My Blog List

Sunday, March 8, 2009

ಈ ಬ್ಲಾಗು ನೋಡು... ಇದು ಕನ್ನಡಕ್ಕೆ ಕೋಡು..!

ಈ ಬ್ಲಾಗು ನೋಡು...

 ಇದು ಕನ್ನಡಕ್ಕೆ ಕೋಡು..! 





ಪತ್ರಿಕೆಗಳಲ್ಲಿ ಮೊನ್ನೆ ಮೊನ್ನೆ ಸುದ್ದಿ ಬಂತಲ್ಲ, ಮಂಗಳೂರಿನ ಹೊಸ ಮೇಯರ್ ಆಗಿ ಶಂಕರಭಟ್ ಆಯ್ಕೆಯಾದರು ಅಂತ. ಹಾಂ.. ಈ ಶಂಕರ ಭಟ್ ನೀರ್ಚಾಲಿನ ಇದೇ ಮಹಾಜನ ಶಾಲೆಯ ಹಳೇ ವಿದ್ಯಾರ್ಥಿಯಂತೆ. ಈ ವಿಚಾರವನ್ನೂ ಬ್ಲಾಗು ದಾಖಲಿಸಿದೆ.

ನೆತ್ರಕೆರೆ ಉದಯಶಂಕರ

ಈ ವಾರ ಮಿಂಚಂಚೆಗಳನ್ನು ತೆರೆದಾಗ ಗಮನ ಸೆಳೆದ ಒಂದು ಪತ್ರ ಹವ್ಯಾಸಿ ಪತ್ರಕರ್ತ ಎಡನಾಡಿನ ರವಿಶಂಕರ ದೊಡ್ಡ ಮಾಣಿ ಅವರದು. ಕೇರಳದ ಪೆ
ರಡಾಲದ ಕನ್ನಡ ಮಾಧ್ಯಮ ಶಾಲೆಯ ಬ್ಲಾಗ್ ಒಂದಿದೆ, ಒಮ್ಮೆ ಸುತ್ತಾಡಿ ಎಂದು ಕೋರಿದ್ದರು ದೊಡ್ಡ ಮಾಣಿ.

ಕುತೂಹಲದಿಂದಲೇ ಈ ಬ್ಲಾಗಿನೊಳಗೆ ಇಣುಕಿದೆ. ನಿಜಕ್ಕೂ ಖುಷಿಯಾಯಿತು. ಕೇರಳ ಸಾಕ್ಷರ ರಾಜ್ಯ. ಅಲ್ಲಿ ಮಲಯಾಳಂ ಪ್ರಭಾವ ಬಹಳ. ಆದರೆ ಕೇರಳದೊಳಗೆ ಇದ್ದರೂ ಕರ್ಮಾಟಕದ ಜೊತೆಗೆ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಜಿಲ್ಲೆ ಕಾಸರಗೋಡು. ಈ  ಜಿಲ್ಲೆಯ ನೀರ್ಚಾಲಿನ ಪೆರಡಾಲದ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ
  'ಮಹಾಜನ ಪುಟಾಣಿಗಳ ಇ ಪತ್ರಿಕೆ' ಖಂಡಿತವಾಗಿ ಕನ್ನಡಕ್ಕೆ ಒಂದು ಕೋಡು.


ಇದೇ ಶಾಲೆಯಲ್ಲಿ ಅದ್ಯಾಪಕರೂ ಆಗಿರುವ ರವಿಶಂಕರ ದೊಡ್ಡ ಮಾಣಿ ವಿದ್ಯಾಸಂಸ್ಥೆಯ, ಸಹ ಅದ್ಯಾಪಕರ, ವಿದ್ಯಾರ್ಥಿಗಳ ಬೆಂಬಲದೊಂದಿಗೆ ರೂಪಿಸಿರುವ ಬ್ಲಾಗು ಇದು. ಕನ್ನಡದ ಉದ್ಧಾರದ ಬಗ್ಗೆ ಉದ್ದುದ್ದುದ್ದುದ್ದುದ್ದ ಭಾಷಣ ಮಾಡುವ ಮಂದಿ ಹಲವರಿದ್ದಾರೆ. ಆದರೆ ಕನ್ನಡಕ್ಕಾಗಿ ಕೈ ಎತ್ತುವ ಪ್ರಸಂಗ ಬಂದಾಗಲೆಲ್ಲ ಕೈ ಎತ್ತಿ ಹೋಗಿ ಬಿಡುವವರು 
ಹೆಚ್ಚು. ನಿಜವಾಗಿಯೂ ಟೊಂಕ ಬಿಗಿದು ಕನ್ನಡದ ತೇರನೆಳೆಯುವವರು ಎಲೆಮರೆಯ 
ಕಾಯಿಗಳಂತೆ ತಮ್ಮ ಸೇವೆ ಮಾಡುತ್ತಾ ತಮ್ಮಷ್ಟಕ್ಕೆ ತೃಪ್ತರಾಗಿ ಇದ್ದುಬಿಡುತ್ತಾರೆ. ಅಂತಹವರ ಪೈಕಿ ದೊಡ್ಡ ಮಾಣಿ ಒಬ್ಬರು ಎಂಬುದಾಗಿ ಚಿತ್ರದುರ್ಗದ ಆಕಾಶವಾಣಿ ಕೇಂದ್ರದ ಪ್ರಸಾರ ನಿರ್ವಾಹಕ ಬೇದ್ರೆ ಮಂಜುನಾಥ ಈ ಬ್ಲಾಗಿಗೆ ಕೊಟ್ಟಿರುವ ಪ್ರತಿಕ್ರಿಯೆ ನಿಜಕ್ಕೂ ಅರ್ಥಪೂರ್ಣ ಎನಿಸುತ್ತದೆ.

ಈ ಬ್ಲಾಗಿನಲ್ಲಿ ಎಷ್ಟೊಂದು ವಿಚಾರಗಳಿವೆ. ಪುಟ್ಟ ಪುಟ್ಟ ಕವನಗಳಿವೆ. ಕಥೆಗಳಿವೆ. ಪುಟಾಣಿ ಮಕ್ಕಳ ಮೆದುಳಿನಲ್ಲಿ ಮೂಡಿ ಮರೆಯಾಗುವ ಎಷ್ಟೊಂದು ಚಿತ್ರಗಳು ಈ ಬ್ಲಾಗಿನಲ್ಲಿ ಮಿಂಚಿವೆ. ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್ನ ಕ್ಯಾಂಬೂರಿಯಲ್ಲಿ ಗೆದ್ದ ಸುದ್ದಿ ಇದೆ! ಮಕ್ಕಳು ತಾವು ಓದಿದ, ಕೇಳಿದ ಅ
ನುಭವಗಳನ್ನು ಇಲ್ಲಿ ಪುಟ್ಟ ಪುಟ್ಟ ಜ್ಞಾನದ ತುಣುಕುಗಳ ರೂಪದಲ್ಲೂ ಇಳಿಸಿದ್ದಾರೆ.
ಅಜೇಯ ಕೃಷ್ಣ ಬರೆದ ಗೊರಿಲ್ಲಾ, ನಮ್ರತಾಳ ಚಿತ್ರಗಳು, ನಿಶಾಂತನ ಪುಟ್ಟ ಪದ್ಯ, ಗಮ್ಯಾಳ ಪಾರ್ತಿ ಸುಬ್ಬನ ಕುರಿತ ಮಾಹಿತಿ, ಅನು ತೇಜನ 'ಕಾರು', ಸ್ವಾತಿಯ ವಿದ್ಯಾರ್ಥಿ ಜೀವನದ ಲಕ್ಷಣಗಳ ಕುರಿತ ಪ್ರಬಂಧ, ಚಂದ್ರಶೇಖರನ ಕಾರ್ಟೂನು.... ಮಕ್ಕಳ ಪ್ರತಿಭೆಯ ಪರಿಚಯದ ಜೊತೆಗೆ ವಿದ್ಯಾದಾನದ ಜೊತೆಗೇ ಪ್ರತಿಭಾ ವಿಕಾಸಕ್ಕೂ ನೀರೆರೆಯುವ ಕೆಲಸ ಇಲ್ಲಿ ನಡೆದಿದೆ ಎಂದರೆ ತಪ್ಪಲ್ಲ, ಉತ್ಪ್ರೇಕ್ಷೆಯೂ ಅಲ್ಲ.

ಪತ್ರಿಕೆಗಳಲ್ಲಿ ಮೊನ್ನೆ ಮೊನ್ನೆ ಸುದ್ದಿ ಬಂತಲ್ಲ, ಮಂಗಳೂರಿನ ಹೊಸ ಮೇಯರ್ ಆಗಿ ಶಂಕರಭಟ್ ಆಯ್ಕೆಯಾದರು ಅಂತ. ಹಾಂ.. ಈ ಶಂಕರ ಭಟ್ ನೀರ್ಚಾಲಿನ ಇದೇ ಮಹಾಜನ ಶಾಲೆಯ ಹಳೇ ವಿದ್ಯಾರ್ಥಿಯಂತೆ. ಈ ವಿಚಾರವನ್ನೂ ಬ್ಲಾಗು ದಾಖಲಿಸಿದೆ.

ರವಿಶಂಕರ ದೊಡ್ಡ ಮಾಣಿಯವರೇ ಅಭಿನಂದನೆಗಳು. ನಿಮ್ಮ ಸೇವೆ ನಿರಂತರವಾಗಲಿ. ನೂರಾರು... ಸಹಸ್ರಾರು ಪ್ರತಿಭೆಗಳು ನಿಮ್ಮ ಯತ್ನದಿಂದ ಬೆಳಗುವಂತಾಗಲಿ. 'ಮಹಾಜನ ಶಾಲೆ ಮಹಾನ್' ಆಗಿ ಪ್ರಪಂಚದ ಭೂಪಟದಲ್ಲಿ ಕಂಗೊಳಿಸಲಿ. 

ಬ್ಲಾಗಿನೊಳಗೊಮ್ಮೆ ಸುತ್ತಾಡಿ ಬರಲು ಈ ಲಿಂಕ್ ಕ್ಲಿಕ್ ಮಾಡಿ: www.mschsnirchal.blogspot.com



No comments:

Advertisement