ಇಂದಿನ ಇತಿಹಾಸ
ಡಿಸೆಂಬರ್ 23
ಹಿರಿಯ ಸಾಹಿತಿ ಶ್ರಿನಿವಾಸ ವೈದ್ಯ ಅವರ 'ಹಳ್ಳ ಬಂತು ಹಳ್ಳ' ಕಾದಂಬರಿ 2008ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರವಾಯಿತು. ಧಾರವಾಡ ಜಿಲ್ಲೆಯವರಾದ ವೈದ್ಯ ತಮ್ಮ 60ನೇ ವಯಸ್ಸಿನಲ್ಲಿ ಸಾಹಿತ್ಯಕೃಷಿಗೆ ಇಳಿದವರು. 'ಹಳ್ಳ ಬಂತು ಹಳ್ಳ' ಅವರ ಚೊಚ್ಚಲ ಕಾದಂಬರಿ. ಸಣ್ಣ ಕತೆ ಮತ್ತು ಹಾಸ್ಯಸಾಹಿತ್ಯದ ಮೂಲಕ ಕನ್ನಡದ ಓದುಗರಿಗೆ ಪರಿಚಿತರಾದ ವೈದ್ಯ ಬ್ಯಾಂಕ್ ಅಧಿಕಾರಿಯಾಗಿದ್ದವರು. ಈಗ ಬೆಂಗಳೂರಿನಲ್ಲಿ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ.
2008: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಹಾಗೂ ಸಾಹಿತಿ ಮನು ಬಳಿಗಾರ್ ಅವರಿಗೆ ಮೈಸೂರಿನ ದೇಜಗೌ ಟ್ರಸ್ಟ್ 'ವಿಶ್ವ ಮಾನವ ಪ್ರಶಸ್ತಿ' ಪ್ರಕಟಿಸಿತು. ಇದಲ್ಲದೇ ಪ್ರಸ್ತುತ ಸಾಲಿನ 'ಸಾವಿತ್ರಮ್ಮ ದೇಜಗೌ ಮಹಿಳಾ ಪ್ರಶಸ್ತಿ' ಕುವೆಂಪು ಅವರ ಪುತ್ರಿಯೂ ಆದ ಲೇಖಕಿ ತಾರಿಣಿ ಚಿದಾನಂದ ಗೌಡ ಅವರಿಗೆ ಲಭಿಸಿತು. ಈ ಪ್ರಶಸ್ತಿಗಳ ಮೊತ್ತ ಕ್ರಮವಾಗಿ 25 ಹಾಗೂ 20 ಸಾವಿರ ರೂಪಾಯಿಗಳು. ಇದರೊಂದಿಗೆ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ದಿ. ಎಚ್.ಕೆ.ವೀರಣ್ಣ ಗೌಡ ಹೆಸರಿನಲ್ಲಿ ನೀಡುವ ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟಿಸಿದ್ದು, ಈ ವರ್ಷ ತರಂಗ ವಾರಪತ್ರಿಕೆಯ ಸಂಪಾದಕಿ ಸಂಧ್ಯಾ ಎಸ್.ಪೈ ಅವರಿಗೆ ನೀಡಲಾಯಿತು. ಈ ಪ್ರಶಸ್ತಿಯ ಮೊತ್ತ 10 ಸಾವಿರ ರೂಪಾಯಿಗಳು.
2008: ಮಾಹಿತಿ ತಂತ್ರಜ್ಞಾನದ ಪ್ರಮುಖ ಕಂಪೆನಿ ವಿಪ್ರೊ, ಹಣಕಾಸು ಸೇವಾನಿರತ ಸಿಟಿ ಸಮೂಹದ 'ಸಿಟಿ ಟೆಕ್ನಾಲಾಜಿ ಸರ್ವಿಸ್ ಲಿಮಿಟೆಡ್'ನ ಭಾರತದಲ್ಲಿನ ವಿಭಾಗವನ್ನು ಸಂಪೂರ್ಣ ಸ್ವಾಧೀನಕ್ಕೆ ತೆಗೆದುಕೊಂಡಿತು. 'ಮುಖ್ಯವಾಗಿ ಮೂಲ ಸೌಕರ್ಯ ಅಭಿವೃದ್ಧಿಗೆ ಅಗತ್ಯವಾಗುವ ಮಾಹಿತಿ ತಂತ್ರಜ್ಞಾನ ಸೇವೆಯನ್ನು ಒದಗಿಸುವ ಉದ್ದೇಶದಿಂದ ಆರು ವರ್ಷಗಳ ಮಟ್ಟಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ' ಎಂದು ವಿಪ್ರೊ ನಿರ್ದೇಶಕ ಮಂಡಳಿ ಸದಸ್ಯ ಗಿರೀಶ್ ಎಸ್. ಪರಾಂಜಪೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. 127 ದಶಲಕ್ಷ ಡಾಲರ್ ನಗದು ವ್ಯವಹಾರಕ್ಕೆ ಒಪ್ಪಂದವಾಗಿದ್ದು, ಮುಂದಿನ ದಿನಗಳಲ್ಲಿ ಸಿಟಿ ಸಮೂಹದ ಹಣಕಾಸು ಸೇವೆ ವಿಭಾಗದ ಕಾರ್ಯಗಳಿಗೆ ತಂತ್ರಜ್ಞಾನ ದಕ್ಷತೆ ಒದಗಿಸಲು ವಿಪ್ರೊ ಬದ್ಧತೆಯಿಂದ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು. ಸಿಟಿಎಸ್ ವಿಶ್ವದ 32 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಭಾರತದಲ್ಲಿ ಮುಂಬೈ ಹಾಗೂ ಚೆನ್ನೈಯಲ್ಲಿ ಪ್ರಧಾನ ಕಚೇರಿಗಳನ್ನು ಹೊಂದಿದೆ. ಸ್ವಾಧೀನದ ನಂತರವೂ ಭಾರತದ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಟಿಎಸ್ ಉದ್ಯೋಗಿಗಳು ಯಥಾಪ್ರಕಾರ ಮುಂದುವರಿಯುವರು ಎಂದು ಅವರು ತಿಳಿಸಿದರು.
2008: ಹಿರಿಯ ಸಾಹಿತಿ ಶ್ರಿನಿವಾಸ ವೈದ್ಯ ಅವರ 'ಹಳ್ಳ ಬಂತು ಹಳ್ಳ' ಕಾದಂಬರಿ 2008ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರವಾಯಿತು. ಧಾರವಾಡ ಜಿಲ್ಲೆಯವರಾದ ವೈದ್ಯ ತಮ್ಮ 60ನೇ ವಯಸ್ಸಿನಲ್ಲಿ ಸಾಹಿತ್ಯಕೃಷಿಗೆ ಇಳಿದವರು. 'ಹಳ್ಳ ಬಂತು ಹಳ್ಳ' ಅವರ ಚೊಚ್ಚಲ ಕಾದಂಬರಿ. ಸಣ್ಣ ಕತೆ ಮತ್ತು ಹಾಸ್ಯಸಾಹಿತ್ಯದ ಮೂಲಕ ಕನ್ನಡದ ಓದುಗರಿಗೆ ಪರಿಚಿತರಾದ ವೈದ್ಯ ಬ್ಯಾಂಕ್ ಅಧಿಕಾರಿಯಾಗಿದ್ದವರು. ಈಗ ಬೆಂಗಳೂರಿನಲ್ಲಿ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ. ನರಗುಂದ-ನವಲಗುಂದ ತಾಲ್ಲೂಕುಗಳ ಹಳೆಯ ತಲೆಮಾರಿನ ಬ್ರಾಹ್ಮಣ ಕುಟುಂಬದ ನೋವು-ನಲಿವು- ತಲ್ಲಣಗಳನ್ನೊಳಗೊಂಡ ಈ ಕಾದಂಬರಿಯನ್ನು ಧಾರವಾಡದ ಮನೋಹರ ಗ್ರಂಥಮಾಲಾ ಪ್ರಕಟಿಸಿದೆ. 'ತಲೆಗೊಂದು ಥರಾ ಥರಾ' ಮತ್ತು 'ಮನಸ್ಸುರಾಯನ ಮನಸ್ಸು' (ಹರಟೆ ಮತ್ತು ಸಣ್ಣ ಕತೆಗಳ ಸಂಕಲನ) ವೈದ್ಯ ಅವರ ಇನ್ನೆರಡು ಪ್ರಮುಖ ಪ್ರಕಟಿತ ಕೃತಿಗಳು. ಅಪರಂಜಿ ಹಾಸ್ಯಪತ್ರಿಕೆಗೆ 'ಸೀನು' ಕಾವ್ಯನಾಮದಿಂದ ಹಾಸ್ಯಲೇಖನಗಳನ್ನೂ ಬರೆದಿದ್ದಾರೆ. ಡಾ.ಬಸವರಾಜ ಕಲ್ಗುಡಿ, ಕುಂ.ವೀರಭದ್ರಪ್ಪ ಮತ್ತು ಲಿಂಗದೇವರು ಹಳೆಮನೆ ಅವರನ್ನೊಳಗೊಂಡ ತೀರ್ಪುಗಾರರ ಮಂಡಳಿ ಒಮ್ಮತದಿಂದ 'ಹಳ್ಳ ಬಂತು ಹಳ್ಳ' ಕಾದಂಬರಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿತು.. ಇದಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಲಭಿಸಿದೆ.
2007: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭಾರಿ ಜಯ ಗಳಿಸುವ ಮೂಲಕ ಸತತ ನಾಲ್ಕನೇ ಬಾರಿಗೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಮುಂದುವರೆಯುವ ಮೂಲಕ ಹ್ಯಾಟ್ರಿಕ್ ಸಾಧಿಸಿದರು. ರಾಜ್ಯ ವಿಧಾನಸಭೆಯ ಒಟ್ಟು 182 ಸ್ಥಾನಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನು ಗಳಿಸುವ ಮೂಲಕ ಸರ್ಕಾರ ರಚನೆಗೆ ಅಗತ್ಯವಾದ ಬಹುಮತವನ್ನು ಬಿಜೆಪಿ ಪಡೆಯಿತು. ಕಳೆದ ಚುನಾವಣೆಯಲ್ಲಿ 127 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ ಈ ಸಲ 117 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಹಿಂದಿನ ಚುನಾವಣೆಯಲ್ಲಿ 51 ಕ್ಷೇತ್ರಗಳಲ್ಲಿ ಜಯ ಗಳಿಸಿದ್ದ ಕಾಂಗ್ರೆಸ್ ಈ ಬಾರಿ 59 ಕ್ಷೇತ್ರಗಳನ್ನು ಗೆದ್ದುಕೊಂಡಿತು. ಉಳಿದಂತೆ ಎನ್ ಸಿ ಪಿ 3, ಜೆಡಿಯು 1 ಹಾಗೂ ಪಕ್ಷೇತರರು 2 ಕ್ಷೇತ್ರಗಳಲ್ಲಿ ಗೆಲುವು ಪಡೆದರು. ಉತ್ತರಪ್ರದೇಶ ಚುನಾವಣಾ ದಾಳವನ್ನು ಗುಜರಾತಿನಲ್ಲಿ ಬಳಸಿದ ಮಾಯಾವತಿ ನೇತೃತ್ವದ ಬಿ ಎಸ್ ಪಿ ನೆಲಕಚ್ಚಿತು. ಸ್ಪರ್ಧೆಗೆ ಇಳಿದಿದ್ದ ಸಿಪಿಎಂ, ಲೋಕಜನಶಕ್ತಿ ಮತ್ತಿತರ ಪಕ್ಷಗಳಿಗೂ ಇದೇ ಉತ್ತರ ಸಿಕ್ಕಿತು.
2007: ಭಾರತದ ಸೈನಿಕರು ನೈಋತ್ಯ ಚೀನಾದ ಕುನ್ಮಿಂಗ್ ಸೇನಾ ಅಕಾಡೆಮಿಯಲ್ಲಿ ಪ್ರದರ್ಶಿಸಿದ `ಯೋಗ' ಚೀನೀ ಸೈನಿಕರ ಮನಗೆದ್ದಿತು. ಭಾರತ-ಚೀನಾ ಜಂಟಿ ಸಮರಾಭ್ಯಾಸದ ಮೂರನೇ ದಿನ ಭಾರತದ ಸೈನಿಕರು ಚೀನಾದ ಯೋಧರಿಂದ `ಮಾರ್ಷಲ್ ಕಲೆ'ಯನ್ನು ಕಲಿತರೆ, ಚೀನಾದ ಸೈನಿಕರು ಭಾರತೀಯ ಯೋಧರಿಂದ `ಯೋಗ' ಕಲಿತರು. ಚೀನಾ ಯೋಧರಿಂದ ಯೋಗದ ಬಗ್ಗೆ ತೀವ್ರ ಆಸಕ್ತಿ ಮತ್ತು ಮೆಚ್ಚುಗೆ ವ್ಯಕ್ತವಾಯಿತು.
2007: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮಾಜಿ ಅಧ್ಯಕ್ಷ ಕೆ.ಕೆ.ಮೂರ್ತಿ (74) ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. 20 ವರ್ಷಗಳಿಂದ ಎಐಸಿಸಿ ಸದಸ್ಯರಾಗಿದ್ದ ಅವರು ವಿಶ್ವಖ್ಯಾತಿ ಗಳಿಸಿರುವ ಬೆಂಗಳೂರಿನ ಚೌಡಯ್ಯ ಸ್ಮಾರಕ ಸಭಾಭವನದ ನಿರ್ಮಾಣ ಮತ್ತು ಅದರ ವಿನ್ಯಾಸದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಚೌಡಯ್ಯ ಸ್ಮಾರಕ ಟ್ರಸ್ಟ್ ಕಾರ್ಯದರ್ಶಿಯಾಗಿದ್ದರು. ಮೂರು ದಶಕಕ್ಕೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದ ಒಡನಾಟದಲ್ಲಿ ಇದ್ದ ಕುಣಿಗಲ್ ಕೃಷ್ಣಮೂರ್ತಿ ಮೊದಲು ದೇವರಾಜ ಅರಸು ಅವರಿಗೆ ನಿಕಟರಾಗಿದ್ದರು. ಗುಂಡೂರಾವ್ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಇದಕ್ಕೆ ಮೊದಲು ಅಂದರೆ 1972ರಿಂದ 75ರ ತನಕ ಕರ್ನಾಟಕ ಚಲನಚಿತ್ರ ಅಭಿವೃದ್ಧಿ ನಿಗಮದ (ಕೆ ಎಫ್ ಡಿ ಸಿ) ಅಧ್ಯಕ್ಷರಾಗಿದ್ದರು. ಕರ್ನಾಟಕ ನಿಯತಕಾಲಿಕ ಪ್ರಕಾಶನ ಸಂಸ್ಥೆಯ ಅಧ್ಯಕ್ಷರಾಗಿದ್ದರು.
2007: ಐದು ವರ್ಷಗಳ ಹಿಂದೆ ಜನಿಸಿದ್ದ ದೇವಿ ಮತ್ತು ರಾಹುಲ್ ಹೆಸರಿನ ಎರಡು ಆನೆಗಳು ಜಪಾನಿನ ಉಕೊಹಾಮಾ ಪ್ರಾಣಿ ಸಂಗ್ರಹಾಲಯ ಮತ್ತು ಡಾರ್ಜಿಲಿಂಗಿನ ಪದ್ಮಜಾನಾಯ್ಡು ವನ್ಯಜೀವಿ ಪಾರ್ಕಿನ ನಡುವೆ ಪ್ರತಿವರ್ಷ ನಡೆಯುವ ಪ್ರಾಣಿಗಳ ವಿನಿಮಯ ಕಾರ್ಯಕ್ರಮದ ಅನ್ವಯ ಈದಿನ ಟ್ರಕ್ ಮೂಲಕ ಜಪಾನಿಗೆ ಪಯಣಿಸಿದವು.
2007: ಪ್ರತಿಭಟನೆಗಳ ಪರಿಣಾಮವಾಗಿ ರದ್ದಾಗಿದ್ದ ಕಲಾವಿದ ಎಂ.ಎಫ್.ಹುಸೇನ್ ಅವರ .`ಇಂಡಿಯಾ ಇನ್ ದಿ ಎರಾ ಆಫ್ ಮೊಘಲ್ಸ್' ಚಿತ್ರಗಳ ಪ್ರದರ್ಶನ ದೆಹಲಿಯ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್(ಐಐಸಿ) ಆರ್ಟ್ಸ್ ಗ್ಯಾಲರಿಯಲ್ಲಿ ಬಿಗಿ ಭದ್ರತೆಯೊಂದಿಗೆ ಪುನರಾರಂಭಗೊಂಡಿತು.
2007: ಉತ್ತರ ಕನ್ನಡದ ಅಡಿಕೆ, ತೆಂಗು, ಬಾಳೆಯಿಂದ ಶೃಂಗಾರಗೊಂಡ ಶಿರಸಿಯ ತೋಟಗಾರರ ಕಲ್ಯಾಣ ಮಂಟಪದ ಸುಂದರ ವೇದಿಕೆಯಲ್ಲಿ ಎರಡು ದಿನಗಳ ಹವ್ಯಕ ಮಹಿಳಾ ಜಾಗತಿಕ ಸಮಾವೇಶವನ್ನು ಕರ ನಿರಾಕರಣ ಹೋರಾಟಗಾರ್ತಿ ಭಾಗೀರಥಿ ನಾರಾಯಣ ಶಾಸ್ತ್ರಿ ಉದ್ಘಾಟಿಸಿದರು.
2006: ವಿಶ್ವದ ಮೊತ್ತ ಮೊದಲ ಮೊಬೈಲ್ ಸಿನಿಮಾ `ಕಂಟ್ರೋಲ್ ಪ್ಲಸ್ ಆಲ್ಟ್ ಪ್ಲಸ್ ಡಿಲೀಟ್' ಕುರಿತು ಚಿತ್ರದಲ್ಲಿ ಕಬೀಲ್ ಯುವಕನ ಪಾತ್ರ ನಿರ್ವಹಿಸಿದ ಬಾಲಿವುಡ್ ನಟ ರಾಹುಲ್ ಬೋಸ್ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಂಬೈಯಿಂದಲೇ ಬೆಂಗಳೂರಿನ ಪತ್ರಕರ್ತರಿಗೆ ಸಿನಿಮಾ ಬಗ್ಗೆ ಮಾಹಿತಿ ನೀಡಿದರು. ಫೋನೆಥಿಕ್ಸ್ ಮೊಬೈಲ್ ಮೀಡಿಯಾ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಿದ್ದು ರಿಲಯನ್ಸ್ ಮೊಬೈಲ್ ಗ್ರಾಹಕರು ತಮ್ಮ ಮೊಬೈಲಿನಲ್ಲಿಈ ಚಿತ್ರವನ್ನು ವೀಕ್ಷಿಸಬಹುದು ಎಂದು ರಿಲಯನ್ಸ್ ಕಮ್ಯೂನಿಕೇಶನ್ಸ್ ಅಧಿಕಾರಿ ಕೃಷ್ಣದುರ್ಗ ಪ್ರಕಟಿಸಿದರು. ಚಿತ್ರ ಮೂರು ಅಂತಾರಾಷ್ಟ್ರೀಯ ಚಲನಚಿತ್ರ ಉತ್ಸವಗಳಲ್ಲೂ ಪ್ರದರ್ಶನಗೊಂಡಿದೆ.
2006: ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಗ್ಲೆನ್ ಮೆಕ್ ಗ್ರಾ ಅವರು 2007ರ ವಿಶ್ವಕಪ್ ಟೂರ್ನಿಯ ಬಳಿಕ ನಿವೃತ್ತಿ ಹೊಂದುವುದಾಗಿ ಮೆಲ್ಬೋರ್ನಿನಲ್ಲಿ ಪ್ರಕಟಿಸಿದರು.
2006: ಶಿವಮೊಗ್ಗದಲ್ಲಿ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ.
2005: ಸದನದಲ್ಲಿ ಪ್ರಶ್ನೆ ಕೇಳಲು 'ಲಂಚ' ಪಡೆದ ದುರ್ನಡತೆಗಾಗಿ ಲೋಕಸಭೆಯ 10 ಮಂದಿ ಹಾಗೂ ರಾಜ್ಯಸಭೆಯ ಒಬ್ಬ ಸದಸ್ಯನನ್ನು ಉಭಯ ಸದನಗಳು ಧ್ವನಿಮತದಿಂದ ಉಚ್ಚಾಟಿಸಿ 'ಸಂಸದೀಯ ಇತಿಹಾಸ' ನಿರ್ಮಿಸಿದವು. ಶಿಕ್ಷೆಯ ವಿಧಿವಿಧಾನ ಬಗ್ಗೆ ಬಿಜೆಪಿ ಮತ್ತು ಮಿತ್ರಪಕ್ಷಗಳ ವಿರೋಧದ ಮಧ್ಯೆ ಸದನ ಈ ಕ್ರಮ ಕೈಗೊಂಡಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನ ಸಮಿತಿಗಳು ಮಾಡಿದ ಶಿಫಾರಸುಗಳ ಮೇಲೆ ಉಭಯ ಸದನಗಳು ಅತ್ಯಂತ ಕ್ಷಿಪ್ರ ಕ್ರಮ ಕೈಗೊಂಡು `ಪೂರ್ವ ನಿದರ್ಶನ' ನಿರ್ಮಿಸಿದವು. 50 ವರ್ಷಗಳ ಸಂಸದೀಯ ಇತಿಹಾಸದಲ್ಲೇ ಇದೊಂದು ನೂತನ ಕ್ರಮ. 1951ರಲ್ಲಿ ಸಂಸತ್ತಿನಲ್ಲಿ ಕೆಲಸ ಮಾಡಿಕೊಡಲು ಮುಂಬೈ ಚಿನ್ನಾಭರಣ ವ್ಯಾಪಾರಿಗಳಿಂದ ಹಣ ಸ್ವೀಕರಿಸಿದ್ದಕ್ಕೆ ಸದಸ್ಯ ಎಚ್. ಜಿ. ಮುದ್ಗಲ್ ಅವರನ್ನು ಪ್ರಾಂತೀಯ ಸಂಸತ್ತು ಉಚ್ಚಾಟಿಸಿದ ಏಕೈಕ ನಿದರ್ಶನ ಇತಿಹಾಸದಲ್ಲಿ ಸಿಗುತ್ತದೆ. ಮುದ್ಗಲ್ ಅವರು ರಾಜೀನಾಮೆ ನೀಡಿದರೂ ಸದನ ಅದನ್ನು ಅಂಗೀಕರಿಸಿರಲಿಲ್ಲ. ಉಚ್ಚಾಟನೆಗೊಂಡವರು: ಲೋಕಸಭೆ- ಅಣ್ಣಾಸಾಹೇಬ್ ಎಂ.ಕೆ. ಪಾಟೀಲ್, ವೈ.ಜಿ. ಮಹಾಜನ್, ಪ್ರದೀಪಗಾಂಧಿ, ಸುರೇಶ ಚಂಡೇಲ್, ಚಂದ್ರಪ್ರತಾಪ ಸಿಂಗ್ (ಎಲ್ಲರೂ ಬಿಜೆಪಿ), ನರೇಂದ್ರ ಕುಮಾರ್ ಕುಶವಾಹ, ರಾಜಾರಾಮ್ ಪಾಲ್ ಮತ್ತು ಲಾಲ್ ಚಂದ್ರ ಕೋಲ್ (ಎಲ್ಲರೂ ಬಿಎಸ್ಪಿ) ರಾಮ್ ಸೇವಕ್ ಸಿಂಗ್ (ಕಾಂಗ್ರೆಸ್) ಮತ್ತು ಮನೋಜ ಕುಮಾರ್ (ಆರ್ ಜೆ ಡಿ). ರಾಜ್ಯಸಭೆ: ಛತ್ರಪಾಲ್ ಸಿಂಗ್ ಲೋಧಾ (ಬಿಜೆಪಿ).
2005: ಬೆಂಗಳೂರಿನ ಗ್ರೂಪ್ ಎಂ ಸಂಸ್ಥೆಯ ಹೂಡಿಕೆ ನಿರ್ದೇಶಕ ಪ್ರಶಾಂತ ಕುಮಾರ್ ಅವರಿಗೆ 'ಏಷ್ಯಾದ ಅತ್ಯುತ್ತಮ ಮೀಡಿಯಾ ಪ್ಲ್ಯಾನರ್/ ಬೈಯರ್' ಪುರಸ್ಕಾರ ಲಭಿಸಿತು. ಹಾಂಕಾಂಗಿನ ಮೀಡಿಯಾ ಮ್ಯಾಗಜಿನ್ ಈ ಪುರಸ್ಕಾರವನ್ನು ನೀಡುತ್ತದೆ.
2004: ಭಾರತದ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ನಿಧನರಾದರು. ಬಹುಭಾಷಾ ಪಾರಂಗತರಾಗಿದ್ದ ನರಸಿಂಹರಾವ್ ಅವರ ಆಡಳಿತಕಾಲದಲ್ಲೇ ಭಾರತದಲ್ಲಿ ಆರ್ಥಿಕ ಸುಧಾರಣೆಗಳ ಯುಗ ಆರಂಭವಾಗಿ ಮುಂದೆ ಜಾಗತೀಕರಣಕ್ಕೆ ದೇಶದ ಬಾಗಿಲು ತೆರೆಯಿತು.
1986: ಡಿಕ್ ರುಟಿನ್ ಮತ್ತು ಜಿಯಾನ ಈಗರ್ ಅವರ ಚಾಲಕತ್ವದಲ್ಲಿ `ವಾಯೇಜರ್' ವಿಮಾನ ಮರು ಇಂಧನ ಭರ್ತಿ ಮಾಡಿಕೊಳ್ಳದೇ, ಎಲ್ಲೂ ನಿಲ್ಲದೆ ಮೊತ್ತ ಮೊದಲ ಬಾರಿಗೆ ಸುತ್ತುಹಾಕುವ ಪ್ರಾಯೋಗಿಕ ಹಾರಾಟ ನಡೆಸಿ ಕ್ಯಾಲಿಫೋರ್ನಿಯಾದ ಎಡ್ವರ್ಡ್ಸ್ ವಾಯುಪಡೆ ನೆಲೆಯಲ್ಲಿ ಯಶಸ್ವಿಯಾಗಿ ಇಳಿಯಿತು.
1956: ಮರಣದಂಡನೆಗೆ ಗುರಿಯಾದ ಸೋವಿಯತಿನ ಮಾಜಿ ಗುಪ್ತ ಪೊಲೀಸ್ ಮುಖ್ಯಸ್ಥ ಲಾವ್ ರೆಂಟಿ ಬೆರಿಯಾ ಮತ್ತು ಇತರ 6 ಮಂದಿಯನ್ನು ಗುಂಡಿಟ್ಟು ಕೊಲೆಗೈಯಲಾಯಿತು.
1952: ಅಸ್ಸಾಮಿನ ಅತ್ಯಂತ ಕಿರಿಯ ಮುಖ್ಯಮಂತ್ರಿ ಪ್ರಫುಲ್ಲ ಕುಮಾರ ಮಹಂತ ಹುಟ್ಟಿದ ದಿನ.
1948: ಜಪಾನಿನ ಮಾಜಿ ಪ್ರಧಾನಿ ಹಿಡೆಕಿ ಟೊಜೊ ಮತ್ತು ಇತರ 6 ಮಂದಿ ಜಪಾನೀ ಸಮರ ನಾಯಕರನ್ನು ಟೋಕಿಯೋದಲ್ಲಿ ಮರಣದಂಡನೆಗೆ ಗುರಿ ಪಡಿಸಲಾಯಿತು.
1936: ಕನ್ನಡಿಗರಲ್ಲಿ ಸಾಹಿತ್ಯಾಭಿರುಚಿಯನ್ನು ಬೆಳೆಸಲು ಕಟ್ಟಿದ ಮನೋಹರ ಗ್ರಂಥಮಾಲೆಯ ಈಗಿನ ಸಂಪಾದಕ ಡಾ. ರಮಾಕಾಂತ ಜೋಶಿ ಅವರು ಜಿ.ಬಿ. ಜೋಶಿ (ಜಡಭರತ)- ಪದ್ಮಾವತಿ ದಂಪತಿಯ ಮಗನಾಗಿ ಧಾರವಾಡದಲ್ಲಿ ಜನಿಸಿದರು.
1923: ಸಾಹಿತಿ ದೊಡ್ಡ ಸುಧಾಬಾಯಿ ಜನನ.
1912: ನೂತನ ರಾಜಧಾನಿ ದೆಹಲಿಗೆ ಆನೆಯ ಮೂಲಕವಾಗಿ ಪ್ರವೇಶಿಸಲು ಹೊರಟಿದ್ದ ಭಾರತದ ವೈಸ್ ರಾಯ್ ಲಾರ್ಡ್ ಹಾರ್ಡಿಂಗ್ ಅವರು ಬಾಂಬ್ ಎಸೆತದಿಂದ ಗಾಯಗೊಂಡರು. ಅವರ ಸೇವಕ ಘಟನೆಯಲ್ಲಿ ಮೃತನಾದ. ಹಾರ್ಡಿಂಗ್ ಅವರು ಗಾಯಗೊಂಡು ಪ್ರಜ್ಞೆ ಕಳೆದುಕೊಂಡರು. (ಅವರ ಸರ್ಕಾರವು ಲಾರ್ಡ್ ಕರ್ಝನ್ ಮಾಡಿದ್ದ ಬಂಗಾಳದ ವಿಭಜನೆಯನ್ನು ರದ್ದು ಪಡಿಸಿತ್ತು. 1911ರ ಡಿಸೆಂಬರಿನಲ್ಲಿ ದೊರೆ ಐದನೇ ಜಾರ್ಜ್ ಮತ್ತು ರಾಣಿಯ ಭೇಟಿ ಸಂದರ್ಭದಲ್ಲಿ ಭಾರತದ ರಾಜಧಾನಿಯನ್ನು ಕಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸುವ ನಿರ್ಣಯವನ್ನು ಹಾರ್ಡಿಂಗ್ ಸರ್ಕಾರ ಪ್ರಕಟಿಸಿತ್ತು.)
1902: ಭಾರತದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ (1902-1987) ಈ ದಿನ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ನೂರ್ ಪುರದಲ್ಲಿ ಜನಿಸಿದರು. ರೈತಪರ ಹೋರಾಟಗಾರರಾಗಿದ್ದ ಚರಣ್ ಸಿಂಗ್ ಬಡತನ ಹಾಗೂ ರೈತಕುಟುಂಬದಿಂದ ಬಂದ ಮೊದಲ ಪ್ರಧಾನಿ (1979-90ರ ಅವಧಿಯಲ್ಲಿ) ಎಂಬ ಹೆಗ್ಗಳಿಕೆಗೆ ಪಾತ್ರರಾದವರು. 1937ರಲ್ಲಿ ಉತ್ತರಪ್ರದೇಶದ ಚತ್ರೌಲಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. 1979ರಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ಉಪಪ್ರಧಾನಿ ಆದರು. 1987ರ ಮೇ 27ರಂದು ನಿಧನರಾದರು.
No comments:
Post a Comment