Friday, February 12, 2010

ಇಂದಿನ ಇತಿಹಾಸ History Today ಜನವರಿ 12

ಇಂದಿನ ಇತಿಹಾಸ

ಜನವರಿ 12

ಇಂದು `ರಾಷ್ಟ್ರೀಯ ಯುವ ದಿನ'. 1863ರಲ್ಲಿ ಈದಿನ ಸ್ವಾಮಿ ವಿವೇಕಾನಂದರು (1863-1902) ಹುಟ್ಟಿದರು. ಜನನ ಕಾಲದಲ್ಲಿ ನರೇಂದ್ರನಾಥ ದತ್ತ ಎಂಬುದಾಗಿ ಹೆಸರು ಪಡೆದಿದ್ದ ವಿವೇಕಾನಂದರು ಹಿಂದೂ ಆಧ್ಯಾತ್ಮಿಕ ಧುರೀಣರೂ, ಸುಧಾರಣೆಗಾರರೂ ರಾಮಕೃಷ್ಣ ಮಿಷನ್ ಸ್ಥಾಪಕರಾಗಿಯೂ ಖ್ಯಾತಿ ಪಡೆದಿದ್ದಾರೆ. ವಿವೇಕಾನಂದರ ಗೌರವಾರ್ಥ ಅವರ ಜನ್ಮದಿನವನ್ನು ಭಾರತದಲ್ಲಿ `ರಾಷ್ಟ್ರೀಯ ಯುವ ದಿನ' ಎಂಬುದಾಗಿ ಆಚರಿಸಲಾಗುತ್ತದೆ.

2008: ಮಧ್ವಮಠಗಳ ಇತಿಹಾಸದಲ್ಲೇ ಪ್ರಥಮ ಬಾರಿಗೆ ಉಡುಪಿ ಕೃಷ್ಣಮಠದಲ್ಲಿ ಎರಡು ದಿನಗಳ ಕಾಲ ಜರುಗಿದ ಆಸ್ಥಾನ ವಿದ್ವಾಂಸರ ಸಭೆಯು `ಪರ್ಯಾಯ ಪೂಜೆ ಅಧಿಕಾರ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥರಿಗೆ ಇಲ್ಲ' ಎಂಬ ಸರ್ವಾನುಮತದ ನಿರ್ಣಯ ಅಂಗೀಕರಿಸಿತು.

2009: ಭಾರತದ ಐಟಿ ಉದ್ಯಮಕ್ಕೆ ಮತ್ತೊಂದು ದೊಡ್ಡ ಆಘಾತ. ದೇಶದ ಮೂರನೇ ಅತಿದೊಡ್ಡ ಐಟಿ ಕಂಪೆನಿ, ಬೆಂಗಳೂರು ಮೂಲದ 'ವಿಪ್ರೊ ಟೆಕ್ನಾಲಜೀಸ್'' ವಿಶ್ವಬ್ಯಾಂಕಿನ ಕಪ್ಪುಪಟ್ಟಿಗೆ ಸೇರಿತು. ಜೊತೆಗೆ, ಮತ್ತೊಂದು ಐಟಿ ಕಂಪೆನಿ ಮೆಗಾಸಾಫ್ಟ್ ಸೇರಿದಂತೆ ದೇಶದ ಒಟ್ಟು ನಾಲ್ಕು ಕಂಪೆನಿಗಳು ವಿಶ್ವಬ್ಯಾಂಕಿನಿಂದ ನಿರ್ಬಂಧಕ್ಕೆ ಒಳಗಾದವು.ತನ್ನ ಸಿಬ್ಬಂದಿಗೆ ವಿಪ್ರೊ ರುಷುವತ್ತು (ಅಸಹಜ ಲಾಭದ) ಆಮಿಷವೊಡ್ಡಿದೆ ಎಂದು ಕಿಡಿಕಾರಿದ ವಿಶ್ವಬ್ಯಾಂಕ್, ತನ್ನೊಂದಿಗಿನ ವಹಿವಾಟಿಗೆ ನಾಲ್ಕು ವರ್ಷಗಳ ಕಾಲದ ನಿರ್ಬಂಧ ವಿಧಿಸಿತು. 2007ರ ಜೂನ್‌ನಿಂದ ಪೂರ್ವಾನ್ವಯವಾಗುವಂತೆ ಈ ನಿರ್ಬಂಧ ಜಾರಿಗೊಳ್ಳಲಿದೆ ಎಂದು ವಿಶ್ವಬ್ಯಾಂಕ್ ಪ್ರಕಟಿಸಿತು.

2009: ಎಂಟು ದಿನಗಳ ರಾಷ್ಟ್ರವ್ಯಾಪಿ ಲಾರಿ ಮುಷ್ಕರ ಅಂತ್ಯಗೊಂಡಿತು. ಸರ್ಕಾರ ಮತ್ತು ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ (ಎಐಎಂಟಿಸಿ) ಪ್ರತಿನಿಧಿಗಳ ನಡುವೆ ನಡೆದ ಮೊದಲ ಸುತ್ತಿನ ಮಾತುಕತೆ ಮುರಿದುಬಿದ್ದರೂ, ಎರಡನೇ ಸುತ್ತಿನ ಚರ್ಚೆ ಫಲಪ್ರದವಾಯಿತು. ತಮ್ಮ ಬೇಡಿಕೆಗಳ ಪರಿಶೀಲನೆಗೆ ಸಮಿತಿ ರಚಿಸುವುದಾಗಿ ಸರ್ಕಾರದಿಂದ ಭರವಸೆ ದೊರೆತ ಬಳಿಕ ಪ್ರತಿನಿಧಿಗಳು ಶರತ್ತುರಹಿತ ಮುಷ್ಕರ ವಾಪಸಿಗೆ ನಿರ್ಧರಿಸಿದರು.

2009: ಕರ್ನಾಟಕದಲ್ಲಿ ಪ್ರಥಮ ಬಾರಿಗೆ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮದ (ಎನ್‌ಟಿಪಿಸಿ) ನಾಲ್ಕು ಸಾವಿರ ಮೆಗಾವಾಟ್ ಸಾಮರ್ಥ್ಯದ ಶಾಖೋತ್ಪನ್ನ ವಿದ್ಯುತ್ ಘಟಕ ಸ್ಥಾಪನೆ ಸೇರಿದಂತೆ ಜಂಟಿ ಸಹಭಾಗಿತ್ವದಲ್ಲಿ 6900 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಐತಿಹಾಸಿಕ ಒಪ್ಪಂದಕ್ಕೆ ಬೆಂಗಳೂರಿನಲ್ಲಿ ಸಹಿ ಹಾಕಲಾಯಿತು. ವಿಜಾಪುರ ಜಿಲ್ಲೆ ಕೂಡಗಿಯಲ್ಲಿ ನಾಲ್ಕು ಸಾವಿರ ಮೆಗಾವಾಟ್, ರಾಯಚೂರು ಜಿಲ್ಲೆಯ ಯರಮರಸ್, ಯದ್ಲಾಪುರದಲ್ಲಿ 2400 ಮೆಗಾವಾಟ್ ಸಾಮರ್ಥ್ಯದ ಶಾಖೋತ್ಪನ್ನ ವಿದ್ಯುತ್ ಘಟಕ ಹಾಗೂ ಉತ್ತರ ಕರ್ನಾಟಕದ ಆರು ಕಡೆ ಒಟ್ಟು 500 ಮೆಗಾವಾಟ್ ಸಾಮರ್ಥ್ಯದ ಪವನ ವಿದ್ಯುತ್ ಘಟಕಗಳ ಸ್ಥಾಪನೆ ಸಂಬಂಧ ಪರಸ್ಪರ ಒಡಂಬಡಿಕೆ ಮಾಡಿಕೊಳ್ಳಲಾಯಿತು. ಇದೇ ಮೊದಲ ಬಾರಿಗೆ ಎನ್‌ಟಿಪಿಸಿ ಕರ್ನಾಟಕದ ಕೂಡಗಿಯಲ್ಲಿ ತನ್ನ ಘಟಕವನ್ನು ಆರಂಭಿಸುತ್ತಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಎನ್‌ಟಿಪಿಸಿಯ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ಶರ್ಮಾ ಮತ್ತು ರಾಜ್ಯ ಸರ್ಕಾರದ ಪವರ್ ಕಂಪೆನಿ ಆಫ್ ಕರ್ನಾಟಕ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ವಿಜಯನರಸಿಂಹ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು.

2009: ಮುಂಬೈ ಮೇಲೆ ನಡೆದ ಡಿಸೆಂಬರ್ 26ರ ದಾಳಿಗೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳ ಪರವಾಗಿ ಪ್ರಥಮ ಬಾರಿಗೆ ವಕೀಲರೊಬ್ಬರು ನ್ಯಾಯಾಲಯಕ್ಕೆ ಹಾಜರಾದರು. ಆರೋಪಿ ಫಾಹೀಮ್ ಅನ್ಸಾರಿ ಹಾಗೂ ಸಬಾಹುದ್ದೀನ್ ಅಹಮದ್ ಅವರನ್ನು ಮುಂಬೈ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಈ ಸಂದರ್ಭದಲ್ಲಿ ಆರೋಪಿಗಳ ಪರವಾಗಿ ಕೇಸು ನಡೆಸಲು ವಕೀಲ ಎಜಾಜ್ ನಖ್ವಿ ನ್ಯಾಯಾಲಯಕ್ಕೆ ತಮ್ಮ ವಕಾಲತ್ತು ಸಲ್ಲಿಸಿದರು.

2009: ತಮಾರ್ ವಿಧಾನಸಭಾ ಉಪಚುನಾವಣೆಯಲ್ಲಿನ ಸೋಲಿನ ಹಿನ್ನೆಲೆಯಲ್ಲಿ ಮಿತ್ರ ಪಕ್ಷಗಳ ಒತ್ತಡಕ್ಕೆ ಕಡೆಗೂ ಮಣಿದ ಜಾರ್ಖಂಡ್ ಮುಖ್ಯಮಂತ್ರಿ ಶಿಬು ಸೊರೇನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಉಪ ಮುಖ್ಯಮಂತ್ರಿ ಸ್ಟೆಫನ್ ಮರಾಂಡಿ ಅವರು ರಾಜೀನಾಮೆ ಸಲ್ಲಿಸಿದ ಸ್ವಲ್ಪ ಹೊತ್ತಿನಲ್ಲೇ ಶಿಬು ಸೊರೇನ್ ಕೂಡಾ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು.

2008: ನ್ಯೂಯಾರ್ಕಿನ ಅವಳಿ ಕಟ್ಟಡ ಧ್ವಂಸಗೊಳಿಸಿದ ರೀತಿಯಲ್ಲಿಯೇ ಪ್ಯಾರಿಸ್ಸಿನ ವಿಶ್ವವಿಖ್ಯಾತ ಐಫೆಲ್ ಗೋಪುರವನ್ನು ಉರುಳಿಸಲು ಮುಸ್ಲಿಮ್ ಉಗ್ರರು ನಡೆಸುತ್ತಿದ್ದ ಸಂಚೊಂದನ್ನು ಪತ್ತೆಹಚ್ಚಲಾಯಿತು. ರೇಡಿಯೊ ಸಂಭಾಷಣೆಯಲ್ಲಿ ಉಗ್ರರು ಗೋಪುರ ಉರುಳಿಸಲು ನಡೆಸುತ್ತಿದ್ದ ಮಾತುಕತೆಯನ್ನು ಪತ್ತೆ ಹಚ್ಚಿದ ಲಿಸ್ಬನ್ನಿನ ವಾಯುಯಾನ ನಿಯಂತ್ರಣ ವಿಭಾಗದ ಪೊಲೀಸರು ಕೂಡಲೇ ಈ ವಿಷಯವನ್ನು ಫ್ರೆಂಚ್ ಬೇಹುಗಾರಿಕೆ ಗಮನಕ್ಕೆ ತಂದರು ಎಂದು `ಡೈಲಿ ಮೇಲ್' ವರದಿ ಮಾಡಿತು.

2008: ಕೋಲ್ಕತದಲ್ಲಿ ಈದಿನ ಮುಂಜಾನೆ 2 ಗಂಟೆ ಸುಮಾರಿಗೆ ಅಂಗಡಿಯೊಂದರಲ್ಲಿ ಭಾರಿ ಬೆಂಕಿ ದುರಂತ ಸಂಭವಿಸಿತು. ಬೆಂಕಿಯು ಬಹುಬೇಗ ಇತರ ಅಂಗಡಿಗಳಿಗೆ ವ್ಯಾಪಿಸಿತು. ದೊಡ್ಡ ದುರಂತಗಳಲ್ಲಿ ಮಾತ್ರ ಬಳಸುವ ಜಗತ್ತಿನ 2ನೇ ಅತಿದೊಡ್ಡ ಅಂದರೆ 52 ಮೀಟರ್ ಎತ್ತರದ ಅಗ್ನಿಶಾಮಕ ಏಣಿಯನ್ನು ಬೆಂಕಿ ನಿಯಂತ್ರಿಸಲು ಬಳಸಬೇಕಾಯಿತು.

2008: ಹತ್ತು ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ನಡೆಸಿ ಬಳಿಕ ಕೊಲೆ ಮಾಡಿದ ಹರೀಶ್ ರಜಪೂತ್ ಎಂಬಾತನಿಗೆ ಮುಂಬೈ ಹೈಕೋರ್ಟ್ ಮರಣ ದಂಡನೆ ವಿಧಿಸಿತು. ತನ್ನ ಪಕ್ಕದ ಮನೆಯ ಹುಡುಗಿಯನ್ನು ತನ್ನ ಮನೆಗೆ ಕರೆತಂದಿದ್ದ ಆರೋಪಿ ಈ ಕೃತ್ಯ ಎಸಗಿದ್ದ. ವಿಚಾರಣಾ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ನೀಡಿತ್ತು. ಆದರೆ ಇದೊಂದು `ಗಂಭೀರ ಅಪರಾಧ' ಎಂದು ಪರಿಗಣಿಸಿದ ಹೈಕೋರ್ಟ್ ಮರಣ ದಂಡನೆ ವಿಧಿಸಿತು.

2008: ಪಾಕಿಸ್ಥಾನಿ ಪಾಪ್ ಗಾಯಕ ಆಲಿ ಜಾಫರ್ ಹಾಗೂ ಅವರ ಪ್ರೇಯಸಿಯನ್ನು ದುಷ್ಕರ್ಮಿಗಳು ಅಪಹರಿಸಿ ಭಾರಿಮೊತ್ತದ ಒತ್ತೆಹಣ ಪಡೆದ ಬಳಿಕ ಬಿಡುಗಡೆ ಮಾಡಿದರು. ದೇಶದ ಪಾಪ್ ಸಂಗೀತ ವಲಯದ ಸಾಮ್ರಾಟ ಎಂದೇ ಗುರುತಿಸಲ್ಪಡುವ ಆಲಿ ಜಾಫರ್ ಅವರನ್ನು ಲಾಹೋರಿನ ವ್ಯಾಪಾರ ಸಂಕೀರ್ಣವೊಂದರ ಬಳಿ ಅಪಹರಿಸಲಾಗಿತ್ತು. ಚಾನೊ, ರಂಗೀನ್, ಚಲ್ ದಿಲ್ ಮೇರೆ, ದೇಕಾ, ಮಸ್ತಿ, ಸಜಾನಿಯಾ ಮುಂತಾದವುಗಳು ಆಲಿ ಅವರ ಜನಪ್ರಿಯ ಆಲ್ಬಂಗಳು.

2008: ಖಜಕಿಸ್ಥಾನದ ಅಲ್ಮಟಿ ಸಮೀಪದ ಕಲ್ಲಿದ್ದಲು ಗಣಿಯಲ್ಲಿ ಜನವರಿ 11ರಂದು ಸಂಭವಿಸಿದ ಭಾರೀ ಸ್ಫೋಟದಲ್ಲಿ ಸತ್ತವರ ಸಂಖ್ಯೆ 30ಕ್ಕೆ ಏರಿತು.

2007: ಸಂಸತ್ತಿನ ಮೇಲೆ ದಾಳಿ ಮಾಡಿದ ಸಂಚಿಗಾಗಿ ಮರಣದಂಡನೆಗೆ ಗುರಿಯಾದ ಮೊಹಮ್ಮದ್ ಅಫ್ಜಲ್ ಗುರುವಿನ ಕ್ಷಮಾದಾನ ಕೋರಿಕೆ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಜಾಮಾಡಿ, ಹೈಕೋರ್ಟ್ ನೀಡಿರುವ ಮರಣದಂಡನೆ ಶಿಕ್ಷೆಯನ್ನು ಎತ್ತಿ ಹಿಡಿಯಿತು. ನ್ಯಾಯಮೂರ್ತಿ ವೈ.ಕೆ ಸಭರ್ ವಾಲ್, ಕೆ.ಜಿ ಬಾಲಕೃಷ್ಣನ್, ಬಿ.ಎನ್. ಅಗರ್ ವಾಲ್ ಮತ್ತು ಪಿಪಿ ನಾವಲೆಕರ್ ಅವರನ್ನು ಒಳಗೊಂಡ ನಾಲ್ಕು ಸದಸ್ಯ ನ್ಯಾಯಪೀಠವು ಈ ತೀರ್ಪು ನೀಡಿತು. ಇದರಿಂದಾಗಿ ಅಫ್ಜಲನಿಗೆ ನೀಡಿರುವ ಮರಣದಂಡನೆ ಶಿಕ್ಷೆ ಕಾಯಂ ಆದಂತಾಯಿತು.

2007: ಎನ್ ಡಿ ಎ ಅಧಿಕಾರಾವಧಿಯಲ್ಲಿ ಅಧಿಕಾರಸ್ಥರ ಸಂಬಂಧಿಗಳಿಗೆ ಹಾಗೂ ಸ್ನೇಹಿತರಿಗೆ ಮನಬಂದಂತೆ ಮಂಜೂರು ಮಾಡಲಾಗಿದ್ದ 297 ಪೆಟ್ರೋಲ್ ಪಂಪ್, ಎಲ್ ಪಿ ಜಿ ಅನಿಲ ಹಾಗೂ ಸೀಮೆ ಎಣ್ಣೆ ಮಳಿಗೆಗಳನ್ನು ರದ್ದುಪಡಿಸಲು ಸುಪ್ರೀಂಕೋರ್ಟ್ ಆದೇಶ ನೀಡಿತು.

2007: ಕುತ್ತಿಗೆಯ ಕ್ಯಾನ್ಸರನ್ನು ಸುಲಭ ಹಾಗೂ ಸರಳವಾಗಿ ಪತ್ತೆ ಹಚ್ಚಬಲ್ಲ `ಮ್ಯಾಗ್ನಿ ವಿಷುಯಲೈಸರ್' ಎಂಬ ಅಗ್ಗದ ಸಾಧನವೊಂದನ್ನು ಭಾರತೀಯ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿರುವುದಾಗಿ ನೋಯ್ಡಾದ ಇನ್ ಸ್ಟಿಟ್ಯೂಟ್ ಆಫ್ ಸೈಟಾಲಜಿ ಅಂಡ್ ಪ್ರಿವೆಂಟಿವ್ ಅಂಕಾಲಜಿ ಸಂಸ್ಥೆಯ ನಿರ್ದೇಶಕರು ಪ್ರಕಟಿಸಿದರು. ಈ ಅಗ್ಗದ ಸಾಧನ ವಿದ್ಯುತ್ ಇಲ್ಲದೆಯೂ ಕೆಲಸ ಮಾಡಬಲ್ಲುದಾಗಿದ್ದು ಕ್ಯಾನ್ಸರ್ ಹುಣ್ಣನ್ನು ಪತ್ತೆ ಹಚ್ಚುತ್ತದೆ. ಕತ್ತು, ಗರ್ಭಾಶಯದ ಕ್ಯಾನ್ಸರ್ ಪತ್ತೆಯ ಸುಲಭ ವಿಧಾನವನ್ನೂ ಕಂಡು ಹಿಡಿಯಲಾಗಿದೆ ಎಂದು ಅವರು ಹೇಳಿದರು.

2006: ಜೆಡ್ಡಾದಲ್ಲಿ ಹಜ್ ಯಾತ್ರೆ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 31 ಭಾರತೀಯರು ಸೇರಿ 364ಕ್ಕೂ ಹೆಚ್ಚು ಯಾತ್ರಿಕರು ಅಸು ನೀಗಿದರು. ಕಳೆದ ಐದು ವರ್ಷಗಳಲ್ಲಿ ಮೆಕ್ಕಾದಲ್ಲಿ ಸಂಭವಿಸಿದ ಭೀಕರ ದುರಂತ ಇದು. 2004ರಲ್ಲಿ ಕಾಲ್ತುಳಿತದಲ್ಲಿ 250ಕ್ಕೂ ಹೆಚ್ಚು ಮಂದಿ ಮೃತರಾಗಿದ್ದರು. ಸೈತಾನನಿಗೆ ಕಲ್ಲು ಹೊಡೆಯುವ ಸಂಪ್ರದಾಯ ಆಚರಣೆ ಕಾಲದಲ್ಲಿ ಬಸ್ಸಿನಿಂದ ಬಿದ್ದಿದ್ದ ಲಗೇಜ್ ಮೇಲೆ ಕೆಲವರು ಕಾಲಿಟ್ಟು ಮುಗ್ಗರಿಸಿದಾಗ ಈ ನೂಕುನುಗ್ಗಲು ಸಂಭವಿಸಿತು.

2006: ಬೆಂಗಳೂರು ಮೆಟ್ರೋ ಯೋಜನೆಗಾಗಿ ಖಾಸಗಿ ಭೂಸ್ವಾಧೀನ ಆರಂಭಕ್ಕೆ 6 ತಿಂಗಳುಗಳ ವಿಳಂಬದ ಬಳಿಕ ಸರ್ಕಾರ ಅಂತಿಮವಾಗಿ ಒಪ್ಪಿಗೆ ನೀಡಿತು. ಕಳೆದ ವರ್ಷ ಜುಲೈ ತಿಂಗಳಲ್ಲಿ ಈ ಸಂಬಂಧ ಸಲ್ಲಿಸಲಾಗಿದ್ದ ಕಡತಕ್ಕೆ ಹಣಕಾಸು ಸಚಿವ ಪಿ.ಜಿ.ಆರ್. ಸಿಂಧ್ಯ ಸಹಿ ಹಾಕಿದರು.

2006: ನಿರ್ಗತಿಕರು ಹಾಗೂ ಅಸಹಾಯಕರಿಗೂ ಆಹಾರ ಭದ್ರತೆಯನ್ನು ಮಾನವ ಹಕ್ಕು ಎಂಬುದಾಗಿ ಕಾನೂನುಬದ್ಧಗೊಳಿಸುವ ಕರ್ನಾಟಕ ಆಹಾರ ಭದ್ರತೆ ಸುಗ್ರೀವಾಜ್ಞೆ ಹೊರಡಿಸಲಾಗಿದೆ ಎಂದು ಕಾನೂನು ಸಚಿವ ಎಚ್. ಕೆ. ಪಾಟೀಲ ಪ್ರಕಟಿಸಿದರು.

1992: ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರ ಕುಮಾರ ಗಂಧರ್ವ (1924-1992) ನಿಧನರಾದರು.

1982: ಮಾರ್ಕ್ಸವಾದಿ ಕಮ್ಯೂನಿಸ್ಟ್ ಪಕ್ಷದ ನಾಯಕ ಜ್ಯೋತಿರ್ಮಯಿ ಬಸು ಅವರು ತೀವ್ರ ಹೃದಯಾಘಾತದಿಂದ ಜೈಪುರದಲ್ಲಿ ನಿಧನರಾದರು. ಸಂಸತ್ ಸದಸ್ಯರಾಗಿದ್ದ ಅವರಿಗೆ 48 ವರ್ಷ ವಯಸ್ಸಾಗಿತ್ತು.

1976: ಇಂಗ್ಲಿಷ್ ಪತ್ತೇದಾರಿ ಕಾದಂಬರಿಗಾರ್ತಿ ಅಗಾಥಾ ಕ್ರಿಸ್ಟೀ ತಮ್ಮ 85ನೇ ವಯಸ್ಸಿನಲ್ಲಿ ಆಕ್ಸ್ ಫೋರ್ಡ್ ಷೈರಿನಲ್ಲಿ ನಿಧನರಾದರು.

1971: ಚಿತ್ರ ಕಲಾವಿದ ಮಾನ್ ಸಿಂಗ್ ಆರ್. ರಜಪೂತ್ ಅವರು ರೂಪಸಿಂಗ್- ಕಸ್ತೂರಬಾಯಿ ದಂಪತಿಯ ಮಗನಾಗಿ ಗುಲ್ಬರ್ಗ ಜಿಲ್ಲೆಯ ಅಳಂದ ತಾಲ್ಲೂಕಿನ ಕೋತನ ಹಿಪ್ಪರಗಾದಲ್ಲಿ ಜನಿಸಿದರು.

1949: ಕಲಾವಿದ ಜಗದೀಶ್ ಜಿ.ಕೆ. ಜನನ.

1945: ಸಾಹಿತಿ ಅಂಶುಮಾಲಿ ಜನನ.

1945: ಸಾಹಿತಿ ವೈದೇಹಿ ಜನನ.

1940: ಸಾಹಿತಿ ಕೃಷ್ಣ ಕೊಲ್ಹಾರ ಕುಲಕರ್ಣಿ ಜನನ.

1940: ಸಾಹಿತಿ ಮರುಳಸಿದ್ಧಪ್ಪ ಜನನ.

1934: ಚಿಟ್ಟಗಾಂಗ್ ಶಸ್ತ್ರಾಗಾರ ದಾಳಿಯಲ್ಲಿ ವಹಿಸಿದ ಪಾತ್ರಕ್ಕಾಗಿ ಭಾರತೀಯ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಸೂರ್ಯಸೇನ್ (1894-1934) ಅವರನ್ನು ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿತು.

1933: ಖ್ಯಾತ ಸಾಹಿತಿ ಚನ್ನವೀರ ಕಣವಿಯವರ ಪತ್ನಿ ಶಾಂತಾದೇವಿ ಕಣವಿ ಈದಿನ ವಿಜಾಪುರದಲ್ಲಿ ಸಿದ್ದಪ್ಪ-ಭಾಗೀರಥಿ ದೇವಿ ದಂಪತಿಯ ಪುತ್ರಿಯಾಗಿ ಜನಿಸಿದರು. ಚಿಕ್ಕವಳಾಗಿದ್ದಾಗಲೇ ಸಾಹಿತ್ಯದಲ್ಲಿ ಒಲವು ಇದ್ದ ಶಾಂತಾದೇವಿ ಸಾಹಿತ್ಯ ಕೃಷಿ ಆರಂಭಿಸಿದ್ದು ಚನ್ನವೀರ ಕಣವಿ ಅವರ ಜೊತೆ ಮದುವೆ ಆದ ಬಳಿಕ. ಸಂಜೆ ಮಲ್ಲಿಗೆ, ಬಯಲು ಆಲಯ, ಮರುವಿಚಾರ, ಜಾತ್ರೆ ಮುಗಿದಿತ್ತು, ಕಳಚಿಬಿದ್ದ ಪೈಜಣ, ನೀಲಿಮಾ ತೀರ ಕಥಾ ಸಂಕಲನಗಳು, ಅಜಗಜಾಂತರ ಹರಟೆಗಳ ಸಂಗ್ರಹ, ನಿಜಗುಣ ಶಿವಯೋಗಿ ಮಕ್ಕಳ ಪುಸ್ತಕ, ಬಯಲು ಆಲಯ ಕಥಾ ಸಂಕಲನಗಳು ಅವರ ಪ್ರಮುಖ ಕೃತಿಗಳು. ಬಯಲು ಆಲಯ ಕಥಾ ಸಂಕಲನಕ್ಕೆ 1974ರ ಸಾಹಿತ್ಯ ಅಕಾಡೆಮಿ ಬಹುಮಾನ, 1987ರಲ್ಲಿ ಅಕಾಡೆಮಿ ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಬಂದಿವೆ. ಹಲವಾರು ಕಥೆಗಳು ಹಿಂದಿ, ಇಂಗ್ಲಿಷ್, ಮಲಯಾಳಂಗೂ ಭಾಷಾಂತರಗೊಂಡಿವೆ.

1929: ಶ್ರೀನಿವಾಸ ಹಾವನೂರ ಜನನ.

1916: ದಕ್ಷಿಣ ಆಫ್ರಿಕಾದ ಮುತ್ಸದ್ದಿ ಪೀಟರ್ ವಿಲ್ಹೆಮ್ ಬೋಥಾ ಹುಟ್ಟಿದ ದಿನ. 1978-1984ರ ಅವದಿಯಲ್ಲಿ ದಕ್ಷಿಣ ಆಫ್ರಿಕಾದ ಪ್ರಧಾನಿಯಾದ ಇವರು 1984-1989ರ ಅವಧಿಯಲ್ಲಿ ದಕ್ಷಿಣ ಆಫ್ರಿಕಾದ ಮೊತ್ತ ಮೊದಲ ಅಧ್ಯಕ್ಷರಾದರು.

1869: ಈದಿನ ಜನಿಸಿದ ಭಗವಾನ್ ದಾಸ್ (1869-1958) ಅವರು ಖ್ಯಾತ ವಿದ್ವಾಂಸ, ತತ್ವಜ್ಞಾನಿ, ಸ್ವಾತಂತ್ರ್ಯ ಯೋಧರಾಗಿದ್ದು `ಭಾರತರತ್ನ' ಪ್ರಶಸ್ತಿ ಪುರಸ್ಕೃತರಾದರು.

1848: ಮಾರ್ಕ್ವೆಸ್ ಡಾಲ್ ಹೌಸಿ ಅವರು ಭಾರತದ ಗವರ್ನರ್ ಜನರಲ್ ಆದರು. ಯುದ್ಧ ಹಾಗೂ ಸಂಧಾನಗಳ ಮೂಲಕ ರಾಜ್ಯಗಳನ್ನು ಸೇರಿಸಿ ಭಾರತದ ನಕ್ಷೆಯನ್ನು ರೂಪಿಸಿದ ವ್ಯಕ್ತಿ ಎಂದು ಈತ ಪರಿಗಣಿತನಾಗಿದ್ದಾನೆ.

No comments:

Advertisement