My Blog List

Thursday, January 7, 2010

ಇಂದಿನ ಇತಿಹಾಸ History Today ಡಿಸೆಂಬರ್ 08

ಇಂದಿನ ಇತಿಹಾಸ

ಡಿಸೆಂಬರ್ 08


ಭಾರತದ ಖ್ಯಾತ ಕ್ಯಾಮರಾಮ್ಯಾನ್ ಸುಬ್ರತೊ ಮಿತ್ರ (1930-2001) ನಿಧನರಾದರು. ಸತ್ಯಜಿತ್ ರೇ ಅವರ ಎರಡನೇ ಚಿತ್ರ `ಅಪರಾಜಿತೊ'ದಲ್ಲಿ ಅವರು `ಬೌನ್ಸ್ ಲೈಟ್ನಿಂಗ್' ನ್ನು ಅಳವಡಿಸಿದ್ದರು. ರೇ ಅವರ ಖ್ಯಾತ ಚಿತ್ರಗಳಾದ `ಪಥೇರ್ ಪಾಂಚಾಲಿ', `ಅಪುರ್ ಸಂಸಾರ್' ಇತ್ಯಾದಿ ಚಿತ್ರಗಳ ಚಿತ್ರೀಕರಣವನ್ನೂ ಅವರು ಮಾಡಿದ್ದರು.

2014: ಹೈದರಾಬಾದ್: ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ದಿಗ್ಗಜ ನೆಡುನೂರಿ ಕೃಷ್ಣಮೂರ್ತಿ (87)
ವಿಶಾಖಪಟ್ಟಣಂನಲ್ಲಿರುವ ತಮ್ಮ ನಿವಾಸದಲ್ಲಿ ಈದಿನ ನಸುಕಿನಲ್ಲಿ ಕೊನೆಯುಸಿರೆಳೆದರು. ಶ್ವಾಸಕೋಶದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಕೃಷ್ಣಮೂರ್ತಿ ಬೆಳಗಿನ ಜಾವ 1.38ರ ಸುಮಾರಿಗೆ ನಿಧನರಾಗಿದ್ದಾರೆಂದು ಕುಟುಂಬಸ್ಥರು ತಿಳಿಸಿದರು. ನೆಡುನೂರಿ ಸಾವಿಗೆ ಸಂತಾಪ ಸೂಚಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ಕೃಷ್ಣಮೂರ್ತಿ ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಯಭಾರಿಯಂತಿದ್ದರು ಎಂದರು. 1927 ಅ.10ರಂದು ಆಂಧ್ರದ ಕೊತ್ತಪಲ್ಲಿಯಲ್ಲಿ ಜನಿಸಿದ ಕೃಷ್ಣಮೂರ್ತಿ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದರು. ಸಂಗೀತ ಕಾಲೇಜುಗಳ ಮುಖ್ಯಸ್ಥರಾಗಿ ಸೇವೆಸಲ್ಲಿಸಿದ್ದ ಅವರು, ಟಿಟಿಡಿಯ ಅನ್ನಮಾಚಾರ್ಯ ಕೀರ್ತನೆಗಳಿಗೆ ಕಂಠ ಕೊಟ್ಟವರು. ಅಲ್ಲದೆ ಟಿಟಿಡಿ ಆಸ್ಥಾನ ವಿದ್ವಾನ್ ಆಗಿಯೂ ಸೇವೆಸಲ್ಲಿಸಿದ್ದರು. 1991ರಲ್ಲಿ ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಸಂಗೀತ ಕಲಾನಿಧಿ ಪ್ರಶಸ್ತಿ ನೀಡಿ ಅವರನ್ನು ಗೌರವಿಸಿತ್ತು..

2014: ಕೇಪ್ ಟೌನ್: ಮಧುಚಂದ್ರದ ವೇಳೆ ಸೆಕ್ಸ್ ನಿರಾಕರಿಸಿದ ಬ್ರಿಟಿಷ್ ಇಂಡಿಯನ್ ಉದ್ಯಮಿ ಶ್ರಿಯನ್ ದೆವಾನಿ ಕೊಲೆಗಾರನಲ್ಲ ಎಂದು ದಕ್ಷಿಣ ಆಫ್ರಿಕಾದ ಕೋರ್ಟ್ ಹೇಳಿತು. 2010ರಲ್ಲಿ ಹನಿಮೂನ್ ವೇಳೆ ಇಂಡೋ ಸ್ವೀಡಿಷ್ ಪತ್ನಿ ಅನ್ನಿ ದೆವಾನಿ ಕೊಲೆ ಸಂಚು ಆರೋಪ ಹೊತ್ತಿದ್ದ ದೆವಾನಿಯನ್ನು ಕೋರ್ಟ್ ಆರೋಪ ಮುಕ್ತಗೊಳಿಸಿತು. ಹನಿಮೂನ್ ವೇಳೆ ಸೆಕ್ಸ್ ನಿರಾಕರಿಸುತ್ತಾ ಬಂದ 34ರ ಹರೆಯ ಶ್ರಿಯನ್ ದೆವಾನಿ ಸಲಿಂಗಕಾಮಿ ಎಂಬ ಸತ್ಯ ತಿಳಿದ 28 ವರ್ಷದ ಅನ್ನಿ ದೆವಾನಿ, ಪತಿಯಿಂದ ವಿವಾಹ ವಿಚ್ಛೇದನ ಪಡೆಯಲು ಮುಂದಾಗಿದ್ದಳು. ಆದರೆ ಅಷ್ಟರಲ್ಲೇ ಅನ್ನಿಯ ಕೊಲೆಯಾಗಿತ್ತು. ಶ್ರಿಯನ್ ತನ್ನ
ಸಲಿಂಗಕಾಮಿ ನೆಟ್ವರ್ಕ್ ಬಳಸಿ ಆಕೆಯನ್ನು ಕೊಲೆ ಮಾಡಿಸಿದ್ದಾನೆ ಎಂಬ ಆರೋಪವನ್ನು ಹೊತ್ತಿದ್ದ. ಈ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಿದ್ದ ಟ್ಯಾಕ್ಸಿ ಚಾಲಕ ಜೋಲಾ ಟಾಂಗೋ ನೀಡಿದ ಹೇಳಿಕೆಗಳು ದೆವಾನಿಯ ಆರೋಪಿ ಎಂದು ಸಾಬೀತು ಪಡಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಕೋರ್ಟ್ ಶ್ರಿಯನ್ ಕೊಲೆಗಾರನಲ್ಲ ಎಂದು ಹೇಳಿತು. ವಿಚಾರಣೆ ಆರಂಭದಲ್ಲೇ ದೆವಾನಿ ತಾನು ಬೈ ಸೆಕ್ಸುಯಲ್, ಸಲಿಂಗಿ ವಿಟರನ್ನು ಹುಡುಕಿಕೊಂಡು ಹೋಗುತ್ತಿದ್ದೆ. ಅದರೆ ನನ್ನ ಪತ್ನಿಯನ್ನು ಕೊಲ್ಲಿಸುವಷ್ಟು ಕ್ರೂರಿಯಲ್ಲ ಆಕೆಯನ್ನು ತುಂಬಾ ಪ್ರೀತಿಸುತ್ತಿದ್ದೆ ಎಂದು ಹೇಳಿದ್ದ. ಈ ಪ್ರಕರಣದ ಸಹ ಆರೋಪಿಗಳಾದ ಟ್ಯಾಕ್ಸಿ ಚಾಲಕ ಟಾಂಗೋಗೆ 18 ವರ್ಷ ಜೈಲು, ಮಿವಾಮಾಡೊಡಾ ಕ್ವಾಬೆಗೆ 25 ವರ್ಷ ಹಾಗೂ ಜೊಲಿಲೆ ಗೆನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಈ ಪೈಕಿ ಗೆನಿ ಜೈಲಿನಲ್ಲೇ ಮೃತನಾಗಿದ್ದ. ಅನ್ನಿ ಜೊತೆಗೂಡಿ ಕೇಪ್ಸ್ ಟೌನಿನಲ್ಲಿ ಹನಿಮೂನಿಗೆ ಬಂದಿದ್ದ. ಆದರೆ ಇಂಗ್ಲೆಂಡಿಗೆ ಒಬ್ಬನೇ ಮರಳಿದ್ದ. ಅನ್ನಿ ಸೆಕ್ಸ್ ಮನವಿಯನ್ನು ನಿರಾಕರಿಸಿದ ಶ್ರಿಯಾನಿ ಮುಂಬೈನಲ್ಲಿ ಆರತಕ್ಷತೆ ಆದ ಮೇಲೆ ಇದೆಲ್ಲ ಇಟ್ಟುಕೊಳ್ಳೊಣ ಎಂದಿದ್ದ. ಆದರೆ, ಅನ್ನಿಗೆ ತನ್ನ ಪತಿ ಆತನ ಸಲೀಂಗಿ ಗೆಳೆಯನಿಗೆ ಕಳಿಸಿದ್ದ ಸರಸ ಸಂದೇಶಗಳು ಸಿಕ್ಕಿದ್ದವು. ಕೂಡಲೇ ಅನ್ನಿ ವಿಚ್ಛೇದನಕ್ಕೆ ತಯಾರಿ ನಡೆಸಿದ್ದಳು. ಆದರೆ ಮರುದಿನವೇ ಅನ್ನಿ ಕೊಲೆಯಾಗಿತ್ತು.

2014: ಮುಂಬೈ: ಐಟಿ ಕ್ಷೇತ್ರದ ದಿಗ್ಗಜ ಎನ್ನಿಸಿಕೊಂಡ ಇನ್ಫೋಸಿಸ್‌ ಸಂಸ್ಥೆಯ ಸಹ ಸ್ಥಾಪಕರಾದ ಎನ್.ಆರ್ ನಾರಾಯಣ ಮೂರ್ತಿ, ನಂದನ್ ನೀಲೆಕಣಿ, ಕೆ. ದಿನೇಶ್ ಮತ್ತು ಅವರ ಕುಟುಂಬ ಸದಸ್ಯರು ತಮ್ಮ ಒಡೆತನದಲ್ಲಿದ್ದ ಕಂಪೆನಿಯ 1.1 ಬಿಲಿಯನ್ ಡಾಲರ್ (ರೂ. 6,484 ಕೋಟಿ) ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರು. ಈ ನಾಲ್ವರು ತಮ್ಮ
ಒಡೆತನದಲ್ಲಿದ್ದ ಒಟ್ಟು 326 ಲಕ್ಷ ಷೇರುಗಳನ್ನು ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ(ಎಫ್‌ಐಐ) ಪ್ರತಿ ಷೇರಿಗೆ ರೂ. 1,988 ರಂತೆ ಮಾರಾಟ ಮಾಡಿದ್ದಾರೆ. ಇದರಿಂದ ಸಂಗ್ರಹವಾಗುವ ಮೊತ್ತವನ್ನು ದಾನ ಧರ್ಮದ ಉದ್ದೇಶಕ್ಕೆ ಬಳಸಲಾಗುತ್ತದೆ ಎಂದು ಇನ್ಫೋಸಿಸ್ ಪರವಾಗಿ ಈ ಮಾರಾಟ ಪ್ರಕ್ರಿಯೆ ನಡೆಸಿದ ಡಾಯಿಷ್ ಈ ಕ್ವಿಟ್ ಇಂಡಿಯಾ ಸಂಸ್ಥೆ ತಿಳಿಸಿತು. ನಾರಾಯಣ ಮೂರ್ತಿ ಕುಟುಂಬ ತಮ್ಮ ಒಡೆತನದ ಒಟ್ಟು ಷೇರುಗಳಲ್ಲಿ ಶೇ. 23ರಷ್ಟು ಅಂದರೆ, 120 ಲಕ್ಷ ಷೇರುಗಳನ್ನು ಮಾರಾಟ ಮಾಡಿತು. ನೀಲೆಕಣಿ ಕುಟುಂಬ ತಮ್ಮ ಒಡೆತನದ ಷೇರುಗಳಲ್ಲಿ ಶೇ 31.3ರಷ್ಟು ಅಂದರೆ, 120 ಲಕ್ಷ ಷೇರುಗಳನ್ನು, ದಿನೇಶ್‌ ಕುಟುಂಬ ತಮ್ಮ ಒಡೆತನದ ಷೇರುಗಳಲ್ಲಿ ಶೇ 21.5ರಷ್ಟು ಅಂದರೆ, 62 ಲಕ್ಷ ಷೇರುಗಳನ್ನು ಮತ್ತು ಕುಮಾರಿ ಶಿಬುಲಾಲ್‌ ಅವರು ತಮ್ಮ ಒಡೆತನದ ಷೇರುಗಳಲ್ಲಿ ಶೇ9.6ರಷ್ಟು ಅಂದರೆ, 24 ಲಕ್ಷ ಷೇರುಗಳನ್ನು ಮಾರಾಟ ಮಾಡಿದರು ಎಂದು ಡಾಯಿಷ್‌ ಈಕ್ವಿಟಿ ಹೇಳಿತು. ಡಿ.5ರಂದು ಇನ್ಫೊಸಿಸ್ ಮಾರುಕಟ್ಟೆ ಮೌಲ್ಯ 2,37,768 ಕೋಟಿಯಷ್ಟಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ಇನ್ಫೊಸಿಸ್‌ ಷೇರು ಮೌಲ್ಯ ಶೇ 21.4ರಷ್ಟು ಹೆಚ್ಚಿದೆ.

2014: ಚಿಕ್ಕಮಗಳೂರು : ಪ್ರಮುಖ ನಕ್ಸಲ್‌ ಹೋರಾಟಗಾರರಿಬ್ಬರು ಈದಿನ ಶರಣಾಗತರಾಗಿ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಗೊಳ್ಳುವಲ್ಲಿ ಪ್ರಮುಖ ಹೆಜ್ಜೆ ಇಟ್ಟರು. ಸಿರಿಮನೆ ನಾಗರಾಜ್‌ ಹಾಗೂ ನೂರ್‌ ಜುಲ್ಫಿಕರ್‌ ಅವರು ಶರಣಾದ ನಕ್ಸಲ್‌ ನಾಯಕರು. ಸಿರಿಮನೆ ಮತ್ತು ಜುಲ್ಫಿಕರ್‌ ಅವರು ಚಿಕ್ಕಮಗಳೂರು ಜಿಲ್ಲಾಧಿಕಾರಿ ಶೇಖರಪ್ಪ ಅವರೆದುರು ಶರಣಾಗತರಾದರು. ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್‌ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿರುವ ದೊರೆಸ್ವಾಮಿ ಅವರು ಈ ಕ್ಷಣಕ್ಕೆ ಸಾಕ್ಷಿಯಾಗಿದ್ದರು.

2014: ಜಿನೀವಾ: 2014 ಮಕ್ಕಳ ಪಾಲಿಗೆ ಕರಾಳ ವರ್ಷ ಎಂದು ಯುನಿಸೆಫ್ ಕಾರ್ಯ ನಿರ್ವಾಹಕ ನಿರ್ದೇಶಕ ಆಂಥೋನಿ ಲೆಕ್ ತಿಳಿಸಿದರು. ಮಧ್ಯ ಆಫ್ರಿಕಾ ದೇಶಗಳು, ಇರಾಕ್, ಸಿರಿಯಾ, ದಕ್ಷಿಣ ಸುಡಾನ್, ಉಕ್ರೇನ್ ಮತ್ತು ಪ್ಯಾಲಿಸ್ತೀನ್
ಪ್ರಾಂತ್ಯದಲ್ಲಿ ನಡೆಯುತ್ತಿರುವ ಘರ್ಷಣಿಯಿಂದಾಗಿ ಸುಮಾರು 1.5 ಕೋಟಿ ಮಕ್ಕಳು ಸಮಸ್ಯೆಗೆ ತುತ್ತಾಗಿದ್ದಾರೆ. ಅಫ್ಘಾನಿಸ್ತಾನ, ಕಾಂಗೋ, ನೈಜೀರಿಯಾ,ಲ ಪಾಕಿಸ್ತಾನ, ಸೊಮಾಲಿಯಾ, ಸುಡಾನ್, ಯೆಮನ್ ಸೇರಿದಂತೆ ಪ್ರಪಂಚದಾದ್ಯಂತ ಸಶಸ್ತ್ರ ಘರ್ಷಣೆ ನಡೆಯುತ್ತಿರುವ ದೇಶಗಳಲ್ಲಿ ಸುಮಾರು 23 ಕೋಟಿ ಮಕ್ಕಳಿದ್ದಾರೆ. ಶಾಲೆಯಲ್ಲಿ ಪಾಠ ಕಲಿಯುತ್ತಿರುವಾಗ, ನಿದ್ದೆ ಮಾಡುತ್ತಿರುವಾಗ ಮಕ್ಕಳ ಮೇಲೆ ಹಲ್ಲೆಗಳಾಗಿವೆ. ಮಕ್ಕಳನ್ನು ಅನಾಥರನ್ನಾಗಿ ಮಾಡಲಾಗಿದೆ, ಅಪಹರಣ, ಕಿರುಕುಳ, ಬಾಲ ಕಾರ್ವಿುಕರಾಗಿ ಸೇರ್ಪಡೆ, ರೇಪ್ ಪ್ರಕರಣ ಮತ್ತು ಗುಲಾಮಗಿರಿಯಂತಹ ಕೃತ್ಯಗಳಲ್ಲಿ ಮಕ್ಕಳನ್ನು ಉಪಯೋಗಿಕೊಳ್ಳಲಾಗಿದೆ. ಮಧ್ಯ ಆಫ್ರಿಕಾ ರಾಷ್ಟ್ರಗಳಲ್ಲಿ 23 ಲಕ್ಷ ಮಕ್ಕಳು ಸಮಸ್ಯೆಗೆ ತುತ್ತಾಗಿದ್ದು, 10,000 ಮಕ್ಕಳನ್ನು ಸಶಸ್ತ್ರ ಪಡೆಗಳಿಗೆ ಸೇರಿಸಿಕೊಳ್ಳಲಾಗಿದೆ. ಜತೆಗೆ 2014ರಲ್ಲಿ 430 ಮಕ್ಕಳು ಘರ್ಷಣೆಗೆ ಬಲಿಯಾಗಿದ್ದಾರೆ. ಸಿರಿಯಾದಲ್ಲಿ 73ಲಕ್ಷ ಮಕ್ಕಳು ನಾಗರಿಕ ಯುದ್ಧದಿಂದ ಪ್ರಭಾವಕ್ಕೆ ಒಳಗಾಗಿದ್ದು, ಇರಾಕ್​ನಲ್ಲಿ 27 ಲಕ್ಷ ಮಕ್ಕಳು ತೊಂದರೆಗೆ ಒಳಗಾಗಿದ್ದಾರೆ. ದಕ್ಷಿಣ ಸುಡಾನ್​ನಲ್ಲಿ 7,50,000 ಮಕ್ಕಳನ್ನು ಸ್ಥಳಾಂತರಿಸಲಾಗಿದೆ. ಅವರಲ್ಲಿ 3,20,000 ಮಕ್ಕಳು ಅನಾಥರಾಗಿ ಜೀವನ ಸಾಗಿಸುತ್ತಿದ್ದಾರೆ ಎಂದು ಯುನಿಸೆಫ್ ಹೇಳಿತು.

2014:ರಿಯಾದ್: ಸೌದಿ ಅರೇಬಿಯಾ ದೇಶಾದ್ಯಂತ ನಡೆಸಿದ ದಾಳಿಯಲ್ಲಿ 135 ಉಗ್ರವಾದಿಗಳನ್ನು ಬಂಧಿಸಲಾಗಿದೆ ಎಂದು ಸೌದಿ ಅರೇಬಿಯಾ ಆಂತರಿಕ ಸಚಿವಾಲಯ ತಿಳಿಸಿತು. ಬಂಧಿತ ಉಗ್ರವಾದಿಗಳ ಪೈಕಿ 26 ವಿದೇಶಿಯರೂ ಸೇರಿದ್ದು, ಅವರಲ್ಲಿ ಬಹುತೇಕರು ಸಿರಿಯಾ ದೇಶದವರು. ಉಳಿದಂತೆ ಯೆಮನ್, ಬಹರೇನ್, ಇರಾಕ್, ಈಜಿಪ್ಟ್, ಲೆಬನಾನ್, ಇಥಿಯೋಪಿಯಾ ಮತ್ತು ಆಫ್ಘಾನಿಸ್ತಾನದ ಉಗ್ರರು ಸೇರಿದ್ದಾರೆ. ಇವರೆಲ್ಲರೂ ಐಎಸ್​ಐಎಸ್ ಉಗ್ರರಿಂದ ಪ್ರಚೋದಿತರಾಗಿದ್ದರು ಎಂದು ತಿಳಿಸಲಾಯಿತು. ಐಎಸ್​ಐಎಸ್ ಉಗ್ರರು ಮತ್ತು ಅಲ್ ಖೈದಾ ಸಂಘಟನೆಗಳು ಸಾಮಾಜಿಕ ಜಾಲತಾಣಗಳು ಮೂಲಕ ಸೌದಿ ಅರೇಬಿಯಾ ಯುವಕರನ್ನು ಸೆಳೆಯಲು ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಸರ್ಕಾರ ಎಚ್ಚೆತ್ತಿದ್ದು, ದಾಳಿ ನಡೆಸುವ ಮೂಲಕ ಉಗ್ರಗಾಮಿಗಳನ್ನು ಬಂಧಿಸಿತು.

2008: ಮುಂಬೈ ಭಯೋತ್ಪಾದನೆಯ ಬಿರುಗಾಳಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲೆ ಪರಿಣಾಮ ಬೀರುವುದು ಎಂಬ ಎಲ್ಲ ಊಹೆಗಳು ಸುಳ್ಳಾಗಿ, ಐದು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಮೂರರಲ್ಲಿ (ದೆಹಲಿ, ಮಹಾರಾಷ್ಟ್ರ, ಮಿಜೋರಂ) ಜಯಭೇರಿ ಬಾರಿಸಿದರೆ, ಬಿಜೆಪಿಯು ರಾಜಸ್ಥಾನವನ್ನು ಕಳೆದುಕೊಂಡು ಎರಡು ರಾಜ್ಯಗಳಲ್ಲಷ್ಟೇ ಅಧಿಕಾರದ ಚುಕ್ಕಾಣಿ ಹಿಡಿಯುವ ಹಾದಿಯಲ್ಲಿ ಮುಂದುವರೆಯಿತು. ಮುಂದಿನ ವರ್ಷದ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ 'ಮಿನಿ ಚುನಾವಣೆ'ಯು ಸ್ಪಷ್ಟ ದಿಕ್ಸೂಚಿಯಾಗುವ ಸಾಧ್ಯತೆಗಳಿದ್ದುದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಮೇಲುಗೈ ಸಾಧಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದವು.

2008: ದೇಶದ ವಿವಿಧ ಕಡೆ ಲಷ್ಕರ್- ಇ- ತೊಯ್ಬಾ (ಎಲ್‌ಇಟಿ) ಕಾರ್ಯಕರ್ತರ ವಿರುದ್ಧ ಗುಪ್ತ ಕಾರ್ಯಾಚರಣೆ ಆರಂಭಿಸಿದ ಪಾಕಿಸ್ಥಾನದ ಭದ್ರತಾ ಪಡೆಯು, ಸಂಘಟನೆಯ ನಾಯಕ, ಮುಂಬೈ ದಾಳಿಯ ಸೂತ್ರಧಾರ ಎಂದು ನಂಬಲಾದ ಝಾಕೀರ್ ರೆಹಮಾನ್ ಲಖ್ವಿಯನ್ನು ಬಂಧಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿದವು. ಪಾಕ್ ಭದ್ರತಾ ಪಡೆಯು ದೇಶದ ವಿವಿಧ ಕಡೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಎಲ್‌ಇಟಿ ವಿರುದ್ಧ ಗುಪ್ತ ಕಾರ್ಯಾಚರಣೆ ಆರಂಭಿಸಿದೆ ಎಂದು ಡಾನ್ ಪತ್ರಿಕೆಯೂ ವರದಿ ಮಾಡಿತು.

2008: ಚುಂಬನದ ಮೋಹಕ್ಕೆ ಸಿಲುಕಿದ ಯುವತಿಯೊಬ್ಬಳು ತನ್ನ ಕಿವಿತಮ್ಮಟೆಯನ್ನೇ ಕಳೆದುಕೊಂಡು ಭಾಗಶಃ ಕಿವುಡಿಯಾದ ವಿಲಕ್ಷಣ ಪ್ರಸಂಗ ದಕ್ಷಿಣ ಚೀನಾದ ಗ್ವಾಂಗ್‌ಡಂಗ್ ಪ್ರಾಂತ್ಯದಿಂದ ವರದಿಯಾಯಿತು. ಒಳಗಿವಿ ಮತ್ತು ಬಾಯಿಗೆ ನಳಿಕೆಯೊಂದರ ಸಂಪರ್ಕ ಇರುತ್ತದೆ. ಕಿವಿ ಮತ್ತು ಬಾಯಿಯಲ್ಲಿನ ಒತ್ತಡವನ್ನು ಸರಿಸಮಾನಗೊಳಿಸುವುದು ಈ ನಳಿಕೆಯ ಕೆಲಸ. ದೀರ್ಘ ಚುಂಬನದ ವೇಳೆ ಬಾಯಿಯಲ್ಲಿನ ಒತ್ತಡ ಕಡಿಮೆಯಾದುದರಿಂದ ಕಿವಿತಮಟೆ ಛಿದ್ರಗೊಂಡಿತು ಎಂದು ಜುಹೈ ಸೆಕೆಂಡ್ ಪೀಪಲ್ಸ್ ಹಾಸ್ಪಿಟಲ್ಲಿನ ಡಾ. ಲಿ ಹೇಳಿದರು. 20ರ ಹರೆಯದ ಈ ಯುವತಿಗೆ ಮತ್ತೆ ತನ್ನ ಎಡಗಿವಿಯಲ್ಲಿ ಶಬ್ಧ ಕೇಳಿಸಬೇಕಾದರೆ ಇನ್ನೂ ಎರಡು ತಿಂಗಳು ಕಾಯುವುದು ಅನಿವಾರ್ಯವಾಯಿತು. ಚುಂಬನದಿಂದ ಯಾವುದೇ ಅಪಾಯವೂ ಇಲ್ಲ ಎಂಬುದು ಇದುವರೆಗೆ ತಿಳಿದ ಸಂಗತಿ. ಆದರೆ ಇಲ್ಲೂ ಕೆಲವು ಅಪಾಯ ಇದೆ ಎಂಬುದನ್ನು ಈ ವಿದ್ಯಮಾನ ತೋರಿಸಿಕೊಟ್ಟಿತು.

2008: ಕುಷ್ಠ ರೋಗಿಗಳು ಹಾಗೂ ಕುಷ್ಠ ರೋಗಿಗಳ ಮಕ್ಕಳಿಗಾಗಿ ಮಾಡಿದ ಸಮಾಜ ಸೇವೆಯನ್ನು ಗುರುತಿಸಿ ಗುಲ್ಬರ್ಗ ನಗರದ ಹಣಮಂತ ದೇವನೂರ ಅವರಿಗೆ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಅಧಿಕಾರಿತಾ ಮಂತ್ರಾಲಯ ನವದೆಹಲಿಯಲ್ಲಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿತು. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ವಿಜ್ಞಾನ ಭವನದಲ್ಲಿ ಪ್ರಶಸ್ತಿ ಫಲಕ, ಮೆಡಲ್ ಹಾಗೂ 25 ಸಾವಿರ ನಗದು ಬಹುಮಾನ ನೀಡಿದರು.

2007: ದಶಕದ ನಂತರ ಕೊನೆಗೂ ಮಂಗಳೂರು - ಬೆಂಗಳೂರು ಮಧ್ಯೆ ರೈಲು ಸಂಚಾರ ಆರಂಭಗೊಂಡಿತು. ಮಂಗಳೂರು ರೈಲು ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಮಂಗಳೂರು- ಬೆಂಗಳೂರು ಪ್ರಯಾಣಿಕ ರೈಲು ಆರಂಭಕ್ಕೆ ರೈಲ್ವೇ ಸಚಿವ ಲಾಲೂ ಪ್ರಸಾದ್ ಹಸಿರು ನಿಶಾನೆ ತೋರಿಸಿದರು. ಇದೇ ಸಂದರ್ಭದಲ್ಲಿ ಸುಬ್ರಹ್ಮಣ್ಯ- ಸಕಲೇಶಪುರ ನಡುವಣ ಬ್ರಾಡ್ ಗೇಜ್ ಹಳಿಯನ್ನೂ ಅವರು ಉದ್ಘಾಟಿಸಿದರು. ಸಚಿವ ಲಾಲು ಪ್ರಸಾದ್ ರಿಮೋಟ್ ಮೂಲಕ ಉದ್ಘಾಟನಾ ಫಲಕದ ಪರದೆ ಸರಿಸಿ, ಸಿಗ್ನಲ್ಲಿನ ಗೇರ್ ಅದುಮಿ, ಮಂಗಳೂರು-ಬೆಂಗಳೂರು ರೈಲಿಗೆ ಹಸಿರು ನಿಶಾನೆ ತೋರಿಸುತ್ತಿದ್ದಂತೆಯೇ 6517 ನಂಬರಿನ ರೈಲು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಮುಂದಡಿಯಿಟ್ಟಿತು. ರಾಷ್ಟ್ರಗೀತೆಯ ನಾದಕ್ಕನುಗುಣವಾಗಿ ಹಾರ್ನ್ ಹಾಕುತ್ತಾ ಚುಕು ಪುಕು ಸದ್ದು ಮಾಡುತ್ತಾ ಹೊರಟ ರೈಲಿನ ದೃಶ್ಯವನ್ನು ವೇದಿಕೆ ಪಕ್ಕದಲ್ಲಿ ನಿರ್ಮಿಸಿದ್ದ ಬೃಹತ್ ಡಿಜಿಟಲ್ ಪರದೆಯಲ್ಲಿ ಕಂಡ ಕರಾವಳಿಯ ಜನೆ ಪುಳಕಗೊಂಡರು. ಸಕಲೇಶಪುರ- ಸುಬ್ರಹ್ಮಣ್ಯದ ನಡುವೆ ಸುಮಾರು 128 ಸೇತುವೆ ಹಾಗೂ 58 ಸುರಂಗ ಮಾರ್ಗಗಳನ್ನು ಹೊಂದಿರುವ ಘಾಟ್ ಮಾರ್ಗದಲ್ಲಿ ಕರಾವಳಿ ಜನತೆಯ ದಶಕಗಳ ಕನಸು, ರಾಜಧಾನಿಯ ಸಂಪರ್ಕ, ನಿಸರ್ಗ ಸಿರಿ ದರ್ಶನದ ಬ್ರಾಡ್ ಗೇಜ್ ಮಂಗಳೂರು- ಬೆಂಗಳೂರು ಪ್ರಯಾಣಿಕ ರೈಲನ್ನು ಅಪ್ಪಟ ಕನ್ನಡಿಗ ಮೈಸೂರಿನ ರಾಮಸ್ವಾಮಿ ಮೊದಲ ಬಾರಿ ಚಲಾಯಿಸಿದರು. ರೈಲ್ವೆ ವಿಭಾಗದಲ್ಲಿ ಒಟ್ಟು 33 ವರ್ಷಗಳ ರೈಲು ಚಾಲನೆ ಅನುಭವ ಇರುವ ಕ್ಲಾಸ್-1 ಚಾಲಕರಾದ ರಾಮಸ್ವಾಮಿ, ಮಂಗಳೂರು- ಬೆಂಗಳೂರು ಮಧ್ಯೆ ಮೀಟರ್ ಗೇಜ್ ರೈಲನ್ನೂ ಚಲಾಯಿಸಿದ್ದರು. ದೇಶದ ಇತರ ಕಡೆಗಳಲ್ಲಿ 1843ರಲ್ಲೇ ರೈಲು ಸಂಚಾರ ಆರಂಭಗೊಂಡರೂ ಮಂಗಳೂರಿಗೆ ಮೊದಲ ರೈಲು ಬಂದದ್ದೇ 1907ರಲ್ಲಿ. ಮಂಗಳೂರಿಗೆ ಸಮೀಪದ ಉಳ್ಳಾಲದಲ್ಲಿ ರೈಲ್ವೆ ಸೇತುವೆ ನಿರ್ಮಾಣಗೊಂಡ ಬಳಿಕ 1907ರಲ್ಲಿ ಮೊತ್ತಮೊದಲು ಕೇರಳ ಕಡೆಯಿಂದ ಮಂಗಳೂರಿಗೆ ರೈಲು ಬಂದಿತ್ತು. ಇದಾದ 100 ವರ್ಷಗಳ ಬಳಿಕ ಮಂಗಳೂರು-ಬೆಂಗಳೂರು ಮಧ್ಯೆ ಬ್ರಾಡ್ ಗೇಜ್ ಮೇಲೆ ರೈಲು ಸಂಚಾರ ಈದಿನ ಆರಂಭಗೊಂಡಿತು. ಕೊಂಕಣ ರೈಲು ಬಳಿಕ ಕರಾವಳಿಗೆ ಇದು ಮಹತ್ತರ ಕೊಡುಗೆ. ಶಿರಾಡಿ ಘಾಟ್ ರಸ್ತೆ ಹದಗೆಟ್ಟು ಸಂಪರ್ಕ ಸ್ಥಗಿತಗೊಂಡಾಗ ಇಲ್ಲಿ ರೈಲು ಸಂಚಾರದ ಕೂಗು ಬಲವಾಯಿತು. 2006ರ ಮೇ ತಿಂಗಳಲ್ಲೇ ಗೂಡ್ಸ್ ರೈಲು ಓಡಾಟ ಪ್ರಾರಂಭ ಆದರೂ ಪ್ರಯಾಣಿಕ ರೈಲು ಮಾತ್ರ ಓಡಲಿಲ್ಲ. ಕಬ್ಬಿಣದ ಅದಿರು ಸಾಗಾಟ ಮೂಲಕ ಭಾರಿ ಲಾಭ ತಂದುಕೊಂಡುವ ಮಾರ್ಗವಾಗಿ ಇದು ಪರಿವರ್ತಿತವಾಯಿತಾದರೂ ಪ್ರಯಾಣಿಕ ರೈಲು ಸಂಚಾರಕ್ಕೆ ಮುಹೂರ್ತ ಕೂಡಿ ಬಂದಿರಲೇ ಇಲ್ಲ. ಕೊನೆಗೆ ಜನರ ಚಳವಳಿಯ ಬಳಿಕ ಈದಿನ ಬ್ರಾಡ್ ಗೇಜ್ ಆಗಿ ಪರಿವರ್ತನೆಗೊಂಡ ಮಾರ್ಗದಲ್ಲಿ ರೈಲು ಸಂಚಾರ ಪುನರಾರಂಭಗೊಂಡಿತು. ದೀರ್ಘ ಹೋರಾಟದ ಬಳಿಕ ಮೀಟರ್ ಗೇಜ್ ಮಾರ್ಗದಲ್ಲಿ ಕೆಲವು ವರ್ಷಗಳ ಹಿಂದೆ ಆರಂಭವಾಗಿದ್ದ ರೈಲುಸಂಚಾರ ಬ್ರಾಡ್ ಗೇಜ್ ಮಾರ್ಗ ಪರಿವರ್ತನೆ ಸಲುವಾಗಿ ನಿಂತು ಹೋಗಿತ್ತು. ಮಂಗಳೂರು- ಬೆಂಗಳೂರು ಬ್ರಾಡ್ ಗೇಜ್ ರೈಲು ಸಂಚಾರ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಮುಖ್ಯ ಅತಿಥಿಯಾಗಿದ್ದರು.

2007: ಅನಿಲ ಸ್ಫೋಟದಿಂದ ಅಪಾಯದಲ್ಲಿ ಸಿಲುಕಿಕೊಂಡಿದ್ದ ಸಹೋದ್ಯೋಗಿಗಳನ್ನು ರಕ್ಷಿಸಲು ಗಣಿಯೊಳಗೆ ಧಾವಿಸಿದವರೂ ಸೇರಿದಂತೆ ಸುಮಾರು 104 ಮಂದಿ ಕಲ್ಲಿದ್ದಲು ಗಣಿ ಕಾರ್ಮಿಕರು ಅಸು ನೀಗಿದ ದಾರುಣ ಘಟನೆ ಚೀನಾದ ಶಾಂಗ್ ಶಿ ಪ್ರಾಂತ್ಯದ ಹಾಂಗ್ ಟಾಗ್ ಕೌಂಟಿಯಲ್ಲಿ ಸಂಭವಿಸಿತು.

2007: ದಕ್ಷಿಣ ಫೆಸಿಫಿಕ್ ನ ಫಿಜಿಯಲ್ಲಿ ತೀವ್ರವಾದ ಬಿರುಗಾಳಿಯಿಂದ ಕೂಡಿದ ಸಿಕೋಬಿಯಾ ಚಂಡಮಾರುತ ಬೀಸಿದ ಪರಿಣಾಮವಾಗಿ ಎರಡು ಸಣ್ಣಹಳ್ಳಿಗಳು ನೆಲಸಮವಾದವು. ನಿರಾಶ್ರಿತರಾದ 69 ಮಂದಿ ಗುಹೆಗಳಲ್ಲಿ ಆಶ್ರಯ ಪಡೆದರು.

2006: ಕೊಯಮತ್ತೂರಿನ ವಕೀಲ ಎಂ. ರಾಜಾ ಷರೀಫ್ ಅವರು 7 ಅಡಿ ಎತ್ತರ, 4 ಅಡಿ ಅಗಲ ಮತ್ತು 250 ಕಿಲೋ ಗ್ರಾಂ ತೂಕದ ಬೃಹತ್ ಕುರಾನ್ ಗ್ರಂಥವನ್ನು ತಮಿಳುನಾಡಿನ ಚೆನ್ನೈಯಲ್ಲಿ ಪ್ರದರ್ಶಿಸಿದರು. ಅರಬ್ಬೀ ಭಾಷೆಯಲ್ಲಿ ಬರೆಯಲಾಗಿರುವ ಈ ಗ್ರಂಥ 610 ಪುಟಗಳನ್ನು ಹೊಂದಿದೆ. ಷರೀಫ್ ಕುಟುಂಬದ ಎಲ್ಲ ಸದಸ್ಯರೂ ಈ ಗ್ರಂಥ ರಚನೆಗೆ ಒಂದು ವರ್ಷಕಾಲ ಶ್ರಮಿಸಿದ್ದಾರೆ. ಷರೀಫ್ ಅವರು ಈ ಹಿಂದೆ ತಾಳೆಗರಿಯಲ್ಲಿ ತಮಿಳು ಭಾಷೆಯ `ತಿರುಕ್ಕುರಳ್' ಗ್ರಂಥದ 1330 ಪದ್ಯಗಳನ್ನು ಬರೆದು ದಾಖಲೆ ನಿರ್ಮಿಸಿದ್ದರು. 2003ರಲ್ಲಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕೊಯಮತ್ತೂರಿಗೆ ಭೇಟಿ ನೀಡಿದ್ದಾಗ ಷರೀಫ್ ಅವರು ಈ ತಾಳೆಗರಿ ಹಾಳೆಯನ್ನು ರಾಷ್ಟ್ರಪತಿಗಳಿಗೆ ಅರ್ಪಿಸಿದ್ದರು.

2006: ಪ್ರತಿಕೂಲ ಹವಾಮಾನದಿಂದಾಗಿ ಫ್ಲೋರಿಡಾದ ಕೇಪ್ ಕೆನವರಾಲಿನಲ್ಲಿ ನಡೆಯಬೇಕಾಗಿದ್ದ ಅಮೆರಿಕದ ಗಗನನೌಕೆ `ಡಿಸ್ಕವರಿ'ಯ ಉಡಾವಣೆಯನ್ನು ಮುಂದೂಡಲಾಯಿತು. ರಾತ್ರಿ ನಡೆಯಬೇಕಾಗಿದ್ದ ಉಡಾವಣೆಗೆ ಕೆಲವೇ ನಿಮಿಷಗಳ ಮೊದಲು ಹವಾಮಾನದಲ್ಲಿ ವೈಪರೀತ್ಯ ಕಂಡುಬಂದದ್ದರಿಂದ ನಾಸಾ ವಿಜ್ಞಾನಿಗಳು ಇದನ್ನು ಮುಂದೂಡುವ ನಿರ್ಧಾರ ಕೈಗೊಂಡರು. ಭಾರತದ ಸುನಿತಾ ವಿಲಿಯಮ್ಸ್ ಸೇರಿದಂತೆ ಏಳು ಮಂದಿ ಗಗನಯಾತ್ರಿಗಳು ಡಿಸ್ಕವರಿ ಮೂಲಕ ಗಗನಕ್ಕೆ ನೆಗೆದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ದುರಸ್ತಿ ಮಾಡಬೇಕಾಗಿತ್ತು. ಮೂಲ ಯೋಜನೆಯಂತೆ ಅಮೆರಿಕದ ಕಾಲಮಾನ ರಾತ್ರಿ 9.35 ನಿಮಿಷಕ್ಕೆ ಡಿಸ್ಕವರಿ ಗಗನಕ್ಕೆ ಚಿಮ್ಮಲು ಸಿದ್ಧವಾಗಿತ್ತು. ಗಗನಯಾತ್ರಿಗಳೂ ಆಸನದಲ್ಲಿ ಕುಳಿತು ಕ್ಷಣಗಣನೆ ಆರಂಭಿಸಿದ್ದರು. ಆದರೆ 8.05 ಗಂಟೆ ಹೊತ್ತಿಗೆ ದಟ್ಟ ಮೋಡಗಳು ಕಾಣಿಸಿಕೊಂಡವು. 2002ರ ನವೆಂಬರ್ 23ರಂದು ಉಡಾವಣೆಗೊಂಡ ಎಂಡೀವರ್ ಗಗನನೌಕೆಯ ಬಳಿಕ ರಾತ್ರಿವೇಳೆ ಉಡಾವಣೆಗೆ ಸಜ್ಜಾದ ಮೊದಲ ಗಗನನೌಕೆ ಡಿಸ್ಕವರಿ. `ಕೊಲಂಬಿಯ' ದುರಂತದ ಬಳಿಕ ಮೂರು ನೌಕೆಗಳನ್ನು ಹಗಲು ಹೊತ್ತಿನಲ್ಲೇ ಉಡಾವಣೆ ಮಾಡಲಾಗಿತ್ತು.

2006: ನೇಪಾಳದ ದೊರೆ ಜ್ಞಾನೇಂದ್ರ ಹಾಗೂ ರಾಜಕುಮಾರ ಪಾರಸ್ ಕಠ್ಮಂಡು ವಿಮಾನ ನಿಲ್ದಾಣದಲ್ಲಿ 53,739 ರೂ. ತೆರಿಗೆ ಪಾವತಿಸಿ ಅಮೆರಿಕದಿಂದ ತಮ್ಮ ವಿಳಾಸಕ್ಕೆ ಬಂದಿದ್ದ ಪಾರ್ಸೆಲ್ ಪಡೆದುಕೊಂಡರು. ಏಕನಾಯಕ ಚಕ್ರಾಧಿಪತ್ಯವಿರುವ ಈ ಹಿಮಾಲಯ ರಾಷ್ಟ್ರದಲ್ಲಿ 238 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ `ದೊರೆ ತೆರಿಗೆ ಪಾವತಿ ಮಾಡಿದ' ಈ ಪ್ರಕರಣ ನಡೆಯಿತು. ದೊರೆ ಜ್ಞಾನೇಂದ್ರ ಅವರ ವಿಳಾಸಕ್ಕೆ ಬಂದ ಪಾರ್ಸೆಲ್ ಪೆಟ್ಟಿಗೆಯಲ್ಲಿ ಇದ್ದದ್ದು 50 ಟಾರ್ಚ್ ಲೈಟುಗಳು.

2006: `ಹೆನ್ರಿ ಜೆ. ಹೈಡ್ ಅಮೆರಿಕ- ಭಾರತ ಶಾಂತಿಯು ಪರಮಾಣು ಶಕ್ತಿ ಸಹಕಾರ ಕಾಯ್ದೆ 2006' ಎಂದು ಕರೆಯಲಾಗುವ ಭಾರತ- ಅಮೆರಿಕ ನಡುವಣ ನಾಗರಿಕ ಬಳಕೆಯ ಪರಮಾಣು ಒಪ್ಪಂದಕ್ಕೆ ಅವಕಾಶ ಒದಗಿಸುವ 74 ಪುಟಗಳ ಮಸೂದೆಗೆ ಅಮೆರಿಕದ ಕಾಂಗ್ರೆಸ್ ಈ ರಾತ್ರಿ ಒಪ್ಪಿಗೆ ನೀಡಿತು. ಭಾರತ ವ್ಯಕ್ತಪಡಿಸಿದ ಆಕ್ಷೇಪಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅಮೆರಿಕದ ಸೆನೆಟ್ ಮತ್ತು ಕಾಂಗ್ರೆಸ್ ಸದಸ್ಯರ ಸಮಿತಿ ಮಸೂದೆಯಲ್ಲಿ ಬಳಸಿದ ಭಾಷೆಗೆ ತಿದ್ದುಪಡಿಗಳನ್ನು ತಂದಿದೆ. ಒಪ್ಪಂದದಿಂದಾಗಿ ಕಳೆದ 32 ವರ್ಷಗಳಲ್ಲಿ ಮೊದಲ ಬಾರಿಗೆ ಪರಮಾಣು ತಂತ್ರಜ್ಞಾನ ನೆರವನ್ನು ಅಮೆರಿಕ ಭಾರತಕ್ಕೆ ನೀಡಲಿದ್ದು, ಭಾರತ ತನ್ನ ಬಹುತೇಕ ಪರಮಾಣು ಸ್ಥಾವರಗಳನ್ನು ಮುಕ್ತ ವೀಕ್ಷಣೆಗೆ ತೆರೆದಿಡಲಿದೆ.

2005: ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲು ನೀಡುವ ಸಂಬಂಧ ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಲು ಭಾರತದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತು. ಅನುದಾನರಹಿತ ಕಾಲೇಜುಗಳಲ್ಲಿ ಮೀಸಲು ನೀಡಬೇಕಾದ ಅಗತ್ಯ ಇಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ಪ್ರತಿಯಾಗಿ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಮಸೂದೆಯನ್ನು ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಅನ್ವಯಿಸದಿರಲು ನಿರ್ಧರಿಸಿತು.

2005: ಲೈಂಗಿಕ ಕಿರುಕುಳ ಸಂಬಂಧ ಮೇಲಧಿಕಾರಿಗಳ ವಿರುದ್ಧ ದೂರು ನೀಡಿದ್ದ ಭಾರತೀಯ ವಾಯುಪಡೆಯ ಫ್ಲೈಯಿಂಗ್ ಅಧಿಕಾರಿ ಅಂಜಲಿ ಗುಪ್ತಾ ಅವರ ವಿಚಾರಣೆ ನಡೆಸಿದ ಮಿಲಿಟರಿ ನ್ಯಾಯಾಲಯ ಆಕೆಯನ್ನು ತಪ್ಪಿತಸ್ಥೆ ಎಂದು ತೀರ್ಮಾನಿಸಿ ಅವರನ್ನು ಸೇವೆಯಿಂದ ವಜಾಗೊಳಿಸಲು ಆದೇಶಿಸಿತು.

2005: ಹಿರಿಯ ಪತ್ರಕರ್ತ, ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ನಿವೃತ್ತ ಮುಖ್ಯ ವರದಿಗಾರ ಎಸ್. ಜಿ. ಮೈಸೂರುಮಠ ಅವರು ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು. ವಿಶ್ವ ಕರ್ನಾಟಕ ಮೂಲಕ ಪತ್ರಿಕಾ ರಂಗ ಪ್ರವೇಶಿಸಿದ ಅವರು ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ 25 ವರ್ಷ ಸೇವೆ ಸಲ್ಲಿಸಿದ್ದೂ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ನಾಲ್ಕು ದಶಕಗಳ ಸೇವೆ ಸಲ್ಲಿಸಿದ್ದರು.

2001: ಭಾರತದ ಖ್ಯಾತ ಕ್ಯಾಮರಾಮ್ಯಾನ್ ಸುಬ್ರತೊ ಮಿತ್ರ (1930-2001) ನಿಧನರಾದರು. ಸತ್ಯಜಿತ್ ರೇ ಅವರ ಎರಡನೇ ಚಿತ್ರ `ಅಪರಾಜಿತೊ'ದಲ್ಲಿ ಅವರು `ಬೌನ್ಸ್ ಲೈಟ್ನಿಂಗ್' ನ್ನು ಅಳವಡಿಸಿದ್ದರು. ರೇ ಅವರ ಖ್ಯಾತ ಚಿತ್ರಗಳಾದ `ಪಥೇರ್ ಪಾಂಚಾಲಿ', `ಅಪುರ್ ಸಂಸಾರ್' ಇತ್ಯಾದಿ ಚಿತ್ರಗಳ ಚಿತ್ರೀಕರಣವನ್ನೂ ಅವರು ಮಾಡಿದ್ದರು. 1992 ರಲ್ಲಿ ಸಿನಿಮಾಟೋಗ್ರಪಿಯಲ್ಲಿ ಜೀವಮಾನದ ಸಾಧನೆಗಾಗಿ ನೀಡಲಾಗುವ `ಈಸ್ಟ್ಮನ್ ಕೊಡಕ್' ಪ್ರಶಸ್ತಿಯನ್ನು ಗೆದ್ದ ಮೊತ್ತ ಮೊದಲ ಭಾರತೀಯನೆಂಬ ಹೆಗ್ಗಳಕೆಗೆ ಸುಬ್ರತೊ ಮಿತ್ರ ಭಾಜನರಾಗಿದ್ದರು.

1991: ರಷ್ಯ, ಉಕ್ರೇನ್ ಮತ್ತು ಬೆಲಾರಸ್ ರಾಷ್ಟ್ರಗಳು ಬೆಲಾರಸ್ನಲ್ಲಿ ಒಪ್ಪಂದವೊಂದಕ್ಕೆ ಸಹಿ ಹಾಕಿ ಕಮ್ಯೂನಿಸ್ಟ್ ಯುಗದ ಒಕ್ಕೂಟವನ್ನು ವಿಸರ್ಜಿಸಿದವು ಮತ್ತು ಸ್ವತಂತ್ರ ರಾಷ್ಟ್ರಗಳ ಕಾಮನ್ವೆಲ್ತನ್ನು ಸ್ಥಾಪಿಸಿದವು.

1980: ರಾಕ್ ಸಂಗೀತಗಾರ ಜಾನ್ ಲೆನ್ನನ್ ಅವರನ್ನು ನ್ಯೂಯಾರ್ಕ್ ನಗರದ ಹೊರವಲಯದ ಅಪಾರ್ಟ್ಮೆಂಟ್ ಕಟ್ಟಡವೊಂದರಲ್ಲಿ ಗುಂಡಿಟ್ಟು ಕೊಲೆಗೈಯಲಾಯಿತು. ಹುಚ್ಚೆದ್ದ ಅಭಿಮಾನಿ ಮಾರ್ಕ್ ಚಾಪ್ ಮ್ಯಾನ್ ಎಂಬ ವ್ಯಕ್ತಿ ಈ ಕೃತ್ಯ ಎಸಗಿದ.

1978: ಇಸ್ರೇಲಿನ ಪ್ರಧಾನಿ ಗೋಲ್ಡಾ ಮೀರ್ ಅವರು ಜೆರುಸಲೇಮಿನಲ್ಲಿ ತಮ್ಮ 80ನೇ ವಯಸ್ಸಿನಲ್ಲಿ ನಿಧನರಾದರು. 1969ರಿಂದ

1974ರವರೆಗೆ ಅವರು ಇಸ್ರೇಲ್ ಪ್ರಧಾನಿಯಾಗಿ ಆಡಳಿತ ನಡೆಸಿದ್ದರು.

1941: ಎರಡನೇ ಜಾಗತಿಕ ಯುದ್ಧ ಕಾಲದಲ್ಲಿ ಈದಿನ ಗ್ರೇಟ್ ಬ್ರಿಟನ್, ಆಸ್ಟ್ರೇಲಿಯಾ ಮತ್ತು ಅಮೆರಿಕಾ ಒಟ್ಟಾಗಿ ಜಪಾನ್ ವಿರುದ್ಧ ಸಮರ ಸಾರಿದವು.

1937: ಭಾರತದ ಮೊತ್ತ ಮೊದಲ ಡಬಲ್ ಡೆಕರ್ ಬಸ್ಸು ಬಾಂಬೆಯಲ್ಲಿ (ಈಗಿನ ಮುಂಬೈ) ಸೇವೆಗೆ ಇಳಿಯಿತು. ಈ ಬಸ್ಸಿನಲ್ಲಿ 58 ಮಂದಿ ಪ್ರಯಾಣಿಸಬಹುದಾಗಿತ್ತು.

1935: ಬಾಲಿವುಡ್ಡಿನ ಖ್ಯಾತ ನಟ ಹಾಗೂ ಚಿತ್ರ ನಿರ್ಮಾಪಕ ಧರ್ಮೇಂದ್ರ ಡಿಯೋಲ್ ಜನಿಸಿದರು.

1900: ಭಾರತದ ಖ್ಯಾತ ನೃತ್ಯಪಟು ಹಾಗೂ ನೃತ್ಯ ನಿರ್ದೇಶಕ ಉದಯ ಶಂಕರ್ (1900-1977) ಹುಟ್ಟಿದ ದಿನ. ಇವರು ಸಾಂಪ್ರದಾಯಿಕ ಹಿಂದೂ ನೃತ್ಯಗಳಿಗೆ ಪಾಶ್ಚಾತ್ಯ ತಂತ್ರಗಳನ್ನು ಅಳವಡಿಸಿ ಭಾರತದ ಪುರಾತನ ಕಲಾ ಪ್ರಕಾರವನ್ನು ಭಾರತ ಹಾಗೂ ಹೊರ ದೇಶಗಳಲ್ಲಿ ಜನಪ್ರಿಯಗೊಳಿಸಿದರು.

1875: ಭಾರತೀಯ ನ್ಯಾಯವಾದಿ ಹಾಗೂ ಮುತ್ಸದ್ದಿ ಸರ್ ತೇಗ್ ಬಹಾದುರ್ ಸಪ್ರು (1875-1949) ಹುಟ್ಟಿದ ದಿನ.

No comments:

Advertisement