Wednesday, June 17, 2009

ಚಿಟ್ ಫಂಡ್ ಹಣ ಪಡೆಯಲು ಬೇಕೆಷ್ಟು ಭದ್ರತೆ?

ಚಿಟ್ ಫಂಡ್ ಹಣ ಪಡೆಯಲು ಬೇಕೆಷ್ಟು ಭದ್ರತೆ?

ಖಾತರಿ ಒದಗಿಸಿದ್ದ ನಾಲ್ವರು ಶಿಕ್ಷಕರ ಪೈಕಿ ಮೂವರು ಮಾಸಿಕ ವೇತನ ಪಡೆಯುವ ಸರ್ಕಾರಿ ಶಿಕ್ಷಕರಾಗಿದ್ದರೂ ನಾಲ್ವರಲ್ಲಿ ಒಬ್ಬರು ಬೇರೊಬ್ಬರಿಗೆ ಖಾತರಿ ನೀಡಿದ್ದಾರೆ ಎಂಬ ಕಾರಣಕ್ಕೆ ಪಾವತಿ ಮಾಡಬೇಕಾಗಿದ್ದ ಚಿಟ್ ಫಂಡ್ ಮೊತ್ತ ಪಾವತಿಗೆ ನಿರಾಕರಿಸಿದ್ದಕ್ಕೆ ಯಾವುದೇ ಸಮರ್ಥನೆಯೂ ಇಲ್ಲ ಎಂದು ರಾಜ್ಯ ಗ್ರಾಹಕ ನ್ಯಾಯಾಲಯ ಅಭಿಪ್ರಾಯಪಟ್ಟಿತು.

ನೆತ್ರಕೆರೆ ಉದಯಶಂಕರ

ಚಿಟ್ ಫಂಡ್ ವ್ಯವಹಾರ ಬಹುತೇಕ ಮಂದಿಗೆ ಗೊತ್ತು. ಬಿಡ್ ಕೂಗಿದಾಗ ಚಿಟ್ ಫಂಡ್ ಮೊತ್ತದಲ್ಲಿ ಒಂದಷ್ಟು ಮೊತ್ತವನ್ನು ಘೋಷಿಸಿ ಅದನ್ನು ಕಳೆದು ಚಿಟ್ ಫಂಡ್ ಮೊತ್ತವನ್ನು ಪಡೆದುಕೊಳ್ಳುವುದು ಕ್ರಮ. ಆದರೆ ಚಿಟ್ ಫಂಡ್ ಸಂಸ್ಥೆಯು ಏನಾದರೂ ನೆಪ ಹೇಳಿ, ಹೀಗೆ ಕೊಡಬೇಕಾದ ಮೊತ್ತವನ್ನು ಕೊಡಲು ಹಿಂದೇಟು ಹಾಕಿದರೆ? ಗ್ರಾಹಕ ಸಂರಕ್ಷಣಾ ಕಾಯ್ದೆ ನಿಮ್ಮ ನೆರವಿಗೆ ಬರುತ್ತದೆ.

ತನ್ನ ಮುಂದೆ ಬಂದ ಇಂತಹ ಪ್ರಕರಣ ಒಂದರ ಮೇಲ್ಮನವಿಯ ವಿಚಾರಣೆ ನಡೆಸಿದ ಕರ್ನಾಟಕ ರಾಜ್ಯ ಗ್ರಾಹಕ ನ್ಯಾಯಾಲಯವು ಅರ್ಜಿದಾರರಿಗೆ ನ್ಯಾಯ ಒದಗಿಸಿದೆ.

ಈ ಪ್ರಕರಣದ ಅರ್ಜಿದಾರರು: ಮುಜೀಬ್ ಅಹಮದ್ ಖಾನ್ 'ಸಿ' ಲೇಔಟ್, ಬನ್ನಿ ಮಂಟಪ, ಮೈಸೂರು. ಪ್ರತಿವಾದಿಗಳು: (1) ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಶ್ರೀರಾಮ್ ಚಿಟ್ಸ್ (ಕರ್ನಾಟಕ) ಪ್ರೈವೇಟ್ ಲಿಮಿಟೆಡ್, ವಿಲ್ಸನ್ ಗಾರ್ಡನ್, ಬೆಂಗಳೂರು. (2) ಬ್ರ್ಯಾಂಚ್ ಮ್ಯಾನೇಜರ್, ಶ್ರೀರಾಮ್ ಚಿಟ್ಸ್ (ಕರ್ನಾಟಕ) ಪ್ರೈವೇಟ್ ಲಿಮಿಟೆಡ್, ವಾಣಿ ವಿಲಾಸ ರಸ್ತೆ, ಮೈಸೂರು.

ಅರ್ಜಿದಾರ ಮುಜೀಬ್ ಅಹಮದ್ ಖಾನ್ ಅವರು ಪ್ರತಿವಾದಿ ಶ್ರೀರಾಮ್ ಚಿಟ್ಸ್ (ಕರ್ನಾಟಕ) ಲಿಮಿಟೆಡ್ನ ಚಿಟ್ ಯೋಜನೆಯೊಂದರ ಸದಸ್ಯರಾಗಿ ಸೇರಿದರು. ಅವರು ಸೇರಿದ್ದ ಚಿಟ್ ಯೋಜನೆಯ ಮೊತ್ತ 2 ಲಕ್ಷ ರೂಪಾಯಿಗಳು. ಈ ಯೋಜನೆ ಪ್ರಕಾರ ಪ್ರತಿ ಸದಸ್ಯ 40 ತಿಂಗಳ ಕಾಲ ಪ್ರತಿ ತಿಂಗಳು 5000 ರೂಪಾಯಿ ಪಾವತಿ ಮಾಡಬೇಕು.

ಮುಜೀಬ್ ಅವರು 10 ಕಂತುಗಳನ್ನು ಪಾವತಿ ಮಾಡಿದ ಬಳಿಕ ಸಮಸ್ಯೆಗಳು ಉದ್ಘವಿಸಿದವು. 11ನೇ ಚಿಟ್ ಮೊತ್ತವನ್ನು ಬಿಡ್ ಕೂಗುವ ಸಂದರ್ಭದಲ್ಲಿ ಅರ್ಜಿದಾರ ಮುಜೀಬ್ ಅವರು, 45,500 ರೂಪಾಯಿ ಬಿಟ್ಟುಕೊಡಲು ಸಿದ್ದರಾದರು. ಇದರಿಂದಾಗಿ ನಿಯಮಾವಳಿ ಪ್ರಕಾರ ಅರ್ಜಿದಾರ ಮುಜೀಬ್ ಅವರು 1,54,500 ರೂಪಾಯಿಗಳನ್ನು ಪಡೆಯಲು ಅರ್ಹರಾಗಿದ್ದರು.

ಭವಿಷ್ಯದ ಕಂತುಗಳನ್ನು ಪಾವತಿ ಮಾಡಬೇಕಾದ ಕಾರಣ, ಈ ಹಣವನ್ನು ಪಡೆದುಕೊಳ್ಳಲು ಅರ್ಜಿದಾರರು ಖಾತರಿ ನೀಡಬೇಕಾಗಿತ್ತು. ಮೊದಲಿಗೆ 50,000 ರೂಪಾಯಿ ಮೊತ್ತದ ಜೀವ ವಿಮಾ ಬಾಂಡ್ ಒಂದನ್ನು ಅವರು ಖಾತರಿಯಾಗಿ ನೀಡಿದರು. ಆದರೆ ಸಂಸ್ಥೆ ಸಂಪರ್ಕಿಸಿದಾಗ ಎಲ್ ಐ ಸಿ ಬಾಂಡನ್ನು ಸರ್ಕಾರ ಅಥವಾ ಸ್ಥಾಯೀ ಸಂಸ್ಥೆಗಳಿಗೆ ಮಾತ್ರ ಒಪ್ಪಿಸಿಕೊಡಲು ಸಾಧ್ಯ ಎಂದು ಜೀವ ವಿಮಾ ನಿಗಮ ಹೇಳಿತು. ಹೀಗಾಗಿ ಅರ್ಜಿದಾರರು ನಾಲ್ವರು ಶಿಕ್ಷಕರ ವೈಯಕ್ತಿಕ ಖಾತರಿ ನೀಡಿದರು. ಈ ನಾಲ್ಕೂ ಮಂದಿ ಶಿಕ್ಷಕರು ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದವರು. ಆದರೆ ಈ ನಾಲ್ವರು ಶಿಕ್ಷಕರ ಪೈಕಿ ಒಬ್ಬರು ಈ ಮೊದಲೇ ಬೇರೆ ವ್ಯಕ್ತಿಗೆ ಖಾತರಿ ನೀಡಿದ ಕಾರಣ ಈ ನಾಲ್ವರು ಶಿಕ್ಷಕರ ಖಾತರಿ ಸಾಕಾಗುವುದಿಲ್ಲ ಎಂದು ಹೇಳಿದ ಪ್ರತಿವಾದಿ ಚಿಟ್ ಫಂಡ ಬಿಡ್ನಲ್ಲಿ ಪಡೆದ ಹಣವನ್ನು ಅರ್ಜಿದಾರರಿಗೆ ನೀಡಲು ನಿರಾಕರಿಸಿತು.

ಚಿಟ್ ಫಂಡ್ ಸಂಸ್ಥೆಯ ಈ ವರ್ತನೆ ವಿರುದ್ಧ ಅರ್ಜಿದಾರ ಮುಜೀಬ್ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೆಟ್ಟಲೇರಿದರು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯವು ಅವರ ಅರ್ಜಿಯನ್ನು ಪುರಸ್ಕರಿಸಿ 1,54,500 ರೂಪಾಯಿಗಳನ್ನು ಆದೇಶದ 35 ದಿನಗಳ ಒಳಗಾಗಿ ಅರ್ಜಿದಾರರಿಗೆ ಪಾವತಿ ಮಾಡುವಂತೆಯೂ ಅಪ್ರಾಮಾಣಿಕ ವ್ಯಾಪಾರಕ್ಕಾಗಿ 20,000 ರೂಪಾಯಿಗಳ ದಂಡವನ್ನು ಗ್ರಾಹಕ ಕಲ್ಯಾಣ ನಿಧಿಗೆ ಪಾವತಿ ಮಾಡುವಂತೆಯೂ ಆಜ್ಞಾಪಿಸಿತು.

ಜಿಲ್ಲಾ ಗ್ರಾಹಕ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಪ್ರತಿವಾದಿ ಶ್ರೀರಾಮ್ ಚಿಟ್ಸ್ ಫಂಡ್ ಸಂಸ್ಥೆಯು ಕರ್ನಾಟಕ ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿತು. ಅಧ್ಯಕ್ಷ ನ್ಯಾಯಮೂರ್ತಿ ಚಂದ್ರಶೇಖರಯ್ಯ, ಸದಸ್ಯರಾದ ಶ್ರೀಮತಿ ರಮಾ ಅನಂತ್ ಅವರನ್ನು ಒಳಗೊಂಡ ಪೀಠವು ಅರ್ಜಿದಾರರ ಪರ ವಕೀಲರಾದ ಕಮಾಲ್ ಮತ್ತು ಭಾನು ಹಾಗೂ ಪ್ರತಿವಾದಿಗಳ ಪರ ವಕೀಲರಾದ ಬಿ. ವೀರಣ್ಣ ಅವರ ಅಹವಾಲುಗಳನ್ನು ಆಲಿಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು.

ಅರ್ಜಿದಾರರು ನಾಲ್ಕು ಮಂದಿ ಶಿಕ್ಷಕರನ್ನು ತಾವು ಪಡೆಯಬೇಕಾದ ಹಣಕ್ಕೆ ಖಾತರಿಯಾಗಿ ಒದಗಿಸಿದ್ದು ಅವರಲ್ಲಿ ಮೂವರು ಸಕರ್ಾರಿ ಶಾಲೆಯಲ್ಲಿ ಮಾಸಿಕ ವೇತನ ಪಡೆಯುವ ಶಿಕ್ಷಕರು ಎಂಬುದನ್ನು ನ್ಯಾಯಾಲಯ ಗಮನಿಸಿತು. ಹೀಗಿದ್ದರೂ ಭವಿಷ್ಯದ ಕಂತುಗಳ ಪಾವತಿ ಹಿನ್ನೆಲೆಯಲ್ಲಿ ಸಮರ್ಪಕ ಭದ್ರತೆ ಒದಗಿಸಿಲ್ಲ ಎಂಬ ನೆಪದಲ್ಲಿ ಹಣ ಪಾವತಿ ನಿರಾಕರಿಸುವುದಕ್ಕೆ ಯಾವುದೇ ಕಾರಣವೂ ಇಲ್ಲ ಎಂದು ರಾಜ್ಯ ಗ್ರಾಹಕ ನ್ಯಾಯಾಲಯ ಅಭಿಪ್ರಾಯಪಟ್ಟಿತು. ಈ ಹಿನ್ನೆಲೆಯಲ್ಲಿ ಆದೇಶದ 35 ದಿನಗಳ ಒಳಗಾಗಿ 1,54,500 ರೂಪಾಯಿಗಳನ್ನು ಪಾವತಿ ಮಾಡುವಂತೆ ಜಿಲ್ಲಾ ಗ್ರಾಹಕ ನ್ಯಾಯಾಲಯ ನೀಡಿದ ಜಿಲ್ಲಾ ಗ್ರಾಹಕ ನ್ಯಾಯಾಲಯದ ಆದೇಶ ಸಮರ್ಪಕವಾಗಿಯೇ ಇದೆ ಎಂದು ರಾಜ್ಯ ಗ್ರಾಹಕ ನ್ಯಾಯಾಲಯ ಹೇಳಿತು.

ಆದರೆ ಪ್ರಕರಣದ ಪರಿಶೀಲನೆಯಿಂದ ಪ್ರತಿವಾದಿಗಳು ಅಪ್ರಾಮಾಣಿಕ ವ್ಯಾಪಾರ ನಡೆಸಿದ್ದಾರೆ ಎಂಬುದನ್ನು ಪುಷ್ಟೀಕರಿಸುವಂತಹ ಯಾವುದೇ ಸಾಕ್ಷ್ಯಾಧಾರ ಲಭಿಸುತ್ತಿಲ್ಲ. ಆದ್ದರಿಂದ ಅಪ್ರಾಮಾಣಿಕ ವ್ಯಾಪಾರಕ್ಕಾಗಿ 20,000 ರೂಪಾಯಿಗಳ ದಂಡವನ್ನು ಪ್ರತಿವಾದಿಗಳಿಗೆ ವಿಧಿಸಿದ ಜಿಲ್ಲಾ ನ್ಯಾಯಾಲಯದ ಆದೇಶ ಸರಿಯಲ್ಲ ಎಂದು ಅಭಿಪ್ರಾಯಪಟ್ಟ ರಾಜ್ಯ ಗ್ರಾಹಕ ನ್ಯಾಯಾಲಯ ಜಿಲ್ಲಾ ನ್ಯಾಯಾಲಯದ ಆದೇಶದ ಈ ಭಾಗವನ್ನು ತಳ್ಳಿ ಹಾಕಿತು.

ಪ್ರತಿವಾದಿಗಳ ವರ್ತನೆಯಿಂದ ಉಂಟಾದ ಮಾನಸಿಕ ಕ್ಲೇಶ ಮತ್ತು ತೊಂದರೆಗಳಿಗಾಗಿ ಜಿಲ್ಲಾ ಗ್ರಾಹಕ ನ್ಯಾಯಾಲವು 15,000 ರೂಪಾಯಿಗಳ ಪ್ರತ್ಯೇಕ ಪರಿಹಾರವನ್ನು ಅರ್ಜಿದಾರರಿಗೆ ನೀಡುವಂತೆಯೂ ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶಿಸಿತ್ತು. ಆದರೆ ಪ್ರತಿವಾದಿಗಳು ತಮ್ಮ ಬಳಿ ಉಳಿಸಿಕೊಂಡಿದ್ದ ಹಣಕ್ಕೆ ಬಡ್ಡಿ ಪಾವತಿ ಮಾಡುವಂತೆ ತಾವು ಆದೇಶ ನೀಡುವ ಹಿನ್ನೆಲೆಯಲ್ಲಿ ಪ್ರತಿವಾದಿಗಳು ಈ ಪ್ರತ್ಯೇಕ ಪರಿಹಾರ ನೀಡಬೇಕಾಗಿಲ್ಲ ಎಂದು ರಾಜ್ಯ ಗ್ರಾಹಕ ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಈ ಹಿನ್ನೆಲೆಯಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯವನ್ನು ಪರಿಷ್ಕರಿಸಿದ ರಾಜ್ಯ ಗ್ರಾಹಕ ನ್ಯಾಯಾಲಯವು 1,54,500 ರೂಪಾಯಿಗಳನ್ನು 2008ರ ಜನವರಿ 19ರಿಂದ ಹಣ ಪಾವತಿ ಮಾಡುವವರೆಗೆ ಶೇಕಡಾ 12 ರಷ್ಟು ಬಡ್ಡಿ ಮತ್ತು 1,000 ರೂಪಾಯಿ ಖಟ್ಲೆ ವೆಚ್ಚ ಸಹಿತವಾಗಿ ಪಾವತಿ ಮಾಡುವಂತೆ ಪ್ರತಿವಾದಿ ವಿಮಾ ಸಂಸ್ಥೆಗೆ ಆದೇಶ ನೀಡಿತು.

ಪ್ರತಿವಾದಿಗಳು ಕಟ್ಟಿದ 75,000 ರೂಪಾಯಿ ಠೇವಣಿ ಹಣವನ್ನು ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ವರ್ಗಾಯಿಸಿ, ಸೂಕ್ತ ನೋಟಿಸ್ ನೀಡಿ ಅರ್ಜಿದಾರರಿಗೆ ಪಾವತಿ ಮಾಡುವಂತೆಯೂ ನ್ಯಾಯಾಲಯ ನಿರ್ದೇಶಿಸಿತು.

No comments:

Advertisement