Thursday, January 14, 2010

ಇಂದಿನ ಇತಿಹಾಸ History Today ಡಿಸೆಂಬರ್ 13

ಇಂದಿನ ಇತಿಹಾಸ

ಡಿಸೆಂಬರ್ 13

2008: ಕಾಂಗ್ರೆಸ್ಸಿನ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಅವರು ರಾಜಸ್ಥಾನದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಎಸ್.ಕೆ.ಸಿಂಗ್ ಅವರು ಗೆಹ್ಲೋಟ್ ಅವರಿಗೆ ಪ್ರಮಾಣವಚನ ಬೋಧಿಸಿದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ, ಮಾಜಿ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್ ಮತ್ತು ಕಾಂಗ್ರೆಸ್ ಸದಸ್ಯ ಎಂಕೆ.ಮಾಥುರ್ ಮತ್ತಿತರ ನಾಯಕರು ಹಾಜರಿದ್ದರು.

2014: ಬೆಂಗಳೂರು: 'ಶಮಿ ವಿಟ್ನೆಸ್' ಹೆಸರಿನಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿ ಸಂಘಟನೆಯ ಟ್ವಿಟ್ಟರ್ ಖಾತೆಯನ್ನು ನಿರ್ವಹಿಸುತ್ತಿದ್ದ ಮೆಹ್ದಿ ಮಸ್ರೂರ್ ಬಿಸ್ವಾಸ್ನನ್ನು ಬೆಂಗಳೂರಿನ ಜಾಲಹಳ್ಳಿಯಲ್ಲಿ ಈದಿನ ನಸುಕಿನ ವೇಳೆಯಲ್ಲಿ ಬಂಧಿಸಲಾಯಿತು. ಸಿಸಿಬಿ ಕೇಂದ್ರದ ಗುಪ್ತಚರ ಅಧಿಕಾರಿಗಳು 'ಮೆಹ್ದಿಯನ್ನು ಹಿಂದಿನ ದಿನ ತಡರಾತ್ರಿಯಲ್ಲಿ ಬಂಧಿಸಿರುವುದಾಗಿ
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪಚಾವೋ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈತ ಮೂಲತಃ ಪಶ್ಚಿಮ ಬಂಗಾಳದ ಯುವಕ, ಎಂಜಿನಿಯರಿಂಗ್ ಪದವೀಧರ. ಬೆಂಗಳೂರಿನಿಂದಲೇ ಈತ ಐಎಸ್ ಟ್ವಟ್ಟರ್ ಖಾತೆ ನಿಭಾಯಿಸುತ್ತಿದ್ದ. ಐಎಸ್ನ ಕಾರ್ಯ ನಿರ್ವಾಹಕನಾಗಿಯೂ ಈತ ಕಾರ್ಯ ಎಸಗುತ್ತಿದ್ದ. ಭಾರತದ ಐಟಿ ರಾಜಧಾನಿಯಿಂದಲೇ ಐಎಸ್ ಟ್ವಿಟ್ಟರ್ ಖಾತೆಯನ್ನು ನಿರ್ವಹಿಸಲಾಗುತ್ತಿರುವ ಬಗ್ಗೆ ಬ್ರಿಟನ್ನಿನ ಚಾನೆಲ್ 4 ನ್ಯೂಸ್ ಹಿಂದಿನ ದಿನವಷ್ಟೇ ವರದಿ ಪ್ರಕಟಿಸಿತ್ತು. ಈ ಟ್ವಿಟ್ಟರ್ ಖಾತೆಯನ್ನು ವಿದೇಶೀ ಜೆಹಾದಿಗಳು ವಿಶೇಷವಾಗಿ ಇಂಗ್ಲೆಂಡಿನಲ್ಲಿ ಬಳಸುತ್ತಿದ್ದರು. ಬ್ರಿಟಿಷ್ ಸುದ್ದಿ ವಾಹಿನಿಯು ಮೆಹ್ದಿಯ ಪ್ರಾಣಕ್ಕೆ ಅಪಾಯವಿದೆ ಎಂದು ಹೇಳಿ ಆತನ ಪೂರ್ಣ ಹೆಸರನ್ನು ಬಹಿರಂಗ ಪಡಿಸಿರಲಿಲ್ಲ. ಬ್ರಿಟನ್ ಚಾನೆಲ್ನಲ್ಲಿ ವರದಿ ಬರುತ್ತಿದ್ದಂತೆಯೇ 'ಮೆಹ್ದಿ' ನಿಭಾಯಿಸುತ್ತಿದ್ದ ಟ್ವಿಟ್ಟರ್ ಖಾತೆ ಸ್ಥಗಿತಗೊಂಡಿತ್ತು. ''ಶಮಿ ವಿಟ್ನೆಸ್' ಹೆಸರಿನಲ್ಲಿ ಆತ ಸಹಸ್ರಾರು ಟ್ವಿಟ್ಟರ್ ಸಂದೇಶಗಳನ್ನು ಕಳುಹಿಸಿದ್ದಲ್ಲದೆ, ಐಎಸ್ ಮಾಡಿದ್ದ ಶಿರಚ್ಛೇದನದ ವಿಡಿಯೋಗಳನ್ನೂ ಟ್ವಿಟ್ಟರಿನಲ್ಲಿ ಹಾಕಿದ್ದ. ಈತನ ಬಂಧನದ ಸುದ್ದಿ ಬರುತ್ತಿದ್ದಂತೆಯೇ ಪಶ್ಚಿಮ ಬಂಗಾಳದ ಕೋಲ್ಕತದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಈತನ ತಂದೆ ತನ್ನ ಮಗ ಅಂತಹವನಲ್ಲ ಎಂದು ಹೇಳಿ ಆತನ ಮೇಲಿನ ಆಪಾದನೆಗಳನ್ನು ನಿರಾಕರಿಸಿದರು.

2014: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ 14 ಡಿಸೆಂಬರ 2014ರ ತಮ್ಮ ರೇಡಿಯೋ ಭಾಷಣದಲ್ಲಿ ಮಾದಕ ದ್ರವ್ಯಗಳ ಹಾವಳಿ ಬಗೆಗಿನ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ. 'ಭಾನುವಾರದ ಮನ್ ಕೀ ಬಾತ್ ರೇಡಿಯೋ ಭಾಷಣ ಕಾರ್ಯಕ್ರಮದಲ್ಲಿ ವಿಷಯಕ್ಕೆ ಸಂಬಂಧಿಸಿದ ಕಣ್ತೆರೆಸುವ ವಿಚಾರಗಳನ್ನು ಹೇಳಲು ಕಾದಿದ್ದೇನೆ' ಎಂದು ಈದಿನ ಟ್ವೀಟ್ ಮಾಡಿದ ಪ್ರಧಾನಿ, ತಮ್ಮ ವಿಚಾರಗಳನ್ನು ಹಂಚಿಕೊಳ್ಳುತ್ತಿರುವುದಕ್ಕಾಗಿ ಜನತೆಗೆ ಧನ್ಯವಾದ ಹೇಳಿದರು. 'ಹಿಂದಿನ ಕಾರ್ಯಕ್ರಮದಲ್ಲಿ ತಿಳಿಸಿದ್ದಂತೆಯೇ ನಾನು ಈ ಬಾರಿ ಮಾದಕದ್ರವ್ಯ ಹಾವಳಿ ಬಗ್ಗೆ ಮಾತನಾಡಲಿದ್ದೇನೆ' ಎಂದು ಮೋದಿ ಹೇಳಿದರು. 'ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಮಂದಿ ಯೋಚನೆಗಳನ್ನು, ಟೀಕೆಗಳನ್ನು ಮತ್ತು ಒಳನೋಟಗಳನ್ನು ಹಂಚಿಕೊಂಡಿದ್ದಾರೆ. ಇವು ಕಣ್ತೆರೆಸುವಂತಹವೂ, ಸಹಾಯವಾಗುವಂತಹವೂ ಆಗಿವೆ. ವಿಚಾರಗಳನ್ನು ನನಗೆ ನೀಡುತ್ತಿರುವುದಕ್ಕಾಗಿ ಜನತೆಗೆ ಆಭಾರಿಯಾಗಿದ್ದೇನೆ.’ ಎಂದು ಮೋದಿ ಬರೆದಿದ್ದಾರೆ. 'ಮಾದಕ ದ್ರವ್ಯ ಹಾವಳಿ ನಿಯಂತ್ರಿಸುವ' ಬಗ್ಗೆ ಅಭಿಪ್ರಾಯಗಳನ್ನು ನೀಡುವಂತೆ ಪ್ರಧಾನಿ ನವೆಂಬರ್ 4ರಂದು ಆಹ್ವಾನಿಸಿದ್ದರು. ವಿಷಯಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿರುವ ಸರ್ಕಾರೇತರ ಸಂಘಟನೆಗಳಿಗೆ ಅವುಗಳ ಅನುಭವ ತಿಳಿಸುವಂತೆಯು ಪ್ರಧಾನಿ ಕೋರಿದ್ದರು. ಮೋದಿಯವರ ಮೂರನೇ ಸುತ್ತಿನ 'ಮನ್ ಕೀ ಬಾತ್' ರೇಡಿಯೋ ಕಾರ್ಯಕ್ರಮ ಭಾನುವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗುವುದು.

2014: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಿಂದ ಹಿಂದಿನ ರಾತ್ರಿ ಅಪಹರಣಕ್ಕೆ ಒಳಗಾಗಿದ್ದ ಗ್ರಾಮದ ಮುಖ್ಯಸ್ಥನ ಶವ ಹೊಲವೊಂದರಲ್ಲಿ ಈದಿನ ಬೆಳಗ್ಗೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದರು. ಬಾರಾಮುಲ್ಲಾ ಜಿಲ್ಲೆಯ ಹೈಗಾಮ್ ಗ್ರಾಮದ ಮುಖ್ಯಸ್ಥ ಗುಲಾಂ ಮೊಹಮ್ಮದ್ ಮೀರ್ (62) ಅವರನ್ನು ಅಪರಿಚಿತ ಶಸ್ತ್ರಧಾರಿಗಳು ಹಿಂದಿನ ರಾತ್ರಿ ಅಪಹರಿಸಿದ್ದರು. 'ಗ್ರಾಮದ ಮುಖ್ಯಸ್ಥನ ಶವ ಅಪಹರಣವಾದ ಸ್ಥಳದಿಂದ ದೂರದ ಹೊಲವೊಂದರಲ್ಲಿ ಈದಿನ ಬೆಳಗ್ಗೆ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಲಿಸಲಾಗಿದೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಪ್ರತ್ಯೇಕತಾವಾದಿ ಗೆರಿಲ್ಲಾಗಳು ಜಮ್ಮು ಮತ್ತು ಕಾಶ್ಮೀರದಲ್ಲಿ 20 ವರ್ಷಗಳ ನಂತರ 2011ರಲ್ಲಿ ಪಂಚಾಯತ್ ಚುನಾವಣೆಗಳು ಆರಂಭವಾದ ಲಾಗಾಯ್ತಿನಿಂದಲೂ ಗ್ರಾಮದ ಮುಖ್ಯಸ್ಥರನ್ನು ತಮ್ಮ ದಾಳಿಗೆ ಗುರಿಯಾಗಿಸುತ್ತಿದ್ದಾರೆ. ಪ್ರಜಾತಾಂತ್ರಿಕ ಪ್ರಕ್ರಿಯೆಯಿಂದ ದೂರ ಉಳಿಯುವಂತೆ ಬೆದರಿಸುವುದೇ ಈ ಹತ್ಯೆಗಳ ಗುರಿ ಎಂದು ನಂಬಲಾಗಿದೆ. ವಿಧಾನಭೆಗೆ ನಡೆಯುತ್ತಿರುವ ಐದು ಹಂತಗಳ ಚುನಾವಣಾ ಪ್ರಕ್ರಿಯೆಯಲ್ಲಿ ಮೂರು ಹಂತಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ನಾಲ್ಕನೇ ಹಂತದ ಚುನಾವಣೆಗೆ ಸಿದ್ಧತೆ ನಡೆದ ವೇಳೆಯಲ್ಲೇ ಇಂತಹ ಮತ್ತೊಂದು ಘಟನೆ ಘಟಿಸಿತು.

2014: ನವದೆಹಲಿ: 2001ರಲ್ಲಿ ಸಂಸತ್ ಭವನದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶ್ರದ್ಧಾಂಜಲಿ ಸಲ್ಲಿಸಿದರು. 13 ವರ್ಷಗಳ ಹಿಂದೆ ಇದೇ ದಿನ ತಮ್ಮ ಪ್ರಾಣಾರ್ಪಣೆ ಮಾಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸುತಾ ಮೋದಿ ಅವರು 'ನಾವು 2001ರಲ್ಲಿ ಈದಿನ ಪ್ರಜಾಪ್ರಭುತ್ವದ ದೇಗುಲ ರಕ್ಷಣೆ ಮಾಡುತ್ತಾ ತಮ್ಮ ಪ್ರಾಣಾರ್ಪಣೆ ಮಾಡಿದ ಹುತಾತ್ಮರಿಗೆ ನಾವು ನಮಸ್ಕರಿಸುತ್ತೇವೆ. ಅವರ ಬಲಿದಾನ ನಮ್ಮ ಸ್ಮರಣೆಯಲ್ಲಿ ಕೆತ್ತಲ್ಪಟ್ಟಿವೆ' ಎಂದು ಟ್ವೀಟ್ ಮಾಡಿದರು. 2001ರ ಡಿಸೆಂಬರ್ 13ರಂದು ಐವರು ಶಸ್ತ್ರಧಾರಿ ಭಯೋತ್ಪಾದಕರು ಸಂಸತ್ ಭವನ ಸಮುಚ್ಚಯಕ್ಕೆ ಮುತ್ತಿಗೆ ಹಾಕಿ ಯದ್ವಾತದ್ವ ಗುಂಡಿನ ದಾಳಿ ನಡೆಸಿ 9 ಮಂದಿಯನ್ನು ಕೊಂದುಹಾಕಿದ್ದರು. ಹುತಾತ್ಮರಾದವರಲ್ಲಿ ಐವರು ದೆಹಲಿ ಪೊಲೀಸ್ ಸಿಬ್ಬಂದಿ, ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಒಬ್ಬ ಮಹಿಳಾ ಅಧಿಕಾರಿ, ಸಂಸತ್ತಿನ ಒಬ್ಬ ಕಾವಲುಗಾರ ಮತ್ತು ಒಬ್ಬ ಉದ್ಯಾನ ಪಾಲಕ ಸೇರಿದ್ದರು. ಘಟನೆಯಲ್ಲಿ ಗಾಯಗೊಂಡಿದ್ದ ಒಬ್ಬ ಪತ್ರಕರ್ತ ನಂತರ ಮೃತನಾಗಿದ್ದ. ಎಲ್ಲಾ ಐದೂ ಮಂದಿ ಭಯೋತ್ಪಾದಕರನ್ನು ಗುಂಡಿಟ್ಟು ಕೊಲ್ಲಲಾಗಿತ್ತು. ಒಂದು ವರ್ಷದ ಬಳಿಕ ಅಫ್ಜಲ್ ಗುರು ಸೇರಿದಂತೆ ನಾಲ್ಕು ಮಂದಿ ಆರೋಪಿಗಳನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ವಿಚಾರಣೆಯಲ್ಲಿ ಅವರ ಮೇಲಿನ ಆರೋಪ ಸಾಬೀತಾಗಿತ್ತು. ಅಫ್ಜಲ್ ಗುರುವನ್ನು ಸಂಸತ್ ಮೇಲಿನ ದಾಳಿಯಲ್ಲಿ ಷಾಮೀಲಾಗಿದ್ದುದಕ್ಕಾಗಿ ಮರಣದಂಡನೆಗೆ ಗುರಿ ಪಡಿಸಲಾಗಿತ್ತು.

2014: ಅಡಿಲೇಡ್: ಅಡಿಲೇಡ್ನ ಓವೆಲ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ 48 ರನ್ಗಳ ಜಯ ಸಾಧಿಸಿತು. ಕೊನೆಯ ದಿನವಾದ ಈದಿನ 364 ರನ್ಗಳ ಗೆಲುವಿನ ಗುರಿಯೊಂದಿಗೆ ದ್ವಿತೀಯ ಇನಿಂಗ್ಸ್ ಪ್ರಾರಂಭಿಸಿದ ಭಾರತ 87.1 ಓವರ್ಗಳಲ್ಲಿ 315 ರನ್ ಗಳಿಸಿ ಆಲ್ಔಟ್ ಆಯಿತು. ಮುರಳಿ ವಿಜಯ್ (99) ಮತ್ತು ವಿರಾಟ್ ಕೊಹ್ಲಿ (141) ಉತ್ತಮ ಮೊತ್ತ ಸೇರಿಸಿದರೂ, ಗೆಲುವಿನ ದಡ ಸೇರಲು ಭಾರತಕ್ಕೆ ಸಾಧ್ಯವಾಗಲಿಲ್ಲ. ನಾಥನ್ ಲಿಯೋನ್ 7 ವಿಕೆಟ್ ಕಬಳಿಸಿ ಆಸ್ಟ್ರೇಲಿಯಾದ ಗೆಲುವಿನ ರೂವಾರಿಯಾದರು.

2014: ಮುಂಬೈ: ನಾಗಪುರದ ಕವಿ ಕುಲಗುರು ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ. ಉಮಾ ಚಂದ್ರಶೇಖರ ವೈದ್ಯ ಮತ್ತು ಮುಂಬೈ ವಿಶ್ವವಿದ್ಯಾಲಯದ ರಾಮಕೃಷ್ಣ ಬಜಾಜ್ ಸಂಸ್ಕೃತ ಭವನದ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ಗೌರಿ ಮಾಹುಲೀಕರ ಅವರನ್ನು ಇಲ್ಲಿ ನಡೆದ ಸಮಾರಂಭವೊಂದರಲ್ಲಿ ಕಂಚಿ ಶಂಕರಾಚಾರ್ಯ ಶ್ರೀ ಜಯೇಂದ್ರ ಸರಸ್ವತಿ ಅವರು 'ಆದಿ ಶಂಕರ ಪ್ರಶಸ್ತಿ' ನೀಡಿ ಗೌರವಿಸಿದರು. ಮಾತುಂಗದ ಶಂಕರಮಠವು ನೀಡುವ ಈ ಪ್ರಶಸ್ತಿಯು ಭಿನ್ನವತ್ತಳೆ ಜೊತೆಗೆ ಒಂದು ಲಕ್ಷ ರೂಪಾಯಿ ಬಹುಮಾನವನ್ನು ಹೊಂದಿದೆ. 2000ನೇ ವರ್ಷದಿಂದ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು ಈವರೆಗೆ 20ಕ್ಕೂ ಹೆಚ್ಚು ಮಂದಿ ಸಂಸ್ಕೃತ ವಿದ್ವಾಂಸರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಆದರೆ ಮಹಿಳೆಯರಿಗೆ ಈ ಪ್ರಶಸ್ತಿ ಪ್ರದಾನ ಮಾಡಿರುವುದು ಇದೇ ಮೊದಲು. ವೇದ ಅಧ್ಯಯನ ಮತ್ತು ಆದಿ ಶಂಕರರ ಅದ್ವೈತ ವೇದಾಂತ ಕ್ಷೇತ್ರಕ್ಕೆ ವ್ಯಕ್ತಿಗಳು ನೀಡಿದ ಕೊಡುಗೆಗಳನ್ನು ಗಮನಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ವೇದ ವಿದ್ವಾಂಸರಿಂದ ವೇದಘೋಷದ ಮಧ್ಯೆ ಭಿನ್ನವತ್ತಳೆಯನ್ನು ಓದಿದ ಬಳಿಕ ಶಂಕರಾಚಾರ್ಯರ ಭಕ್ತರಿಂದ ಹೂಮಳೆ ಹರಿಸಿ ಪ್ರಶಸ್ತಿ ಪುರಸ್ಕೃತ ಮಹಿಳೆಯರಿಬ್ಬರನ್ನು ಗೌರವಿಸಲಾಯಿತು. ವೈದ್ಯ ಅವರು 70ಕ್ಕೂ ಹೆಚ್ಚು ಸಂಶೋಧನಾ ಗ್ರಂಥಗಳನ್ನು ಬರೆದಿದ್ದು, ಸಂಸ್ಕೃತ ಮತ್ತು ಪಾಲಿ ಭಾಷೆಗಳಲ್ಲಿ ತಜ್ಞರಾಗಿದ್ದಾರೆ. ಆಯುರ್ವೇದ, ತತ್ವಜ್ಞಾನ, ಸಾಹಿತ್ಯ ಮತ್ತು ಮಾನವ ಹಕ್ಕುಗಳಿಗೆ ಸಮಬಂಧಿಸಿದಂತೆ ಸಂಸ್ಕೃತ ಮತ್ತು ಪಾಲಿ ಭಾಷೆಗಳಲ್ಲಿ ಸಂಶೋಧನೆ ನಡೆಸಿರುವ ಅವರು ವಿಶ್ವಾದ್ಯಂತ ಹಲವಾರು ಪ್ರಬಂಧಗಳನ್ನು ಮಂಡಿಸಿದ್ದಾರೆ. ಮಾಹುಲೀಕರ ಅವರು ವೇದಾಂತ ಮತ್ತು ವೇದ ಅಧ್ಯಯನ ತಜ್ಞರಾಗಿದ್ದು, 50ಕ್ಕೂ ಹೆಚ್ಚು ಪ್ರಬಂಧಗಳನ್ನು ಬರೆದಿದ್ದಾರೆ.

2014: ತಿರುವನಂತಪುರ: ಜಲ ಮತ್ತು ಪರಿಸರ ಮಾಲಿನ್ಯ ಕಳವಳಕಾರಿಯಾಗಿ ಹೆಚ್ಚುತ್ತಿರುವುದರಿಂದ ಸರಕಾರ ಜಲ ಸಂರಕ್ಷಣೆ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ಧರಿಸಿದೆ. ಎಲ್ಲ ನದಿಗಳು ಮತ್ತು ಹಿನ್ನೀರುಗಳನ್ನು ಸಂರಕ್ಷಿಸುವ ಸಲುವಾಗಿ ಸಮರ್ಪಕವಾದ ಕ್ರಿಯಾ ಯೋಜನೆಯನ್ನು ಸರಕಾರ ರೂಪಿಸಲಿದೆ. ಐದು ವರ್ಷಕ್ಕೊಮ್ಮೆ ಜಲ ಸಂತುಲನ ಅಧ್ಯಯನ ನಡೆಸಿ ಜಲ ಸಂರಕ್ಷಣೆಗೆ ಅಗತ್ಯವಿರುವ ಯೋಜನೆಗಳನ್ನು ಪಂಚವಾರ್ಷಿಕ ನೆಲೆಯಲ್ಲಿ ರೂಪಿಸಲಾಗುವುದು ಎಂದು ಸರಕಾರಿ ಪ್ರಕಟಣೆ ತಿಳಿಸಿತು. ನದಿ ಮತ್ತು ತೊರೆಗಳ ನೀರು ಮಲಿನವಾಗುವುದನ್ನು ತಡೆಯುವ ಸಲುವಾಗಿ ನದಿಗಳು, ತೊರೆಗಳು ಮತ್ತಿತರ ನೀರಿನ ಮೂಲಗಳಿಗೆ ವಾಹನಗಳನ್ನು ಇಳಿಸಿ ತೊಳೆಯುವುದನ್ನು ಸರಕಾರ ನಿಷೇಧಿಸಲಿದೆ. ಅಂತೆಯೇ ಜಿಪಿಎಸ್ ಬಳಸಿ ಜಲ ಮೂಲಗಳ ಗಡಿಗಳನ್ನು ಗುರುತಿಸಲಾಗುವುದು. ನದಿ ದಡಗಳಲ್ಲಿ ಮರಳುಗಾರಿಕೆ ನದಿ ದಡಗಳಿಂದ ಮಾತ್ರ ಮರಳು ತೆಗೆಯಲು ಅನುಮತಿ ಕೊಡಲಾಗುವುದು. ಅದೂ ಸೂಕ್ತವಾದ ಅಧ್ಯಯನ ನಡೆಸಿ ಮರಳುಗಾರಿಕೆಯಿಂದ ಪ್ರಕೃತಿ ಮೇಲಾಗಬಹುದಾದಾದ ಪರಿಣಾಮಗಳನ್ನು ತಿಳಿದುಕೊಂಡ ಬಳಿಕ ಅನುಮತಿ ಸಿಗಲಿದೆ. ಖಾಸಗಿ ವ್ಯಕ್ತಿಗಳಿಗೆ ಮರಳುಗಾರಿಕೆಗೆ ಮತ್ತು ಮರಳು ಮಾರಾಟಕ್ಕೆ ಲೈಸೆನ್ಸ್ ಸಿಗುವುದಿಲ್ಲ ಎಂದು ಹೇಳಿಕೆ ತಿಳಿಸಿತು.

2014:ಹೈದರಾಬಾದ್: ದೇಶಾದ್ಯಂತ ಕಣ್ಮರೆಯಾಗಿರುವ ಮಕ್ಕಳನ್ನು ಪತ್ತೆ ಹಚ್ಚಲು ಕೇಂದ್ರ ಸರಕಾರ ಪ್ರತ್ಯೇಕ ವೆಬ್ಸೈಟ್ನ್ನು ತೆರೆಯಲು ಚಿಂತನೆ ನಡೆಸಿದ್ದು ಈ ದಿಸೆಯಲ್ಲಿ ಮಾಹಿತಿ ತಂತ್ರಜ್ಞಾನ ಖಾತೆ ಈಗಾಗಲೇ ಕಾರ್ಯೋನ್ಮುಖವಾಗಿದೆ ಎಂದು ಸಚಿವ ರವಿಶಂಕರ ಪ್ರಸಾದ್ ತಿಳಿಸಿದರು. ಶ್ರೀಮಂತ ಕುಟುಂಬಗಳ ಮಕ್ಕಳು ನಾಪತ್ತೆಯಾದಲ್ಲಿ ಹೆತ್ತವರು ಮಕ್ಕಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಬಡ ಮಕ್ಕಳು ಕಣ್ಮರೆಯಾದಾಗ ಈ ಮಕ್ಕಳನ್ನು ಪತ್ತೆಹಚ್ಚಲು ಈ ಕುಟುಂಬಗಳಿಗೆ ಕಷ್ಟಸಾಧ್ಯವಾಗಿರುವುದರಿಂದ ಸರಕಾರ ನಾಪತ್ತೆಯಾಗಿರುವ ಮತ್ತು ಪತ್ತೆಯಾಗಿರುವ ಮಕ್ಕಳಿಗಾಗಿಯೇ ಪ್ರತ್ಯೇಕ ವೆಬ್ಸೈಟ್ನ್ನು ತೆರೆಯಲು ತೀರ್ಮಾನಿಸಿದೆ ಎಂದು ಅವರು ಹೇಳಿದರು. ಸ್ಥಳೀಯ ಎನ್ಜಿಒ ಟೆಕ್ ಫಾರ್ ಸೇವಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಚಿವ ರವಿಶಂಕರ ಪ್ರಸಾದ್ ಮಾತನಾಡಿದರು. ರಸ್ತೆಗಳಲ್ಲಿ ಬಡ ಮಕ್ಕಳು ಅಲೆದಾಡುವುದನ್ನು ಕಂಡಲ್ಲಿ ತತ್ಕ್ಷಣವೇ ಆ ಮಕ್ಕಳ ಭಾವಚಿತ್ರವನ್ನು ಸೆರೆಹಿಡಿದು ಅದನ್ನು ಖಾತೆಗೆ ಅಪ್ಲೋಡ್ ಮಾಡಬಹುದಾಗಿದೆ. ಈ ಫೋಟೋಗಳನ್ನು ಅಖಿಲ ಭಾರತ ಮಟ್ಟದಲ್ಲಿ ಪರಿಶೀಲಿಸಲು ಸಾಧ್ಯವಾಗುವಂತೆ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು. ಒಂದು ಕೋಟಿಗೂ ಅಧಿಕ ಪಿಂಚಣಿದಾರರಿಗೆ ಆಧಾರ್ ಕಾರ್ಡ್ ಆಧಾರಿತ 'ಡಿಜಿಟಲ್ ಲೈಫ್ ಸರ್ಟಿಫಿಕೇಟ್' ನೀಡುವ ಯೋಜನೆಗೆ ಸರಕಾರ ಚಾಲನೆ ನೀಡಿದ್ದು ಇದರಿಂದ ಪಿಂಚಣಿದಾರರಿಗೆ ಬಹಳಷ್ಟು ಪ್ರಯೋಜನವಾಗಲಿದೆ. ಇ-ಕಾಮರ್ಸ್ ಕ್ಷೇತ್ರದಲ್ಲಿನ ವ್ಯವಹಾರ ಅವಕಾಶಗಳ ಕುರಿತಂತೆ ಅಂಚೆ ಇಲಾಖೆ ಪರಿಶೀಲನೆ ನಡೆಸುತ್ತಿದೆ ಎಂದವರು ಹೇಳಿದರು.

2014: ಅಡಿಲೇಡ್: ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಲ್ಲಿ ಐಸಿಸಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಹಾಗೂ ಭಾರತದ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿಗೆ ದಂಡ ವಿಧಿಸಲಾಯಿತು. ವಾರ್ನರ್ ಮತ್ತು ಧವನ್ಗೆ ಕ್ರಮವಾಗಿ ಪಂದ್ಯ ಸಂಭಾವನೆಯ ಶೇಕಡಾ 15 ಮತ್ತು 30ರಷ್ಟು ದಂಡ ವಿಧಿಸಿದ್ದು, ಕೊಹ್ಲಿಗೂ ಶೇಕಡಾ 30ರಷ್ಟು ದಂಡ ಹೇರಲಾಯಿತು. ಪಂದ್ಯದ ನಾಲ್ಕನೇ ದಿನ ವಾರ್ನರ್ ಮತ್ತು ಧವನ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದು ನಿಂದನೆ ಮಾಡಿಕೊಳ್ಳುವ ಅತಿರೇಕಕ್ಕೂ ಹೋಗಿತ್ತು. ಇಂಥದೇ ಇನ್ನೊಂದು ಘಟನೆಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಐಸಿಸಿ ನಿಯಮ ಉಲ್ಲಂಘಿಸಿದ್ದರು. ಈ ಹಿನ್ನೆಲೆಯಲ್ಲಿ ಕೊಹ್ಲಿಗೂ ದಂಡ ವಿಧಿಸಲಾಯಿತು. ನಿಯಮ 2.1.8 ಪ್ರಕಾರ ಕ್ರಮ ಕೈಗೊಂಡಿರುವ ಐಸಿಸಿ ದಂಡ ವಿಧಿಸಿ ಎಚ್ಚರಿಕೆ ನೀಡಿತು.

2014: ಕೋಲ್ಕತ: ಶಾರದಾ ಬಹುಕೋಟಿ ಹಗರಣದಲ್ಲಿ ಭಾಗಿಯಾದ ಆರೋಪದಡಿ ಬಂಧನಕ್ಕೊಳಗಾದ ತೃಣಮೂಲ ಕಾಂಗ್ರೆಸ್ಸಿನ ನಾಯಕ ಮದನ್ ಮಿತ್ರ ಅವರನ್ನು ಡಿಸೆಂಬರ್ 16ರ ತನಕ ಸಿಬಿಐ ತನ್ನ ವಶಕ್ಕೆ ತೆಗೆದುಕೊಂಡಿತು. ಪ್ರಕರಣದ ಕುರಿತು ಇನ್ನಷ್ಟು ಮಾಹಿತಿ ಸಂಗ್ರಹಿಸಬೇಕಾದ ಹಿನ್ನೆಲೆಯಲ್ಲಿ ಮಿತ್ರ ಅವರನ್ನು ಸಿಬಿಐ ವಶಕ್ಕೆ ನೀಡಲಾಯಿತು.. ಬಂಧನದಲ್ಲಿದ್ದ ಮಿತ್ರ ಅವರನ್ನು ಈದಿನ ಅಲಿಪುರ ಸಿಜೆಎಂ ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಸಿಬಿಐ ವಶಕ್ಕೆ ನೀಡಲು ಆಜ್ಞಾಪಿಸಿತು.

2014: ನವದೆಹಲಿ: 87ನೇ ಆಸ್ಕರ್ ಪ್ರಶಸ್ತಿ ಪೈಪೋಟಿಯಲ್ಲಿ ಭಾರತದ ಗಿರೀಶ್ ಮಲಿಕ್ ನಿರ್ದೇಶನದ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಿತ್ರ 'ಜಲ್' ಸ್ಥಾನ ಪಡೆಯಿತು. ಜಲ್ ಚಿತ್ರವು 'ಉತ್ತಮ ಚಿತ್ರ' ಮತ್ತು 'ಉತ್ತಮ ಮೂಲ ಸಂಗೀತ' ವಿಭಾಗದಲ್ಲಿ ಸ್ಪರ್ಧಿಸಲಿದೆ. ಜಲ್ ಚಿತ್ರವು ಆಸ್ಕರ್ನ 2 ಅತ್ಯುತ್ತಮ ವಿಭಾಗಗಳಾದ ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ಮೂಲ ಸಂಗೀತ ಸ್ಪರ್ಧೆಯಲ್ಲಿ ಸ್ಥಾನ ಪಡೆದಿದ್ದು, 'ಇಂಟರ್ಸೆಲ್ಲರ್', 'ಎಕ್ಸೋಡಸ್', 300 ರೈಸ್ ಆಫ್ ಎಂಪಯರ್' ಮತ್ತು ಹಲವು ಖ್ಯಾತ ಹಾಲಿವುಡ್ ಚಿತ್ರಗಳೊಂದಿಗೆ ಸ್ಪರ್ಧಿಸಲಿದೆ. ಜಲ್ ಚಿತ್ರವು ಅತ್ಯುತ್ತಮ ವಿದೇಶಿ ಚಿತ್ರ ವಿಭಾಗದಲ್ಲಿ ಇಲ್ಲ, ಅತ್ಯುತ್ತಮ ಚಿತ್ರ ಸ್ಪರ್ಧೆಗೆ ಆಯ್ಕೆಯಾಗಿದ್ದು, ಹಾಲಿವುಡ್ನ ಉತ್ತಮ ಚಿತ್ರಗಳೊಂದಿಗೆ ಸ್ಪರ್ಧಿಸಲಿದೆ. ಚಿತ್ರಕ್ಕೆ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಸೋನು ನಿಗಮ್ ಮತ್ತು ಬಿಕ್ರಮ್ಘೋಷ್ ಒದಗಿಸಿದ್ದಾರೆ. ಭಾರತೀಯ ಚಿತ್ರಗಳಲ್ಲಿ ಉತ್ತಮ ಸಂಗೀತಕ್ಕಾಗಿ ಕೊಚಾಡಿಯನ್ ಚಿತ್ರ ಸಹ ಸ್ಪರ್ಧೆಯಲ್ಲಿದೆ. ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಕೊಚಾಡಿಯನ್ ಚಿತ್ರದ ಜತೆಗೆ ಹಾಲಿವುಡ್ ಚಿತ್ರಗಳಾದ 'ಮಿಲಿಯನ್ ಡಾಲರ್ ಆರ್ಮ್' ಮತ್ತು 'ದಿ ಹಂಡ್ರೆಡ್ ಫುಟ್ ಜರ್ನಿ' ಚಿತ್ರಗಳ ಸಂಗೀತಕ್ಕೂ ಸಹ ಸ್ಪರ್ಧೆಯಲ್ಲಿದ್ದಾರೆ. ಆಸ್ಕರ್ ಲೈಬ್ರರಿಯಲ್ಲಿ ಸಂಗ್ರಹಿಸಿಡುವ ಉದ್ದೇಶದಿಂದ ಜಲ್ ಚಿತ್ರದ ಚಿತ್ರಕತೆಯನ್ನು ಆಹ್ವಾನಿಸಿದ್ದಾರೆ ಎಂದು ಚಿತ್ರದ ನಿರ್ವಾಹಕರು ತಿಳಿಸಿದರು.

2014: ಕಪುರ್ತಲಾ: 5ನೇ ಕಬಡ್ಡಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಪುರುಷರ ತಂಡ ಮತ್ತು ಮಹಿಳೆಯರ ತಂಡ ಕ್ರಮವಾಗಿ
ಯು.ಎಸ್.ಎ. ಮತ್ತು ಡೆನ್ಮಾರ್ಕ್ ವಿರುದ್ಧ ಗೆಲುವು ಸಾಧಿಸಿದವು. ಭಾರತ ಪುರುಷರ ತಂಡ ಯು.ಎಸ್.ಎ. ತಂಡವನ್ನು 52-29 ಅಂಕಗಳಿಂದ ಸೋಲಿಸಿತು. ಅರ್ಧ ಸಮಯದವರೆಗೆ 27-15 ಅಂತರದ ಮುನ್ನಡೆ ಕಾಯ್ದುಕೊಂಡಿದ್ದ ಭಾರತ ತಂಡವು ಪಂದ್ಯದ ಮೇಲೆ ಹಿಡಿತ ಸಡಿಲಿಸದೆ 52-29 ಅಂಕಗಳಿಂದ ಜಯ ಸಾಧಿಸಿತು. ಭಾರತದ ರೈಡರ್ಗಳಾದ ಗಗನ್ದೀಪ್ ಜೋಗೆವಾಲ್ ಮತ್ತು ಕಮಲ್ದೀಪ್ ತಲಾ 8 ಅಂಕ ಗಳಿಸಿದರೆ, ಸಂದೀಪ್ 7 ಅಂಕ ಗಳಿಸಿದರು. ಭಾರತ ಮಹಿಳೆಯರ ತಂಡವು 50-16 ಅಂಕಗಳ ಅಂತರದಿಂದ ಡೆನ್ಮಾರ್ಕ್ ವಿರುದ್ಧ ಗೆಲುವು ಸಾಧಿಸಿತು. ತಂಡದ ಪರ ರೈಡರ್ಗಳಾದ ಸುಖವಿಂದರ್ 8 ಅಂಕ ಗಳಿಸಿದರೆ ಪ್ರಿಯಾಂಕ 3 ಅಂಕ ಗಳಿಸಿದರು. ಡಿಫೆಂಡರ್ಗಳಾದ ಅನು 7 ಅಂಕ ಮತ್ತು ಮನ್ದೀಪ್ 4 ಅಂಕ ಕಲೆಹಾಕಿದರು. ದಿನದ ಮತ್ತೊಂದು ಪಂದ್ಯದಲ್ಲಿ ಇರಾನ್ ಪುರುಷರ ತಂಡ ಸ್ಪೇನ್ ವಿರುದ್ಧ 54-27 ಅಂಕಗಳ ಅಂತರದಿಂದ ಗೆಲುವು ಸಾಧಿಸಿತು.

2014: ಬೀಜಿಂಗ್: 19 ವರ್ಷಗಳ ಹಿಂದಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮತ್ತೆ ವಿಚಾರಣೆಗಾಗಿ ಕೈಗೆತ್ತಿಕೊಳ್ಳಲು ಚೀನಾದ ಸುಪ್ರೀಂ ಪೀಪಲ್ಸ್ ಕೋರ್ಟ್ (ಎಸ್ಪಿಸಿ) ನಿರ್ಧರಿಸಿತು. ಬಲು ಅಪರೂಪದ ಪ್ರಕರಣ ಇದಾಗಿದ್ದು, ಈ ಹಿಂದೆ ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಎಸ್ಪಿಸಿ ತಪ್ಪಿತಸ್ಥ ಎಂದು ತೀರ್ಪಿತ್ತ ಹಿನ್ನೆಲೆಯಲ್ಲಿ ಗಲ್ಲು ಶಿಕ್ಷೆಯನ್ನೂ ವಿಧಿಸಲಾಗಿತ್ತು. ಆದರೆ ಈಗ ಇನ್ನೊಬ್ಬ ಆರೋಪಿ 19 ವರ್ಷಗಳ ಹಿಂದೆ ನಡೆದ ಪ್ರಕರಣದಲ್ಲಿ ಕೊಲೆ ಮಾಡಿದ್ದು ನಾನು ಅವನಲ್ಲ ಎಂದು ಪೊಲೀಸರ ಮುಂದೆ ಹೇಳಿಕೊಂಡಿದ್ದು, ನ್ಯಾಯಾಲಯ ಈಗ ಮತ್ತೆ ಹಳೆಯ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿತು. ಶಾನ್ಡಾಂಗ್ ಹೈಯರ್ ಪೀಪಲ್ಸ್ ಕೋರ್ಟ್ ಈಗ ಈ ಪ್ರಕರಣದ ವಿಚಾರಣೆ ವಿಚಾರಣೆ ಆರಂಭಿಸಿತು. ಇದು 19 ವರ್ಷಗಳ ಹಳೆಯ ಪ್ರಕರಣ. 1994ರಲ್ಲಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಹಿನ್ನೆಲೆಯಲ್ಲಿ 1995ರಲ್ಲಿ 'ನೀ ಶುಬಿನ್' ಎಂಬಾತ ಜೈಲು ಸೇರಿದ್ದ. ಆಗ ಆತನಿಗೆ 21 ವರ್ಷ ವಯಸ್ಸು. ಪ್ರಕರಣಕ್ಕೆ ಸಂಬಂಧಿಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತು. ಕೋರ್ಟ್ ತೀರ್ಪಿನಂತೆ ನೀ ಶುಬಿನ್ನನ್ನು ಗಲ್ಲಿಗೇರಿಸಲಾಗಿತ್ತು. ಅಪರಾಧಿಗೆ ಶಿಕ್ಷೆಯಾಗಿದ್ದಾಯಿತು ಎಂದು ಪೊಲೀಸರು ನೆಮ್ಮದಿಯಲ್ಲಿದ್ದಾಗಲೇ ಈಗ ಇನ್ನೊಬ್ಬ ಆರೋಪಿ ಈ ಪ್ರಕರಣದಲ್ಲಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದು ನಾನು ಎಂದು ಹೇಳಿದ. ಈತ 47 ವರ್ಷದ ವಾಂಗ್ ಶುಜಿನ್. 2005ರಲ್ಲಿ ಇಂತದ್ದೇ ಮೂರು ಪ್ರಕರಣದ ಆರೋಪದ ಮೇಲೆ ಜೈಲು ಸೇರಿದ್ದ ವಾಂಗ್ ಕೂಡ ತಪ್ಪಿತಸ್ಥ ಎಂದು ಕೋರ್ಟ್ 2007ರಲ್ಲಿ ಗಲ್ಲು ಶಿಕ್ಷೆಗೆ ಆದೇಶಿಸಿತ್ತು. ಆದರೆ ಇನ್ನು ಈತನನ್ನು ಗಲ್ಲಿಗೇರಿಸಲಾಗಿಲ್ಲ. ಈಗ ವಾಂಗ್ ಮತ್ತೊಂದು ರಹಸ್ಯ ವಿಚಾರವನ್ನು ಹೊರಗೆಡವಿ ಪೊಲೀಸರ ತಲೆಬಿಸಿಗೆ ಕಾರಣನಾದ. ಪರಿಣಾಮ 19 ವರ್ಷಗಳ ಹಿಂದಿನ ಪ್ರಕರಣವನ್ನು ಕೋರ್ಟ್ ಮತ್ತೆ ವಿಚಾರಣೆಗೆ ಕೈಗೆತ್ತಿಕೊಳ್ಳುವಂತಾಯಿತು.

2014: ರಾಯ್ಪುರ್: ಛತ್ತೀಸಘಡದ ರಾಯಪುರ ಜಿಲ್ಲೆಯ ಸರ್ಕೆಗುಡ ಗ್ರಾಮದ ವ್ಯಾಪ್ತಿಯ ಅರಣ್ಯದಲ್ಲಿ ನೆಲಬಾಂಬ್ ಸಿಡಿದು ಒಬ್ಬ ಸಿಆರ್ಪಿಎಫ್ ಯೋಧ ಮೃತರಾದರು. ಮೃತ ಯೋಧನನ್ನು ಸಿಆರ್ಪಿಎಫ್ನ ಇ ಕಂಪನಿಯ, 222ನೇ ಬೆಟಾಲಿಯನ್ಗೆ ಸೇರಿದ ಆರ್.ಗೋವರ್ಧನ್ ರೆಡ್ಡಿ ಎಂದು ಗುರುತಿಸಲಾಯಿತು. ಸಿಆರ್ಪಿಎಫ್ ಯೋಧರು ಅರಣ್ಯದಲ್ಲಿ ನಕ್ಸಲರಿಗಾಗಿ ಹುಡುಕಾಟ ನೆಡೆಸುತ್ತಿದ್ದಾಗ ನೆಲಬಾಂಬ್ ಸಿಡಿದು ಗೋವರ್ಧನ್ ರೆಡ್ಡಿ ತೀವ್ರವಾಗಿ ಗಾಯಗೊಂಡಿದ್ದರು, ಯೋಧನನ್ನು ಬಿಜಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತರಾದರು ಎಂದು ಗುಪ್ತಚರ ಪಡೆಯ ಡಿಐಜಿ ದಿಪಾಂಷ್ಷು ಕಬ್ರ ತಿಳಿಸಿದರು.

2008: ಅಮೇರಿಕದ ಮಿಚಿಗನ್ ರಾಜ್ಯದ ಸಗಿನಾವೊ ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಆಯ್ದ ಅತಿಗಣ್ಯ 500 ಆಹ್ವಾನಿತ ಕುಟುಂಬ ಸದಸ್ಯರು ಹಾಗೂ 5,000 ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಈ ಪದವಿ ಪ್ರದಾನ ನಡೆಯಿತು.

2008: ಮುಂಬೈ ದಾಳಿಗೆ ಸಂಬಂಧಿಸಿದಂತೆ ಬಂಧಿತನಾದ ಮಹಮ್ಮದ್ ಅಜ್ಮಲ್ ಅಮೀರ್ ಇಮಾಮ್ ಮಹತ್ವದ ಕಾಂಗ್ರೆಸ್ಸಿನ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಅವರು ರಾಜಸ್ಥಾನದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಎಸ್.ಕೆ.ಸಿಂಗ್ ಅವರು ಗೆಹ್ಲೋಟ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ, ಮಾಜಿ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್ ಮತ್ತು ಕಾಂಗ್ರೆಸ್ ಸದಸ್ಯ ಎಂಕೆ.ಮಾಥುರ್ ಮತ್ತಿತರ ನಾಯಕರು ಹಾಜರಿದ್ದರು.
ಬೆಳವಣಿಗೆಯೊಂದರಲ್ಲಿ 'ನಾನು ಪಾಕಿಸ್ತಾನಿ ಪ್ರಜೆ' ಎಂದು ಹೇಳಿಕೊಂಡು, ತನ್ನ ಬಿಡುಗಡೆಗೆ ಕಾನೂನು ನೆರವು ಬೇಕೆಂದು ಪಾಕಿಸ್ಥಾನ ಹೈಕಮಿಷನ್‌ಗೆ ಪತ್ರ ಬರೆದು ಮನವಿ ಸಲ್ಲಿಸಿದ. ಅಜ್ಮಲ್‌ನ ಪತ್ರವನ್ನು ಮುಂಬೈ ಪೊಲೀಸರು ಕೇಂದ್ರ ಗೃಹಸಚಿವಾಲಯ ಮತ್ತು ವಿದೇಶಾಂಗ ಇಲಾಖೆಗೆ ಕಳುಹಿಸಿ ಕೊಟ್ಟಿದ್ದಾರೆ ಎಂದು ಪೊಲೀಸ್ ಜಂಟಿ ಆಯುಕ್ತ ರಾಕೇಶ್ ಮರಿಯ ತಿಳಿಸಿದರು.

2008: ಉತ್ತರ ಕರ್ನಾಟಕದ ಹಿಂದುಳಿದ ಜಿಲ್ಲೆಗಳಿಂದ ದೇಶದ ರಾಜಧಾನಿ ಸೇರಿದಂತೆ ಹಲವು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಗದಗ- ಬಾಗಲಕೋಟೆ ನಡುವಿನ ಬ್ರಾಡ್‌ಗೇಜ್ ಮಾರ್ಗದಲ್ಲಿ ರೈಲು ಸಂಚಾರ ಆರಂಭಗೊಳ್ಳುವ ಮೂಲಕ ಈ ಭಾಗದ ಜನರ ದಶಕಗಳ ಕನಸು ನನಸಾಯಿತು. ಗದಗ- ಸೊಲ್ಲಾಪುರ ಬ್ರಾಡ್‌ಗೇಜ್ ನಿರ್ಮಾಣ ಕಾಮಗಾರಿ ಆರಂಭಗೊಂಡಾಗಿನಿಂದ ಹುಬ್ಬಳ್ಳಿ ಮೂಲಕ ನೇರವಾಗಿ ಬೆಂಗಳೂರು ತಲುಪುವ ಅವಕಾಶವನ್ನು ವಿಜಾಪುರ- ಬಾಗಲಕೋಟ ಜಿಲ್ಲೆಯ ಜನರು ಕಳೆದುಕೊಂಡಿದ್ದರು. ಇದೀಗ ಸೊಲ್ಲಾಪುರ- ಗದಗ ನಡುವಿನ ಬ್ರಾಡ್‌ಗೇಜ್ ಪರಿವರ್ತನೆ ಪೂರ್ಣಗೊಂಡದ್ದರಿಂದ ರಾಜಧಾನಿಗೆ ನೇರ ಸಂಪರ್ಕದ ಹೊಸ ಕನಸು ಚಿಗುರೊಡೆಯಿತು.

2008: ಕಡಲ್ಗಳ್ಳರ ವಿರುದ್ಧ ನಡೆದ ಮತ್ತೊಂದು ಯಶಸ್ವಿ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾಪಡೆಯು ಏಡನ್ನಿನ ಯೆಮೆನಿ ಬಂದರಿನಿಂದ 160 ನಾಟಿಕಲ್ ಮೈಲು ದೂರದಲ್ಲಿ ಇಥಿಯೋಪಿಯಾದ ಹಡಗನ್ನು ಅಪಹರಿಸಲು ಯತ್ನಿಸಿದ 23 ಕಡಲ್ಗಳ್ಳರನ್ನು ಬಂಧಿಸಿತು. ಬಂಧಿತರಲ್ಲಿ ಸೋಮಾಲಿಯಾದ 12 ಹಾಗೂ ಯೆಮೆನ್ನಿನ 11 ಕಡಲ್ಗಳ್ಳರು ಸೇರಿದ್ದರು.

2008: ಪ್ರತಿಷ್ಠಿತ ವಿರಕ್ತಮಠಗಳಲ್ಲಿ ಒಂದಾದ ಹಾವೇರಿ ನಗರದ ಹುಕ್ಕೇರಿಮಠ ಹಾಗೂ ಗುಲ್ಬರ್ಗಾ ಜಿಲ್ಲೆ ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿ ಮಠದ ಪೀಠಾಧಿಪತಿ ಶಿವಲಿಂಗ ಮಹಾಸ್ವಾಮಿಗಳು (92) ಹೃದಯಾಘಾತದಿಂದ ಲಿಂಗೈಕ್ಯರಾದರು. ಹರ್ನಿಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು.

2008: ದಕ್ಷಿಣ ಆಫ್ರಿಕಾದ ವಜ್ರ ನಗರಿ ಜೋಹಾನ್ನೆಸ್ ಬರ್ಗಿನಲ್ಲಿ ರಾತ್ರಿ ನಡೆದ ವರ್ಣಮಯ ಸಮಾರಂಭದಲ್ಲಿ 2008ರ ವಿಶ್ವಸುಂದರಿ ಸ್ಪರ್ಧೆಯಲ್ಲಿ ರಷ್ಯಾ ಸುಂದರಿ ಕ್ಸೆನ್ಯಾ ಸುಖಿನೊವಾ 58ನೇ ವಿಶ್ವ ಸುಂದರಿಯಾಗಿ ಆಯ್ಕೆಯಾದರು. ಸಾಕಷ್ಟು ಭರವಸೆ ಹುಟ್ಟಿಸಿದ್ದ 21ರ ಹರೆಯದ ಭಾರತದ ಪಾರ್ವತಿ ಒಮನ್‌ ಕುಟ್ಟನ್ ಮೊದಲ ರನ್ನರ್ ಅಪ್ ಸ್ಥಾನಕ್ಕೆ ಹಾಗೂ ಟ್ರಿನಿಡಾಡ್ ಮತ್ತು ಟೊಬಾಗೊದ ಗೆಬ್ರಿಯಲ್ ವಾಲ್‌ಕೋಟ್ ಎರಡನೇ ರನ್ನರ್ ಅಪ್ ಸ್ಥಾನಕ್ಕೂ ತೃಪ್ತಿ ಪಡಬೇಕಾಯಿತು.

2008: ಅಂಗ ಊನರು ಅಳವಡಿಸಿಕೊಳ್ಳುವ ಕೃತಕ ಅಂಗಗಳಿಗೂ ಸಂವೇದನಾಶೀಲ ಗುಣವನ್ನು ತುಂಬಬಹುದು ಎಂದು ವಾಷಿಂಗ್ಟನ್‌ ವಿಜ್ಞಾನಿಗಳ ತಂಡ ಅಭಿಪ್ರಾಯಪಟ್ಟಿತು. ಕರೊಲಿಂಸ್ಕಾ ಸಂಸ್ಥೆ ನೇತೃತ್ವದಲ್ಲಿ ಸಂಶೋಧನೆ ನಡೆಸಿರುವ ವಿಶ್ವ ವಿಜ್ಞಾನಿಗಳ ತಂಡ ಈ ನಿಟ್ಟಿನಲ್ಲಿ ಯಶಸ್ಸು ಸಾಧಿಸಿ, ರಬ್ಬರಿನಿಂದ ನಿರ್ಮಿಸಿದ ಕೈಗಳಿಗೆ ಸ್ಪರ್ಶ ಜ್ಞಾನವನ್ನು ಮೂಲ ಅಂಗದಂತೆಯೇ ನೀಡಿದರು. ಸಂವೇದನಾ ಗುಣವುಳ್ಳ ಅಂಗಗಳ ಉತ್ಪಾದನೆ ಅಭಿವೃದ್ಧಿ ಹಂತದಲ್ಲಿದೆ ಎಂದು ಈ ತಂಡ ಪ್ರಕಟಿಸಿತು. ತಂಡದ ಮುಖ್ಯಸ್ಥ ಹೆನ್ರಿಕ್ ಏರ್ಸನ್, ತಮ್ಮ ಈ ಅಧ್ಯಯನ ಪ್ರಗತಿಯಲ್ಲಿದ್ದು, ಸಂವೇದನೆಯ ಅಂಗ ಉತ್ಪಾದಿಸುವ ವಿಶ್ವಾಸ ವ್ಯಕ್ತಪಡಿಸಿದರು. ಸದ್ಯ ಇಂತಹ ಕೃತಕ ಕೈಗಳನ್ನು ಅಭಿವೃದ್ಧಿ ಮಾಡಲಾಗುತ್ತಿದ್ದು, ಮುಂದೆ ಇನ್ನಿತರ ಅಂಗಗಳಿಗೂ ಇದು ವಿಸ್ತರಣೆಯಾಗುವ ಎಲ್ಲಾ ಸಾಧ್ಯತೆಗಳೂ ಇವೆ ಎಂದು ಅವರು ನುಡಿದರು.

2007: ಮಲೇಷ್ಯಾದಲ್ಲಿ ಇರುವ ಭಾರತೀಯರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ಹಿಂದೂ ಹಕ್ಕುಗಳ ಸಂಘಟನೆಯ ಐವರು ನಾಯಕರನ್ನು ಆಂತರಿಕ ಭದ್ರತಾ ಕಾನೂನಿನ ಅಡಿಯಲ್ಲಿ ಈದಿನ ಕ್ವಾಲಾಲಂಪುರದಲ್ಲಿ ಬಂಧಿಸಲಾಯಿತು. ಬಂಧಿತ ಮುಖಂಡರು:ಪಿ. ಉದಯಕುಮಾರ್, ಎಂ.ಮನೋಹರನ್, ಆರ್. ಕೆಂಘಧರನ್, ವಿ.ಗಣಬತಿರು ಹಾಗೂ ವಿ.ವಸಂತಕುಮಾರ್. ದೇಶದ ಆಂತರಿಕ ಭದ್ರತೆಗೆ ಧಕ್ಕೆ ಬಂದಾಗ ಶಂಕಿತ ವ್ಯಕ್ತಿಗಳನ್ನು ಬಂಧಿಸಲು ಸರ್ಕಾರ ಈ ಕಾಯ್ದೆಯನ್ನು ಬಳಸುತ್ತದೆ. ಆಂತರಿಕ ಭದ್ರತಾ ಕಾನೂನಿನ ಪ್ರಕಾರ ವಿಚಾರಣೆ ನಡೆಸದೆಯೇ ಶಂಕಿತ ವ್ಯಕ್ತಿಗಳನ್ನು ಅನಿರ್ದಿಷ್ಟಾವಧಿಗೆ ಬಂಧನದಲ್ಲಿ ಇಡಬಹುದು. ಸರ್ಕಾರೇತರ ಹಿಂದೂ ಹಕ್ಕುಗಳ ಕಾರ್ಯಪಡೆಯ ಮುಖಂಡರ ನೇತೃತ್ವದಲ್ಲಿ ನವೆಂಬರ್ ತಿಂಗಳಲ್ಲಿ 20,000 ಭಾರತೀಯರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರು.

2007: ತಮಿಳು ಚಿತ್ರನಟಿ ಖುಷ್ಬೂ ಅವರಿಗೆ ನ್ಯಾಯಾಲಯವೊಂದು ಮತ್ತೊಂದು ನೋಟಿಸ್ ಜಾರಿಗೊಳಿಸಿತು. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ದೇವರ ಮೂರ್ತಿ ಇಟ್ಟಿರುವ ಸ್ಥಳದಲ್ಲಿ ಚಪ್ಪಲಿ ಹಾಕಿಕೊಂಡು ಕುಳಿತಿದ್ದುದನ್ನು ಪ್ರಶ್ನಿಸಿ ಖುಷ್ಬೂಗೆ ತಮಿಳುನಾಡು ನ್ಯಾಯಾಲಯ ನೋಟಿಸ್ ನೀಡಿತು. ಇದೇ ಪ್ರಕರಣದಲ್ಲಿ ಹಿಂದೆ ಎರಡು ದೂರುಗಳು ದಾಖಲಾಗಿದ್ದವು.

2007: ಬಿಜೆಪಿ ಧುರೀಣ ದಿವಂಗತ ಪ್ರಮೋದ್ ಮಹಾಜನ್ ಪುತ್ರ ರಾಹುಲ್ ಮಹಾಜನ್ ದಾಂಪತ್ಯ ವಿಚ್ಛೇದನ ಹಂತಕ್ಕೆ ತಲುಪಿತು. ಕಳೆದ ವರ್ಷವಷ್ಟೇ ರಾಹುಲ್ ಮಹಾಜನ್ ತಮ್ಮ ಪ್ರೇಯಸಿ, ಪೈಲಟ್ ಶ್ವೇತಾಳನ್ನು ಮದುವೆಯಾಗಿದ್ದರು. ಈ ಬಹುಚರ್ಚಿತ ಮದುವೆ ನಡೆದು ಕೇವಲ ತಿಂಗಳೊಳಗೆ ಶ್ವೇತಾ ಅವರು ಗುಡಗಾಂವ್ ಕೋರ್ಟಿನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

2007: ಉತ್ತರ ಅಸ್ಸಾಮಿನ ಗೋಲಾಘಾಟ್ ಜಿಲ್ಲೆಯಲ್ಲಿ ಮಧ್ಯರಾತ್ರಿ ದೆಹಲಿಗೆ ತೆರಳುತ್ತಿದ್ದ ರಾಜಧಾನಿ ಎಕ್ಸ್ ಪ್ರೆಸ್ಸಿನಲ್ಲಿ ಶಕ್ತಿಶಾಲಿ ಬಾಂಬ್ ಸ್ಫೋಟಗೊಂಡು ಐವರು ಮೃತರಾದರು. 9 ಜನ ಗಾಯಗೊಂಡರು.

2007: ಛತ್ತೀಸ್ ಗಡದ ಬಸ್ತಾರ್ ಜಿಲ್ಲೆಯ ಬಿಶ್ರಮ್ ಪುರ್ ಪೊಲೀಸ್ ಠಾಣೆಯ ಮೇಲೆ ಸುಮಾರು ನೂರಕ್ಕೂ ಹೆಚ್ಚು ನಕ್ಸಲೀಯರು ದಾಳಿ ನಡೆಸಿ ಒಬ್ಬ ಅಧಿಕಾರಿ ಮತ್ತು ಇಬ್ಬರು ಕಾನ್ ಸ್ಟೇಬಲ್ಗಳನ್ನು ಹತ್ಯೆಗೈದರು. ಅತ್ಯಾಧುನಿಕ ಶಸ್ತ್ರಾಸ್ತ್ರ ಹೊಂದಿದ್ದ ಮಾವೋವಾದಿ ಸಂಘಟನೆಯ ಉಗ್ರರು ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಮನಬಂದಂತೆ ಗುಂಡು ಹಾರಿಸಿದ್ದರಿಂದ ಸ್ಥಳದಲ್ಲಿಯೇ ಮೂವರು ಸತ್ತರೆ, ಇನ್ನೊಬ್ಬ ಕಾನ್ ಸ್ಟೇಬಲ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದರು.

2007: 2001ರ ಡಿಸೆಂಬರ್ 13ರಂದು ಸಂಸತ್ತಿನ ಮೇಲೆ ಉಗ್ರರ ದಾಳಿ ನಡೆದಾಗ ಹುತಾತ್ಮರಾದ ಭದ್ರತಾ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಲು ನವದೆಹಲಿಯಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮೃತ ಯೋಧನ ಪತ್ನಿಯ ಅಳಲು ಹಾಗೂ ಕಣ್ಣೀರಿನಿಂದಾಗಿ ಮುಜುಗರ ಎದುರಿಸಬೇಕಾಯಿತು. ಭಯೋತ್ಪಾದಕರ ದಾಳಿಯಲ್ಲಿ ಮೃತರಾಗಿರುವ ಎ ಎಸ್ ಐ ನಾಯಕ ಚಂದ್ ಅವರ ಪತ್ನಿ ವಿಮಲಾ ದೇವಿ ಕಣ್ಣೀರುಹಾಕುತ್ತಲೇ ಎಲ್ಲರ ಎದುರು ತಮ್ಮ ಅಳಲು ತೋಡಿಕೊಂಡರು. ಪರಿಹಾರದ ಭಾಗವಾಗಿ ತಮಗೆ ನೀಡಲಾಗಿರುವ ಪೆಟ್ರೋಲ್ ಪಂಪ್ ಆರಂಭಿಸಲು ಸರ್ಕಾರ ಇನ್ನೂ ಜಾಗ ನೀಡಿಲ್ಲ. ಈ ಶ್ರದ್ಧಾಂಜಲಿ, ಗೌರವ ಬೇಕಿಲ್ಲ. ನನ್ನ ಬಳಿ ಏನೂ ಇಲ್ಲ, ನಮ್ಮ ಸಮಸ್ಯೆಯನ್ನು ಯಾರೂ ಆಲಿಸುತ್ತಿಲ್ಲ ಎಂದು ಆಕೆ ಹೇಳಿದರು.

2007: `ವಜ್ರಮಹೋತ್ಸವ' ಸಂಭ್ರಮದ 75ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಚಿತ್ರದುರ್ಗದಲ್ಲಿ ಸಂಘಟಿಸಲು ಉಡುಪಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯಕಾರಿ ಸಮಿತಿಯು ಗುಪ್ತ ಮತದಾನದ ಮೂಲಕ ನಿರ್ಧರಿಸಿತು.

2007: ಹೈದರಾಬಾದಿನ ಮೆಕ್ಕಾ ಮಸೀದಿ ಬಳಿ ಜಾಹೀರಾತು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ವಿವಾದಕ್ಕೆ ಸಂಬಂಧಿಸಿದಂತೆ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಕ್ಷಮೆಯಾಚಿಸಿದರು. ಅನುಮತಿ ಇಲ್ಲದೇ ಮಸೀದಿಯ ಆವರಣದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಕ್ಕೆ ಮಸೀದಿ ಆಡಳಿತ ಮಂಡಳಿಯು ಸಾನಿಯಾ ಹಾಗೂ ಜಾಹೀರಾತು ಸಂಸ್ಥೆಯ ವಿರುದ್ಧ ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಹೂಡಿತ್ತು. `ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಕ್ಕೆ' ಕ್ಷಮೆ ಯಾಚಿಸುವುದಾಗಿ ಸಾನಿಯಾ ಪೊಲೀಸ್ ಆಯುಕ್ತರಿಗೆ ಕಳುಹಿಸಿರುವ ಇ-ಮೇಲ್ ನಲ್ಲಿ ತಿಳಿಸಿದ್ದಲ್ಲದೆ ಮಸೀದಿಯ ಆಡಳಿತ ಮಂಡಳಿ ಬಳಿಯೂ ಕ್ಷಮೆಯಾಚಿಸಿದರು.

2006: ಶ್ರೀಗಂಧದ ಸುವಾಸನೆ ಬೀರುವ ಭಾರತದ ಮೊತ್ತ ಮೊದಲ ಅಂಚೆ ಚೀಟಿಯನ್ನು ಚೆನ್ನೈಯಲ್ಲಿ ಅಂಚೆ ಇಲಾಖೆ ಬಿಡುಗಡೆ ಮಾಡಿತು. 15 ರೂಪಾಯಿ ಮುಖಬೆಲೆಯ ಈ ಅಂಚೆ ಚೀಟಿಗೆ ಶ್ರೀಗಂಧವನ್ನು ಲೇಪಿಸಲಾಗಿದ್ದು, ಮೇಲ್ಭಾಗವನ್ನು ನವಿರಾಗಿ ಸವರಿದಾಗ ಸುವಾಸನೆ ಹೊರಬರುವುದು. ಶ್ರೀಗಂಧ ಭಾರತೀಯ ಸಂಸ್ಕೃತಿಯ ಭಾಗವೇ ಆಗಿರುವ ಕಾರಣ ಈ ಸ್ಮರಣಾರ್ಹ ಅಂಚೆ ಚೀಟಿ ಬಿಡುಗಡೆ ಮಾಡಲಾಯಿತು ಎಂದು ಅಂಚೆ ಇಲಾಖೆ ತಿಳಿಸಿತು.

2006: ಡಿಸ್ಕವರಿ ನೌಕೆಯ ಇಬ್ಬರು ಗಗನಯಾತ್ರಿಗಳಾದ ಅಮೆರಿಕದ ರಾಬರ್ಟ್ ಕರ್ಬೀಮ್ ಹಾಗೂ ಯುರೋಪಿನ ಕ್ರಿಸ್ಟರ್ ಫ್ಯೂಗಲ್ ಸಾಂಗ್ ನೌಕೆಯಿಂದ ಹೊರಬಂದು ಮೊದಲ ಸಲ ಬಾಹ್ಯಾಕಾಶದಲ್ಲಿ ನಡೆದಾಡಿದರು.

2006: ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ್ ಅವರನ್ನು ಪ್ರತಿಷ್ಠಿತ `ಫ್ರೆಂಚ್ ಪ್ರಶಸ್ತಿ'ಗೆ ಆಯ್ಕೆ ಮಾಡಲಾಗಿದೆ ಎಂದು ಮುಂಬೈಯಲ್ಲಿನ ಫ್ರೆಂಚ್ ರಾಯಭಾರ ಕಚೇರಿ ಪ್ರಕಟಿಸಿತು.

2006: ಸಂಸತ್ ಭವನದ ಮೇಲಿನ ದಾಳಿಯ ಅಪರಾಧಿ ಮಹಮ್ಮದ್ ಅಫ್ಜಲನಿಗೆ ನ್ಯಾಯಾಲಯದ ತೀರ್ಪಿನಂತೆ ಮರಣದಂಡನೆ ವಿಧಿಸಲು ಕೇಂದ್ರ ಸರ್ಕಾರ ಅನುಸರಿಸುತ್ತಿರುವ ವಿಳಂಬ ಧೋರಣೆಯನ್ನು ಪ್ರತಿಭಟಿಸಿ ದಾಳಿ ಸಂದರ್ಭದಲ್ಲಿ ಮೃತರಾದ ಭದ್ರತಾ ಸಿಬ್ಬಂದಿಗೆ ನೀಡಿದ ಶೌರ್ಯ ಪದಕಗಳನ್ನು ಅವರ ಕುಟುಂಬ ಸದಸ್ಯರು ರಾಷ್ಟ್ರಪತಿ ಭವನಕ್ಕೆ ಹಿಂತಿರುಗಿಸಿದರು.

2005: ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪಕ್ಕೆ ಗುರಿಯಾದ ಬಿಜೆಪಿ ಸಂಸದ ಡಾ. ಛತ್ರಪಾಲ್ ಸಿಂಗ್ ಅವರನ್ನು ರಾಜ್ಯಸಭೆಯಿಂದ ಅಮಾನತು ಮಾಡಲಾಯಿತು. ಲಂಚ ಪಡೆದ ಪಕ್ಷದ ಐವರು ಸದಸ್ಯರನ್ನು ಲೋಕಸಭೆಯಿಂದ ಅಮಾನತು ಮಾಡುವಂತೆ ಕೋರಲು ಬಿಜೆಪಿ ನಿರ್ಧರಿಸಿತು.

2005: ಯುರೇಕಾ ಫೋಬ್ಸ್ ಲಿಮಿಟೆಡ್ಡಿನ ಸುರಕ್ಷಿತ ನೀರು ಸಂಗ್ರಹ ಸಂಸ್ಕರಣೆ ಯಂತ್ರ ಅಕ್ವಾಸೂರ್ ಗೆ ಭಾರತದಲ್ಲಿನ ನೀರು ಸಂಸ್ಕರಣೆಯ ಅತ್ಯುನ್ನತ ತಂತ್ರಜ್ಞಾನದ ಪೇಟೆಂಟ್ ಲಭಿಸಿತು.

2005: ಮೈಸೂರು ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ಯೋಜನೆ ಕಾರ್ಯಗತಗೊಳಿಸುವಲ್ಲಿನ ಪ್ರಮುಖ ಅಡಚಣೆಯನ್ನು ಸುಪ್ರೀಂಕೋರ್ಟ್ ನಿವಾರಿಸಿತು. 2250 ಕೋಟಿ ರೂಪಾಯಿಗಳ ಕಾಮಗಾರಿ ಕೈಗೆತ್ತಿಕೊಳ್ಳಲು, ತನ್ನ ಸ್ವಾಧೀನದಲ್ಲಿ ಇರುವ ಜಮೀನನ್ನು ಮಾರಾಟ, ಪರಭಾರೆ ಅಥವಾ ಒತ್ತೆ ಇಡಲು ನಂದಿ ಇನ್ ಪ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈಸಸ್ ಲಿಮಿಟೆಡ್ ಗೆ (ನೈಸ್) ಕೋರ್ಟ್ ತನ್ನ ಪರಿಷ್ಕತ ಆದೇಶದಲ್ಲಿ ಅನುಮತಿ ನೀಡಿತು.

1981: ಸಾಲಿಡಾರಿಟಿ ಕಾರ್ಮಿಕ ಚಳವಳಿಯನ್ನು ಹತ್ತಿಕ್ಕುವ ಸಲುವಾಗಿ ಪೋಲಂಡಿನಲ್ಲಿ ಮಾರ್ಷಲ್ ಲಾ ಹೇರಲಾಯಿತು. ಈ ಮಾರ್ಷಲ್ ಲಾ 1983ರಲ್ಲಿ ಕೊನೆಗೊಂಡಿತು.

1904: ಈದಿನ ಲಂಡನ್ನಿನ ಮೆಟ್ರೋಪಾಲಿಟನ್ ರೈಲ್ವೇಯಲ್ಲಿ ಮೊತ್ತ ಮೊದಲ ವಿದ್ಯುತ್ ರೈಲುಸೇವೆ ಆರಂಭವಾಯಿತು.

1816: ವೆರ್ನರ್ ವೋನ್ ಸೀಮೆನ್ಸ್ (1816-1892) ಹುಟ್ಟಿದ ದಿನ. ಜರ್ಮನ್ ಎಲೆಕ್ಟ್ರಿಕಲ್ ಎಂಜಿನಿಯರ್ ಆದ ಈತ ಟೆಲಿಗ್ರಾಫ್ ಉದ್ಯಮ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ.ಮೆಡಿಟರೇನಿಯನ್ ಉದ್ದಕ್ಕೆ ಹಾಗೂ ಯುರೋಪಿನಿಂದ ಭಾರತಕ್ಕೆ ಕೇಬಲ್ಲುಗಳನ್ನು ಅಳವಡಿಸಿದ ವ್ಯಕ್ತಿ ಈತ.

1642: ಡಚ್ ನಾವಿಕ ಅಬೆಲ್ ಟಾಸ್ಮಾನ್ ಈದಿನ ನ್ಯೂಜಿಲ್ಯಾಂಡಿಗೆ ಆಗಮಿಸಿದ.

1577: ಇಂಗ್ಲೆಂಡಿನ ಫ್ರಾನ್ಸಿಸ್ ಡ್ರೇಕ್ ಈದಿನ ಗೋಲ್ಡನ್ ಹಿಂದ್ ನ ಪ್ಲೈಮೌತ್ನಿಂದ ಜಗತ್ತಿಗೆ ಸುತ್ತು ಹಾಕುವ ಸಲುವಾಗಿ ಯಾನ ಹೊರಟ. ಜಗತ್ತಿಗೆ ಸುತ್ತು ಹಾಕಲು ಆತ ಮೂರೂವರೆ ವರ್ಷಗಳ ಕಾಲ ಯಾನ ಮಾಡಿದ.

1553: ಫ್ರಾನ್ಸಿನ ಮೊದಲ ಬೋರ್ಬೋನ್ ದೊರೆ ನಾಲ್ಕನೇ ಹೆನ್ರಿ (1553-1610) ಹುಟ್ಟಿದ ದಿನ. ಫ್ರಾನ್ಸನ್ನು ಏಕೀಕರಣಗೊಳಿಸಿ ಪ್ಯಾರಿಸ್ಸನ್ನು ಗೆಲ್ಲುವ ಸಲುವಾಗಿ ಈತ ಫ್ರೆಂಚರನ್ನು ರೋಮನ್ ಕ್ಯಾಥೋಲಿಕ್ ಗೆ ಮತಾಂತರಿಸಿದ.

No comments:

Advertisement