Tuesday, May 5, 2009

ನಿಮಗೆ ಗೊತ್ತಾ? ಇದು 'ಕಾಮದುಘಾ'..!

ನಿಮಗೆ ಗೊತ್ತಾ? ಇದು 'ಕಾಮದುಘಾ'..!


ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಪೀಠಾರೋಹಣವಾಗಿ ಹತ್ತು ವರ್ಷಗಳು ಸಂದಿವೆ. ಈ ಅವಧಿಯಲ್ಲಿ ಅವರ ನೇತೃತ್ವದಲ್ಲಿ ಶ್ರೀ ರಾಮಚಂದ್ರಾಪುರ ಮಠವು ಹಮ್ಮಿಕೊಂಡ ಕಾರ್ಯಕ್ರಮಗಳು ಹತ್ತಾರು. ಅವೆಲ್ಲವುಗಳ ಪೈಕಿ ಸ್ವಾಮೀಜಿಯವರಿಗೆ ಅತ್ಯಂತ ಪ್ರಿಯವೂ, ಲೋಕಕ್ಕೆ ಅತ್ಯಂತ ಉಪಯುಕ್ತವೂ ಆದ ಯೋಜನೆ ಕಾಮದುಘಾ. ಅದಕ್ಕಾಗಿಯೇ ಈ ಸಂದರ್ಭದಲ್ಲಿ ಇಲ್ಲಿ 'ಕಾಮದುಘಾ' ಯೋಜನೆಯ ಒಂದು ಸ್ಥೂಲ ಪರಿಚಯ. ಈ ಲೇಖನದ ಜೊತೆಗೇ ಪೀಠಾರೋಹಣ ದಶಮಾನೋತ್ಸವ ಪ್ರಯುಕ್ತ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮ ವಿವರಗಳನ್ನು ಒಳಗೊಂಡ ಆಮಂತ್ರಣವೂ ಕೆಳಗಿದೆ. ಕ್ಲಿಕ್ ಮಾಡಿ ಅದನ್ನು ಪೂರ್ತಿಯಾಗಿ ನೋಡಬಹುದು.
 
ಭಾರತೀಶ

ನಾಡಿನೆಲ್ಲೆಡೆ 'ಕಾಮದುಘಾ' ಯೋಜನೆ ಮನೆಮಾತಾಗಿದೆ.  ಬೇಡಿದ್ದನ್ನು ಕರೆಯುವ' ಯೋಜನೆಗೆ ನಾಲ್ಕು ಆಯಾಮಗಳು - ಗೋ ಸಂರಕ್ಷಣೆ, ಸಂವರ್ಧನೆ, ಸಂಶೋಧನೆ ಹಾಗೂ ಸಂಬೋಧನೆ.

ಇದು ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಕನಸಿನ ಕೂಸು. ನಮ್ಮ ದೇಶೀ ಗೋವುಗಳ ದುಸ್ಥಿತಿಯನ್ನು ಮನಗಂಡ ಶ್ರೀಗಳು, ಗೋವುಗಳನ್ನು ದುಸ್ಥಿತಿಯಿಂದ ಮೇಲೆತ್ತುವುದನ್ನೇ ತಮ್ಮ ಜೀವಿತದ ಸಂಕಲ್ಪವಾಗಿಸಿಕೊಂಡರು. ಅದರಂತೆ ಶ್ರೀಗಳು ತಮ್ಮ ಪೀಠಾರೋಹಣದ ಸಂದರ್ಭದಲ್ಲಿ ಅಂದರೆ 1998ರ ಏಪ್ರಿಲ್  28ರಂದು ಕಾಮದುಘಾ'ಯೋಜನೆಯ ಘೋಷಣೆ ಮಾಡಿದರು.

1998ರ ಘೋಷಣೆ 2000ದಲ್ಲಿ ಓಂಗೋಲ್ ತಳಿಯ ಮಹಾನಂದಿಯ ಆಗಮನದೊಂದಿಗೆ ರೂಪ ಪಡೆಯಲು ಆರಂಭಿಸಿತು.

ಅದರೊಟ್ಟಿಗೆ ಸಾಹಿವಾಲ್ ಹಾಗೂ ಡಾಂಗಿ ತಳಿಯ ಗೋವುಗಳನ್ನೂ ತರಲಾಗಿತ್ತು. ಅಲ್ಲಿಂದ ದೇಶದಲ್ಲಿ ಉಳಿದಿರುವ 33 ತಳಿಯ
ಗೋವುಗಳ ಸಂಗ್ರಹ ಕಾರ್ಯ ಪ್ರಾರಂಭವಾಯಿತು.

ಅಲ್ಲಿಂದ ಮುಂದಕ್ಕೆ ಯೋಜನೆ ಹಲವಾರು ಮಜಲುಗಳಲ್ಲಿ ಬೆಳೆಯುತ್ತಾ ಹೋಗಿ, ಇಂದು ವಿಶ್ವವ್ಯಾಪಿ ಮನ್ನಣೆಯನ್ನು ಪಡೆಯುತ್ತಿದೆ.

ದೊಡ್ಡ ಆಕರ್ಷಣೆ: ಹೊಸನಗರದ ಅಮೃತಧಾರಾ ಗೋಲೋಕ. ಅಲ್ಲಿ ಭಾರತದಲ್ಲಿ ಸದ್ಯ ಲಭ್ಯವಿರುವ 33 ತಳಿಯ ಗೋವುಗಳಲ್ಲಿ 30 ತಳಿಯವುಗಳ ಸಂಗ್ರಹ ಇದೆ.

ಅಲ್ಲಿರುವ ತಳಿಗಳು : ಮಲೆನಾಡು ಗಿಡ್ಡ, ಅಮೃತ ಮಹಲ್, ಹಳ್ಳಿಕಾರ್, ಖಿಲಾರಿ, ಜವಾರಿ, ಕೃಷ್ಣಾ ತೀರ, ದೇವನಿ, ಡಾಂಗಿ,  ಗೌಳವ್, ಲಾಲ್ ಕಂದಾರಿ, ವೆಚೂರ್, ಕಾಸರಗೋಡು, ಅಂಬ್ಲಾ ಚೆರಿ, ಬರಗೂರು, ಓಂಗೋಲ್, ಗಿರ್, ಥಾರ್ ಪಾರ್ಕರ್, ಸಾಹಿವಾಲ್, ಸಿಂಧಿ, ಕಾಂಕ್ರೇಜ್, ರಾಠಿ, ಹರ್ಯಾಣಾ, ಮಾಳ್ವಿ, ನಿಮಾರಿ, ನಾಗೋರಿ, ಗಂಗಾತಿರಿ, ಕೆಂಕಾಥ, ಪೊನ್ವರ್, ಕೇರಿಘರ್, ಕಂಗಾಯಮ್.

ಗೋಶಾಲೆಗಳ ಸ್ಥಾಪನೆ : 13 ಕಡೆಗಳಲ್ಲಿ - ಹೊಸನಗರ, ಕಗ್ಗಲೀಪುರ, ಮುಳಿಯ, ಬಜಕೂಡ್ಲು, ಬೋಗಾದಿ, ಕೋಲ್ಹಾಡ,
ಹೊಸಾಡ, ಕೈರಂಗಳ, ಶೀರೂರು, ಮಾಣಿ, ಕೊಲ್ಲಮೊಗರು, ಮಾಲೂರು, ರಾಣಿಬೆನ್ನೂರು. ಒಟ್ಟು 2000ದಷ್ಟು ಗೋವುಗಳನ್ನು
ಲಾಲಿಸಿ, ಪಾಲಿಸಿ, ಪೋಷಿಸಲಾಗುತ್ತಿದೆ. ಗೋಕರ್ಣದಲ್ಲಿ 1000 ನಂದಿಗಳ ಗೋಶಾಲೆಯ ಘೋಷಣೆಯಾಗಿದೆ. ದೇಶದೆಲ್ಲೆಡೆ ಒಟ್ಟು
108 ಗೋಶಾಲೆಗಳ ಸ್ಥಾಪನೆಯ ಯೋಜನೆ ಇದೆ.

ಅಳಿವಿನ ಅಂಚಿನಲ್ಲಿರುವ ತಳಿಗಳ ಸಂವರ್ಧನೆಗೆ ವಿಶೇಷ ಕೇಂದ್ರಗಳು : ಮಲೆನಾಡು ಗಿಡ್ಡ ತಳಿ ಮುಳಿಯ, ಕೈರಂಗಳ,  ಭಾನ್ಕುಳಿ ; ಕಾಸರಗೋಡು ತಳಿ - ಬಜಕೂಡ್ಲು ; ಕೃಷ್ಣಾತೀರ ತಳಿ - ಹೊಸನಗರ.

ಗೋ ಸಂಜೀವಿನೀ : ಮಾರುಕಟ್ಟೆಯಲ್ಲಿ ಕಸಾಯಿಖಾನೆಗೆ ಮುಖಮಾಡಿದ ಗೋವುಗಳನ್ನು ಖರೀದಿಸುವ ವಿಶಿಷ್ಟ ಯೋಜನೆ.

ಗೋಬ್ಯಾಂಕ್ : ಕುಮಟಾದ ಹೊಸಾಡದಲ್ಲಿದೆ. ಇದೊಂದು ಹೊಸ ಕಲ್ಪನೆ. ಇಲ್ಲಿ ಗೋವುಗಳೇ ವ್ಯವಹಾರದ ಮಾಧ್ಯಮ. ಬರಗಾಲ
ಹಾಗೂ ಇನ್ನಿತರ ವಿಕೋಪಗಳ ಸಂದರ್ಭದಲ್ಲಿ ಕೃಷಿಕರು ತಮ್ಮ ಗೋವುಗಳನ್ನು ಇಲ್ಲಿ ತಂದು ಬಿಡಬಹುದು ಹಾಗೂ ಪರಿಸ್ಥಿತಿ
ಸುಧಾರಿಸಿದ ಅನಂತರದಲ್ಲಿ ಅವುಗಳನ್ನು ಉಚಿತವಾಗಿ ವಾಪಸ್ ಪಡೆಯಬಹುದು. ಅಲ್ಲದೇ, ಅನಾಥ ಗೋವುಗಳನ್ನು ಸಾಕಿ-
ಸಲಹುವುದು ಮತ್ತು ಆಸಕ್ತ ಪೋಷಕರಿಗೆ ವಿತರಿಸುವುದೂ ಉಂಟು

ಗೋ ಮಹಾದಾನ : ಸುಮಾರು 3000ಕ್ಕಿಂತಲೂ ಹೆಚ್ಚು ಗೋವುಗಳನ್ನು ಅರ್ಹ ರೈತರಿಗೆ ದಾನವಾಗಿ ಕೊಡಲಾಗಿದೆ.

ಗವ್ಯೋತ್ಪನ್ನಗಳ ಉತ್ಪಾದನೆ : ಗೋಮೂತ್ರ ಅರ್ಕ ಎಲ್ಲರಿಗೂ ಸುಪರಿಚಿತ. ಅದು ಕ್ಯಾನ್ಸರ್, ಸಕ್ಕರೆ ಕಾಯಿಲೆ, ರಕ್ತದೊತ್ತಡ
ಸಮಸ್ಯೆಗಳಿಗೆ ಉತ್ತಮ ಪರಿಹಾರ ಎಂಬುದೇ ಅದರ ಅಗ್ಗಳಿಕೆ. ಪಂಚಗವ್ಯಗಳಾದ ಗೋಮೂತ್ರ, ಗೋಮಯ, ಹಾಲು, ಮೊಸರು,
ತುಪ್ಪಗಳೊಂದಿಗೆ ಆಯುರ್ವೇದ ಗಿಡಮೂಲಿಕೆಗಳನ್ನು ಸೇರಿಸಿ 25ಕ್ಕೂ ಹೆಚ್ಚು ದಿನ ಬಳಕೆಯ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಅರಶಿನ, ಕುಂಕುಮ, ಸಾಬೂನು, ಶ್ಯಾಂಪೂ, ದಂತಮಂಜನ; ಔಷಧಗಳಾದ ಪಂಚ ಗವ್ಯಾಮೃತ, ಘನವಟಿ, ಕ್ಷಾರವಟಿ, ನಿವೇದನ ಮುಲಾಮು ; ಫಲವತಿ ಎರೆ ಗೊಬ್ಬರ, ಕೀಟನಾಶಕ ಮೊದಲಾದ ಪದಾರ್ಥಗಳ ಸರಣಿಯೇ ಇದೆ.

ಗವ್ಯ ಚಿಕಿತ್ಸಾಲಯಗಳು : ಹೊಸನಗರ, ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿವೆ.

ಪ್ರಕಾಶನಗಳು : ಪುಸ್ತಕಗಳು - ಜಗನ್ಮಾತೆ ಗೋವು, ಗೋ ಆಧಾರಿತ ಕೃಷಿ, ವಿಶ್ವ ಜನನಿ; ಸಿಡಿ ಗೋವಂಶ ವೈಭವ, ಗೋವಿನ
ಹಾಡುಗಳು.

ಗೋ ವಿಶ್ವಕೋಶ : ತಯಾರಿಯ ಹಂತದಲ್ಲಿದೆ. ಸದ್ಯ ನಾಲ್ಕು ಖಂಡಗಳು ಪ್ರಕಾಶಗೊಳ್ಳಲಿವೆ.

ಗೋ ಸಂಬಂಧೀ 'ಇ-ಪತ್ರಿಕೆ : ಕನ್ನಡ ಮಾಸ ಪತ್ರಿಕೆ 'ಗೋವಿಶ್ವ' ಕಳೆದ 20 ತಿಂಗಳುಗಳಿಂದ ಪ್ರಸಾರವಾಗುತ್ತಿದೆ. ಜೊತೆಗೆ ಕೌ ಯುನಿವರ್ಸ್ ಎಂಬ ಇಂಗ್ಲಿಷ್ ಆವೃತ್ತಿಯೂ ಬರುತ್ತಿದೆ.

ಗೋ ಪರಿವಾರ : ರಾಷ್ಟ್ರದಿಂದ ಗ್ರಾಮ ಮಟ್ಟದವರೆಗೆ ವಿವಿಧ ಹಂತಗಳಲ್ಲಿ ಗೋ ಪ್ರೇಮಿಗಳ ಏಕ ಸೂತ್ರಿತ ಸಂಘಟನೆ ರೂಪು ಗೊಳ್ಳುತ್ತಿದೆ.

ದತ್ತ ಶಂಕರ ಗೋಯಾತ್ರೆ : ಇದು ಉತ್ತರ ದಕ್ಷಿಣಗಳ ಸೇತುವೆಯಾಗಿ ಮಾರ್ಪಟ್ಟಿತು. ಈ ಯಾತ್ರೆಯಲ್ಲಿ ರಾಜಸ್ಥಾನದ ಕಾಂಕ್ರೇಜ್ ಗೋವುಗಳನ್ನು ದಕ್ಷಿಣದ (ಸಾವಿರಾರು) ರೈತರಿಗೆ ವಿತರಿಸಲಾಯಿತು.

ಭಾರತೀಯ ಗೋಯಾತ್ರೆ (2005-06) : ಭಾರತೀಯ ಗೋ ತಳಿಗಳ ಬಗೆಗೆ ಜಾಗೃತಿ ಮೂಡಿಸುವ ಸಲುವಾಗಿ ಯಾತ್ರೆಯನ್ನು
ಹಮ್ಮಿಕೊಳ್ಳಲಾಯಿತು. ಈ ಯಾತ್ರೆ ದಕ್ಷಿಣ ಭಾರತದಲ್ಲಿ 5830 ಕಿಮೀಗಳ ಪಥವನ್ನು ಕ್ರಮಿಸಿತು.

ಗೋ ಸಂಸತ್ (2006-07) : ಸಂಸತ್ ಚರ್ಚೆಯ ಮಾದರಿಯಲ್ಲಿ ಚರ್ಚೋಪಚರ್ಚೆ. ಗೋವುಗಳ ಬಗೆಗೆ ಜನ ಸಾಮಾನ್ಯರಿಗೆ ಇರುವ ಸಂದೇಹ ಪರಿಹಾರಕ್ಕೆ. ಕರ್ನಾಟಕ, ಕೇರಳ ಭಾಗಗಳಲ್ಲಿ ನಡೆಯಿತು. ವಿಶ್ವ ಗೋ ಸಮ್ಮೇಳನದಲ್ಲಿ ಸಮಾರೋಪಗೊಂಡಿತು.

ವಿಶ್ವ ಗೋ ಸಮ್ಮೇಳನ (2007) : ಜಗದೊಳಿತಿಗಾಗಿ ಜಗನ್ಮಾತೆಯ ಜಾಗತಿಕ ಹಬ್ಬ. ಏಪ್ರಿಲ್ 21 ರಿಂದ 29ರ ವರೆಗೆ ಹೊಸನಗರದ ಶ್ರೀರಾಮಚಂದ್ರಾಪುರಮಠದಲ್ಲಿ ಒಟ್ಟು ಒಂಭತ್ತು ದಿನಗಳ ಕಾಲ ನಡೆಯಿತು. ಸಮಾಜದ ಸಮಸ್ತರೂ ಸಮ್ಮೇಳನದಲ್ಲಿ ಪಾಲ್ಗೊಂಡು ದೇಶೀ ಗೋವುಗಳ ಬಗೆಗೆ ಚಿಂತನೆ ನಡೆಸಿದರು.

ಗೋ ಸಂಧ್ಯಾ (2007) : ಬೆಂಗಳೂರಿನ 16ಕ್ಕೂ ಹೆಚ್ಚು ಕೇಂದ್ರಗಳಲ್ಲಿ. ಜುಲೈನಿಂದ ನವಂಬರವರೆಗೆ. ಗೋವಿನ ಬಗೆಗೆ
ಜಾಗೃತಿ ಮೂಡಿಸುವ ಕಾರ್ಯಕ್ರಮ ಸರಣಿ.

ಕೋಟಿ ನೀರಾಜನ (2007) : ಸುಮಾರು ಒಂದು ಲಕ್ಷ ಮಾತೆಯರು ಗೋವಿಗೆ ಮಂಗಳ ನೀರಾಜನ ಗೈದ ಅಪೂರ್ವ ಕ್ಷಣಗಳಿವು.
ನವೆಂಬರ್ 18ರಂದು ಬೆಂಗಳೂರಿನ ಅರಮನೆ ಮೈದಾನ ಈ ಅಪರೂಪದ ನೋಟಕ್ಕೆ ಸಾಕ್ಷಿಯಾಯಿತು.

ದೀಪಗೋಪುರ (2008) : ಧಾರವಾಡವನ್ನು ದೇಶದ ಮೊದಲ 'ಗೋ ಅಭಯ ಜಿಲ್ಲೆ' ಮಾಡಲು ಸಂಕಲ್ಪ ತೊಟ್ಟ ಕಾರ್ಯಕ್ರಮ
ಇದಾಗಿದೆ. ಏಪ್ರಿಲ್ 9ರಂದು ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಡೆಯಿತು. 20,000ಕ್ಕೂ ಅಧಿಕ ಮಾತೆಯರು ಗೋವಿಗೆ ಮಂಗಳ ನೀರಾಜನ ಗೈದರು.

ವಿಶ್ವ ಮಂಗಲ ಗೋ ಗ್ರಾಮ ಯಾತ್ರೆ (2009-10) : ಇದು ಅಖಂಡ ಭಾರತವನ್ನು ಗೋವೆಂಬ ಏಕ ಸೂತ್ರದಲ್ಲಿ ಬೆಸೆಯುವ
ಅಪೂರ್ವ ಯಾತ್ರೆ. ಗೋ ಆಧಾರಿತ ಗ್ರಾಮ ಜೀವನಕ್ಕೆ ಮತ್ತೆ ಮರಳುವ ಆಶಯ ಇಟ್ಟುಕೊಂಡಿದೆ. ಶ್ರೀ ರಾಘವೇಶ್ವರಭಾರತೀ
ಮಹಾಸ್ವಾಮಿಗಳ ದಿವ್ಯ ಸಂಕಲ್ಪದ ಈ ಯಾತ್ರೆಗೆ ದೇಶದ ಸಂತ- ಮಹಂತರೆಲ್ಲರ ಬೆಂಬಲ ಸಿಕ್ಕಿದೆ. 

108 ದಿನಗಳ ಈ ಯಾತ್ರೆ ಸಪ್ಟೆಂಬರ್ 30ರಂದು ಕುರುಕ್ಷೇತ್ರದಲ್ಲಿ ಆರಂಭಗೊಳ್ಳಲಿದೆ. 20,000 ಕಿಮೀ ಸಂಚರಿಸುವ ಈ ಯಾತ್ರೆಯಲ್ಲಿ 50 ಕೋಟಿಗೂ ಹೆಚ್ಚಿನ ಸಹಿ ಸಂಗ್ರಹದ ನಿರೀಕ್ಷೆ ಇದೆ. ಗೋವಿಗೆ ಆಗುತ್ತಿರುವ ಹಿಂಸೆಯನ್ನು ತಡೆದು, ಗೋವಿಗೆ ರಾಷ್ಟ್ರೀಯ ಪ್ರಾಣಿಯ ಸ್ಥಾನಮಾನಗಳನ್ನು ಕಲ್ಪಿಸಿಕೊಡುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ.

ಇವೆಲ್ಲದರ ಒಟ್ಟಿಗೆ ಶ್ರೀಮಠ ಒಂದಂಶವನ್ನು ಮಾತ್ರ ಗಟ್ಟಿಯಾಗಿ ಪ್ರತಿಪಾದಿಸುತ್ತಲೇ ಇದೆ. ಕೇವಲ ಗೋಶಾಲೆಗಳಿಂದ ಗೋ ಸಂರಕ್ಷಣೆಯಾಗುವುದಿಲ್ಲ. ಅದಾಗುವುದಿದ್ದರೆ ರೈತನ ಮನೆಯಿಂದ ಮಾತ್ರ. ಗೋ ಸಾಕಾಣಿಕೆ ಲಾಭದಾಯಕವಾದಾಗ ಮಾತ್ರ ಅದು ಸಾಧ್ಯ. ಲಾಭದಾಯಕವಾಗಬೇಕಾದರೆ ಹಾಲಿನ ಜೊತೆಗೆ ಗೋಮೂತ್ರ, ಗೋಮಯಗಳ ಉದ್ಯಮವೂ ಚೆನ್ನಾಗಿ ಬೆಳೆಯಬೇಕು.

(ಕೃಪೆ: ಗೋ ವಿಶ್ವ ಇ-ಪತ್ರಿಕೆ, ಏಪ್ರಿಲ್ ಸಂಚಿಕೆ 2009).
 



No comments:

Advertisement