ಜೂನ್ 03
ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಸತತವಾಗಿ ಎರಡನೇ ಬಾರಿಗೆ ವೈ.ಎಸ್. ರಾಜಶೇಖರ ರೆಡ್ಡಿ ಅವರು ಹೈದರಾಬಾದಿನಲ್ಲಿ ಅಧಿಕಾರ ವಹಿಸಿಕೊಂಡರು. ವೈಎಸ್‌ಆರ್ ಎಂದೇ ಖ್ಯಾತರಾದ ಅವರು ರಾಜ್ಯ ಸಚಿವಾಲಯಕ್ಕೆ ಆಗಮಿಸಿ ಅಧಿಕೃತವಾಗಿ ಮುಖ್ಯಮಂತ್ರಿ ಕಚೇರಿಯಲ್ಲಿ ಕಡತವೊಂದಕ್ಕೆ ಸಹಿ ಹಾಕುವ ಮೂಲಕ ಅಧಿಕಾರ ಸ್ವೀಕರಿಸಿದರು.
2009: ಅರುಣ್ ಜೇಟ್ಲಿ ಅವರನ್ನು ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿ ಮತ್ತು ಸುಷ್ಮಾ ಸ್ವರಾಜ್ ಅವರನ್ನು ಲೋಕಸಭೆಯಲ್ಲಿ ಪಕ್ಷದ ಉಪ ನಾಯಕರಾಗಿ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ನೇಮಿಸಿದರು. ಉಭಯ ಸದನಗಳಲ್ಲಿ ಪಕ್ಷದ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಬಿಜೆಪಿ ಸಂಸದೀಯ ಪಕ್ಷವು ಲೋಕಸಭೆಯ ಪ್ರತಿಪಕ್ಷದ ನಾಯಕ ಅಡ್ವಾಣಿ ಅವರಿಗೆ ಅಧಿಕಾರ ನೀಡಿತ್ತು. ರಾಜ್ಯಸಭೆಯಲ್ಲಿ ಪ್ರತಿಪಕ್ಷದ ಉಪ ನಾಯಕರಾಗಿ ಎಸ್.ಎಸ್. ಅಹ್ಲುವಾಲಿಯ, ಪಕ್ಷದ ಮುಖ್ಯ ಸಚೇತಕರಾಗಿ ಮಾಯಾ ಸಿಂಗ್ ಮತ್ತು ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕರಾಗಿ ರಮೇಶ್ ಅವರನ್ನು ನೇಮಿಸಲಾಯಿತು. ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿದ್ದ ಮಾಜಿ ಸಚಿವ ಜಸ್ವಂತ್ ಸಿಂಗ್ ಅವರು ಲೋಕಸಭೆಗೆ ಆಯ್ಕೆಯಾಗಿದ್ದರಿಂದ ಈ ಸ್ಥಾನ ತೆರವಾಗಿತ್ತು.
2009: ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಸತತವಾಗಿ ಎರಡನೇ ಬಾರಿಗೆ ವೈ.ಎಸ್. ರಾಜಶೇಖರ ರೆಡ್ಡಿ ಅವರು ಹೈದರಾಬಾದಿನಲ್ಲಿ ಅಧಿಕಾರ ವಹಿಸಿಕೊಂಡರು. ವೈಎಸ್‌ಆರ್ ಎಂದೇ ಖ್ಯಾತರಾದ ಅವರು ರಾಜ್ಯ ಸಚಿವಾಲಯಕ್ಕೆ ಆಗಮಿಸಿ ಅಧಿಕೃತವಾಗಿ ಮುಖ್ಯಮಂತ್ರಿ ಕಚೇರಿಯಲ್ಲಿ ಕಡತವೊಂದಕ್ಕೆ ಸಹಿ ಹಾಕುವ ಮೂಲಕ ಅಧಿಕಾರ ಸ್ವೀಕರಿಸಿದರು.
2009: ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಒತ್ತಡಕ್ಕೆ ಮಣಿದ ಭಾರತ ಒಲಿಂಪಿಕ್ ಸಂಸ್ಥೆ (ಐಒಎ)ಯು ಕೊನೆಗೂ 'ಹಾಕಿ ಇಂಡಿಯಾ'ದ ಅಸ್ತಿತ್ವವನ್ನು ಅಧಿಕೃತವಾಗಿ ಘೋಷಿಸಿತು. ಭಾರತ ಪುರುಷ ಹಾಗೂ ಮಹಿಳಾ ಹಾಕಿ ಸಂಸ್ಥೆಗಳನ್ನು ಒಳಗೊಂಡಿರುವ 'ಹಾಕಿ ಇಂಡಿಯಾ'ವನ್ನು ಮೇ 20 ರಂದು ರಚಿಸಲಾಯಿತು ಎಂದು ಐಒಎ ಅಧ್ಯಕ್ಷ ಸುರೇಶ್ ಕಲ್ಮಾಡಿ ತಿಳಿಸಿದರು. 15 ದಿನಗಳ ಒಳಗಾಗಿ ಹಾಕಿ ಸಂಸ್ಥೆಯನ್ನು ರಚಿಸುವಂತೆ ಎಚ್ಚರಿಸಿ ಎಫ್‌ಐಎಚ್ ಮೇ 5 ರಂದು ಐಒಎಗೆ ಪತ್ರ ಬರೆದಿತ್ತು. ಭಾರತದಲ್ಲಿ ಎರಡು ಹಾಕಿ ಸಂಸ್ಥೆಗಳು ಅಸ್ತಿತ್ವದಲ್ಲಿರುವುದರ ಬಗ್ಗೆ ಎಫ್‌ಐಎಚ್ ಆತಂಕ ವ್ಯಕ್ತಪಡಿಸಿತ್ತು. ಮಾತ್ರವಲ್ಲ, ಹಾಕಿ ಸಂಸ್ಥೆಯನ್ನು ರಚಿಸದಿದ್ದರೆ ಮುಂದಿನ ವರ್ಷದ ವಿಶ್ವಕಪ್‌ಗೆ ಆತಿಥ್ಯ ವಹಿಸುವ ಮತ್ತು ಎಫ್‌ಐಎಚ್ ನಡೆಸುವ ಟೂರ್ನಿಯಲ್ಲಿ ಆಡುವ ಅವಕಾಶವನ್ನು ಕಳೆದುಕೊಳ್ಳಕಾದೀತು ಎಂದು ಎಚ್ಚರಿಸಿತ್ತು.
2009: ಬ್ರೆಜಿಲ್ ನ ಫೆರ್ನಾಂಡೊ ಡಿ ನೊರೊನಾ ಸಮೀಪದ ಅಟ್ಲಾಂಟಿಕ್ ಸಾಗರದಲ್ಲಿ ಐದು ಕಿ.ಮೀ ವ್ಯಾಪ್ತಿಯಲ್ಲಿ ಚದುರಿ ಬಿದ್ದ ಅವಶೇಷಗಳು 228 ಜನರನ್ನು ಬಲಿತೆಗೆದುಕೊಂಡ ನತದೃಷ್ಟ ಏರ್ ಫ್ರಾನ್ಸ್ ವಿಮಾನದ್ದೇ ಎಂಬುದನ್ನು ಬ್ರೆಜಿಲ್ ಮತ್ತು ಫ್ರಾನ್ಸ್ ದೇಶಗಳು ಖಚಿತಪಡಿಸಿದ್ದು, ಅವಶೇಷಗಳನ್ನು ಸಂಗ್ರಹಿಸುವ ಕಾರ್ಯ ಆರಂಭವಾಯಿತು. ಈ ವಿಷಯವನ್ನು ಬ್ರೆಜಿಲ್‌ನ ರಕ್ಷಣಾ ಸಚಿವ ನೆಲ್ಸನ್ ಜೊಬಿಮ್ ಅವರು ರಿಯೊ ಡಿ ಜನೈರೋದಲ್ಲಿ ಹಾಗೂ ಪ್ಯಾರಿಸ್‌ನಲ್ಲಿ ಹಿರಿಯ ಸೇನಾಧಿಕಾರಿ ಕ್ರಿಸ್ಟೋಫೆ ಪ್ರಝೂಕ್ ತಿಳಿಸಿದರು.
2009: ಎಲ್ಲ ವಯೋಮಾನದ ಆಕರ್ಷಣೆ ಮತ್ತು ಕುತೂಹಲದ ವಸ್ತುವಾಗಿರುವ ಮೊಬೈಲ್‌ಗಳ ರಿಂಗ್‌ಟೋನ್ ಗಮನ ಸೆಳೆಯುವುದರ ಜೊತೆಗೆ ಸ್ಮರಣ ಶಕ್ತಿಯನ್ನೂ ಕಡಿಮೆ ಮಾಡುತ್ತದೆ ಎಂಬ ಅಂಶವೊಂದು ಬೆಳಕಿಗೆ ಬಂತು. ಸೇಂಟ್ ಲೂಯಿಸ್‌ನಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಜಿಲ್ ಶೆಲ್ಟನ್ ನೇತೃತ್ವದಲ್ಲಿ ನಡೆದ ಸಂಶೋಧನೆ ಈ ವಿಷಯವನ್ನು ಬಹಿರಂಗಪಡಿಸಿತು. ಮೊಬೈಲ್‌ನ ತರೇಹವಾರಿ ರಿಂಗ್‌ಟೋನ್‌ಗಳು ತರಗತಿಗಳಲ್ಲಿ ವಿದ್ಯಾರ್ಥಿಗಳ ಗಮನವನ್ನು ಬೇರೆಡೆ ಹೆಚ್ಚು ಸೆಳೆಯುತ್ತವೆ ಎಂಬುದನ್ನು ಇವರು ಪತ್ತೆ ಹಚ್ಚಿದರು. ಮೊಬೈಲ್‌ಗಳಲ್ಲಿ ಇಂದು ಜನಪ್ರಿಯ ಗೀತೆಗಳ ಸಾಲುಗಳನ್ನು ಕರೆಧ್ವನಿಯಾಗಿ ಬಳಸಲಾಗುತ್ತದೆ. ಇದಕ್ಕೆ ಕಿವಿಗೊಡುವವರ ಮೇಲೆ ಕ್ರಮೇಣ ನಕರಾತ್ಮಾಕ ಪರಿಣಾಮ ಬೀರುತ್ತದೆ ಎಂಬುದನ್ನು ಸಹ ಅಧ್ಯಯನದಿಂದ ಕಂಡುಕೊಂಡರು. 'ರಿಂಗ್‌ಟೋನ್‌ನಿಂದ ಈ ರೀತಿಯ ತೊಂದರೆಯಾಗುವುದು ಸಾಮಾನ್ಯ ಎನಿಸಿದರೂ, ಜನ ಕ್ರಮೇಣ ತಾವು ಹೊಂದಿದ್ದ ಮಾಹಿತಿಯನ್ನು ಉಳಿಸಿಕೊಳ್ಳುವ ಶಕ್ತಿಯನ್ನೂ ಕಳೆದುಕೊಳ್ಳುವಂತೆ ಮಾಡಿಬಿಡುತ್ತದೆ' ಎಂದು ಶೆಲ್ಟನ್ ಹೇಳುತ್ತಾರೆ. ಮನಃಶಾಸ್ತ್ರ ಪದವಿ ವಿದ್ಯಾರ್ಥಿಗಳ ಮೂಲಕ ಇವರ ಮಾಡಿದ ಅಧ್ಯಯನದ ಪ್ರಕಾರ, ಮೊಬೈಲ್ ರಿಂಗಣಿಸುವ ಪರಿಸರದ ನಡುವೆ ಇದ್ದವರು ಶೇ 25 ರಷ್ಟು ಕಡಿಮೆ ಅಂಕ ಪಡೆದಿದ್ದರು. 'ಬಹಳಷ್ಟು ಜನ ಸಾರ್ವಜನಿಕ ಸ್ಥಳದಲ್ಲಿ ಮೊಬೈಲ್ ರಿಂಗ್‌ಟೋನ್‌ಗಳಿಂದ ಏನು ಮಹಾ ತೊಂದರೆಯಾಗುತ್ತದೆ ಎಂದು ಅಂದುಕೊಂಡಿರುತ್ತಾರೆ. ಆದರೆ ಈ ಶಬ್ದ ನಿಜವಾಗಿಯೂ ಮನುಷ್ಯರ ಜೀವನದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತವೆ' ಎಂಬುದು ಶೆಲ್ಟನ್ ಅಭಿಪ್ರಾಯ.
2009: ವಿಶೇಷ ಆರ್ಥಿಕ ವಲಯಗಳ ರಚನೆಗೆ ಸಂಬಂಧಿಸಿದಂತೆ ಒಂಬತ್ತು ನೂತನ ಬೇಡಿಕೆಗಳಿಗೆ ಸರ್ಕಾರವು ಒಪ್ಪಿಗೆ ನೀಡಿತು. ಅದರಲ್ಲಿ ಹೆಚ್ಚಿನವು ಮಾಹಿತಿ ತಂತ್ರಜ್ಞಾನ ಮತ್ತು ಸರಕು ಆಧರಿತ ಸಾಫ್ಟ್‌ವೇರ್ (ಐಟಿಇಎಸ್). ನಂತರದ ಸ್ಥಾನ ಬಯೊಟೆಕ್ನಾಲಜಿಗೆ ಸೇರಿದವುಗಳು. ವಾಣಿಜ್ಯ ಸಚಿವಾಲಯದಲ್ಲಿನ ಅನುಮೋದನೆ ಮಂಡಳಿಯು ಗಲ್ಫ್ ಆಯಿಲ್ ಕಾರ್ಪೊರೇಷನ್, ಎಲ್ ಅಂಡ್ ಟಿ, ಎಂಎಂ ಟೆಕ್‌ಗಳಿಗೆ ಬೆಂಗಳೂರು, ಮುಂಬೈ ಹಾಗೂ ಚೆನಗಮನಾಡುಗಳಲ್ಲಿ (ಕೇರಳ) ಐಟಿ/ಐಟಿಇಎಸ್ ತೆರಿಗೆ ಮುಕ್ತ ವಲಯಗಳನ್ನು ರಚಿಸಲು ಹಸಿರು ನಿಶಾನೆ ತೋರಿತು.
2008: ಮುಂದಿನ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟ ಬಿಜೆಪಿಯು ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟ (ಎನ್ ಡಿ ಎ) ವಿಸ್ತರಣೆಯ ಕಾರ್ಯಾಚರಣೆ ಆರಂಭಿಸಿತು. ಆಡಳಿತಾರೂಢ ಯುಪಿಎ ಶೀಘ್ರವಾಗಿ ತನ್ನ ರಾಜಕೀಯ ವರ್ಷಸ್ಸು ಕಳೆದುಕೊಳ್ಳುತ್ತಿರುವುದು ಎನ್ಡಿಎಗೆ ಅನುಕೂಲಕರ ಎಂದು ಅದು ಪ್ರತಿಪಾದಿಸಿತು. ಕರ್ನಾಟಕ ಮತ್ತು ಗುಜರಾತ್ ಸೇರಿದಂತೆ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷವು ಮಾಡಿರುವ ಉತ್ತಮ ಸಾಧನೆ ಖಂಡಿತವಾಗಿ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಮುಂಚೂಣಿಗೆ ತಂದು ನಿಲ್ಲಿಸಿದ್ದು, ಇದು ಹೆಚ್ಚು ಹೆಚ್ಚು ಮಿತ್ರಪಕ್ಷಗಳನ್ನು ಆಕರ್ಷಿಸುವುದು ಎಂದು ಬಿಜೆಪಿ ಕಾರ್ಯಕಾರಿಣಿ ನಿರ್ಣಯವು ಭರವಸೆ ವ್ಯಕ್ತಪಡಿಸಿತು.
2008: ಮುದ್ರಣ ಉದ್ಯಮವು ಕಳೆದ ವರ್ಷ ಶೇಕಡಾ 16ರಷ್ಟು ಬೆಳವಣಿಗೆ ದಾಖಲಿಸಿದ್ದು, ಮಾರುಕಟ್ಟೆಯು 14,900 ಕೋಟಿ ರೂಪಾಯಿಗಳಷ್ಟು ವಹಿವಾಟು ನಡೆಸಿದೆ ಎಂದು ವಾರ್ತೆ ಮತ್ತು ಪ್ರಸಾರ ಸಚಿವಾಲಯವು ತಿಳಿಸಿತು. ದೇಶಾದ್ಯಂತ ಸಾಕ್ಷರತೆ ಪ್ರಮಾಣ ಹೆಚ್ಚಿರುವುದು ಭವಿಷ್ಯದಲ್ಲಿ ಮುದ್ರಣ ಮಾಧ್ಯಮ ಇನ್ನಷ್ಟು ಬೆಳವಣಿಗೆ ಸಾಧಿಸುವ ಅವಕಾಶಗಳನ್ನು ಹುಟ್ಟು ಹಾಕಿದೆ ಎಂದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿ ಪಿ.ಆರ್. ದಾಸ್ ಮುನ್ಶಿ ಹೇಳಿದರು.
2008: ತಮ್ಮ ರಾಜಕೀಯ ಗುರು ಕಾನ್ಶೀರಾಮ್ ಪ್ರತಿಮೆಯ ಪಕ್ಕದಲ್ಲಿ ತಾನು `ಕುಳ್ಳಿ'ಯಾಗಿ ಕಾಣುತ್ತೇನೆ ಎಂಬ ಕಾರಣಕ್ಕಾಗಿ ಕೇವಲ ಎರಡೇ ತಿಂಗಳ ಹಿಂದೆ ಲಖನೌದಲ್ಲಿ ಅನಾವರಣಗೊಳಿಲಾಗಿದ್ದ ತಮ್ಮ ಪ್ರತಿಮೆಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಕಿತ್ತು ಹಾಕಿಸಿದರು. ಎರಡು ತಿಂಗಳ ಹಿಂದೆ ಅನಾವರಣಗೊಳಿಸಲಾಗಿದ್ದ ಪ್ರತಿಮೆಯನ್ನು ಒಡೆದುಹಾಕಿ ಅದಕ್ಕಿಂತ ದೊಡ್ಡದಾದ ಪ್ರತಿಮೆ ಸ್ಥಾಪಿಸುವ ಕಾರ್ಯ ಇಲ್ಲಿನ ಗಾಂಧಿ ಸೇತುವಿನ ಸಾಮಾಜಿಕ ಪರಿವರ್ತನ್ ಪ್ರತೀಕ ಸ್ಥಳದಲ್ಲಿ ಹಿಂದಿನ ರಾತ್ರಿ ಆರಂಭವಾಯಿತು. ಬಿಎಸ್ಪಿ ಸ್ಥಾಪಕ ಕಾನ್ಶೀರಾಮ್ ಅವರ ಸನಿಹದಲ್ಲೇ ಸ್ಥಾಪಿಸಲಾಗಿದ್ದ ತಮ್ಮ ಪ್ರತಿಮೆಯನ್ನು ಮಾಯಾವತಿ ಅವರು ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ಅನಾವರಣಗೊಳಿಸಿದ್ದರು. ಗೋಮತಿ ನದಿಯ ಕಡೆಗೆ ಮುಖಮಾಡಿರುವ ಅಂಬೇಡ್ಕರ್ ಮತ್ತು ಅವರ ಪತ್ನಿಯ ಪ್ರತಿಮೆಗಳನ್ನು ಕೂಡಾ ಇಲ್ಲಿ ಸ್ಥಾಪಿಸಲಾಗಿತ್ತು. ಇತರ ಎಲ್ಲಾ ಪ್ರತಿಮೆಗಳು 15 ಅಡಿ ಎತ್ತರ ಹಾಗೂ 18 ಟನ್ ತೂಕವಿದ್ದರೆ, ಬಿಎಸ್ಪಿ ಮುಖ್ಯಸ್ಥೆಯ ಪ್ರತಿಮೆ 12 ಅಡಿಗಳಷ್ಟು ಮಾತ್ರ ಎತ್ತರವಿತ್ತು.
2008: ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರವು ಸದನದಲ್ಲಿ ವಿಶ್ವಾಸಮತ ಕೋರಲು ಒಪ್ಪಿದ ಹಿನ್ನೆಲೆಯಲ್ಲಿ ಜೂನ್ 6ರಂದು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲರು ಸಮ್ಮತಿಸಿದರು.
2008: ಉತ್ತರ ಕರ್ನಾಟಕದ ವಿವಿಧೆಡೆ ಸಿಡಿಲು ಬಡಿದು 13 ಮಂದಿ ಮೃತರಾದರು. ವಿಜಾಪುರ ಜಿಲ್ಲೆ ಸಿಂದಗಿ ತಾಲ್ಲೂಕಿನಲ್ಲಿ ಐವರು, ರಾಯಚೂರು ಜಿಲ್ಲೆ ಲಿಂಗಸುಗೂರಿನಲ್ಲಿ ಮೂವರು, ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನಲ್ಲಿ ಇಬ್ಬರು, ಬಳ್ಳಾರಿ ಜಿಲ್ಲೆ ಕೂಡ್ಲಗಿ ತಾಲ್ಲೂಕು ಮರೂರು ಹಾಗೂ ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕಿನ ದೇವನಕಟ್ಟಿ, ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಬಳಿಯ ಮುಠ್ಠಳ್ಳಿ ಎತ್ತಕಾಲ ಅಡವಿ ಎಂಬಲ್ಲಿ ತಲಾ ಒಬ್ಬರು ಸಿಡಿಲಿಗೆ ಬಲಿಯಾದರು.
2008: ಗರ್ಭಿಣಿಯರು ನಳದ ನೀರನ್ನು ಕುಡಿಯುವುದರಿಂದ ಹಾಗೂ ಸ್ನಾನ ಮಾಡುವುದರಿಂದ ಅವರಿಗೆ ಹೃದಯಾಘಾತವಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ ಹುಟ್ಟುವ ಮಗುವಿಗೆ ಬುದ್ಧಿಮಾಂದ್ಯತೆ ಉಂಟಾಗುವ ಅಪಾಯವೂ ಇದೆ ಎಂದು ಅಧ್ಯಯನವೊಂದು ಹೇಳಿತು. ಲಂಡನ್ನಿನ ನಿಯತಕಾಲಿಕವೊಂದರಲ್ಲಿ ಈ ಸಂಗತಿ ವರದಿಯಾಯಿತು. ನಲ್ಲಿ ನೀರಿನಲ್ಲಿ ಇರುವ ಕ್ಲೋರಿನ್ನಿನಂತಹ ರಾಸಾಯನಿಕ ಪದಾರ್ಥಗಳು ಹೃದಯದ ತೊಂದರೆಗೆ ಕಾರಣವಾಗುತ್ತವೆ. ಇದರ ಪರಿಣಾಮವು ಮೆದುಳು, ತಲೆಬುರುಡೆ ಹಾಗೂ ನೆತ್ತಿಯ ಮೇಲೂ ಉಂಟಾಗುತ್ತದೆ ಎಂದು ಅಧ್ಯಯನ ಹೇಳಿತು. ಭಾರಿ ಪ್ರಮಾಣದಲ್ಲಿ ಕ್ಲೋರಿನ್ ಹಾಕಿದ ನಲ್ಲಿ ನೀರು ಕುಡಿಯುವ ಪ್ರದೇಶಗಳಲ್ಲಿ ಹುಟ್ಟುವ ಮಕ್ಕಳಲ್ಲಿ ಹೃದಯ ತೊಂದರೆಗಳು ದ್ವಿಗುಣಗೊಳ್ಳುವ ಸಾಧ್ಯತೆ ಹೆಚ್ಚು. ಇಂಥ ಮಕ್ಕಳಲ್ಲಿ ಮೆದುಳಿನ ತೊಂದರೆಯೂ ಕಾಣಿಸಿಕೊಳ್ಳುತ್ತದೆ ಎಂದು ತೈವಾನಿನಲ್ಲಿ ಸುಮಾರು 4,00,000 ಶಿಶುಗಳ ಮೇಲೆ ನಡೆಸಿದ ಅಧ್ಯಯನದಿಂದ ತಿಳಿದುಬಂದಿತು. ನೀರು ಶುದ್ಧಿಗಾಗಿ ಬಳಸುವ ಕ್ಲೋರಿನ್ನಿನಿಂದ ಯಾವ ಕಾರಣಕ್ಕೆ ಇಂಥ ತೊಂದರೆಗಳು ಉಂಟಾಗುತ್ತವೆ ಎನ್ನುವುದು ಬೆಳಕಿಗೆ ಬಂದಿಲ್ಲ ಎಂಬುದು ಈ ಅಧ್ಯಯನ ವರದಿಯನ್ನು ತಯಾರಿಸಿರುವ ಪ್ರೊ.ಜೌನಿ ಜಾಕ್ಕೊಲಾ ಹೇಳಿಕೆ. ಸಾರ್ವಜನಿಕರ ಆರೋಗ್ಯ ಸುಧಾರಣೆಯಲ್ಲಿ ಕ್ಲೋರಿನ್ ಯುಕ್ತ ನೀರು ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದು ಸುಷ್ಟಷ್ಟ. ಹಾಗಾಗಿ ಕ್ಲೋರಿನ್ನಿನ ಅಡ್ಡ ಪರಿಣಾಮಗಳನ್ನು ಕಂಡು ಹಿಡಿಯುವ ದಿಸೆಯಲ್ಲಿ ಇನ್ನಷ್ಟು ಸಂಶೋಧನೆಗಳು ನಡೆಯಬೇಕಾದ ಅಗತ್ಯವಿದೆ ಎಂಬುದು ಅವರ ಅಭಿಮತ.
2008: ಜಪಾನಿನ ಬೃಹತ್ ಪ್ರಯೋಗಾಲಯವೊಂದನ್ನು ಹೊತ್ತು ಎರಡು ದಿನಗಳ ಹಿಂದೆ ಫ್ಲಾರಿಡಾದಿಂದ ಅಂತರಿಕ್ಷಕ್ಕೆ ನೆಗೆದಿದ್ದ `ಡಿಸ್ಕವರಿ' ಗಗನ ನೌಕೆಯು ಈದಿನ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೇರಿತು. ದಕ್ಷಿಣ ಪೆಸಿಫಿಕ್ ಪ್ರದೇಶದಿಂದ 340 ಕಿ.ಮೀ. ಎತ್ತರದಲ್ಲಿ ನಿಲ್ದಾಣದ ಸಮೀಪಕ್ಕೆ ಬಂದ ಡಿಸ್ಕವರಿಯಿಂದ ಕಮಾಂಡರ್ ಮಾರ್ಕ್ ಕೆಲ್ಲಿ ಅವರನ್ನು ನಿಲ್ದಾಣದೊಳಕ್ಕೆ ಸೇರಿಸಲಾಯಿತು.
2008: ಬಾಂಗ್ಲಾದೇಶದಿಂದ ಗಡಿಪಾರು ಶಿಕ್ಷೆಗೆ ಒಳಗಾಗಿರುವ ವಿವಾದಾತ್ಮಕ ಲೇಖಕಿ ತಸ್ಲಿಮಾ ನಸ್ರೀನ್, ಮುಸ್ಲಿಂ ಭಯೋತ್ಪಾದಕರಿಂದ ಜೀವ ಬೇದರಿಕೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಇನ್ನೂ ಎರಡು ವರ್ಷಗಳ ಕಾಲ ಸ್ವೀಡನ್ನಿನಲ್ಲಿಯೇ ಇರಲು ಅವಕಾಶ ಮಾಡಿಕೊಡುವುದಾಗಿ ಸ್ಟಾಕ್ಹೋಮ್ನ ಲೇಖಕರ ಕ್ಲಬ್ ಹೇಳಿತು.
2008: ಮಾದಕ ವಸ್ತು ಹೊಂದಿದ್ದ ಆರೋಪದ ಮೇಲೆ ಪಾಕಿಸ್ಥಾನ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಆಸಿಫ್ ಅವರನ್ನು ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು.
2007: ಕೆಲ ಕಾಲದ ಅಜ್ಞಾತವಾಸದ ಬಳಿಕ ಶೃಂಗೇರಿಗೆ ಸಮೀಪದ ಗಂಡಘಟ್ಟಕ್ಕೆ ಲಗ್ಗೆ ಇಟ್ಟ ನಕ್ಸಲೀಯರು ಕೆಸಮುಡಿ ವೆಂಕಟೇಶ್ (45) ಎಂಬ ವರ್ತಕರ ಮನೆ ಮೇಲೆ ದಾಳಿ ಮಾಡಿ ಅವರನ್ನು ಹಿಗ್ಗಾಮುಗ್ಗ ಥಳಿಸಿ ಗುಂಡಿಟ್ಟು ಕೊಂದು ಹಾಕಿದರು.
2007: ಅಂತಾರಾಷ್ಟ್ರೀಯ ಸಂಸ್ಥೆ ಗೋಲ್ಡ್ ಕ್ವೆಸ್ಟ್ ಇಂಟರ್ ನ್ಯಾಷನಲ್ (ಕ್ವೆಸ್ಟ್ ನೆಟ್) ತಯಾರಿಸಿದ ವರನಟ ಡಾ. ರಾಜಕುಮಾರ್ ಅವರ ಭಾವಚಿತ್ರ ಇರುವ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಪಾರ್ವತಮ್ಮ ರಾಜಕುಮಾರ್ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ನಸುನಗುತ್ತಿರುವ ಡಾ. ರಾಜಕುಮಾರ್ ಭಾವಚಿತ್ರ ಇರುವ ಈ ನಾಣ್ಯಗಳಲ್ಲಿ ನೇತ್ರದಾನ ಮಾಡಿ' ಎಂಬ ಸಂದೇಶವಿದೆ. ಚಿನ್ನದ ಪದಕ 6 ಗ್ರಾಂ ತೂಕವಿದ್ದು, 26 ಮಿ.ಮೀ. ಸುತ್ತಳತೆ ಹೊಂದಿದೆ. ಪ್ರತಿಪದಕಕ್ಕೂ ಸಂಖ್ಯೆ ಇದೆ. ಬೆಳ್ಳಿ ಪದಕದ ತೂಕ ಒಂದು ಔನ್ಸ್ ಸುತ್ತಳತೆ 38.6 ಮಿ.ಮೀ. . ಎರಡೂ ಪದಕಗಳನ್ನು ಜರ್ಮನಿಯ ಬಿ.ಎಚ್. ಮಾಯರ್ ಹೆಸರಿನ ಟಂಕಸಾಲೆಗಳಲ್ಲಿ ತಯಾರಿಸಲಾಯಿತು.
2007: ನ್ಯೂಯಾರ್ಕಿನ ಜಾನ್ ಎಫ್. ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಫೋಟಿಸುವ ವಿಧ್ವಂಸಕ ಕೃತ್ಯದ ಸಂಚನ್ನು ವಿಫಲಗೊಳಿಸಲಾಯಿತು.
2007: ದೇಶದಾದ್ಯಂತ ಲಕ್ಷಾಂತರ ರೈತರಿಗೆ ತಲೆನೋವಾದ `ಕಾಂಗ್ರೆಸ್ ಹುಲ್ಲು' ಈಗ ಗೊಬ್ಬರ ಎಂಬುದು ಸಾಬೀತಾಗಿದೆ ಎಂದು ಈ ಬಗ್ಗೆ ಸಂಶೋಧನೆ ನಡೆಸಿದ ಮಹಾರಾಷ್ಟ್ರದ ಜೀವಶಾಸ್ತ್ರ ಅಧ್ಯಾಪಕಿ ಡಾ. ಗೌರಿ ಶ್ರೀಕೃಷ್ಣ ಕ್ಷೀರಸಾಗರ್ ವಾರ್ಧಾ ಜಿಲ್ಲೆಯ ಪಲ್ ಗಾಂವ್ ಪ್ರಥಮ ದರ್ಜೆ ಕಾಲೇಜಿನ ಕಾರ್ಮಿಕ ಶಿಬಿರದಲ್ಲಿ ಪ್ರಕಟಿಸಿದರು.
2006: ವಿಶ್ವ ವೃತ್ತಿಪರ ಬಿಲಿಯರ್ಡ್ ಚಾಂಪಿಯನ್ ಶಿಪ್ನಲ್ಲಿ ಅಮೋಘ ಜಯ ದಾಖಲಿಸುವ ಮೂಲಕ ಭಾರತದ ಗೀತ್ ಸೇಥಿ ಐದನೇ ಬಾರಿಗೆ ಈ ಕಿರೀಟವನ್ನು ಧರಿಸಿದರು. ಮುಂಬೈಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡಿನ ಲ್ಯಾಗನ್ ವಿರುದ್ಧ 1000 ಅಂಕಗಳ ಅಂತರದಿಂದ ಜಯಗಳಿಸುವ ಮೂಲಕ ಸೇಥಿ ಅವರು ಈ ಪ್ರಶಸ್ತಿಗೆ ಭಾಜನರಾದರು. 1998ರಲ್ಲಿ ಗೀತ್ ಸೇಥಿ ಅವರು ಕೊನೆಯ ಬಾರಿ ಈ ಪ್ರಶಸ್ತಿ ಗೆದ್ದಿದ್ದರು.
2006: ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಮತ್ತು ಅವರ ಪತಿ ಆಸಿಫ್ ಅಲಿ ಜರ್ದಾರಿ ಅವರು ತಮ್ಮ ಆಸ್ತಿಯ ವಿವರದ ಬಗ್ಗೆ ಸುಳ್ಳು ಹೇಳಿಕೆ ನೀಡಿದ್ದರ ಸಂಬಂಧ ತನ್ನ ಸಮನ್ಸಿಗೆ ಉತ್ತರಿಸದ ಆರೋಪಕ್ಕಾಗಿ ಇಸ್ಲಾಮಾಬಾದಿನ ನ್ಯಾಯಾಲಯವೊಂದು ಬಂಧನದ ವಾರಂಟ್ ಹೊರಡಿಸಿತು. ಇಸ್ಲಾಮಾಬಾದಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಫೀ-ಉಲ್ ಜಮನ್ ಅವರು ನ್ಯಾಯಾಲಯದ ಸಮನ್ಸಿಗೆ ಪ್ರತಿಕ್ರಿಯೆ ವ್ಯಕ್ತಪಡಿಸದ ಬೆನಜೀರ್ ಮತ್ತು ಜರ್ದಾರಿ ಬಂಧನಕ್ಕೆ ಇಂಟರ್ ಪೋಲ್ ಪೊಲೀಸರನ್ನು ಸಂಪರ್ಕಿಸುವಂತೆ ಮತ್ತು ಈ ದಂಪತಿಯನ್ನು ಬಂಧಿಸಿ ಜುಲೈ 3ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಿದರು. ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷೆ ಬೆನಜೀರ್ ಅವರು ಮಾಜಿ ಪ್ರಧಾನಿ ಮತ್ತು ಪಾಕಿಸ್ಥಾನ ಮುಸ್ಲಿಂ ಲೀಗ್ ಅಧ್ಯಕ್ಷ ನವಾಜ್ ಷರೀಫ್ ಅವರನ್ನು ದುಬೈಯಲ್ಲಿ ಭೇಟಿಯಾದ ಮಾರನೇ ದಿನವೇ ಬಂಧನ ಆದೇಶ ಹೊರಬಿದ್ದಿತು.
1989: ಇರಾನಿನ ರಾಜಕೀಯ ಹಾಗೂ ಧಾರ್ಮಿಕ ನಾಯಕರಾಗಿದ್ದ ಅಯತೊಲ್ಲಾ ಖೊಮೇನಿ 89ನೇ ವಯಸ್ಸಿನಲ್ಲಿ ಮೃತರಾದರು. 1979ರಲ್ಲಿ ಇವರು ಮೊಹಮ್ಮದ್ ರೇಝಾ ಶಾ ಪಹ್ಲವಿಯವರನ್ನು ಪದಚ್ಯುತಗೊಳಿಸಿ ಇರಾನಿನ ಪರಮೋಚ್ಚ ನಾಯಕರಾದರು.
1966: ಪಾಕ್ ಕ್ರಿಕೆಟಿಗ ವಾಸಿಂ ಅಕ್ರಮ್ ಜನನ.
1965: ಬಾಹ್ಯಾಕಾಶದಲ್ಲಿ ನಡೆದಾಡಿದ ಮೊತ್ತ ಮೊದಲ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಎಡ್ವರ್ಡ್ ಎಚ್. ವೈಟ್ ಪಾತ್ರರಾದರು. ಅವರು `ಜೆಮಿನಿ-4' ಬಾಹ್ಯಾಕಾಶ ನೌಕೆಯಿಂದ ಹೊರಕ್ಕೆ ಬಂದು 21 ನಿಮಿಷಗಳ ಕಾಲ ಗಗನದಲ್ಲಿ ನಡೆದಾಡಿದರು.
1931: ಪತ್ರಿಕೋದ್ಯಮಿ, ಸಾಹಿತಿ ಪರಮೇಶ್ವರ ಭಟ್ಟ (ಪ.ಸು. ಭಟ್ಟ) (3-6-1931ರಿಂದ 24-6-1981) ಅವರು ಸುಬ್ಬರಾಯ ಭಟ್ಟರು - ಸರಸ್ವತಿ ದಂಪತಿಯ ಪುತ್ರನಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹೊಲನಗದ್ದೆಯಲ್ಲಿ ಹುಟ್ಟಿದರು.
1930: ಜಾರ್ಜ್ ಫರ್ನಾಂಡಿಸ್ ಅವರು ಮಂಗಳೂರಿನಲ್ಲಿ ಈದಿನ ಜನಿಸಿದರು.
1924: ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಜನನ.
1916: ಧೋಂಡೋ ಕೇಶವ ಕರ್ವೆ ಅವರು ಪುಣೆಯಲ್ಲಿ ಭಾರತೀಯ ಮಹಿಳಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು. ಈ ವಿಶ್ವ ವಿದ್ಯಾಲಯಕ್ಕೆ ವಿಪುಲ ನೆರವು ನೀಡಿದ ಕೈಗಾರಿಕೋದ್ಯಮಿ ಸರ್ ವಿಠ್ಠಲದಾಸ್ ಥ್ಯಾಕರ್ಸೆ ಅವರ ತಾಯಿಯ ನೆನಪಿಗಾಗಿ ಈ ವಿಶ್ವ ವಿದ್ಯಾಲಯಕ್ಕೆ ಶ್ರೀಮತಿ ನಾಥಿಬಾಯಿ ದಾಮೋದರ ಥ್ಯಾಕರ್ಸೆ ವಿಶ್ವ ವಿದ್ಯಾಲಯ ಎಂಬುದಾಗಿ ನಂತರ ನಾಮಕರಣ ಮಾಡಲಾಯಿತು.
1899: ಗಾಯಕ ಡಾ. ಬಿ. ದೇವೇಂದ್ರಪ್ಪ (3-6-1899ರಿಂದ 6-6-1986) ಅವರು ಚಿತ್ರದುರ್ಗದ ಮದಕರಿ ನಾಯಕನ ವಂಶಕ್ಕೆ ಸೇರಿದ ಸಂಗೀತ ಮತ್ತು ಭರತನಾಟ್ಯ ಪ್ರವೀಣ ಬಿ.ಎಸ್. ರಾಮಯ್ಯ- ತುಳಸಮ್ಮ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆಯ ಅಯನೂರು ಗ್ರಾಮದಲ್ಲಿ ಜನಿಸಿದರು.
1895: ಭಾರತೀಯ ರಾಜತಾಂತ್ರಿಕ ಕಾವಲಂ ಮಾಧವ ಪಣಿಕ್ಕರ್ (ಕೆ.ಎಂ. ಪಣಿಕ್ಕರ್)(1895-1963) ಜನ್ಮದಿನ.
1890: ಗಡಿನಾಡ ಗಾಂಧಿ ಎಂದೇ ಖ್ಯಾತರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಖಾನ್ ಅಬ್ದುಲ್ ಗಫಾರ್ ಖಾನ್ ಈದಿನ ಪೇಷಾವರದಲ್ಲಿ ಜನಿಸಿದರು. 1915ರಿಂದ 1918ರವರೆಗೆ ಗಡಿ ಭಾಗದ ಸಾವಿರಾರು ಹಳ್ಳಗಳನ್ನು ಸುತ್ತಿದ ಅವರು 1920ರಲ್ಲಿ `ಸರ್ವೆಂಟ್ಸ್ ಆಫ್ ಗಾಡ್' ಎಂಬ ಸಂಘಟನೆ ಸ್ಥಾಪಿಸಿದರು. ಇದು `ರೆಡ್ ಶರ್ಟ್ಸ್' ಎಂದೇ ಪ್ರಸಿದ್ಧಿ ಪಡೆದಿದೆ.
1865: ಯುನೈಟೆಡ್ ಕಿಂಗ್ ಡಮ್ಮಿನ ದೊರೆ ಐದನೇ ಜಾರ್ಜ್ (1865-1936) ಜನ್ಮದಿನ. ರಾಣಿ ಎರಡನೇ ಎಲಿಜಬೆತ್ ಳ ತಂದೆಯಾದ ಈತ ಯುನೈಟೆಡ್ ಕಿಂಗ್ಡಮ್ಮನ್ನು 1910ರಿಂದ 1936ರ ಅವಧಿಯಲ್ಲಿ ಆಳಿದ್ದ.
1761: ಹೆನ್ರಿ ಶ್ರಾಪ್ ನೆಲ್ (1761-1842) ಜನ್ಮದಿನ. ಇಂಗ್ಲಿಷ್ ಸೇನಾ ಅಧಿಕಾರಿಯಾದ ಈತ ಶ್ರಾಪ್ ನೆಲ್ ಶೆಲ್ ಹಾಗೂ ಶೆಲ್ ಭಾಗಗಳನ್ನು ಕಂಡು ಹಿಡಿದವ. ವೆಲಿಂಗ್ಟನ್ನಿನ ಡ್ಯೂಕ್ ಈ ಶೆಲ್ ಗಳನ್ನು ವಾಟರ್ಲೂ ಕದನದಲ್ಲಿ ನೆಪೋಲಿಯನ್ ವಿರುದ್ಧ ಬಳಸಿದ್ದ.
No comments:
Post a Comment