My Blog List

Tuesday, February 24, 2009

ಇಂದಿನ ಇತಿಹಾಸ History Today ಫೆಬ್ರುವರಿ 18


ಇಂದಿನ ಇತಿಹಾಸ

ಫೆಬ್ರುವರಿ 18

ಭಾರತೀಯ ಸಂತ ರಾಮಕೃಷ್ಣ ಪರಮಹಂಸ (1836-1886) ಹುಟ್ಟಿದರು. ಇವರ ಶಿಷ್ಯ ಸಾಮಿ ವಿವೇಕಾನಂದರು ರಾಮಕೃಷ್ಣ ಮಿಷನ್ ಸ್ಥಾಪಿಸಿ ಪರಮಹಂಸರ ತತ್ವ ಪ್ರಸಾರ ಮಾಡಿದರು. 

2008: ಮಾತೃಭಾಷೆ ಬೋಧನೆಗೆ  ಸಂಬಂಧಿಸಿದಂತೆ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯವನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್, ತಮಿಳುನಾಡಿನ ಶಾಲೆಗಳಲ್ಲಿ ತಮಿಳು ಭಾಷೆ  ಕಡ್ಡಾಯಗೊಳಿಸುವುದರಿಂದ ಏನೂ ತೊಂದರೆಯಾಗದು ಎಂದು ಹೇಳಿತು. ಶಾಲೆಗಳಲ್ಲಿ ಸ್ಥಳೀಯ ಭಾಷೆ ಕಡ್ಡಾಯಗೊಳಿಸಬಾರದು ಎಂದು ಕೆಲವರು ವಿರೋಧ ವ್ಯಕ್ತಪಡಿಸುತ್ತ ಬಂದಿದ್ದು, ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟಿನ ಆದೇಶ ಹೆಚ್ಚು ಮಹತ್ವ ಪಡೆಯಿತು. 2006 ರ ತಮಿಳುನಾಡಿನ ತಮಿಳು ಕಲಿಕಾ ಕಾನೂನಿನ ಸಿಂಧುತ್ವವನ್ನು ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್ ತೀರ್ಪಿನಲ್ಲಿ ಮಧ್ಯ  ಪ್ರವೇಶಿಸಲು ನಿರಾಕರಿಸಿದ  ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಹಾಗೂ ಜೆ.ಎಂ. ಪಂಚಾಲ್ ಅವರ ಪೀಠ, ರಾಜ್ಯ ನೀತಿ ನಿರ್ಣಯಗಳಲ್ಲಿ ನಾವು ಮಧ್ಯಪ್ರವೇಶಿಸಲಾಗದು' ಎಂದು ಹೇಳಿತು. ತಮಿಳುನಾಡಿನಲ್ಲಿ ತಮಿಳು ಕಡ್ಡಾಯಗೊಳಿಸುವ ನಿರ್ಧಾರವನ್ನು ಪ್ರಶ್ನಿಸಿ ಕನ್ಯಾಕುಮಾರಿ ಜಿಲ್ಲೆಯ `ಮಲಯಾಳ ಸಮಾಜ' ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನೂ ಕೋರ್ಟ್ ಇದೇ ವೇಳೆ ವಜಾ ಮಾಡಿತು. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಮಾತೃಭಾಷೆ ಕಡ್ಡಾಯಗೊಳಿಸಿರುವುದನ್ನು ಕೋರ್ಟ್ ಈ ಸಂದರ್ಭದಲ್ಲಿ ಉಲ್ಲೇಖಿಸಿತು. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ತಮ್ಮ ಮಾತೃಭಾಷೆಯಲ್ಲಿಯೇ ಕಲಿಸುವ ಹಕ್ಕಿಗೆ ಈ ಕಾಯ್ದೆ ತೊಡಕಾಗುವುದಿಲ್ಲ ಎಂದು ಈ ಸಂದರ್ಭದಲ್ಲಿ ಕೋರ್ಟ್ ಸ್ಪಷ್ಟಪಡಿಸಿತು.

2008: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ಮತ್ತು ಮುಖ್ಯ ಚುನಾವಣಾಧಿಕಾರಿ ಆರ್. ರಾಮಶೇಷನ್ ಅವರು ಸ್ವಯಂ ನಿವೃತ್ತಿ ಪಡೆಯಲು ನಿರ್ಧರಿಸಿದರು. ಅದಕ್ಕೆ ರಾಜ್ಯ ಸರ್ಕಾರ ಅನುಮತಿಯನ್ನೂ ನೀಡಿತು.

2008: ತೀವ್ರ ಕುತೂಹಲ ಕೆರಳಿಸಿದ್ದ ಪಾಕಿಸ್ಥಾನದ ಸಾರ್ವತ್ರಿಕ ಚುನಾವಣೆ ಮುಗಿಯಿತು. ಹತ್ಯೆಗೆ ಒಳಗಾದ ಬೆನಜೀರ್ ಭುಟ್ಟೋ ಅವರ ಪಾಕಿಸ್ಥಾನ ಪೀಪಲ್ಸ್ ಪಾರ್ಟಿ ಮೇಲುಗೈ ಸಾಧಿಸಿತು. ಚುನಾವಣೆ ಕಾಲದಲ್ಲಿ  ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾ ಮಾರಿ ಘಟನೆಗಳು ನಡೆದವು. ವಿವಿಧ ಪ್ರದೇಶಗಳಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ 8 ಜನರು ಸಾವನ್ನಪ್ಪಿದರು.

2008: ವಿವಾಹ ನೋಂದಣಿಗೆ ವಾಸಸ್ಥಳ ಪ್ರಮಾಣ ಪತ್ರದಲ್ಲಿ ನಕಲಿ ವಿಳಾಸ ನೀಡಿರುವುದಕ್ಕೆ ನಟ ಸಂಜಯ್ ದತ್ ಅವರ ಪತ್ನಿ ಮಾನ್ಯತಾಗೆ ದಕ್ಷಿಣ ಗೋವಾ ಜಿಲ್ಲಾಧಿಕಾರಿ ಕಚೇರಿ ಷೋಕಾಸ್ ನೋಟಿಸ್ ನೀಡಿತು. ವಾಸಸ್ಥಳ ಪ್ರಮಾಣಪತ್ರ ರದ್ದುಗೊಳಿಸುವ ಸಂಬಂಧ ಮಾನ್ಯತಾ ಅವರ ಮಾರ್ಗೋವಾ ವಿಳಾಸಕ್ಕೆ ನೋಟಿಸ್ ಕಳಿಸಲಾಗಿದೆ ಎಂದು ಕಂದಾಯ ಅಧಿಕಾರಿ ಪರೇಶ್ ಎಂ. ಫಲ್ ದೇಸಾಯಿ ತಿಳಿಸಿದರು. ಫೆಬ್ರುವರಿ 7 ರಂದು ಪಣಜಿಯ ಪಂಚತಾರಾ ಹೋಟೆಲಿನಲ್ಲಿ ಸಂಜಯ್ ಹಾಗೂ ಮಾನ್ಯತಾ ವಿವಾಹವಾಗಿದ್ದರು. 

2008: ನಾಲ್ಕು ಕಿಡ್ನಿಗಳನ್ನು ಹೊಂದಿದ 18ರ ಹರೆಯದ ಅದೃಷ್ಟವಂತೆ ಲಂಡನ್ನಿನ ಲೌರಾ ಮೂನ್ ಎನ್ನುವ ಯುವತಿ ಕಿಡ್ನಿ ದಾನ ಮಾಡಲು ಮುಂದಾದಳು. ತನ್ನ ದೇಹದಲ್ಲಿ ಇರುವ ಹೆಚ್ಚಿನ ಎರಡು ಕಿಡ್ನಿಗಳನ್ನು ದಾನ ಮಾಡುವುದು ಈ ಯುವತಿಯ ಬಯಕೆ. `ಮತ್ತೊಬ್ಬರಿಗೆ ಈ ಮೂಲಕ ನೆರವಾಗುತ್ತೇನೆ ಎನ್ನುವುದು ನನ್ನ ಆಶಯ. ನಾನಿನ್ನೂ ಹರೆಯದ ಹುಡುಗಿ. ಕಿಡ್ನಿ ದಾನಿಯಾಗುವುದು ನನ್ನ ಶಕ್ತಿ ಸಾಮರ್ಥ್ಯದ ನೆಲೆಯಲ್ಲೇ' ಎಂದು ಈ ಯುವತಿ ಎದೆತಟ್ಟಿ ಹೇಳಿದಳು. ಸಾಮಾನ್ಯವಾಗಿ ಪ್ರತಿ 125 ಜನರಲ್ಲಿ ಒಬ್ಬರಿಗೆ ಹೆಚ್ಚಿನ ಒಂದು ಕಿಡ್ನಿ ಇರುತ್ತದೆ. ಆದರೆ ಈ ಯುವತಿಗೆ ಎರಡೂ ಬದಿಯ ಕಿಡ್ನಿಗೆ ತದ್ರೂಪಿ ಕಿಡ್ನಿ ಬೆಳೆದದ್ದು ವಿಶೇಷ ಎನ್ನುತ್ತಾರೆ ಹೆಸರಾಂತ ಕಿಡ್ನಿ ಸರ್ಜನ್ ನಿಯಾಜ್ ಅಹ್ಮದ್. ಈ ಎರಡೂ ಹೆಚ್ಚಿನ ಕಿಡ್ನಿಗಳನ್ನು ದಾನ ಮಾಡಲು ಮುಂದಾಗಿರುವ ಈ ಯುವತಿಯ ನಿರ್ಧಾರಕ್ಕೆ ಕಿಡ್ನಿ ಸರ್ಜನ್ನರು ತಮ್ಮ ಸಮ್ಮತಿ ಸೂಚಿಸಿದರು.

2008: ತಮಿಳಿನ  ರಿಮೇಕ್,  ಅಮೀರ್ ಖಾನ್ ಅಭಿನಯದ ಹಿಂದಿಯ 
 `ಘಜನಿ' ಚಿತ್ರದ ವಿತರಣೆ ಹಕ್ಕನ್ನು  90 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿರುವುದಾಗಿ ವರದಿಯಾಯಿತು. ಕಳೆದ ವರ್ಷ ಶಾರೂಖ್ ಖಾನ್ ಅಭಿನಯದ  `ಓಂ ಶಾಂತಿ ಓಂ' ಚಿತ್ರದ ವಿತರಣೆ ಹಕ್ಕು ಮಾರಾಟದಿಂದ 73 ಕೋಟಿ ರೂಪಾಯಿ ಸಂಗ್ರಹವಾಗಿತ್ತು

2008: ಲಂಡನ್ನಿನಲ್ಲಿ ಇತ್ತೀಚೆಗೆ `ದಯಾಮರಣ'ಕ್ಕೆ ಒಳಗಾದ ಹಸು `ಗಂಗೋತ್ರಿ'ಯ ಚಿತಾಭಸ್ಮವನ್ನು, ಕೆಲವು ಪುರೋಹಿತರ ವಿರೋಧದ ಮಧ್ಯೆ ಹರಿದ್ವಾರದ ಗಂಗೆಯಲ್ಲಿ ತೇಲಿ ಬಿಡಲಾಯಿತು. ಹರ್-ಕಿ-ಪೌರಿ ಹತ್ತಿರ ಚಿತಾಭಸ್ಮವನ್ನು ಗಂಗಾ ನದಿಗೆ ಬಿಡಲಾಯಿತು ಎಂದು ಶ್ರೀಗಂಗಾ ಸಭಾ ಅಧ್ಯಕ್ಷ ರಾಮಕುಮಾರ್ ಮಿಶ್ರ ಹೇಳಿದರು. ಹಿಂದೂ ಧರ್ಮದ ಪ್ರಕಾರ ಈ ಹಸುವಿನ ಚಿತಾಭಸ್ಮವನ್ನು ಗಂಗೆಗೆ ಬಿಡುವುದು ಸರಿಯಲ್ಲ ಎಂದು ಕೆಲವು ಪುರೋಹಿತರು ವಿರೋಧ ಮಾಡಿದ್ದರು. ಆದರೆ, ಕೆಲವು ಹಿರಿಯ ಪುರೋಹಿತರು ಮಧ್ಯಪ್ರವೇಶ ಮಾಡಿ ಮಾತುಕತೆ ನಡೆಸಿದ ಮೇಲೆ ಚಿತಾಭಸ್ಮವನ್ನು ಗಂಗೆಗೆ ಬಿಡಲು ಅವಕಾಶ ಕೊಡಲಾಯಿತು ಎಂದು ಮಿಶ್ರ ತಿಳಿಸಿದರು.

2008: ಕರ್ನಾಟಕ ರಾಜ್ಯ ವೀರಶೈವ ಪಂಚಮಸಾಲಿ ಸಂಘ ಹರಿಹರದಲ್ಲಿ ಆಯೋಜಿಸಿದ್ದ ಅದ್ಧೂರಿ ಸಮಾರಂಭದಲ್ಲಿ ಪಂಚಮಸಾಲಿ ಜಗದ್ಗುರುಗಳ ಪೀಠಾರೋಹಣ ಮಹೋತ್ಸವ ನಡೆಯಿತು. ಹರಹರ ಮಹಾದೇವ, ಜಗದ್ಗುರುಗಳಿಗೆ ಜಯವಾಗಲಿ ಎಂಬ ಘೋಷಣೆಗಳ ನಡುವೆ ಸ್ಥಿರ ಪೀಠಾಧಿಪತಿ ಡಾ. ಮಹಾಂತ ಸ್ವಾಮೀಜಿ ಮತ್ತು ಚರ ಪೀಠಾಧಿಪತಿ ಸಿದ್ದಲಿಂಗೇಶ್ವರ ಸ್ವಾಮೀಜಿಗಳಿಗೆ ರುದ್ರಾಕ್ಷಿ ಕಿರೀಟ ಧಾರಣೆ ಮಾಡುವ ಮೂಲಕ ಪೀಠಾರೋಹಣ ನೆರವೇರಿತು.

2007: ಭಾರತದ ಅಂಚೆ ಕಚೇರಿಯ ಪ್ರಪ್ರಥಮ ಅಂಚೆ ಚೀಟಿ `ಸಿಂಧೆ ಡಾಕ್ಸ್' ನವದೆಹಲಿಯಲ್ಲಿ ಐದು ಸಾವಿರ ಡಾಲರುಗಳಿಗೆ (ಎರಡು ಲಕ್ಷ ರೂಪಾಯಿಗಳು) ಮಾರಾಟವಾಗುವುದರೊಂದಿಗೆ ದಾಖಲೆ ನಿರ್ಮಾಣಗೊಂಡಿತು. ಬ್ರಿಟಿಷ್ ಸಾಮ್ರಾಜ್ಯದ ಆಧೀನದಲ್ಲಿದ್ದ ಭಾರತದ ಸಿಂಧ್ ಪ್ರಾಂತ್ಯದಲ್ಲಿ ಅಂಚೆ ಸೇವೆ ಆರಂಭಿಸುವುದರೊಂದಿಗೆ ಏಷ್ಯಾ ಖಂಡದಲ್ಲಿ ಪ್ರಥಮ ಬಾರಿಗೆ ಅಂಚೆ ವ್ಯವಸ್ಥೆ ಜಾರಿಗೆ ಬಂದಿತ್ತು. 1854ರಲ್ಲಿ ಸಿಂಧೆ ಡಾಕ್ಸ್ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು. ಬ್ರಿಟಿಷರು ಸಿಂಧ್ ಪ್ರಾಂತಕ್ಕೆ ಸಿಂಧೆ ಎಂದು, ಡಾಕ್ ಗೆ (ಅಂಚೆ) ಡಾಕ್ಸ್ ಎಂದೂ ಉಚ್ಚರಿಸುತ್ತಿದ್ದುದರಿಂದ ಅಂಚೆ ಚೀಟಿಯನ್ನು ಸಿಂಧೆ ಡಾಕ್ಸ್ ಎಂದು ಕರೆಯುವುದು ರೂಢಿಯಲ್ಲಿ ಬಂತು. ವಿಶ್ವದಲ್ಲಿ 1840ರಲ್ಲಿ ಪ್ರಥಮ ಬಾರಿಗೆ ಅಂಚೆ ವ್ಯವಸ್ಥೆ ಜಾರಿಗೆ ಬಂದ 14 ವರ್ಷಗಳ ನಂತರ ಅಂದರೆ 1854ರಲ್ಲಿ ಅಂದರೆ ಅಂಚೆ ವ್ಯವಸ್ಥೆ ಇನ್ನೂ ಅಂಬೆಗಾಲಿಡುವ ಸಮಯದಲ್ಲಿ ಪ್ರಥಮ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿ ಸಿಂಧ್, ಕರಾಚಿ ಮತ್ತು ಮುಂಬೈ ಮಾರ್ಗವಾಗಿ ರವಾನೆಯಾಗುತ್ತ್ದಿದ ಪತ್ರಗಳ ಮೇಲೆ ಅಂಟಿಸಲಾಗುತ್ತಿತ್ತು.

2007: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ, ಬಾಂಗ್ಲಾದೇಶದ `ಗ್ರಾಮೀಣ ಬ್ಯಾಂಕ್' ಸ್ಥಾಪಕ ಮಹಮ್ಮದ್ ಯೂನಸ್ ಅವರು ಢಾಕ್ಕಾದಲ್ಲಿ ತಮ್ಮ ಹೊಸ ರಾಜಕೀಯ ಪಕ್ಷದ ಸ್ಥಾಪನೆಯನ್ನು ಘೋಷಿಸಿದರು. ತಿಂಗಳ ಕೊನೆಯಲ್ಲಿ ಪಕ್ಷಕ್ಕೆ `ನಾಗರಿಕ ಶಕ್ತಿ' ಎಂಬುದಾಗಿ ನಾಮಕರಣ ಮಾಡಲಾಗುವುದು ಎಂದು ಅವರು ಪ್ರಕಟಿಸಿದರು.

2007: ಶಿವರಾತ್ರಿ ಆಚರಣೆಗಾಗಿ ಪಾಕಿಸ್ಥಾನಕ್ಕೆ ತೆರಳಿದ್ದ ಭಾರತದ ಹಿಂದೂ ಯಾತ್ರಿಕರು ಲಾಹೋರಿನ ಕೃಷ್ಣ ಮಂದಿರದಲ್ಲಿ ಕೃಷ್ಣ, ಹನುಮಾನ್ ಮತ್ತು ರಾಧೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿದರು. ಭಾರತದ ಪಂಡಿತ ವಿನಯಕುಮಾರ ಭೈರಾಗಿ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ದೇಶ ವಿಭಜನೆಯಾದ ಬಳಿಕ ಈ ಮೂವರು ದೇವರ ವಿಗ್ರಹಗಳು ಲಾಹೋರ್ ನಗರದಲ್ಲಿ ಇರಲಿಲ್ಲ.

2007: ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥನಿಗೆ ಕಾವೇರಿ ನೀರಿನಿಂದ ಅಭಿಷೇಕ ಮತ್ತು ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ 5-1 ಕಲಶಗಳಿಂದ ಜಲಾಭಿಷೇಕ ಮಾಡಿ ಕಾವೇರಿ ಸಮಸ್ಯೆಗೆ ಶೀಘ್ರ ಪರಿಹಾರ ಲಭಿಸುವಂತಾಗಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

2007: ಹಂಪಿ ಕನ್ನಡ ವಿಶ್ವವಿದ್ಯಾಲಯವು ಸಿದ್ಧಪಡಿಸಿರುವ `ಕುವೆಂಪು ಕನ್ನಡ ತಂತ್ರಾಂಶ'ವನ್ನು ಸಾಹಿತಿ ಚಂದ್ರಶೇಖರ ಕಂಬಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.

2007: ಗುವಾಹಟಿಯಲ್ಲಿ 33ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ತೆರೆ ಎಳೆದರು. ಅಂತಿಮ ದಿನದ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ ಗೆದ್ದುಕೊಂಡ ಸರ್ವೀಸಸ್ ತಂಡವು ಒಟ್ಟು 59 ಚಿನ್ನ, 46 ಬೆಳ್ಳಿ, 37 ಕಂಚಿನ ಪದಕಗಳೊಂದಿಗೆ ಅಗ್ರ ತಂಡವಾಗಿ ಹೊರಹೊಮ್ಮಿ `ಸಮಗ್ರ ಪ್ರಶಸ್ತಿ'ಯನ್ನು ಬಾಚಿಕೊಂಡಿತು. ನಂತರದ ಸ್ಥಾನಗಳನ್ನು ಮಣಿಪುರ ಮತ್ತು ಅತಿಥೇಯ ಅಸ್ಸಾಂ ಪಡೆದುಕೊಂಡವು. ಈಜುಕೊಳದಲ್ಲಿ ಕರ್ನಾಟಕ ಮತ್ತೆ ತನ್ನ ಪ್ರಭುತ್ವ ಸ್ಥಾಪಿಸಿತು.

2007: ಚಿತ್ರನಟಿ ರಾಧಿಕಾ ಅವರಿಗೆ ಸೇರಿದ ಬೆಂಗಳೂರಿನ ಬನಶಂಕರಿಯ ಕತ್ರಿಗುಪ್ಪೆಯಲ್ಲಿನ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಅಪಾರ ಮೊತ್ತದ ಹಣ, ಒಡವೆ ಮತ್ತು ದಾಖಲೆಗಳನ್ನು ವಶಪಡಿಸಿಕೊಂಡರು. ಪ್ರತಿಷ್ಠಿತ ಡಾಲರ್ ಕಾಲೋನಿಯಲ್ಲಿ 13 ಕೋಟಿ ರೂಪಾಯಿ ಬೆಲೆ ಬಾಳುವ ಬಂಗಲೆಯನ್ನು ರಾಧಿಕಾ ಅವರು ಇತ್ತೀಚೆಗೆ ಖರೀದಿಸಿದ ಹಿನ್ನೆಲೆಯಲ್ಲಿ ಈ ದಾಳಿ ನಡೆಯಿತು.

2006: ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು 7 ಸಚಿವರು ಸೇರಿದಂತೆ 40 ಶಾಸಕರನ್ನು ಜನತಾದಳದಿಂದ (ಎಸ್) ಅಮಾನತುಗೊಳಿಸಲಾಯಿತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ಅವರ ಮಗ ಕುಮಾರಸ್ವಾಮಿ ಬಂಡಾಯದ ಬಳಿಕ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತಾವು ನೀಡಿದ್ದ ರಾಜೀನಾಮೆಯನ್ನು ವಾಪಸ್ ಪಡೆದು, ಅಮಾನತು ಪತ್ರಕ್ಕೆ ಸಹಿ ಹಾಕಿದರು. 

2006: ಭಾರತಕ್ಕೆ ಪಕ್ಷಿಜ್ವರ (ಕೋಳಿಜ್ವರ) ಪ್ರವೇಶಿಸಿತು. ಮಹಾರಾಷ್ಟ್ರದ ನಂದೂರ್ ಬರ್ ಮತ್ತು ಧುಲೆ ಜಿಲ್ಲೆಯಲ್ಲಿ ಜ್ವರಕ್ಕೆ ತುತ್ತಾಗಿ ಕೋಳಿಗಳು ಅಸುನೀಗಿದ ಕೆಲವು ಪ್ರಕರಣಗಳನ್ನು ಮಹಾರಾಷ್ಟ್ರ ಸರ್ಕಾರ ದೃಢಪಡಿಸಿತು. ನಂದೂರ್ ಬರ್ ಜಿಲ್ಲೆಯಲ್ಲಿ ಸುಮಾರು 50,000 ಕೋಳಿಗಳು ಜ್ವರದಿಂದ ಸತ್ತವು. 

1957: ಮರಿಟಾ ಕೊಚ್ ಹುಟ್ಟಿದ ದಿನ. ಪೂರ್ವ ಜರ್ಮನಿಯ ಕ್ರೀಡಾಪಟುವಾದ ಈಕೆ 1980ರಲ್ಲಿ ಮಾಸೊದಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಅಪೂರ್ವ ಸಾಧನೆ ಮೆರೆದರು. ಈಕೆ ವೈಯಕ್ತಿಕ ಹಾಗೂ ಹೊರಾಂಗಣ ಆಟಗಳಲ್ಲಿ 16 ಜಾಗತಿಕ ದಾಖಲೆಗಳನ್ನು ಹಾಗೂ ಒಳಾಂಗಣ ಕ್ರೀಡೆಗಳಲ್ಲಿ 14 ಜಾಗತಿಕ ದಾಖಲೆಗಳನ್ನು ನಿರ್ಮಿಸಿದರು.

1930: ಅಮೆರಿಕದ ಖಗೋಳತಜ್ಞ ಕ್ಲೈಡ್ ಡಬ್ಲ್ಯೂ ಟೊಂಬಾಗ್ ಪ್ಲೂಟೊ ಗ್ರಹವನ್ನು ಕಂಡು ಹಿಡಿದರು. ಈ ಗ್ರಹ ಇರುವ ಬಗ್ಗೆ ಪರ್ಸಿವಲ್ ಲೊವೆಲ್ ಮತ್ತು ವಿಲಿಯಂ ಎಚ್. ಪಿಕರಿಂಗ್ ಭವಿಷ್ಯ ನುಡಿದಿದ್ದರು. ಇದಕ್ಕಿಂತ ದೊಡ್ಡದಾದ 10ನೇ ಗ್ರಹ ಈಚೆಗಷ್ಟೇ ಪತ್ತೆಯಾಗಿದೆ.

1836: ಭಾರತೀಯ ಸಂತ ರಾಮಕೃಷ್ಣ ಪರಮಹಂಸ (1836-1886) ಹುಟ್ಟಿದರು. ಇವರ ಶಿಷ್ಯ ಸಾಮಿ ವಿವೇಕಾನಂದರು ರಾಮಕೃಷ್ಣ ಮಿಷನ್ ಸ್ಥಾಪಿಸಿ ಪರಮಹಂಸರ ತತ್ವ ಪ್ರಸಾರ ಮಾಡಿದರು. 

1745: ಇಟಲಿಯ ಭೌತತಜ್ಞ ಅಲೆಸ್ಸಾಂಡ್ರೊ ವೋಲ್ಟಾ (1745-1827) ಹುಟ್ಟಿದ ದಿನ. ಇವರು ಸಂಶೋಧಿಸಿದ ಎಲೆಕ್ಟ್ರಿಕ್ ಬ್ಯಾಟರಿ ನಿರಂತರ ವಿದ್ಯುತ್ತಿನ ಮೊದಲ ಮೂಲವಾಯಿತು. 

1564: ಕಲಾವಿದ ಮೈಕೆಲೇಂಜೆಲೋ ತಮ್ಮ 88ನೇ ವಯಸ್ಸಿನಲ್ಲಿ ರೋಮ್ನಲ್ಲಿ ಮೃತನಾದ.

1546: ಜರ್ಮನಿಯ ಪ್ರೊಟೆಸ್ಟೆಂಟ್ ಸುಧಾರಣಾವಾದಿ ನಾಯಕ ಮಾರ್ಟಿನ್ ಲೂಥರ್ ತನ್ನ 62ನೇ ವಯಸ್ಸಿನಲ್ಲಿ ಜರ್ಮನಿಯ ಐಸೆಲ್ ಬೆನ್ನಲ್ಲಿ ಮೃತನಾದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement