My Blog List

Thursday, April 16, 2009

ಇಂದಿನ ಇತಿಹಾಸ History Today ಏಪ್ರಿಲ್ 15

ಇಂದಿನ ಇತಿಹಾಸ

ಏಪ್ರಿಲ್ 15

ಜಗತ್ತಿನ ಅತಿ ದೊಡ್ಡ ತಿರುಗುವ ವೀಕ್ಷಣಾ ಚಕ್ರ (ಸಿಂಗಾಪುರ ಫ್ಲೈಯರ್) ಸಿಂಗಾಪುರದಲ್ಲಿ ಚಾಲನೆಗೊಂಡಿತು. ಉದ್ಘಾಟನಾ ಸಮಾರಂಭದಲ್ಲಿ ಸಿಡಿಸಿದ ಬಾಣ ಬಿರುಸುಗಳು ದೈತ್ಯ ಚಕ್ರಕ್ಕೆ ಸಿಂಗಾರ ಮುಡಿಸಿದಂತೆ ಕಂಡುಬಂತು. 

2008: ಜಗತ್ತಿನ ಅತಿ ದೊಡ್ಡ ತಿರುಗುವ ವೀಕ್ಷಣಾ ಚಕ್ರ (ಸಿಂಗಾಪುರ ಫ್ಲೈಯರ್) ಸಿಂಗಾಪುರದಲ್ಲಿ ಚಾಲನೆಗೊಂಡಿತು. ಉದ್ಘಾಟನಾ ಸಮಾರಂಭದಲ್ಲಿ ಸಿಡಿಸಿದ ಬಾಣ ಬಿರುಸುಗಳು ದೈತ್ಯ ಚಕ್ರಕ್ಕೆ ಸಿಂಗಾರ ಮುಡಿಸಿದಂತೆ ಕಂಡುಬಂತು. 

2008: ವಾರಣಾಸಿಯ ಪ್ರಖ್ಯಾತ 18ನೇ ಶತಮಾನದ ಕಾಶಿ ವಿಶ್ವನಾಥ ದೇವಸ್ಥಾನದ ಜ್ಯೋತಿರ್ಲಿಂಗದ ಮೇಲೆ ಹೊಂಬಣ್ಣದ ಸೂರ್ಯ ಕಿರಣಗಳು ಈದಿನ ಸ್ಪರ್ಶಿಸಿದಾಗ ಅಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಪುಳಕಿತಗೊಂಡರು. ಜ್ಯೋತಿರ್ಲಿಂಗದ ಮೇಲೆ ಸೂರ್ಯ ಕಿರಣ ಬೀಳುವುದನ್ನು ತಡೆಯುತ್ತಿದ್ದ 15 ಅಡಿ ಎತ್ತರದ ಗೋಡೆ ಕೆಡವಿದ ನಂತರ ಮೊದಲ ಬಾರಿಗೆ ಈದಿನ ಸೂರ್ಯರಶ್ಮಿ ಲಿಂಗವನ್ನು ಸ್ಪರ್ಶಿಸಿತು. ಗೋಡೆಯನ್ನು ಕೆಡವಿದ್ದುದರಿಂದ ದೇವಸ್ಥಾನದ ಮೂಲ 2500 ಚದರಡಿ ಜಾಗಕ್ಕೆ ಹೊಸದಾಗಿ 6000 ಚದರಡಿಗಳು ಸೇರ್ಪಡೆಯಾಗಿ ವಿಶಾಲಜಾಗ ಲಭ್ಯವಾಯಿತು. ಹೊಸ ವಿಶಾಲವಾದ ಆವರಣದಲ್ಲಿ ತಾರಕೇಶ್ವರ ಮತ್ತು ರಾಣಿ ಭುವನೇಶ್ವರಿ ದೇವಸ್ಥಾನಗಳನ್ನು ನಿರ್ಮಿಸಲಾಗಿದೆ. ರಾಣಿ ಅಹಲ್ಯಾಬಾಯಿ 1780ರಲ್ಲಿ ಈ ದೇವಸ್ಥಾನವನ್ನು ನಿರ್ಮಿಸಿದ್ದರು. ನಂತರ ಔರಂಗಜೇಬನ ಆಳ್ವಿಕೆಯಲ್ಲಿ ದೇವಸ್ಥಾನಕ್ಕೆ ಹಾನಿ ಉಂಟು ಮಾಡಲಾಗಿತ್ತು. 

2008: ನೇಪಾಳದಲ್ಲಿ ಏಪ್ರಿಲ್ 10ರಂದು ನಡೆದ ಐತಿಹಾಸಿಕ ಸಾರ್ವತ್ರಿಕ ಚುನಾವಣೆಯಲ್ಲಿ ನೇಪಾಳ ಕಮ್ಯುನಿಸ್ಟ್ ಪಾರ್ಟಿ (ಮಾವೋವಾದಿ) ಸರಳ ಬಹುಮತ ಗಳಿಸುವತ್ತ ದಾಪುಗಾಲು ಇಟ್ಟಿತು. 116 ಸ್ಥಾನ ಗಳಿಸಿದ ಅದು, ಸರಳ ಬಹುಮತದಿಂದ ಕೇವಲ 5 ಸ್ಥಾನಗಳಷ್ಟು ಹಿಂದೆ ಉಳಿಯಿತು. 601 ಸ್ಥಾನಗಳ ಪೈಕಿ 240 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಈ ಪೈಕಿ 214 ಕ್ಷೇತ್ರಗಳ ಮತ ಎಣಿಕೆ ಪೂರ್ಣಗೊಂಡು ಫಲಿತಾಂಶ ದಾಖಲಾಯಿತು. ಪ್ರಧಾನಿ ಗಿರಿಜಾ ಪ್ರಸಾದ್ ಕೊಯಿರಾಲಾ ನೇತೃತ್ವದ ನೇಪಾಳಿ ಕಾಂಗ್ರೆಸ್ 33, ಸಿಪಿಎನ್-ಯುಎಂಎಲ್ 30, ಮಧೇಸಿ ಪೀಪಲ್ಸ್ ರೈಟ್ಸ್ ಫೋರಂ 21, ತೆರೈ ಮಧೆಸ್ ಡೆಮಾಕ್ರಟಿಕ್ ಪಾರ್ಟಿ 6, ನೇಪಾಳ್ ವರ್ಕರ್ಸ್ ಅಂಡ್ ಪೀಸಂಟ್ಸ್ ಪಾರ್ಟಿ ಮತ್ತು ಸದ್ಭಾವನಾ ಪಾರ್ಟಿ ತಲಾ 2, ಜನಮೋರ್ಚಾ ನೇಪಾಳ್ ಮತ್ತು ಪಕ್ಷೇತರರು ತಲಾ 1 ಸ್ಥಾನ ಗಳಿಸಿದರು.

2008: ನೇಪಾಳದ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಗಳಿಸುವ ಹಂತದಲ್ಲಿದ್ದರೂ ಮಾವೋವಾದಿಗಳು ಮತ್ತೆ ತಮ್ಮ ಹಿಂಸಾ ಪ್ರವೃತ್ತಿ ಮುಂದುವರಿಸಿದ್ದರಿಂದ, ದೇಶದ ಹಣಕಾಸು ಸಚಿವ ಡಾ. ರಾಮ್ ಶರಣ್ ಮಹತ್ ಮತ್ತು ಇತರ ಏಳು ಮಂದಿ ಗಾಯಗೊಂಡರು. ನೇಪಾಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮಹತ್ ಅವರು ನುವತ್-2 ಕ್ಷೇತ್ರದಲ್ಲಿ ಜಯ ಗಳಿಸಿದ್ದರು. ತಮ್ಮ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿ ಹಿಂದಿರುಗುತ್ತಿದ್ದಾಗ ದುಢ್ದೇವಿ ಎಂಬಲ್ಲಿ ಮಾವೋವಾದಿಗಳ ಗುಂಪು ಅವರ ಮೇಲೆ ಎರಗಿತು.

2008: ಕಳೆದ ವರ್ಷ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಮಗ ರಾಹುಲ್ ಗಾಂಧಿ ನ್ಯೂಯಾರ್ಕಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ವಿರುದ್ದ ಹಲವು ಆರೋಪಗಳನ್ನು ಮಾಡಿ ನೀಡಿದ ಜಾಹೀರಾತಿಗೆ ಸಂಬಂಧಿಸಿದಂತೆ `ಗಾಂಧಿ ಸಂಸ್ಕೃತಿ ಸಂರಕ್ಷಣಾ ಸಂಸ್ಥೆ'ಯ ಮೂರು ಸದಸ್ಯರಿಗೆ ಮಾನನಷ್ಟ ಮೊಕ್ದದಮೆಯ ನೋಟಿಸ್ ಜಾರಿಗೊಳಿಸಲಾಯಿತು. ಕಾನೂನು ಶುಲ್ಕ ಸೇರಿದಂತೆ  10 ಕೋಟಿ ಡಾಲರ್ ಹಣವನ್ನು ಪರಿಹಾರವಾಗಿ ನೀಡುವಂತೆ ಒತ್ತಾಯಿಸಿ ನ್ಯೂಯಾರ್ಕ್ ಕೋರ್ಟಿನಲ್ಲಿ ಇಂಡಿಯನ್ ನ್ಯಾಷನಲ್ ಓವರ್ ಸೀಸ್ ಕಾಂಗ್ರೆಸ್ ದಾವೆ ಹೂಡಿತು. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಒಂದು ಪುಟವಿಡೀ ಸೋನಿಯಾ ಗಾಂಧಿ ಅವರನ್ನು ಟೀಕಿಸುವ ಜಾಹಿರಾತು ಪ್ರಕಟವಾಗಿತ್ತು.

2008: ರಿಯೋ ಡಿ ಜನೈರೊದ ಪರ್ವತ ಶಿಖರದ ಮೇಲಿರುವ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿರುವ ಪ್ರಖ್ಯಾತ ಕ್ರಿಸ್ತನ ಪ್ರತಿಮೆಯ ದರ್ಶನಕ್ಕೆ ತೆರಳಿದ್ದ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಹವಾಮಾನ ವೈಪರೀತ್ಯದಿಂದಾಗಿ ನಿರಾಶರಾಗಿ ವಾಪಸಾಗಬೇಕಾಯಿತು. ಪ್ರತಿಭಾ ಪಾಟೀಲರ ಬೆಂಗಾವಲು ಪಡೆ ಟಿಜುಕಾ ಅರಣ್ಯದ ರಾಷ್ಟ್ರೀಯ ಉದ್ಯಾನದಲ್ಲಿರುವ 2,296 ಅಡಿ ಎತ್ತರದ ಕಾರ್ಕವೇಡೋ ಪರ್ವತದಲ್ಲಿರುವ 130 ಅಡಿ ಎತ್ತರದ ಕ್ರೈಸ್ತ ಪ್ರತಿಮೆ ವೀಕ್ಷಿಸಲು ದುರ್ಗಮ ಹಾದಿಯಲ್ಲಿ ತೆರಳಿತ್ತು.  ಭಾರಿ ಮಳೆ ಸುರಿದರೂ ರಾಷ್ಟ್ರಪತಿ ಅದನ್ನು ಲೆಕ್ಕಿಸದೇ ಮುಂದುವರಿದರು. ಆದರೆ ಪ್ರತಿಮೆಗೆ ದಟ್ಟ ಮಂಜು ಆವರಿಸಿದ್ದುದರಿಂದ ಪ್ರತಿಮೆ ನೋಡುವ ಅವರ ಆಸೆ ಈಡೇರಲಿಲ್ಲ.

2008: ದೇಶದ 2ನೆ ಅತಿದೊಡ್ಡ ಸಾಫ್ಟ್ ವೇರ್  ಸಂಸ್ಥೆ ಇನ್ಫೊಸಿಸ್ ಟೆಕ್ನಾಲಜೀಸ್, ಮಾರ್ಚ್ ತಿಂಗಳ ಅಂತ್ಯಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಒಟ್ಟು ರೂ 4659 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇ 21ರಷ್ಟು ಹೆಚ್ಚು.

2008: ದೇಶದ ಭದ್ರತಾ ಪಡೆಗೆ ಅಗತ್ಯ ಎಲೆಕ್ಟ್ರಾನಿಕ್ ಪರಿಕರಗಳ ತಯಾರಿಕೆಯಲ್ಲಿ ನಿರತವಾಗಿರುವ ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್- ಬೆಲ್), ಮಾರ್ಚ್ 31ಕ್ಕೆ ಅಂತ್ಯಗೊಂಡ 2007-08ನೇ ಹಣಕಾಸು ವರ್ಷದಲ್ಲಿ ಒಟ್ಟು ರೂ 1100 ಕೋಟಿ ತೆರಿಗೆ ಪೂರ್ವ ಲಾಭ ದಾಖಲಿಸಿತು.

2008: ಉನ್ನತ ಶಿಕ್ಷಣಕ್ಕೆ ಪ್ರವೇಶ ನೀಡುವಾಗ ಪರಿಶಿಷ್ಟ ಜಾತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಕೋಟಾದ ಜೊತೆಗೆ ಪರಿಗಣಿಸಲಾಗುವುದೇ ವಿನಾ ಅವರಿಗೆ ಪ್ರತ್ಯೇಕ ಮೀಸಲಾತಿ ನೀಡಲಾಗುವುದಿಲ್ಲ ಎಂಬ ಸುಪ್ರೀಂ ಕೋರ್ಟಿನ ಆದೇಶವನ್ನು ಹೈಕೋರ್ಟ್ ಪುನರುಚ್ಛರಿಸಿತು. 2005-06ನೇ ಸಾಲಿನಲ್ಲಿ ಎಂಬಿಬಿಎಸ್ ಕೋರ್ಸಿನ ವಿವಾದವೊಂದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಕುರಿತು ಸರ್ಕಾರಿ ವಕೀಲರು ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ನೇತೃತ್ವದ ವಿಭಾಗೀಯ ಪೀಠದ ಗಮನ ಸೆಳೆದಾಗ ಪೀಠವು ಅದನ್ನು ಪುನರುಚ್ಛರಿಸಿತು. ಈ ಕೋರ್ಸಿಗೆ ದಾಖಲು ಪಡೆದಿರುವ ಪಟ್ಟಿಯಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ ಎಂದು ದೂರಿ ಗುಲ್ಬರ್ಗದ ಎಸ್. ಶ್ವೇತಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೋರ್ಟ್ ನಡೆಸಿತು.

2008: ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗಾಗಿ ಶ್ರೀ ಕ್ಷೇತ್ರ ಶ್ರವಣಬೆಳಗೊಳ ನೀಡುವ ಶ್ರೀ ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿಗಾಗಿ ಈ ಬಾರಿ ಹತ್ತು ಜನರನ್ನು ಆಯ್ಕೆ ಮಾಡಲಾಯಿತು. ಶ್ರೀ ಗೊಮ್ಮಟೇಶ್ವರ ವಿದ್ಯಾಪೀಠ ಸಾಹಿತ್ಯ ಪ್ರಶಸ್ತಿ : ಡಾ.ಬಾಳಾಸಾಹೇಬ ಲೋಕಾಪುರ (ಬಾಗಲಕೋಟೆ), ಪ್ರೊ.ನಾ.ಉಜಿರೆ (ಧರ್ಮಸ್ಥಳ),  ಡಾ. ಅ.ಸುಂದರ (ಮೈಸೂರು), ಡಾ. ಕಿರಣ್ ಕ್ರಾಂತ್ ಚೌಧರಿ (ತಿರುಪತಿ), ಡಾ. ಸತ್ಯಪ್ರಕಾಶ್ ಚಂದ್ ಶಾಸ್ತ್ರೀ (ನವದೆಹಲಿ), ಪ್ರೊ.ನಲಿನ್ ಕುಮಾರ್ ಶಾಸ್ತ್ರೀ (ಬೋಧಗಯಾ), ಡಾ. ರಮೇಶ್ ಚಂದ್ ಜೈನ್ (ಉತ್ತರ ಪ್ರದೇಶದ ಬಿಜನೂರು), ಡಾ. ಪ್ರೆಂಸುಮನ್ ಜೈನ್ (ಶ್ರವಣಬೆಳಗೊಳ) ಅವರು ಆಯ್ಕೆಯಾದರು. ಶ್ರೀ ಗೊಮ್ಮಟೇಶ್ವರ ವಿದ್ಯಾಪೀಠ ಸಂಸ್ಕೃತಿ ಪ್ರಶಸ್ತಿ: ಜೆ.ಟಿ.ಜಿಂಕಲಪ್ಪ(ಹಾಸನ) ಹಾಗೂ ಮಹಾಕವಿ ರತ್ನಾಕರ ಸಾಹಿತ್ಯ ಸ್ಮೃತಿ ಸೇವೆಗಾಗಿರುವ ವ್ಯಾಖ್ಯಾನ ಕೇಸರಿ ಎ.ಆರ್.ನಾಗರಾಜ್ ಪ್ರಶಸ್ತಿಯು ನವರತ್ನ ಇಂದುಕುಮಾರ್ (ಚಿಕ್ಕಮಗಳೂರು) ಅವರಿಗೆ ಸಂದಿತು.

2008: ಅಣುಬಾಂಬ್ ತಯಾರಿಸುವಲ್ಲಿ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೀನ್ ಅವರಿಗೆ ನೆರವು ನೀಡಿದ್ದ ಶ್ರೇಷ್ಠ ಭೌತಶಾಸ್ತ್ರಜ್ಞರಲ್ಲಿ ಒಬ್ಬರಾದ ಜಾನ್ ವೀಲರ್ (96) ಅವರು ಹೈಟ್ಸ್ ಟೌನಿನ ತಮ್ಮ ಸ್ವಗೃಹದಲ್ಲಿ ಏಪ್ರಿಲ್ 13ರಂದು ನಿಧನರಾದರು.

2007: ಬಾಲನಟ ವಿನಾಯಕ ಜೋಶಿ ಅವರ ತಂದೆ ನಿರ್ಮಾಪಕ ವಾಸುದೇವ ಜೋಶಿ (52) ಅವರು ಮೂತ್ರಪಿಂಡ ವೈಫಲ್ಯದ ಕಾರಣ ಬೆಂಗಳೂರಿನಲ್ಲಿ ನಿಧನರಾದರು. ಉದ್ಯಮಿಯಾಗಿದ್ದ ಅವರು ತಮ್ಮ ಏಕೈಕ ಪುತ್ರ ವಿನಾಯಕ ಜೋಶಿಯನ್ನು ನಾಯಕ ನಟನನ್ನಾಗಿ ಮಾಡಲು `ನನ್ನ ಕನಸಿನ ಹೂವೆ' ಚಿತ್ರ ನಿರ್ಮಿಸಿದ್ದರು. ಇಂಡಿಯಾ ಫೌಂಡೇಷನ್ನಿನ ಟ್ರಕ್ಕರ್ಸ್ ಕಾರ್ಪೊರೇಷನ್ ಮತ್ತು ಎಚ್ ಐ ವಿ - ಏಡ್ಸ್ ಸಲಹಾ ಸಂಸ್ಥೆಗಳು ಜಂಟಿಯಾಗಿ ಈ ಕಾರ್ಯಕ್ರಮ ಸಂಘಟಿಸಿದ್ದವು.

2007: ಬಹು ನಿರೀಕ್ಷಿತ ಬೆಂಗಳೂರು ಮೆಟ್ರೊ ರೈಲು ಯೋಜನೆ ಸಿವಿಲ್ ಕಾಮಗಾರಿಗೆ ಮಹಾತ್ಮ ಗಾಂಧಿ ರಸ್ತೆಯಲ್ಲಿ ಚಾಲನೆ ನೀಡಲಾಯಿತು.

2007: ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರು ಒಂದೇ ಕಾರ್ನಿಯಾ ಬಳಸಿ ಮೂವರಿಗೆ ದೃಷ್ಟಿ ನೀಡುವ ಮೂಲಕ ವಿಶ್ವದ ನೇತ್ರ ಚಿಕಿತ್ಸಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದರು.  ಏಮ್ಸ್ ನ ಜೆ.ಎಸ್. ತಿತಿಯಾಲ್ ಮತ್ತು ನಾಸಿಕದ ಡಾ. ರಸಿಕ್ ವಾಜಪೇಯಿ ನೇತೃತ್ವದ ವೈದ್ಯರ ತಂಡ ಈ ಸಾಧನೆ ಮಾಡಿತು. ಹೃದಯಾಘಾತದಿಂದ ಮೃತನಾದ 44 ವರ್ಷದ ವ್ಯಕ್ತಿಯ ಕಣ್ಣಿನ ಕಾರ್ನಿಯಾವನ್ನು (ಕಣ್ಣು ಗುಡ್ಡೆಯ ಪಾರದರ್ಶಕ ಭಾಗ) ಮೂರು ಭಾಗಗಳಾಗಿ ಕತ್ತರಿಸಿ ಮೂವರು ರೋಗಿಗಳಿಗೆ ಅಳವಡಿಸಲಾಯಿತು. ಮೂರು ತಿಂಗಳ ಸತತ ಚಿಕಿತ್ಸೆಯ ಬಳಿಕ ಮೂವರಿಗೂ ದೃಷ್ಟಿ ಬಂತು.

2007: ಹಾಲಿವುಡ್ ನಟ ರಿಚರ್ಡ್ ಗೇರ್ ಅವರು ನವದಹಲಿಯಲ್ಲಿ ನಡೆದ ಎಚ್ಐವಿ - ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಬಹಿರಂಗವಾಗಿ ಕಾರ್ಯಕ್ರಮ ನಿರ್ವಹಿಸುತ್ತಿದ್ದ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಅವರನ್ನು ಬರಸೆಳೆದು ಬಿಗಿದಪ್ಪಿ ಗಲ್ಲಕ್ಕೆ ಚುಂಬಿಸಿದರು. ಈ ಘಟನೆ ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿ ಗೇರ್ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ಕೂಡಾ ದಾಖಲಾಯಿತು.

2007:  ಖ್ಯಾತ ಸಂಗೀತಗಾರ ಹಾಗೂ ಗಾಯಕಿ ಲತಾ ಮಂಗೇಶ್ಕರ್ ಅವರ ಸಹೋದರ ಹೃದಯನಾಥ್ ಮಂಗೇಶ್ಕರ್ ಅವರಿಗೆ ಪ್ರತಿಷ್ಠಿತ ಲತಾ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಧ್ಯಪ್ರದೇಶದ ಲೋಕೋಪಯೋಗಿ ಸಚಿವ ಕೈಲಾಶ್, ಸಂಸ್ಕೃತಿ ಸಚಿವ ಲಕ್ಷ್ಮಿಕಾಂತ್ ಶರ್ಮಾ ಹಾಗೂ ಸಂಸದೆ ಸುಮಿತ್ರಾ ಮಹಾಜನ್ ಅವರು ಇಂದೋರಿನಲ್ಲಿ ಹೃದಯನಾಥ್ ಮಂಗೇಶ್ಕರ್ ಅವರನ್ನು ಒಂದು ಲಕ್ಷ ರೂ. ನಗದು, ಪ್ರಶಸ್ತಿ ನೀಡಿ ಗೌರವಿಸಿದರು. 1937 ಅಕ್ಟೋಬರ್ 26ರಂದು ಜನಿಸಿದ ಹೃದಯನಾಥ್ ಪ್ರಸಿದ್ಧ ಸಂಗೀತಗಾರ ಹಾಗೂ ನಾಟಕಕಾರರಾದ  ದೀನನಾಥ್ ಮಂಗೇಶ್ಕರ್ ಅವರ ಪುತ್ರ. ಪ್ರಸಿದ್ಧ ಹಿನ್ನೆಲೆ ಗಾಯಕಿಯರಾದ ಲತಾ ಮಂಗೇಶ್ಕರ್ ಹಾಗೂ ಆಶಾ ಭೋಂಸ್ಲೆ ಹೃದಯನಾಥ್ ಅವರ ಸಹೋದರಿಯರು. ಲತಾ ಸಹೋದರಿ ಆಶಾ ಭೋಂಸ್ಲೆ ಸೇರಿದಂತೆ ನೌಷದ್, ಕಿಶೋರ್ ಕುಮಾರ್, ಅನಿಲ್ ವಿಶ್ವಾಸ್, ಮನ್ನಾ ಡೇ, ಆರ್.ಡಿ. ಬರ್ಮನ್, ಲಕ್ಷ್ಮಿಕಾಂತ್ ಪ್ಯಾರೇಲಾಲ್, ಕಲ್ಯಾಣ್ ಜೀ ಆನಂದಜೀ, ಜಗಜಿತ್  ಸಿಂಗ್, ಭೂಪೇನ್ ಹಜಾರಿಕಾ ಅವರು ಇದುವರೆಗೂ ಈ ಪ್ರಶಸ್ತಿಗೆ ಬಾಜನರಾಗಿದ್ದಾರೆ.

2007: ಕಾವೇರಿ ಜಲ ವಿವಾದ ನ್ಯಾಯ ಮಂಡಳಿಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ಮತ್ತು ಜಟಿಲ ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿಗೆ ಹೋಗುವ ಆಯ್ಕೆಯನ್ನು ಮುಕ್ತವಾಗಿ ಇರಿಸಲು ತಮಿಳುನಾಡು ಸಕರ್ಾರ ಚೆನ್ನೈಯಲ್ಲಿ ಕರೆದಿದ್ದ ಸರ್ವ ಪಕ್ಷಗಳ ಸಭೆ ನಿರ್ಧರಿಸಿತು. ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ಮೊದಲ ಹೆಜ್ಜೆಯಾಗಿ ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಎದುರು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ತೀರ್ಮಾನಿಸಿತು. 

2006: ಇಂದೋರಿನಲ್ಲಿ ನಡೆದ ಏಳನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್ ವಿರುದ್ಧ 7 ವಿಕೆಟ್ಟುಗಳ ಅಂತರದ ಭರ್ಜರಿ ಜಯ ಸಾಧಿಸಿತು.

2006: ತೀವ್ರ ವಿವಾದಕ್ಕೆ ಕಾರಣವಾಗಿರುವ ಸರ್ದಾರ ಸರೋವರ ಅಣೆಕಟ್ಟೆ ಎತ್ತರ ಹೆಚ್ಚಿಸುವ ನಿರ್ಧಾರದ ಹೊಣೆಯನ್ನು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿಗೆೆ ವರ್ಗಾಯಿಸಿತು. ಅಣೆಕಟ್ಟೆ ಎತ್ತರ ಹೆಚ್ಚಳ ಪ್ರಸ್ತಾವ ಕೈಬಿಟ್ಟ ಕೇಂದ್ರದ ನಿರ್ಧಾರ ವಿರೋಧಿಸಿ 51 ಗಂಟೆಗಳ ನಿರಶನ ಆರಂಭಿಸಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನಿರ್ಧರಿಸಿದರು.

2006: ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಶಾಸಕರ ಬಣಕ್ಕೆ ವಿದಿಸಿದ್ದ ಬಹಿಷ್ಕಾರ ಶಿಕ್ಷೆಯನ್ನು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರು ಹಿಂತೆಗೆದುಕೊಂಡು, ಪಕ್ಷದ ಕಚೇರಿಯಲ್ಲಿ ಎಲ್ಲ ಶಾಸಕರ ಸಭೆ ನಡೆಸಿದರು. 

1986: ಅಂಟಿಗುವಾದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ವಿವಿಯನ್ ರಿಚರ್ಡ್ಸ್ಸ್ ಅತಿ ವೇಗದ ಟೆಸ್ಟ್ ಶತಕ ಬಾರಿಸಿದರು. 56 ಬಾಲ್ ಗಳಿಗೆ ಅವರು ಈ ಶತಕ ಸಿಡಿಸಿದರು.

1980: ತತ್ವಜ್ಞಾನಿ ಜೀನ್-ಪೌಲ್-ಸಾರ್ತ್ರೆ ತನ್ನ 74ನೇ ವಯಸಿನಲ್ಲಿ ಪ್ಯಾರಿಸ್ಸಿನಲ್ಲಿ ಮೃತನಾದ.

1975: ಕಲಾವಿದ ಬಿ.ಜಿ. ವಿನುತ ಜನನ.

1963: ಮಾಜಿ ಕ್ರಿಕೆಟ್ ಆಟಗಾರ ಮನೋಜ್ ಪ್ರಭಾಕರ್ ಹುಟ್ಟಿದ ದಿನ.

1962: ಕಲಾವಿದ ಸದಾಶಿವ ಪಾಟೀಲ ಜನನ.

1955: ಷಿಕಾಗೊವಿನ ಡೆ ಪ್ಲೈನ್ ಸನ್ನಲ್ಲಿ ರೇ ಕ್ರಾಕ್ `ಮೆಕ್ ಡೊನಾಲ್ಡ್' ಮಾಂಸದ ಭಕ್ಷ್ಯದ ಮಳಿಗೆ ತೆರೆದ. ವರ್ತುಲಾಕಾರದಲ್ಲಿ ಚಪ್ಪಟೆಯಾಗಿ ಕತ್ತರಿಸಿ ನಂತರ ಕರಿದು ಬ್ರೆಡ್ ಜೊತೆಗೆ ನೀಡಲಾಗುವ ಗೋಮಾಂಸದ ಭಕ್ಷ್ಯದ ಈ ಉದ್ಯಮ ಮುಂದೆ ಜಗತ್ತಿನಲ್ಲೇ ಅತ್ಯಂತ ದೊಡ್ಡ ಪ್ರಮಾಣದ ಉದ್ಯಮವಾಗಿ ಬೆಳೆಯಿತು.

1955: ಕಲಾವಿದ ಮ. ನರಸಿಂಹ ಮೂರ್ತಿ ಜನನ.

1946: ಕಲಾವಿದ ಜೆ. ಹುಸೇನ್ ಸಾಬ್ ಜನನ.

1922: ಕವನದ ಪ್ರತಿಯೊಂದು ಸಾಲನ್ನೂ ಆಸ್ವಾದಿಸಿ, ಅಂತರ್ ಮುಖಿಯಾಗಿ ಹೃದಯಾಂತರಾಳದಿಂದ ಹಾಡುವ ಗಾಯಕ ಪ್ರಭಾಕರ ಅವರು  ಸಂಗೀತ, ಸಾಹಿತ್ಯ, ಅಭಿನಯ, ಚಿತ್ರಕಲೆಯಲ್ಲಿ ಪರಿಣತರಾದ ಎಂ. ರಂಗರಾವ್- ಶಿಕ್ಷಕಿ ಕಾವೇರಿಬಾಯಿ ದಂಪತಿಯ ಮಗನಾಗಿ ಭಟ್ಕಳದಲ್ಲಿ ಜನಿಸಿದರು. ಇವರ ತಾಯಿಯದ್ದೂ ಕೀರ್ತನಕಾರ, ಸಂಗೀತಕಾರರ ಮನೆತನ.

1912: ಬ್ರಿಟಿಷ್ ಲಕ್ಸುರಿ ನೌಖೆ ಟೈಟಾನಿಕ್ ನ್ಯೂಫೌಂಡ್ ಲ್ಯಾಂಡ್ ಸಮೀಪ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿತು. ನೌಕೆಯಲ್ಲಿದ್ದ ಸುಮಾರು 1500 ಮಂದಿ ಅಸುನೀಗಿದರು. ಆದರೆ ಈ ದುರಂತದಲ್ಲಿ ಸತ್ತವರ ಸಂಖ್ಯೆ ಬಗ್ಗೆ ಎಂದೂ ಒಮ್ಮತ ಮೂಡಲೇ ಇಲ್ಲ.

1865: ಗುಂಡೇಟಿನ ಗಾಯಗಳ ಪರಿಣಾಮವಾಗಿ ಬೆಳಿಗ್ಗೆ 7.30ಕ್ಕೆ ಅಬ್ರಹಾಂ ಲಿಂಕನ್ ಮೃತರಾದರು. ವಾಷಿಂಗ್ಟನ್ನಿನ ಫೋರ್ಡ್ಸ್ಸ್ ಥಿಯೇಟರಿನಲ್ಲಿ ಹಿಂದಿನ ದಿನ ಜಾನ್ ಡಬ್ಲ್ಯೂ ಬೂತ್ ಎಂಬ ನಟ ಲಿಂಕನ್ ಅವರಿಗೆ ಗುಂಡು ಹೊಡೆದಿದ್ದ. ಈ ವೇಳೆಯಲ್ಲಿ ಲಿಂಕನ್ ಥಿಯೇಟರಿನಲ್ಲಿ `ಅವರ್ ಅಮೆರಿಕನ್ ಕಸಿನ್' ಎಂಬ ಹಾಸ್ಯಚಿತ್ರ ನೋಡುವುದರಲ್ಲಿ ತಲ್ಲೀನರಾಗಿದ್ದರು.. 

1469: ಸಿಕ್ಖರ ಪ್ರಥಮ ಗುರುವಾಗಿದ್ದ ಗುರುನಾನಕ್ ಅವರ ಜನ್ಮದಿನ. 

1452: ಲಿಯೋನಾರ್ಡೊ ಡ ವಿಂಚಿ (1452-1519) ಹುಟ್ಟಿದ ದಿನ. ಈತ ಇಟಲಿಯ ಖ್ಯಾತ ಕಲಾವಿದ, ಶಿಲ್ಪಿ, ಗಣಿತತಜ್ಞ, ಸಂಶೋಧಕ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement