My Blog List

Sunday, August 9, 2009

ಇಂದಿನ ಇತಿಹಾಸ History Today ಆಗಸ್ಟ್ 05

ಇಂದಿನ ಇತಿಹಾಸ

ಆಗಸ್ಟ್ 05

ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಗೀತಾ ಮಿತ್ತಲ್ ನೇತೃತ್ವದ ನ್ಯಾಯಮಂಡಳಿ `ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ' (ಸಿಮಿ)ದ ಮೇಲಿನ ನಿಷೇಧವನ್ನು ರದ್ದುಪಡಿಸಿತು. ಗೃಹ ಸಚಿವಾಲಯ ನೀಡಿದ ದಾಖಲೆಗಳು `ಸಿಮಿ' ಮೇಲೆ ನಿಷೇಧ ಹೇರುವಷ್ಟು ಪ್ರಬಲವಾಗಿಲ್ಲ. ಈ ಸಂಘಟನೆ ಭಯೋತ್ಪಾದನಾ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂಬುದಕ್ಕೂ ಸಾಕ್ಷ್ಯವಿಲ್ಲ ಎಂದು ನ್ಯಾಯಾಧೀಶರು ಸಚಿವಾಲಯಕ್ಕೆ ಹಸ್ತಾಂತರಿಸಿರುವ ಮುಚ್ಚಿದ ಲಕೋಟೆಯಲ್ಲಿ ತಿಳಿಸಿದರು.

2015: ಉಧಾಮಪುರ: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು ಮತ್ತೆ  ಅಟ್ಟಹಾಸ ಮೆರೆದರು. ಒಂದು ವಾರದಿಂದ ನಿರಂತರವಾಗಿ ಪಾಕಿಸ್ತಾನ ಪಡೆಗಳು ಗಡಿಯಲ್ಲಿ ಭಾರತೀಯ ಯೋಧರನ್ನೇ ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದವು. ಬೆನ್ನಿಗೇ ಈದಿನ ಬೆಳಗ್ಗೆ ಉಗ್ರವಾದಿಗಳು ಜಮ್ಮು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಉಧಾಮಪುರದಲ್ಲಿ ಭಾರತೀಯ ಭದ್ರತಾ ಪಡೆಯ ಯೋಧರಿಬ್ಬರನ್ನು ಗುಂಡಿಟ್ಟು ಹತ್ಯೆಗೈದರು. ಘಟನೆಯಲ್ಲಿ ಯೋಧರೂ ಸೇರಿದಂತೆ ಒಟ್ಟು 13 ಮಂದಿ ಗಾಯಗೊಂಡರು. ನಿರಂತರ ಗುಂಡಿನ ಕಾಳಗದಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ. ಒಬ್ಬ ಭಯೋತ್ಪಾದಕನನ್ನು ಜೀವಂತವಾಗಿ ಸೆರೆ ಹಿಡಿಯಲಾಯಿತು. ಈ ಉಗ್ರಗಾಮಿ ಸಮರೋಲಿ ಶಾಲೆಯೊಂದರಲ್ಲಿ ಮೂವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ. ಈ ಒತ್ತೆಯಾಳು ಗ್ರಾಮಸ್ಥರೇ ಸಮಯ ನೋಡಿಕೊಂಡು ಆತ ಹಸಿವಿನಿಂದ ಬಳಲಿದ್ದಾಗ ನಿರಾಯುಧನನ್ನಾಗಿ ಮಾಡಿ ಪೊಲೀಸರಿಗೆ ಹಿಡಿದುಕೊಟ್ಟರು ಎಂದು ವರದಿಗಳು ತಿಳಿಸಿದವು. ಬಂಧಿತ ಭಯೋತ್ಪಾದಕನ್ನು ನಾವೇದ್ ಯಾನೆ ಖಾಸಿಮ್ ಯಾನೆ ಉಸ್ಮಾನ್ ಎಂಬುದಾಗಿ ಹೇಳಲಾಗುತ್ತಿದೆ.  2008ರ ನವೆಂಬರ್ 11ರ ದಾಳಿ ಕಾಲದಲ್ಲಿ ಸೆರೆ ಹಿಡಿಯಲಾಗಿದ್ದ  ಅಜ್ಮಲ್ ಕಸಾಬ್ ಬಳಿಕ ಜೀವಂತ ಸೆರೆ ಸಿಕ್ಕಿದ ಮೊದಲ ಭಯೋತ್ಪಾದಕ ಈತ. ಈತ ಪಾಕಿಸ್ತಾನದ ಫೈಸಲಾಬಾದ್ ನಿವಾಸಿ ಎನ್ನಲಾಗಿದೆ. ಈತ ಗುರುದಾಸಪುರ ದಾಳಿ ಯೋಜನೆಯ ಸದಸ್ಯರಲ್ಲಿ ಒಬ್ಬನಾಗಿದ್ದು, ಪಂಜಾಬ್​ನಲ್ಲಿ ದಾಳಿ ನಡೆಸಿದ ಹಂತಕರ ಜೊತೆಗೇ ಭಾರತಕ್ಕೆ ಬಂದಿದ್ದ.  ಬಿಎಸ್​ಎಫ್ ತುಕಡಿಯ ದಾಳಿ ಆರಂಭವಾಗುತ್ತಿದ್ದಂತೆಯೇ ಉಸ್ಮಾನ್ ಕಾಡಿನ ಒಳಕ್ಕೆ ಪರಾರಿಯಾಗಿದ್ದ.

2015: ಹರ್ದಾ (ಮಧ್ಯಪ್ರದೇಶ): ಕೇವಲ ಒಂದೆರಡು ನಿಮಿಷಗಳ ಅಂತರದಲ್ಲಿ ಎರಡು ಬೇರೆ ಬೇರೆ ಪ್ರಯಾಣಿಕ ರೈಲುಗಳು ಅಪಘಾತಕ್ಕೀಡಾದ ಘಟನೆ ಮಂಗಳವಾರ, 04 ಆಗಸ್ಟ್ 2015ರ  ತಡರಾತ್ರಿ ಮಧ್ಯಪ್ರದೇಶದ ಹರ್ದಾ ಬಳಿ ನಡೆದಿದ್ದು, 10 ಬೋಗಿಗಳು, ಒಂದು ಇಂಜಿನ್ ಮಚಕ್ ನದಿಗೆ ಉರುಳಿದೆ. ದುರ್ಘಟನೆಯಲ್ಲಿ 28 ಸಾವು ಸಂಭವಿಸಿದ್ದು, ಹಲವರಿಗೆ ತೀವ್ರ ಸ್ವರೂಪದ ಗಾಯಗಳಾದವು.. 300ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಲಾಯಿತು. ಪ್ರಾಣ ಕಳೆದುಕೊಂಡವರಲ್ಲಿ 11 ಮಂದಿ ಮಹಿಳೆಯರು, 12 ಮಂದಿ ಪುರುಷರು, 5ಮಂದಿ ಮಕ್ಕಳು ಎಂದು ತಿಳಿದುಬಂದಿದೆ. ಹಠಾತ್ ಪ್ರವಾಹದ ಪರಿಣಾಮವಾಗಿ ಈ ದುರ್ಘಟನೆ ಸಂಭವಿಸಿತು ಎನ್ನಲಾಯಿತು. ಕಾಮಯಾನಿ ಎಕ್ಸ್​ಪ್ರೆಸ್ ಉತ್ತರಪ್ರದೇಶದ ವಾರಾಣಸಿಯಿಂದ ಮುಂಬೈಗೆ ಸಾಗುತ್ತಿತ್ತು. ಮಚಕ್ ನದಿ ಸೇತುವೆಯ ಬಳಿ ಬರುತ್ತಿದ್ದಂತೆ ಹಳಿ ತಪ್ಪಿ ಅಪಘಾತಕ್ಕೀಡಾಯಿತು.  ಇದೇ ಸ್ಥಳದಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಜನತಾ ಎಕ್ಸ್​ಪ್ರೆಸ್ ಕೂಡ ಕಣ್ಣೆದುರಲ್ಲೇ ಅಪಘಾತಕ್ಕೀಡಾಯಿತು.. ಕಾಮಯಾನಿ ಎಕ್ಸ್​ಪ್ರೆಸ್​ನ ಆರು ಬೋಗಿಗಳು ನದಿಗೆ ಉರುಳಿದವು. ಕೆಲವೇ ನಿಮಿಷಗಳ ಅಂತರದಲ್ಲಿ ಇದೇ ಸ್ಥಳದಲ್ಲಿಯೇ ಜನತಾ ಎಕ್ಸ್​ಪ್ರೆಸ್ ರೈಲು ಕೂಡ ಅಪಘಾತಕ್ಕೀಡಾಯಿತು. ಜನತಾ ಎಕ್ಸ್​ಪ್ರೆಸ್ ಪಟನಾದಿಂದ ಮುಂಬೈಗೆ ಸಾಗುತ್ತಿತ್ತು. ಜನತಾ ಎಕ್ಸ್​ಪ್ರೆಸ್​ನ ನಾಲ್ಕು ಬೋಗಿಗಳು ನದಿಗೆ ಉರುಳಿದವು.
2008: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಗೀತಾ ಮಿತ್ತಲ್ ನೇತೃತ್ವದ ನ್ಯಾಯಮಂಡಳಿ `ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ' (ಸಿಮಿ)ದ ಮೇಲಿನ ನಿಷೇಧವನ್ನು ರದ್ದುಪಡಿಸಿತು. ಗೃಹ ಸಚಿವಾಲಯ ನೀಡಿದ ದಾಖಲೆಗಳು `ಸಿಮಿ' ಮೇಲೆ ನಿಷೇಧ ಹೇರುವಷ್ಟು ಪ್ರಬಲವಾಗಿಲ್ಲ. ಈ ಸಂಘಟನೆ ಭಯೋತ್ಪಾದನಾ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂಬುದಕ್ಕೂ ಸಾಕ್ಷ್ಯವಿಲ್ಲ ಎಂದು ನ್ಯಾಯಾಧೀಶರು ಸಚಿವಾಲಯಕ್ಕೆ ಹಸ್ತಾಂತರಿಸಿರುವ ಮುಚ್ಚಿದ ಲಕೋಟೆಯಲ್ಲಿ ತಿಳಿಸಿದರು. ಫೆಬ್ರುವರಿ 7ರಿಂದ ಎರಡು ವರ್ಷಗಳ ಕಾಲ ಅನ್ವಯವಾಗುವಂತೆ ಕೇಂದ್ರ ಸರ್ಕಾರ ತನ್ನ ಮೇಲೆ ಹೇರಿದ್ದ ನಿಷೇಧವನ್ನು ಪ್ರಶ್ನಿಸಿ `ಸಿಮಿ' ಅರ್ಜಿ ಸಲ್ಲಿಸಿತ್ತು.

2007: ದಕ್ಷಿಣ ಏಷ್ಯಾದ ದೇಶವಾದ ಬಾಂಗ್ಲಾದೇಶದ ಹಲವು ಪ್ರದೇಶಗಳಲ್ಲಿ ಪ್ರವಾಹದಿಂದಾಗಿ ಕನಿಷ್ಠ 120 ಜನರು ಸಾವನ್ನಪ್ಪಿ, 80 ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ ಎಂದು ಬಾಂಗ್ಲಾದೇಶದ ಅಧಿಕೃತ ಮೂಲಗಳು ಪ್ರಕಟಿಸಿದವು. ಮಂಜುಗಡ್ಡೆಗಳು ಕರಗಿದ್ದರಿಂದ ಹಾಗೂ ಭಾರಿ ಮುಂಗಾರು ಮಳೆಯ ಪರಿಣಾಮವಾಗಿ ಅತ್ಯಂತ ಭೀಕರ ಪ್ರವಾಹ ಬರುತ್ತಿದ್ದು ದೇಶದ 64 ಜಿಲ್ಲೆಗಳ ಪೈಕಿ 38 ಜಿಲ್ಲೆಗಳು ಭಾಗಶಃ ಮುಳುಗಡೆಯಾಗಿವೆ ಎಂದು ಸರ್ಕಾರಿ ವಕ್ತಾರ ಸಚಿಂದ್ರನಾಥ್ ಹಲ್ದಾರ್ ಹೇಳಿದರು.

2007: ಶಂಕಿತ ವಿದೇಶಿಯರ ಮೇಲೆ ನಿಗಾ ಇಡಲು ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಎಲೆಕ್ಟ್ರಾನಿಕ್ ಗೂಢಚರ್ಯೆ ನಡೆಸುವ ಸರ್ಕಾರದ ಅಧಿಕಾರವನ್ನು ತಾತ್ಕಾಲಿಕವಾಗಿ ಮುಂದುವರೆಸುವುದಕ್ಕೆ ಸಂಬಂಧಿಸಿದ ಮಸೂದೆಗೆ ಅಮೆರಿಕದ ಕಾಂಗ್ರೆಸ್ಸಿನಲ್ಲಿ ಬಹುಮತ ಹೊಂದಿರುವ ಡೆಮಾಕ್ರೆಟಿಕ್ ಸದಸ್ಯರು ಒಪ್ಪಿಗೆ ನೀಡಿದರು. ಸೆನೆಟ್ ಈ ಮಸೂದೆಯನ್ನು ಒಪ್ಪಿಕೊಂಡ ಮಾರನೇ ದಿನವೇ ಕಾಂಗ್ರೆಸ್ (ಜನ ಪ್ರಾತಿನಿಧ್ಯ ಸಭೆ) ಸಹ ಒಪ್ಪಿಗೆ ನೀಡಿತು. ಈ ಮಸೂದೆಯು ವಿಧೇಯ ಅಮೆರಿಕ ಪ್ರಜೆಗಳ ಹಕ್ಕನ್ನು ಮೊಟಕುಗೊಳಿಸುತ್ತದೆ ಎಂದು ನಾಗರಿಕ ಹಕ್ಕುಗಳ ಸಂರಕ್ಷಣಾ ಸಂಘಟನೆಗಳು ಟೀಕಿಸಿದ್ದವು. ಅಮೆರಿಕದ ರಕ್ಷಣೆ ನಮ್ಮ ಮೊದಲ ಆದ್ಯತೆ ಆಗಿರುವುದರಿಂದ ಶಾಸನ ಸಭೆಗಳು ಈ ಮಸೂದೆಗೆ ಒಪ್ಪಿಗೆ ನೀಡಬೇಕು ಎಂದು ಅಧ್ಯಕ್ಷ ಬುಷ್ ಒತ್ತಾಯಿಸಿದ್ದರು.

2007: ಟರ್ಕಿಯ ಹೊಸ ಸಂಸತ್ ಸದಸ್ಯರು ಅಂಕಾರದಲ್ಲಿ ಈದಿನ ಪ್ರಮಾಣವಚನ ಸ್ವೀಕರಿಸಿದರು. ಹಿಂದಿನ ಆಡಳಿತ ಪಕ್ಷ ತನ್ನ ಬಹುಮತವನ್ನು ಉಳಿಸಿಕೊಂಡಿದ್ದು, 16 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕುರ್ದಿಷ್ ಪರ ಅಧಿಕಾರಿಗಳು ಇದರಲ್ಲಿ ಭಾಗಿಯಾದರು. ವಿದೇಶಾಂಗ ಸಚಿವ ಅಬ್ದುಲ್ಲ ಗುಲ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಪ್ರಧಾನಿ ತಯ್ಯಿಪ್ ಎರ್ ಡೊಗನ್ ಅವರು ಪ್ರಯತ್ನಿಸಿದಾಗ ಚುನಾವಣೆ ನಡೆಸಲಾಗಿತ್ತು. ಚುನಾವಣೆಯಲ್ಲಿ 549 ಸ್ಥಾನಗಳಲ್ಲಿ 349 ಸ್ಥಾನಗಳನ್ನು ಪ್ರಧಾನಿ ತಯ್ಯಿಪ್ ಎರ್ ಡೊಗನ್ ಅವರ ಪಕ್ಷ ಗಳಿಸಿತು.

2007: 14 ವರ್ಷದ ಇರಾಕಿ ಬಾಲಕಿಯೊಬ್ಬಳನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ ಅಪರಾಧಕ್ಕಾಗಿ ಅಮೆರಿಕದ ಯೋಧನೊಬ್ಬನಿಗೆ ಚಿಕಾಗೋ ಸೇನಾ ನ್ಯಾಯಾಲಯ 110 ವರ್ಷ ಸೆರೆವಾಸದ ಶಿಕ್ಷೆ ವಿಧಿಸಿತು. ಜೆಸ್ಸೆ ಸ್ಪೈಲ್ ನಮ್(22) ಎಂಬ ಈ ಯೋಧನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ತೀರ್ಪು ನೀಡಿತು. 2006ರ ಮಾರ್ಚ್ ತಿಂಗಳಲ್ಲಿ ಮಹಮ್ಮದೀಯ ಕುಟುಂಬವೊಂದರ ಮೇಲೆ ದಾಳಿ ನಡೆಸಿದ ಐವರು ಯೋಧರ ಗುಂಪಿನಲ್ಲಿ ಈತ ಇದ್ದ ಎಂಬುದು ಸಾಬೀತಾಗಿದ್ದು, ಈ ಐವರಲ್ಲಿ ಮೂವರು ತಪ್ಪೊಪ್ಪಿಕೊಂಡು ಶರಣಾಗಿದ್ದರು. ಅವರಿಗೆ ಐದರಿಂದ 100 ವರ್ಷಗಳ ಶಿಕ್ಷೆ ವಿಧಿಸಲಾಯಿತು.

2006: ದ್ವೀಪದ ವಾಯವ್ಯ ಭಾಗದಲ್ಲಿ ಶ್ರೀಲಂಕಾ ಭದ್ರತಾ ಪಡೆಗಳು ಸೇನೆ ಹಾಗೂ ವೈಮಾನಿಕ ದಾಳಿ ನಡೆಸಿ ಕನಿಷ್ಠ 152 ತಮಿಳು ಟೈಗರ್ಸ್ ಬಂಡುಕೋರರನ್ನು ಕೊಂದು ಹಾಕಿ ಕರಾವಳಿಯ ಮುಸ್ಲಿಂ ಪ್ರಾಬಲ್ಯದ ಮುತ್ತೂರು ಪಟ್ಟಣದ ಮೇಲೆ ಪೂರ್ಣ ಹಿಡಿತ ಸಾಧಿಸಿದವು.

2006: ಸಿಖ್ ಸಮುದಾಯಕ್ಕೆ ತನ್ನ ನೆರೆಹೊರೆಯಲ್ಲೇ ಗುರುದ್ವಾರ ನಿರ್ಮಿಸುವ ಹಕ್ಕು ಇದೆ ಎಂಬುದಾಗಿ ಸ್ಯಾನ್ ಫ್ರಾನ್ಸಿಸ್ಕೊ ನ್ಯಾಯಾಲಯವೊಂದು ತೀರ್ಪು ನೀಡಿತು. ಇದರಿಂದ ಅಮೆರಿಕದಲ್ಲಿ ನೆಲೆಸಿರುವ ಸಿಕ್ಖರಿಗೆ ಮಹತ್ವದ ವಿಜಯ ಲಭಿಸಿತು. ಸಟ್ಟೆರ್ ಕೌಂಟಿಯ ಮಂಜೂರಾದ ಕೃಷಿ ಭೂಮಿಯಲ್ಲಿ ಪೂಜಾಸ್ಥಳ ನಿರ್ಮಿಸಲು ಸಿಖ್ ಸಮುದಾಯಕ್ಕೆ ಮೇಲ್ಮನವಿಗಳ ಒಂಭತ್ತನೇ ಸರ್ಕಿಟ್ ಕೋರ್ಟ್ ಅನುಮತಿ ನೀಡಿತು. `ಬೆಕೆಟ್ ಫಂಡ್ ಫಾರ್ ರೆಲಿಜಿಯಸ್ ಲಿಬರ್ಟಿ' ಎಂಬ ಲಾಭ ರಹಿತ ಕಾನೂನು ಸಂಸ್ಥೆಯೊಂದು ಸಿಖ್ ಸಮುದಾಯದ ಪರವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

2000: ಭಾರತೀಯ ಕ್ರಿಕೆಟ್ ಆಟಗಾರ ಲಾಲಾ ಅಮರನಾಥ್ (1911-2000) ನಿಧನರಾದರು.

1992: ಕ್ವಿಟ್ ಇಂಡಿಯಾ ಚಳವಳಿ ನಾಯಕ ಅಚ್ಯುತರಾವ್ ಪಟವರ್ಧನ್ (86) ನಿಧನರಾದರು.

1991: ಜಸ್ಟೀಸ್ ಲೀಲಾ ಸೇಥ್ ಅವರು ಹಿಮಾಚಲ ಪ್ರದೇಶ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಹೈಕೋರ್ಟ್ ಒಂದರ ಮುಖ್ಯ ನ್ಯಾಯಮೂರ್ತಿಯಾಗಿನೇಮಕಗೊಂಡ ಮೊತ್ತ ಮೊದಲ ಮಹಿಳೆ ಎಂಬ ಕೀರ್ತಿಗೆ ಇವರು ಪಾತ್ರರಾದರು. ಸೇಥ್ ಅವರು ಖ್ಯಾತ ಕಾದಂಬರಿಕಾರ ವಿಕ್ರಮ್ ಸೇಥ್ ಅವರ ತಾಯಿ.

1984: ಬ್ರಿಟಿಷ್ ಚಿತ್ರನಟ ರಿಚರ್ಡ್ ಬರ್ಟನ್ (1925-84) ಅವರು ತಮ್ಮ 58ನೇ ವಯಸ್ಸಿನಲ್ಲಿ ಜಿನೇವಾದಲ್ಲಿ ಮೃತರಾದರು. ರಿಚರ್ಡ್ ಬರ್ಟನ್ ಅವರ ನಿಜವಾದ ಹೆಸರು ರಿಚರ್ಡ್ ವಾಲ್ಟೆರ್ ಜೆಂಕಿನ್ಸ್. ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಸ್ಕಾಲರ್ ಶಿಪ್ ಪಡೆಯಲು ನೆರವಾದ ತಮ್ಮ ಶಾಲಾಶಿಕ್ಷಕ ಫಿಲಿಪ್ ಬರ್ಟನ್ ಅವರಿಗೆ ಕೃತಜ್ಞತೆ ವ್ಯಕ್ತಪಡಿಸುವ ಸಲುವಾಗಿ ಅವರು `ಬರ್ಟನ್' ಎಂಬ ವೃತ್ತಿನಾಮವನ್ನು ಇಟ್ಟುಕೊಂಡರು.

1981: ಮಹಾರಾಷ್ಟ್ರದಲ್ಲಿ ನಡೆದ ಪಕ್ಷಾಂತರದ ಪರಿಣಾಮವಾಗಿ ತತ್ತರಿಸಿದ ಕಾಂಗ್ರೆಸ್ ಯು ಪಕ್ಷದಿಂದ ಜಗಜೀವನರಾಂ ಮತ್ತು ಸಂಗಡಿಗರೂ ಹೊರಬಿದ್ದರು. ಪರಿಣಾಮವಾಗಿ ಕಾಂಗ್ಯೂ ಎರಡು ಹೋಳಾಯಿತು. ದೇವರಾಜ ಅರಸು ಅವರ ನೇತೃತ್ವದ ಕಾಂಗ್ರೆಸ್ ಯು ಬಣ ಜಗಜೀವನರಾಂ ಅವರನ್ನು ಪಕ್ಷದಿಂದ ಸಸ್ಪೆಂಡ್ ಮಾಡಿತು.

1969: ಭಾರತೀಯ ಕ್ರಿಕೆಟ್ ಆಟಗಾರ ವೆಂಕಟೇಶ ಪ್ರಸಾದ್ ಜನ್ಮದಿನ.

1962: ಖ್ಯಾತ ನಟಿ ಮರ್ಲಿನ್ ಮನ್ರೋ ಅವರು ಅತಿಯಾದ ಮಾದಕ ದ್ರವ್ಯ ಸೇವನೆಯ ಪರಿಣಾಮವಾಗಿ ತಮ್ಮ 36ನೇ ವಯಸ್ಸಿನಲ್ಲಿ ನಿಧನರಾದರು.

1950: ಅಸ್ಸಾಂನ ಮೊದಲ ಮುಖ್ಯಮಂತ್ರಿ ಗೋಪಿನಾಥ ಬೋರ್ದೊಲೋಯಿ ನಿಧನರಾದರು. `ಆಧುನಿಕ ಅಸ್ಸಾಂನ ಜನಕ' ಎಂದೇ ಅವರು ಖ್ಯಾತರಾಗಿದ್ದರು.

1930: ಅಮೆರಿಕನ್ ಗಗನಯಾನಿ ಚಂದ್ರನ ಮೇಲೆ ನಡೆದಾಡಿದ ಮೊತ್ತ ಮೊದಲ ಮಾನವ ನೀಲ್ ಆರ್ಮ್ ಸ್ಟ್ರಾಂಗ್ ಜನ್ಮದಿನ.

1928: ಸಾಹಿತಿ ರಾಮಚಂದ್ರ ಕೊಟ್ಟಲಗಿ (5-8-1928ರಿಂದ 20-9-1975) ಅವರು ಕೃಷ್ಣರಾವ್ ಕೊಟ್ಟಲಗಿ ಅವರ ಪುತ್ರನಾಗಿ ವಿಜಾಪುರ ಜಿಲ್ಲೆಯ ಮನಗೋಳಿ ಹಳ್ಳಿಯಲ್ಲಿ ಜನಿಸಿದರು.

1895: ಜರ್ಮನಿಯ ಸಮಾಜವಾದಿ ತತ್ವಜ್ಞಾನಿ ಫೆಡ್ರಿಕ್ ಏಂಜೆಲ್ಸ್ (1820-95) ಅವರು 74ನೇ ವಯಸ್ಸಿನಲ್ಲಿ ಲಂಡನ್ನಿನಲ್ಲಿ ಕ್ಯಾನ್ಸರ್ ಪರಿಣಾಮವಾಗಿ ಅಸು ನೀಗಿದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement