Wednesday, July 22, 2009

ಹಣವಿದ್ದರೂ ಚೆಕ್ ಮಾನ್ಯ ಮಾಡದ ಬ್ಯಾಂಕ್..!

ಹಣವಿದ್ದರೂ ಚೆಕ್ ಮಾನ್ಯ ಮಾಡದ ಬ್ಯಾಂಕ್..!

ಬ್ಯಾಂಕಿನ ಸ್ಟೇಟ್ಮೆಂಟನ್ನು ಪರಿಶೀಲಿಸಿದ ಗ್ರಾಹಕ ನ್ಯಾಯಾಲಯ ಅದರಲ್ಲಿ ವಿವಾದಿತ ಚೆಕ್ಕನ್ನು 5-8-2008ರಂದು ನೀಡಿರುವುದನ್ನು ಹಾಗೂ ಅದಕ್ಕೆ ಮುನ್ನವೇ 27-6-2008ರಂದು ವಾಣಿಜ್ಯ ತೆರಿಗೆ ಇಲಾಖೆಯು ತನ್ನ ಹಣದ ಸಂಬಂಧಿ ತಕರಾರು ಹಿಂತೆಗೆದುಕೊಂಡದ್ದನ್ನೂ ಗಮನಕ್ಕೆ ತೆಗೆದುಕೊಂಡಿತು.

ನೆತ್ರಕೆರೆ ಉದಯಶಂಕರ

ಖಾತೆಯಲ್ಲಿ ಸಾಕಷ್ಟು ಹಣ ಇದ್ದಾಗ ಚೆಕ್ಕನ್ನು ಬ್ಯಾಂಕ್ ಮಾನ್ಯ ಮಾಡದೇ ಇದ್ದರೆ ಗ್ರಾಹಕ ಏನು ಮಾಡಬೇಕು? ಗ್ರಾಹಕ ಸಂರಕ್ಷಣಾ ಕಾಯ್ದೆ ಆತನ ನೆರವಿಗೆ ಬರುವುದೇ?

ತನ್ನ ಮುಂದೆ ಬಂದ ಇಂತಹ ಪ್ರಕರಣವೊಂದರಲ್ಲಿ ಬೆಂಗಳೂರು ನಗರ ಜಿಲ್ಲಾ ಗ್ರಾಹಕ ನ್ಯಾಯಾಲಯವು ಅರ್ಜಿದಾರರಿಗೆ ನ್ಯಾಯ ಒದಗಿಸಿಕೊಟ್ಟಿದೆ. ಈ ಪ್ರಕರಣದ ಅರ್ಜಿದಾರರು ಬೆಂಗಳೂರು ಪೀಣ್ಯ ಇಂಡಸ್ಟ್ರಿಯಲ್ ಎಸ್ಟೇಟಿನ ಎನ್. ಶ್ರೀಪತಿ. ಪ್ರತಿವಾದಿಗಳು: ಪಂಜಾಬ್ ನ್ಯಾಷನಲ್ ಬ್ಯಾಂಕ್, ಬೆಂಗಳೂರು.

ಅರ್ಜಿದಾರ ಶ್ರೀಪತಿ ಅವರು ಬೆಂಗಳೂರಿನ ಬೌರಿಂಗ್ ಇನ್ಸ್ಟಿಟ್ಯೂಟ್ ಹೆಸರಿನಲ್ಲಿ 5-8-2008ರಂದು 3000 ರೂಪಾಯಿಗಳ ಚೆಕ್ ನೀಡಿದ್ದರು. ಆದರೆ ಈ ಚೆಕ್ಕನ್ನು ಪ್ರತಿವಾದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ `ಸಾಕಷ್ಟು ಹಣ ಇಲ್ಲ' ಎಂಬ ಕಾರಣ ನೀಡಿ ಮಾನ್ಯ ಮಾಡಲು ನಿರಾಕರಿಸಿತು. ಖಾತೆಯಲ್ಲಿ ಸಾಕಷ್ಟು ಹಣವಿರುವುದರಿಂದ ಚೆಕ್ ಮಾನ್ಯ ಮಾಡಿ ತಪ್ಪನ್ನು ಸರಿಪಡಿಸುವಂತೆ ಶ್ರೀಪತಿ ಅವರು ಬ್ಯಾಂಕಿಗೆ ಮನವಿ ಮಾಡಿದರು. ಏನೇ ಮನವಿ ಮಾಡಿದರೂ ಬ್ಯಾಂಕ್ ಚೆಕ್ಕನ್ನು ಮಾನ್ಯ ಮಾಡಲೇ ಇಲ್ಲ. ಶ್ರೀಪತಿ ಅವರು ಕಳುಹಿಸಿದ ಲೀಗಲ್ ನೋಟಿಸಿಗೂ ಸ್ಪಂದಿಸಲಿಲ್ಲ.

ಅರ್ಜಿದಾರರು ಬೆಂಗಳೂರು ನಗರ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೊರೆ ಹೊಕ್ಕರು. ಅಧ್ಯಕ್ಷ ಎ.ಎಂ. ಬೆನ್ನೂರು, ಸದಸ್ಯರಾದ ಎಂ. ಯಶೋದಮ್ಮ ಮತ್ತು ಎ. ಮುನಿಯಪ್ಪ ಅವರನ್ನು ಒಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು. ಪ್ರಕರಣದ ವಿಚಾರಣೆ ಕಾಲದಲ್ಲಿ ಆಪಾದನೆಗಳೆಲ್ಲವನ್ನೂ ನಿರಾಕರಿಸಿದ ಪ್ರತಿವಾದಿ ಬ್ಯಾಂಕ್ ಅರ್ಜಿದಾರರ ಖಾತೆಯ 30,000 ರೂಪಾಯಿಗಳನ್ನು ವಾಣಿಜ್ಯ ತೆರಿಗೆ ಇಲಾಖೆ ಸ್ಥಗಿತಗೊಳಿಸಿದ್ದುದರಿಂದ ಖಾತೆಯಲ್ಲಿ ಕೇವಲ 728.59 ರೂಪಾಯಿ ಉಳಿದಿತ್ತು. ಹಾಗಾಗಿ ಚೆಕ್ ಮಾನ್ಯ ಮಾಡಲು ಸಾಧ್ಯವಿರಲಿಲ್ಲ ಎಂದು ಪ್ರತಿಪಾದಿಸಿತು.

ವಾಣಿಜ್ಯ ತೆರಿಗೆ ಇಲಾಖೆಯು ಒಟ್ಟು 28,863 ರೂಪಾಯಿಗಳಿಗೆ ಸಂಬಂಧಿಸಿದಂತೆ 5-6-2008ರಂದು ಅರ್ಜಿದಾರರ ಖಾತೆಯ ಮೇಲೆ ತನ್ನ ಅಧಿಕಾರ ಸೃಷ್ಟಿಸಿತ್ತು. ಆದರೆ ನಂತರ 27-6-2008ರಂದು ಪತ್ರವೊಂದನ್ನು ಬರೆದು ಈ ಹಣದ ಮೇಲಿನ ಅಧಿಕಾರದ ವಿವಾದವನ್ನು ಹಿಂತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿತ್ತು. ಬ್ಯಾಂಕಿನ ಸ್ಟೇಟ್ಮೆಂಟನ್ನು ಪರಿಶೀಲಿಸಿದ ಗ್ರಾಹಕ ನ್ಯಾಯಾಲಯ ಅದರಲ್ಲಿ ವಿವಾದಿತ ಚೆಕ್ಕನ್ನು 5-8-2008ರಂದು ನೀಡಿರುವುದನ್ನು ಹಾಗೂ ಅದಕ್ಕೆ ಮುನ್ನವೇ 27-6-2008ರಂದು ವಾಣಿಜ್ಯ ತೆರಿಗೆ ಇಲಾಖೆಯು ತನ್ನ ಹಣದ ಸಂಬಂಧಿ ತಕರಾರು ಹಿಂತೆಗೆದುಕೊಂಡದ್ದನ್ನೂ ಗಮನಕ್ಕೆ ತೆಗೆದುಕೊಂಡಿತು.

ಈ ಹಿನ್ನೆಲೆಯಲ್ಲಿ ಚೆಕ್ ಮಾನ್ಯಗೊಳಿಸಲು ನಿರಾಕರಿಸಿದ ಬ್ಯಾಂಕ್ ವರ್ತನೆಯು ಸೇವಾಲೋಪವಾಗುತ್ತದೆ ಎಂಬ ತೀರ್ಮಾನಕ್ಕೆ ಬಂದ ಗ್ರಾಹಕ ನ್ಯಾಯಾಲಯ 5000 ರೂಪಾಯಿಗಳ ಪರಿಹಾರವನ್ನು 500 ರೂಪಾಯಿ ಖಟ್ಲೆ ವೆಚ್ಚ ಸಹಿತವಾಗಿ ಅರ್ಜಿದಾರ ಶ್ರೀಪತಿ ಅವರಿಗೆ ಪಾವತಿ ಮಾಡುವಂತೆ ಪ್ರತಿವಾದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಆಜ್ಞಾಪಿಸಿತು.

ಎನ್ ಒ ಸಿ ವಿವಾದ: ಇನ್ನೊಂದು ಪ್ರಕರಣದಲ್ಲಿ ಸಂಪೂರ್ಣ ಸಾಲ ಮರುಪಾವತಿ ಮಾಡಿದ್ದರೂ ನಿರಾಕ್ಷೇಪಣಾ ಪತ್ರ (ಎನ್ ಒ ಸಿ) ನೀಡಲು ನಿರಾಕರಿಸಿದ್ದಕ್ಕಾಗಿ ಅರ್ಜಿದಾರ ಬೆಂಗಳೂರಿನ ಮತ್ತಿಕೆರೆ ನಿವಾಸಿ ಶ್ರೀನಿವಾಸ ಗೌಡ ವಿ. ಅವರಿಗೆ 5000 ರೂಪಾಯಿಗಳ ಪರಿಹಾರವನ್ನು 500 ರೂಪಾಯಿ ಖಟ್ಲೆವೆಚ್ಚ ಸಹಿತವಾಗಿ ಪಾವತಿ ಮಾಡುವಂತೆ ನ್ಯಾಯಾಲಯ ಬೆಂಗಳೂರು ಮಲ್ಲೇಶ್ವರಂನ ಬಜಾಜ್ ಆಟೋ ಫೈನಾನ್ಸ್ ಸಂಸ್ಥೆಗೆ ಆಜ್ಞಾಪಿಸಿತು.

ಈ ಪ್ರಕರಣದ ಅರ್ಜಿದಾರ ಶ್ರೀನಿವಾಸ ಗೌಡ ಅವರು ಪ್ರತಿವಾದಿ ಬಜಾಜ್ ಆಟೋ ಫೈನಾನ್ಸ್ ಸಂಸ್ಥೆಯಿಂದ ಮೋಟಾರ್ ಸೈಕಲ್ ಒಂದನ್ನು ಖರೀದಿಸುವ ಸಲುವಾಗಿ 11-6-2004ರಂದು 36,020 ರೂಪಾಯಿಗಳ ಸಾಲವನ್ನು ಪಡೆದಿದ್ದರು. ಷರತ್ತಿನಂತೆ ಅವರು ಈ ಸಾಲವನ್ನು 36 ಕಂತುಗಳಲ್ಲಿ ತಲಾ 1298 ರೂಪಾಯಿ ಮತ್ತು ಶೇಕಡಾ 9.90 ಬಡ್ಡಿಯಂತೆ ಮರುಪಾವತಿ ಮಾಡಬೇಕಿತ್ತು. ಸಾಲಕ್ಕೆ ಭದ್ರತೆಯಾಗಿ ಅವರು ಖಾಲಿ ಚೆಕ್ಕುಗಳನ್ನು ನೀಡಿದ್ದರು.

ನಂತರ 15-6-2007ರಂದು ಅರ್ಜಿದಾರರ ಸಂಪೂರ್ಣ ಸಾಲವನ್ನು ಬಡ್ಡಿ ಸಹಿತವಾಗಿ (ಒಟ್ಟು 46,728 ರೂಪಾಯಿ) ಪಾವತಿ ಮಾಡಿ ನಿರಾಕ್ಷೇಪಣಾ ಪತ್ರ (ಎನ್ ಒ ಸಿ) ನೀಡುವಂತೆ ಕೋರಿದ್ದರು. ಪ್ರತಿವಾದಿ ಸಂಸ್ಥೆ ಸಾಲ ಮರುಪಾವತಿ ಮಾಡಿದ್ದಕ್ಕೆ ರಶೀದಿ ನೀಡಿದರೂ, ಖಾಲಿ ಚೆಕ್ಕುಗಳನ್ನು ಹಿಂತಿರುಗಿಸಲಿಲ್ಲ. ನಿರಾಕ್ಷೇಪಣಾ ಪತ್ರವನ್ನೂ ನೀಡಲಿಲ್ಲ. ಅರ್ಜಿದಾರರು ಮಾಡಿದ ಮನವಿಗಳೆಲ್ಲ ವ್ಯರ್ಧವಾದವು. ಅರ್ಜಿದಾರ ಶ್ರೀನಿವಾಸ ಗೌಡ ಅವರು 28-1-2009ರಂದು ಬೆಂಗಳೂರು ನಗರ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೊರೆ ಹೊಕ್ಕರು.

ಅರ್ಜಿದಾರರು ಗ್ರಾಹಕ ನ್ಯಾಯಾಲಯದ ಕಟ್ಟೆ ಏರಿದ ಒಂದೇ ತಿಂಗಳಲ್ಲಿ 28-2-2009ರಂದು ಪ್ರತಿವಾದಿ ಸಂಸ್ಥೆಯು ಎನ್ ಒ ಸಿ ಮತ್ತು ಖಾಲಿ ಚೆಕ್ಕುಗಳನ್ನು ಹಿಂದಿರುಗಿಸಿದ್ದನ್ನು ಗಮನಕ್ಕೆ ತೆಗೆದುಕೊಂಡ ನ್ಯಾಯಾಲಯವು, ಅರ್ಜಿದಾರರನ್ನು ಅನಗತ್ಯವಾಗಿ ಮಾನಸಿಕ ಯಾತನೆಗೆ ಒಳಪಡಿಸಿ, ಹಣಕಾಸು ನಷ್ಟವಾಗುವಂತೆಯೂ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟು ನ್ಯಾಯ ಒದಗಿಸಿತು.

No comments:

Advertisement