Monday, December 14, 2009

ಇಂದಿನ ಇತಿಹಾಸ History Today ನವೆಂಬರ್ 23

 ಇಂದಿನ ಇತಿಹಾಸ

ನವೆಂಬರ್ 23
ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಅರ್ಥಶಾಸ್ತ್ರಜ್ಞ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು  ಲಂಡನ್‌ನ 'ಅಂತಾರಾಷ್ಟ್ರೀಯ ಸಿಖ್ ವೇದಿಕೆ' ನೀಡುವ ಪ್ರತಿಷ್ಠಿತ 'ವರ್ಷದ ಸಿಖ್ ವ್ಯಕ್ತಿ' ಪುರಸ್ಕಾರಕ್ಕೆ ಪಾತ್ರರಾದರು. 
ಇಲ್ಲಿನ ಲಿಂಕನ್ಸ್ ಇನ್‌ನ ಝಗಮಗಿಸುವ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ  ಪ್ರದಾನ ಮಾಡಲಾಯಿತು.

2014: ಭುವನೇಶ್ವರ: ಪ್ರತಿಷ್ಠಿತ ಅಂತಾರಾಷ್ಟ್ರೀಯ 'ಗೂಸಿ ಶಾಂತಿ ಪ್ರಶಸ್ತಿ'ಗೆ ಒಡಿಶಾ ಮೂಲದ ಸಮಾಜ ಸೇವಕ ಹಾಗೂ ಶಿಕ್ಷಣ ತಜ್ಞ ಡಾ. ಅಚ್ಯುತ ಸಾಮಂತ ಪಾತ್ರರಾದರು. ಫಿಲಿಪ್ಪೀನ್ಸ್ ಮೂಲದ ಗೂಸಿ ಸಂಸ್ಥೆ ನೀಡುವ ಪ್ರಶಸ್ತಿಯನ್ನು ಏಷ್ಯಾದ ನೊಬೆಲ್ ಶಾಂತಿ ಪ್ರಶಸ್ತಿ ಎಂದೇ ಹೇಳಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ಪ್ರಶಸ್ತಿಗೆ ಆಯ್ಕೆಯಾದ 15 ಗಣ್ಯರಲ್ಲಿ ಏಕೈಕ ಭಾರತೀಯ ಹಾಗೂ ಇದುವರೆಗೆ ಪ್ರಶಸ್ತಿ ಪಡೆದ 3ನೇ ಭಾರತೀಯ ಸಾಮಂತ. ಕೆಐಎಸ್ಎಸ್ ಹಾಗೂ ಕೆಐಐಟಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಇವರು, ಶಿಕ್ಷಣ ಹಾಗೂ ಮಾನವೀಯ ಕಾರ್ಯಗಳ ಮೂಲಕ ಬಡತನ ನಿಮೂಲನೆಗೆ ಶ್ರಮಿಸಿರುವುದನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಗೂಸಿ ಪ್ರಶಸ್ತಿ ಸಮಿತಿ ತಿಳಿಸಿತು.

2014: ನವದೆಹಲಿ: ಇಥಿಯೋಪಿಯಾದ ಗುಯೆ ಅಡೋಲ ಪುರುಷರ ವಿಭಾಗದಲ್ಲಿ ಮತ್ತು ಮಹಿಳೆಯರ ವಿಭಾಗದಲ್ಲಿ ಕೀನ್ಯಾದ ಫ್ಲಾರೆನ್ಸ್ ಕಿಪ್ಲಗತ್  ದೆಹಲಿಯಲ್ಲಿ ನಡೆದ ಹಾಫ್ ಮ್ಯಾರಥಾನ್ನಲ್ಲಿ ಪ್ರಶಸ್ತಿ ಜಯಿಸಿದರು. ಅಡೋಲ ಹಾಫ್ ಮ್ಯಾರಥಾನ್ನಲ್ಲಿ 59.06 ನಿಮಿಷಗಳಲ್ಲಿ ಒಟ ಮುಗಿಸುವ ಮೂಲಕ ತಮ್ಮದೇ ದೇಶದ ಅತ್ಸೆಡು ಸೆಗೆ (59.12) ನಿರ್ವಿುಸಿದ್ದ ದಾಖಲೆಯನ್ನು ಮುರಿದರು. ಎರಡನೇ ಸ್ಥಾನ ಗಳಿಸಿದ ಕೀನ್ಯಾದ ಜಫ್ರಿ ಕ್ಯಾಮ್ ರೊರರ್ 59.07 ನಿಮಿಷ ಮತ್ತು ಮೂರನೇ ಸ್ಥಾನ ಪಡೆದ ಕೀನ್ಯಾದ ಮೊಸಿನೆಟ್ ಜೆರ್ಮ್ವ್ 59.11 ನಿಮಿಷದಲ್ಲಿ ಓಟ ಮುಗಿಸುವ ಮೂಲಕ ದಾಖಲೆ ಮುರಿದರು. ಭಾರತೀಯ ಪುರುಷರ ವಿಭಾಗದಲ್ಲಿ ಮೊದಲ ಸ್ಥಾನ ಸುರೇಶ್ ಕುಮಾರ್ (01.04.38), 2ನೇ ಸ್ಥಾನ ನಿತಿಂದರ್ ಸಿಂಗ್ ರಾವತ್ (01.04.54) ಮತ್ತು 3ನೇ ಸ್ಥಾನವನ್ನು ಖೇತ್ ರಾಮ್(01.04.56) ಪಡೆದರು. ಮಹಿಳೆಯರ ವಿಭಾಗದಲ್ಲಿ ಕೀನ್ಯಾದ ಫ್ಲಾರೆನ್ಸ್ ಕಿಪ್ಲಗತ್ (01.10.04), ದ್ವಿತೀಯ ಸ್ಥಾನವನ್ನು ಕೀನ್ಯಾದ ಗ್ಲಾಡೆಸ್ ಚಿರೋನೊ (01.10.05) ಮತ್ತು 3ನೇ ಸ್ಥಾನವನ್ನು ಇಥಿಯೋಪಿಯಾದ ವರ್ಕ್ನೆಷ್ ಡೆಗೆಫ (01.10.07) ಪಡೆದರು. ಭಾರತೀಯ ಮಹಿಳೆಯರ ವಿಭಾಗದಲ್ಲಿ ಪ್ರೀಜಾ ಶ್ರೀಧರನ್ (01.19.03), 2ನೇ ಸ್ಥಾನ ಮೊನಿಕಾ ಆತ್ರೆ (01.19.12) ಮತ್ತು 3ನೇ ಸ್ಥಾನವನ್ನು ಸುಧಾ ಸಿಂಗ್ (01.19.21) ಪಡೆದರು.

2014: ವಾಷಿಂಗ್ಟನ್: ಉಪವಾಸ ಮಾಡುವುದರಿಂದ ಮೆದುಳು ಚುರುಕಾಗುತ್ತದೆ ಎಂದು ನೂತನ ಸಂಶೋಧನಾ ವರದಿಯೊಂದು ತಿಳಿಸಿತು. ಹೌದು ಆಗಾಗ ಉಪವಾಸ ಮಾಡುವುದರಿಂದ ಮತ್ತು ಅಗತ್ಯಕ್ಕೆ ತಕ್ಕಷ್ಟು ವ್ಯಾಯಾಮ ಮಾಡುವುದರಿಂದ ಮೆದುಳಿನಲ್ಲಿರುವ ನರಕೋಶಗಳು ಚುರುಕಾಗಿ ಕೆಲಸ ಮಾಡುತ್ತವೆ ಮತ್ತು ಮೆದುಳಿನ ಶಕ್ತಿ ವೃದ್ಧಿಯಾಗುತ್ತದೆ ಎಂದು ಬಾಲ್ಟಿಮೋರ್ ನ್ಯಾಷಿನಲ್ ಇನ್ಸ್ಟಿಟ್ಯೂಟ್ ಆನ್ ಏಜಿಂಗ್ ಸಂಶೋಧಕರು ತಿಳಿಸಿದರು. ಮೆದುಳನ್ನು ಚುರುಕಾಗಿಸಲು ಏನೇನೋ ತಿನ್ನುವುದು ಬೇಕಾಗಿಲ್ಲ, ಏನೂ ತಿನ್ನದೆ ಉಪವಾಸ ಮಾಡಿದರೆ ಸಾಕು ಅನ್ನುವುದು ಅವರ ಅಭಿಪ್ರಾಯ. ವ್ಯಾಯಾಮ ಮತ್ತು ಆಗಾಗ ಉಪವಾಸ ಮಾಡುವುದರಿಂದ ನ್ಯೂರಾನ್ಗಳಲ್ಲಿ ಮೈಟೋಕಾಂಡ್ರಿಯಾ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದೆ ಎಂದು ನರವಿಜ್ಞಾನಿ ಮಾರ್ಕ್ ಮ್ಯಾಟಸನ್ ತಿಳಿಸಿದರು. ಉಪವಾಸವಿದ್ದಾಗ ಮೆದುಳಿನಲ್ಲಿ ಬ್ರೆಯಿನ್ ಡಿರೈವಿಡ್ ನ್ಯೂರೋಟ್ರೋಫಿಕ್ ಫ್ಯಾಕ್ಟರ್ (ಬಿಡಿಎನ್ಎಫ್) ಎಂಬ ಪ್ರೋಟೀನ್ ಉತ್ಪಾದನೆಯಾಗುತ್ತದೆ. ಪ್ರೋಟೀನ್ ನ್ಯೂರಾನ್ನಲ್ಲಿ ಮೈಟೋಕಾಂಡ್ರಿಯಾ ಸಂಖ್ಯೆ ಹೆಚ್ಚಲು ಸಹಕರಿಸುತ್ತದೆ. ಬಿಡಿಎನ್ಎಫ್ ಮೆದುಳಿನಲ್ಲಿ ನೆನಪಿನ ಶಕ್ತಿ ಮತ್ತು ಕಲಿಕೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ಅವರು ತಿಳಿಸಿದರು.

2014: ಟೋಕಿಯೋ: ಕೇಂದ್ರ ಜಪಾನಿನ ಪರ್ವತ ಪ್ರದೇಶ, ಉತ್ತರ ಭಾಗ ಮತ್ತು ಹಫಿಂಗ್ಟನ್ ಪೋಸ್ಟ್ ನಗರ ಪ್ರದೇಶಗಳಲ್ಲಿ ಸಂಭವಿಸಿದ ಭೂಕಂಪನದಲ್ಲಿ ಕನಿಷ್ಠ 37 ಮನೆಗಳು ಕುಸಿದು, 39 ಮಂದಿ ಗಾಯಗೊಂಡರು. ಗಾಯಾಳುಗಳಲ್ಲಿ ಏಳು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಬಹುತೇಕರ ಎಲುಬುಗಳು ಮುರಿದಿವೆ ಎಂದು ವರದಿಗಳು ತಿಳಿಸಿದವು. ರಿಚ್​ಟರ್ ಮಾಪಕದಲ್ಲಿ 6.8ರ ಪ್ರಮಾಣದಲ್ಲಿ ಭೂಕಂಪನ ಸಂಭವಿಸಿದೆ, ಆದರೆ ಸುನಾಮಿ ಭೀತಿ ಇಲ್ಲ ಎಂದು ರಾಯಿಟರ್ಸ್ ಹೇಳಿತು. ರಾತ್ರಿ 10 ಗಂಟೆಯ ಬಳಿಕ ಭೂಕಂಪನ ಸಂಭವಿಸಿದೆ. ನಗಾನೋ ನಗರದ ಪಶ್ಚಿಮಕ್ಕೆ 10 ಕಿ.ಮೀ. (6 ಮೈಲು) ಆಳದಲ್ಲಿ ಭೂಕಂಪನದ ಕೇಂದ್ರವಿತ್ತು ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿತು. ಭೂಕಂಪನ ಭೂ ಪ್ರದೇಶದಲ್ಲಿ ಸಂಭವಿಸಿರುವುದರಿಂದ ಸುನಾಮಿ ಸಾಧ್ಯತೆ ಇಲ್ಲ ಎಂದು ಸಂಸ್ಥೆ ಹೇಳಿತು. ನಗಾನೋ ನಗರದ ಪಶ್ಚಿಮಕ್ಕಿರುವ ಹಕೂಬಾ ಗ್ರಾಮದ ರೆಸ್ಟೋರೆಂಟ್ ಒಂದರ ಮಾಲೀಕ ರ್ಯೋ ನಿಶಿನೊ ಜಪಾನೀ ವಾಹಿನಿಯೊಂದಕ್ಕೆ ತಿಳಿಸಿದ ಪ್ರಕಾರ ಇಷ್ಟೊಂದು ಪ್ರಬಲವಾಗಿ ಕಂಪಿಸಿದ ಭೂಕಂಪನವನ್ನು ಅವರು ನೋಡಿಯೇ ಇಲ್ಲ. 'ಭೂಕಂಪನ ಸಂಭವಿಸಿದಾಗ ರೆಸ್ಟೋರೆಂಟಿನ ವೈನ್ ಸೆಲ್ಲರ್​ನಲ್ಲಿದ್ದೆ, ಆದರೆ ಅಲ್ಲಿ ಯಾವುದೂ ಒಡೆಯಲಿಲ್ಲ' ಎಂದು ನಿಶಿನೊ ಹೇಳಿದರು. ಭೂಕಂಪನ ಪ್ರದೇಶದಲ್ಲಿದ್ದ ಮೂರು ಪರಮಾಣು ಸ್ಥಾವರಗಳಲ್ಲಿ ಯಾವುದೇ ತೊಂದರೆಗಳಾಗಿರುವ ಬಗ್ಗೆ ವರದಿಗಳು ಬಂದಿಲ್ಲ ಎಂದು ಜಪಾನಿನ ಪರಮಾಣು ನಿಯಂತ್ರಣ ಸಂಸ್ಥೆ ತಿಳಿಸಿತು.


2014: ಬೀಜಿಂಗ್: ಚೀನಾದಲ್ಲಿ ರಿಚ್​ಟರ್ ಮಾಪಕದಲ್ಲಿ 6.3 ಪ್ರಮಾಣದ ಭೂಕಂಪನ ಸಂಭವಿಸಿ, ಕನಿಷ್ಠ 4 ಜನ ಮೃತರಾಗಿ ಸುಮಾರು 54 ಮಂದಿ ಗಾಯಗೊಂಡಿದ್ದಾರೆ ಎಂದು ಕ್ಷಿನ್​ಹುವಾ ಮಾಧ್ಯಮ ವರದಿ ಮಾಡಿತು. ನೈಋತ್ಯ ಚೀನಾದ ಸಿಚುವಾನ್ ಪ್ರಾಂತದಲ್ಲಿ ಈ ಭೂಕಂಪನ ಸಂಭವಿಸಿದೆ ಎಂದು ಕ್ಷಿನ್​ಹುವಾ ಹೇಳಿತು. ಹಿಂದಿನ ದಿನ ಸಂಜೆ 4.55ರ ಸುಮಾರಿಗೆ ಭೂಕಂಪನ ಸಂಭವಿಸಿದೆ. ತಾಗೊಂಗ್ ಪಟ್ಟಣದಲ್ಲಿ ಭೂಕಂಪನದ ಕೇಂದ್ರವಿತ್ತು ಎಂದು ಚೀನಾ ಭೂಕಂಪನ ಜಾಲಗಳ ಕೇಂದ್ರ ತಿಳಿಸಿತು. ಗಾಯಾಳುಗಳ ಪೈಕಿ ಆರು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಇತರ ಐವರಿಗೆ ತೀವ್ರ ಗಾಯಗಳಾಗಿವೆ. ಉಳಿದ 43 ಮಂದಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ ಎಂದು ಸರ್ಕಾರ ತಿಳಿಸಿತು. ಅಲ್ಪ ಸ್ವಲ್ಪ ಗಾಯಗೊಂಡ 43 ಮಂದಿಯ ಪೈಕಿ 19 ಜನ ಪ್ರಾಥಮಿಕ ಶಾಲೆಯೊಂದರ ವಿದ್ಯಾರ್ಥಿಗಳು ಎಂದೂ ವರದಿ ಹೇಳಿತು.
2008: ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಅರ್ಥಶಾಸ್ತ್ರಜ್ಞ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು  ಲಂಡನ್‌ನ 'ಅಂತಾರಾಷ್ಟ್ರೀಯ ಸಿಖ್ ವೇದಿಕೆ' ನೀಡುವ ಪ್ರತಿಷ್ಠಿತ 'ವರ್ಷದ ಸಿಖ್ ವ್ಯಕ್ತಿ' ಪುರಸ್ಕಾರಕ್ಕೆ ಪಾತ್ರರಾದರು. ಇಲ್ಲಿನ ಲಿಂಕನ್ಸ್ ಇನ್‌ನ ಝಗಮಗಿಸುವ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ  ಪ್ರದಾನ ಮಾಡಲಾಯಿತು. ಭಾರತದ ಆಧುನಿಕ ಆರ್ಥಿಕತೆಗೆ ಮೊಂಟೆಕ್ ನೀಡಿದ ಗಣನೀಯ ಕೊಡುಗೆ  ಪರಿಗಣಿಸಿ ಈ ಪುರಸ್ಕಾರ ನೀಡಲಾಗಿದೆ ಎಂದು ವೇದಿಕೆ ವಿವರಿಸಿತು.

2008: ಮಲೇಷ್ಯಾದಲ್ಲಿ ಯೋಗ ನಿಷೇಧಿಸಿ  ರಾಷ್ಟ್ರೀಯ ಫತ್ವಾ ಮಂಡಳಿ ಹೊರಡಿಸಿದ ಆದೇಶಕ್ಕೆ  ಅನೇಕ ಮುಸ್ಲಿಮ್ ಯೋಗ ತರಬೇತುದಾರರು ಅಸಮಾಧಾನ ವ್ಯಕ್ತಪಡಿಸಿದರು. ಮಲೇಷ್ಯಾದಲ್ಲಿನ ಯೋಗ ತರಬೇತಿಯಲ್ಲಿ ಯಾವುದೇ  ಧಾರ್ಮಿಕ ಕಾರಣಗಳಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು. ಇಸ್ಲಾಮಿನಲ್ಲಿ ಯೋಗ ನಿಷಿದ್ಧ ಮತ್ತು ಮುಸ್ಲಿಮರು ಯೋಗಾಭ್ಯಾಸ ಮಾಡುವುದಕ್ಕೆ ನಿರ್ಬಂಧ ಹೇರಲಾಗಿದೆ ಎಂದು ರಾಷ್ಟ್ರೀಯ ಫತ್ವಾ ಮಂಡಳಿ ಪ್ರಕಟಿಸಿತ್ತು. ಯೋಗದಿಂದ ಇಸ್ಲಾಮಿನಲ್ಲಿ ಇರುವ ನಮ್ಮ ನಂಬಿಕೆಗೆ ಯಾವುದೇ ಹಾನಿ ಇಲ್ಲ ಎಂದು ಯೋಗ ಶಿಕ್ಷಕಿ ನಿನೈ ಅಹ್ಮದ್ ಹೇಳಿದರು.

2008:  ಭಾರತದ ಇತಿಹಾಸ, ಸಂಸ್ಕೃತಿ ಹಾಗೂ ರಾಜಕೀಯ ಸ್ಥಿತಿಗತಿ ಅರಿತಕೊಳ್ಳಲು ಅನುವಾಗುವಂತೆ ತನ್ನ ಪ್ರೌಢಶಾಲೆಗಳಲ್ಲಿ  ಭಾರತದ ಅಧ್ಯಯನಕ್ಕೆ ಅವಕಾಶ ಕಲ್ಪಿಸಿಕೊಟ್ಟಿರುವುದಾಗಿ ಸಿಂಗಪುರ ಪ್ರಕಟಿಸಿತು. ವಿಕ್ಟೋರಿಯ ಜೂನಿಯರ್ ಕಾಲೇಜು ಮುಂದಿನ ವರ್ಷದ ಶೈಕ್ಷಣಿಕ ವರ್ಷದಿಂದ  ಭಾರತದ ಅಧ್ಯಯನದ ಪಠ್ಯ ಪರಿಚಯಿಸುತ್ತಿದೆ ಎಂದು ಶಾಲಾ ಅಧಿಕಾರಿಗಳು ತಿಳಿಸಿದರು.

2008: ಆಫ್ಘಾನಿಸ್ಥಾನ ವಲಯದಲ್ಲಿ ನೆಲೆಸಿರುವ ಭಯೋತ್ಪಾದಕರನ್ನು ಕಿತ್ತೊಗೆಯುವುದಕ್ಕೆ ತಾವು ಮೊದಲ ಆದ್ಯತೆ ನೀಡುವುದಾಗಿ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಬರಾಕ್ ಒಬಾಮ ಸ್ಪಷ್ಟಪಡಿಸಿದರು.

2008: ಸಶಸ್ತ್ರ ಪಡೆಯಲ್ಲಿ ಲಿಂಗ ಸಮಾನತೆಗೆ ಒತ್ತು ನೀಡಿದ  ದೆಹಲಿ ಹೈಕೋರ್ಟ್,  ಮಹಿಳಾ ಅಧಿಕಾರಿಗಳ ಕುಂದುಕೊರತೆ ಆಲಿಸಲು ತ್ವರಿತವಾಗಿ ಶಾಶ್ವತ ಆಯೋಗ ರಚಿಸುವಂತೆ  ಕೇಂದ್ರಕ್ಕೆ ನಿರ್ದೇಶನ ನೀಡಿತು. ಇನ್ನು ಮುಂದೆ ನೇಮಕಮಾಡಿಕೊಳ್ಳುವ ಮಹಿಳಾ ಅಧಿಕಾರಿಗಳ ಅಹವಾಲು ಆಲಿಸಲು ಶಾಶ್ವತ ಆಯೋಗ ರಚಿಸಲು ನಿರ್ಧರಿಸುವುದಾಗಿ ಸರ್ಕಾರ ಹೇಳಿಕೆ ನೀಡಿದ ಬೆನ್ನಲ್ಲಿಯೇ ದೆಹಲಿ ಹೈಕೋರ್ಟ್ ಈ ಸೂಚನೆ ನೀಡಿತು.

2008: ತಬಲಾ ಬಾರಿಸುವುದರ ಜೊತೆಗೆ ಸತತ 12 ಗಂಟೆಗಳ ಕಾಲ ತಾವೇ ಸ್ವತಃ ಹಾಡುಗಳನ್ನು ಹಾಡುವ ಮೂಲಕ ಜಾನಪದ ಗಾಯಕ ಬಿ. ವಿಜಯಕುಮಾರ್ 'ಲಿಮ್ಕಾ' ದಾಖಲೆ ಸ್ಥಾಪಿಸುವ ಪ್ರಯತ್ನ ಮಾಡಿದರು. ಮಡಿಕೇರಿಯ ರಾಜಾಸೀಟು ಉದ್ಯಾನದಲ್ಲಿ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಸತತವಾಗಿ ತಬಲಾ ಬಾರಿಸುವುದರ ಜೊತೆಗೆ, ಸುಮಾರು 200ಕ್ಕೂ ಅಧಿಕ ಜಾನಪದ, ಭಾವಗೀತೆ ಹಾಗೂ ರಂಗ ಗೀತೆಗಳನ್ನು ಹಾಡಿದರು. 'ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್' ಕಂಪೆನಿಯ ಸೂಚನೆ ಮೇರೆಗೆ ಈ ಕಾರ್ಯಕ್ರಮ ನಡೆಸಿಕೊಟ್ಟದ್ದಾಗಿ ವಿಜಯಕುಮಾರ್ ತಿಳಿಸಿದರು. ಮೂಲತಃ ಪಿರಿಯಾಪಟ್ಟಣ ತಾಲ್ಲೂಕಿನ ಕಣಗಾಲ್ ಬಳಿಯ ಚಾಮರಾಯನಕೋಟೆಯ ನಿವಾಸಿಯಾದ ವಿಜಯಕುಮಾರ್, ಪ್ರಸ್ತುತ ಕುಶಾಲನಗರ ಸಮೀಪದ ಹೆಬ್ಬಾಲೆಯಲ್ಲಿ ನೆಲೆಸಿದ್ದು ಹಾರಂಗಿ ಬಳಿಯ ಅತ್ತೂರು ಜ್ಞಾನಗಂಗಾ ಶಾಲೆಯಲ್ಲಿ ಹಿಂದಿ ಶಿಕ್ಷಕ. ಈಗಾಗಲೇ ಸತತ 48 ಗಂಟೆಗಳ ಕಾಲ ತಬಲಾ ಬಾರಿಸಿರುವುದು ಲಿಮ್ಕಾ ದಾಖಲೆಯಲ್ಲಿದೆ. ಆದರೆ, ಸತತ 12 ಗಂಟೆಗಳ ಕಾಲ ತಬಲಾ ಬಾರಿಸುವುದರ ಜೊತೆಗೆ, ಹಾಡುಗಳನ್ನು ಹಾಡಿರುವುದು ಇದೇ ಮೊದಲು ಎನ್ನಲಾಗಿದೆ. 'ನನ್ನ ಹೆಸರು ಲಿಮ್ಕಾ ದಾಖಲೆ ಸೇರಿದ ನಂತರ ಮುಂದಿನ ವರ್ಷ  48 ಗಂಟೆಗಳ ಕಾಲ ಕಾರ್ಯಕ್ರಮ ನಡೆಸುವ ಗುರಿ ಹೊಂದಿದ್ದೇನೆ' ಎಂದು ವಿಜಯಕುಮಾರ್ ಹೇಳಿದರು.

2007: ಸರಣಿ ಭಯೋತ್ಪಾದನಾ ಕೃತ್ಯಗಳಿಂದ ಉತ್ತರ ಪ್ರದೇಶ ತತ್ತರಿಸಿತು. ವಾರಣಾಸಿ, ಫೈಜಾಬಾದ್ ಮತ್ತು ಲಖನೌ ಸಿವಿಲ್ ನ್ಯಾಯಾಲಯಗಳ ಆವರಣಗಳಲ್ಲಿ ಈದಿನ ಮಧ್ಯಾಹ್ನ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ ಕೆಲವು ವಕೀಲರು ಸೇರಿ 14 ಜನ ಮೃತರಾಗಿ, ಇತರ 65ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ತಮ್ಮ ಪರವಾಗಿ ವಾದಿಸಲು ನಿರಾಕರಿಸಿದ ವಕೀಲ ಸಮುದಾಯದ ಮೇಲೆ ಪ್ರತೀಕಾರ ತೆಗೆದುಕೊಳ್ಳಲು ಉಗ್ರರು ಈ ಸ್ಫೋಟ ನಡೆಸಿದ್ದಾರೆ ಎಂದು ಪೊಲೀಸರು ಶಂಕಿಸಿದರು. 2006ರ ಬಳಿಕ ಸಂಭವಿಸಿದ ಪ್ರಮುಖ ಬಾಂಬ್ ಸ್ಫೋಟಗಳು: 3ನೇ ಮಾರ್ಚ್ 2006: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಮೂರು ಬಾಂಬ್ ಸ್ಫೋಟ-  28 ಜನರ ಸಾವು. 14ನೇ ಏಪ್ರಿಲ್ 2006: ಹಳೆ ದೆಹಲಿಯ ಮಸೀದಿಯೊಂದರಲ್ಲಿ ಶಕ್ತಿಶಾಲಿಯಲ್ಲದ ಬಾಂಬ್ ಸ್ಫೋಟ. 11ನೇ ಜುಲೈ 2006: ಮುಂಬೈ ಸ್ಥಳೀಯ ರೈಲು ಜಾಲದ ನಿಲ್ದಾಣ, ಮಾರ್ಗಗಳಲ್ಲಿ 11 ನಿಮಿಷಗಳಲ್ಲಿ 7 ಬಾಂಬ್ಗಳ ಸ್ಫೋಟ- 209 ಜನರ ಸಾವು. 8ನೇ ಸೆಪ್ಟೆಂಬರ್ 2006: ಮಹಾರಾಷ್ಟ್ರದ ಮಾಲೆಗಾಂವ್ ಪಟ್ಟಣದ ಮೂರು ಕಡೆ ಏಕಕಾಲದಲ್ಲಿ ಬಾಂಬ್ ಸ್ಫೋಟ - 38 ಜನರ ಸಾವು. 19ನೇ ಫೆಬ್ರುವರಿ 2007: ದೆಹಲಿ ಮತ್ತು ಲಾಹೋರ್ ನಡುವೆ ಓಡಾಡುವ ಸಮ್ ಜೋತಾ ಎಕ್ಸ್ ಪ್ರೆಸ್ ರೈಲಿನಲ್ಲಿ ಸ್ಫೋಟ, ಪರಿಣಾಮವಾಗಿ ಅಗ್ನಿದುರಂತ-  68 ಜನರ ಸಾವು. 18 ಮೇ 2007:  ಹೈದರಾಬಾದಿನ ಐತಿಹಾಸಿಕ ಮೆಕ್ಕಾ ಮಸೀದಿಯಲ್ಲಿ ಬಾಂಬ್ ಸ್ಫೋಟ- 9 ಸಾವು, ಪೊಲೀಸ್ ಗೋಲಿಬಾರಿಗೆ 5 ಜನರ ಬಲಿ. 26 ಆಗಸ್ಟ್ 2007:  ಹೈದರಾಬಾದಿನ ಜನಪ್ರಿಯ ಚಾಟ್ ಸೆಂಟರ್ ಹಾಗೂ ವಿಹಾರ ತಾಣ ಲುಂಬಿಣಿ ಉದ್ಯಾನದಲ್ಲಿ ಸರಣಿ ಸ್ಫೋಟ-  42 ಜನರ ಸಾವು

2007: ಹತ್ತು ಮಂದಿ ಮಹನೀಯರಿಗೆ `ಆಳ್ವಾಸ್ ನುಡಿಸಿರಿ ಪ್ರಶಸ್ತಿ' ಯನ್ನು ಪ್ರಕಟಿಸಲಾಯಿತು. ಪ್ರಶಸ್ತಿಗೆ ಪಾತ್ರರಾದವರು: ಡಾ. ಮತ್ತೂರು ಕೃಷ್ಣಮೂರ್ತಿ, (ಕನ್ನಡ ಸಂಸ್ಕೃತಿ ಪ್ರಸರಣ), ಪ್ರೊ. ಅ.ರಾ.ಮಿತ್ರ (ಸಾಹಿತ್ಯ), ಕೆ.ಎಸ್.ಅಶ್ವತ್ಥ್ (ಚಲನಚಿತ್ರ), ಎಂ.ಬಿ.ಸಿಂಗ್ (ಪತ್ರಿಕೋದ್ಯಮ). ಬಿ.ಎಂ.ಇದಿನಬ್ಬ (ಕನ್ನಡ ಚಳವಳಿ), ಡಾ. ಪಿ.ಎಸ್. ಶಂಕರ್ (ವೈದ್ಯಕೀಯ ಸಾಹಿತ್ಯ), ಆನಂದ ಗಾಣಿಗ (ರಂಗಭೂಮಿ, ಸಂಘಟನೆ), ಪ್ರೊ. ಸುನೀತಾ ಶೆಟ್ಟಿ (ಹೊರನಾಡು, ಕನ್ನಡ ಸಾಹಿತ್ಯ), ಕರ್ನೂರು ಕೊರಗಪ್ಪ ರೈ (ಯಕ್ಷಗಾನ) ಮತ್ತು ಪ್ರೇಮಾ ಭಟ್ (ಸಾಹಿತ್ಯ).

2007: ಮಾಂಡೊವಿ ನದಿಗೆ ತಾಗಿಕೊಂಡಂತಿರುವ ಪಣಜಿಯ ಕಲಾ ಅಕಾಡೆಮಿಯ ಸಭಾಂಗಣದಲ್ಲಿ ಈದಿನ ಸಂಜೆ ಜರುಗಿದ ಸರಳ, ಸುಂದರ ಸಮಾರಂಭದಲ್ಲಿ ಯುವ ಪೀಳಿಗೆಯ ಮೆಚ್ಚಿನ ನಟ ಶಾರುಖ್ ಖಾನ್, 38ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.

2007: ಕೋಲ್ಕತ್ತ ಗಲಭೆಗಳ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ವಿವಾದಾತ್ಮಕ ಬರಹಗಾರ್ತಿ ತಸ್ಲಿಮಾ ನಸ್ರೀನ್ ಅವರನ್ನು ಜೈಪುರದಿಂದ ದೆಹಲಿಗೆ ಕರೆದೊಯ್ಯಲಾಯಿತು.

2007: 59 ಮಂದಿಯನ್ನು ಬಲಿ ತೆಗೆದುಕೊಂಡಿದ್ದ 1997ರ ಉಪಾಹಾರ್ ಚಿತ್ರ ಮಂದಿರ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಚಿತ್ರ ಮಂದಿರದ ಮಾಲೀಕರಾದ ಸುಶೀಲ್ ಅನ್ಸಾಲ್ ಮತ್ತು ಗೋಪಾಲ್ ಅನ್ಸಾಲ್ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಹಾಗೂ ಚಿತ್ರಮಂದಿರಕ್ಕೆ ಲೈಸೆನ್ಸ್ ನೀಡಿದ್ದ ಡಿಸಿಪಿ ವಿರುದ್ಧ ಹೊಸದಾಗಿ ತನಿಖೆ ನಡೆಸುವಂತೆ ಸಿಬಿಐಗೆ ಆದೇಶ ನೀಡಲಾಯಿತು.

2007: ರಾಷ್ಟ್ರದಲ್ಲಿ ತುರುಸ್ಥಿತಿ ಹೇರಿದ ಪಾಕಿಸ್ಥಾನವನ್ನು ಕಾಮನ್ವೆಲ್ತ್ ರಾಷ್ಟ್ರಗಳ ಸಚಿವರ ಸಮಾವೇಶವು ತನ್ನ 53 ರಾಷ್ಟ್ರಗಳ ಒಕ್ಕೂಟದಿಂದ ಅಮಾನತುಗೊಳಿಸಿತು.

2006: ದೆಹಲಿಯ ಸುಮಾರು 18,000 ಮಂದಿ ವರ್ತಕರು ಮತ್ತು ವೃತ್ತಿ ನಿರತರಿಗೆ ವಸತಿ ಪ್ರದೇಶಗಳಲ್ಲಿನ ಅಕ್ರಮ ವಾಣಿಜ್ಯ ಕಟ್ಟಡಗಳ ಬೀಗಮುದ್ರೆ ಕಾರ್ಯಾಚರಣೆಯಿಂದ ತಾತ್ಕಾಲಿಕ ರಕ್ಷಣೆ ಒದಗಿಸಲು ಸುಪ್ರೀಂಕೋರ್ಟ್ ಆಜ್ಞಾಪಿಸಿತು. ವಸತಿ ಪ್ರದೇಶಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಳ್ಳುವುದಿಲ್ಲ ಎಂಬುದಾಗಿ ಬರೆದು ಕೊಟ್ಟಿರುವ ತಮ್ಮ ವಚನವನ್ನು ಇವರು ಪಾಲಿಸಿದ್ದಾರೆ ಎಂಬುದಾಗಿ ನ್ಯಾಯಾಲಯದ ಪರಿಶೀಲನಾ ಸಮಿತಿ ನೀಡಿರುವ ವರದಿಯನ್ನು ಅನುಸರಿಸಿ ಸುಪ್ರೀಂಕೋರ್ಟ್ ಈ ಕ್ರಮ ಕೈಗೊಂಡಿತು.

2006: ಇರಾಕ್ ರಾಜಧಾನಿ ಬಾಗ್ದಾದಿನ ದಕ್ಷಿಣದಲ್ಲಿನ ಶಿಯಾ ಪ್ರಾಬಲ್ಯದ ಸದರ್ ನಗರದಲ್ಲಿ ಸರಣಿ ಆತ್ಮಾಹುತಿ ಕಾರುಬಾಂಬ್ ದಾಳಿಗಳಲ್ಲಿ 154 ಜನ ಮೃತರಾಗಿ 250ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2005: ಐದು ದಿನಗಳ ಹಿಂದೆ ತಾಲಿಬಾನ್ ಉಗ್ರರಿಂದ ಅಪಹರಣಗೊಂಡ ಭಾರತೀಯ ಚಾಲಕ ಮಣಿಯಪ್ಪನ್ ಕುಟ್ಟಿ (36) ಅವರ ಶವ ದಕ್ಷಿಣ ಆಫ್ಘಾನಿಸ್ತಾನದ ನಿಮ್ರೋಜ್ ಪ್ರಾಂತ್ಯದ ದೇಲರಾಂ ಜ್ಲಿಲೆಯಲ್ಲಿ ಪತ್ತೆಯಾಯಿತು. ಬಾರ್ಡರ್ ರೋಡ್ಸ್ ಸಂಸ್ಥೆಯಲ್ಲಿ ಚಾಲಕರಾಗಿದ್ದ ಕುಟ್ಟಿ ಅವರನ್ನು ಕತ್ತು ಸೀಳಿ ಬರ್ಬರವಾಗಿ ಕೊಲೆಗೈದದ್ದು ಇದರೊಂದಿಗೆ ಬೆಳಕಿಗೆ ಬಂತು.
1991: ಧುಲೆಯಲ್ಲಿ ಭಾಸ್ಕರಾಚಾರ್ಯ ಸಂಶೋಧನಾ ಕೇಂದ್ರದ ಸ್ಥಾಪನೆ.

1983: ಭಾರತದ ನವದೆಹಲಿಯಲ್ಲಿ ಮೊತ್ತ ಮೊದಲ ಬಾರಿಗೆ ಕಾಮನ್ವೆಲ್ತ್ ಮುಖ್ಯಸ್ಥರ ಸಭೆ (ಸಿ ಎಚ್ ಓ ಜಿ ಎಂ) ನಡೆಯಿತು.

1979: ಸಾಹಿತಿ ಮಂಜುಶ್ರೀ ಹೊಸಮನಿ ಜನನ.

1956: ದಕ್ಷಿಣ ರೈಲ್ವೆ ಇತಿಹಾಸದಲ್ಲೇ ಅತ್ಯಂತ ಭೀಕರವಾದ ಅಪಘಾತವೊಂದು ಟ್ಯುಟಿಕಾರನ್- ಮದ್ರಾಸ್ ಎಕ್ಸ್ ಪ್ರೆಸ್ ರೈಲುಗಾಡಿಗೆ ಈದಿನ ಬೆಳಗಿನ ಜಾವ ಸಂಭವಿಸಿತು. 104 ಜನ ಮೃತರಾದರು. ತಿರುಚಿನಾಪಳ್ಳಿಗೆ ಸಮೀಪದ ಅರಿಯಲೂರು ಮತ್ತು ಕಳಗಂ ನಿಲ್ದಾಣಗಳ ಮಧ್ಯೆ ಈ ಅಪಘಾತ ಸಂಭವಿಸಿತು.

1939: ಅಂಕಣಗಾರ್ತಿ, ಸಂಪಾದಕಿ, ಅಧ್ಯಾಪಕಿಯಾಗಿ ಖ್ಯಾತರಾದ ಸಾಹಿತಿ ಉಷಾ ನವರತ್ನರಾಂ (23-11-1989ರಿಂದ 1-10-2000) ಅವರು ಎಂ.ವಿ. ಸುಬ್ಬರಾವ್- ಶಾಂತಾ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು.
1937: ಭಾರತದ ಸಸ್ಯವಿಜ್ಞಾನಿ ಹಾಗೂ ಭೌತವಿಜ್ಞಾನಿ ಸರ್. ಜಗದೀಶ ಚಂದ್ರ ಬೋಸ್ (1858-1937) ಅವರು ತಮ್ಮ 79ನೇ ಹುಟ್ಟು ಹಬ್ಬಕ್ಕೆ ಒಂದು ವಾರ ಮೊದಲು ನಿಧನರಾದರು.

1936: `ಲೈಫ್' ಮ್ಯಾಗಜಿನ್ ನ ಮೊದಲ ಸಂಚಿಕೆ ಪ್ರಕಟಗೊಂಡಿತು. ಇದು ಹೆನ್ರಿ ಆರ್. ಲ್ಯೂಸ್ ಅವರ ಸೃಷ್ಟಿ.

1915: ಸಾಹಿತಿ ಎಸ್. ಆರ್. ಚಂದ್ರ ಜನನ.

1925: ಭಾರತೀಯ ಆಧ್ಯಾತ್ಮಿಕ ಧುರೀಣ ಪುಟ್ಟಪರ್ತಿಯ ಸತ್ಯಸಾಯಿ ಬಾಬಾ ಹುಟ್ಟಿದ ದಿನ.

1899: ಸಾಹಿತಿ ಬೆಂಗೇರಿ ಮಾಸ್ತರ ಜನನ.

1897: ಭಾರತೀಯ ವಿದ್ವಾಂಸ, ಬರಹಗಾರ ನೀರದ್ ಸಿ. ಚೌಧುರಿ (1897-1999) ಹುಟ್ಟಿದ ದಿನ.

1889: ನಾಣ್ಯ ಹಾಕಿದರೆ ಸಂಗೀತ ಹಾಡುವ ಸಂಗೀತ ಪೆಟ್ಟಿಗೆ `ಜ್ಯೂಕ್ ಬಾಕ್ಸ್' ಮೊತ್ತ ಮೊದಲ ಬಾರಿಗೆ ಸ್ಥಾಪನೆಗೊಂಡಿತು. ಲೂಯಿ ಗ್ಲಾಸ್ ಎಂಬ ಉದ್ಯಮಿ ಹಾಗೂ ಅವರ ಸಹೋದ್ಯೋಗಿ ವಿಲಿಯಂ ಎಸ್ ಅರ್ನಾಲ್ಡ್ ಅವರು ನಾಣ್ಯ ಹಾಕಿದರೆ ಹಾಡುವಂತಹ `ಎಡಿಸನ್ ಸಿಲಿಂಡರ್ ಫೊನೋಗ್ರಾಫ್' ನ್ನು ಸ್ಯಾನ್ ಫ್ರಾನ್ಸಿಸ್ಕೊದ ಪಲಾಯಿಸ್ ರಾಯಲ್ ಸಲೂನಿನಲ್ಲಿ ಸ್ಥಾಪಿಸಿದರು. ಈ ಯಂತ್ರ ಅದ್ಭುತ ಯಶಸ್ಸು ಗಳಿಸಿತು. ಕೇವಲ ಆರು ತಿಂಗಳಲ್ಲಿ 1000 ಡಾಲರ್ ಆದಾಯವನ್ನು ಇದು ತಂದು ಕೊಟ್ಟಿತು.

1885: ಸಾಹಿತಿ ಕಂದಗಲ್ ಹನುಮಂತರಾಯ ಜನನ.

1882: ಭಾರತೀಯ ಕೈಗಾರಿಕೋದ್ಯಮಿ ವಾಲ್ ಚಂದ್ ಹೀರಾಚಂದ್ ದೋಶಿ (1882-1953) ಹುಟ್ಟಿದ ದಿನ. ಇವರು ಭಾರತದ ಮೊತ್ತ ಮೊದಲ ಹಡಗುಕಟ್ಟೆ (ಶಿಪ್ ಯಾರ್ಡ್), ಮೊದಲ ವಿಮಾನ ಕಾರ್ಖಾನೆ ಹಾಗೂ ಮೊದಲ ಕಾರು ಕಾರ್ಖಾನೆ ಸ್ಥಾಪಿಸಿದವರು. ಮುಂಬೈ-ಪುಣೆ ನಡುವಣ ಭೋರ್- ಘಾಟ್ ಟನೆಲ್ಸ್ ನಿರ್ಮಿಸಿದ್ದೂ ಇವರ ನಿರ್ಮಾಣ ಸಂಸ್ಥೆಯೇ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement