Monday, June 15, 2020

ಭಾರತದ ಹೈಕಮಿಷನ್ ಸಿಬ್ಬಂದಿ ಕಣ್ಮರೆ ಪ್ರಹಸನ

ಭಾರತದ ಹೈಕಮಿಷನ್ ಸಿಬ್ಬಂದಿ ಕಣ್ಮರೆ ಪ್ರಹಸನ

ಕಟು ಎಚ್ಚರಿಕೆ ಬಳಿಕ ಬಿಡುಗಡೆಗೆ ಪಾಕ್ ಅಸ್ತು

ನವದೆಹಲಿ: ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ 2020 ಜೂನ್ 15ರ ಸೋಮವಾರ ಬೆಳಗ್ಗೆ ಕಣ್ಮರೆಯಾಗಿದ್ದ ಭಾgತೀಯ ಹೈಕಮಿಷನ್ನಿನ ಇಬ್ಬರು ಸಿಬ್ಬಂದಿಯನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಪಾಕಿಸ್ತಾನಿ ಅಧಿಕಾರಿಗಳು ಭಾರತದ ರಾಜತಾಂತ್ರಿಕ ಕಚೇರಿಗೆ ರಾತ್ರಿ ತಿಳಿಸಿದರು.

ಪಾಕಿಸ್ತಾನದ ಚಾರ್ಜ್ ಡಿಅಫೇರ್‍ಸ್ ಸೈಯದ್ ಹೈದರ್ ಶಾ ಅವರಿಗೆ ನವದಹಲಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಮನ್ಸ್ ಕಳುಹಿಸಿ ಭಾರತೀಯ ಸಿಬ್ಬಂದಿಯ ಭದ್ರತೆಯ ಖಾತರಿ ನೀಡುವುದು ಪಾಕ್ ಸರ್ಕಾರದ ಜವಾಬ್ದರಿ ಎಂಬುದಾಗಿ ಕಟುವಾಗಿ ತಿಳಿಸಿದ ಕೆಲವೇ ನಿಮಿಷಗಳಲ್ಲಿ ಭಾರತೀಯ ಅಧಿಕಾರಿಗಳಿಗೆ ಪಾಕಿಸ್ತಾನದಿಂದ ಬಿಡುಗಡೆಯ ಭರವಸೆ ಬಂದಿತು.

ಭಾರತೀಯ ಹೈಕಮಿಷನ್ನಿನ ಇಬ್ಬರೂ ಸಿಬ್ಬಂದಿ ಕಣ್ಮರೆಯಾದ ಸುಮಾರು ಏಳು ಗಂಟೆಗಳ ಬಳಿಕ ಅಪಘಾತ ಎಸಗಿ ಪರಾರಿಯಾದ ಪ್ರಕರಣದಲ್ಲಿ ಇಬ್ಬರೂ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂಬುದಾಗಿ ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿದ್ದವು.

ಭಾರತೀಯ ಹೈಕಮಿಷನ್ನಿನ ಇಬ್ಬರು ಸಿಬ್ಬಂದಿಯ ಬಂಧನ ಕುರಿತ ವರದಿಗಳನ್ನು ಉಲ್ಲೇಖಿಸಿ ಪಾಕಿಸ್ತಾನಕ್ಕೆ ಪ್ರಬಲ ಪ್ರತಿಭಟನೆ ಸಲ್ಲಿಸಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೈದರ್ ಶಾ ಅವರಿಗೆ ಬುಲಾವ್ ನೀಡಿ ಕರೆಸಿಕೊಂಡು ಭಾರತೀಯ ಅಧಿಕಾರಿಗಳನ್ನು ಯಾವುದೇ ತನಿಖೆಗೆ ಗುರಿಪಡಿಸಬಾರದು ಮತ್ತು ಕಿರುಕುಳ ನೀಡಬಾರದು ಎಂದು ತಿಳಿಸಿತು. ರಾಜತಾಂತ್ರಿಕ ಕಚೇರಿಯ ಸಿಬ್ಬಂದಿಯ ಸುರಕ್ಷತೆ ಬಗ್ಗೆ ಖಾತರಿ ನೀಡುವುದು ಪಾಕ್ ಸರ್ಕಾರದ ಹೊಣೆಗಾರಿಕೆಯಾಗಿದೆ ಎಂದೂ ಸಚಿವಾಲಯ ಪಾಕಿಸ್ತಾನಕ್ಕೆ ಖಡಕ್ ಮಾತುಗಳಲ್ಲಿ  ಹೇಳಿತು.

ಇಬ್ಬರೂ ಅಧಿಕಾರಿಗಳನ್ನು ಅಧಿಕೃತ ಕಾರಿನಲ್ಲಿ ಒಬ್ಬ ಅಧಿಕಾರಿಯೊಂದಿಗೆ ತತ್ ಕ್ಷಣವೇ ಹೈಕಮಿಷನ್‌ಗೆ ಹಿಂದಿರುಗಿ ಕಳುಹಿಸಬೇಕು ಎಂದು ಪಾಕಿಸ್ತಾನಕ್ಕೆ ಸೂಚಿಸಲಾಯಿತು ಎಂದು ಸರ್ಕಾರಿ ಮೂಲವೊಂದು ತಿಳಿಸಿದೆ.

ಬೆಳವಣಿಗೆ ನಡೆದ ಸ್ವಲ್ಪವೇ ಹೊತ್ತಿನಲ್ಲಿ ಇಸ್ಲಾಮಾಬಾದ್ ಪೊಲೀಸ್ ಠಾಣೆಯಲ್ಲಿ ಇಬ್ಬರೂ ಸಿಬ್ಬಂದಿಯನ್ನು ಇರಿಸಲಾಗಿದೆ ಎಂಬ ವರ್ತಮಾನವು ಪಾಕ್ ಅಧಿಕಾರಿಗಳಿಂದ ಭಾರತೀಯ ಹೈಕಮಿಷನ್‌ಗೆ ತಲುಪಿತು. ನೀವು ಇಬ್ಬರೂ ಭಾರತೀಯ ಅಧಿಕಾರಿಗಳನ್ನು ಕರೆದೊಯ್ಯಬಹುದು ಎಂಬುದಾಗಿ ಹೈಮಿಷನ್‌ಗೆ ತಿಳಿಸಲಾಗಿದೆ ಎಂದೂ ಮೂಲ ಹೇಳಿತು.

ಇಸ್ಲಾಮಾಬಾದಿನಲ್ಲಿರುವ ಭಾರತೀಯ ಹೈಕಮಿಷನ್ನಿನ ಇಬ್ಬರು ಅಧಿಕಾರಿಗಳು ಸೋಮವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿದ್ದವು. ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಕೇಂದ್ರವು ವಿಷಯವನ್ನು ಕೈಗೆತ್ತಿಕೊಂಡಿತ್ತು. ಇಬ್ಬರೂ ಸಿಬ್ಬಂದಿಯನ್ನು ಪಾಕಿಸ್ತಾನದ ಭದ್ರತಾ ಸಂಸ್ಥೆಯು (ಐಎಸ್‌ಐ) ಗೂಢಚಾರರು ಎಂಬ ನೆಲೆಯಲ್ಲಿ ದೋಷಾರೋಪ ಹೊರಿಸಲು ಅವರನ್ನು ಅಪಹರಿಸಿರಬಹುದು ಎಂದು ಶಂಕಿಸಲಾಗಿತ್ತು.

ಲಭ್ಯ ಮಾಹಿತಿಯ ಪ್ರಕಾರ, ಕಣ್ಮರೆಯಾಗಿರುವ ಇಬ್ಬರೂ ಸಿಐಎಸ್‌ಎಫ್ ಚಾಲಕರಾಗಿದ್ದು, ಸೋಮವಾರ ಬೆಳಿಗ್ಗೆ ಗಂಟೆ ಸುಮಾರಿಗೆ ಒಂದೇ ವಾಹನದಲ್ಲಿ ಕೆಲಸಕ್ಕೆ ಹೊರಟ ನಂತರ ತಮ್ಮ ಗಮ್ಯಸ್ಥಾನವನ್ನು ತಲುಪಿರಲಿಲ್ಲ.

ಎರಡು ವಾರಗಳ ಹಿಂದೆ ಬೇಹುಗಾರಿಕೆ ನಡೆಸುತ್ತಿದ್ದ ಇಬ್ಬರು ಪಾಕಿಸ್ತಾನ ಹೈಕಮಿಷನ್ ಅಧಿಕಾರಿಗಳನ್ನು ಗಡಿಪಾರು ಮಾಡಿದ್ದಕ್ಕಾಗಿ ಪಾಕಿಸ್ತಾನವು ಸೇಡಿ ರೂಪದಲ್ಲಿ ಕ್ರಮವನ್ನು ಕೈಗೊಂಡಿರುವ ಸಾಧ್ಯತೆ ಇದೆ ಎಂದು ಅನುಮಾನ ಪಡಲಾಗಿತ್ತು.

ಪಾಕಿಸ್ತಾನಿ ಹೈಕಮಿಷನ್ ಅಧಿಕಾರಿಗಳನ್ನು ಗಡೀಪಾರು ಮಾಡಿದಂದಿನಿಂದ ಪಾಕಿಸ್ತಾನದ ಹಲವಾರು ಉನ್ನತ ರಾಜತಾಂತ್ರಿಕರು ಭಾರತದ ವಿರುದ್ಧ ಆಕ್ರಮಣಕಾರಿ ಧೋರಣೆ ಹೊಂದಿದ್ದಾರೆ ಮತ್ತು ತನ್ನ ರಾಜತಾಂತ್ರಿಕ ಸಿಬ್ಬಂದಿ ಮೇಲೆ ಅತಿಯಾದ ಕಣ್ಗಾವಲು ಇಡುತ್ತಿರುವುದರ ವಿರುದ್ಧ ಭಾರತ ಪ್ರತಿಭಟನೆ ವ್ಯಕ್ತ ಪಡಿಸಿತ್ತು.

ಪಾಕಿಸ್ತಾನದ ರಾಜತಾಂತ್ರಿಕರನ್ನು ಉಚ್ಚಾಟಿಸಿದ್ದಕ್ಕೆ ಪ್ರತಿಯಾಗಿ ಭಾರತೀಯ ಅಧಿಕಾರಿಗಳನ್ನೂ ಅದೇ ಮಾದರಿಯಲ್ಲಿ ಉಚ್ಚಾಟಿಸುವ ಮೂಲಕ ಸಮತೋಲನ ಸಾಧಿಸಲು ಪಾಕಿಸ್ತಾನ ಆಸಕ್ತವಾಗಿರುವಂತಿದೆ ಎಂದು ಸುದ್ದಿ ಮೂಲಗಳು ಹೇಳಿದ್ದವು.

ಹಿಂದಿನ ಬಾರಿ ಭಾರತವು ಪಾಕಿಸ್ತಾನಿ ಅಧಿಕಾರಿಯೊಬ್ಬರನ್ನು ಗೂಢಚರ್‍ಯೆಗಾಗಿ ಉಚ್ಚಾಟಿಸಿತ್ತು, ಮೂರು ದಿನಗಳ ಬಳಿಕ ಭಾರತೀಯ ಅಧಿಕಾರಿಯನ್ನು ಅದೇ ಮಾದರಿಯಲ್ಲಿ  ಉಚ್ಚಾಟಿಸುವ ಮೂಲಕ ಪಾಕಿಸ್ವಾನವು ಸೇಡು ತೀರಿಸಿಕೊಂಡಿತ್ತು.

ಭಾರತೀಯ ರಾಜತಾಂತ್ರಿಕರ ವಿರುದ್ಧ ಅತಿಯಾದ ಕಣ್ಗಾವಲು ಹಾಕಿದ್ದಕ್ಕೆ ಭಾರತವು ಪಾಕಿಸ್ತಾನಿ ಅಧಿಕಾರಿಗಳಿಗೆ ಶುಕ್ರವಾರ ಮೌಖಿಕ ಪ್ರತಿಭಟನೆ ಸಲ್ಲಿಸಿತ್ತು. ಪಾಕಿಸ್ತಾನಿ ಭದ್ರತಾ ಸಂಸ್ಥೆಗಳ ವರ್ತನೆಯು ರಾಜತಾಂತ್ರಿಕ ಬಾಂಧವ್ಯಗಳಿಗೆ ಸಂಬಂಧಿಸಿದಂತೆ ೧೯೬೧ರ ವಿಯೆನ್ನಾ ಸಮಾವೇಶದ ನಿರ್ಣಯಗಳು ಮತ್ತು ರಾಜತಾಂತ್ರಿಕರಿಗೆ ಬಾಂಧವ್ಯಗಳ ಘರ್ಷಣೆಗಳಲ್ಲಿ ವಿನಾಯ್ತಿ ಒದಗಿಸಲು ಉಭಯ ರಾಷ್ಟ್ರಗಳು ಸಹಿ ಮಾಡಿದ ೧೯೯೨ರ ಆಚಾರ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಸರ್ಕಾರವು ಪಾಕಿಸ್ತಾನ ಸರ್ಕಾರಕ್ಕೆ ತಿಳಿಸಿತ್ತು.

ಭಾರತೀಯ ಹೈ ಕಮಿಷನ್ ಮತ್ತು ಅದರ ಸಿಬ್ಬಂದಿಯ ಭದ್ರತೆಗೆ ಖಾತರಿ ನೀಡುವುದರ ಜೊತೆಗೆ ವಿಯನ್ನಾ ಸಮಾವೇಶದ ನಿರ್ಣಯಗಳಿಗೆ ಅನುಸಾರವಾಗಿ ತಮ್ಮ ಚಟುವಟಿಕೆಗಳನ್ನು ಪುನಾರಂಭಿಸಲು ಅನುವು ನೀಡಬೇಕು ಎಂದು ಭಾರತವು ಪಾಕಿಸ್ತಾನವನ್ನು ಆಗ್ರಹಿಸಿತ್ತು..

ಕೊರೋನಾವೈರಸ್ ಬೆದರಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ರಾಜತಾಂತ್ರಿಕ ಕಚೇರಿಯ ಚಟುವಟಕೆಗಳನ್ನು ಮೊಟಕುಗೊಳಿಸಲಾಗಿದೆ ಎಂದು ಪಾಕಿಸ್ತಾನ ಇದಕ್ಕೆ ಉತ್ತರ ನೀಡಿತ್ತು.

No comments:

Advertisement