ಇಂದಿನ ಇತಿಹಾಸ
ಸೆಪ್ಟೆಂಬರ್ 10
ಸ್ವಿಜರ್ಲೆಂಡಿನ ರೋಜರ್ ಫೆಡರರ್ ನಾಗಾಲೋಟಕ್ಕೆ ತಡೆಯೊಡ್ಡಬಲ್ಲ ಟೆನಿಸಿಗನೊಬ್ಬ ಇನ್ನೂ ಹುಟ್ಟಿಬಂದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಯಿತು. ನ್ಯೂಯಾರ್ಕಿನ ಅರ್ಥರ್ ಆಷ್ ಕ್ರೀಡಾಂಗಣದಲ್ಲಿ ಕೊನೆಗೊಂಡ ಅಮೆರಿಕಾ ಓಪನ್ ಟೂರ್ನಿಯಲ್ಲಿ 12ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಜಯಿಸಿದ ವಿಶ್ವದ ಅಗ್ರ ರ್ಯಾಂಕಿಂಗ್ ಆಟಗಾರ ಫೆಡರರ್ ವಿಶ್ವ ಟೆನಿಸ್ ನಲ್ಲಿ ತಮ್ಮ ಮೇಧಾವಿತ್ವ ಪ್ರಚುರಪಡಿಸಿದರು.
2008: ಬ್ರಹ್ಮಾಂಡದ ರಹಸ್ಯ ಅರಿಯುವತ್ತ, ಬಹು ಚರ್ಚಿತ ಬಿಗ್ ಬ್ಯಾಂಗ್ (ಮಹಾಸ್ಛೋಟ) ಸಿದ್ಧಾಂತದ ಸತ್ಯಾಸತ್ಯತೆ ಅಳೆಯುವತ್ತ ವಿಜ್ಞಾನಿ ಸಮುದಾಯ ದೈತ್ಯ ಹೆಜ್ಜೆ ಇಟ್ಟಿತು. ಅಂತಾರಾಷ್ಟ್ರೀಯ ಕಾಲಮಾನ ಬೆಳಗಿನ 7.30ರ ಹೊತ್ತಿಗೆ ಸರಿಯಾಗಿ ಫ್ರಾನ್ಸ್- ಸ್ವಿಟ್ಜರ್ ಲ್ಯಾಂಡ್ ಗಡಿಯಲ್ಲಿ 100 ಮೀಟರ್ ಆಳದಲ್ಲಿ ನಿರ್ಮಿಸಲಾದ 27 ಕಿ.ಮೀ. ಉದ್ದದ ವೃತ್ತಾಕಾರದ ಸುರಂಗದಲ್ಲಿ(ದೈತ್ಯ ಡಿಕ್ಕಿಕಾರ- ಎಲ್ ಎಚ್ ಸಿ) ಮನುಷ್ಯನ ಕೂದಲಿನಷ್ಟು ದಪ್ಪದ ಪ್ರೋಟಾನ್ ಪುಂಜವನ್ನು ತೂರಲಾಯಿತು. ಕಣ ಭೌತಶಾಸ್ತ್ರಜ್ಞರು, ವಿಜ್ಞಾನದ ವಿದ್ಯಾರ್ಥಿಗಳು, ಗ್ರಹ, ನಕ್ಷತ್ರಗಳ ಹುಟ್ಟು, ಚಲನೆ, ಜೀವಾಣುಗಳ ಉತ್ಪತ್ತಿ ಸೇರಿದಂತೆ ವಿಶ್ವದ ನಿಗೂಢ ವಿದ್ಯಮಾನಗಳನ್ನು ಬೆರಗುಗಣ್ಣಿನಿಂದ ನೋಡುವವರೆಲ್ಲ ಟಿ.ವಿ ಪರದೆಯ ಮುಂದೆ ಕಣ್ಣು ಕೀಲಿಸಿ ಕುಳಿತು ಈ ಘಟನೆಯನ್ನು ವೀಕ್ಷಿಸಿದರು.
2007: ಸ್ವಿಜರ್ಲೆಂಡಿನ ರೋಜರ್ ಫೆಡರರ್ ನಾಗಾಲೋಟಕ್ಕೆ ತಡೆಯೊಡ್ಡಬಲ್ಲ ಟೆನಿಸಿಗನೊಬ್ಬ ಇನ್ನೂ ಹುಟ್ಟಿಬಂದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಯಿತು. ನ್ಯೂಯಾರ್ಕಿನ ಅರ್ಥರ್ ಆಷ್ ಕ್ರೀಡಾಂಗಣದಲ್ಲಿ ಕೊನೆಗೊಂಡ ಅಮೆರಿಕಾ ಓಪನ್ ಟೂರ್ನಿಯಲ್ಲಿ 12ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಜಯಿಸಿದ ವಿಶ್ವದ ಅಗ್ರ ರ್ಯಾಂಕಿಂಗ್ ಆಟಗಾರ ಫೆಡರರ್ ವಿಶ್ವ ಟೆನಿಸ್ ನಲ್ಲಿ ತಮ್ಮ ಮೇಧಾವಿತ್ವ ಪ್ರಚುರಪಡಿಸಿದರು. ಫೈನಲಿನಲ್ಲಿ ಅವರು 7-6, 7-6, 6-4 ಅಂತರದಲ್ಲಿ ಸರ್ಬಿಯಾದ ಯುವ ಪ್ರತಿಭೆ ನೊವಾಕ್ ಜೊಕೊವಿಕ್ ಅವರನ್ನು ಮಣಿಸಿದರು. ಈ ಮೂಲಕ 14 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿರುವ ಅಮೆರಿಕದ ಪೀಟ್ ಸಾಂಪ್ರಾಸ್ ಅವರ ದಾಖಲೆ ಮುರಿಯುವ ನಿಟ್ಟಿನಲ್ಲೂ ಮತ್ತೊಂದು ಹೆಜ್ಜೆ ಮುಂದಿಟ್ಟರು. ಬಿಲ್ ಟಿಲ್ಡನ್ ಅವರು 1920 ರಿಂದ 25ರವರೆಗೆ ಸತತ ಆರು ವರ್ಷಗಳ ಕಾಲ ಅಮೆರಿಕಾ ಓಪನ್ ಪ್ರಶಸ್ತಿ ಗೆದ್ದಿದ್ದರು. ಆ ಬಳಿಕ ಆಟಗಾರನೊಬ್ಬ ಇಲ್ಲಿ ಸತತ ನಾಲ್ಕು ಬಾರಿ ಪ್ರಶಸ್ತಿ ಗೆದ್ದದ್ದು ಇದೇ ಮೊದಲು.
2007: ಪಾಕಿಸ್ಥಾನದ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರಿಗೆ ರಾಜಕೀಯ ಸವಾಲು ಹಾಕುವ ರೀತಿಯಲ್ಲಿ ಏಳು ವರ್ಷಗಳ ನಂತರ ಈದಿನ ಸ್ವದೇಶಕ್ಕೆ ಮರಳಿದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಪಾಕ್ ಸರ್ಕಾರ ಬಂಧಿಸಿ, ಕೆಲ ಗಂಟೆಗಳಲ್ಲೇ ಸೌದಿ ಅರೇಬಿಯಾಕ್ಕೆ ಗಡೀಪಾರು ಮಾಡಿತು. ಇದರಿಂದಾಗಿ ವಿಶ್ವದಾದ್ಯಂತ ಕುತೂಹಲ ಕೆರಳಿಸಿದ್ದ ಈ `ರಾಜಕೀಯ ಪ್ರಹಸನ' ಐದು ಗಂಟೆಗಳಲ್ಲಿ ಅಂತ್ಯಗೊಂಡಿತು. ಬೆಳಗಿನ ವೇಳೆಯಲ್ಲಿ ಲಂಡನ್ನಿನಿಂದ ಆಗಮಿಸಿದ ನವಾಜ್ ಷರೀಫ್ ಅವರನ್ನು ಇಸ್ಲಾಮಾಬಾದ್ ವಿಮಾನ ನಿಲ್ದಾಣದಲ್ಲಿ ಬಂಧಿಸಿ, 90 ನಿಮಿಷ ಕಾಲ ವಿಮಾನದಲ್ಲಿಯೇ ಇರಿಸಲಾಯಿತು. ನಂತರ ವಿಮಾನದಿಂದ ಇಳಿದ ಷರೀಫ್ಗೆ ಬಂಧನದ ವಾರಂಟ್ ನೀಡಿದ ಹಿರಿಯ ಪೊಲೀಸ್ ಅಧಿಕಾರಿಗಳು, ಅವರ ತೋಳು ಹಿಡಿದು ವಶಕ್ಕೆ ತೆಗೆದುಕೊಂಡರು. ಹೆಲಿಕಾಪ್ಟರಿನಲ್ಲಿ ಕೂರಿಸಿ, ಅಜ್ಞಾತ ಸ್ಥಳಕ್ಕೆ ಕೊಂಡೊಯ್ಯಲಾಯಿತು. ಆನಂತರ ಹೆಲಿಕಾಪ್ಟರ್ ಇಸ್ಲಾಮಾಬಾದಿಗೆ ಮರಳಿ ಬಂತು. ನವಾಜರನ್ನು ವಿಶೇಷ ವಿಮಾನದಲ್ಲಿ ಬಲವಂತವಾಗಿ ಕೂರಿಸಲಾಯಿತು. ಅವರನ್ನು ಸೌದಿ ಅರೇಬಿಯಾದ ಜೆಡ್ಡಾಗೆ ಗಡೀಪಾರು ಮಾಡಲಾಗಿದೆ ಎಂದು ಕೆಲ ನಿಮಿಷಗಳಲ್ಲೇ ಅಧಿಕೃತವಾಗಿ ಪ್ರಕಟಿಸಲಾಯಿತು. 1999ರ ಅಕ್ಟೋಬರಿನಲ್ಲಿ ಸೇನಾ ಕ್ರಾಂತಿಯ ನಂತರ ಮುಷರಫ್, ನವಾಜ್ ಷರೀಫರನ್ನು ಪ್ರಧಾನಿ ಪಟ್ಟದಿಂದ ಪದಚ್ಯುತಗೊಳಿಸಿದ್ದರು. ಭ್ರಷ್ಟಾಚಾರದ ಆರೋಪದ ಮೇಲೆ ಜೂನ್ 2000ದಲ್ಲಿ ಪಾಕ್ ನ್ಯಾಯಾಲಯ ಷರೀಫ್ ಗೆ 14 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. 21 ವರ್ಷಗಳ ಕಾಲ ಸಾರ್ವಜನಿಕ ಹುದ್ದೆ ವಹಿಸಿಕೊಳ್ಳದಂತೆ ನಿರ್ಬಂಧಿಸಿತ್ತು. ಪಾಕ್ ಸರ್ಕಾರ ಹಾಗೂ ಸೌದಿ ಅರೇಬಿಯಾ ರಾಜಮನೆತನದ ನಡುವೆ ಆದ ಒಪ್ಪಂದದಂತೆ ಷರೀಫ್ 2000ನೇ ಇಸ್ವಿ ಡಿಸೆಂಬರಿನಲ್ಲಿ ತಮ್ಮ ಕುಟುಂಬದ 20 ಸದಸ್ಯರೊಂದಿಗೆ ಜೆಡ್ಡಾದಲ್ಲಿ ಭೂಗತರಾದರು. ಈ ವರ್ಷ ಆಗಸ್ಟ್ 23ರಂದು ಪಾಕ್ ಸುಪ್ರೀಂಕೋರ್ಟ್ ನವಾಜ್ ಷರೀಫ್ ತಾಯ್ನಾಡಿಗೆ ಮರಳಬಹುದು ಎಂದು ತೀರ್ಪು ನೀಡಿತ್ತು. ಸಾರ್ವತ್ರಿಕ ಚುನಾವಣೆಯಲ್ಲಿ ಮುಷರಫ್ ವಿರುದ್ಧ ಸಮರ ಸಾರಲು ತಾಯ್ನಾಡಿಗೆ ಮರಳುವುದಾಗಿ ಷರೀಫ್ ಘೋಷಿಸಿದ್ದರು.
2007: ಭಾರತ-ಅಮೆರಿಕ ನಾಗರಿಕ ಪರಮಾಣು ಸಹಕಾರ ಒಪ್ಪಂದದ ಪರಿಶೀಲನೆಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸುವಂತೆ ಆಗ್ರಹಿಸಿ ಸತತ ಎರಡನೇ ವಾರವೂ ಪ್ರತಿಪಕ್ಷಗಳು ಪ್ರತಿಭಟನೆ ಮುಂದುವರಿಸಿದ ಪರಿಣಾಮ ಸಂಸತ್ತಿನ ಉಭಯ ಸದನಗಳನ್ನು ಯಾವುದೇ ಕಲಾಪ ನಡೆಸಲಾಗದೆ ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾಯಿತು. ಲೋಕಸಭೆಯಲ್ಲಿ ಬಿಜೆಪಿ ಸದಸ್ಯರು ಜೆಪಿಸಿ ರಚನೆಗೆ ಒತ್ತಾಯಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಭಾಧ್ಯಕ್ಷರ ಪೀಠದ ಮುಂದೆ ಧಾವಿಸಿದ ಸಂದರ್ಭದಲ್ಲಿಯೇ ಯಾವುದೇ ಚರ್ಚೆ ಇಲ್ಲದೆ ವೈಮಾನಿಕ (ತಿದ್ದುಪಡಿ) ಮಸೂದೆ-2006ನ್ನು ಅಂಗೀಕರಿಸಲಾಯಿತು. ಇದರೊಂದಿಗೆ ಏಜೆಂಟರು ಮತ್ತು ಕೊರಿಯರ್ ಏಜೆನ್ಸಿಗಳನ್ನು ಒಳಗೊಂಡಂತೆ ರಸ್ತೆ ಮೇಲಿನ ಸರಕು ಸಾಗಾಟವನ್ನು ನಿಯಂತ್ರಿಸುವ ಮತ್ತು ಬೆಲೆ ನಿಗದಿಪಡಿಸುವ ಪ್ರಮುಖ ಮಸೂದೆಗೂ ಲೋಕಸಭೆ ಅಂಗೀಕಾರ ನೀಡಿತು.
2007: ಆರು ತಿಂಗಳಿಂದ ದೇಶದಲ್ಲಿ ಆಂತರಿಕ ರಾಜಕೀಯದ ಮೇಲೆ ಹೇರಿದ್ದ ನಿಷೇಧವನ್ನು ಬಾಂಗ್ಲಾದೇಶದ ಸೇನಾ ಬೆಂಬಲಿತ ಹಂಗಾಮಿ ಸರ್ಕಾರ ರಾಜಧಾನಿ ಢಾಕಾದಲ್ಲಿ ಮಾತ್ರ ಹಿಂತೆಗೆದುಕೊಂಡಿತು. ಎಲ್ಲ ರಾಜಕೀಯ ಪಕ್ಷಗಳು ತಮ್ಮ ಕಚೇರಿಗಳ ಬಾಗಿಲನ್ನು ಮತ್ತೆ ತೆರೆದವು. ದೇಶವನ್ನು ಉದ್ದೇಶಿಸಿ ಮಾತನಾಡಿದ ಸರ್ಕಾರದ ಮುಖ್ಯ ಸಲಹೆಕಾರ ಫಕ್ರುದ್ದೀನ್ ಅಹ್ಮದ್ ಅವರು, 2008ರೊಳಗೇ ದೇಶದಲ್ಲಿ ಸಂಸತ್ ಚುನಾವಣೆ ನಡೆಸುವುದಾಗಿ ಹೇಳಿದರು.
2007: ಕೊಲಂಬಿಯಾದ ಪಶ್ಚಿಮ ಕಡಲ ತೀರದ ಬಳಿ ಈದಿನ ರಾತ್ರಿ ರಿಕ್ಟರ್ ಮಾಪನದಲ್ಲಿ 6.8 ರಷ್ಟಿದ್ದ ಪ್ರಬಲ ಭೂಕಂಪ ಸಂಭವಿಸಿತು.
2006: ರಷ್ಯಾದ ಮರಿಯಾ ಶೆರ್ಪೋವಾ ಅವರು ಅಮೆರಿಕದ ನ್ಯೂಯಾರ್ಕಿನ ಫ್ಲಷಿಂಗ್ ಮಿಡೋಸ್ನ ಆರ್ಥರ್ ಆಶ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಮೆರಿಕ ಓಪನ್ ಟೆನಿಸ್ ಚಾಫಿಯನ್ ಶಿಪ್ ನ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.
2006: ಅಮೆರಿಕದ ಮೆಸಾಚ್ಯುಸೆಟ್ಸ್ ತಂತ್ರಜ್ಞಾನ ವಿಶ್ವವಿದ್ಯಾಲಯದ `ಟೆಕ್ನಾಲಜಿ ರಿವ್ಯೂ' ನಿಯತಕಾಲಿಕದ ಪ್ರತಿಷ್ಠಿತ ಪ್ರಶಸ್ತಿಗೆ ಭಾರತೀಯ ಮೂಲದ 6 ಮಂದಿ ಅಮೆರಿನ್ನರೂ ಸೇರಿದಂತೆ 35 ವಿಜ್ಞಾನಿಗಳನ್ನು ಆಯ್ಕೆ ಮಾಡಲಾಯಿತು. ಪೃಥ್ವೀಸ್ ಬಸು (ಬಿಬಿಎನ್ ಟೆಕ್ನಾಲಜೀಸ್), ರಾಮಕೃಷ್ಣಮೂರ್ತಿ (ಇಂಟೆಲ್), ಅಶೋಕ ಮಲೈಕಲ್ (ಲ್ಯೂಸೆಂಟ್ ಟೆಕ್ನಾಲಜೀಸ್), ಆನಂದ ರಘುನಾಥನ್ (ಎನ್ ಇಸಿ ಲ್ಯಾಬೋರೇಟರೀಸ್), ಜಯ್ ಶೆಂದುರೆ (ಹಾರ್ವರ್ಡ್ ಮೆಡಿಕಲ್ ಸ್ಕೂಲ್) ಮತ್ತು ಸುಮಿತ್ ಸಿಂಗ್ (ಸಿಸ್ಕೊ) ಈ ಗೌರವಕ್ಕೆ ಪಾತ್ರರಾದವರು.
1999: ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋನಿಯಾ ಗಾಂಧಿ ನಾಮಪತ್ರ ಸಲ್ಲಿಸಿದರು.
1988: ಯು.ಎಸ್. ಓಪನ್ ಪಂದ್ಯದಲ್ಲಿ ಸ್ಟೆಫಿ ಗ್ರಾಫ್ ಅವರು ಗ್ಯಾಬ್ರೀಲಾ ಸಬಾಟಿನಿ ಅವರನ್ನು ಪರಾಭವಗೊಳಿಸಿದರು. ಈ ಮೂಲಕ ಟೆನಿಸ್ ಗ್ರ್ಯಾಂಡ್ ಸ್ಲಾಮ್ ಗೆದ್ದುಕೊಂಡ ಮೂರನೇ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.
1981: ಇಪ್ಪತ್ತನೇ ಶತಮಾನದ ಶ್ರೇಷ್ಠ ವರ್ಣಚಿತ್ರ್ರ ಎನ್ನಲಾದ ಪಾಬ್ಲೊ ಪಿಕಾಸೋ ಅವರ `ಗುಯೆರ್ನಿಕಾ' ವರ್ಣಚಿತ್ರವು ಮ್ಯಾಡ್ರಿಡ್ ನ ಪ್ರಾಡೋ ಮ್ಯೂಸಿಯಂಗೆ ಹಿಂತಿರುಗಿತು. 1940ರಲ್ಲಿ ಸುರಕ್ಷಿತವಾಗಿ ಇಡುವ ಸಲುವಾಗಿ ಪಿಕಾಸೋ ಅದನ್ನು ನ್ಯೂಯಾರ್ಕಿಗೆ ಕಳುಹಿಸಿದ್ದರು.
1976: ಯುಗೋಸ್ಲಾವಿಯಾದ ವಾಯುನೆಲಯಲ್ಲಿ ಹಾರಾಡುತ್ತಿದ್ದ ಎರಡು ಪ್ರಯಾಣಿಕರ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು 176 ಪ್ರಯಾಣಿಕರು ಅಸು ನೀಗಿದರು.
1966: ಹರಿಯಾಣ ಮತ್ತು ಪಂಜಾಬನ್ನು ಪ್ರತ್ಯೇಕ ರಾಜ್ಯಗಳಾಗಿ ವಿಭಜಿಸುವ ಪಂಜಾಬ್ ಪುನರ್ರಚನಾ ಮಸೂದೆಗೆ ಸಂಸತ್ ಒಪ್ಪಿಗೆ.
1951: ಸಾಹಿತಿ ಕರೀಗೌಡ ಬೀಚನಹಳ್ಳಿ ಜನನ.
1946: ಡಾರ್ಜಿಲಿಂಗ್ ಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಕೋಲ್ಕತ್ತಾದ ಮದರ್ ತೆರೇಸಾ ಅವರಿಗೆ ಅನಾಥರ ಸೇವೆ ಕೈಗೆತ್ತಿಕೊಳ್ಳುವಂತೆ `ದೈವ ಪ್ರೇರಣೆ'ಯಾಯಿತು.
1937: ಸಾಹಿತಿ ಬಿ.ಜಿ. ಸತ್ಯಮೂರ್ತಿ ಜನನ.
1936: ಭಾರತದ ಮಾಜಿ ಉಪರಾಷ್ಟ್ರಪತಿ ಬಸಪ್ಪ ದಾನಪ್ಪ ಜತ್ತಿ (ಬಿ.ಡಿ. ಜತ್ತಿ) (10-9-1936ರಿಂದ 7-6-2002) ಜನ್ಮದಿನ. ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಸಾವಳಗಿಯವರಾದ ಜತ್ತಿ ಸ್ವ ಸಾಮರ್ಥ್ಯದಿಂದ ತಮ್ಮ ಬದುಕು ರೂಪಿಸಿಕೊಂಡು ಭಾರತದ ಉಪರಾಷ್ಟ್ರಪತಿ ಸ್ಥಾನದವರೆಗಿನ ಉನ್ನತ ಸ್ಥಾನಕ್ಕೆ ಏರಿದವರು. ರಾಷ್ಟ್ರಪತಿ ಫಕ್ರುದ್ದೀನ್ ಆಲಿ ಅಹ್ಮದ್ ಅವರು ನಿಧನರಾದಾಗ ಸ್ವಲ್ಪ ಕಾಲ ಹಂಗಾಮಿ ರಾಷ್ಟ್ರಪತಿಯಾಗಿಯೂ ಜತ್ತಿ ಕಾರ್ಯ ನಿರ್ವಹಿಸಿದ್ದರು. ಗುಡ್ಡಗಾಡು ಪ್ರದೇಶದ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿ 1943ರಲ್ಲಿಸಾವಳಗಿಯ ಗ್ರಾಮ ಪಂಚಾಯ್ತಿ ಸದಸ್ಯರಾದ ಅವರು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. 1940ರಲ್ಲಿ ನ್ಯಾಯವಾದಿಯಾಗಿ ಬದುಕು ಆರಂಭಿಸಿದ ಅವರು ರಾಜಕಾರಣಿಯಾಗಿ ಜೀವನವನ್ನು ಸಮಾಜ ಸೇವೆಗೆ ಅರ್ಪಿಸಿಕೊಂಡರು. ಅವರು ಹೊಂದಿದ್ದ ಪ್ರಮುಖ ಹುದ್ದೆಗಳಲ್ಲಿ ಕೆಲವು: ಮುಂಬೈ ವಿಧಾನಸಭೆಯ ಶಾಸಕ (1949), ಮುಂಬೈ ರಾಜ್ಯದ ಉಪ ಮುಖ್ಯಮಂತ್ರಿ (1955), ಭೂಸುಧಾರಣಾ ಮಂಡಲದ ಅಧ್ಯಕ್ಷ (1957), ರಾಜ್ಯ ಪುನರ್ ವಿಂಗಡಣೆಯ ಬಳಿಕ ಕರ್ನಾಟಕದ ಮುಖ್ಯಮಂತ್ರಿ (1958), ಪಾಂಡಿಚೇರಿಯ (ಈಗಿನ ಪುದುಚೆರಿ) ಲೆಫ್ಟಿನೆಂಟ್ ಗವರ್ನರ್ (1968), ಒರಿಸ್ಸಾ ರಾಜ್ಯದ ರಾಜ್ಯಪಾಲ (1972), ಭಾರತದ ಉಪರಾಷ್ಟ್ರಪತಿ (1974). ಭಾರತದ ಹಂಗಾಮೀ ರಾಷ್ಟ್ರಪತಿ (11-2-1977ರಿಂದ 25-7-1977).
1935: ಸಾಹಿತಿ ಆರ್. ರಾಚಪ್ಪ ಜನನ.
1926: ಸಾಹಿತಿ ಎ.ಎಂ. ಮುತ್ತಯ್ಯ ಜನನ.
1924: ಖ್ಯಾತ ಹಿಂದಿ ಬರಗಾರ ಕೆ.ಟಿ. ಗೋಪಾಲಕೃಷ್ಣನ್ ಜನನ.
1920: ತಮಿಳು ಭಾಷೆಯ ರಾಷ್ಟ್ರಕವಿ, ಉತ್ತಮ ವಾಗ್ಮಿ, ಸಂಪಾದಕ, ತತ್ವಜ್ಞಾನಿ, ಕ್ರಾಂತಿಕಾರಿ ಸುಬ್ರಹ್ಮಣ್ಯ ಭಾರತಿ ಜನನ.
1915: ಜತೀಂದ್ರನಾಥ ಮುಖರ್ಜಿ ಯಾನೆ ಬಾಘಾ ಜತಿನ್ ಅವರು ಒರಿಸ್ಸಾದ ಬಾಲಸೋರಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಒಂದು ದಿನ ಮೊದಲು ಅವರು ಕಪ್ಟಿಪಾಡಾದಲ್ಲಿ ಬ್ರಿಟಿಷ್ ಪೊಲೀಸರ ಜೊತೆಗೆ ಗುಂಡಿನ ಘರ್ಷಣೆ ನಡೆಸಿದ್ದರು.
1909: ಅಣಕು ಸಾಹಿತ್ಯ, ಚುಟುಕು ಪದ್ಯಗಳ ಮೂಲಕ ಜನಮನ ಸೂರೆಗೊಂಡ `ಚುಟುಕು ಬ್ರಹ್ಮ' ದಿನಕರ ದೇಸಾಯಿ (10-9-1909ರಿಂದ 6-11-1982) ಅವರು ದತ್ತಾತ್ರೇಯ- ಅಂಬಿಕೆ ದಂಪತಿಯ ಮಗನಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಅಂತರವಳ್ಳಿ ಗ್ರಾಮದ ಹಂಡದೊಕ್ಕಲ ದೇಸಾಯರ ಮನೆಯಲ್ಲಿ ಜನಿಸಿದರು. ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ಇವರ ಬರವಣಿಗೆ ಆರಂಭ. ಕುಮಟಾದಿಂದ ಪ್ರಕಟವಾಗುತ್ತಿದ್ದ `ಕಾನಡಾ ಧುರೀಣ' ಪತ್ರಿಕೆಯಲ್ಲಿ ಸಂಪಾದಕ ಶ್ರೀರಾಮ ಸೋಮಯಾಜಿ ಅವರು ದಿನಕರ ದೇಸಾಯಿ ಬರೆದ ಕವನಗಳನ್ನು ಪ್ರಕಟಿಸಿ ಪ್ರೋತ್ಸಾಹ ನೀಡಿದರು. ಮುಂದೆ ವಿ.ಸೀ., ಬಿ.ಎಂ.ಶ್ರೀ. ಮಾರ್ಗದರ್ಶನ. ಅಣಕು ಸಾಹಿತ್ಯದ ಮೂಲಕ ಸಮಾಜ ಪರಿವರ್ತನೆಗೆ ಯತ್ನಿಸಿದ ದಿನಕರ ದೇಸಾಯಿ, ಭಾರತ ಸೇವಾ ಸಮಾಜ, ಕೆನರಾ ವೆಲ್ ಫೇರ್ ಟ್ರಸ್ಟುಗಳ ಮೂಲಕ ಕಾರ್ಮಿಕ ಸಂಘಟನೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸಮಗ್ರ ಶಿಕ್ಷಣ ಅಭಿವೃದ್ಧಿಗೆ ಯತ್ನಿಸಿದರು. ಇದಕ್ಕಾಗಿ ಹೈಸ್ಕೂಲು, ಹೈಯರ್ ಸೆಕೆಂಡರಿ ಶಾಲೆ, ಕಾಲೇಜುಗಳು ಸೇರಿದಂತೆ 21 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಆರು ಸಮಾಜ ಸೇವಾ ಸಂಸ್ಥೆಗಳ ಸ್ಥಾಪನೆ ಜೊತೆಗೆ ಲೋಕಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು.
1894: ಸಾಹಿತಿ ಪಿ.ಆರ್. ರಾಮಯ್ಯ ಜನನ.
1887: ಭಾರತದ ರಾಷ್ಟ್ರೀಯ ನಾಯಕ ಗೋವಿಂದ ವಲ್ಲಭ ಪಂತ್ ಜನ್ಮದಿನ. ಸ್ವಾತಂತ್ರ್ಯಾನಂತರ ಇವರು ಉತ್ತರ ಪ್ರದೇಶದ ಪ್ರಥಮ ಮುಖ್ಯಮಂತ್ರಿಯಾದರು.
1872: ಜಗತ್ತಿನ ಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾದ ನವನಗರದ ಸರ್ ರಣಜಿತ್ ಸಿನ್ಹಜಿ ವಿಭಾಜಿ ಮಹಾರಾಜ (1872-1933) ಜನ್ಮದಿನ. ಇವರ ಗೌರವಾರ್ಥ ಭಾರತದಲ್ಲಿ `ರಣಜಿ ಟ್ರೋಫಿ' ಸ್ಥಾಪಿಸಲಾಗಿದೆ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment