Friday, January 8, 2010

ಇಂದಿನ ಇತಿಹಾಸ History Today ಡಿಸೆಂಬರ್ 09

ಇಂದಿನ ಇತಿಹಾಸ

ಡಿಸೆಂಬರ್ 09

ಮಾದಕ ದ್ರವ್ಯ ಕಳ್ಳಸಾಗಣೆ ಆರೋಪದ ಮೇಲೆ ಗಾಟ್ವಿಕ್ ವಿಮಾನ ನಿಲ್ದಾಣದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಕ್ರಿಸ್ ಲೂಯಿಸ್ ಅವರನ್ನು ಬಂಧಿಸಲಾಯಿತು. 2 ಸಾವಿರ ಯೂರೊ ಮೌಲ್ಯದ ಕೊಕೇನನ್ನು ಅವರಿಂದ ವಶ ಪಡಿಸಿಕೊಳ್ಳಲಾಯಿತು. 40 ವರ್ಷ ವಯಸ್ಸಿನ ಲೂಯಿಸ್ ಅವರು ದ್ರವ ರೂಪದಲ್ಲಿದ್ದ ನಾಲ್ಕು ಕೆಜಿ ಕೊಕೇನನ್ನು ಹಣ್ಣಿನ ಡಬ್ಬದೊಳಗೆ ಇಟ್ಟು ಕಳ್ಳ ಸಾಗಣೆ ಮಾಡುತ್ತಿದ್ದರು ಎಂದು ಲೂಯಿಸ್ ಅವರನ್ನು ಬಂಧಿಸಿದ ಬ್ರಿಟನ್ ಬಾರ್ಡರ್ ಏಜೆನ್ಸಿ ಸಿಬ್ಬಂದಿ ತಿಳಿಸಿದರು. ಲೂಯಿಸ್ ಅವರೊಂದಿಗಿದ್ದ ಬ್ಯಾಸ್ಕೆಟ್‌ಬಾಲ್ ಆಟಗಾರ ಚಡ್ ಕಿರ್ನೊನ್ ಅವರನ್ನೂ ಬಂಧಿಸಲಾಯಿತು.


2008: ದೇಶದ ವಾಣಿಜ್ಯ ರಾಜಧಾನಿ ಮುಂಬೈ ಮೇಲೆ ದಾಳಿ ನಡೆಸಿದ ಎಲ್ಲಾ 10 ಉಗ್ರಗಾಮಿಗಳ ಗುರುತು ಪತ್ತೆಯಾಯಿತು. ಇವರೆಲ್ಲರೂ ಪಾಕಿಸ್ಥಾನ ಮೂಲದವರೇ ಎಂಬುದನ್ನು ದೃಢಪಡಿಸಲು ಹಲವಾರು ಸುಳಿವುಗಳು ಪೊಲೀಸರಿಗೆ ಲಭ್ಯವಾದವು. ಎಲ್ಲಾ 10 ಮಂದಿಯ ತವರೂರುಗಳನ್ನು ಸಹ ಪತ್ತೆ ಹಚ್ಚುವಲ್ಲಿ ಅವರು ಯಶಸ್ವಿಯಾದರು. ಎಲ್ಲಾ ದುಷ್ಕರ್ಮಿಗಳೂ ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯಕ್ಕೆ ಸೇರಿದವರು. ಏಕೈಕ ಬಂಧಿತ ಉಗ್ರ ಅಜ್ಮಲ್ ಕಸಾಬ್ ಸೇರಿದಂತೆ ಇತರ ಮೂವರ ಜಿಲ್ಲೆ ಒಕಾರ. ಇನ್ನು ಮೂವರು ಮುಲ್ತಾನ್, ಇಬ್ಬರು ಫೈಸಾಬ್ಲಾದ್ ಮತ್ತು ತಲಾ ಒಬ್ಬರು ಸಿಯಾಲ್‌ ಕೋಟ್ ಮತ್ತು ದೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯವರು.

2008: ಲಷ್ಕರ್-ಇ-ತೊಯ್ಬಾ (ಎಲ್‌ಇಟಿ) ಕಮಾಂಡರ್ ಝಾಕೀರ್ ರೆಹಮಾನ್ ಲಖ್ವಿಯನ್ನು ಹಿಂದಿನ ದಿನ ಬಂಧಿಸಲಾಗಿದ್ದರೂ, ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಶ್ನೆಯೇ ಇಲ್ಲ. ಆತನ ಭಯೋತ್ಪಾದಕ ಕೃತ್ಯಗಳ ಬಗ್ಗೆ ಭಾರತ ಸಾಕ್ಷ್ಯಗಳನ್ನು ಒದಗಿಸಿದರೆ ಮಾತ್ರ ಅವನನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪಾಕಿಸ್ಥಾನ ಹೇಳಿತು. ಲಖ್ವಿಯನ್ನು ಬಂಧಿಸಿರುವುದು ನಿಜ. ಆದರೆ ಭಾರತ ಆತನ ವಿರುದ್ಧ ಸೂಕ್ತ ಪುರಾವೆಗಳನ್ನು ಒದಗಿಸಿದರೆ ಮಾತ್ರ ವಿಚಾರಣೆಗೆ ಒಳಪಡಿಸಲಾಗುವುದು. ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಶ್ನೆಯೇ ಇಲ್ಲ ಎಂದು ಪಾಕಿಸ್ಥಾನದ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

2008: ಕ್ರಿಮಿನಲ್ ಹಿನ್ನೆಲೆಯುಳ್ಳ ಕಳಂಕಿತ ಸಚಿವರನ್ನು ಸಂಪುಟದಿಂದ ಕೈಬಿಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಆದೇಶಿಸುವಂತೆ ಹಾಗೂ ಈ ಪ್ರಕರಣವನ್ನು ಸಿಬಿಐಗೆ ವಹಿಸಿಕೊಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತು. ಈ ಪ್ರಕರಣವು ರಾಜಕೀಯ ಪ್ರೇರಿತವಾದಂತೆ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಇದನ್ನು ಮಾನ್ಯ ಮಾಡಲಾಗದು ಎಂದು ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಹಾಗೂ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಅಭಿಪ್ರಾಯ ಪಟ್ಟಿತು.

2008: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಗೌರ್ ಗೋವಿಂದ್‌ಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಸತತ ಒಂಬತ್ತನೇ ಬಾರಿ ವಿಧಾನ ಸಭೆಗೆ ಪ್ರವೇಶಿಸಿ ದಾಖಲೆ ನಿರ್ಮಿಸಿದರು. ಬಾಬುಲಾಲ್ ಗೌರ್ 1974ರಲ್ಲಿ ಪ್ರಥಮ ಬಾರಿ ಭೊಪಾಲಿನ ದಕ್ಷಿಣ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗುವ ಮೂಲಕ ರಾಜಕೀಯ ರಂಗ ಪ್ರವೇಶ ಮಾಡಿದರು. ನಂತರ 1977ರಲ್ಲಿ ಭಾರತೀಯ ಜನತಾ ಪಕ್ಷದ ಗೋವಿಂದ್‌ಪುರ ಕ್ಷೇತ್ರ ಅಭ್ಯರ್ಥಿಯಾಗಿ ಚುನಾವಣೆ ಕಣಕ್ಕೆ ಇಳಿದಿದ್ದರು.

2008: ಮಾದಕ ದ್ರವ್ಯ ಕಳ್ಳಸಾಗಣೆ ಆರೋಪದ ಮೇಲೆ ಗಾಟ್ವಿಕ್ ವಿಮಾನ ನಿಲ್ದಾಣದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಕ್ರಿಸ್ ಲೂಯಿಸ್ ಅವರನ್ನು ಬಂಧಿಸಲಾಯಿತು. 2 ಸಾವಿರ ಯೂರೊ ಮೌಲ್ಯದ ಕೊಕೇನನ್ನು ಅವರಿಂದ ವಶ ಪಡಿಸಿಕೊಳ್ಳಲಾಯಿತು. 40 ವರ್ಷ ವಯಸ್ಸಿನ ಲೂಯಿಸ್ ಅವರು ದ್ರವ ರೂಪದಲ್ಲಿದ್ದ ನಾಲ್ಕು ಕೆಜಿ ಕೊಕೇನನ್ನು ಹಣ್ಣಿನ ಡಬ್ಬದೊಳಗೆ ಇಟ್ಟು ಕಳ್ಳ ಸಾಗಣೆ ಮಾಡುತ್ತಿದ್ದರು ಎಂದು ಲೂಯಿಸ್ ಅವರನ್ನು ಬಂಧಿಸಿದ ಬ್ರಿಟನ್ ಬಾರ್ಡರ್ ಏಜೆನ್ಸಿ ಸಿಬ್ಬಂದಿ ತಿಳಿಸಿದರು. ಲೂಯಿಸ್ ಅವರೊಂದಿಗಿದ್ದ ಬ್ಯಾಸ್ಕೆಟ್‌ಬಾಲ್ ಆಟಗಾರ ಚಡ್ ಕಿರ್ನೊನ್ ಅವರನ್ನೂ ಬಂಧಿಸಲಾಯಿತು.

2008: ಫಿರೋಜಾಬಾದಿನ ಮಖಾನಪುರ ಪೊಲೀಸ್ ಠಾಣೆ ವ್ಯಾಪ್ತಿಯ ರುಪ್ಸಾಪುರದ ಬಳಿ ಬಸ್ಸಿನಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ 40 ಮಂದಿ ಸಜೀವ ದಹನಗೊಂಡು, ಇತರ 30 ಮಂದಿಗೆ ಗಂಭೀರವಾದ ಸುಟ್ಟ ಗಾಯಗಳಾದವು. ಮಥುರಾದ ಜೈ ಗುರುದೇವ ಆಶ್ರಮದ ಸತ್ಸಂಗದಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿತು.

2007: ಪಾಕಿಸ್ಥಾನ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಮೊದಲ ದಿನ ಭಾರತದ ಬ್ಯಾಟ್ಸ್ ಮನ್ನರು ಕೆಲವು ದಾಖಲೆಗಳನ್ನು ಅಳಿಸಿಹಾಕಿದರೆ, ಎರಡನೇ ದಿನ ಮತ್ತೊಂದಷ್ಟು ದಾಖಲೆಗಳನ್ನು ಕಡತದಿಂದ ಕಿತ್ತುಹಾಕಿದರು. ಮೊದಲದಿನ ಯುವರಾಜ್ ಮತ್ತು ಸೌರವ್ ಗಂಗೂಲಿ ಸೇರಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು. ಅದೇ ಪ್ರದರ್ಶನವನ್ನು ಗಂಗೂಲಿ ಎರಡನೇ ದಿನವಾದ ಈದಿನವೂ ಮುಂದುವರೆಸಿದರು. ಇರ್ಫಾನ್ ಪಠಾಣ್ ಅವರು ಗಂಗೂಲಿಗೆ ಸಾಥ್ ನೀಡಿದರು. ಭಾರತ ಮೊದಲ ಇನಿಂಗ್ಸಿನಲ್ಲಿ ಪೇರಿಸಿದ 626 ರನ್ನುಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಂಡವೊಂದು ದಾಖಲಿಸಿದ ಅತಿದೊಡ್ಡ ಮೊತ್ತವಾಯಿತು. ಸೌರವ್ ಗಂಗೂಲಿ ತಮ್ಮ ಟೆಸ್ಟ್ ಕ್ರಿಕೆಟ್ ಜೀವನದ ಮೊದಲ ದ್ವಿಶತಕ (239) ಗಳಿಸಿ ಮೆರೆದಾಡಿದರೆ, ಇರ್ಫಾನ್ ಪಠಾಣ್ (102) ಚೊಚ್ಚಲ ಶತಕ ಗಳಿಸಿದರು. 2004-05 ರಲ್ಲಿ ಪಾಕಿಸ್ಥಾನವು ಪೇರಿಸಿದ 570 ರನ್ನುಗಳು ಇಲ್ಲಿ ದಾಖಲಾದ ಈವರೆಗಿನ ಅತಿದೊಡ್ಡ ಮೊತ್ತವಾಗಿತ್ತು. 1993-94 ರಲ್ಲಿ ಶ್ರೀಲಂಕಾ ವಿರುದ್ಧ 6 ವಿಕೆಟಿಗೆ 541 ರನ್ ಪೇರಿಸಿದ್ದು ಇಲ್ಲಿ ಭಾರತ ತಂಡದ ಈವರೆಗಿನ ಉತ್ತಮ ಮೊತ್ತವಾಗಿತ್ತು. ಈ ಸಲ ಅದೂ ಕೂಡ ದಾಖಲೆಯ ಪುಸ್ತಕದಿಂದ ಮರೆಯಾಯಿತು. ರನ್ನುಗಳ ಚಿತ್ತಾರ ಬಿಡಿಸಿದ ಕೋಲ್ಕತ್ತದ ಮಹಾರಾಜ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅತ್ಯಧಿಕ ರನ್ ಪೇರಿಸಿದ ಎಡಗೈ ಬ್ಯಾಟ್ಸ್ ಮನ್ ಎಂಬ ಗೌರವ ತಮ್ಮದಾಗಿಸಿದರು. ಇದರಿಂದ ಯುವರಾಜ್ ಸಿಂಗ್ ಹೆಸರಿನಲ್ಲಿದ್ದ ದಾಖಲೆ ಒಂದೇ ದಿನದಲ್ಲಿ ಅಳಿಸಿಹೋಯಿತು. ಪಂದ್ಯದ ಮೊದಲ ದಿನ ಯುವರಾಜ್ ಗಳಿಸಿದ್ದ 169 ರನ್ನುಗಳು ಎಡಗೈ ಬ್ಯಾಟ್ಸ್ ಮನ್ ಒಬ್ಬನ ಶ್ರೇಷ್ಠ ಪ್ರದರ್ಶನವಾಗಿತ್ತು. ಜೊತೆಗೆ ಭಾರತದ ಪರ ಅತ್ಯಧಿಕ ರನ್ ಗಳಿಸಿದ ಎಡಗೈ ಬ್ಯಾಟ್ಸ್ ಮನ್ ಎನಿಸಿದರು. ಈ ಮೊದಲು ವಿನೋದ್ ಕಾಂಬ್ಳಿ ಅವರು 227 ರನ್ ಪೇರಿಸಿದ್ದರು. 239 ರನ್ ಗಳಿಸುವ ಮೂಲಕ ಟೆಸ್ಟ್ ಇನಿಂಗ್ಸ್ ಒಂದರಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತದ ಬ್ಯಾಟ್ಸ್ ಮನ್ನರ ಪಟ್ಟಿಯಲ್ಲಿ ಗಂಗೂಲಿ ಐದನೇ ಸ್ಥಾನ ಪಡೆದರು. ವೀರೇಂದ್ರ ಸೆಹ್ವಾಗ್ (309 ಮತ್ತು 254) ಮೊದಲ ಸ್ಥಾನದಲ್ಲಿದ್ದರೆೆ, ವಿವಿಎಸ್ ಲಕ್ಷ್ಮಣ್ (281), ರಾಹುಲ್ ದ್ರಾವಿಡ್ (270), ಸಚಿನ್ ತೆಂಡೂಲ್ಕರ್ (248 ಮತ್ತು 241) ಕ್ರಮವಾಗಿ ನಂತರದ ಮೂರು ಸ್ಥಾನಗಳಲ್ಲಿ ಇದ್ದಾರೆ. 1997ರಲ್ಲಿ ಶ್ರೀಲಂಕಾ ವಿರುದ್ಧ ಮುಂಬೈಯಲ್ಲಿ 173 ರನ್ ಗಳಿಸಿದ್ದು ಗಂಗೂಲಿಯ ಈವರೆಗಿನ ಅತ್ಯಧಿಕ ಮೊತ್ತವಾಗಿತ್ತು. ಮೊದಲ ದಿನ ಐದನೇ ವಿಕೆಟಿಗೆ 300 ರನ್ನುಗಳ ಜೊತೆಯಾಟ ನೀಡಿದ್ದ ಗಂಗೂಲಿ ಮತ್ತು ಯುವರಾಜ್ ಕೆಲವೊಂದು ದಾಖಲೆಗಳನ್ನು ಅಳಿಸಿಹಾಕಿದರು.

2007: ಖಂಡಾಂತರ ಭೂಸ್ತರಗಳ ಚಲನವಲನದಿಂದಾಗಿ ಭೂಕಂಪ ಹಾಗೂ ಜ್ವಾಲಾಮುಖಿ ಚಟುವಟಿಕೆಗಳ ತಾಣವಾಗಿರುವ ಪೆಸಿಫಿಕ್ ಸಾಗರದ ತಳದಲ್ಲಿ 187 ಕಿಮೀ ಒಳಗೆ, ಟೊಂಗಾದ ಕರಾವಳಿಯಾಚೆ ರಿಕ್ಟರ್ ಮಾಪಕದಲ್ಲಿ 7.6ರಷ್ಟು ತೀವ್ರತೆ ಹೊಂದಿದ್ದ ಪ್ರಬಲ ಭೂಕಂಪ ಈದಿನ ಮಧ್ಯಾಹ್ನ ಸಂಭವಿಸಿತು.

2007: ಅಮೆರಿಕ ನಿರ್ಮಿತ ಬಾಹ್ಯಾಕಾಶ ನೌಕೆ ಅಟ್ಲಾಂಟಿಸ್ ಉಡಾವಣೆಯನ್ನು ಫ್ಲೋರಿಡಾದ ಕೇಪ್ ಕೆನವರಾಲ್ನಲ್ಲಿ ಈದಿನ ಕೂಡಾ ಸ್ಥಗಿತಗೊಳಿಸಲಾಯಿತು. ನೌಕೆಯ ಹೈಡ್ರೋಜನ್ ಇಂಧನ ಟ್ಯಾಂಕಿನಲ್ಲಿ ಕಂಡು ಬಂದ ತಾಂತ್ರಿಕ ಸಮಸ್ಯೆಯಿಂದಾಗಿ ಉಡಾವಣೆ ಸಾಧ್ಯವಾಗಲಿಲ್ಲ. ಬೆಳಿಗ್ಗೆ ನಡೆದ ಪರೀಕ್ಷೆಗಳಲ್ಲಿ ಈ ತಾಂತ್ರಿಕ ಸಮಸ್ಯೆ ಬೆಳಕಿಗೆ ಬಂದ ಕಾರಣ ಉಡಾವಣೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದರು.

2007: ಬಿಜೆಪಿಯಿಂದ ಭಾರಿ ಒತ್ತಡ ಬಂದ ಹಿನ್ನೆಲೆಯಲ್ಲಿ, ಚುನಾವಣಾ ಪ್ರಚಾರ ಭಾಷಣದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು `ಸಾವಿನ ವ್ಯಾಪಾರಿ' ಎಂದು ತೆಗಳಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿತು.

2007: ತಮಿಳುನಾಡು ಪೊಲೀಸರು ಎಲ್ಟಿಟಿಇಯ ಕಡಲು ಪಡೆ ವಿಭಾಗದ ಹಿರಿಯ ನಾಯಕರಾದ ಜಯಕುಮಾರ್ (34), ಜೇಮ್ಸ್ (46) ಮತ್ತು ರವಿ ಕುಮಾರ್ (42) ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಹಿಂದಿನದಿನ ರಾತ್ರಿ ಬಂಧಿಸಿದರು. ಒಂದು ಅತ್ಯಾಧುನಿಕ ದೋಣಿ, ಈಜುಗಾರರ ಪಾದರಕ್ಷೆಗಳು ಇತ್ಯಾದಿಗಳನ್ನು ಶ್ರೀಲಂಕಾಗೆ ಕೊಂಡೊಯ್ಯುವ ಬಗ್ಗೆ ವ್ಯವಹರಿಸುವ ಸಲುವಾಗಿ ಅವರು ಚೆನ್ನೈಗೆ ಆಗಮಿಸಿದ್ದರು.

2007: ಕಾಶ್ಮೀರ ಪಂಡಿತನ ಅಂತ್ಯಸಂಸ್ಕಾರವನ್ನು ನೂರಾರು ಮುಸ್ಲಿಮರು ಶ್ರೀನಗರದ ಗಡೆರ್ಬಾಲ್ ಬಳಿ ನೆರವೇರಿಸಿದರು. ದೀರ್ಘ ಕಾಲದಿಂದ ಅಸ್ವಸ್ಥರಾಗಿದ್ದ ಜಿಯಲಾಲ್ ರೈನಾ (85) ಅವರು ಹಿಂದಿನ ದಿನ ಶ್ರೀನಗರದ ಮಣಿಗಂ ಗಂಡರ್ಬಾಲಿನಲ್ಲಿ ನಿಧನರಾದರು. 1990ರಲ್ಲಿ ಆತನ ಕುಟುಂಬ ಸದಸ್ಯರು ಕಣಿವೆಯನ್ನು ತ್ಯಜಿಸಿ ಹೋಗಿದ್ದುದರಿಂದ ಅವರು ಒಂಟಿಯಾಗಿ ಜೀವನ ಸಾಗಿಸುತ್ತಿದ್ದರು. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಮುಸ್ಲಿಂ ಬಾಂಧವರು ಆಗಮಿಸಿ ಅಂತ್ಯ ಸಂಸ್ಕಾರ ನಡೆಸಿದರು.

2007: ಏಷ್ಯಾ ಮತ್ತು ಯೂರೋಪಿನ ದೊಡ್ಡ ಮಾಧ್ಯಮ ಸಂಸ್ಥೆಯಾದ `ನ್ಯೂಸ್ ಕಾರ್ಪೊರೇಷನ್' ಮುಖ್ಯಸ್ಥನ ಹುದ್ದೆಗೆ ಮಾಧ್ಯಮ ದೊರೆ ರೂಪರ್ಟ್ ಮರ್ಡೋಕ್ ಅವರ ಪುತ್ರ ಜೇಮ್ಸ್ ಮರ್ಡೋಕ್ (34) ಅವರನ್ನು ನೇಮಕ ಮಾಡಲಾಯಿತು. ನ್ಯೂಸ್ ಇಂಟರ್ ನ್ಯಾಷನಲ್ ಸ್ಕೈ, ಸ್ಕೈ ಇಟಾಲಿಯಾ, ಸ್ಟಾರ್ ಸಮೂಹ ಹಾಗೂ ನ್ಯೂಸ್ ಕಾರ್ಪೊರೇಷನ್ ಯೂರೋಪ್' ಸಂಸ್ಥೆಗಳನ್ನು ಈ ಸಮೂಹ ಹೊಂದಿದೆ.

2006: ಭಾರತಕ್ಕೆ ಅಮೆರಿಕದ ಪರಮಾಣು ತಂತ್ರಜ್ಞಾನ ರಫ್ತಿಗೆ ವಿಧಿಸಲಾಗಿದ್ದ 32 ವರ್ಷಗಳ ನಿಷೇಧವನ್ನು ತೆರವುಗೊಳಿಸಲು ಅವಕಾಶ ಒದಗಿಸುವ ಚಾರಿತ್ರಿಕ ಭಾರತ- ಅಮೆರಿಕ ನಾಗರಿಕ ಪರಮಾಣು ಒಪ್ಪಂದ ಮಸೂದೆಗೆ ಕಾಂಗ್ರೆಸ್ಸಿನ ಬಳಿಕ ಅಮೆರಿಕದ ಸೆನೆಟ್ ಸದಸ್ಯರೂ ಈದಿನ ಸರ್ವಾನುಮತದ ಒಪ್ಪಿಗೆ ನೀಡಿದರು. ಕಾಂಗ್ರೆಸ್ ಹಿಂದಿನ ರಾತ್ರಿ 330- 59 ಮತಗಳಿಂದ ಅಂಗೀಕರಿಸಿದ ಮಸೂದೆಯನ್ನು ಸೆನೆಟ್ ಯಾವ ಚರ್ಚೆಯನ್ನೂ ನಡೆಸದೆ ಒಮ್ಮತದಿಂದ ಅಂಗೀಕರಿಸಿತು. ಈ ಒಪ್ಪಂದ ಜಾರಿಯೊಂದಿಗೆ 32 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತ- ಅಮೆರಿಕ ನಡುವೆ ಪರಮಾಣು ತಂತ್ರಜ್ಞಾನ ವಹಿವಾಟು ನಡೆಯುವುದು. ಅಮೆರಿಕದ ಅಧ್ಯಕ್ಷ ಬುಷ್ ಮತ್ತು ಭಾರತದ ಪ್ರಧಾನಿ ಮನಮೋಹನ ಸಿಂಗ್ ಅವರು 2005ರ ಜುಲೈ ತಿಂಗಳಲ್ಲಿ ಈ ಚಾರಿತ್ರಿಕ ಒಪ್ಪಂದಕ್ಕೆ ಸಹಿ ಮಾಡಿದ್ದರು.

2006: ರಷ್ಯದ ಮಾಸ್ಕೊದ ಮಾದಕ ವಸ್ತು ಸೇವನೆ ವ್ಯಸನಿಗಳ ಪುನರ್ವಸತಿ ಆಸ್ಪತ್ರೆಯಲ್ಲಿ ಅಗ್ನಿ ಅನಾಹುತ ಸಂಭವಿಸಿ 45 ಮಂದಿ ಮಹಿಳೆಯರು ಸಜೀವವಾಗಿ ದಹನಗೊಂಡರು. ಐದು ಮಹಡಿಗಳ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಬೆಳಗಿನ ಜಾವ ಮೊದಲು ಬೆಂಕಿ ಕಾಣಿಸಿಕೊಂಡಿತು. ತುರ್ತು ನಿರ್ಗಮನದ ದ್ವಾರಗಳನ್ನೆಲ್ಲ ಮುಚ್ಚಿದ್ದುದರಿಂದ ಬೆಂಕಿಯಿಂದ ತಪ್ಪಿಸಿಕೊಳ್ಳಲು ದುರ್ದೈವಿಗಳಿಗೆ ಸಾಧ್ಯವಾಗಲಿಲ್ಲ. ಮೃತರಲ್ಲಿ ಬಹುತೇಕ ಮಂದಿ ಅಮಲು ಪದಾರ್ಥ ಮತ್ತು ಮದ್ಯ ವ್ಯಸನಿಗಳಾಗಿದ್ದು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯ ಇಬ್ಬರು ಸಿಬ್ಬಂದಿಯೂ ಸತ್ತವರಲ್ಲಿ ಸೇರಿದ್ದಾರೆ.

2006: ಪರಮಾಣು ಸಿಡಿತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯವುಳ್ಳ ತನ್ನ ಕ್ಷಿಪಣಿ ಸರಣಿಯ ಮೂರನೆಯ ಕ್ಷಿಪಣಿ `ಘಜನಿ'ಯ ಪರೀಕ್ಷಾ ಉಡಾವಣೆಯನ್ನು ಪಾಕಿಸ್ಥಾನ ಯಶಸ್ವಿಯಾಗಿ ನಡೆಸಿತು. ಇದು ಕಡಿಮೆ ದೂರಕ್ಕೆ ಚಿಮ್ಮುವ ಕ್ಷಿಪಣಿಯಾಗಿದ್ದು, 290 ಕಿ.ಮೀ ದೂರ ಹಾರುವ ಸಾಮರ್ಥ್ಯ ಹೊಂದಿದೆ. ಭಾರತದ ಹಲವು ನಗರಗಳಿಗೆ ಬಂದು ಬೀಳುವ ಸಾಮರ್ಥ್ಯ ಇದಕ್ಕೆ ಇದೆ. ಪಾಕಿಸ್ಥಾನ ಈಗಾಗಲೇ ಘೋರಿ-1 ಮತ್ತು ಶಾಹೀನ್-1 ಎಂಬ ಎರಡು ಯುದ್ಧ ಕ್ಷಿಪಣಿಗಳ ಪರೀಕ್ಷಾ ಉಡಾವಣೆ ನಡೆಸಿದೆ.

2005: ಮೂಲಸೌಲಭ್ಯ ಅಭಿವೃದ್ಧಿ ಸೇರಿದಂತೆ ಶಿಕ್ಷಣ ಮತ್ತು ಎಲೆಕ್ಟ್ರಾನಿಕ್ ಆಡಳಿತ ಕ್ಷೇತ್ರದಲ್ಲಿ ಭಾರತದೊಂದಿಗೆ ಸಹಕಾರಕ್ಕೆ ಸಿದ್ಧ ಎಂಬುದಾಗಿ ಘೋಷಿಸಿದ ಮೈಕ್ರೋಸಾಫ್ಟ್ ಅಧ್ಯಕ್ಷ ಬಿಲ್ ಗೇಟ್ಸ್ ಅವರು ಇದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ರಾಷ್ಟ್ರವ್ಯಾಪಿ ಪ್ರತಿಭಾನ್ವೇಷಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

2005: ದೀರ್ಘಕಾಲ ಬಾಳ್ವಿಕೆ ಬರುವಂತಹ ದ್ವಿ ಆಯುಷ್ಯಿ ವಿದ್ಯುತ್ ಬಲ್ಬ್ ತಯಾರಿಸಿರುವುದಾಗಿ ಬೆಂಗಳೂರಿನ ಆರ್. ಪ್ರಕಾಶ್ ಪ್ರಕಟಿಸಿದರು. ಈ ಬಲ್ಬಿಗೆ ಚೆನ್ನೈಯ ಬೌದ್ಧಿಕ ಹಕ್ಕು ನೋಂದಣಿ ಕಚೇರಿಯಿಂದ ಮಾನ್ಯತೆ ದೊರಕಿದೆ. ಏಳು ವರ್ಷಗಳ ಸತತದ ಪ್ರಯತ್ನದಿಂದ ರೂಪುಗೊಂಡಿರುವ ಈ ಬಲ್ಪ್ ಮಾಮೂಲಿ ಬಲ್ಬಿಗಿಂತ ಹೆಚ್ಚು ಬಾಳಿಕೆ ಬರುತ್ತದೆ. ಸಾಮಾನ್ಯ ಬಲ್ಬ್ 1000 ಗಂಟೆ ಬಾಳಿಕೆ ಬಂದರೆ ಇದು 2000 ಗಂಟೆ ಬಾಳಿಕೆ ಬರುತ್ತದೆ ಎಂಬುದು ಪ್ರಕಾಶ್ ಪ್ರತಿಪಾದನೆ.

1997: ಜ್ಞಾನಪೀಠ ಪ್ರಶಸ್ತಿ ಪುರಸ್ಕತ, ಕನ್ನಡದ ಶ್ರೇಷ್ಠ ಸಾಹಿತಿ ಸಂಶೋಧಕ ಡಾ. ಕೆ. ಶಿವರಾಮ ಕಾರಂತ ಅವರು ಮಣಿಪಾಲದಲ್ಲಿ ನಿಧನರಾದರು. ದಕ್ಷಿಣ ಕನ್ನಡ ಜಿಲ್ಲೆಯ (ಈಗಿನ ಉಡುಪಿ ಜಿಲ್ಲೆ) ಕುಂದಾಪುರ ತಾಲ್ಲೂಕು ಕೋಟದಲ್ಲಿ 1902ರ ಅಕ್ಟೋಬರ್ 20ರಂದು ಜನಿಸಿದ ಕಾರಂತರು ಸಾಹಿತ್ಯದಲ್ಲಿ ಕೈಯಾಡಿಸದ ಕ್ಷೇತ್ರ. ಪ್ರಾಕಾರ ಇಲ್ಲ. ಪರಿಸರ, ಮಕ್ಕಳ ಸಾಹಿತ್ಯ, ವಿಜ್ಞಾನ ನಿಘಂಟು, ಕಾದಂಬರಿ, ಮತ್ತಿತರ ಪ್ರಾಕಾರಗಳಲ್ಲಿ 100ಕ್ಕೂ ಹೆಚ್ಚು ಅಮೂಲ್ಯ ಕೃತಿಗಳನ್ನು ಅವರು ಕನ್ನಡಕ್ಕೆ ನೀಡಿದ್ದಾರೆ. ಮೂಕಜ್ಜಿಯ ಕನಸುಗಳು ಅವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿತು. ಸ್ವಾತಂತ್ರ್ಯ ಹೋರಾಟ, ಪರಿಸರ ಹೋರಾಟದಲ್ಲೂ ಪಾಲ್ಗೊಂಡಿದ್ದ ಅವರು ಸಿನಿಮಾ, ಯಕ್ಷಗಾನದಲ್ಲೂ ಪ್ರಯೋಗ ನಡೆಸಿದವರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿದ್ದವು. ಮಕ್ಕಳಿಗಾಗಿ ಪುತ್ತೂರಿನಲ್ಲಿ ವಾಸ್ತವ್ಯ ಇದ್ದಾಗ ಬಾಲವನ ನಿರ್ಮಿಸಿದ್ದರು. ಅವರ ಚೋಮನ ದುಡಿ ಕೃತಿ ಚಲನಚಿತ್ರವಾಗಿ ಜನಪ್ರಿಯಗೊಂಡಿತ್ತು.

1992: ಬ್ರಿಟನ್ನಿನ ರಾಜಕುಮಾರ ಚಾರ್ಲ್ಸ್ ಮತ್ತು ರಾಜಕುಮಾರಿ ಡಯಾನಾ ತಾವು ಬೇರ್ಪಟ್ಟಿರುವುದಾಗಿ ಪ್ರಕಟಿಸಿದರು.

1971: ಭಾರತ - ಪಾಕ್ ಸಮರ ಕಾಲದಲ್ಲಿ ಜಲಾಂತರ್ಗಾಮೀ ಶೋಧಕ ಹಡಗು `ಐ ಎನ್ ಎಸ್ ಖುಕಿ'್ರಗೆ ಅದು ಜಲಾಂತರ್ಗಾಮಿಯ ಶೋಧದಲ್ಲಿದ್ದಾಗ ಮೂರು ಸ್ಫೋಟಕಗಳು ಬಡಿದವು. ಹಡಗು ಅದರಲ್ಲಿದ್ದ 18 ಅಧಿಕಾರಿಗಳು ಮತ್ತು ಇತರ 176 ಮಂದಿಯೊಂದಿಗೆ ನೀರಿನಲ್ಲಿ ಮುಳುಗಿತು. ಸಮರ ಕಾಲದಲ್ಲಿ ಭಾರತದ ನೌಕಾ ಪಡೆ ಕಳೆದುಕೊಂಡ ಏಕೈಕ ನೌಕೆ ಇದು.

1946: ಭಾರತೀಯ ಸಂವಿಧಾನ ಸಭೆಯ ಸಮಾವೇಶ ಮೊತ್ತ ಮೊದಲ ಬಾರಿಗೆ `ಕಾನಸ್ಟಿಟ್ಯೂಷನ್ ಹಾಲ್' ನಲ್ಲಿ ನಡೆಯಿತು. ಈಗ ಇದನ್ನು ಸಂಸತ್ತಿನ `ಸೆಂಟ್ರಲ್ ಹಾಲ್' ಎಂಬುದಾಗಿ ಕರೆಯಲಾಗುತ್ತಿದೆ. 9 ಮಂದಿ ಮಹಿಳೆಯರು ಸೇರಿದಂತೆ 207ಮಂದಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸ್ವತಂತ್ರ ಭಾರತದ ಸಂವಿಧಾನದ ಕರಡು ನಿರ್ಮಿಸುವ ಕಾರ್ಯವನ್ನು ಪೂರ್ಣಗೊಳಿಸಲು 2 ವರ್ಷ 11 ತಿಂಗಳು, 17 ದಿನಗಳು ಬೇಕಾದವು. ಸಂವಿಧಾನವನ್ನು 1949ರ ನವೆಂಬರ್ 26ರಂದು ಅಂಗೀಕರಿಸಲಾಯಿತು. ಅದು 1950ರ ಜನವರಿ 26ರಂದು ಅನುಷ್ಠಾನಕ್ಕೆ ಬಂದಿತು.

1947: ಇಟಲಿ ಸಂಜಾತ ಭಾರತೀಯ ರಾಜಕಾರಣಿ, ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಹುಟ್ಟಿದ ದಿನ. ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರನ್ನು ಮದುವೆಯಾದರು.

1945: ಚಿತ್ರನಟ, ರಾಜಕಾರಣಿ ಶತ್ರುಘ್ನ ಸಿನ್ಹ ಹುಟ್ಟಿದ ದಿನ.

1902: ಬ್ರಿಟಿಷ್ ಮುತ್ಸದ್ಧಿ ರಿಚರ್ಡ್ ಆಸ್ಟೆನ್ ಬಟ್ಲರ್ (1902-1982) ಹುಟ್ಟಿದ ದಿನ. ಅಂತಾರಾಷ್ಟ್ರೀಯ ಶಿಕ್ಷಣ ಸಂಘಟನೆಗೆ ಸಂಬಂಧಿಸಿದಂತೆ ಇವರು ನೀಡಿದ ಸಲಹೆಗಳು ಯುನೆಸ್ಕೊ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದವು.

1825: ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ (1857)ದ `ಹೀರೋ' ತುಲಾ ರಾಮ್ (1825-1863) ಹುಟ್ಟಿದ ದಿನ.

1754: ಪ್ರಾನ್ಸಿಸ್ ರಾಡನ್ ಹೇಸ್ಟಿಂಗ್ಸ್ (1754-1826) ಹುಟ್ಟಿದ ದಿನ. ಬ್ರಿಟಿಷ್ ಸೈನಿಕ ಹಾಗೂ ವಸಾಹತು ಆಡಳಿತಗಾರನಾದ ಈತ ಬಂಗಾಳದ ಗವರ್ನರ್ ಜನರಲ್ ಆಗಿ ಮರಾಠಾ ರಾಜ್ಯಗಳನ್ನು ಸೋಲಿಸಿ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯನ್ನು ಬಲ ಪಡಿಸಿದ.

1608: ಖ್ಯಾತ ಇಂಗ್ಲಿಷ್ ಕವಿ ಜಾನ್ ಮಿಲ್ಟನ್ (1608-1674) ಹುಟ್ಟಿದ ದಿನ. ಇಂಗ್ಲಿಷಿನಲ್ಲಿ ಇವರು ಬರೆದ ಕಾವ್ಯ `ಪ್ಯಾರಡೈಸ್ ಲಾಸ್ಟ್' ಇವರಿಗೆ ಅಪಾರ ಖ್ಯಾತಿ ತಂದು ಕೊಟ್ಟಿತು.

Advertisement