My Blog List

Tuesday, April 28, 2009

ಇಂದಿನ ಇತಿಹಾಸ History Today ಏಪ್ರಿಲ್ 28

ಇಂದಿನ ಇತಿಹಾಸ

ಏಪ್ರಿಲ್ 28

 ಭಾರತ ಹಾಕಿ ಫೆಡರೇಷನ್ ಅಧ್ಯಕ್ಷ ಕೆ.ಪಿ.ಎಸ್. ಗಿಲ್ ಅವರ ಹದಿನೈದು ವರ್ಷಗಳ ಆಳ್ವಿಕೆಗೆ ಕೊನೆಗೂ ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಅಂತ್ಯ ಹಾಡಿತು. ಈದಿನ ನಡೆದ ತುರ್ತು ಸಭೆಯಲ್ಲಿ ಐಒಎ, ಭಾರತ ಹಾಕಿ ಫೆಡರೇಷನನ್ನು ಅಮಾನತು ಮಾಡುವುದರ ಜೊತೆಯಲ್ಲಿ ಒಲಿಂಪಿಯನ್ ಅಸ್ಲಮ್ ಷೇರ್ ಖಾನ್ ಅವರ ನೇತೃತ್ವದಲ್ಲಿ ತಾತ್ಕಾಲಿಕ ಆಯ್ಕೆ ಸಮಿತಿಯನ್ನು ನೇಮಿಸಲಾಯಿತು.

2008: ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈದಿನ ಬೆಳಗ್ಗೆ ಆಕಾಶಕ್ಕೆ ಚಿಮ್ಮಿದ ಇಸ್ರೋದ ಪಿ ಎಸ್ ಎಲ್ ವಿ ರಾಕೆಟ್ ಒಂದೇ ಸಲಕ್ಕೆ 10 ಉಪಗ್ರಹಗಳನ್ನು ಕಕ್ಷೆಗೆ ಯಶಸ್ವಿಯಾಗಿ ಬಿಡುವ ಮೂಲಕ ಭಾರತದ ಬಾಹ್ಯಾಕಾಶ ವಿಜ್ಞಾನವು ಐತಿಹಾಸಿಕ ವಿಶ್ವ ದಾಖಲೆಯನ್ನು ನಿರ್ಮಿಸಿತು. 230 ಟನ್ ಅಂದರೆ 50 ಆನೆ ತೂಕದ, 12 ಮಹಡಿ ಎತ್ತರದ ಪಿ ಎಸ್ ಎಲ್ ವಿ ಯು ನಮ್ಮ ದೇಶದ ಒಂದು ನಕ್ಷೆ ಉಪಗ್ರಹ `ಕಾರ್ಟೋಸ್ಯಾಟ್-2ಎ' ಒಂದು ದೂರ ಸಂವೇದಿ ಮಿನಿ ಉಪಗ್ರಹ ಹಾಗೂ ವಿದೇಶಗಳ ಎಂಟು ನ್ಯಾನೋ ಉಪಗ್ರಹಗಳನ್ನು ಹಾಗೂ ಒಂದು ದೂರಸಂವೇದಿ ಉಪಗ್ರಹವನ್ನು ನಿಶ್ಚಿತ ಕಕ್ಷೆಗೆ ಸೇರಿಸಿತು. ಉಡಾವಣಾ ಹಲಗೆ ಮೇಲಿನಿಂದ 9.23ಕ್ಕೆ ಚಿಮ್ಮಿದ ಈ ರಾಕೆಟ್ ಯಾವುದೇ ಆತಂಕಕ್ಕೆ ಎಡೆ ಮಾಡಿಕೊಡದೆ ಸುಮಾರು 14 ನಿಮಿಷಗಳ ಅವದಿಯಲ್ಲಿ 635 ಕಿ.ಮೀ. ದೂರದ `ಪೋಲಾರ್ ಸನ್ ಸಿಂಕ್ರೋನಸ್  ಕಕ್ಷೆ'ಗೆ ಉಪಗ್ರಹಗಳನ್ನು ಹಾರಿಸಿತು. ಈದಿನದ ಉಡಾವಣೆಯೂ ಸೇರಿ ಪಿ ಎಸ್ ಎಲ್ ವಿ 12 ಸಲ ಯಶಸ್ವಿಯಾಗಿ ಉಡಾವಣೆಗಳನ್ನು ಮಾಡಿದೆಯಾದರೂ, ಒಂದೇ ಬಾರಿಗೆ 10 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ್ದು ಇದೇ ಮೊದಲು. ರಷ್ಯಾದ ರಾಕೆಟ್ ಒಂದು ಕಳೆದ ವರ್ಷ ಒಂದೇ ಸಲಕ್ಕೆ 16 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿತ್ತಾದರೂ ಅವುಗಳ ಒಟ್ಟು ತೂಕ ಕೇವಲ 300 ಕಿ.ಲೋ. ಮಾತ್ರ. ಆದರೆ ಪಿ ಎಸ್ ಎಲ್ ವಿ ಕಕ್ಷೆಗೆ ಸೇರಿಸಿದ ಉಪಗ್ರಹಗಳ ತೂಕ ಒಟ್ಟು 824 ಕೆ.ಜಿ.

2008: ವೇಗಿ ಎಸ್. ಶ್ರೀಶಾಂತ್ ಅವರ ಕೆನ್ನೆಗೆ ಬಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಭಜನ್ ಸಿಂಗ್ ಅವರ ಮೇಲೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ 11 ಪಂದ್ಯಗಳನ್ನು ಆಡದಂತೆ ನಿಷೇಧ ಹೇರಲಾಯಿತು. ಐಪಿಎಲ್ ಮ್ಯಾಚ್ ರೆಫರಿ ಹಾಗೂ ಮಾಜಿ ಆಟಗಾರ ಫಾರೂಕ್ ಎಂಜಿನಿಯರ್ ಅವರು ಈದಿನ ಮಧ್ಯಾಹ್ನ ನವದೆಹಲಿಯ ಹೋಟೆಲ್ ಒಂದರಲ್ಲಿ ಎರಡು ಗಂಟೆ ಕಾಲ ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಈ ನಿರ್ಧಾರಕ್ಕೆ ಬಂದರು. ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಭಜ್ಜಿ ಕ್ಷಮೆಯಾಚಿಸಿದರು. ಬಳಿಕ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಭಜ್ಜಿ ಮೇಲೆ ಐಪಿಎಲ್ `ಟ್ವೆಂಟಿ-20' ಟೂರ್ನಿಯ 11 ಪಂದ್ಯಗಳ ನಿಷೇಧದ ತೀರ್ಪನ್ನು ಪ್ರಕಟಿಸಿತು.

2008: ಭಾರತ ಹಾಕಿ ಫೆಡರೇಷನ್ ಅಧ್ಯಕ್ಷ ಕೆ.ಪಿ.ಎಸ್. ಗಿಲ್ ಅವರ ಹದಿನೈದು ವರ್ಷಗಳ ಆಳ್ವಿಕೆಗೆ ಕೊನೆಗೂ ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಅಂತ್ಯ ಹಾಡಿತು. ಈದಿನ ನಡೆದ ತುರ್ತು ಸಭೆಯಲ್ಲಿ ಐಒಎ, ಭಾರತ ಹಾಕಿ ಫೆಡರೇಷನನ್ನು ಅಮಾನತು ಮಾಡುವುದರ ಜೊತೆಯಲ್ಲಿ ಒಲಿಂಪಿಯನ್ ಅಸ್ಲಮ್ ಷೇರ್ ಖಾನ್ ಅವರ ನೇತೃತ್ವದಲ್ಲಿ ತಾತ್ಕಾಲಿಕ ಆಯ್ಕೆ ಸಮಿತಿಯನ್ನು ನೇಮಿಸಲಾಯಿತು. ಐ ಎಚ್ ಎಫ್ ಕಾರ್ಯದರ್ಶಿ ಕೆ. ಜ್ಯೋತಿಕುಮಾರನ್ ಅಜ್ಲನ್ ಷಾ ಕಪ್ ಹಾಕಿ ಚಾಂಪಿಯನ್ ಶಿಪ್ಪಿನಲ್ಲಿ ಪಾಲ್ಗೊಳ್ಳುವ ಭಾರತ ತಂಡದ ಆಯ್ಕೆಗಾಗಿ ಲಂಚ ಸ್ವೀಕರಿಸುತ್ತಿದ್ದಾಗ ಟಿ.ವಿ. ಸ್ಟಿಂಗ್ ಆಪರೇಷನ್ನಿನಲ್ಲಿ ಸಿಕ್ಕಿ ಬಿದ್ದ ಹಿನ್ನೆಲೆಯಲ್ಲಿ ಐಒಎ ತುರ್ತು ಸಭೆ ನಡೆಸಿ ಐ ಎಚ್ ಎಫ್ನ ಪ್ರಸ್ತುತ ಆಡಳಿತ ಮಂಡಳಿಯನ್ನು ಕಿತ್ತೊಗೆಯುವುದಕ್ಕೆ ಸರ್ವಾನುಮತದಿಂದ ಸಮ್ಮತಿಸಿತು. 

2008: ಮಲೇಷ್ಯಾದ ಸಂಸತ್ತಿಗೆ  ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದಲ್ಲಿ ಭಾರತೀಯ ಮೂಲದ 10 ಶಾಸಕರು ಹಾಗೂ ವಿರೋಧ ಪಕ್ಷದ ನಾಯಕಿಯಾಗಿ ಮಹಿಳೆಯೊಬ್ಬರು ಆಯ್ಕೆಯಾಗಿ ಹೊಸ ಇತಿಹಾಸ ನಿರ್ಮಿಸಿದರು. ಮಾರ್ಚ್ 8ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜಯಶಾಲಿಗಳಾಗಿದ್ದ ಭಾರತೀಯ ಮೂಲದ 10ಮಂದಿ ಈದಿನ ಆರಂಭವಾದ ಮಲೇಷ್ಯಾದ ಸಂಸತ್ತಿನ 12ನೇ ಅಧಿವೇಶನದಲ್ಲಿ ಶಾಸಕರಾಗಿ  ಪ್ರಮಾಣ ವಚನ ಸ್ವೀಕರಿಸಿದರು. ಅಬ್ದುಲ್ಲಾ ಅಹಮದ್ ಬದಾವಿ ನೇತೃತ್ವದ್ಲಲಿ ಆಡಳಿತಾರೂಢ ಬರಿಸಾನ್ ನಾಸಿಯೊನಾಲ್ (ಬಿಎನ್) ಪಕ್ಷ ಮಲೇಷ್ಯಾದ ಇತಿಹಾಸದಲ್ಲೇ ಎರಡನೇ ಬಾರಿಗೆ ಮೂರನೇ ಎರಡರಷ್ಟು ಬಹುಮತ ಗಳಿಸಿತು.

2008: ಪ್ರತಿಷ್ಠಿತ ಫೋರ್ಬ್ಸ್ ಪತ್ರಿಕೆಯ ಪಟ್ಟಿಯಲ್ಲಿ ದಾವೂದ್ ಇಬ್ರಾಹಿಂ ಸ್ಥಾನ ಗಳಿಸಿದ್ದಾನೆ! ಸೌಂದರ್ಯ ಅಥವಾ ಆಕರ್ಷಕ ಪುರುಷ ಎಂಬ ಕಾರಣಕ್ಕಾಗಿ ಅಲ್ಲ, ದೇಶಭ್ರಷ್ಟತೆಯ ಕಾರಣಕ್ಕಾಗಿ. ಫೋರ್ಬ್ಸ್ ತಯಾರಿಸಿದ ವಿಶ್ವದ ಪ್ರಮುಖ ಹತ್ತು ದೇಶಭ್ರಷ್ಟರ ಪಟ್ಟಿಯಲ್ಲಿ ಅಲ್ ಖೈದಾದ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್  ಮೊದಲ ಸ್ಥಾನದಲ್ಲಿದ್ದರೆ, ಮುಂಬೈ ಮೂಲದ ದಾವೂದ್ ಇಬ್ರಾಹಿಂ ಮತ್ತು ಆತನ `ಡಿ' ಕಂಪನಿ ನಾಲ್ಕನೇ ಸ್ಥಾನ ಗಳಿಸಿತು. 1993ರ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ ಎನ್ನಲಾದ ಭೂಗತ ದೊರೆ ದಾವೂದ್ (52) ಈಗ ಪಾಕಿಸ್ಥಾನದಲ್ಲಿ ಇರಬಹುದು ಎಂಬ ಶಂಕೆ ಇದ್ದು, ಈತ ಅಲ್ ಖೈದಾ ಜೊತೆ ಸಂಪರ್ಕ ಹೊಂದಿದ್ದಾನೆ ಎಂದು ಅಮೆರಿಕ ಘೋಷಿಸಿದೆ.  ಪೊಲೀಸರಿಗೆ ತನ್ನ ಗುರುತು ಸಿಗಬಾರದೆಂದು ದಾವೂದ್ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರಬಹುದೆಂದೂ `ಫೋರ್ಬ್ಸ್' ಹೇಳಿತು.

2008: ತನ್ನ ಸ್ವಂತ ಮಗಳನ್ನೇ 24 ವರ್ಷಗಳ ಕಾಲ ಮನೆಯಲ್ಲಿ ಸೆರೆಯಾಗಿಟ್ಟು, ಮಗಳಿಗೇ 7 ಮಕ್ಕಳನ್ನು ಕರುಣಿಸಿದ ಆಸ್ಟ್ರೇಲಿಯಾದ 73 ವರ್ಷದ ಜೋಸೆಫ್ ಎಂಬ ತಂದೆಯೊಬ್ಬ ಇದೀಗ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದು ತನ್ನ `ಪಾಪಕೃತ್ಯ'ಕ್ಕೆ ಪಶ್ಚಾತ್ತಾಪ ಪಟ್ಟಿದ್ದಾನೆ ಎಂದು ಆಸ್ಟ್ರಿಯಾ ಸುದ್ದಿ ವಾಹಿತಿನಯೊಂದು ವರದಿ ಮಾಡಿತು. ತಂದೆಯಿಂದಲೇ ಮಕ್ಕಳನ್ನು ಪಡೆದಿರುವ ಮಗಳು ಎಲಿಜಬೆತ್ ಫ್ರಿಜ್ ಹಾಗೂ ಆಕೆಯ ಮಕ್ಕಳು  ಸೆರೆಯಾಗಿರುವ ಸ್ಥಳವನ್ನು ಪೊಲೀಸರು ಹುಡುಕುತ್ತಿದ್ದಾರೆ ಎಂದು ವರದಿ ಹೇಳಿತು.

 2008:  ಚೀನಾದ ಪೂರ್ವ ಭಾಗದ ಶಾಂಡೊಂಗ್ ಪ್ರಾಂತ್ಯದಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಪಕ್ಷ 60 ಮಂದಿ ಸತ್ತು 400ಕ್ಕೂ ಹೆಚ್ಚು ಮಂದಿ ಗಾಯಗೊಂಡರು. 57 ಜನರು ಸ್ಥಳದಲ್ಲಿಯೇ ಮೃತರಾದರೆ ಮೂವರು ಆಸ್ಪತ್ರೆಯಲ್ಲಿ ಅಸು ನೀಗಿದರು. ಬೀಜಿಂಗಿನಿಂದ ಕ್ವಿಂಗಾಡೊಗೆ ತೆರಳುತ್ತಿದ್ದ ಪ್ರಯಾಣಿಕರ ರೈಲು ಹಳಿ ತಪ್ಪಿ ಯಂತಾಯಿ  ರೈಲಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿತು.

2008: ಪಾಕಿಸ್ಥಾನದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಗೆ ನಡೆಸಿದ ಹೋರಾಟಕ್ಕಾಗಿ ಮಾಜಿ ಪ್ರಧಾನಿ ದಿ. ಬೆನಜೀರ್ ಭುಟ್ಟೊ ಅವರಿಗೆ ಪ್ರತಿಷ್ಠಿತ  ತಿಪ್ಪೆರರಿ ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿಯನ್ನು ಮರಣೋತ್ತರವಾಗಿ      ನೀಡಲಾಯಿತು. ಭುಟ್ಟೊ ಅವರ ದೀರ್ಘ ಕಾಲದ ನಿಕಟವರ್ತಿ ಬಶೀರ್ ರೈಜಾ ಅವರು ಭುಟ್ಟೊ ಕುಟುಂಬದ ಪರವಾಗಿ ಐರ್ಲೆಂಡಿನಲ್ಲಿ ನಡೆದ  ಹೃದಯಸ್ಪರ್ಶಿ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪಡೆದುಕೊಂಡರು.

2008: ಕರ್ನಾಟಕದಲ್ಲಿನ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಖಾಸಗಿ ವೈದ್ಯಕೀಯ ಕಾಲೇಜುಗಳ ಸಂಘವು ಸಲ್ಲಿಸಿದ್ದ `ಸೂತ್ರ'ಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿತು. ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಖಾಸಗಿ ವೈದ್ಯಕೀಯ ಕಾಲೇಜುಗಳ ಸಂಘವು ವೈದ್ಯಕೀಯ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕಳೆದ ವರ್ಷ ಜಾರಿಗೆ ತಂದಿದ್ದ `ಸೂತ್ರ'ವನ್ನೇ ಒಪ್ಪಿಕೊಂಡಿವೆ ಎಂದು ನ್ಯಾಯಮೂರ್ತಿ ಬಿ.ಎನ್.ಅಗರವಾಲ್ ನೇತೃತ್ವದ ನ್ಯಾಯಪೀಠವು ತಿಳಿಸಿತು.

2008: ರೋಗಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ವಿಕ್ಟೋರಿಯಾ ಆಸ್ಪತ್ರೆ ವೈದ್ಯ ಡಾ. ಪ್ರಕಾಶ್ ಕಪಾಟೆ ಅವರಿಗೆ ಒಂದು ವರ್ಷ ಶಿಕ್ಷೆ ಮತ್ತು ಎರಡು ಸಾವಿರ ರೂಪಾಯಿ ದಂಡ ವಿಧಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶ ನೀಡಿತು. ಕ್ಯಾನ್ಸರಿನಿಂದ ಬಳಲುತ್ತಿದ್ದ ಚಿಂತಾಮಣಿಯ ಐಮರೆಡ್ಡಿಹಳ್ಳಿಯ ರಾಮಣ್ಣ ಎಂಬುವರು 2000ನೇ ಸಾಲಿನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ರಾಮಣ್ಣ ಅವರಿಗೆ ರೆಡಿಯೋಥೆರೆಫಿ ಮಾಡಲು ಪ್ರಕಾಶ್ ಎರಡು ಸಾವಿರ ರೂಪಾಯಿ ಲಂಚ ಕೇಳಿದ್ದರು. ಈ ಬಗ್ಗೆ ರಾಮಣ್ಣ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಒಂದು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿದ್ದ ತನಿಖಾ ತಂಡ ಪ್ರಕಾಶ್ ಅವರನ್ನು ಬಂಧಿಸಿತ್ತು. ಲೋಕಾಯುಕ್ತದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವೈ.ಆರ್. ಜಗದೀಶ್ ವಾದ ಮಂಡಿಸಿದ್ದರು. ವಿಶೇಷ ನ್ಯಾಯಾಧೀಶರಾದ ಆರ್.ಎಂ. ಶೆಟ್ಟರ್ ಅವರು ಮೇಲಿನ ಆದೇಶ ನೀಡಿದರು.

2006: ಎಚ್. ಟಿ. ಮೀಡಿಯಾ ಲಿಮಿಟೆಡ್ ಉಪಾಧ್ಯಕ್ಷೆ ಶೋಭನಾ ಭಾರ್ತಿಯಾ ಮತ್ತು ಪಯೋನೀರ್ ಸಂಪಾದಕ ಚಂದನ್ ಮಿತ್ರ ಅವರನ್ನು ರಾಜ್ಯಸಭಾ ಸದಸ್ಯರಾಗಿ ನೇಮಕ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತು. ಸಾರ್ವಜನಿಕ ಹಿತಾಸಕ್ತಿ ವ್ಯಾಜ್ಯಗಳ ಕೇಂದ್ರ (ಸಿಪಿಐಎಲ್) ತನ್ನ ಅರ್ಜಿಯಲ್ಲಿ ಮೇಲ್ಮನೆಗೆ ಮಾಡಲಾದ ಇವರಿಬ್ಬರ ನಾಮಕರಣ ಸಂವಿಧಾನದ 80 (3) ವಿಧಿಯಡಿಯಲ್ಲಿ ಸೂಚಿತವಾಗಿರುವ ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಸಮಾಜ ಸೇವೆ ಈ ವರ್ಗಗಳ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿತ್ತು. ನ್ಯಾಯಮೂರ್ತಿ ರುಮಾ ಪಾಲ್ ನೇತೃತ್ವದ ಪೀಠವು ಸಮಾಜ ಸೇವೆ ಶಬ್ಧದ ಅರ್ಥವ್ಯಾಪ್ತಿ ಇಂತಹ ಪ್ರಕರಣಗಳು ಒಳಗೊಳ್ಳುವಷ್ಟು ವಿಶಾಲವಾಗಿದೆ ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿದರು.

2006: ಯುತ್ ಐಕಾನ್ ಹೆಸರಿನ ಮೊಹರು ಮಾಡಲಾದ ಸ್ಪೈಟ್ ಬಾಟಲಿಯೊಳಗೆ ಸತ್ತ ಕೀಟಗಳು ಇದ್ದುದಕ್ಕಾಗಿ 1.20 ಲಕ್ಷ ರೂಪಾಯಿಗಳ ಪರಿಹಾರವನ್ನು ಗ್ರಾಹಕನಿಗೆ ನೀಡುವಂತೆ ದೆಹಲಿಯ ಗ್ರಾಹಕ ನ್ಯಾಯಾಲಯವೊಂದು ಕೋಕಾ-ಕೋಲಾ ಕಂಪೆನಿಗೆ ಆದೇಶಿಸಿತು.

2006: ಹೌ ಓಪಲ್ ಮೆಹ್ತಾ ಗಾಟ್ ಕಿಸ್ಡ್, ಗಾಟ್ ವೈಲ್ಡ್ ಅಂಡ್ ಗಾಟ್ ಎ ಲೈಫ್ ಕಾದಂಬರಿ ಕರ್ತೃ ಭಾರತೀಯ ಮೂಲದ ಲೇಖಕಿ ಕಾವ್ಯ ವಿಶ್ವನಾಥನ್ ಕೃತಿಚೌರ್ಯ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಕಾದಂಬರಿ ಪ್ರಕಟಿಸಿದ ಪ್ರಕಾಶನ ಸಂಸ್ಥೆಯ ಲಿಟ್ಲ್ ಬ್ರೌನ್ ಕಾದಂಬರಿಯ ಎಲ್ಲ ಪ್ರತಿಗಳನ್ನು ಮಾರುಕಟ್ಟೆಯಿಂದ ವಾಪಸ್ ಪಡೆಯಲು ನಿರ್ಧರಿಸಿತು. 

2006: ಪಣಜಿ ಸಮೀಪದ ವಾಸೊದಲ್ಲಿ ಭಾರತೀಯ ಕರಾವಳಿ ಕಾವಲು ಪಡೆಗೆ ಅತ್ಯಂತ ದೊಡ್ಡದಾದ ಅತ್ಯಾಧುನಿಕ ಕರಾವಳಿ ಕಡಲು ಪಹರೆ ನೌಕೆ 105 ಮೀಟರ್ ಉದ್ದದ ಐಜಿಜಿಎಸ್ ಸಂಕಲ್ಪ ಸೇರ್ಪಡೆಗೊಂಡಿತು.

2006: ಲಾಟರಿ ಟಿಕೆಟ್ಟುಗಳ ಮಾರಾಟದ ಮೇಲೆ ರಾಜ್ಯ ಸರ್ಕಾರಗಳು ತೆರಿಗೆ ವಿಧಿಸುವಂತಿಲ್ಲ ಎಂದು ಭಾರತದ ಸುಪ್ರೀಂಕೋರ್ಟ್ ತೀರ್ಪು ನೀಡಿತು. ನ್ಯಾಯಮೂರ್ತಿ ರುಮಾ ಪಾಲ್ ನೇತೃತ್ವದ ಪಂಚಸದಸ್ಯ ಸಂವಿಧಾನ ಪೀಠವು 1986ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ  ತೀರ್ಪನ್ನು ತಳ್ಳಿಹಾಕಿ ಈ ತೀರ್ಪನ್ನು ನೀಡಿತು. ಲಾಟರಿ ಟಿಕೆಟ್ಟುಗಳ ಮಾರಾಟವನ್ನು ವಸ್ತುಗಳ ಮಾರಾಟಕ್ಕೆ ಸಮಾನವಾಗಿ ನೋಡಲಾಗದು. ಆದ್ದರಿಂದ ಅದರ ಮೇಲೆ ತೆರಿಗೆ ವಿಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಪಂಚಸದಸ್ಯ ಪೀಠ ಹೇಳಿತು. ಲಾಟರಿ ಟಿಕೆಟ್ಟುಗಳ ಮಾರಾಟದ ಮೇಲೆ ತೆರಿಗೆ ವಿಧಿಸಬಹುದು ಎಂದು 1986ರಲ್ಲಿ ನೀಡಲಾಗಿದ್ದ ತನ್ನ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಹೇಳಿತ್ತು. 

1946: ಭಾಷೆ ಹಾಗೂ ಕೋಶ ವಿಜ್ಞಾನಿ, ಸಂಶೋಧಕ ಪ್ರೊ. ಎ.ವಿ. ನಾವಡ ಅವರು ಮಂಗಳೂರು ಸಮೀಪದ ಕೋಟೆಕಾರಿನಲ್ಲಿ ಕವಿ ಅಮ್ಮೆಂಬಳ ಶಂಕರನಾರಾಯಣ ನಾವಡ- ಪಾರ್ವತಿ ದಂಪತಿಯ ಪುತ್ರರಾಗಿ ಜನಿಸಿದರು. 

1945: ಇಟೆಲಿಯ ಸರ್ವಾಧಿಕಾರಿ ಬೆನಿಟೋ ಮುಸ್ಸೋಲಿನಿ ಮತ್ತು ಆತನ ಪ್ರೇಯಸಿ ಕ್ಲಾರಾ ಪೆಟಾಸ್ಸಿಯನ್ನು ಅವರು ರಾಷ್ಟ್ರದಿಂದ ಪರಾರಿಯಾಗಲು ಯತ್ನಿಸುತ್ತಿದ್ದಾಗ ಕೊಲ್ಲಲಾಯಿತು. ತಲೆಕೆಳಗಾಗಿ ನೇತಾಡುತ್ತಿದ್ದ ಅವರ ಶವಗಳು ಮಿಲಾನಿನ ಪಿಯಾಝಾ ಲೊರೆಟೊದಲ್ಲಿ ಪತ್ತೆಯಾದವು.

1937: ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಂ ಹುಸೇನ್ ಜನ್ಮದಿನ. 1979ರಿಂದ ಇತ್ತೀಚೆಗೆ ಅಮೆರಿಕ ಪಡೆಗಳು ದಾಳಿ ನಡೆಸುವವರೆಗೂ ಈತ ಇರಾಕಿನ ಅಧ್ಯಕ್ಷನಾಗಿದ್ದ.

1928: ಇ.ಎಂ. ಶೂಮೇಕರ್ (1928-97) ಹುಟ್ಟಿದ ದಿನ.  ಅಮೆರಿಕದ ಖಭೌತ ತಜ್ಞನಾದ ಈತ ಚಂದ್ರನ ಮಣ್ಣಿನ ಪದರ ಹಾಗೂ ಒಡೆದ ಕಲ್ಲುಗಳಿಗೆ `ರಿಗೋಲಿತ್' ಎಂದು ಹೆಸರಿಟ್ಟ. 1994ರಲ್ಲಿ ಗುರುಗ್ರಹಕ್ಕೆ ಡಿಕ್ಕಿ ಹೊಡೆದ ಪಿ/ಶೂಮೇಕರ್-ಲೆವಿ 9 ಧೂಮಕೇತುವನ್ನೂ ಈತ ಸಂಶೋಧಿಸಿದ.

1924: ಕೆನ್ನೆತ್ ಕೌಂಡಾ ಜನ್ಮದಿನ. 1961ರಲ್ಲಿ ಜಾಂಬಿಯಾಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಈತ 1991ರವರೆಗೂ ಅಲ್ಲಿನ ಅಧ್ಯಕ್ಷನಾಗಿದ್ದ.

1865: ಸ್ಯಾಮುಯೆಲ್ ಕ್ಯುನಾರ್ಡ್ 77ನೇ ವಯಸಿನಲ್ಲಿ ಮೃತನಾದ. ಬ್ರಿಟಿಷ್ ವರ್ತಕನಾದ ಈತ ಬ್ರಿಟಿಷ್ ಸ್ಟೀಮ್ ಶಿಪ್ ಕಂಪೆನಿಯ ಸ್ಥಾಪಕ. ಈ ಕಂಪೆನಿಗೆ ಆತನ ಹೆಸರನ್ನೇ ಇಡಲಾಗಿತ್ತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement