Wednesday, September 16, 2009

ಇಂದಿನ ಇತಿಹಾಸ History Today ಸೆಪ್ಟೆಂಬರ್ 09

ಇಂದಿನ ಇತಿಹಾಸ

ಸೆಪ್ಟೆಂಬರ್  09


ಜಮೈಕಾದ ಅಸಫಾ ಪೊವೆಲ್ ಪುರುಷರ 100 ಮೀ. ಓಟದ ಸ್ಪರ್ಧೆಯಲ್ಲಿ ನೂತನ ವಿಶ್ವದಾಖಲೆ ಸ್ಥಾಪಿಸಿದರು. ಇಟಲಿಯ ರೀಟಿಯಲ್ಲಿ ನಡೆದ ಐಎಎಫ್ ಗ್ರ್ಯಾನ್ ಪ್ರಿ ಸ್ಪರ್ಧೆಯಲ್ಲಿ ಮಿಂಚಿನ ವೇಗದಲ್ಲಿ ಓಡಿದ ಪೊವೆಲ್ 100 ಮಿ. ದೂರವನ್ನು 9.74 ಸೆಕೆಂಡುಗಳಲ್ಲಿ ಕ್ರಮಿಸಿ ತಮ್ಮದೇ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. 

2008: ಪಂಜಾಬ್ ಮತ್ತು ಹರಿಯಾಣ ಹೈಕೋರ್ಟಿನ ನ್ಯಾಯಮೂರ್ತಿ ನಿರ್ಮಲ್ ಜಿತ್ ಕೌರ್ ಅವರ ಮನೆಗೆ 15 ಲಕ್ಷ ರೂಪಾಯಿ ರವಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೌರ್ ಮತ್ತು ನ್ಯಾಯಮೂರ್ತಿ ನಿರ್ಮಲಾ ಯಾದವ್ ಅವರ ವಿರುದ್ಧ ಸಿಬಿಐನಿಂದ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್ ಸಮ್ಮತಿ ನೀಡಿದರು. ದೆಹಲಿಯ ಹೊಟೇಲ್ ಉದ್ಯಮಿ ರವೀಂದ್ರ ಸಿಂಗ್ ಎಂಬವರು ಹೈಕೋರ್ಟಿನ ಇನ್ನೊಬ್ಬ ನ್ಯಾಯಮೂರ್ತಿ ನಿರ್ಮಲಾ ಯಾದವ್ ಅವರಿಗಾಗಿ ಈ 15 ಲಕ್ಷ ರೂಪಾಯಿ ಕಳುಹಿಸಿಕೊಟ್ಟ್ದಿದರು. ಆದರೆ ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಸಂಜೀವ್ ಬನ್ಸಲ್ ಅವರ ಸಹಾಯಕ ಪ್ರಕಾಶ್ ರಾಮ್ ಅವರು `ತಪ್ಪಿ' ಈ ಹಣವನ್ನು ಆಗಸ್ಟ್ 13ರಂದು ನಿರ್ಮಲ್ ಜಿತ್ ಕೌರ್ ಅವರ ಮನೆಗೆ ರವಾನಿಸಿದ್ದರು.

2008: ಪಾಕಿಸ್ಥಾನದ ನೂತನ ಅಧ್ಯಕ್ಷರಾಗಿ ಆಸಿಫ್ ಆಲಿ ಜರ್ದಾರಿ ಇಸ್ಲಾಮಾಬಾದಿನಲ್ಲಿ ಅಧ್ಯಕ್ಷರ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು. 53 ವರ್ಷದ ಜರ್ದಾರಿ ಅವರಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಅಬ್ದುಲ್ ಹಮೀದ್ ದೊಗಾರ್ ಪ್ರಮಾಣ ವಚನ ಬೋಧಿಸಿದರು. ಸಭಾಂಗಣದಲ್ಲಿ ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಜರ್ದಾರಿ ಅವರ ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯ (ಪಿಪಿಪಿ) ಕಾರ್ಯಕರ್ತರು ಜೀಯೊ ಭುಟ್ಟೊ (ಭುಟ್ಟೊ ಚಿರಾಯುವಾಗಲಿ), ಜಿಂದಾ ಹೈ ಬೀಬಿ (ಬೆನಜೀರ್ ಬದುಕಿದ್ದಾರೆ ಎಂಬ ಘೋಷಣೆಗಳನ್ನು ಕೂಗಿದರು.

2007: ಜಮೈಕಾದ ಅಸಫಾ ಪೊವೆಲ್ ಪುರುಷರ 100 ಮೀ. ಓಟದ ಸ್ಪರ್ಧೆಯಲ್ಲಿ ನೂತನ ವಿಶ್ವದಾಖಲೆ ಸ್ಥಾಪಿಸಿದರು. ಇಟಲಿಯ ರೀಟಿಯಲ್ಲಿ ನಡೆದ ಐಎಎಫ್ ಗ್ರ್ಯಾನ್ ಪ್ರಿ ಸ್ಪರ್ಧೆಯಲ್ಲಿ ಮಿಂಚಿನ ವೇಗದಲ್ಲಿ ಓಡಿದ ಪೊವೆಲ್ 100 ಮಿ. ದೂರವನ್ನು 9.74 ಸೆಕೆಂಡುಗಳಲ್ಲಿ ಕ್ರಮಿಸಿ ತಮ್ಮದೇ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಪೊವೆಲ್ 2005 ರಲ್ಲಿ ಅಥೆನ್ಸಿನಲ್ಲಿ ಈ ದೂರವನ್ನು 9.77 ಸೆಕೆಂಡುಗಳಲ್ಲಿ ಕ್ರಮಿಸಿದ್ದು ಈವರೆಗಿನ ವಿಶ್ವದಾಖಲೆಯಾಗಿತ್ತು. 24ರ ಹರೆಯದ ಪೊವೆಲ್ ಆಗಸ್ಟ್ ತಿಂಗಳ ಆರಂಭದಲ್ಲಿ `ಈ ವರ್ಷ ವಿಶ್ವದಾಖಲೆ ಮುರಿಯಲಿದ್ದೇನೆ' ಎಂದು ಭವಿಷ್ಯ ನುಡಿದಿದ್ದರು. ಒಸಾಕದಲ್ಲಿ ಇತ್ತೀಚೆಗೆ ನಡೆದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಪೊವೆಲ್ ಚಿನ್ನದ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದರು.

2007: ಕುತೂಹಲದ ಘಟ್ಟ, ಮುಗಿಲು ಮುಟ್ಟಿದ ಕ್ರೀಡಾಭಿಮಾನಿಗಳ ಕೇಕೆ ಹಾಗೂ ನಾಟಕೀಯ ಬೆಳವಣಿಗೆಯ ನಡುವೆ ಚೆನ್ನೈಯ ಮೇಯರ್ ರಾಧಾಕೃಷ್ಣನ್ ಕ್ರೀಡಾಂಗಣದಲ್ಲಿ ನಡೆದ ಹಾಕಿ ಪಂದ್ಯದಲ್ಲಿ ಕೊರಿಯಾ ವಿರುದ್ಧ ಭಾರತವು ಅದ್ಭುತವಾದ ಗೆಲುವು ಪಡೆದು ಏಷ್ಯಾ ಕಪ್ ಗೆದ್ದುಕೊಂಡಿತು. ರೋಚಕ ಫೈನಲ್ ಪಂದ್ಯದಲ್ಲಿ ಭಾರತ ತಂಡದವರು 7-1 ಗೋಲುಗಳ ಭಾರಿ ಅಂತರದಿಂದ ಕೊರಿಯಾ ತಂಡವನ್ನು ಸೋಲಿಸಿದರಲ್ಲದೆ ಎರಡನೇ ಅತೀ ಹೆಚ್ಚು ಅಂತರದ ಗೆಲುವನ್ನು ದಾಖಲಿಸಿದರು. ಇದಕ್ಕೆ ಮೊದಲು ಭಾರತ ತಂಡದವರು 1985ರಲ್ಲಿ ಢಾಕಾದಲ್ಲಿ ನಡೆದ ಎರಡನೇ ಚಾಂಪಿಯನ್ ಶಿಪ್ ನಲ್ಲಿ 8-1 ಗೋಲುಗಳ ಗೆಲುವು ಪಡೆದುಕೊಂಡಿದ್ದರು. ಇದು ಯಾವುದೇ ಏಷ್ಯಾ ಕಪ್ ಚಾಂಪಿಯನ್ ಶಿಪ್ ನ ಫೈನಲಿನಲ್ಲಿ ಅತೀ ಹೆಚ್ಚು ಅಂತರದ ಗೆಲುವು ಕೂಡಾ. ಇದು 2003ರ ಏಷ್ಯಾ ಕಪ್ ಹಾಕಿ ಚಾಂಪಿಯನ್ ಶಿಪ್ ನಂತರ ಭಾರತಕ್ಕೆ ಮೊಟ್ಟ ಮೊದಲ ಪ್ರಶಸ್ತಿ.

2007: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಚುನಾವಣೆಯ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಿಜಯ ಸಾಧಿಸಿದರು.  ಅವರು ಮಾಜಿ ಕ್ರಿಕೆಟಿಗ ಜಿ.ಆರ್. ವಿಶ್ವನಾಥ್ ಅವರನ್ನು ಸೋಲಿಸುವಲ್ಲಿ ಯಶಸ್ವಿಯದರು. ಪ್ರತಿಸ್ಪರ್ಧಿ ಬಣದ ಬ್ರಿಜೇಶ್ ಪಟೇಲ್ ಕಾರ್ಯದರ್ಸಿ ಸ್ಥಾನಕ್ಕೆ ಪುನರಾಯ್ಕೆಯಾದರು.

2007: ಬೆಲ್ಜಿಯಂನ ಬೆಡಗಿ ಜಸ್ಟಿನ್ ಹೆನಿನ್ ಹಾರ್ಡಿನ್ ಅವರು ನ್ಯೂಯಾರ್ಕಿನಲ್ಲಿ ನಡೆದ ಅಮೆರಿಕಾ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡರು. ಚಾಣಾಕ್ಷ ಆಟ ಪ್ರದರ್ಶಿಸಿದ 25ರ ಹರೆಯದ ಹೆನಿನ್ ಫೈನಲ್ ಪಂದ್ಯದಲ್ಲಿ 6-1, 6-3 ರಲ್ಲಿ ರಷ್ಯಾದ ಸ್ವೆಟ್ಲಾನಾ ಕುಜ್ನೆಟ್ಸೋವಾ ಅವರನ್ನು ಮಣಿಸಿದರು. ವಿಶ್ವದ ಅಗ್ರ ರ್ಯಾಂಕಿಂಗ್ ಆಟಗಾರ್ತಿ ಹೆನಿನ್ ಗೆ ಇದು ಈ ವರ್ಷದ ಎರಡನೇ ಮತ್ತು ವೃತ್ತಿ ಜೀವನದ ಏಳನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ. ಈ ಮೊದಲು ಅವರು ಫ್ರೆಂಚ್ ಓಪನ್ನಿನಲ್ಲಿ ಕಿರೀಟ ಮುಡಿಗೇರಿಸಿದ್ದರು. ಅದೇ ರೀತಿ ಅಮೆರಿಕಾ ಓಪನ್ ಗೆದ್ದದ್ದು ಇದು ಎರಡನೇ ಬಾರಿ. 2003ರಲ್ಲಿ ಅವರು ಇಲ್ಲಿ ಕೊನೆಯದಾಗಿ ಪ್ರಶಸ್ತಿ ಗೆದ್ದಿದ್ದರು.

2007: ಹೈದರಾಬಾದಿನ ಪಂಜಗುಟ್ಟ ಕ್ರಾಸ್ ಬಳಿ ನಿರ್ಮಾಣ ಹಂತದಲ್ಲಿದ್ದ ಮೇಲು ಸೇತುವೆಯ (ಫ್ಲೈಓವರ್) ಒಂದು ಭಾಗ ರಾತ್ರಿ ಕುಸಿದು 15 ಮಂದಿ ಮೃತರಾದರು. ಫ್ಲೈ ಓವರ್ ಕೆಳಗೆ ನಿಲ್ಲಿಸಿದ್ದ ಸುಮಾರು 25 ಕಾರುಗಳು ಜಖಂಗೊಂಡು, 25 ಮಂದಿ ಗಾಯಗೊಂಡರು. ಈ ಮೇಲುಸೇತುವೆ 800 ಮೀಟರ್ ಉದ್ದವಿದ್ದು ಸುಮಾರು 20 ಅಡಿ ಎತ್ತರದಲ್ಲಿದೆ. (ಈ ಘಟನೆಯಲ್ಲ್ಲಿ ಸತ್ತವರ ಸಂಖ್ಯೆ ಕೇವಲ 2, ಗಾಯಗೊಂಡವರು 9 ಜನ ಎಂದು ಪೊಲೀಸ್ ಆಯುಕ್ತ ಬಲ್ವಿಂದರ್ ಸಿಂಗ್ ಮರುದಿನ ಸ್ಪಷ್ಟಪಡಿಸಿದರು.)

2007: ಮನುಷ್ಯನಂತೆ ಗೋವುಗಳಿಗೂ ಸಹಜವಾಗಿ ಹುಟ್ಟುವ, ಬೆಳೆಯುವ ಮತ್ತು ಸಾಯುವ ಹಕ್ಕು ಇದೆ. ರಾಜಧಾನಿಯಿಂದಲೇ ಈ ಪ್ರಜ್ಞೆ ಬೆಳೆದರೆ ಹಳ್ಳಿಗಳಿಗೆ ತಲುಪುವುದು ಸುಲಭ ಎಂಬ ಕಾರಣಕ್ಕೆ ಬೆಂಗಳೂರು ನಗರದಲ್ಲಿ ಗೋ ಸಂರಕ್ಷಾ ಕಾರ್ಯಕ್ರಮ ಹಮ್ಮಿಕೊಂಡುದಾಗಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು. ಸಂಜಯನಗರದಲ್ಲಿ ನಡೆದ ಗೋಸಂಧ್ಯಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ, ಗೋವುಗಳ ಮೂಲಕ ಸಮಸ್ತ ಜೀವ ಸಂಕುಲದ ಬದುಕುವ ಹಕ್ಕನ್ನು ಸಂರಕ್ಷಿಸುವುದು ತಮ್ಮ ಗುರಿ. ಇದರಲ್ಲಿ ಯಾವುದೇ ರಾಜಕೀಯ ದ್ವೇಷ ಇಲ್ಲ, ಕೋಮು ಭಾವನೆ ಘಾಸಿಗೊಳಿಸುವ ಹುನ್ನಾರ ಇಲ್ಲ ಎಂದು ಅವರು ಹೇಳಿದರು.

2006: ಹಿರಿಯ ಚಿತ್ರನಟಿ, ಸಮಾಜ ಸೇವಕಿ ಶಬಾನಾ ಆಜ್ಮಿ ಅವರು ಲಂಡನ್ ಮೂಲದ ಗಾಂಧಿ ಪ್ರತಿಷ್ಠಾನ ನೀಡುವ ಪ್ರತಿಷ್ಠಿತ `ಗಾಂಧಿ ಶಾಂತಿ ಪ್ರಶಸ್ತಿ'ಗೆ ಆಯ್ಕೆಯಾದರು.

2006: ಆರು ಮಂದಿ ಗಗನಯಾತ್ರಿಗಳನ್ನು ಹೊತ್ತ ಅಮೆರಿಕದ ಅಟ್ಲಾಂಟಿಸ್ ಬಾಹ್ಯಾಕಾಶ ನೌಕೆ ಕೇಪ್ ಕೆನವೆರಾಲ್ನಿಂದ ಬೆಳಿಗ್ಗೆ ಗಗನಕ್ಕೆ ಹಾರಿತು. ತಾಂತ್ರಿಕ ತೊಂದರೆಯಿಂದ ಈ ನೌಕೆಯ ಉಡಾವಣೆ ವಿಳಂಬವಾಗಿತ್ತು. ಅಟ್ಲಾಂಟಿಸ್ ಗಗನಯಾತ್ರಿಗಳು 11 ದಿನಗಳ ವಾಸ್ತವ್ಯ ಕಾಲದ್ಲಲಿ 3 ಬಾಹ್ಯಾಕಾಶ ನಡಿಗೆ ಕೈಗೊಂಡು ಬಾಹ್ಯಾಕಾಶ ಅಟ್ಟಣಿಗೆ ನಿರ್ಮಾಣ ಮುಂದುವರೆಸುವರು. 3 ವರ್ಷಗಳ ಹಿಂದೆ ಕೊಲಂಬಿಯಾ ಗಗನನೌಕೆ ದುರಂತದ ಬಳಿಕ ಈ ಕಾರ್ಯ ಸ್ಥಗಿತಗೊಂಡಿತ್ತು.

2006: ಲೋಕಸಭಾ ಅಧ್ಯಕ್ಷ ಸೋಮನಾಥ ಚಟರ್ಜಿ, ಸಮಾಜವಾದಿ ಮುಖಂಡ ಅಮರಸಿಂಗ್, ಸೇರಿದಂತೆ ಅನೇಕ ಸಂಸದರ ವಿರುದ್ಧ ಸಲ್ಲಿಸಲಾಗಿದ್ದ ದೂರುಗಳನ್ನು ತಿರಸ್ಕರಿಸುವ ಮೂಲಕ ಚುನಾವಣಾ ಆಯೋಗವು `ಲಾಭದಾಯಕ ಹುದ್ದೆ' ವಿವಾದಕ್ಕೆ ತೆರೆ ಎಳೆಯಿತು. ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು 50 ಪ್ರಮುಖ ಹುದ್ದೆಗಳನ್ನು ಲಾಭದಾಯಕ ಹುದ್ದೆ ವ್ಯಾಪ್ತಿಯಿಂದ ಹೊರಗಿಡುವ ಮಸೂದೆಗೆ ಸಹಿ ಹಾಕಿದ ಮೂರು ವಾರಗಳ ಬಳಿಕ ಚುನಾವಣಾ ಆಯೋಗವು ಮೂವರು ಸಚಿವರು ಸೇರಿ 13 ಮಂದಿ ಸಂಸದರ ವಿರುದ್ಧದ ದೂರುಗಳನ್ನು ತಿರಸ್ಕರಿಸಿತು.

2006: ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯವು ಸಿದ್ಧಪಡಿಸಿದ ಕಂಪ್ಯೂಟರ್ ಮೂಲಕ ಎಂಜಿನಿಯರಿಂಗ್ ನಕ್ಷೆ ಬಿಡಿಸಲು ಮಾರ್ಗದರ್ಶನ ಮಾಡಬ್ಲಲ ದೇಶದ ಮೊದಲ ಪಠ್ಯಪುಸ್ತಕ `ಪ್ರೀಮಿಯರ್ ಆನ್ ಕಂಪ್ಯೂಟರ್ ಏಯ್ಡೆಡ್ ಎಂಜಿನಿಯರಿಂಗ್'ನ್ನು ರಕ್ಷಣಾ ಸಚಿವರ ಮಾಜಿ ವೈಜ್ಞಾನಿಕ ಸಲಹೆಗಾರ ವಿ.ಕೆ. ಆತ್ರೆ ಬಿಡುಗಡೆ ಮಾಡಿದರು.

2006: ರತ್ನಜ ನಿರ್ದೇಶನದ `ನೆನಪಿರಲಿ' ಚಿತ್ರವು ಕನ್ನಡ ಚಿತ್ರಗಳಿಗೆ ಮೀಸಲಿಡಲಾದ ಎಲ್ಲ ಐದು `ಫಿಲಂಫೇರ್' ಪ್ರಶಸ್ತಿಗಳನ್ನು ಬಾಚಿಕೊಂಡಿತು. ನಿರ್ದೇಶಕ ರತ್ನಜ, ಸಂಗೀತ ನಿರ್ದೇಶಕ ಹಂಸಲೇಖಾ, ನಾಯಕ ಪ್ರೇಮ್ ಕುಮಾರ್, ನಾಯಕಿ ವಿದ್ಯಾ ವೆಂಕಟೇಶ್ ಅವರು ಶ್ರೇಷ್ಠ ನಿರ್ದೇಶಕ, ಸಂಗೀತ ನಿರ್ದೇಶಕ, ನಾಯಕ, ನಾಯಕಿ ಪ್ರಶಸ್ತಿಗಳನ್ನು ಪಡೆದರು. ಚಿತ್ರಕ್ಕೆ ನೀಡಲಾಗುವ ಶ್ರೇಷ್ಠ ಪ್ರಶಸ್ತಿಯೂ ಈ ಚಿತ್ರಕ್ಕೇ ಲಭಿಸಿತು.

1997: ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ ಘಟನೆಯ ಹಿನ್ನೆಲೆಯಲ್ಲಿ ಪ್ರಮುಖ ನಾಯಕರು ಸೇರಿದಂತೆ 47 ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ನಿಯೋಜಿತ ನ್ಯಾಯಾಲಯ ನಿರ್ಧರಿಸಿತು. 1992ರ ಡಿಸೆಂಬರ್ 6ರಂದು ನಡೆದ ಅಯೋಧ್ಯೆಯ ಬಾಬ್ರಿ ಮಸೀದಿಯ ಧ್ವಂಸ ಘಟನೆಗೆ ಸಂಬಂಧಿಸಿದಂತೆ ದಾಖಲಿಸಲಾದ ಈ ಪ್ರಕರಣದಲ್ಲಿ ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ, ಅಂದಿನ ಬಿಜೆಪಿ ಅಧ್ಯಕ್ಷ ಎಲ್. ಕೆ. ಅಡ್ವಾಣಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣಸಿಂಗ್ ಆರೋಪಿಗಳಲ್ಲಿ ಪ್ರಮುಖರು.

1976: ಚೀನೀ ಧುರೀಣ ಅಧ್ಯಕ್ಷ ಮಾವೋ ತ್ಸೆ ತುಂಗ್ ತಮ್ಮ 82ನೇ ವಯಸ್ಸಿನಲ್ಲಿ ನಿಧನರಾದರು.

1960: ಬ್ರಿಟಿಷ್ ನಟ ಹಫ್ ಗ್ರಾಂಟ್ ಜನ್ಮದಿನ.

1949: ಭಾರತದ ರಾಷ್ಟ್ರೀಯ ಗೀತೆಯಾಗಿ ಹಿಂದಿಯನ್ನು ಅಂಗೀಕರಿಸಲಾಯಿತು.

1948: ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕೊರಿಯಾ (ಉತ್ತರ ಕೊರಿಯಾ) ರಚನೆಯಾಯಿತು.

1946: ಸಾಹಿತಿ ಬಿ.ಆರ್. ಲಕ್ಷ್ಮಣ ರಾವ್ ಜನನ.

1944: ಸಾಹಿತಿ ಪದ್ಮಜ ಕೆ.ಆರ್. ಜನನ.

1941: ಮಾಜಿ ಕ್ರಿಕೆಟ್ ಆಟಗಾರ ಸೈಯದ್ ಅಬಿದ್ ಆಲಿ (1960) ಜನ್ಮದಿನ.

1937: ಸಾಹಿತಿ ಜ್ಯೋತಿ ಹೊಸೂರ ಜನನ.

1934: ಸಾಹಿತಿ ಶಿವಲಿಂಗಮ್ಮ ಕಟ್ಟಿ ಜನನ.

1933: ಸಾಹಿತಿ ಶೇಖರ ಇಡ್ಯ ಜನನ.

1910: ಖ್ಯಾತ ಸಾಹಿತಿ ಎಂ.ವಿ. ಸೀತಾರಾಮಯ್ಯ (9-9-1910ರಿಂದ 12-3-1990) ಅವರು ವೆಂಕಟದಾಸಪ್ಪ- ಸಾವಿತ್ರಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು. ರಾಘವ, ಮೈ.ವೆಂ.ಸೀ. ಇತ್ಯಾದಿ ಕಾವ್ಯನಾಮಗಳಿಂದ ಖ್ಯಾತರಾದ ಸೀತಾರಾಮಯ್ಯ 100ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ರಚಿಸಿದವರು. ದೇವರಾಜ ಬಹ್ದದೂರ್ ಬಹುಮಾನ, ರಾಜ್ಯ ಸರ್ಕಾರದ ಬಹುಮಾನ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಬಹುಮಾನ ಇತ್ಯಾದಿ ಗೌರವಗಳಿಗೆ ಅವರು ಪಾತ್ರರಾಗಿದ್ದರು.

1893: ಅಮೆರಿಕದ ಅಧ್ಯಕ್ಷ ಕ್ಲೀವ್ ಲೆಂಡ್ ಅವರ ಪತ್ನಿ ಫ್ರಾನ್ಸೆಸ್ ಕ್ಲೀವ್ ಲೆಂಡ್ ಅವರು ಶ್ವೇತಭವನದಲ್ಲಿ ಪುತ್ರಿ ಎಸ್ತೆರ್ ಗೆ ಜನ್ಮ ನೀಡಿದರು. ಅಮೆರಿಕದ ಅಧ್ಯಕ್ಷರ ಅಧಿಕೃತ ನಿವಾಸದಲ್ಲಿ ಮಗು ಹುಟ್ಟಿದ ಘಟನೆ ಇದೇ ಮೊದಲು.

1850: ಆಧುನಿಕ ಹಿಂದಿ ಸಾಹಿತ್ಯದ ಪಿತಾಮಹರೆಂದೇ ಖ್ಯಾತರಾದ ಭರತೇಂದು ಹರಿಶ್ಚಂದ್ರ (1850-1885) ಜನನ.

1776: `ಯುನೈಟೆಡ್ ಕಾಲೋನಿ' ಎಂಬ ಹೆಸರನ್ನು ಕಾಂಟಿನೆಂಟಲ್ ಕಾಂಗ್ರೆಸ್ `ಯುನೈಟೆಡ್ ಸ್ಟೇಟ್ಸ್' ಎಂಬುದಾಗಿ ಬದಲಾಯಿಸಿತು. ಇದರೊಂದಿಗೆ `ಯುನೈಟೆಡ್ ಸ್ಟೇಟ್ಸ್' ಜನನವಾಯಿತು.

1659: ತನ್ನ ಸಿಂಹಾಸನಾರೋಹಣಕ್ಕೆ ಅಡ್ಡಿಯಾಗಬಾರದೆಂದು ಔರಂಗಜೇಬನು  ಸಹೋದರ ದಾರಾ ಶಿಖೋಹ್ ನನ್ನು ಕೊಲೆಗೈಯುವುದರೊಂದಿಗೆ ಮೊಘಲ್ ಕುಟುಂಬದ ಸದಸ್ಯರೊಳಗಿನ ಅಧಿಕಾರದ ಪೈಪೋಟಿ ಗಂಭೀರ ಹಂತ ತಲುಪಿತು. ಸಹೋದರನ ಕೊಲೆಯ ಬಳಿಕ ಔರಂಗಜೇಬನು ಆತನ ತಲೆಯನ್ನು ಕಡಿದು ಅದನ್ನು ಆಗ್ರಾಕೋಟೆಯಲ್ಲಿ ಬಂಧನದಲ್ಲಿದ್ದ ತಂದೆ ಶಹಜಹಾನ್ ಗೆ ಕಳುಹಿಸಿದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement