My Blog List

Wednesday, January 9, 2013

ವಿಟ್ಲ ಪಂಚಲಿಂಗೇಶ್ವರನಿಗೆ ಧರ್ಮಸ್ಥಳದ 'ಮುಗುಳಿ'


ವಿಟ್ಲ ಪಂಚಲಿಂಗೇಶ್ವರನಿಗೆ ಧರ್ಮಸ್ಥಳದ 'ಮುಗುಳಿ'


ಬ್ರಹ್ಮಕಲಶದ ಸಡಗರ
, ವಿಟ್ಲ ಪರಿಸರಗಲ್ಲಿ ಗೌಜಿಯೋ ಗೌಜಿ..
'ವಿಟ್ಲ ಪೇಟೆ ಇಡೀ ಗೌಜಿಯೋ ಗೌಜಿ. ನಾಕು ಮಾರ್ಗದವರೆಗೂ ಚಪ್ಪರ ಹಾಕಿದ್ದವು. ಎಲ್ಲಾ ಮಾರ್ಗಂಗಳಲ್ಲಿಯೂ ಕಾವಿ ಧ್ವಜ. ತೇರಗೆದ್ದೆಲಿದೇ ಚಪ್ಪರ. ಕಟ್ಟೆ ಸೇಸುಮೂಲ್ಯನ ಗೆದ್ದೆಲಿ ಅಡಿಗೆಗೆ ಭಾರೀ ಸಿದ್ಧತೆ ಆವುತ್ತಾ ಇದ್ದು. ಉದಿಯಪ್ಪಂದ ಕಸ್ತಲೆವರೆಗೂ ಬಪ್ಪೋರಿಂಗೆಲ್ಲಾ ಊಟ, ತಿಂಡಿ, ಕಾಫಿಯ ವ್ಯವಸ್ಥೆ ಆವುತ್ತಾ ಇದ್ದು. ಊರಿಲಿ ಆರುದೇ ಅಡಿಗೆ ಮಾಡುವ ಹಾಂಗೆ ಇಲ್ಲೆಡ್ಡ.....'
ಮಾಮೂಲಿಯಾಗಿ ಫೋನ್ ಮಾಡಿದ್ದೇ ತಡ ಆ ಕಡೆಯಿಂದ ಅಮ್ಮನ ವರದಿ. ಅವರಿಗೆ ವಯಸ್ಸು 80 ದಾಟಿದೆ. ಆದರೆ ಉತ್ಸಾಹಕ್ಕೆ ವಯಸ್ಸಿನ ಅಡ್ಡಿ ಎಲ್ಲಿಯದು? ನಮ್ಮ ಜೀವಮಾನದಲ್ಲಿ ನಡೆಯುವ ಹೆಮ್ಮೆಯ ಕಾರ್ಯಕ್ರಮ ಇದು ಎಂಬ ಅಭಿಮಾನ. ಫೋನ್ ಮಾಡಿದರೆ ಸಾಕು ಅದರದ್ದೇ ಸುದ್ದಿ.
ವಿಟ್ಲಪೇಟೆಯ ಯಾರ ಮನೆಗಳಿಗೆ ಫೋನ್ ಮಾಡಿದರೂ ಈಗ ಇಂತಹುದೇ ಸಂಭಾಷಣೆ.

ಹೌದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೇಟೆಯಲ್ಲಿ ಈ ಶತಮಾನದಲ್ಲೇ ಅಪೂರ್ವ ಎನ್ನಬಹುದಾದ ಕಾರ್ಯಕ್ರಮವೊಂದು ಜರುಗುತ್ತಿದೆ
. ಅದೇ ವಿಟ್ಲದ ಶ್ರೀ ಪಂಚಲಿಂಗೇಶ್ವರನ ಬ್ರಹ್ಮಕಲಶೋತ್ಸವ ಸಮಾರಂಭದ ಸಡಗರ. ಜನವರಿ 9ರಿಂದ 21ರ ವರೆಗೆ ಬ್ರಹ್ಮಕಲಶದ ಸಂಭ್ರಮವಾದರೆ, 21ರಿಂದ ನಂತರ 9 ದಿನ ವಿಟ್ಲಾಯನದ ಗೌಜಿ. ಅಂದರೆ ಪಂಚಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯ ಗೌಜಿ. ಅಂದರೆ ಹೆಚ್ಚು ಕಡಿಮೆ ಒಂದು ತಿಂಗಳ ಕಾಲ ಸಂಭ್ರಮವೋ ಸಂಭ್ರಮ.
ಸಂಭ್ರಮಕ್ಕೆ ನೀರೆರೆದವರು ಒಬ್ಬಿಬ್ಬರಲ್ಲ. ಮೊತ್ತ ಮೊದಲ ಸಾಲಿನಲ್ಲಿ ನಿಲ್ಲುವವರು ವಿಟ್ಲ ಸೀಮೆಯ 16 ಗ್ರಾಮಗಳ ಭಕ್ತ ಜನ, ವಿಟ್ಲದಿಂದ ಪರವೂರುಗಳು ಅಂದರೆ ಮಂಗಳೂರು, ಬೆಂಗಳೂರು, ಮುಂಬೈ, ದೆಹಲಿ ಅಷ್ಟೇ ಏಕೆ ಅಮೆರಿಕದವರೆಗೂ ತೆರಳಿ ಅಲ್ಲಿ ವ್ಯಾವಹಾರಿಕ ಬದುಕಿನ ಸಲುವಾಗಿ ಕೆಲಸಕ್ಕೆ ಸೇರಿಕೊಂಡ ಇಲ್ಲಿನ ಜನ ಅವರ ಕುಟುಂಬ ಸದಸ್ಯರು, ಬಂಧು ಮಿತ್ರರು ಅವರ ಮೂಲಕ ದೇಗುಲದ ಪುನರ್ ನಿರ್ಮಾಣಕ್ಕೆ ತಮ್ಮ ಅಳಿಲ ಸೇವೆಗಳನ್ನು ಸಲ್ಲಿಸಿದವರು.
ದೇವಾಲಯದ ನಿರ್ಮಾಣ ಒಬ್ಬಿಬ್ಬರಿಂದ ಆಗುವಂತಹುದಲ್ಲ. ಲಕ್ಷಾಂತರ ಕೈಗಳು ಜೊತೆಗೂಡಬೇಕು ಎನ್ನುತ್ತಾರೆ. ವಿಟ್ಲದ ಪಂಚಲಿಂಗೇಶ್ವರ ದೇವಾಲಯದ ವಿಚಾರದಲ್ಲಿ ಇದು ಸತ್ಯ. ಪುಟ್ಟ ಗುಡಿಸಲಿನಲ್ಲಿ ವಾಸಿಸುವ ಶ್ರಮಜೀವಿಯಿಂದ ಹಿಡಿದು, ದೊಡ್ಡ ಮನೆಗಳನ್ನು ಕಟ್ಟಿಕೊಂಡ ಶ್ರೀಮಂತರವರೆಗೆ ಸಹಸ್ರ ಸಹಸ್ರ ಮಂದಿ ಈ ದೇವಾಲಯದ ಪುನರ್ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ತಮ್ಮ ತಮ್ಮ ಕಾಣಿಕೆ ಸಲ್ಲಿಸಿದ್ದಾರೆ. ಈಗಲೂ ಸಲ್ಲಿಸುತ್ತಲೇ ಇದ್ದಾರೆ.

ಪಾಂಡವರ ಕಾಲದಲ್ಲಿ ನಿರ್ಮಾಣವಾದದ್ದು ಎಂಬ ಪ್ರತೀತಿ ಇರುವ ಈ ದೇವಸ್ಥಾನ ಅದೆಷ್ಟು ಬಾರಿ ಜೀರ್ಣೋದ್ಧಾರಗೊಂಡಿದೆಯೋ ಖಚಿತವಾಗಿ ಯಾರಿಗೂ ಗೊತ್ತಿಲ್ಲ
. ಕೆಲವು ನೂರು ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡದ್ದಕ್ಕೆ ದಾಖಲೆಗಳು ಸಿಗುತ್ತವೆ. ಇತ್ತೀಚಿನ ವರ್ಷಗಳಲ್ಲಿ ಅಂದರೆ ಆರೇಳು ವರ್ಷಗಳ ಹಿಂದೆ ಮತ್ತೊಮ್ಮ ದೇವಾಲಯ ಜೀರ್ಣಾವಸ್ಥೆಗೆ ತಲುಪಿದಾಗ ಈಗಿನ ತಲೆಮಾರಿನ ಒಂದಷ್ಟು ಮಂದಿ ಭಕ್ತರು ಅದರ ಜೀರ್ಣೋದ್ಧಾರದ ಕೆಲಸಕ್ಕೆ ಕೈಹಾಕಿದರು.
ಜೀರ್ಣೋದ್ಧಾರ ಎಂದು ಬಸವನಿಂದ ಹಗ್ಗ ಕಟ್ಟಿ ಎಳೆಸುವ ಮೂಲಕ ಆರಂಭವಾದ ಕೆಲಸ, ಮುಗಿದದ್ದು ಜೀರ್ಣೋದ್ಧಾರದೊಂದಿಗೆ ಅಲ್ಲ, ಬದಲಾಗಿ ಸಂಪೂರ್ಣವಾಗಿ ಪುನರ್ ನಿರ್ಮಾಣದೊಂದಿಗೆ ಎಂಬುದೇ ವಿಶೇಷ. ಜೀರ್ಣೋದ್ಧಾರಕ್ಕಾಗಿ ದೇವಾಲಯವನ್ನು ಬಿಚ್ಚುವ ಕೆಲಸಕ್ಕೆ ಲಕ್ಷ ಲಕ್ಷ ಮಂದಿ ಟೊಂಕ ಕಟ್ಟಿ ಒಂದೇ ದಿನದಲ್ಲಿ ಮೂರು ಅಂತಸ್ಥಿನ ದೇಗುಲವನ್ನು ಸಂಪೂರ್ಣವಾಗಿ ಬಿಚ್ಚಿಟ್ಟಿದ್ದರು. ಆಗ ಕಂಡು ಬಂದ ದೇವಾಲಯದ ಒಳಭಾಗ ಅಚ್ಚರಿ ಮೂಡಿಸುವಂತಹುದಾಗಿತ್ತು. ಸಂಪೂರ್ಣ ಮಣ್ಣಿನಿಂದ ದೇವಾಲಯ ಅಷ್ಟೊಂದು ಕಾಲ ಎದ್ದು ನಿಂತಿತ್ತು.
ಈಗ ಅದನ್ನು ಸಂಪೂರ್ಣವಾಗಿ ತೆಗೆದು ಅದೇ ಆಯ -ಅಡಿಪಾಯದಲ್ಲಿ ಸಂಪೂರ್ಣ ಕಲ್ಲಿನಿಂದಲೇ ನಿರ್ಮಿಸಿದ ಶಿಲಾಮಯ ದೇವಸ್ಥಾನ ಈಗ ಭವ್ಯವಾಗಿ ತಲೆ ಎತ್ತಿ ನಿಂತಿದೆ.ಈ ಮಹಾಕಾರ್ಯಕ್ಕೆ ಮಾರ್ಗದರ್ಶನ ಮಾಡಿದ ಮಹಾನುಭಾವರೂ ಕಡಿಮೆಯೇನಿಲ್ಲ. ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರ ಗೌರವಾಧ್ಯಕ್ಷತೆಯಲ್ಲಿ ರೂಪುಗೊಂಡಿದ್ದ ದೇಗುಲ ಪುನರ್ ನಿರ್ಮಾಣ ಸಮಿತಿಯಲ್ಲಿ ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದರು, ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು, ಸುಬ್ರಹ್ಮಣ್ಯ ಶ್ರೀಗಳು, ಒಡಿಯೂರು ಶ್ರೀಗಳು, ಮಾಣಿಲ ಶ್ರೀಗಳು - ಹೀಗೆ ಅನೇಕ ಯತಿವರ್ಯರೂ ಈ ಮಹಾ ಕಾರ್ಯಕ್ಕೆ ಮಾರ್ಗದರ್ಶನ ಮಾಡಿದ್ದಾರೆ.

ದೇವಸ್ಥಾನಕ್ಕಾಗಿ ರೂಪಿಸಲಾದ ಬೃಹತ್ ಗರುಡಗಂಭ ಸಹಸ್ರಾರು ವರ್ಷ ಬಾಳಲೆಂದು ಹರಸಿ ಕಾಣಿಕೆ ಸಲ್ಲಿಸಿ ಅದಕ್ಕೆ ಎಣ್ಣೆ ಎರೆದವರ ಸಂಖ್ಯೆಯಂತೂ ಲೆಕ್ಕವಿಲ್ಲದಷ್ಟು
.
ಇಡೀ ದೇಗುಲಕ್ಕೆ ಕಳಸಪ್ರಾಯವಾದ ಮುಗಳಿಯನ್ನು ಧರ್ಮಸ್ಥಳವೇ ಒದಗಿಸಿದೆ. ಈ ಬಂಗಾರದ ಮುಗುಳಿಯನ್ನು ಸಂಭ್ರಮದೊಂದಿಗೆ ಮೆರವಣಿಗೆಯಲ್ಲಿ ತರುವ ಮೂಲಕ 2013 ಜನವರಿ 6ರ ಭಾನುವಾರದಿಂದ ಇಡೀ ವಿಟ್ಲ ಪರಿಸರ ಸಡಗರದಲ್ಲಿ ತೇಲುತ್ತಿದೆ.
ಸಡಗರದ ಸಂಭ್ರಮದ ಕೆಲವು ಕ್ಷಣಗಳನ್ನು ಹಂಚಿಕೊಳ್ಳುವ ಅಳಿಸೇವೆಯನ್ನು 'ಪರ್ಯಾಯ' ಮಾಡುತ್ತಿದೆ. ಬನ್ನಿ ಸಡಗರದ ಪೂರ್ಣ ಅನುಭವ ಪಡೆಯಲುಮ್ಮ ತಲೆಮಾರಿನಲ್ಲಿ ಮಾತ್ರವೇ ಕಂಡು ಆನಂದಿಸಬಹುದಾಗ ಅಪೂರ್ಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ವಿಟ್ಲಕ್ಕೆ ಬನ್ನಿ ಎಂಬ ಆದರ ಪೂರ್ವ ಕರೆ ಹೊತ್ತ ಆಮಂತ್ರಣ ಪತ್ರಿಕೆಯ ಕೆಲವು ಪುಟಗಳು ಇಲ್ಲಿವೆ. ಫೋಟೋಗಳನ್ನು ಕ್ಲಿಕ್ಕಿಸಿ ವಿವರವಾಗಿ ಆಮಂತ್ರಣವನ್ನು ವೀಕ್ಷಿಸಬಹುದು.
ಧರ್ಮಸ್ಥಳದಿಂದ ಬಂದ ಬಂಗಾರದ 'ಮುಗುಳಿ'ಯ ಮೆರವಣಿಗೆ ಚಿತ್ರವೂ ಇದರೊಂದಿಗಿದೆ.

ಬಂಟ್ವಾಳ ತಾಲ್ಲೂಕಿನ ವಿಟ್ಲ ಪಂಚಲಿಂಗೇಶ್ವರ ದೇವಳದ ಬ್ರಹ್ಮಕಲಶೋತ್ಸವ ಪ್ರಯುಕ್ತ ಗರ್ಭಗುಡಿ ಮತ್ತು ತೀರ್ಥಮಂಟಪಕ್ಕೆ ಅಳವಡಿಸುವ ನೂತನ 
`ಮುಗುಳಿ'ಯನ್ನು ಧರ್ಮಸ್ಥಳದಿಂದ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೂಲಕ ಮೆರವಣಿಗೆಯಲ್ಲಿ 6-01-2013ರ ಭಾನುವಾರ ಕೊಂಡೊಯ್ಯಲಾಯಿತು.
-ನೆತ್ರಕೆರೆ ಉದಯಶಂಕರ  

ಆಮಂತ್ರಣ ಪತ್ರಿಕೆ



No comments:

Advertisement