ಇಂದಿನ ಇತಿಹಾಸ
ಮಾರ್ಚ್ 03
'ಸ್ನೇಕ್‌ಮನು' ಅವರ ಮೈ ಜುಮ್ಮೆನ್ನಿಸುವ ಹಾವಿನೊಂದಿಗೆ ಸರಸಾಟ,'ಜೋಷ್' ಚಿತ್ರತಂಡದವರ ಒಂದಿಷ್ಟು ಡ್ಯಾನ್ಸುಗಳು, ಮಿಮಿಕ್ರಿ, ವೇದಿಕೆಯ ಹೊರಗೆ ಅದ್ದೂರಿ ಬಾಣ ಬಿರುಸಿನ ಕಾರ್ಯಕ್ರಮದೊಂದಿಗೆ 3 ದಿನಗಳ ಕನ್ನಡ ಚಲನಚಿತ್ರ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ ಸಂಜೆ ತೆರೆ ಬಿದ್ದಿತು.
2009: ಭಯೋತ್ಪಾದಕರ ನೆಲೆ ಎಂಬ ಹಣೆಪಟ್ಟಿ ಅಂಟಿಸಿಕೊಂಡ ಪಾಕಿಸ್ಥಾನದ ಲಾಹೋರ್ ಮಹಾನಗರಿಯಲ್ಲಿ ಶ್ರೀಲಂಕಾ ಕ್ರಿಕೆಟ್ ಆಟಗಾರರಿದ್ದ ಬಸ್ಸಿನ ಮೇಲೆ ಉಗ್ರರು ದಾಳಿ ನಡೆಸಿ ವಿಶ್ವವನ್ನೇ ಬೆಚ್ಚಿ ಬೀಳಿಸಿದರು. ಈ ಘಟನೆಯಲ್ಲಿ ಶ್ರೀಲಂಕಾದ ಏಳು ಆಟಗಾರರು ಹಾಗೂ ಒಬ್ಬ ಅಧಿಕಾರಿ ಗಾಯಗೊಂಡರು. ಆರು ಭದ್ರತಾ ಸಿಬ್ಬಂದಿ ಹಾಗೂ ಇಬ್ಬರು ನಾಗರಿಕರು ಸಾವನ್ನಪ್ಪಿದರು. ಆಟದ ಸೊಬಗನ್ನು ಪ್ರದರ್ಶಿಸುವ ಉತ್ಸಾಹದಿಂದ ಕ್ರೀಡಾಂಗಣದ ಕಡೆಗೆ ಹೋಗುತ್ತಿದ್ದ ಲಂಕಾ ಕ್ರಿಕೆಟಿಗರು ನಡುದಾರಿಯಲ್ಲಿಯೇ ಉಗ್ರರ ಈ ರಣತಾಂಡವ ಕಂಡು ನಡುಗಿ ಹೋದರು. ಕೆಲವೇ ನಿಮಿಷಗಳಲ್ಲಿ ಸುರಿದ ಭಾರಿ ಗುಂಡಿನ ಮಳೆಯಲ್ಲಿ ಗಾಯಗೊಂಡು ಉರುಳಿಬಿದ್ದರು. ಲಂಕಾ ತಂಡದ ನಾಯಕ ಮಾಹೇಲ ಜಯವರ್ಧನೆ, ಇತರ ಆಟಗಾರರಾದ ಕುಮಾರ ಸಂಗಕ್ಕಾರ, ತಿಲಾನ ಸಮರವೀರ, ಅಜಂತ ಮೆಂಡೀಸ್, ತರಂಗ ಪರಣವಿತನ, ಚಮಿಂದಾ ವಾಸ್ ಹಾಗೂ ಸುರಂಗ ಲಕ್ಮಲ್, ಸಹಾಯಕ ಕೋಚ್ ಪಾಲ್ ಫ್ಯಾಬ್ರೇಸ್‌ಗಾಯಗೊಂಡರು. ಪಂದ್ಯದ ಕಾಯ್ದಿರಿಸಿದ ಅಂಪೈರ್ ಅಶನ್ ರಾಜಾಗೆ ಕೂಡ ಗಂಭೀರ ಗಾಯಗಳಾದವು. ಪಾಕ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದ ಆಟ ಆಡಲು ಶ್ರೀಲಂಕಾ ಆಟಗಾರರು ಹೋಟೆಲಿನಿಂದ ತೆರಳಿದರು. ಗಡ್ಡಾಫಿ ಕ್ರೀಡಾಂಗಣಕ್ಕೆ ತೆರಳುವ ಮಾರ್ಗ ಮಧ್ಯೆ ಲಿಬರ್ಟಿ ಮಾರ್ಕೆಟ್ ಬಳಿ ಐವರು ಉಗ್ರರು ಬಸ್ಸಿನ ಮೇಲೆ ದಾಳಿ ನಡೆಸಿದರು. ಬಂದೂಕುಧಾರಿ ವ್ಯಕ್ತಿ ಮೊದಲು ಬಸ್ಸಿನ ಚಕ್ರ ಹಾಗೂ ಚಾಲಕನತ್ತ ಗುಂಡು ಹಾರಿಸಿದ. ಚಾಲಕ ಮೊದಲು ಗಾಯಗೊಂಡ. ಬಸ್ಸಿನತ್ತ ಎಸೆದ ಗ್ರೆನೇಡ್ ತಪ್ಪಿ ಹೋಯಿತು.
2009: 'ಸ್ನೇಕ್‌ಮನು' ಅವರ ಮೈ ಜುಮ್ಮೆನ್ನಿಸುವ ಹಾವಿನೊಂದಿಗೆ ಸರಸಾಟ,'ಜೋಷ್' ಚಿತ್ರತಂಡದವರ ಒಂದಿಷ್ಟು ಡ್ಯಾನ್ಸುಗಳು, ಮಿಮಿಕ್ರಿ, ವೇದಿಕೆಯ ಹೊರಗೆ ಅದ್ದೂರಿ ಬಾಣ ಬಿರುಸಿನ ಕಾರ್ಯಕ್ರಮದೊಂದಿಗೆ 3 ದಿನಗಳ ಕನ್ನಡ ಚಲನಚಿತ್ರ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ ಸಂಜೆ ತೆರೆ ಬಿದ್ದಿತು. 'ನಮ್ಮೆಲ್ಲರ ಹರಸಿ ನೀವು' ಎಂಬ ಹಾಡಿನೊಂದಿಗೆ ವೇದಿಕೆ ಪ್ರವೇಶಿಸಿದ 'ಜೋಷ್' ಚಲನಚಿತ್ರ ತಂಡದ ಕಲಾವಿದರು ಆಕರ್ಷಕ ನೃತ್ಯ ಪ್ರದರ್ಶಿಸಿದರು.
2009: ಅಮೆರಿಕದ ತನಿಖಾ ಸಂಸ್ಥೆಯಾದ ಸಿಐಎನ 92 ವಿವಾದಾತ್ಮಕ ತನಿಖಾ ದಾಖಲೆಗಳನ್ನು (ವಿಡಿಯೊ ಟೇಪುಗಳು) ನಾಶಪಡಿಸಿದ್ದನ್ನು ಒಬಾಮ ಆಡಳಿತ ನ್ಯೂಯಾರ್ಕಿ ನ್ಯಾಯಾಲಯವೊಂದರಲ್ಲಿ ಒಪ್ಪಿಕೊಂಡು, ಇದೊಂದು ಬೇಸರದ ಬೆಳವಣಿಗೆ ಎಂದೂ ಹೇಳಿತು. ಈ ಹಿಂದಿನ ಬುಶ್ ಆಡಳಿತ ಅವಧಿಯಲ್ಲಿ ಸಿಐಎ ನಡೆಸಿದ 92 ವಿವಾದಾತ್ಮಕ ತನಿಖಾ ದಾಖಲೆಗಳನ್ನು ನಾಶಪಡಿಸಿದ್ದು ನಿಜ ಎಂದು ನ್ಯಾಯಾಂಗ ಇಲಾಖೆಯು ಕೋರ್ಟಿಗೆ ತಿಳಿಸಿತು. ವಿದೇಶಗಳಲ್ಲಿ ಅಮೆರಿಕದ ವಶದಲ್ಲಿರುವ ಕೈದಿಗಳನ್ನು ಯಾವ ರೀತಿ ನೋಡಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ದಾಖಲೆಗಳನ್ನು ನೀಡಬೇಕೆಂದು ಕೋರಿ ಅಮೆರಿಕದ ನಾಗರಿಕ ಹಕ್ಕು ಸಂಘಟನೆ (ಎಸಿಎಲ್‌ಯು) ಸಲ್ಲಿಸಿದ ಕೋರ್ಟ್ ನೋಟೀಸಿಗೆ ಉತ್ತರವಾಗಿ ಇದನ್ನು ತಿಳಿಸಲಾಯಿತು. 'ದೊಡ್ಡ ಪ್ರಮಾಣದಲ್ಲಿ ವಿಡಿಯೊ ಟೇಪುಗಳನ್ನು ನಾಶಪಡಿಸಿದ್ದನ್ನು ಗಮನಿಸಿದರೆ ಅಮೆರಿಕವು ತನ್ನ ಅಕ್ರಮ ತನಿಖೆಯನ್ನು ಮುಚ್ಚಿಡಲು ಯತ್ನಿಸಿರುವುದು ಹಾಗೂ ನ್ಯಾಯಾಲಯದ ಆದೇಶ ಪಾಲಿಸದೆ ಇರುವುದು ಸ್ಪಷ್ಟವಾಗುತ್ತದೆ' ಎಂದು ಎಸಿಎಲ್‌ಯುನ ಅಟಾರ್ನಿಯೂ ಆಗಿರುವ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರ ಪುತ್ರಿ ಅಮ್ರಿತ್ ಸಿಂಗ್ ಹೇಳಿಕೆಯೊಂದರಲ್ಲಿ ತಿಳಿಸಿದರು. ನಾಶಪಡಿಸಲಾದ ವಿಡಿಯೊ ಟೇಪುಗಳ ವಿವರ ಬಹಿರಂಗಗೊಂಡಿಲ್ಲ. ಇವು 2001ರ ಸೆ. 11ರಂದು ಸಂಭವಿಸಿದ ಭಯೋತ್ಪಾದನೆ ದಾಳಿಗೆ ಸಂಬಂಧಿಸಿದವು ಎಂದು ಶ್ವೇತಭವನದ ವಕ್ತಾರ ರ್ಗಾರ್ಟ್ ಗಿಬ್ಸ್ ಹೇಳಿದರು.
2009: ಬ್ರಿಟನ್‌ನಲ್ಲಿ 'ತೆಂಗಿನಕಾಯಿ'ಎಂಬ ಪದ ಬಳಸಿ ನಿಂದಿಸುವುದು ಜನಾಂಗೀಯ ನಿಂದನೆಯ ಒಂದು ರೂಪವಾಗಿದ್ದು, ಭಾರತೀಯ ಮೂಲದ ವ್ಯಕ್ತಿಯೊಬ್ಬರಿಗೆ ಇಂತಹ ಪದ ಪ್ರಯೋಗಿಸಿದ ಬ್ರಿಸ್ಟಲ್‌ನ ನಗರಸಭಾ ಸದಸ್ಯರೊಬ್ಬರು ಕ್ಷಮೆ ಯಾಚಿಸಿದರು. ನಗರಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಆಫ್ರಿಕಾ-ಕೆರಿಬಿಯನ್ ಮೂಲದ ಸದಸ್ಯರಾದ ಶಿರ್ಲೆ ಬ್ರೌನ್ (ಲಿಬರಲ್ ಡೆಮಾಕ್ರಟಿಕ್) ಅವರು ಭಾರತೀಯ ಮೂಲದ ಕನ್ಸರ್ವೇಟಿವ್ ಸಹೋದ್ಯೋಗಿ ಜಯ್ ಜೇಥ್ವಾ ಅವರಿಗೆ ಈ 'ತೆಂಗಿನಕಾಯಿ' ಪದ ಪ್ರಯೋಗಿಸಿದ್ದರು. ತೆಂಗಿನಕಾಯಿ ಪದವನ್ನು ಏಷ್ಯಾ ಮೂಲದ ಜನರಿಗೆ ಬಳಸಲಾಗುತ್ತದೆ. ತೆಂಗು ಹೊರಗೆ ಕಂದು ಬಣ್ಣದಿಂದ ಕೂಡಿದ್ದು, ಒಳಗಡೆ ಬಿಳಿ ಬಣ್ಣ ಹೊಂದಿರುತ್ತದೆ. ಬ್ರಿಟನ್ನಿನಲ್ಲಿ ಇರುವ ಬಹುಸಂಖ್ಯೆಯ ಬಿಳಿಯ ಸಮುದಾಯದವರ ವ್ಯಕ್ತಿತ್ವ ಅಳವಡಿಸಿಕೊಳ್ಳಲು ಯತ್ನಿಸುವ ಈ ಏಷ್ಯನ್ನರು, ತಮ್ಮ ಸಂಸ್ಕೃತಿ ಮರೆಮಾಚುತ್ತಿದ್ದಾರೆ ಎಂದು ಸಂಕೇತಿಸಲು ಈ 'ತೆಂಗಿನಕಾಯಿ' ಪದ ಬಳಕೆಯಲ್ಲಿದೆ. ಗುಲಾಮಗಿರಿ ವ್ಯಾಪಾರದ ಇತಿಹಾಸ ಬೋಧಿಸುವುದಕ್ಕೆ 7.50 ಲಕ್ಷ ಪೌಂಡ್ ಹಣವನ್ನು ಸಮಾನತೆ ಪ್ರತಿ ಪಾದಿಸುವ ಗುಂಪೊಂದಕ್ಕೆ ನೀಡುವುದನ್ನು ವಿರೋಧಿಸಿ ಜಯ್ ಜೇಥ್ವಾ ಅವರು ಮಾತನಾಡಿದ್ದರು. ಆಗ ಬ್ರೌನ್ 'ತೆಂಗಿನಕಾಯಿ' ಪದ ಪ್ರಯೋಗಿಸಿ ಅವಮಾನ ಮಾಡಿದ್ದರು.
2008: ರಷ್ಯದಲ್ಲಿ ನಡೆದ ಚುನಾವಣೆಯಲ್ಲಿ ಡಿಮಿಟ್ರಿ ಮೆಡ್ವಡೆವ್ (42) ಅವರು ಶೇ 70.22ರಷ್ಟು ಮತ ಗಳಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಚಲಾಯಿತ ಮತಗಳ ಪೈಕಿ ಶೇ 99ರಷ್ಟು ಮತ ಎಣಿಕೆ ಕೊನೆಗೊಂಡಾಗ ಸಮೀಪದ ಕಮ್ಯುನಿಸ್ಟ್ ಪಾರ್ಟಿ ನಾಯಕ ಗೆನ್ನಡಿ ಜುಗನೊವ್ ಶೇ 17.77ರಷ್ಟು ಹಾಗೂ ಅಲ್ಟ್ರಾ ನ್ಯಾಶನಲಿಸ್ಟ್ ನಾಯಕ ವ್ಲಾಡಿಮಿರ್ ಝಿರಿನೊವಿಸ್ಕಿ ಶೇ 9ರಷ್ಟು ಮತ ಗಳಿಸಿದ್ದರು. ನಿರ್ಗಮನ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಂದ ಕಳೆದ ಡಿಸೆಂಬರಿನಲ್ಲೇ ರಾಷ್ಟ್ರದ ಮುಂದಿನ ಅಧ್ಯಕ್ಷ ಎಂದು ಬಿಂಬಿತರಾದ ಮೆಡ್ವೆಡೆವ್ ಅವರು ನಂತರ ಮೇ 7ರಂದು ಅಧಿಕಾರ ಸ್ವೀಕರಿಸಿದರು.
2008: ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಗಳ 91 ಮಂದಿ ಪ್ರಜೆಗಳಿದ್ದ ದೊಡ್ಡ ದೋಣಿಯೊಂದನ್ನು ಲಂಕಾ ನೌಕಾಪಡೆ ಎಲ್ ಟಿ ಟಿ ಇ ಬಾಹುಳ್ಯದ ಮಲೈತೀವು ಸಮೀಪ ವಶಕ್ಕೆ ತೆಗೆದುಕೊಂಡು ಅದರೊಳಗೆ ಬದುಕಿ ಉಳಿದಿದ್ದ 71 ಮಂದಿಗೆ ಅಗತ್ಯ ಆಹಾರ, ಔಷಧ ಉಪಚಾರ ನೀಡಿತು. ನೌಕೆಯಲ್ಲಿದ್ದ ಸುಮಾರು 20 ಮಂದಿ ಹಸಿವೆ ಮತ್ತು ನೀರಿನ ಕೊರತೆಯಿಂದ ಇದಕ್ಕೆ ಮುನ್ನವೇ ಮೃತರಾಗಿದ್ದರು. ಬಾಂಗ್ಲಾ- ಮ್ಯಾನ್ಮಾರ್ ಗಡಿಯ ಕಾಕ್ಸ್ ಬಜಾರ್ ಎಂಬಲ್ಲಿಂದ ಈ ನೌಕೆ ಫೆ.9ರಂದು ಥಾಯ್ಲೆಂಡ್ ಮತ್ತು ಮಲೇಷಿಯಾದತ್ತ ಹೊರಟಿತ್ತು. ಮಾನ್ಮಾರಿನ 67 ಮತ್ತು ಬಾಂಗ್ಲಾದ 24 ಮಂದಿ ಉದ್ಯೋಗ ಅರಸಿ ಈ ಅಕ್ರಮ ಯಾನ ಕೈಗೊಂಡಿದ್ದರು. ಆದರೆ ದೋಣಿ ಸಮುದ್ರದಲ್ಲಿ ಕೆಟ್ಟು ಹೋಗಿ 13 ದಿನಗಳ ಕಾಲ ನೀರಲ್ಲಿ ತೇಲುತ್ತ ಶ್ರೀಲಂಕಾ ದಡದತ್ತ ಬಂದಿತ್ತು. ಈ ದೋಣಿಯನ್ನು ಕಂಡ ಮೀನುಗಾರರು ನೌಕಾಪಡೆಗೆ ಮಾಹಿತಿ ಮುಟ್ಟಿಸಿದ್ದರು.
2008: ಎಲ್ ಟಿ ಟಿ ಇ ನಾಯಕ `ಪ್ರಭಾಕರನ್' ಹೆಸರಿನ ಸಿನಿಮಾಕ್ಕೆ ಶ್ರೀಲಂಕಾದ ಸೆನ್ಸಾರ್ ಮಂಡಳಿ ಅನುಮತಿ ನೀಡಿತು. ಸುಮಾರು ಮೂರು ದಶಕಗಳ ಜನಾಂಗೀಯ ಕಲಹದ ಮೇಲೆ ಬೆಳಕು ಚೆಲ್ಲುವ ಪ್ರಥಮ ಪ್ರಯತ್ನ ಇದಾಗಿದ್ದು, ಯಾವುದೇ ಪೂರ್ವಾಗ್ರಹಕ್ಕೆ ಒಳಗಾಗದೆ ಚಿತ್ರ ನಿರ್ಮಿಸಲಾಗಿದೆ ಎಂದು ನಿರ್ಮಾಪಕರು ಕೊಲಂಬೋದಲ್ಲಿ ಪ್ರಕಟಣೆಯಲ್ಲಿ ತಿಳಿಸಿದರು.
2008: ದಕ್ಷಿಣ ಆಫ್ಘಾನಿಸ್ಥಾನದಲ್ಲಿ ರಕ್ಷಣಾ ಪಡೆ ಹಾಗೂ ನ್ಯಾಟೊ ಗುಂಪು ಕೈಗೊಂಡ ಜಂಟಿ ಕಾರ್ಯಾಚರಣೆಯಲ್ಲಿ 20 ತಾಲಿಬಾನ್ ಉಗ್ರರು ಹತರಾದರು ಅಥವಾ ಗಾಯಗೊಂಡರು ಎಂದು ರಕ್ಷಣಾ ಸಚಿವಾಲಯ ತಿಳಿಸಿತು. ತಾಲಿಬಾನ್ ಉಗ್ರರೇ ಬಹುಸಂಖ್ಯೆಯಲ್ಲಿದ್ದ ದಕ್ಷಿಣ ಪ್ರಾಂತ್ಯದ ಹೆಲ್ಮಂಡ್ನಲ್ಲಿ ಈ ಕಾರ್ಯಾಚರಣೆ ನಡೆಯಿತು.
2008: ಇರಾಕಿನ ರಾಜಧಾನಿ ಬಾಗ್ದಾದಿನ ಮಧ್ಯಭಾಗದಲ್ಲಿ ಕಾರುಬಾಂಬ್ ಸ್ಪೋಟದಿಂದಾಗಿ 23 ಜನ ಮೃತರಾಗಿ 45 ಮಂದಿ ಗಾಯಗೊಂಡರು. ಕಾರ್ಮಿಕ ಸಚಿವಾಲಯ ಕಟ್ಟಡದ ಬಳಿಯ ಮಾರುಕಟ್ಟೆ ಪ್ರದೇಶವಾದ ಬಾಬ್ ಅಲ್ ಮುಝಾಮ್ ಬಳಿ ಬಾಂಬ್ ಸ್ಫೋಟಗೊಂಡಿತು.
2008: ನ್ಯಾಯಾಧೀಶರು ಹಾಗೂ ನ್ಯಾಯಾಂಗ ಅಧಿಕಾರಿಗಳು ಅವರು ಕೆಲಸ ನಿರ್ವಹಿಸಿರುವ ಹಾಗೂ ಅದಕ್ಕಿಂತ ಕೆಳಹಂತದ ಕೋರ್ಟುಗಳಲ್ಲಿ ತಮ್ಮ ನಿವೃತ್ತಿಯ ನಂತರ ವಕೀಲಿ ವೃತ್ತಿ ನಡೆಸಬಾರದು ಎಂಬ ನೂತನ ನಿಯಮ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿತು. ಭಾರತೀಯ ವಕೀಲರ ಪರಿಷತ್ತಿನಿಂದ ತಿದ್ದುಪಡಿಯಾಗಿ ಜಾರಿಯಾಗಿರುವ ಈ ನಿಯಮವನ್ನು ರದ್ದು ಮಾಡುವಂತೆ ನಿವೃತ್ತ ನ್ಯಾಯಾಂಗ ಅಧಿಕಾರಿ ವಿ.ಪದ್ಮನಾಭ ಕೆದಿಲಾಯ ಕೋರ್ಟನ್ನು ಕೋರಿದರು. ಈ ಅರ್ಜಿಗೆ ಸಂಬಂಧಿಸಿದಂತೆ ಭಾರತೀಯ ವಕೀಲರ ಪರಿಷತ್ತು ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ ನೋಟಿಸ್ ಜಾರಿಗೆ ಆದೇಶಿಸಿದರು. ನೂತನ ನಿಯಮ ಜಾರಿಯಾಗುವುದಕ್ಕಿಂತ ಮುಂಚೆ ಇದ್ದ ನಿಯಮದ ಪ್ರಕಾರ, ನ್ಯಾಯಾಧೀಶರು ಅಥವಾ ನ್ಯಾಯಾಂಗ ಅಧಿಕಾರಿಗಳು ನಿವೃತ್ತಿಗೆ ಮೂರು ವರ್ಷ ಮುಂಚಿತವಾಗಿ ಯಾವ ಕೋರ್ಟಿನಲ್ಲಿ ಕೆಲಸ ನಿರ್ವಹಿಸಿರುತ್ತಾರೆಯೋ, ಅಂತಹ ಕೋರ್ಟುಗಳಲ್ಲಿ ಮಾತ್ರ ನಿವೃತ್ತಿಯ ನಂತರ ಕೇವಲ ಎರಡು ವರ್ಷಗಳು ವಕೀಲಿ ವೃತ್ತಿ ನಡೆಸಬಾರದು ಎಂದಿತ್ತು. ಅವರು ಬೇರೆ ಯಾವುದೇ ಕೋರ್ಟುಗಳಲ್ಲಿ ವೃತ್ತಿ ನಡೆಸಬಹುದಾಗಿತ್ತು.
2008: ಕರ್ನಾಟಕ ಸಂಗೀತದ ವಿದ್ವಾಂಸ ಚಿಂತಲಪಲ್ಲಿ ನಾಗರಾಜರಾವ್ (97) ಅವರು ಬೆಂಗಳೂರಿನಲ್ಲಿ ನಿಧನರಾದರು. ವಿದ್ವಾನ್ ಚಿಂತಲಪಲ್ಲಿ ವೆಂಕಟರಾವ್ ಅವರ ಶಿಷ್ಯರಾಗಿದ್ದ ನಾಗರಾಜರಾವ್ ಅವರು ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಅನೇಕ ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿದ್ದರು. `ಸಂಗೀತ ಪರಂಪರಾ ನಿಧಿ', `ಕಲಾಭೂಷಣ', `ಆರ್. ಕೆ. ಪದ್ಮನಾಭ' ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿದ್ದವು.
2008: ಜಾಗತಿಕ ಖಾಸಗಿ ಬ್ಯಾಂಕ್ ಎಚ್ ಎಸ್ ಬಿ ಸಿ, ನಿರ್ದೇಶಕರಾಗಿ ಇನ್ಫೋಸಿಸ್ ಮುಖ್ಯಸ್ಥ ನಾಗವಾರ ರಾಮರಾವ್ ನಾರಾಯಣ ಮೂರ್ತಿ ಸಿಬಿಇ (61) ನೇಮಕಗೊಂಡರು. ಇದಕ್ಕಾಗಿ ಮೂರ್ತಿ ವಾರ್ಷಿಕ ರೂ 50 ಲಕ್ಷ (65,000ಪೌಂಡ್) ಸಂಬಳ ಪಡೆಯುವರು. ಈ ನೇಮಕ ಮೇ 1, 2008 ರಿಂದ ನೇಮಕ ಜಾರಿಯಾಗುತ್ತದೆ. ಅವರು ಸ್ವತಂತ್ರ ನಿರ್ದೇಶಕರಾಗಿರುತ್ತಾರೆ ಎಂದು ಎಚ್ ಎಸ್ ಬಿ ಸಿ ತಿಳಿಸಿತು.
2008: ಕನ್ನಡ ಮಾಧ್ಯಮದಲ್ಲಿ ತರಗತಿ ನಡೆಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟು ಇಂಗ್ಲಿಷ್ ಮಾಧ್ಯಮದಲ್ಲಿ ಶಾಲೆ ನಡೆಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿತು. `ಕನ್ನಡ ಮಾಧ್ಯಮದಲ್ಲಿಯೇ ತರಗತಿ ನಡೆಸುತ್ತೇವೆ' ಎಂದು ಶಿಕ್ಷಣ ಇಲಾಖೆಗೆ ಮುಚ್ಚಳಿಕೆ ಬರೆದುಕೊಟ್ಟಿದ್ದರೆ ಅದನ್ನು ಪಾಲಿಸುವುದು ಪ್ರತಿಯೊಂದು ಶಾಲೆಯ ಕರ್ತವ್ಯ. ಸ್ವಇಚ್ಛಾ ಯೋಜನೆ ಅಡಿ ಬರೆದುಕೊಡಲಾದ ಈ ಮುಚ್ಚಳಿಕೆಗೆ ಶಿಕ್ಷಣ ಸಂಸ್ಥೆಗಳು ಬದ್ಧವಾಗಿರಲೇಬೇಕು ಎಂದು ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಸ್ಪಷ್ಟಪಡಿಸಿದರು.
2008: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯಲ್ಲಿನ ವಿಳಂಬವನ್ನು ಪ್ರತಿಭಟಿಸಿ ಹಾಗೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಆ ಭಾಗದ ಜನರಿಗೆ ದ್ರೋಹ ಎಸಗಿದೆ ಎಂದು ಆರೋಪಿಸಿ ತೆಲಂಗಾಣ ರಾಷ್ಟ್ರ ಸಮಿತಿ (ಟಿ ಆರ್ ಎಸ್)ಯ ನಾಲ್ಕು ಜನ ಸದಸ್ಯರು ಲೋಕಸಭೆಗೆ ರಾಜೀನಾಮೆ ನೀಡಿದರು.
2007: ತುಳು ಭಾಷೆ, ಸಾಹಿತ್ಯ ಮತ್ತು ಕಲೆಯ ಅಭಿವೃದ್ಧಿಗೆ ಅನನ್ಯ ಸೇವೆ ಸಲ್ಲಿಸಿದ್ದಕ್ಕಾಗಿ ತುಳು ಸಾಹಿತ್ಯ ಅಕಾಡೆಮಿ ನೀಡುವ ಗೌರವ ಪ್ರಶಸ್ತಿಗೆ ಡಾ. ವಾಮನ ನಂದಾವರ (ತುಳು ಸಾಹಿತ್ಯ ಸಂಶೋಧನೆ), ರಾಮದಾಸ್ ದೇವಾಡಿಗ (ತುಳು ನಾಟಕ ಚಲನಚಿತ್ರ) ಹಾಗೂ ಮಾಚಾರು ಗೋಪಾಲ ನಾಯ್ಕ (ತುಳು ಜಾನಪದ) ಅವರನ್ನು 2006ನೇ ಸಾಲಿಗೆ ಆಯ್ಕೆ ಮಾಡಲಾಯಿತು.
2006: ಉಸಿರಾಟದ ತೊಂದರೆ ಮತ್ತು ಎದೆನೋವಿನ ಕಾರಣ ಬೆಂಗಳೂರಿನ ವೊಕಾರ್ಡ್ ಆಸ್ಪತ್ರೆಗೆ ದಾಖಲಾಗಿದ್ದ ಕನ್ನಡದ ವರನಟ ರಾಜಕುಮಾರ್ ಮನೆಗೆ ವಾಪಸಾದರು.
2006: ದಕ್ಷಿಣ ಧ್ರುವ (ಅಂಟಾರ್ಕ್ಟಿಕ್) ಪ್ರದೇಶದ ಕೆಳಗೆ ವೋಲ್ಟೋಕ್ ಹೆಸರಿನ ಸ್ಫಟಿಕ ಶುದ್ಧ ಸರೋವರ ಇರುವುದನ್ನು ತಾವು ಪತ್ತೆ ಹಚ್ಚಿರುವುದಾಗಿ ಈ ಪ್ರದೇಶದಲ್ಲಿ ಸಂಶೋಧನೆ ನಿರತರಾಗಿರುವ ರಷ್ಯಾದ ವಿಜ್ಞಾನಿಗಳು ಸುದ್ದಿ ಕಳುಹಿಸಿದರು. ಈ ಸರೋವರದ ಪತ್ತೆಗಾಗಿ ಅವರು ಹಿಮದ ರಾಶಿಯ ಕೆಳಗೆ 430 ಅಡಿ ಸುರಂಗ ಕೊರೆದಿದ್ದು, 2008ರ ವೇಳೆಗೆ ಸರೋವರದ ಅಸ್ತಿತ್ವ ಸಾಬೀತು ಖಚಿತ ಎಂದು ಹೇಳಿದರು.
2006: ರೈಲ್ವೇ ಸಚಿವಾಲಯ ನೇಮಿಸಿದ್ದ ನ್ಯಾಯಮೂರ್ತಿ ಯು.ಪಿ. ಬ್ಯಾನರ್ಜಿ ಸಮಿತಿಯು ರೈಲ್ವೇ ಮಂಡಳಿ ಅಧ್ಯಕ್ಷ ಜೆ.ಸಿ. ಬತ್ರಾ ಅವರಿಗೆ ತನ್ನ ಅಂತಿಮ ವರದಿ ಸಲ್ಲಿಸಿ, ಗೋಧ್ರಾದ ಸಾಬರಮತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಸಂಭವಿಸಿದ ಬೆಂಕಿ ಅನಾಹುತ ಒಂದು ಆಕಸ್ಮಿಕ ಎಂದು ಹೇಳಿತು. 2002ರ ಫೆಬ್ರುವರಿ 22ರಂದು ಸಾಬರಮತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಕರಸೇವಕರು ಪ್ರಯಾಣಿಸುತ್ತಿದ್ದ ಎಸ್-6 ಬೋಗಿಗೆ ಉದ್ದೇಶ ಪೂರ್ವಕ ಬೆಂಕಿ ಹಾಕಿಲ್ಲ, ಅದೊಂದು ಆಕಸ್ಮಿಕ ಘಟನೆ ಎಂದು ವರದಿ ತಿಳಿಸಿತು. 2005ರ ಜನವರಿಯಲ್ಲಿ ನೀಡಿದ ಮಧ್ಯಂತರ ವರದಿಯಲ್ಲೂ ಬ್ಯಾನರ್ಜಿ ಇದನ್ನೇ ಹೋಲುವ ಅಂಶಗಳನ್ನು ನೀಡಿದ್ದರು.
1962: ಜಾಕಿ ಜಾಯ್ನರ್ ಕೆರ್ ಸೀ ಹುಟ್ಟಿದ ದಿನ. ಅಮೆರಿಕದ ಅಥ್ಲೆಟಿಕ್ ಆದ ಈಕೆ ಹೆಪ್ಲಾಥಾನಿನಲ್ಲಿ 7000ಕ್ಕೂ ಹೆಚ್ಚು ಪಾಯಿಂಟ್ ಗಳಿಸಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
1951: ಕಲಾವಿದೆ ಮಾಲತಿ ಶರ್ಮ ಜನನ.
1941: ಕಲಾವಿದ ಎಸ್. ಜಿ. ವಾಸುದೇವ್ ಜನನ.
1923: ಇಬ್ಬರು ಕಿರಿಯ ಪತ್ರಕರ್ತರಾದ ಹೆನ್ರಿ ಆರ್. ಲ್ಯೂಸ್ ಮತ್ತು ಬ್ರಿಟನ್ ಹಡ್ಡನ್ ನ್ಯೂಯಾರ್ಕಿನಲ್ಲಿ `ಟೈಮ್' ಮ್ಯಾಗಜಿನ್ನಿನ ಮೊದಲ ಸಂಚಿಕೆಯನ್ನು ಪ್ರಕಟಿಸಿದರು. 1929ರಲ್ಲಿ ಲ್ಯೂಸ್ ಅವರು ವ್ಯಾಪಾರಿ ಮ್ಯಾಗಜಿನ್ `ಫಾರ್ಚೂನ್'ನ್ನು ಹೊರತಂದರು. 1936ರಲ್ಲಿ ಸಚಿತ್ರ ಮ್ಯಾಗಜಿನ್ `ಲೈಫ್'ನ್ನು ಮೊತ್ತ ಮೊದಲ ಬಾರಿಗೆ ಪ್ರಕಟಿಸಿದರು.
1847: ಅಮೆರಿಕಾದ ಅಲೆಗ್ಸಾಂಡರ್ ಗ್ರಹಾಂ ಬೆಲ್ ಹುಟ್ಟಿದ ದಿನ. ಈತ ಟೆಲಿಫೋನನ್ನು ಸಂಶೋಧಿಸಿ ಖ್ಯಾತಿ ಪಡೆದ ವ್ಯಕ್ತಿ. (2002ರಲ್ಲಿ ಇಟಲಿಯ ವಲಸೆಗಾರ ಆಂಟೋನಿಯೋ ಮೆವುಸ್ಸಿಯನ್ನು `ಟೆಲಿಫೋನ್' ಸಂಶೋಧಕ ಎಂಬುದಾಗಿ ಮಾನ್ಯತೆ ನೀಡುವ ಮೂಲಕ ಅಮೆರಿಕನ್ ಕಾಂಗ್ರೆಸ್ ಅಂಗೀಕೃತ ಇತಿಹಾಸವನ್ನು ಬದಲಾಯಿಸಿತು. ಆಂಟೋನಿಯೋ ಮೆವುಸ್ಸಿ ತನ್ನ ವರ್ಕ್ ಶಾಪ್ನಿಂದ ಬೆಡ್ ರೂಮಿಗೆ ವೈರ್ ಸಂಪರ್ಕ ಇಟ್ಟುಕೊಂಡು ತಾನು ಕೆಲಸ ಮಾಡುತ್ತಿದ್ದಾಗಲೇ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಪತ್ನಿಯ ಜೊತೆಗೆ ಸಂಪರ್ಕ ಹೊಂದಿದ್ದ. ಈತನ ಈ `ಟೆಲೆಟ್ರೊಫೋನ್' ನ್ನು 1860ರಲ್ಲಿ ನ್ಯೂಯಾರ್ಕಿನಲ್ಲಿ ಪ್ರದರ್ಶಿಸಲಾಯಿತು. ಆಗ `ಟೆಲಿಫೋನ್' ಸಂಶೋಧಕ ಗ್ರಹಾಂಬೆಲ್ ಅಲ್ಲ, ಆಂಟೋನಿಯೋ ಮೆವುಸ್ಸಿ ಎಂಬುದು ಬೆಳಕಿಗೆ ಬಂತು.)
1839: ಜೆಮ್ ಸೆಟ್ ಜಿ ನಾಸ್ಸೇರ್ ವಾನ್ ಜಿ ಟಾಟಾ (1839-1904) ಹುಟ್ಟಿದರು. ಭಾರತದಲ್ಲಿ ಟಾಟಾ ಉದ್ಯಮ ಸಾಮ್ರಾಜ್ಯ ಸ್ಥಾಪಿಸಿದ ಇವರು ಬಿಹಾರಿನಲ್ಲಿ ಜೆಮ್ ಶೆಡ್ ಪುರದಲ್ಲಿ ಭಾರತದ ಮೊತ್ತ ಮೊದಲ ಆಧುನಿಕ ಉಕ್ಕು ಕಾರ್ಖಾನೆಯನ್ನು ಸ್ಥಾಪಿಸಿದರು.
1707: ಮೊಘಲ್ ಚಕ್ರವರ್ತಿ ಔರಂಗಜೇಬ್ (1658-1707) ತನ್ನ 88ನೇ ವಯಸ್ಸಿನಲ್ಲಿ ಮೃತನಾದ.
1581: ನಾಲ್ಕನೇ ಸಿಖ್ ಗುರು ಗುರು ರಾಮದಾಸ್ ನಿಧನರಾದರು. ಅರ್ಜುನ್ ಅವರ ಉತ್ತರಾಧಿಕಾರಿಯಾದರು.
No comments:
Post a Comment