My Blog List

Tuesday, April 6, 2010

ಇಂದಿನ ಇತಿಹಾಸ History Today ಮಾರ್ಚ್ 04

ಇಂದಿನ ಇತಿಹಾಸ

ಮಾರ್ಚ್ 04
ಹಿಂದಿನ ಪರೀಕ್ಷೆಯಲ್ಲಿ ಗುರಿ ತಲುಪಲು ವಿಫಲವಾಗಿದ್ದ ಬ್ರಹ್ಮೋಸ್ ಕ್ಷಿಪಣಿಯ ಹೊಸ ಮಾದರಿಯ ಪರೀಕ್ಷಾರ್ಥ ಪ್ರಯೋಗ ರಾಜಸ್ಥಾನದ ಮರುಭೂಮಿಯಲ್ಲಿರುವ ಪೋಖ್ರಾನ್‌ನಲ್ಲಿ ಯಶಸ್ವಿಯಾಗಿ ನಡೆಯಿತು. 'ಬೆಳಗ್ಗೆ 10.30 ಸುಮಾರಿಗೆ ಎರಡನೇ ಮಾದರಿಯ ಬ್ರಹ್ಮೋಸ್ ಕ್ಷಿಪಣಿಯನ್ನು ಉಡಾಯಿಸಲಾಯಿತು.

2009: ಲಾಹೋರಿನಲ್ಲಿ ನಡೆದ ಕ್ರಿಕೆಟಿಗರ ಮೇಲಣ ದಾಳಿಯಲ್ಲಿ ಭಾರತದ ಕೈವಾಡವಿದೆ ಎಂದು ಲಾಹೋರ್‌ ಕಮಿಷನರ್ ಖುಸ್ರೊ ಪರ್ವೇಜ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಗೃಹ ಸಚಿವ ಪಿ.ಚಿದಂಬರಮ್ ಅವರು 'ಭಾರತ ಭಯೋತ್ಪಾದನೆಯನ್ನು ಸಹಿಸುವುದೂ ಇಲ್ಲ, ಅದನ್ನು 'ರಫ್ತು' ಮಾಡುವುದೂ ಇಲ್ಲ' ಎಂದು ಹೇಳಿದರು. 'ಇವೆಲ್ಲಾ ನಿರಾಧಾರ ಆರೋಪಗಳು. ಮುಂಬೈ ದಾಳಿ ಸಂದರ್ಭದಲ್ಲಿ ಕೂಡಾ ಪಾಕಿಸ್ಥಾನದವರು ಇದೇ ತೆರನಾದ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಾ ದಿನ ತಳ್ಳುತ್ತಿದ್ದುದನ್ನು ನಾವಿನ್ನೂ ಮರೆತಿಲ್ಲ' ಎಂದು ಅವರು ನುಡಿದರು.

2009: ಬೈಪಾಸ್ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಐದು ವಾರಗಳ ಬಳಿಕ ಪ್ರಧಾನಿ ಮನಮೋಹನ ಸಿಂಗ್ ಮೊದಲ ಬಾರಿಗೆ ಅಧಿಕೃತವಾಗಿ ತಮ್ಮ ಕೆಲಸಕ್ಕೆ ಹಾಜರಾದರು. ಉಲ್ಲಸಿತರಾಗಿದ್ದ ಅವರು ಆಫ್ರಿಕಾ ಖಂಡದ ದೇಶ ಬೆನಿನ್‌ ಅಧ್ಯಕ್ಷ ಬೋನಿ ಯಾಯಿ ಅವರೊಂದಿಗೆ 90 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಎರಡೂ ದೇಶಗಳ ನಡುವೆ ಮೂರು ಒಪ್ಪಂದಗಳಿಗೆ ಸಹಿ ಹಾಕಲಾಯಿತು.

2009: ಹಿಂದಿನ ಪರೀಕ್ಷೆಯಲ್ಲಿ ಗುರಿ ತಲುಪಲು ವಿಫಲವಾಗಿದ್ದ ಬ್ರಹ್ಮೋಸ್ ಕ್ಷಿಪಣಿಯ ಹೊಸ ಮಾದರಿಯ ಪರೀಕ್ಷಾರ್ಥ ಪ್ರಯೋಗ ರಾಜಸ್ಥಾನದ ಮರುಭೂಮಿಯಲ್ಲಿರುವ ಪೋಖ್ರಾನ್‌ನಲ್ಲಿ ಯಶಸ್ವಿಯಾಗಿ ನಡೆಯಿತು. 'ಬೆಳಗ್ಗೆ 10.30 ಸುಮಾರಿಗೆ ಎರಡನೇ ಮಾದರಿಯ ಬ್ರಹ್ಮೋಸ್ ಕ್ಷಿಪಣಿಯನ್ನು ಉಡಾಯಿಸಲಾಯಿತು. ಎರಡೂವರೆ ನಿಮಿಷದಲ್ಲಿ ಅದು ಗುರಿ ತಲುಪಿತು' ಎಂದು ರಷ್ಯಾದ ವಿಜ್ಞಾನಿಗಳೊಂದಿಗೆ ಸೇರಿ ಅದನ್ನು ಅಭಿವೃದ್ಧಿಪಡಿಸಿದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆಯ (ಡಿಆರ್‌ಡಿಓ) ಅಧಿಕಾರಿಗಳು ಮಾಹಿತಿ ನೀಡಿದರು.

2009: ಚುನಾವಣಾ ಆಯುಕ್ತ ನವೀನ್ ಚಾವ್ಲಾ ಏಪ್ರಿಲ್ 20ರಂದು ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಳ್ಳುವರು. ಅದೇ ದಿನ ಹಾಲಿಮುಖ್ಯ ಚುನಾವಣಾ ಆಯುಕ್ತ ಎನ್. ಗೋಪಾಲಸ್ವಾಮಿ ನಿವೃತ್ತರಾಗುವರು. ಏ. 20ರಿಂದ ಜಾರಿಯಾಗುವಂತೆ ಚಾವ್ಲಾ ಅವರನ್ನು ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಿಸಲು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಒಪ್ಪಿಗೆ ನೀಡಿರುವುದಾಗಿ ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿತು.

2009: ಶನಿಗ್ರಹದ ಹೊರ ಕಕ್ಷೆಯಲ್ಲಿ ಇರುವ ಬಳೆಗಳಲ್ಲಿ ಮಂಕಾದ ಉಪಗ್ರಹವೊಂದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ, ಇದನ್ನು ಬಾಹ್ಯಾಕಾಶ ನೌಕೆ ಕ್ಯಾಸಿನಿ ಗುರುತಿಸಿದೆ ಎಂದು ಎಂದು ಅಂತರ ರಾಷ್ಟ್ರೀಯ ಖಗೋಳ ಸಂಸ್ಥೆ ಅಮೆರಿಕದ ಪಸಾಡೆನಾದಲ್ಲಿ ಘೋಷಿಸಿತು. ಇದು ಗ್ರಾತದಲ್ಲಿ ಅರ್ಧ ಕಿ.ಮೀ. ಅಗಲವಾಗಿದೆ. ಶನಿಗ್ರಹ ಈಗಾಗಲೇ 60 ಉಪಗ್ರಹಗಳನ್ನು ಹೊಂದಿದೆ.

2008: ಹಲವು ವರ್ಷಗಳಿಂದ ವಿಶ್ವ ಕ್ರಿಕೆಟ್ಟನ್ನು ಆಳುತ್ತಿದ್ದ ಆಸ್ಟ್ರೇಲಿಯಾದ ಪ್ರಭುತ್ವಕ್ಕೆ ವಿರಾಮ ನೀಡಿದ ಭಾರತ ತಂಡವು ಬ್ರಿಸ್ಬೇನಿನಲ್ಲಿ ನಡೆದ ಕಾಮನ್ ವೆಲ್ತ್ ಬ್ಯಾಂಕ್ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿತು. ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಾ ಸಾಗಿದ ಎರಡನೇ ಫೈನಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ದೋನಿ ಬಳಗ 9 ರನ್ನುಗಳ ರೋಚಕ ಗೆಲುವು ಸಾಧಿಸಿ ರಿಕಿ ಪಾಂಟಿಂಗ್ ಬಳಗದ ಸೊಕ್ಕು ಮುರಿದು ಗೆಲುವನ್ನು ತನ್ನದಾಗಿಸಿಕೊಂಡಿತು.

2008: ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಮಹಾನಗರಪಾಲಿಕೆಯ ಕನ್ನಡ ಭಾಷಿಕ ಮೊದಲ ಮಹಿಳಾ ಮೇಯರ್ ಆಗಿ ಪ್ರಶಾಂತಾ ಬುಡವಿ, ಉಪಮೇಯರ್ ಆಗಿ ಯೂನುಸ್ ಮೋಮಿನ್ ಆಯ್ಕೆಯದರು. ಇದರೊಂದಿಗೆ ಎಂ.ಇ.ಎಸ್. ತೀವ್ರ ಮುಖಭಂಗ ಅನುಭವಿಸಿತು. ಹದಿನಾರು ವರ್ಷಗಳ ನಂತರ ಕನ್ನಡ ಭಾಷಿಕ ಅಭ್ಯರ್ಥಿಯೊಬ್ಬರಿಗೆ ಮೇಯರ್ ಪಟ್ಟ ಲಭಿಸಿತು. ಈ ಮೊದಲು 1991ರಲ್ಲಿ ಸಿದ್ಧನಗೌಡ ಪಾಟೀಲ ಅವರು ಕನ್ನಡದ ಪ್ರಥಮ ಮೇಯರ್ ಆಗಿ ಆಯ್ಕೆಯಾಗಿದ್ದರು.

2008: ಪಶ್ಚಿಮ ನೇಪಾಳದ ರಾಮೆಚಹಾಪ್ ಜಿಲ್ಲೆಯಲ್ಲಿ ಈದಿನ ಸಂಜೆ ವಿಶ್ವಸಂಸ್ಥೆಗೆ ಸೇರಿದ ಹೆಲಿಕಾಪ್ಟರ್ ಒಂದು ಅಪಘಾತಕ್ಕೀಡಾಗಿ, ಅದರಲ್ಲಿದ್ದ ಏಳು ವಿದೇಶೀಯರು ಹಾಗೂ ಐವರು ನೇಪಾಳಿಯರು ಸೇರಿ 12 ಮಂದಿ ಮೃತರಾದರು. ಮೃತರಲ್ಲಿ ಐವರು ನೇಪಾಳಿಯರು ಕಠ್ಮಂಡುವಿನಲ್ಲಿರುವ ವಿಶ್ವಸಂಸ್ಥೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಏಳು ಮಂದಿ ವಿದೇಶೀಯರ ಪೈಕಿ ನಾಲ್ವರು ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರಗಳ ಉಸ್ತುವಾರಿ ಕಚೇರಿಯಲ್ಲಿ ಹಾಗೂ ಉಳಿದ ಮೂವರು ವಿಮಾನ ತಯಾರಿಕಾ ಸಂಸ್ಥೆಯಲ್ಲಿ ಕಾರ್ಯನಿರ್ವಸುತ್ತಿದ್ದರು.

2008: ಹತ್ಯೆಗೀಡಾದ ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಜೀವನ ಕುರಿತು ಚಲನಚಿತ್ರ ಮಾಡುವ ಬಗ್ಗೆ ಬಾಲಿವುಡ್ ಪ್ರಸ್ತಾವವನ್ನು ಅವರ ಪತಿ ಆಸಿಫ್ ಆಲಿ ಜರ್ದಾರಿ ತಿರಸ್ಕರಿಸಿದರು. ಚಿತ್ರ ನಿರ್ಮಾಪಕ ಮಹೇಶ್ ಭಟ್ ಮತ್ತು ಕರಾಚಿ ಮೂಲದ ಸ್ಕೈಸ್ ಅನ್ ಲಿಮಿಟೆಡ್ ಫಿಲ್ಮ್ಸ್ ಜಂಟಿಯಾಗಿ ಈ ಚಿತ್ರ ನಿರ್ಮಿಸಲು ಯೋಜಿಸಿದ್ದು ಖ್ಯಾತ ತಾರೆ ಶಬಾನಾ ಆಜ್ಮಿ ಭುಟ್ಟೋ ಪಾತ್ರ ನಿರ್ವಹಿಸಲಿದ್ದರು. ಚಿತ್ರ ನಿರ್ಮಿಸಲು ಭುಟ್ಟೋ ಅವರ ಕುಟುಂಬದ ಸಮ್ಮತಿಗಾಗಿ ಕಾಯುತ್ತಿದ್ದ ಭಟ್ ಅವರು ಈ ಪ್ರಸ್ತಾವಕ್ಕೆ ಒಪ್ಪಿಗೆ ಪಡೆಯಲು ಮಾಜಿ ಪ್ರಧಾನಿ ಅವರ ನಿಕಟವರ್ತಿ ನಹೀದ್ ಖಾನ್ ಅವರ ಮೇಲೆ ಹೆಚ್ಚಿನ ವಿಶ್ವಾಸವಿಟ್ಟಿದ್ದರು.

2008: ಲಾಹೊರಿನ ಪ್ರತಿಷ್ಠಿತ ಪಾಕಿಸ್ಥಾನಿ ನೌಕಾ ಸಮರಾಭ್ಯಾಸ ಕಾಲೇಜಿನ ವಾಹನ ನಿಲುಗಡೆ ಪ್ರದೇಶದಲ್ಲಿ ಆತ್ಮಹತ್ಯಾ ಬಾಂಬರ್ ಒಬ್ಬ ತನ್ನನ್ನು ಸ್ಫೋಟಗೊಳಿಸಿಕೊಂಡ ಪರಿನಾಮವಾಗಿ ಕನಿಷ್ಠ 7 ಮಂದಿ ಸತ್ತು 15ಕ್ಕೂ ಅಧಿಕ ಮಂದಿ ಗಾಯಗೊಂಡರು ಮೊದಲು ಎರಡು ಸ್ಫೋಟಗಳು ಕೇಳಿಸಿದವು. ಬಳಿಕ ಇನ್ನೆರಡು ಸ್ಫೋಟಗಳ ಸದ್ದು ಕೇಳಿಸಿತು ಎಂದು ಪ್ರತ್ಯಕ್ಷದಶರ್ಿಗಳು ತಿಳಿಸಿದರು.

2008: `ಜೋಧಾ ಅಕ್ಬರ್' ಚಿತ್ರ ಪ್ರದರ್ಶನಕ್ಕೆ ಉತ್ತರಪ್ರದೇಶದ ಹೈಕೋರ್ಟ್ ನಿಷೇಧ ಹೇರಿರುವ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತು.

2008: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯಲ್ಲಿ ವಿಳಂಬವಾಗುತ್ತಿದೆ ಎಂದು ಪ್ರತಿಭಟಿಸಿ ತೆಲಂಗಾಣ ರಾಷ್ಟ್ರ ಸಮಿತಿಯ (ಟಿ ಆರ್ ಎಸ್) ನಾಲ್ವರು ಸಂಸದರು ರಾಜೀನಾಮೆ ನೀಡಿದ ಬೆನ್ನಲ್ಲೇ ಟಿ ಆರ್ ಎಸ್ ನ ಶಾಸಕರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಮೇಲೆ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಪಕ್ಷದ ತಂತ್ರದಂತೆ ಒತ್ತಡ ತರುವ ಸಲುವಾಗಿ ಟಿ ಆರ್ ಎಸ್ ನ 16 ಮಂದಿ ವಿಧಾನಸಭಾ ಸದಸ್ಯರು ಮತ್ತು ಮೂವರು ವಿಧಾನ ಪರಿಷತ್ ಸದಸ್ಯರು ರಾಜೀನಾಮೆ ಸಲ್ಲಿಸಿದರು.

2008: ಮೂವತ್ತೈದು ವರ್ಷಗಳಷ್ಟು ಸುದೀರ್ಘ ಕಾಲ ಪಾಕಿಸ್ಥಾನ ಜೈಲಿನಲ್ಲಿ ಬಂಧಿಯಾಗಿದ್ದ ಕಾಶ್ಮೀರ ಸಿಂಗ್ ಬಿಡುಗಡೆ ಹೊಂದಿ ವಾಘಾ ಗಡಿ ದಾಟಿ ಪತ್ನಿಯನ್ನು ಸಂಧಿಸಿದರು. 67 ವರ್ಷದ ಸಿಂಗ್ 1973ರಲ್ಲಿ ಗೂಢಚರ್ಯೆ ಆಪಾದನೆಗಾಗಿ ಪಾಕಿಸ್ಥಾನ ಸರ್ಕಾರದಿಂದ ಬಂಧನಕ್ಕೆ ಒಳಗಾಗಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದರು, ಆದರೆ ಈ ತೀರ್ಪು ಜಾರಿಯಾಗಿರಲಿಲ್ಲ. ಕಳೆದ ಫೆಬ್ರುವರಿಯಲ್ಲಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಸಿಂಗ್ ಗೆ ಕ್ಷಮಾದಾನ ನೀಡಿದ್ದರು.

2008: ಶಿವರಾತ್ರಿ ಪ್ರಯುಕ್ತ ಬೆಂಗಳೂರಿನ ಮಲ್ಲೇಶ್ವರ 9ನೇ ಅಡ್ಡರಸ್ತೆ ಶ್ರೀಮಹಾಗಣಪತಿ ದೇವಸ್ಥಾನದಲ್ಲಿ 1.2 ಲಕ್ಷ ಅಕ್ಕಿ ಕಾಳಿನಿಂದ ರಚಿಸಿದ ಬೃಹತ್ ಶಿವಲಿಂಗದ ಅಪರೂಪದ ಪ್ರದರ್ಶನ ಏರ್ಪಡಿಸಲಾಯಿತು.
ಈ ಲಿಂಗದಲ್ಲಿ ಬಳಸಲಾದ ಪ್ರತಿಯೊಂದು ಅಕ್ಕಿ ಕಾಳಿನ ಮೇಲೂ ಸೂಕ್ಷ್ಮವಾಗಿ ಶಿವಲಿಂಗ ಚಿತ್ರಿಸಲಾಗಿತ್ತು. ಹೀಗೆ ಚಿತ್ರಿಸಿದ ಸೂಕ್ಷ್ಮ ಚಿತ್ರ ಕಲಾವಿದ ಎನ್. ಎಸ್. ಅನಂತಕುಮಾರ್ ಅವರೇ ಅವೇ ಅಕ್ಕಿಕಾಳುಗಳನ್ನು ಶಿವಲಿಂಗದ ಆಕಾರದಲ್ಲಿ ಜೋಡಿಸಿದವರು. ಇವರು ಕರ್ನಾಟಕ ವಿದ್ಯುತ್ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್. ಒಂದೊಂದು ಕಾಗದದ ಹಾಳೆಗಳ ಮೇಲೆ 1200 ಅಕ್ಕಿಕಾಳಿನ ಲಿಂಗಗಳಿದ್ದವು. ಈ ಎಲ್ಲಾ ಹಾಳೆಗಳನ್ನು ಬೆಂಡಿಗೆ ಅಂಟಿಸಿ, ಬೃಹದಾಕಾರದ ಶಿವಲಿಂಗವನ್ನು ನಿರ್ಮಿಸಲಾಯಿತು. ಇದರ ಎತ್ತರ ಎರಡೂವರೆ ಮೀಟರ್. ಅಗಲ ಮೂರು ಮೀಟರ್. ಈ ಎಲ್ಲಾ ಅಕ್ಕಿಕಾಳುಗಳನ್ನು ಒಂದರ ಪಕ್ಕ ಒಂದರಂತೆ ಜೋಡಿಸಿದರೆ 1.2 ಕಿ.ಮೀ ಉದ್ದವಾಗುವುದು. ಈ ಅಕ್ಕಿಕಾಳುಗಳ ತೂಕ 4.8 ಕೆ.ಜಿ. ದಿನಕ್ಕೆ 250 ಲಿಂಗದಂತೆ ಒಟ್ಟು 480 ದಿವಸ ಲಿಂಗಗಳನ್ನು ಬರಿಗಣ್ಣಿಂದಲೇ ಬರೆದು ಮುಗಿಸಿದ್ದರು ಅನಂತಕುಮಾರ್.

2007: ಮೂರು ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಮಾರ್ಚ್ 3ರ ರಾತ್ರಿ/ ಮಾರ್ಚ್ 4ರ ಮುಂಜಾನೆ ಸಂಭವಿಸಿದ ಸಂಪೂರ್ಣ ಚಂದ್ರಗ್ರಹಣ ಕಾಲದಲ್ಲಿ ಕಡು ಕೆಂಪು ಬಣ್ಣದಲ್ಲಿ ಕಂಗೊಳಿಸಿದ ಚಂದ್ರನನ್ನು ಕಂಡು ಜಗತ್ತಿನಾದ್ಯಂತ ಖಗೋಳ ವೀಕ್ಷಕರು ಮತ್ತು ಖಗೋಳವಿಜ್ಞಾನಿಗಳು ಸಂಭ್ರಮಿಸಿದರು. ಭಾರತೀಯ ಕಾಲಮಾನ ನಸುಕಿನ 1.48 ಗಂಟೆಗೆ (ಜಿಎಂಟಿ ಕಾಲಮಾನ ಶನಿವಾರ 20.18 ಗಂಟೆ) ಆರಂಭವಾದ ಚಂದ್ರಗ್ರಹಣ ಯುರೋಪ್, ಆಫ್ರಿಕಾ, ದಕ್ಷಿಣ ಅಮೆರಿಕ ಮತ್ತು ಅಮೆರಿಕ ಹಾಗೂ ಕೆನಡಾದ ಪೂರ್ವ ಭಾಗಗಳಲ್ಲಿ ಕಾಣಿಸಿತು. ಭಾರತದ ಕೆಲವು ಭಾಗಗಳಲ್ಲಿ ಮಾತ್ರ ಈ ಚಂದ್ರಗ್ರಹಣ ಕಾಣಿಸಿತು.

2007: ಜಾರ್ಖಂಡಿನ ಜೆಮ್ಶೆಡ್ಪುರ ಲೋಕಸಭಾ ಕ್ಷೇತ್ರದ ಸಂಸದ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ(ಜೆ ಎಂ ಎಂ) ಪ್ರಧಾನ ಕಾರ್ಯದರ್ಶಿಯಾಗಿದ್ದ ಸುನೀಲ್ ಮಹತೋ (38) ಅವರನ್ನು ಪೂರ್ವ ಸಿಂಗಭೂಮ್ ಜಿಲ್ಲೆಯ ಬಕುರಿಯಾದಲ್ಲಿ ಇಬ್ಬರು ಅಂಗರಕ್ಷಕರು ಹಾಗೂ ಇಬ್ಬರು ಕಾರ್ಯಕರ್ತರ ಸಹಿತ ಕೊಲೆಗೈಯಲಾಯಿತು.

2007: ತಿರುವನಂತಪುರ ಸಮೀಪದ ಕರಾವಳಿ ತೀರದಲ್ಲಿ ಪಿ.ಎಸ್. ವಿನೋದ ಅವರು ನೆಲ ಮತ್ತು ನೀರು ಎರಡೂ ಕಡೆ ಚಲಿಸಬಲ್ಲಂತಹ `ಅಂಪಿಬಿಯಸ್' ಕಾರನ್ನು ಸಮುದ್ರ ನೀರಿನ ಮೇಲೆ 5 ಕಿ.ಮೀ. ಓಡಿಸಿ ಜನರನ್ನು ಅಚ್ಚರಿಯಲ್ಲಿ ಕೆಡವಿದರು. ಈ ಕಾರನ್ನು ಸ್ವತಃ ವಿನೋದ್ ಅವರೇ ವಿವಿಧ ಕಂಪೆನಿಗಳ ಕಾರುಗಳ ಬಿಡಿಭಾಗ ಸೇರಿಸಿ ನಿರ್ಮಿಸಿದ್ದರು.

2006: ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಅವರ ವಿಶೇಷ ಸಲಹೆಗಾರರಾಗಿ ಭಾರತೀಯ ರಾಜತಂತ್ರಜ್ಞ ಮತ್ತು ರಾಷ್ಟ್ರೀಯ ಭದ್ರತಾ ಉಪ ಸಲಹೆಗಾರ ವಿಜಯ ನಂಬಿಯಾರ್ ನೇಮಕಗೊಂಡರು.

1968: ಟೆನಿಸ್ ಅಧಿಕಾರಿಗಳು ವಿಂಬಲ್ಡನ್ನಿನಲ್ಲಿ ವೃತ್ತಿಪರ ಆಟಗಾರರಿಗೆ ಪ್ರವೇಶ ಕಲ್ಪಿಸಿದರು. ಇದಕ್ಕೆ ಮೊದಲು ವಿಂಬಲ್ಡನ್ನಿಗೆ ಹವ್ಯಾಸಿ ಆಟಗಾರರಿಗೆ ಮಾತ್ರ ಪ್ರವೇಶವಿತ್ತು.

1967: ಕಲಾವಿದ ಲೋಕಯ್ಯ ಕೆ.ಎಂ. ಜನನ.

1963: ಕಲಾವಿದ ಸುಬ್ರಹ್ಮಣ್ಯ ಕೆ.ಆರ್. ಜನನ.

1961: ಭಾರತದ ಮೊದಲ ವಿಮಾನ ವಾಹಕ ನೌಕೆ ಐ ಎನ್ ಎಸ್ ವಿಕ್ರಾಂತನ್ನು ಬೆಲ್ ಫಾಸ್ಟ್ನಲ್ಲಿ ಇಂಗ್ಲೆಂಡಿನ ಭಾರತದ ಹೈಕಮೀಷನರ್ ವಿಜಯಲಕ್ಷ್ಮಿ ಪಂಡಿತ್ ಔಪಚಾರಿಕವಾಗಿ ಚಾಲನೆ ನೀಡಿ ನೌಕೆಗೆ `ವಿಕ್ರಾಂತ್' ಹೆಸರನ್ನು ಇಟ್ಟರು ಮತ್ತು ಭಾರತ ಸರ್ಕಾರದ ಪರವಾಗಿ ನೌಕೆಯನ್ನು ಸ್ವೀಕರಿಸಿದರು. (ಮೊದಲ ಕಮಾಂಡಿಂಗ್ ಅಧಿಕಾರಿ ಕ್ಯಾಪ್ಟನ್ ಪ್ರೀತಮ್ ಸಿಂಗ್ ಮಹೀಂದ್ರೂ ಅವರು ನೌಕೆಗೆ ಫೆಬ್ರುವರಿ 16ರಂದು ಸರಳ ಸಮಾರಂಭದಲ್ಲಿ ಅನೌಪಚಾರಿಕವಾಗಿ ಚಾಲನೆ ನೀಡಿದ್ದರು.) 1997ರ ಜನವರಿಯಲ್ಲಿ ನೌಕೆಗೆ ವಿಶ್ರಾಂತಿ ನೀಡಿ ಅದನ್ನು `ನೌಕಾ ವಸ್ತುಸಂಗ್ರಹಾಲಯ' (ಮೆರಿಟೈಮ್ ಮ್ಯೂಸಿಯಂ) ಆಗಿ ಪರಿವರ್ತಿಸಲಾಯಿತು.

1951: ನವದೆಹಲಿಯಲ್ಲಿ ಮೊದಲ ಏಷ್ಯನ್ ಗೇಮ್ಸ್ ಆರಂಭವಾಯಿತು. 11 ರಾಷ್ಟ್ರಗಳ 489 ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

1950: ಕಲಾವಿದೆ ಜಿ.ಆರ್. ಜಾಹ್ನವಿ ಜನನ.

1940: ಕಲಾವಿದ ಶೇಷಗಿರಿ ದಂಡಾಪುರ ಜನನ.

1939: ಭಾರತೀಯ ಕ್ರಾಂತಿಕಾರಿ ನಾಯಕ, ವಿದ್ವಾಂಸ ಲಾಲಾ ಹರದಯಾಳ್ (1884-1939) ತಮ್ಮ 54ನೇ ವಯಸ್ಸಿನಲ್ಲಿ ನಿಧನರಾದರು. 1884ರಲ್ಲಿ ಜನಿಸಿದ್ದ ಹರದಯಾಳ್ ಬ್ರಿಟಿಷರನ್ನು ಭಾರತದಿಂದ ಕಿತ್ತೊಗೆಯಲು ತೀವ್ರ ಹೋರಾಟ ನಡೆಸಿದ್ದರು. 1911ರಲ್ಲಿ ಅಮೆರಿಕಕ್ಕೆ ತೆರಳಿ ಸ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾದ ಅವರು ಈ ಸಮಯದಲ್ಲೇ `ಘದರ್' ಪಕ್ಷವನ್ನು ಸ್ಥಾಪಿಸಿ ಆರು ಭಾಷೆಗಳಲ್ಲಿ ಗದ್ದಾರ್ ಪತ್ರಿಕೆಯನ್ನು ಪ್ರಕಟಿಸಿದ್ದರು. (ಘದರ್ ಅಂದರೆ `ದಂಗೆ' ಎಂದು ಅರ್ಥ. ಸ್ವಾತಂತ್ರಾನಂತರ ಈ ಪಕ್ಷಕ್ಕೆ ಗೌರವ ನೀಡಲು ನಕ್ಸಲೀಯ ಧುರೀಣ ಗುಮ್ಮಡಿ ವಿಠಲರಾವ್ ತಮಗೆ `ಗದ್ದಾರ' ಎಂಬ ಹೆಸರು ಇಟ್ಟುಕೊಂಡರು.) 1987ರಲ್ಲಿ ಭಾರತ ಸರ್ಕಾರ ಹರದಯಾಳ್ ನೆನಪಿಗಾಗಿ ಇವರ ಭಾವಚಿತ್ರದೊಂದಿಗೆ ಅಂಚೆ ಚೀಟಿಯನ್ನು ಪ್ರಕಟಿಸಿತು.

1903: ಪ್ರಖ್ಯಾತ ವೈಣಿಕ ವಿದ್ವಾಂಸ ಕೇಶವಮೂರ್ತಿ ಅವರು ಸಂಗೀತದ ತವರೂರು ರುದ್ರಪಟ್ಟಣ ಸುಬ್ಬರಾಯರು- ಪುಟ್ಟಕ್ಕಯ್ಯ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1858: ಜೆ.ಪಿ. ವಾಕರ್ 200 ಮಂದಿ ಕೈದಿಗಳೊಂದಿಗೆ ಅಂಡಮಾನ್ ದ್ವೀಪಗಳಿಗೆ ಹೊಸ ವಸತಿ ವ್ಯವಸ್ಥೆ ಆರಂಭಿಸುವ ಸಲುವಾಗಿ ಹೊರಟ. ಆತನ ಜೊತೆಗೆ ಇದ್ದ ಕೈದಿಗಳಲ್ಲಿ ಹೆಚ್ಚಿನ ಮಂದಿ ಹಿಂದಿನ ವರ್ಷ ನಡೆದ `ಸಿಪಾಯಿ ದಂಗೆ'ಯ ಕೈದಿಗಳು. ಜೊತೆಗೆ ಇಬ್ಬರು ವೈದ್ಯರೂ ಆತನ ಜೊತೆಗಿದ್ದರು.

1854: ಸರ್ (ವಿಲಿಯಂ) ನೇಪಿಯರ್ ಶಾ (1854-1945) ಹುಟ್ಟಿದ ದಿನ. ಇಂಗ್ಲಿಷ್ ಹವಾಮಾನ ತಜ್ಞನಾದ ಈತ ಗಾಳಿಯ ಒತ್ತಡ ಕಂಡು ಹಿಡಿಯಲು `ಮಿಲಿಬಾರ್' ಸಂಶೋಧಿಸಿದ. ಇದೇ ಮುಂದೆ ಆಧುನಿಕ ಹವಾಮಾನ ವಿಜ್ಞಾನದ ಅಭಿವೃದ್ಧಿಗೆ ಅಪಾರ ಕಾಣಿಕೆ ನೀಡಿತು.

1811: ಜಾನ್ ಲೈರ್ಡ್ ಮೈರ್ ಲಾರೆನ್ಸ್ (1811-1879) ಹುಟ್ಟಿದ ದಿನ. ಬ್ರಿಟಿಷ್ ವೈಸ್ ರಾಯ್ ಹಾಗೂ ಭಾರತದ ಗವರ್ನರ್ ಜನರಲ್ ಆದ ಈತ ಪಂಜಾಬಿನಲ್ಲಿ ವ್ಯಾಪಕ ಸುಧಾರಣೆಗಳನ್ನು ಜಾರಿಗೊಳಿಸಿದ.

1681: ಉತ್ತರ ಅಮೆರಿಕಾದಲ್ಲಿ ವಸಾಹತು ಸ್ಥಾಪನೆಗೆ ಅವಕಾಶ ನೀಡುವ `ರಾಜಪತ್ರ'ವನ್ನು (ರಾಯಲ್ ಚಾರ್ಟರ್) ದೊರೆ 2ನೇ ಚಾರ್ಲ್ಸ್ ವಿಲಿಯಂ ಪೆನ್ ಗೆ ನೀಡಿದ.

No comments:

Advertisement