Saturday, January 16, 2010

ಇಂದಿನ ಇತಿಹಾಸ History Today ಡಿಸೆಂಬರ್ 16

ಇಂದಿನ ಇತಿಹಾಸ

ಡಿಸೆಂಬರ್ 16

ತೆಲುಗು ಚಲನಚಿತ್ರ ರಂಗದ ಉದಯೋನ್ಮುಖ ನಟಿ ಭಾರ್ಗವಿ ಅವರನ್ನು ಹತ್ಯೆ ಮಾಡಿರುವ ಜೊತೆಗಾರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ ನಗರದಲ್ಲಿ ನಡೆಯಿತು. ಭಾರ್ಗವಿ ಅವರ ಬಂಜಾರ ಹಿಲ್ ಫ್ಲ್ಯಾಟ್‌ನಲ್ಲಿ ಜೋಡಿ ಶವಗಳ ಜೊತೆಗೆ ್ಗಳಿ ವಿಷದ ಖಾಲಿ ಬಾಟಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದರು. ಜೊತೆಗಾರ ಪ್ರವೀಣ್ ಕುಮಾರ್ ಮೊದಲು ಭಾರ್ಗವಿಯನ್ನು ಹತ್ಯೆ ಮಾಡಿ ನಂತರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ.

2008: ಭಯೋತ್ಪಾದನೆ ವಿರುದ್ಧದ ಸಮರವನ್ನು ಇನ್ನಷ್ಟು ತೀಕ್ಷ್ಣಗೊಳಿಸುವ ಉದ್ದೇಶದಿಂದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸ್ಥಾಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿತು. ಉಗ್ರಗಾಮಿಗಳ ಪ್ರಕರಣಗಳನ್ನು ತ್ವರಿತವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆ ವಿಧಿಸುವುದಕ್ಕೆ ಅವಕಾಶ ನೀಡುವ ಹಾಗೂ ಭಯೋತ್ಪಾದನೆ ನಿಗ್ರಹ ಕಾನೂನುಗಳ ದುರ್ಬಳಕೆ ತಡೆಗಟ್ಟುವ ಕಾನೂನುಬಾಹಿರ ಚಟುವಟಿಕೆ (ನಿಯಂತ್ರಣ) ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಇದರ ಪ್ರಕಾರ ರಾಷ್ಟ್ರೀಯ ತನಿಖಾ ಸಂಸ್ಥೆ ಮಸೂದೆಯು ದೇಶದೆಲ್ಲೆಡೆ ನಡೆಯುವ ಭಯೋತ್ಪಾದನೆ ಮತ್ತು ರಾಷ್ಟ್ರಮಟ್ಟದ ಪರಿಣಾಮ ಬೀರುವ ಇತರ ಅಪರಾಧಗಳ ಬಗ್ಗೆ ತನಿಖೆ ನಡೆಸುವ ತನಿಖಾ ಸಂಸ್ಥೆಯೊಂದರ ಸ್ಥಾಪನೆಗೆ ಅವಕಾಶ ಮಾಡಿಕೊಡಲಿದೆ.

2008: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಮುರಕಿಬಾವಿ ಗ್ರಾಮದಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಎರಡನೇ ತ್ವರಿತಗತಿ ನ್ಯಾಯಾಲಯವು ಒಂಬತ್ತು ಮಂದಿ ಆರೋಪಿಗಳಿಗೆ ಮರಣ ದಂಡನೆ ಹಾಗೂ ಆರು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿತು. ಕುಡಿಯುವ ನೀರಿಗೆ ಸಂಬಂಧಿಸಿದಂತೆ 2005ರ ಆ.30 ರಂದು 2 ಕುಟುಂಬಗಳ ಮಧ್ಯೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಒಬ್ಬ ಮಹಿಳೆ ಸೇರಿ ನಾಲ್ವರ ಕಗ್ಗೊಲೆಯಲ್ಲಿ ಅಂತ್ಯ ಕಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಧೀಶ ಸಿ.ಆರ್. ಜಾವೀದ್ ಪಾಷಾ ಅವರು ಈದಿನ ಶಿಕ್ಷೆ ಪ್ರಕಟಿಸಿದರು. ಒಟ್ಟು 66 ಸಾಕ್ಷ್ಯಗಳನ್ನು ಆಲಿಸಿದ ನ್ಯಾಯಾಲಯ ಆರೋಪಿಗಳಾದ ಸುಂದರೇಶ ಉಡಕೇರಿ, ಸಿದಟಪ್ಪ ರೇವಣ್ಣವರ, ಸಿದಟಲಿಂಗಪ್ಪ ರೇವಣ್ಣವರ, ಕಲ್ಮೇಶ ಉಡಕೇರಿ, ರಾಜಶೇಖರ ಉಡಕೇರಿ, ಭಗವಂತ ಉಡಕೇರಿ, ಚಂದ್ರನಾಯಕ ರೇವಣ್ಣವರ, ಈರಪ್ಪ ಉಡಕೇರಿ, ಶಂಕರಪ್ಪ ಉಡಕೇರಿ ಅವರಿಗೆ ಮರಣ ದಂಡನೆ ವಿಧಿಸಿತು. ಅಲ್ಲದೇ ಉಳಿದ ಆರೋಪಿಗಳಾದ ಮಲ್ಲವ್ವ ರೇವಣ್ಣವರ, ಗೌರವ್ವ ಉಡಕೇರಿ, ಬಸವಣ್ಣೆಪ್ಪ ಉಡಕೇರಿ, ನಾಗಪ್ಪ ಉಡಕೇರಿ, ಸಕ್ರನಾಯಕ ರೇವಣ್ಣವರ, ದೊಡ್ಡನಾಯಕ ರೇವಣ್ಣವರ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತು..

2008: ಶನಿಯ ಪುಟ್ಟ ಉಪಗ್ರಹವಾದ 'ಎನ್‌ಸೆಲ್‌ಡಸ್'ನಲ್ಲಿ ಸಕ್ರಿಯ ಜಗತ್ತಿನ ಕುರುಹುಗಳಿರುವುದಾಗಿ ನಾಸಾ ವಿಜ್ಞಾನಿಗಳು ತಿಳಿಸಿದರು. ಶನಿ ಹಾಗೂ ಅದರ ಉಪಗ್ರಹಗಳ ವಿವರ ಸಂಗ್ರಹಿಸುವ ಕ್ಯಾಸಿನಿ ಅಂತರಿಕ್ಷ ನೌಕೆ ಈ ವಿವರಗಳನ್ನು ಸಂಗ್ರಹಿಸಿದೆ. ಕ್ಯಾಸಿನಿ ರವಾನಿಸಿದ ಛಾಯಾಚಿತ್ರಗಳಿಂದ 'ಎನ್‌ಸೆಲ್‌ಡಸ್'ನ ದಕ್ಷಿಣ ಧ್ರುವ ಪ್ರದೇಶ ಆಗಾಗ್ಗೆ ಬಗದಲಾವಣೆಗೆ ಒಳಪಡುತ್ತದೆ ಎಂಬುದು ಸ್ಪಷ್ಟವಾಯಿತು. ದಕ್ಷಿಣ ಧ್ರುವ ಪ್ರದೇಶದಲ್ಲಿ ಸಮೀಪದಿಂದ ಸೆರೆಹಿಡಿದ ಛಾಯಾಚಿತ್ರಗಳು ಅಲ್ಲಿ ನೀರಿನ ಆವಿ, ಹಿಮಕಣ ಇರುವುದನ್ನು ತೋರಿಸಿದೆ. ಅಲ್ಲದೇ ಭೂಮಿಯ ಮಾದರಿಯಲ್ಲಿ ಅಲ್ಲಿನ ನೆಲ ಸಹ ಹಲವು ಫಲಕಗಳಿಂದ ನಿರ್ಮಾಣಗೊಂಡಿದೆ ಎಂಬುದನ್ನು ತೋರಿಸಿದೆ ಎಂದು ವಿಜ್ಞಾನಿಗಳು ತಿಳಿಸಿದರು. ಭೂಮಿಯ ಧ್ರುವ ಪ್ರದೇಶಗಳಲ್ಲಿ ಹಿಮಗಡ್ಡೆ ಹಾಗೂ ಫಲಕಗಳು ಚಲಿಸಿದಂತೆ 'ಎನ್‌ಸೆಲ್‌ಡಸ್'ನಲ್ಲಿಯೂ ಹಿಮಫಲಕಗಳು ಚಲಿಸುತ್ತವೆ. ಆದರೆ, ಅಲ್ಲಿ ಕನ್ವೇಯರ್ ಬೆಲ್ಟ್ ಮಾದರಿಯಲ್ಲಿ ಒಂದೇ ದಿಕ್ಕಿನಲ್ಲಿ ಹಿಮಫಲಕಗಳು ಚಲಿಸುತ್ತವೆ ಎಂದು ವಿಜ್ಞಾನಿಗಳು ವಿವರಿಸಿದರು.

2008: ತೆಲುಗು ಚಲನಚಿತ್ರ ರಂಗದ ಉದಯೋನ್ಮುಖ ನಟಿ ಭಾರ್ಗವಿ ಅವರನ್ನು ಹತ್ಯೆ ಮಾಡಿರುವ ಜೊತೆಗಾರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ ನಗರದಲ್ಲಿ ನಡೆಯಿತು. ಭಾರ್ಗವಿ ಅವರ ಬಂಜಾರ ಹಿಲ್ ಫ್ಲ್ಯಾಟ್‌ನಲ್ಲಿ ಜೋಡಿ ಶವಗಳ ಜೊತೆಗೆ ್ಗಳಿ ವಿಷದ ಖಾಲಿ ಬಾಟಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದರು. ಜೊತೆಗಾರ ಪ್ರವೀಣ್ ಕುಮಾರ್ ಮೊದಲು ಭಾರ್ಗವಿಯನ್ನು ಹತ್ಯೆ ಮಾಡಿ ನಂತರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ. ಆತನ ಬಳಿ ಮರಣ ಪತ್ರವೂ ದೊರೆತಿದೆ. 2006ರಿಂದ ಅವರಿಬ್ಬರೂ ಸಹಜೀವನ ನಡೆಸುತ್ತಿದ್ದರು. ಇತ್ತೀಚೆಗೆ ಆಕೆ ತನ್ನ ಬಗ್ಗೆ ತಾತ್ಸಾರ ಧೋರಣೆ ತಳೆದದ್ದರಿಂದ ಈ ಕೃತ್ಯ ಎಸಗಿರುವುದಾಗಿ ಪ್ರವೀಣ್ ಕುಮಾರ್ ಬರೆದಿಟ್ಟ ಪತ್ರವೋ ಪೊಲೀಸರಿಗೆ ಲಭಿಸಿತು.

2008: ಲೋಕಸಭೆಯಲ್ಲಿ ಜುಲೈ 22ರಂದು ನಡೆದ ವಿಶ್ವಾಸಮತ ಗೊತ್ತುವಳಿ ಮೇಲಿನ ಮತದಾನದ ಸಂದರ್ಭದಲ್ಲಿ ಹಣದ ಆಮಿಷ ಒಡ್ಡಿದ ಪ್ರಕರಣದಲ್ಲಿ ಹೆಸರಿಸಲಾದ ಮೂವರ ವಿರುದ್ಧ ಗೃಹ ಸಚಿವಾಲಯದಿಂದ ತನಿಖೆ ನಡೆಸಲು ಸ್ಪೀಕರ್ ಸೋಮನಾಥ ಚಟರ್ಜಿ ಶಿಫಾರಸು ಮಾಡಿದರು. ಪ್ರಕರಣದ ಬಗ್ಗೆ ತನಿಖೆ ನಡೆಸಿದ ಸಂಸದೀಯ ಸಮಿತಿ ತನ್ನ ವರದಿ ಮಂಡಿಸಿದ ಮರುದಿನವೇ ಸ್ಪೀಕರ್ ಅವರು ಈ ಕ್ರಮ ಕೈಗೊಂಡರು. ಅದರಂತೆ ಸಮಾಜವಾದಿ ಪಕ್ಷದ ನಾಯಕ ಅಮರ್ ಸಿಂಗ್ ಅವರ ಸಹಾಯಕ ಸಂಜೀವ್ ಸಕ್ಸೇನಾ, ಬಿಜೆಪಿ ನಾಯಕ ಎಲ್. ಕೆ. ಅಡ್ವಾಣಿ ಅವರ ಸಹಾಯಕ ಸುಧೀಂದ್ರ ಕುಲಕರ್ಣಿ ಮತ್ತು ಚಾಲಕ ಸುಹೈಲ್ ಹಿಂದೂಸ್ತಾನಿ ವಿರುದ್ಧ ತನಿಖಾ ಸಂಸ್ಥೆಯೊಂದರಿಂದ ತನಿಖೆ ನಡೆಯುವುದು ಬಹುತೇಕ ಖಚಿತವಾಯಿತು. ವಿ. ಕಿಶೋರ್‌ಚಂದ್ರ ದೇವ್ ನೇತೃತ್ವದ ಸಮಿತಿ ತನ್ನ ವರದಿಯಲ್ಲಿ ಎಸ್‌ಪಿ ನಾಯಕ ಅಮರ್ ಸಿಂಗ್ ಮತ್ತು ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರು ದೋಷಮುಕ್ತರು ಎಂದು ಹೇಳಿತ್ತು.

2008: ಖ್ಯಾತ ಇತಿಹಾಸ ತಜ್ಞ ಪ್ರೊ. ಎಸ್.ಶೆಟ್ಟರ್ ಅವರಿಗೆ 2007ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ 'ಭಾಷಾ ಸಮ್ಮಾನ್' ಪ್ರಶಸ್ತಿ ದೊರೆಕಿತು. ಪುರಾತನ ಮತ್ತು ಮಧ್ಯಕಾಲೀನ ಇತಿಹಾಸಕ್ಕೆ ಸಂಬಂಧಿಸಿದಂತೆ ಶೆಟ್ಟರ್ ಕೈಗೊಂಡಿರುವ ಸಂಶೋಧನೆಗಳು, ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು ಮತ್ತು ಕಂಚಿನ ಪದಕವನ್ನು ಒಳಗೊಂಡಿರುತ್ತದೆ. ಶೆಟ್ಟರ್ ಅವರ ಇತ್ತೀಚಿನ 'ಸಂಗಮ್ ತಮಿಳಗಂ ಮತ್ತು ಕನ್ನಡ ನಾಡು ನುಡಿ' ಪುಸ್ತಕದ ಮೂಲಕ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಇತಿಹಾಸಕ್ಕೆ ನೀಡಿರುವ ಸಮಗ್ರವಾದ ಕೊಡುಗೆಯನ್ನು ಸಹ ಪರಿಗಣಿಸಲಾಗಿದೆ ಎಂದು ಅಕಾಡೆಮಿಯ ಮೂಲಗಳು ತಿಳಿಸಿದವು.

2007: ಮಾವೊವಾದಿ ಪೀಡಿತ ಛತ್ತೀಸ್ ಗಢ ರಾಜ್ಯದ ದಾಂತೆವಾಡ ಜಿಲ್ಲಾ ಜೈಲಿನಿಂದ 105 ನಕ್ಸಲರು ಸೇರಿದಂತೆ ಸುಮಾರು 299 ಕೈದಿಗಳು ಪರಾರಿಯಾದರು. ಸಂಜೆ 4.35ರ ಸುಮಾರಿಗೆ ಊಟ ನೀಡುತ್ತಿದ್ದಾಗ ನಕ್ಸಲ್ ಕಮಾಂಡರ್ ಸುಜಿತ್ ಕುಮಾರ್ ಜೈಲು ಸಿಬ್ಬಂದಿಯ ಬಂದೂಕು ಕಸಿದುಕೊಂಡು ಗುಂಡು ಹಾರಿಸಿದ. ಆಗ ಸಂಭವಿಸಿದ ಗದ್ದಲದಲ್ಲಿ ಇತರ ಕೈದಿಗಳು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದರು. 15 ನಿಮಿಷಗಳ ಘರ್ಷಣೆ ಬಳಿಕ ಪರಾರಿಯಾಗುವ ಮುನ್ನ ಕೈದಿಗಳು ಪೊಲೀಸರಿಂದ ಬಂದೂಕು ಕಸಿದುಕೊಂಡರು.

2007: ಪುಸಾದ ರಾಜೇಂದ್ರ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಬಿಹಾರದ ಕೊತಿಯಾ ಗ್ರಾಮವನ್ನು ಪ್ರಪ್ರಥಮ ಜೈವಿಕ ಕೃಷಿ ಗ್ರಾಮವನ್ನಾಗಿ ಪರಿವರ್ತಿಸಿರುವುದನ್ನು ಬಹಿರಂಗಪಡಿಸಿದರು. ರಾಸಾಯನಿಕಗಳ ಬಳಕೆಯಿಂದಾಗಿ ಕೃಷಿ ಭೂಮಿಯ ಮೇಲಾಗುವ ವ್ಯತಿರಿಕ್ತ ಪರಿಣಾಮ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕೃಷಿ ವಿವಿ ಈ ಗ್ರಾಮದಲ್ಲಿ ವಿಶೇಷ ಅಭಿಯಾನ ಹಮ್ಮಿಕೊಂಡಿತ್ತು. ಕೃಷಿ ಭೂಮಿಗೆ ಹೆಚ್ಚು ಜೈವಿಕ ಗೊಬ್ಬರ ಬಳಸಲು ಬಡ ರೈತರಿಗೆ ಉತ್ತೇಜನ ನೀಡುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿತ್ತು. ಇದೀಗ ಕೊತಿಯಾ ಗ್ರಾಮದಲ್ಲಿ ಒಟ್ಟು 70 ರೈತರು ಜೈವಿಕ ಕೃಷಿ ಮಾಡುವ ಮೂಲಕ ಈ ಗ್ರಾಮವನ್ನು ಬಿಹಾರದಲ್ಲೇ ಪ್ರಪ್ರಥಮ ಜೈವಿಕ ಕೃಷಿ ಗ್ರಾಮವನ್ನಾಗಿ ಪರಿವರ್ತಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಎಂದು ವಿವಿಯ ಹಿರಿಯ ಕೃಷಿ ವಿಜ್ಞಾನಿ ಡಾ. ಆರ್. ಕೆ. ಸೊಹಾನೆ ಹೇಳಿದರು.

2007: ಜಗತಾಪ ಏರಿಕೆ (ಜಾಗತಿಕ ತಾಪಮಾನ) ತಡೆಗಟ್ಟಲು ಅಳಿಲು ಸೇವೆಯಾಗಿ ಬೆಂಗಳೂರು ಕನಕಪುರ ರಸ್ತೆಯ ಟೆಂಪಲ್ ಟ್ರೀ ಅಪಾರ್ಟ್ಮೆಂಟ್ (ಎಫ್ ಬ್ಲಾಕ್) ನಿವಾಸಿಗಳು ಈದಿನ ಸಂಜೆ 7.30 ರಿಂದ 9 ಗಂಟೆಯ ತನಕ ವಿದ್ಯುತ್ ದೀಪಗಳನ್ನು ಆರಿಸಿ ಆದರ್ಶ ಮೆರೆದರು. 50 ಮನೆಗಳಿರುವ ಈ ಅಪಾರ್ಟ್ ಮೆಂಟಿನಲ್ಲಿನ ಸುಮಾರು 25 ಮನೆಗಳ ಮಂದಿ ಈ ಅಭಿಯಾನದಲ್ಲಿ ಪಾಲ್ಗೊಂಡರು. ಸರಿಯಾಗಿ 7.30ಕ್ಕೆ ಎಲ್ಲಾ ವಿದ್ಯುತ್ ದೀಪಗಳನ್ನು ಆರಿಸಿದ ನಿವಾಸಿಗಳು ಕತ್ತಲೆ ಓಡಿಸಲು ಮೇಣದ ಬತ್ತಿ ಉರಿಸಿದರು. ಕೇವಲ 2 ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟೆಂಪಲ್ ಟ್ರೀ ಅಪಾಟರ್್ಮೆಂಟ್ಸ್ ಅಸೋಸಿಯೇಷನ್ ಈ ಸಾಧ್ಯತೆಯನ್ನು ಮಾಡಿ ತೋರಿಸಿತು.

2007: ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿ ನಾಲ್ಕು ತಿಂಗಳು ಕಳೆದ ನಂತರ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ರಾಜಧಾನಿಯಲ್ಲಿ ಅಧಿಕೃತ ವಸತಿ ಕಲ್ಪಿಸಿಕೊಡಲಾಯಿತು. 2007ರ ಜುಲೈ 25 ರಂದು ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿದ ಬಳಿಕ ಕಲಾಂ ಅವರು, ಸೇನಾಧಿಕಾರಿಗಳು ವಾಸಿಸುವ ದೆಹಲಿ ದಂಡು ಪ್ರದೇಶದ ವಸತಿಗೃಹದಲ್ಲಿ ನೆಲೆಸಿದ್ದರು. ಈಗ `10 ರಾಜಾಜಿ ಮಾರ್ಗ'ದಲ್ಲಿ ವಸತಿ ಕಲ್ಪಿಸಿಕೊಡಲಾಗಿದ್ದು, ಕಲಾಂ ತಮ್ಮ ಹೊಸ ಅಧಿಕೃತ ನಿವಾಸಕ್ಕೆ ವಾಸ್ತವ್ಯ ಬದಲಾಯಿಸಿದರು.

2007: ವರದಕ್ಷಿಣೆ ಹಿಂಸೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಯಸ್ಕ ಪುರುಷರನ್ನು ಮಾತ್ರ ವಿಚಾರಣೆಗೆ ಒಳಪಡಿಸಬಹುದೇ ಹೊರತು ಕುಟುಂಬದ ಇತರ ಮಹಿಳೆಯರನ್ನಲ್ಲ ಎಂದು ದೆಹಲಿ ನ್ಯಾಯಾಲಯ ಹೇಳಿತು. ತನ್ನ ಪತಿ, ಆತನ ಇಬ್ಬರು ಸೋದರಿಯರು ಹಾಗೂ ಆತನ ತಾಯಿಯ ವಿರುದ್ಧ ಸುನೀಲ್ ಕುಮಾರ್ ಎಂಬವರ ಪತ್ನಿ ಹೂಡಿದ್ದ ವರದಕ್ಷಿಣೆ ಹಿಂಸೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶ ದೇವಿಂದರ್ ಕುಮಾರ್ ಜಂಗಾಲಾ `ಕೌಟುಂಬಿಕ ಹಿಂಸೆ ತಡೆ ಕಾಯಿದೆ' ಕುರಿತು ಈ ವಿವರಣೆ ನೀಡಿದರು. ವರದಕ್ಷಿಣೆ ಕಾಯಿದೆ ಪ್ರಕಾರ `ಪ್ರತಿವಾದಿ' ಎಂದರೆ ದೂರು ನೀಡಿದ ಮಹಿಳೆ ಜತೆಗೆ ಕೌಟುಂಬಿಕ ಸಂಬಂಧ ಹೊಂದಿರುವ ವಯಸ್ಕ ಪುರುಷರು ಎಂದರ್ಥ. ಪ್ರತಿವಾದಿಯ ಕುಟುಂಬದ ಮಹಿಳೆಯರ ಹಿತರಕ್ಷಣೆಯನ್ನೂ ಇದು ಒಳಗೊಂಡಿದೆ ಎಂದ ಅವರು, ಪ್ರಕರಣದಲ್ಲಿ ಹೆಸರಿಸಲಾದ ಮಹಿಳೆಯರ ವಿರುದ್ಧದ ವಿಚಾರಣೆಯನ್ನು ತಳ್ಳಿ ಹಾಕಿದರು.

2007: ನಾರಾಯಣ ಕಾರ್ತಿಕೇಯನ್ ಅವರು ಚೀನಾದ ಜುಹಾಯ್ ಅಂತಾರಾಷ್ಟ್ರೀಯ ರೇಸಿಂಗ್ ಸರ್ಕಿಟಿನಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದುಕೊಳ್ಳುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದರು. ಇದೇ ವೇಳೆ ಅವರು ಭಾರತಕ್ಕೆ ಮೊತ್ತ ಮೊದಲ `ಎ 1 ಜಿಪಿ' ಪ್ರಶಸ್ತಿಯನ್ನು ಗೆದ್ದುಕೊಟ್ಟರು. ವಿಲಿಯಮ್ಸ್ ಟೆಸ್ಟ್ ಡ್ರೈವರ್ ಆಗುವಲ್ಲಿ ವಿಫಲರಾಗಿದ್ದ ಕಾರ್ತಿಕೇಯನ್ ಅವರು ಸರ್ಕಿಟಿನಲ್ಲಿ ಮಿಂಚು ಹರಿಸಿದರು. ಕಾರ್ತಿಕೇಯನ್ ಅವರು ಒಂದು ಗಂಟೆ 8 ನಿಮಿಷ 30.759 ಸೆಕೆಂಡುಗಳಲ್ಲಿ ದೂರವನ್ನು ಕ್ರಮಿಸಿದರು. ಇದರೊಂದಿಗೆ ಭಾರತ ಎ 1 ಗ್ರ್ಯಾಂಡ್ ಪ್ರೀಯಲ್ಲಿ ಪ್ರಶಸ್ತಿ ಗೆದ್ದ ಹದಿನಾಲ್ಕನೇ ರಾಷ್ಟ್ರ ಎನ್ನುವ ಖ್ಯಾತಿಗೆ ಪಾತ್ರವಾಯಿತು.

2006: ಕೇರಳದಲ್ಲಿ ನಕ್ಸಲೀಯ ಚಳವಳಿಯ ಮುಂಚೂಣಿಯಲ್ಲಿದ್ದ ಹಿರಿಯ ನಾಯಕಿ ಮಂದಾಕಿನಿ ನಾರಾಯಣನ್ (81) ಕೋಯಿಕ್ಕೋಡಿನ ತಮ್ಮ ನಿವಾಸದಲ್ಲಿ ಈದಿನ ಬೆಳಗ್ಗೆ ನಿಧನರಾದರು. ಮೂಲತಃ ಗುಜರಾತಿಯಾದ ಮಂದಾಕಿನಿ, 1968ರಲ್ಲಿ ತಲಶ್ಶೇರಿ -ಪುಲಪಲ್ಲಿ ಪ್ರಕರಣ ಎಂದೇ ಖ್ಯಾತಿ ಪಡೆದ ಕೇರಳದ ಮೊತ್ತ ಮೊದಲ ನಕ್ಸಲೀಯ ದಾಳಿಯಲ್ಲಿ ಪತಿ ನಾರಾಯಣನ್ ಮತ್ತು ಪುತ್ರಿ ಅಜಿತಾ ಜೊತೆಗೆ ಪಾಲ್ಗೊಂಡಿದ್ದರು. 1968ರ ನವೆಂಬರ್ 22ರಂದು ಸುಮಾರು 300 ಮಂದಿಯ ಸಶಸ್ತ್ರ ತಂಡ ತಲಶ್ಶೇರಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಲು ವಿಫಲ ಯತ್ನ ನಡೆಸಿತು. 48 ಗಂಟೆಗಳ ಬಳಿಕ ರೈತ ಕ್ರಾಂತಿಕಾರಿಗಳ ಗುಂಪೊಂದು ವೇನಾಡಿನ ಪುಲಪಲ್ಲಿಯಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ ಪೊಲೀಸ್ ವೈರ್ ಲೆಸ್ ಆಪರೇಟರನನ್ನು ಕೊಂದು ಇತರ ಹಲವರನ್ನು ಗಾಯಗೊಳಿಸಿತ್ತು. 1970ರಲ್ಲಿ ಒಮ್ಮೆ ಮತ್ತು 1975ರ ತುರ್ತು ಪರಿಸ್ಥಿತಿ ಕಾಲದಲ್ಲಿ ಇನ್ನೊಮ್ಮೆ ಮಂದಾಕಿನಿ ಅವರನ್ನು ಬಂಧಿಸಲಾಗಿತ್ತು. ಗುಜರಾತಿನ ಭಾವನಗರದ ಬ್ರಾಹ್ಮಣ ಕುಟುಂಬ ಒಂದರಲ್ಲಿ ಜನಿಸಿದ ಮಂದಾಕಿನಿ ಮುಂಬೈಯಲ್ಲಿ ಇದ್ದಾಗ ಕಮ್ಯೂನಿಸಂ ಕಡೆಗೆ ಆಕರ್ಷಿತರಾದರು. ಅಲ್ಲೇ ಅವರಿಗೆ, ಮುಂದೆ ಪತಿಯಾದ ಮಲಯಾಳಿ ನಾರಾಯಣನ್ ಭೇಟಿಯೂ ಆಯಿತು. ಮದುವೆಯ ಬಳಿಕ ಅವರು ಕೋಯಿಕ್ಕೋಡಿನಲ್ಲಿ ನೆಲೆಸಿದರು. ಅಲ್ಲಿ ಮಂದಾಕಿನಿ ಗುಜರಾತಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದರು. ಕೇರಳದಲ್ಲಿ ನಕ್ಸಲೀಯ ಚಳವಳಿಯ ಕಾವು ತಗ್ಗಿದ ಬಳಿಕ ಮಂದಾಕಿನಿ ಮಾನವ ಹಕ್ಕುಗಳ ಚಳವಳಿ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಎಡಪಂಥೀಯ ಮಹಿಳಾ ಹಕ್ಕುಗಳ ಗುಂಪುಗಳು ಮಂದಾಕಿನಿಯನ್ನು ಅಮ್ಮನಂತೆ ಆದರಿಸಿದವು.

2006: ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿ ಸಂಸತ್ ಸದಸ್ಯ ಡಿ.ವಿ. ಸದಾನಂದ ಗೌಡ ಮುಂದಿನ ಮೂರು ವರ್ಷಗಳ ಅವಧಿಗೆ ಪುನರಾಯ್ಕೆಗೊಂಡರು.

2006: ನೇಪಾಳದ ದೊರೆ ಜ್ಞಾನೇಂದ್ರ ಅವರನ್ನು ಪದಚ್ಯುತಗೊಳಿಸಲು ಹಾಗೂ ಸಂವಿಧಾನ ರಚನಾ ಸಭೆಗೆ ಜೂನ್ ತಿಂಗಳಲ್ಲಿ ಚುನಾವಣೆ ನಡೆಯುವವರೆಗೆ ಪ್ರಧಾನಿ ಕೊಯಿರಾಲಾ ಅವರು ದೇಶದ ಮುಖ್ಯ ಕಾರ್ಯ ನಿರ್ವಾಹಕರಾಗಿ ಕಾರ್ಯ ನಿರ್ವಹಿಸಬೇಕು ಎಂಬ ಒಮ್ಮತದ ತೀರ್ಮಾನಕ್ಕೆ ಪ್ರಮುಖ ರಾಜಕೀಯ ಪಕ್ಷಗಳು ಬಂದವು.

2005: ಖ್ಯಾತ ಉಕ್ಕು ಉದ್ಯಮಿ ಲಕ್ಷ್ಮಿ ನಿವಾಸ ಮಿತ್ತಲ್ 2000 ಕೋಟಿ ಆಸ್ತಿಯೊಂದಿಗೆ ಭಾರತದ ಅತಿ ಹೆಚ್ಚು ಶ್ರೀಮಂತರ ಪಟಿಯಲ್ಲಿ ಮೊದಲ ಸ್ಥಾನ ಪಡೆದರು. ವಿಪ್ರೋ ಸಂಸ್ಥೆಯ ಮುಖ್ಯಸ್ಥ ಅಜೀಂ ಪ್ರೇಮ್ ಜಿ 1100 ಕೋಟಿ ಬೆಲೆಯ ಆಸ್ತಿಯೊಂದಿಗೆ ದ್ವಿತೀಯ ಸ್ಥಾನವನ್ನೂ, 700 ಕೋಟಿ ಆಸ್ತಿಯೊಂದಿಗೆ ಮುಖೇಶ ಅಂಬಾನಿ ತೃತೀಯ ಸ್ಥಾನವನ್ನೂ, 550 ಕೋಟಿ ರೂಪಾಯಿ ಬೆಲೆಯ ಆಸ್ತಿಯೊಂದಿಗೆ ಅನಿಲ್ ಅಂಬಾನಿ ಚತುರ್ಥ ಸ್ಥಾನವನ್ನೂ ಪಡೆದರು. ಫೋಬ್ಸ್ ನಿಯತಕಾಲಿಕ ಭಾರತದ 40 ಶ್ರೀಮಂತರ ಈ ಪಟ್ಟಿಯನ್ನು ಪ್ರಕಟಿಸಿತು.

2005: ಹಿರಿಯ ವಿದ್ವಾಂಸ ಪ್ರೊ. ಎಸ್. ಕೆ. ರಾಮಚಂದ್ರರಾವ್, ಚಿತ್ರನಟ ವಿಷ್ಣುವರ್ಧನ್, ನೃತ್ಯಗುರು ಮಾಯಾರಾವ್ ಹಾಗೂ ಕಲಾವಿದ ಬಾಲು ಅವರಿಗೆ ಗೌರವ ಡಾಕ್ಟರೇಟ್ ನೀಡುವ ಪ್ರಸ್ತಾವಕ್ಕೆ ಬೆಂಗಳೂರು ವಿವಿ ಅಕೆಡಮಿಕ್ ಕೌನ್ಸಿಲ್ ಒಪ್ಪಿಗೆ ನೀಡಿತು.

2005: ಸಂಸತ್ ಭವನವನ್ನು ಸ್ಫೋಟಿಸುವುದಾಗಿ ತಿರುನಲ್ವೇಲಿಯಿಂದ ಬಂದ ಮಿಂಚಂಚೆ (ಇ-ಮೇಲ್) ಪರಿಣಾಮವಾಗಿ ಸಂಸತ್ತಿನ ಉಭಯ ಸದನಗಳ ಕಲಾಪವನ್ನು ದಿಢೀರನೆ ಸ್ಥಗಿತಗೊಳಿಸಿ ಸದನಗಳನ್ನು ಹಠಾತ್ತನೆ ಮೂರು ಗಂಟೆಗಳ ಅವಧಿಗೆ ಮುಂದೂಡಲಾಯಿತು. ಎರಡು ಗಂಟೆ ಕಾಲದ ಶೋಧದ ಬಳಿಕ ಬೆದರಿಕೆ ಹುಸಿ ಎಂಬುದು ಖಚಿತಗೊಂಡಿತು.

2005: ಬೆಂಗಳೂರಿನ ಹ್ಯೂಲೆಟ್ ಪ್ಯಾಕಾರ್ಡ್ (ಎಚ್ ಪಿ) ಕಾಲ್ ಸೆಂಟರಿನ ಉದ್ಯೋಗಿ ಕಂಪ್ಯೂಟರ್ ಎಂಜಿನಿಯರ್ ಪ್ರತಿಭಾ (24) ಎಂಬವರನ್ನು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಕಾರು ಚಾಲಕ ಕತ್ತು ಕತ್ತರಿಸಿ ಕೊಂದ ಘಟನೆ ಬೆಳಕಿಗೆ ಬಂತು. ಈಕೆಯನ್ನು ಮೂರು ದಿನ ಹಿಂದೆಯೇ (12-12-06) ಕೊಲೆಗೈಯಲಾಗಿದ್ದು, ಶವ ಅಂಜನಾಪುರ ಬಳಿಯ ನಿರ್ಜನ ಪ್ರದೇಶದಲ್ಲಿ ಪತ್ತೆಯಾಯಿತು.

1997: ವಿಡಿಯೋಟೇಪ್ ಕಾರ್ಟೂನನ್ನು ವೀಕ್ಷಿಸಿದ ಬಳಿಕ ರಕ್ತ ಕಾರಲು ಆರಂಭಿಸಿದ ಹಿನ್ನೆಲೆಯಲ್ಲಿ 700ಕ್ಕೂ ಹೆಚ್ಚು ಮಕ್ಕಳನ್ನು ಜಪಾನಿನಲ್ಲಿ ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಯಿತು. ವಿಡಿಯೋವನ್ನು ಸಮೀಪದಿಂದ ವೀಕ್ಷಿಸಿದಾಗ ಬೆಳಕಿನ ಅಲೆಗಳ ತೀವ್ರತೆಯಿಂದ `ಲಘು ಮೂರ್ಛೆಗೆ'ಗೆ (ಲೈಟ್ ಎಪಿಲೆಪ್ಸಿ) ತುತ್ತಾಗಿ ಇಂತಹ ಪರಿಸ್ಥಿತಿ ಉಂಟಾಯಿತು.

1971: ಪಾಕಿಸ್ಥಾನಿ ಪಡೆಗಳು ಭಾರತೀಯ ಸೇನೆಗೆ ಶರಣಾಗತವಾದವು. ಬಾಂಗ್ಲಾದೇಶದಲ್ಲಿನ ಪಾಕಿಸ್ತಾನಿ ಪಡೆಗಳ ಮಹಾದಂಡನಾಯಕ ಜನರಲ್ ಎ.ಎ.ಕೆ. ನಿಯಾಜಿ ಅವರು ಭಾರತದ ಪೂರ್ವ ಕಮಾಂಡಿನ ಜನರಲ್ ಆಫೀಸರ್ ಕಮಾಂಡಿಂಗ್ ಲೆಫ್ಟಿನೆಂಟ್ ಜನರಲ್ ಜೆ. ಎಸ್. ಅರೋರಾ ಅವರ ಮುಂದೆ ಶರಣಾದರು. 90,000 ಕ್ಕೂ ಹೆಚ್ಚು ಪಾಕಿಸ್ಥಾನಿ ಸೈನಿಕರನ್ನು ಭಾರತವು `ಸಮರ ಕೈದಿ'ಗಳಾಗಿ ತನ್ನ ವಶಕ್ಕೆ ತೆಗೆದುಕೊಂಡಿತು. ಬಾಂಗ್ಲಾದೇಶದಲ್ಲಿ ಈ ದಿನವನ್ನು `ವಿಕ್ಟರಿ ಡೇ' ಆಗಿ ಆಚರಿಸಲಾಯಿತು. ಭಾರತದಲ್ಲೂ ಈ ದಿನವನ್ನು `ವಿಜಯ ದಿವಸ್' ಆಗಿ ಆಚರಿಸಲಾಯಿತು.

1952: ಪ್ರತ್ಯೇಕ ಆಂಧ್ರಪ್ರದೇಶ ರಾಜ್ಯ ಸ್ಥಾಪನೆಗೆ ಒತ್ತಾಯಿಸಿ ಆಮರಣ ನಿರಶನ ಕೈಗೊಂಡಿದ್ದ ಪೊಟ್ಟಿ ಶ್ರೀರಾಮುಲು ಅವರು ತಮ್ಮ ನಿರಶನದ 58ನೇ ದಿನ ಮೃತರಾದರು. 1953ರಲ್ಲಿ ಆಂಧ್ರಪ್ರದೇಶವು ಭಾಷಾ ಆಧಾರದಲ್ಲಿ ರಚನೆಗೊಂಡ ಭಾರತದ ಪ್ರಥಮ ರಾಜ್ಯವಾಯಿತು.

1951: ಹೈದರಾಬಾದಿನಲ್ಲಿ ಸಾಲಾರ್ ಜಂಗ್ ಮ್ಯೂಸಿಯಮ್ ಉದ್ಘಾಟನೆಗೊಂಡಿತು. ಮ್ಯೂಸಿಯಮ್ಮಿನಲ್ಲಿ ಮೀರ್ ಯೂಸುಫ್ ಆಲಿ (ಸಾಲಾರ್ ಜಂಗ್ 3) ಅವರ ಸಂಗ್ರಹವಿದೆ.

1939: ಪ್ರಾಧ್ಯಾಪಕ , ಜಾನಪದ ತಜ್ಞ, ಸಾಹಿತಿ ಪ್ರೊ. ಡಿ. ಲಿಂಗಯ್ಯ ಅವರು ದೇವೇಗೌಡ- ಸಿದ್ದಮ್ಮ ದಂಪತಿಯ ಮಗನಾಗಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಪೀಹಳ್ಳಿಯಲ್ಲಿ ಜನಿಸಿದರು.

1917: ಇಂಗ್ಲಿಷ್ ವಿಜ್ಞಾನ ಕಥೆಗಾರ ಆರ್ಥರ್ ಚಾರ್ಲ್ಸ್ ಕ್ಲಾರ್ಕ್ ಹುಟ್ಟಿದ ದಿನ. ಇವರು ಸಂಪರ್ಕ ಉಪಗ್ರಹಗಳ ಬಳಕೆ ಬಗ್ಗೆ ಭವಿಷ್ಯ ನುಡಿದ ವ್ಯಕ್ತಿ.

1826: ಇಟಲಿಯ ಖಗೋಳ ತಜ್ಞ ಗಿಯೊವನ್ನಿ ಬಟ್ಟಿಸ್ಟಾ ಡೊನಾಟಿ (1826-73) ಹುಟ್ಟಿದ ದಿನ. ಈತ ದೂಮಕೇತುವಿನ ಬಾಲದಲ್ಲಿ `ಮಿನುಗುವ ಅನಿಲ' (luminous gas) ಇದೆ ಎಂಬುದನ್ನು ಮೊತ್ತ ಮೊದಲ ಬಾರಿಗೆ ಗಮನಿಸಿದ. ಹಾಗೂ ಧೂಮಕೇತುವಿನ ಬಾಲ ಹೊಳೆಯುವುದು ಕೇವಲ ಸೂರ್ಯನ ಬೆಳಕಿನ ಪ್ರತಿಫಲನದಿಂದ ಅಲ್ಲ ಎಂದು ವಿವರಿಸಿದ.

No comments:

Advertisement