್ರಹ `ಫೋಬೆ'ಯನ್ನು ಕಂಡು ಹಿಡಿದ.

1564: ಇಟಲಿಯ ಖಗೋಳ ಭೌತ ತಜ್ಞ ಗೆಲಿಲಿಯೋ ಗೆಲೀಲಿ (1564-1642) ಹುಟ್ಟಿದ ದಿನ. 

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement