Monday, July 20, 2009

ಇಂದಿನ ಇತಿಹಾಸ History Today ಜುಲೈ 16

ಇಂದಿನ ಇತಿಹಾಸ

ಜುಲೈ 16

ನಕಲಿ ಪಾಸ್ ಪೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ದೊರೆ ಅಬು ಸಲೇಂನ ಪ್ರೇಯಸಿ ಹಾಗೂ ಮಾಜಿ ಬಾಲಿವುಡ್ ತಾರೆ ಮೋನಿಕಾ ಬೇಡಿಯನ್ನು ಭೋಪಾಲ್ ನ್ಯಾಯಾಲಯ ಖುಲಾಸೆ ಮಾಡಿತು. ಈ ಪ್ರಕರಣದಲ್ಲಿ ಪ್ರಾಸೆಕ್ಯೂಷನ್, ಮೋನಿಕಾ ಬೇಡಿ ವಿರುದ್ಧ ದಾಖಲೆಗಳ ಬೃಹತ್ ಸಂಗ್ರಹ ಹಾಗೂ 35 ಸಾಕ್ಷಿಗಳನ್ನು ಹಾಜರುಪಡಿಸಿದರೂ ಪ್ರಧಾನ ನ್ಯಾಯಾಧೀಶರಿಗೆ ಈ ಸಾಕ್ಷಿಗಳಲ್ಲಿ ಗಟ್ಟಿತನ ಕಂಡುಬರಲಿಲ್ಲ.

2008: ಒರಿಸ್ಸಾದ ಮಲ್ಕನ್ ಗಿರಿ ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ಅಧಿಕಾರಿಗಳನ್ನು ಕರೆದೊಯ್ಯುತ್ತಿದ್ದ ವ್ಯಾನಿನ ಮೇಲೆ ಮಾವೋ ಉಗ್ರರು ನಡೆಸಿದ ಗುಂಡಿನ ದಾಳಿ ಹಾಗೂ ನೆಲಬಾಂಬ್ ಸ್ಛೋಟದಿಂದ 21 ಮಂದಿ ಸಾವನ್ನಪ್ಪಿರಬಹುದೆಂದು ಶಂಕಿಸಲಾಯಿತು. ಮೂರು ವಾರಗಳಿಂದ ಮಾವೋವಾದಿಗಳು ಪೊಲೀಸ್ ಪಡೆಯ ಮೇಲೆ ನಡೆಸಿದ ಎರಡನೇ ಹಿಂಸಾಕೃತ್ಯ ಇದು.

2007: ಲಂಡನ್ನಿನ ಗ್ಲಾಸ್ಗೋ ವಿಮಾನ ನಿಲ್ದಾಣದ ಮೇಲೆ ವಿಫಲ ಆತ್ಮಹತ್ಯಾ ದಾಳಿ ನಡೆಸಿದ್ದ ತಂಡದ ಜೊತೆ ಸಂಬಂಧ ಹೊಂದಿರುವ ಶಂಕೆಯ ಆಧಾರದಲ್ಲಿ ಆಸ್ಟ್ರೇಲಿಯಾದಲ್ಲಿ ಬಂಧಿಸಲಾಗಿದ್ದ ಬೆಂಗಳೂರು ಮೂಲದ ವೈದ್ಯ ಮೊಹಮ್ಮದ್ ಹನೀಫ್ ಗೆ ಬ್ರಿಸ್ಬೆನ್ ನ್ಯಾಯಾಲಯ ಜಾಮೀನು ನೀಡಿತು. ಆದರೆ, ಜಾಮೀನು ನೀಡಿದ ಬಳಿಕ ಔಪಚಾರಿಕ ಕಾನೂನು ಕ್ರಮ ಪೂರೈಸಿ ಹನೀಫ್ನನ್ನು ಬಿಡುಗಡೆ ಮಾಡುವ ಮುನ್ನವೇ ಆತನ ವೀಸಾ ರದ್ದುಗೊಳಿಸಿ ವಲಸೆ ಕಾಯ್ದೆ ಅಡಿ ಮತ್ತೆ ಬಂಧಿಸಲಾಯಿತು.

2007: ನಕಲಿ ಪಾಸ್ ಪೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ದೊರೆ ಅಬು ಸಲೇಂನ ಪ್ರೇಯಸಿ ಹಾಗೂ ಮಾಜಿ ಬಾಲಿವುಡ್ ತಾರೆ ಮೋನಿಕಾ ಬೇಡಿಯನ್ನು ಭೋಪಾಲ್ ನ್ಯಾಯಾಲಯ ಖುಲಾಸೆ ಮಾಡಿತು. ಈ ಪ್ರಕರಣದಲ್ಲಿ ಪ್ರಾಸೆಕ್ಯೂಷನ್, ಮೋನಿಕಾ ಬೇಡಿ ವಿರುದ್ಧ ದಾಖಲೆಗಳ ಬೃಹತ್ ಸಂಗ್ರಹ ಹಾಗೂ 35 ಸಾಕ್ಷಿಗಳನ್ನು ಹಾಜರುಪಡಿಸಿದರೂ ಪ್ರಧಾನ ನ್ಯಾಯಾಧೀಶರಿಗೆ ಈ ಸಾಕ್ಷಿಗಳಲ್ಲಿ ಗಟ್ಟಿತನ ಕಂಡುಬರಲಿಲ್ಲ. ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಅಬ್ದುಲ್ ಕಬೀರನ್ನು ಕೂಡಾ ನ್ಯಾಯಾಲಯ ಆರೋಪಮುಕ್ತಗೊಳಿಸಿತು. ನಕಲಿ ಪಾಸ್ ಪೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋನಿಕಾಗೆ ಹೈದರಾಬಾದ್ ನ್ಯಾಯಾಲಯ 5 ವರ್ಷಗಳ ಶಿಕ್ಷೆ ವಿಧಿಸಿತ್ತು. ಫೌಜಿಯಾ ಉಸ್ಮಾನ್ ಎಂಬ ನಕಲಿ ಹೆಸರಿನಲ್ಲಿ ಆಕೆ ಭೋಪಾಲ್ ನಲ್ಲಿ ಪಾಸ್ಪೋರ್ಟ್ ಪಡೆದು, ಸಲೇಂ ಜೊತೆ ಪೋರ್ಚುಗಲ್ಲಿಗೆೆ ತೆರಳಿದ್ದಳು ಎಂದು ಆರೋಪಿಸಲಾಗಿತ್ತು. 2001ರಲ್ಲಿ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಭೋಪಾಲ್ ಕೇಂದ್ರ ಕಾರಾಗೃಹದಲ್ಲಿದ್ದಾಗ ಮೋನಿಕಾ ಮಹಿಳಾ ಕೈದಿಗಳಿಗೆ ಇಂಗ್ಲಿಷ್ ಹಾಗೂ ನೃತ್ಯ ತರಗತಿಗಳನ್ನು ನಡೆಸುತ್ತಿದ್ದಳು.

2007: ಜಪಾನಿನ ವಾಯವ್ಯ ಕರಾವಳಿ ಪ್ರದೇಶದಲ್ಲಿ ಭಾರಿ ಭೂಕಂಪ ಸಂಭವಿಸಿ, ಏಳು ಮಂದಿ ಮೃತರಾಗಿ, ಸಾವಿರಾರು ಮಂದಿ ಗಾಯಗೊಂಡರು. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.8ರಷ್ಟಿತ್ತು. ಭೂಕಂಪದಿಂದಾಗಿ ಕಶಿವಜಕಿ ಎಂಬಲ್ಲಿನ ಪರಮಾಣು ವಿದ್ಯುತ್ ಸ್ಥಾವರಕ್ಕೆ ಹಾನಿಯುಂಟಾಗಿ, ಅಲ್ಲಿ ಬೆಂಕಿ ಕಾಣಿಸಿಕೊಂಡಿತು. ನಸುಕಿನ ವೇಳೆಯಲ್ಲಿ ಸುಮಾರು 20 ಸೆಕೆಂಡುಗಳ ಕಾಲ ಭೂಮಿ ಅದುರಿ, ಮರದಿಂದ ನಿರ್ಮಿಸಲಾದ ಮನೆಗಳು ಧರೆಗುರುಳಿದವು. ಕಡಲಲ್ಲಿ 50 ಮೀಟರ್ ಎತ್ತರದ ಅಲೆಗಳೆದ್ದು ದಂಡೆಗೆ ಅಪ್ಪಳಿಸಿದವು.

2007: ಕೇಂದ್ರದ ಮಾಜಿ ಸಚಿವ ಹಾಗೂ ಸಮಾಜವಾದಿ ಪಕ್ಷದ ಲೋಕಸಭಾ ಸದಸ್ಯ ರಶೀದ್ ಮಸೂದ್ ಅವರನ್ನು ತೃತೀಯ ರಂಗದ ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಯಿತು. ಮಸೂದ್ ಅವರು ವಾಯವ್ಯ ಉತ್ತರ ಪ್ರದೇಶದ ಸಹರಾನ್ ಪುರದಿಂದ ಐದು ಬಾರಿ ಸಂಸತ್ತು ಪ್ರವೇಶಿಸಿದವರು.

2007: ಇರಾಕಿನ ಕಿರ್ಕುಕ್ ಪ್ರದೇಶದಲ್ಲಿ ಸಂಭವಿಸಿದ ಎರಡು ಕಾರು ಬಾಂಬ್ ಸ್ಫೋಟಗಳಲ್ಲಿ 85 ಮಂದಿ ಮೃತರಾಗಿ ಇತರ 150 ಜನರು ಗಾಯಗೊಂಡರು. 20 ನಿಮಿಷಗಳ ಅಂತರದಲ್ಲಿ ಸಂಭವಿಸಿದ ಎರಡು ಬಾಂಬ್ ಸ್ಫೋಟಗಳ ಹಿಂದೆ ಕುರ್ದಿಷ್ ರಾಜಕೀಯ ಪಕ್ಷದ ಕಚೇರಿ ಧ್ವಂಸಮಾಡುವ ಗುರಿ ಇತ್ತು. ಇರಾಕ್ ಅಧ್ಯಕ್ಷ ಜಲಾಲ್ ತಾಲಾಬಾನಿ ಅವರ ಕುರ್ದಿಸ್ಥಾನ್ ಪೇಟ್ರಿಯಾಟಿಕ್ ಒಕ್ಕೂಟ ಪಕ್ಷದ ಕಚೇರಿ ಬಳಿ ಸ್ಫೋಟಕ ತುಂಬಿದ್ದ ಟ್ರಕ್ಕನ್ನು ಸ್ಫೋಟಿಸಲಾಯಿತು.

2007: ಭಾರಿ ವಂಚನೆ ಹಾಗೂ ಭ್ರಷ್ಟಾಚಾರ ಆರೋಪಕ್ಕೆ ಗುರಿಯಾದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಾಗೂ ಅವಾಮಿ ಲೀಗ್ ಅಧ್ಯಕ್ಷೆ ಶೇಖ್ ಹಸೀನಾ ಅವರನ್ನು ಧಾನ್ ಮೋಂದಿಯಲ್ಲಿನ ಅವರ ನಿವಾಸದಲ್ಲಿ ಬಂಧಿಸಲಾಯಿತು. ಬೆಳಗ್ಗೆ ಸುಮಾರು 300-400 ಪೊಲೀಸರು ಹಾಗೂ ಕ್ಷಿಪ್ರ ಕಾರ್ಯಾಚರಣೆ ತಂಡ ಹಸೀನಾ ಮನೆ `ಸುಧಾ ಸದನ'ವನ್ನು ಮುತ್ತಿಗೆ ಹಾಕಿದರು. ಮೂರು ಗಂಟೆಗಳ ಕಾಲ ತಪಾಸಣೆ ನಡೆಸಿದ ಬಳಿಕ ಹಸೀನಾ ಅವರನ್ನು ಬಂಧಿಸಿ ಢಾಕಾದಲ್ಲಿನ ಕೋರ್ಟಿಗೆ ಹಾಜರುಪಡಿಸಲಾಯಿತು. 1996-2001ರಲ್ಲಿ ಹಸೀನಾ ಅಧಿಕಾರದಲ್ಲಿದ್ದಾಗ ಈಸ್ಟ್ ಕೋಸ್ಟ್ ಟ್ರೇಡಿಂಗ್ ಕಂಪನಿಯಿಂದ 2.96 ಕೋಟಿ ಟಾಕಾ (4,42,000 ಅಮೆರಿಕ ಡಾಲರ್)ಹಣ ಸುಲಿಗೆ ಮಾಡಿದ್ದಲ್ಲದೆ, ತಮ್ಮ ರಾಜಕೀಯ ಎದುರಾಳಿಯೊಬ್ಬರ ಕೊಲೆಯಲ್ಲೂ ಕೈವಾಡ ನಡೆಸಿದ್ದರು ಎಂಬುದು ಅವರ ಮೇಲಿನ ಆರೋಪ.

2006: ಗುಲ್ಬರ್ಗದ ಜಿಲ್ಲಾಧಿಕಾರಿ ಕಚೇರಿ ಎದುರು 489 ದಿನಗಳಿಂದ ನಡೆಯುತ್ತಿದ್ದ ದಿನಗೂಲಿ ನೌಕರರ ಧರಣಿ ಅಂತ್ಯಗೊಂಡಿತು. ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ದಿನಗೂಲಿ ನೌಕರರ ಕಾಯಂ ಪ್ರಕ್ರಿಯೆಗೆ ತಿಂಗಳಲ್ಲಿ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದನ್ನು ಅನುಸರಿಸಿ ದಿನಗೂಲಿ ನೌಕರರು ಈ ದಿನ ತಮ್ಮ ಧರಣಿ ಹಿಂತೆಗೆದುಕೊಂಡರು.

2006: ಲಕ್ಷದ್ವೀಪ ಸಮೀಪದ ಸುಹೈಲಿ ಜನರಹಿತ ದ್ವೀಪದ ಸಮೀಪ ಅಪಾಯದ ಸುಳಿಗೆ ಸಿಲುಕಿದ ಸೀಷೆಲ್ಸ್ನ `ಇಸಬೆಲ್ಲ 3' ಮೀನುಗಾರಿಕಾ ನೌಕೆಯಿಂದ ಉಗ್ರರೂಪ ತಾಳಿದ್ದ ಅರಬ್ಬೀ ಸಮುದ್ರಕ್ಕೆ ಜಿಗಿದು 33 ಮಂದಿ ಮೀನುಗಾರರು ಪ್ರಾಣ ಉಳಿಸಿಕೊಂಡರು. ಉಗ್ರರೂಪ ತಾಳಿದ್ದ ಸಮುದ್ರದಲ್ಲಿ ಈಜಿಕೊಂಡೇ ಅವರೆಲ್ಲರೂ ಸುಹೈಲಿ ದ್ವೀಪವನ್ನು ತಲುಪಿದರು.

2004: ತಮಿಳುನಾಡು ಕುಂಭಕೋಣಂನ ಖಾಸತಿ ಶಾಲೆಯೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 91 ವಿದ್ಯಾರ್ಥಿಗಳು ಮೃತರಾದರು. ಮೂರನೇ ಮಹಡಿಯಲ್ಲಿ ಮಧ್ಯಾಹ್ನದ ಊಟಕ್ಕೆ ಅಡುಗೆ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಹಾರಿದ ಬೆಂಕಿ ಪಕ್ಕದಲ್ಲಿದ್ದ ಹುಲ್ಲಿನ ಛಾವಣಿಯ ಶಾಲಾ ಕೊಠಡಿಗೆ ಹರಡಿ ಈ ದುರಂತ ಸಂಭವಿಸಿತು.

1992: ಶಂಕರದಯಾಳ್ ಶರ್ಮಾ ಅವರು ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾದರು.

1959: ತಂತ್ರಜ್ಞೆ, ಕತೆಗಾರ್ತಿ, ಅಂಕಣಗಾರ್ತಿ ನೇಮಿಚಂದ್ರ ಅವರು ಪ್ರೊ.ಜಿ. ಗುಂಡಣ್ಣ- ತಿಮ್ಮಕ್ಕ ದಂಪತಿಯ ಪುತ್ರಿಯಾಗಿ ಚಿತ್ರದುರ್ಗದಲ್ಲಿ ಜನಿಸಿದರು.

1942: ಶೀಲಾ ಗಜಾನನ ಆಂಕೋಲ ಜನನ.

622: ಮುಸ್ಲಿಂ ಶಕೆ ಎಂದೇ ಹೆಸರಾಗಿರುವ ಹಿಜರಿ ಶಕೆ ಆರಂಭ. ಪ್ರವಾದಿ ಮಹಮ್ಮದರು ಮೆಕ್ಕಾದಿಂದ ಮದೀನಕ್ಕೆ ಪ್ರಯಾಣ ಬೆಳೆಸಿದ ದಿನ ಇದು. ಮತಾಂತರ ತಪ್ಪಿಸಿಕೊಳ್ಳಲು ಮಹಮ್ಮದರು ಈ ರೀತಿ ಮಾಡಿದರು ಎನ್ನಲಾಗುತ್ತದೆ. ಇನ್ನೊಂದು ಮೂಲದ ಪ್ರಕಾರ ಎರಡನೇ ಖಲೀಫನಾಗಿದ್ದ ಒಂದನೇ ಉಮರ್ ಹಿಜರಿ ಶಕೆಯನ್ನು ಪರಿಚಯಿಸಿದ ಎನ್ನಲಾಗುತ್ತದೆ. ಹಿಜರಿ ಎಂದರೆ ಅರೇಬಿಕ್ ಭಾಷೆಯಲ್ಲಿ ಸಂಬಂಧಗಳನ್ನು ಕಡಿಯುವುದು ಅಥವಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದು ಎಂದು ಅರ್ಥ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement