My Blog List

Saturday, September 19, 2009

ಇಂದಿನ ಇತಿಹಾಸ History Today ಸೆಪ್ಟೆಂಬರ್ 15

ಇಂದಿನ ಇತಿಹಾಸ

ಸೆಪ್ಟೆಂಬರ್ 15


ಹಿರಿಯ ವಕೀಲ ಹಾಗೂ ಮಾಜಿ ಸಚಿವ ಪ್ರೊ. ಎಲ್.ಜಿ. ಹಾವನೂರು ಅವರು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಕರ್ನಾಟಕದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಅವರು ವಸ್ತುನಿಷ್ಠ ವರದಿಯ ಮೂಲಕ ಎಲ್ಲರ ಗಮನ ಸೆಳೆದಿದ್ದರು.


2008: ಮುರುಘಾಮಠದ ವತಿಯಿಂದ ನೀಡುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಗೆ ದೇಶದ ಪ್ರಥಮ ಮಹಿಳಾ ಐಪಿಎಸ್ ಅಧಿಕಾರಿ ಡಾ.ಕಿರಣ್ ಬೇಡಿ ಅವರನ್ನು ಆಯ್ಕೆ ಮಾಡಲಾಯಿತು.  ಕಿರಣ್ ಬೇಡಿ ಅವರ ಕರ್ತವ್ಯನಿಷ್ಠೆ, ಸಾಮಾಜಿಕ ಬದ್ಧತೆ, ನಿಸ್ಪೃಹ ಸೇವೆ ಮತ್ತು ಸಮಾಜ ಸುಧಾರಣಾ ಚಟುವಟಿಕೆಗಳನ್ನು ಪರಿಗಣಿಸಿ ಅವರನ್ನು 2008 ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಚಿತ್ರದುರ್ಗದಲ್ಲಿ ಪ್ರಕಟಿಸಿದರು.

2008: ದಕ್ಷಿಣದ ರಾಜ್ಯಗಳಲ್ಲಿ ವಿಧ್ವಂಸಕ ಕೃತ್ಯ ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ನಿರತವಾಗಿದ್ದ ಕರ್ನಾಟಕ ಮೂಲದ ದೀನ್ ದಾರ್ ಅಂಜುಮನ್ ಸಂಘಟನೆಯ ಮೇಲೆ ಕೇಂದ್ರ ಸರ್ಕಾರ ಹೇರಿದ್ದ ನಿಷೇಧವನ್ನು ಸುಪ್ರೀಂಕೋರ್ಟ್ ಸಮರ್ಥಿಸಿತು. ಎರಡು ವರ್ಷಗಳಿಗೆ ನಿಷೇಧ ಮುಂದುವರಿಸುವ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದ್ದಿದ ನ್ಯಾಯಮಂಡಳಿಯ ತೀರ್ಪಿನ ವಿರುದ್ಧ ಗುಲ್ಬರ್ಗ ಮೂಲದ ಈ ಸಂಘಟನೆ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಅರಿಜಿತ್ ಪಸಾಯತ್ ತಳ್ಳಿಹಾಕಿದರು. ಇಗರ್ಜಿಗಳ (ಚರ್ಚ್) ಮೇಲೆ ದಾಳಿ ನಡೆಸುವ ಮೂಲಕ ಹಿಂದೂಗಳು- ಕ್ರಿಶ್ಚಿಯನ್ನರ ನಡುವೆ ದ್ವೇಷದ ಕಿಡಿ ಹೊತ್ತಿಸಲು ಕಾರಣವಾಗಿದ್ದ ಸಂಘಟನೆಯ ವಿರುದ್ಧ ಸರ್ಕಾರ ವಿಧಿಸಿದ್ದ ನಿಷೇಧವನ್ನು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ನೇತೃತ್ವದ ನ್ಯಾಯಮಂಡಳಿ ಈ ವರ್ಷದ ಫೆ. 27ರಂದು ಎತ್ತಿಹಿಡಿದಿತ್ತು. ಕರ್ನಾಟಕ, ಗೋವಾ, ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ವಿಧ್ವಂಸಕ ಕೃತ್ಯ ಎಸಗಿದ್ದ ಬಗ್ಗೆ ಹಾಗೂ 2000ನೇ ಇಸವಿಯಲ್ಲಿ ದಕ್ಷಿಣ ಭಾರತದ ಇಗರ್ಜಿಗಳ ಮೇಲೆ 12 ಬಾಂಬ್ ದಾಳಿಗಳನ್ನು ನಡೆಸಿದ್ದ ಬಗ್ಗೆ ಸರ್ಕಾರ ಸಾಕ್ಷ್ಯ ಒದಗಿಸಿತ್ತು. 2001ರಿಂದ ಈವರೆಗೆ ನಾಲ್ಕನೇ ಬಾರಿಗೆ ಸಂಘಟನೆಯ ಮೇಲೆ ನಿಷೇಧ ಹೇರಲಾಗಿತ್ತು.

2007: ಗಣೇಶ ಚತುರ್ಥಿಯ ದಿನ ಮಧ್ಯಾಹ್ನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ನಿಯಂತ್ರಣ ತಪ್ಪಿ ತೆರೆದ ಬಾವಿಗೆ ಬಿದ್ದ ಪರಿಣಾಮವಾಗಿ ಎಂಟು ಮಂದಿ ವಿದ್ಯಾರ್ಥಿಗಳು ಸೇರಿದಂತೆ  10 ಮಂದಿ ಸಾವಿಗೀಡಾದ ದಾರುಣ ಘಟನೆ ಅಥಣಿಗೆ ಎಂಟು ಕಿ.ಮೀ. ದೂರದ ಅಥಣಿ-ಅನಂತಪುರ ರಸ್ತೆಯ ಪ್ರಾರ್ಥನಹಳ್ಳಿ ಬಳಿ ಸಂಭವಿಸಿತು. ವಿದ್ಯಾರ್ಥಿಗಳು ಹಬ್ಬದ ಪ್ರಯುಕ್ತ ಶಾಲೆಯಲ್ಲಿ ಗಣಪತಿ ಪೂಜೆ ನೆರವೇರಿಸಿ ಸ್ವಗ್ರಾಮಗಳಿಗೆ ಮರಳುತ್ತಿದ್ದಾಗ ಈ ದುರಂತ ಸಂಭವಿಸಿತು.

2007: ಗೋವಾದ ಮಾರ್ಗೋವ ಜೈಲಿನಲ್ಲಿ ಗಣೇಶ ಚತುರ್ಥಿ ಆಚರಣೆ ಸಂದರ್ಭದಲ್ಲಿ 14 ಮಂದಿ ವಿಚಾರಣಾಧೀನ ಕೈದಿಗಳು ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಜೈಲಿನಿಂದ ಪರಾರಿಯಾದರು.

2007: ಮಾಜಿ ಕೇಂದ್ರ ಸಚಿವೆ, ಭಾರತೀಯ ಜನಶಕ್ತಿ ಪಕ್ಷದ ನಾಯಕಿ ಉಮಾ ಭಾರತಿ ಅವರು ಇಂದೋರಿನಲ್ಲಿ ರಿಲಯನ್ಸ್ ಫ್ರೆಶ್ ಬಿಡಿ ಮಾರಾಟ ಮಳಿಗೆಯೊಂದಕ್ಕೆ ಬೀಗ ಜಡಿದರು. ಇಲ್ಲಿನ ಜಂಜೀರ್ ವಾಲಾ ಪ್ರದೇಶದಲ್ಲಿ ರಿಲಯನ್ಸ್ ಫ್ರೆಶ್ ಬಿಡಿ ಮಾರಾಟ ಮಳಿಗೆಗೆ ತರಕಾರಿ ತುಂಬಿದ್ದ ಬುಟ್ಟಿಯೊಂದನ್ನು ಹೊತ್ತುಕೊಂಡು ಬಂದ ಉಮಾ ಭಾರತಿ, ಮಳಿಗೆಗೆ ತಮ್ಮ ಬಳಿ ಇದ್ದ ಬೀಗ ಜಡಿದು ಕೋಲಾಹಲ ಎಬ್ಬಿಸಿದರು. ಸಮಾಜವಾದಿ ಪಕ್ಷದ ಕಾರ್ಯಕರ್ತರು ಕೆಲವು ರಿಲಯನ್ಸ್ ಫ್ರೆಶ್ ಬಿಡಿ ಮಾರಾಟ ಮಳಿಗೆಗಳ  ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಮಾಯಾವತಿ ಸರ್ಕಾರವು ಕಳೆದ ತಿಂಗಳು ಎಲ್ಲ ರಿಲಯನ್ಸ್ ಫ್ರೆಶ್ ಬಿಡಿ ಮಾರಾಟ ಮಳಿಗೆಗಳನ್ನು ಮುಚ್ಚುವಂತೆ ಆಜ್ಞಾಪಿಸಿತ್ತು. ಈ ವರ್ಷಾರಂಭದಲ್ಲಿ ಜಾರ್ಖಂಡಿನ ರಾಂಚಿಯಲ್ಲಿ ಪ್ರತಿಭಟನಕಾರರು ರಿಲಯನ್ಸ್  ಫ್ರೆಶ್ ಬಿಡಿ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಬಲಾತ್ಕಾರವಾಗಿ ಮುಚ್ಚಿಸಿದ್ದರು.

2006: ಹಿರಿಯ ವಕೀಲ ಹಾಗೂ ಮಾಜಿ ಸಚಿವ ಪ್ರೊ. ಎಲ್.ಜಿ. ಹಾವನೂರು ಅವರು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಕರ್ನಾಟಕದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಅವರು ವಸ್ತುನಿಷ್ಠ ವರದಿಯ ಮೂಲಕ ಎಲ್ಲರ ಗಮನ ಸೆಳೆದಿದ್ದರು.

2006: ಇಸ್ಲಾಂ ಬಗ್ಗೆ ಪೋಪ್ ಬೆನೆಡಿಕ್ಟ್ ಅವರು ಮಾಡಿರುವ ಟೀಕೆಗಳು ಧಾರ್ಮಿಕ  ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುತ್ತವೆ ಎಂದು ಇಂಡೋನೇಷ್ಯ ಮತ್ತು ಪಾಕಿಸ್ತಾನಿ ಸರ್ಕಾರಗಳು ಮತ್ತು ಇಸ್ಲಾಮಿಕ್ ವಿದ್ವಾಂಸರು ದೂರಿದರು.

1967: ಹೈದರಾಬಾದ್ ಮುಖ್ಯಮಂತ್ರಿ ರಾಮಕೃಷ್ಣ ರಾವ್ ಬುರ್ಗುಲಾ ನಿಧನ.

1965: ಭಾರತ- ಪಾಕಿಸ್ತಾನ ನಡುವಿನ ಹಗೆತನ ನಿವಾರಣೆಗೆ ಅಮೆರಿಕ ಮಧ್ಯಪ್ರವೇಶಿಸಬೇಕು ಎಂದು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಮನವಿ ಮಾಡಿದರು.

 1953: ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯ 8ನೇ ಅಧಿವೇಶನದ ಅಧ್ಯಕ್ಷರಾಗಿ ವಿಜಯಲಕ್ಷ್ಮಿ ಪಂಡಿತ್ ಅವರು ಚುನಾಯಿತರಾದರು. ಈ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಹಾಗೂ ಪ್ರಥಮ ಮಹಿಳೆ ಎಂಬ ಕೀರ್ತಿ ಅವರಿಗೆ ಲಭಿಸಿತು.

1953: ಸಾಹಿತಿ ಪ್ರೇಮಾ ಸಿರ್ಸೆ ಜನನ.

1949: ಸಾಹಿತಿ ಸುಶೀಲಾ ಹೊನ್ನೇಗೌಡ ಜನನ.

1940: ಬ್ರಿಟನ್ ಕದನ ಬ್ರಿಟಿಷರ ಜಯದೊಂದಿಗೆ ಅಂತ್ಯಗೊಂಡಿತು. ಬ್ರಿಟನ್ ಮೇಲೆ ದಾಳಿ ನಡೆಸುವ ಉದ್ದೇಶದೊಂದಿಗೆ ಜರ್ಮನಿ ನಡೆಸಿದ ಸರಣಿ ವಾಯುದಾಳಿಗಳು ಬ್ರಿಟಿಷರ ಉನ್ನತ ತಂತ್ರಗಾರಿಕೆ, ಅತ್ಯಾಧುನಿಕ ವಾಯು ರಕ್ಷಣೆ, ರೇಡಾರ್ ನೆರವು ಹಾಗೂ ಜರ್ಮನ್ ಸಂಕೇತ  ಪತ್ತೆ ಕೌಶಲ್ಯಗಳ ಪರಿಣಾಮವಾಗಿ ವಿಫಲಗೊಂಡವು.

1939: ಸಾಹಿತಿ ಭಾಸ್ಕರ ಪಡುಬಿದ್ರಿ ಜನನ.

1935: ನ್ಯೂರೆಂಬರ್ಗ್ ಕಾನೂನುಗಳಿಂದ ಜರ್ಮನ್ ಯಹೂದಿಗಳು ಪೌರತ್ವ ವಂಚಿತರಾದರು. ಸ್ವಸ್ತಿಕವು ನಾಜಿ ಜರ್ಮನಿಯ ಅಧಿಕೃತ ಲಾಂಛನವಾಯಿತು.

1915: ಸಾಹಿತಿ ರೋಹಿಡೇಕರ್ ಜನನ.

1909: ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಸ್ಥಾಪಕ ಕಾಂಜೀವರಂ ನಟರಾಜನ್ ಅಣ್ಣಾದೊರೈ ಜನನ.

1893: ಕವಿ, ಸಾಹಿತಿ, ಶಿಕ್ಷಕ ಉಗ್ರಾಣ ಮಂಗೇಶರಾವ್ (15-9-1893ರಿಂದ 11-12-1973) ಅವರು ಉಗ್ರಾಣ ಶಿವರಾಯರ ಮಗನಾಗಿ ಈದಿನ ಕುಂದಾಪುರದಲ್ಲಿ ಜನಿಸಿದರು. ಸಣ್ಣಕಥೆ, ಸಂಶೋಧನಾ ಗ್ರಂಥ, ಪ್ರಬಂಧ ಸೇರಿದಂತೆ ಕನ್ನಡ ಸಾಹಿತ್ಯಕ್ಕೆ ಅವರು ಹಲವಾರು ಕೃತಿಗಳನ್ನು ನೀಡಿದ್ದಾರೆ.

1883: ಬಾಂಬೆಯ (ಈಗಿನ ಮುಂಬೈ) ಎಂಟು ಮಂದಿ ನಿವಾಸಿಗಳು ಲಂಡನ್ನಿನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಮ್ಮಿನಲ್ಲಿ ಸಭೆ ಸೇರಿ `ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ'ಯನ್ನು ಸ್ಥಾಪಿಸಿದರು.

1860: ಭಾರತ ರತ್ನ, ಆಧುನಿಕ ಕರ್ನಾಟಕದ ಶಿಲ್ಪಿ, ಶತಾಯುಷಿ ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯ (ಸರ್ ಎಂವಿ) (15-9-1860ರಿಂದ 12-4-1962) ಜನ್ಮದಿನ. ಈ ದಿನವನ್ನು ಎಂಜಿನಿಯರುಗಳ ದಿನವಾಗಿ ಆಚರಿಸಲಾಗುತ್ತಿದೆ. ಎಂಜಿನಿಯರ್ ಆಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ವಿಶ್ವೇಶ್ವರಯ್ಯ ಅವರು ಭಾರತದ ನದಿಗಳ ಸದ್ಭಳಕೆ ಬಗ್ಗೆ ಚಿಂತಿಸಿದ ಮೊದಲಿಗರು. ಮೈಸೂರು ರಾಜ್ಯದ ಆಡಳಿತ, ಅಭಿವೃದ್ಧಿಗೆ ಯೋಜನಾಬದ್ಧವಾಗಿ ಶ್ರಮಿಸಿದ ಅವರು ಅಖಿಲ ಭಾರತ ತಯಾರಕರ ಸಂಸ್ಥೆಯನ್ನು (1941) ಸ್ಥಾಪಿಸಿದರು. ಮೈಸೂರಿನ ದಿವಾನ ಹುದ್ದೆ ಸೇರಿ ಹಲವಾರು ಹುದ್ದೆಗಳನ್ನು ಅಲಂಕರಿಸಿ ಸೇವೆ ಸಲ್ಲಿಸಿದ್ದರು.

1830: ರೈಲ್ವೆ ಅಪಘಾತದಲ್ಲಿ ಮೊದಲ ಸಾವು ಸಂಭವಿಸಿದ ದಿನ ಇದು. ಲಿವರ್ ಪೂಲ್- ಮ್ಯಾಂಚೆಸ್ಟರ್ ನಡುವೆ ಹೊಸದಾಗಿ ಅಳವಡಿಸಲಾದ ರೈಲಿನ ಉದ್ಘಾಟನಾ ಸಮಾರಂಭದಲ್ಲಿ ರೈಲಿನ ಅಡಿಗೆ ಸಿಲುಕಿ ಬ್ರಿಟಿಷ್ ಪಾರ್ಲಿಮೆಂಟ್ ಸದಸ್ಯ ವಿಲಿಯಂ ಹಸ್ ಕಿಸ್ಸನ್ ಮೃತರಾದರು. ರೈಲ್ವೇ ಹಳಿಯನ್ನು ಉದ್ಘಾಟಿಸಿದ ಪ್ರಧಾನಿ, ಡ್ಯೂಕ್ ಆಫ್ ವೆಲ್ಲಿಂಗ್ಟನ್ ಅವರನ್ನು ಭೇಟಿ ಮಾಡುವ ಸಲುವಾಗಿ ಅವರು ರೈಲ್ವೇ ಹಳಿ ದಾಟುತ್ತಿದ್ದಾಗ ಈ ದುರಂತ ಸಂಭವಿಸಿತು.

1821: ಕೋಸ್ಟರಿಕಾ, ಗ್ವಾಟೆಮಾಲಾ, ಹೊಂಡುರಾಸ್, ನಿಕರಾಗುವಾ ಮತ್ತು ಎಲ್ ಸಾಲ್ವಡಾರ್ ರಾಷ್ಟ್ರಗಳಿಗೆ ಸ್ವಾತಂತ್ರ್ಯ ಘೋಷಿಸಲಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement